×
Ad

ರಾಜ್ಯಾಧಕ್ಷ ಸ್ಥಾನಕ್ಕೆ ಚುನಾವಣೆ: ಬಿಜೆಪಿಯೊಳಗಿನ ಬಿರುಕನ್ನು ಮುಚ್ಚೀತೆ?

Update: 2025-01-20 09:13 IST

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೆಪಿಸಿಸಿ ರಾಜ್ಯಾಧ್ಯಕ್ಷ ಸ್ಥಾನದ ಕುರಿತಂತೆ ಕಾಂಗ್ರೆಸ್ ವರಿಷ್ಠರು ಒಂದು ಸ್ಪಷ್ಟ ನಿರ್ಧಾರಕ್ಕೆ ಬರುತ್ತಿದ್ದಂತೆಯೇ, ಇತ್ತ ಬಿಜೆಪಿಯೂ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ನಿರ್ಧಾರವೊಂದಕ್ಕೆ ಬರುವ ಧೈರ್ಯವನ್ನು ತೋರಿಸಿದೆ. ಕೆಲವು ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ಮುಖಂಡರು ಸಭೆ ಸೇರಿ ‘ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನವಾಗಲಿ, ಕೆಪಿಸಿಸಿ ರಾಜ್ಯಾಧ್ಯಕ್ಷ ಸ್ಥಾನವಾಗಲಿ’ ಖಾಲಿಯಿಲ್ಲ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ದಲಿತರು, ಅಲ್ಪಸಂಖ್ಯಾತರು, ದುರ್ಬಲ ಸಮುದಾಯದ ನಾಯಕರು ಕಾಂಗ್ರೆಸ್‌ನೊಳಗೆ ಉನ್ನತ ಸ್ಥಾನಕ್ಕೆ ಅಪೇಕ್ಷೆ ಪಡದೆ ತ್ಯಾಗ ಬಲಿದಾನಗಳಿಗೆ ಸಿದ್ಧರಾಗಬೇಕು ಎನ್ನುವ ಉಚಿತ ಸಲಹೆಯನ್ನು ಕಾಂಗ್ರೆಸ್ ವರಿಷ್ಠರು ನೀಡಿದ್ದಾರೆ. ‘‘ಇದರಾಚೆಗೆ ಬೇರೆ ಮಾತಿಲ್ಲ. ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು’’ ಎಂದು ಆದೇಶವೂ ಹೊರಬಿದ್ದಿದೆ. ಸದ್ಯಕ್ಕಂತೂ ರಾಜ್ಯ ಕಾಂಗ್ರೆಸ್‌ನ ಭಿನ್ನರು ವರಿಷ್ಠರ ಮಾತುಗಳಿಗೆ ತಲೆಬಾಗಿದಂತೆ ವರ್ತಿಸುತ್ತಿದ್ದಾರೆ. ಆದರೆ ಈ ತೇಪೆ ಎಷ್ಟು ದಿನ ಬಾಳಿಕೆ ಬರುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಇದರ ಬೆನ್ನಿಗೇ ಬಿಜೆಪಿ ಕೂಡ ತನ್ನೊಳಗಿನ ಭಿನ್ನಮತಗಳನ್ನು ಚಿವುಟಿ ಹಾಕಲು ಮುಂದಾಗಿದೆ.

ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಸರಕಾರ ರಚಿಸಿ ನೂರು ದಿನಗಳು ಕಳೆದರೂ, ಬಿಜೆಪಿಗೆ ವಿರೋಧ ಪಕ್ಷದ ನಾಯಕನನ್ನಾಗಲಿ, ರಾಜ್ಯಾಧ್ಯಕ್ಷನನ್ನಾಗಲಿ ಆಯ್ಕೆಮಾಡಲು ಸಾಧ್ಯವಾಗಿರಲಿಲ್ಲ. ಸೋಲಿನ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಳಿನ್ ಕುಮಾರ್, ತನ್ನ ರಾಜೀನಾಮೆಯನ್ನು ಹಿಂದೆಗೆದುಕೊಂಡು ಹಲವು ತಿಂಗಳು ‘ತಟಸ್ಥ ರಾಜ್ಯಾಧ್ಯಕ್ಷ’ರಾಗಿ ಮುಂದುವರಿಯಬೇಕಾಯಿತು. ಯಡಿಯೂರಪ್ಪ ಬಣ ಮತ್ತು ಆರೆಸ್ಸೆಸ್ ಬಣಗಳ ನಡುವಿನ ತಿಕ್ಕಾಟದಿಂದ ಬಿಜೆಪಿ ವರಿಷ್ಠರು ಪಕ್ಷದ ನಾಯಕತ್ವದ ಆಯ್ಕೆಯ ವಿಷಯದಲ್ಲಿ ಅಸಹಾಯಕರಾದರು. ಅದಾಗಲೇ ರಾಜ್ಯ ರಾಜಕೀಯದಿಂದ ದೂರ ಸರಿದಿರುವುದಾಗಿ ಘೋಷಿಸಿದ್ದ ಯಡಿಯೂರಪ್ಪ, ರಾಜ್ಯ ಬಿಜೆಪಿಯನ್ನು ಮಗನ ಮೂಲಕ ನಿಯಂತ್ರಿಸುವ ನಿರ್ಧಾರಕ್ಕೆ ಬಂದಿದ್ದರು. ‘ಯಡಿಯೂರಪ್ಪ ಇಲ್ಲದೆ ರಾಜ್ಯ ಬಿಜೆಪಿಯಿಲ್ಲ’

ಎನ್ನುವುದು ಅದಾಗಲೇ ಮನವರಿಕೆ ಮಾಡಿಕೊಂಡಿದ್ದ ಬಿಜೆಪಿ ವರಿಷ್ಠರು ಅನಿವಾರ್ಯವಾಗಿ, ಯಡಿಯೂರಪ್ಪ ಅವರ ಕೈಗೇ ಬಿಜೆಪಿ ಚುಕ್ಕಾಣಿಯನ್ನು ಒಪ್ಪಿಸಿದರು. ಪರಿಣಾಮವಾಗಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ರಾಜ್ಯಾಧ್ಯಕ್ಷರಾದರು. ಇದು ಬಿಜೆಪಿಯೊಳಗಿರುವ ಹಿರಿಯರಿಗೆ ತೀವ್ರ ಮುಜುಗರವನ್ನು ಸೃಷ್ಟಿಸಿತ್ತು. ಯಡಿಯೂರಪ್ಪರನ್ನೇ ಒಪ್ಪಿಕೊಳ್ಳಲು ಸಿದ್ಧರಿಲ್ಲದ ಕೆಲವರು ಯಡಿಯೂರಪ್ಪರ ಪುತ್ರನ ಮಾರ್ಗದರ್ಶನದಲ್ಲಿ ಕೆಲಸ ಮಾಡಲು ಒಪ್ಪುತ್ತಾರೆಯೆ? ಆಯ್ಕೆಯಾದ ದಿನದಿಂದಲೇ ರಾಜ್ಯಾಧ್ಯಕ್ಷರ ವಿರುದ್ಧ ಒಂದು ಗುಂಪು ದಾಳಿ ನಡೆಸತೊಡಗಿತ್ತು. ಕೆಲವು ಹಿರಿಯ ನಾಯಕರು ಒಪ್ಪಿದಂತೆ ನಟಿಸುತ್ತಲೇ ಭಿನ್ನರಿಗೆ ಪರೋಕ್ಷ ಕುಮ್ಮಕ್ಕು ನೀಡುತ್ತಾ ಬಂದಿದ್ದರು. ರಾಜ್ಯಾಧ್ಯಕ್ಷರ ನೇಮಕದ ಕುರಿತಂತೆ ಇರುವ ಅಸಮಾಧಾನದ ಕಾರಣದಿಂದಲೇ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಯಿತು. ಉಪಚುನಾವಣೆಯಲ್ಲಿ ಭಾರೀ ಮುಖಭಂಗ ಎದುರಿಸಬೇಕಾಯಿತು. ಮತ್ತು ಇದನ್ನೇ ಮುಂದಿಟ್ಟುಕೊಂಡು ಬಿಜೆಪಿಯೊಳಗೆ ರಾಜ್ಯಾಧ್ಯಕ್ಷರ ವಿರುದ್ಧ ಟೀಕೆಗಳು ಹೆಚ್ಚಿದವು.

ಆರೆಸ್ಸೆಸ್ ವರಿಷ್ಠರು ಈಶ್ವರಪ್ಪ, ಸಿ.ಟಿ. ರವಿಯಂತಹ ಶೂದ್ರ ನಾಯಕರನ್ನು ಮಾತ್ರವಲ್ಲ, ಲಿಂಗಾಯತ ಸಮುದಾಯದ ಯತ್ನಾಳ್‌ರನ್ನು ಮುಂದಿಟ್ಟುಕೊಂಡು ಯಡಿಯೂರಪ್ಪರ ಲಿಂಗಾಯತ ಲಾಬಿಯ ವಿರುದ್ಧ ಕತ್ತಿ ಮಸೆಯುತ್ತ ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ, ರಾಜ್ಯದಲ್ಲಿ ಎರಡು ಬಿಜೆಪಿಗಳು ಕಾರ್ಯಾಚರಿಸತೊಡಗಿದ್ದವು. ಯತ್ನಾಳ್, ರಮೇಶ್ ಜಾರಕಿಹೊಳಿ ಮೊದಲಾದವರ ನೇತೃತ್ವದಲ್ಲಿ ಪ್ರತ್ಯೇಕ ಸಮಾವೇಶ, ರ್ಯಾಲಿಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಉತ್ತರಕರ್ನಾಟಕಕ್ಕೆ ಒಂದು ಬಿಜೆಪಿ, ದಕ್ಷಿಣ ಕರ್ನಾಟಕಕ್ಕೆ ಇನ್ನೊಂದು ಬಿಜೆಪಿ ಎನ್ನುವಂತಾಗಿತ್ತು. ವಿಜಯೇಂದ್ರ ಅವರ ಮಾತುಗಳಿಗೆ ಚಿಕ್ಕಾಸಿನ ಬೆಲೆಯೂ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಬಿಜೆಪಿ ನಾಯಕರೇ ರಾಜ್ಯಾಧ್ಯಕ್ಷರನ್ನು ಮೂರನೇ ದರ್ಜೆಯ ಭಾಷೆಯಲ್ಲಿ ನಿಂದಿಸತೊಡಗಿದ್ದರು. ಪರಿಣಾಮವಾಗಿ ರಾಜ್ಯಾಧ್ಯಕ್ಷರ ಸ್ಥಾನದಲ್ಲಿ ಬದಲಾವಣೆ ತರುವುದು ಬಿಜೆಪಿ ವರಿಷ್ಠರಿಗೆ ಅನಿವಾರ್ಯವಾಯಿತು. ಇದೀಗ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ‘‘ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ’’ ಎಂದು ಘೋಷಿಸುವ ಮೂಲಕ, ವಿಜಯೇಂದ್ರ ಅವರನ್ನು ಇಳಿಸುವ ಸೂಚನೆ ನೀಡಿದ್ದಾರೆ.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಇಂಗಿತವನ್ನು ಬಿಜೆಪಿ ನಾಯಕರು ವ್ಯಕ್ತಪಡಿಸಿದ ಬೆನ್ನಿಗೇ ‘‘ನನ್ನನ್ನೇ ಪುನರಾಯ್ಕೆ ಮಾಡುವ ಬಗ್ಗೆ ನನಗೆ ಭರವಸೆಯಿದೆ’’ ಎಂದು ವಿಜಯೇಂದ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅವರನ್ನೇ ಮುಂದುವರಿಸುವುದಾಗಿದ್ದರೆ ಚುನಾವಣೆ ಘೋಷಣೆಯ ಹೇಳಿಕೆಯ ಅಗತ್ಯವೇ ಇದ್ದಿರಲಿಲ್ಲ. ಹಾಗೆಯೇ ಅವಿರೋಧ ಆಯ್ಕೆಯಂತೂ ಸದ್ಯದ ಸ್ಥಿತಿಯಲ್ಲಿ ಅಸಾಧ್ಯ. ಈಗಾಗಲೇ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಬಿಜೆಪಿ ಭಿನ್ನರು ಪ್ರತಿಕ್ರಿಯಿಸಿದ್ದಾರೆ. ಆದುದರಿಂದ ಬಿಜೆಪಿಯೊಳಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಸಾಧ್ಯತೆ ಹೆಚ್ಚಿದೆ. ಚುನಾವಣೆ ನಡೆದದ್ದೇ ಆದರೆ ಬಿಜೆಪಿಯೊಳಗಿರುವ ಬಿರುಕು ಇನ್ನಷ್ಟು ಸ್ಪಷ್ಟವಾಗಲಿದೆ. ಈಗಾಗಲೇ ಇರುವ ಗಾಯ, ಅಧ್ಯಕ್ಷ ಸ್ಥಾನದ ಆಯ್ಕೆ ಬಳಿಕ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳು ಇಲ್ಲದಿಲ್ಲ. ಚುನಾವಣೆಯಲ್ಲಿ ವಿಜಯೇಂದ್ರ ಅವರು ಸೋತರೆ ಅದನ್ನು ಸ್ವೀಕರಿಸಲು ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಸಿದ್ಧರಿದ್ದಾರೆಯೆ? ಎನ್ನುವುದರ ಮೇಲೆ ಎಲ್ಲವೂ ನಿಂತಿದೆ. ಸೋಲನ್ನು ಸ್ವೀಕರಿಸುವುದೆಂದರೆ ಯಡಿಯೂರಪ್ಪ ಅವರು ಪಕ್ಷದ ನಿಯಂತ್ರಣವನ್ನು ಆರೆಸ್ಸೆಸ್ ವರಿಷ್ಠರಿಗೆ ಸಂಪೂರ್ಣವಾಗಿ ಬಿಟ್ಟುಕೊಡುವುದು ಎಂದು ಅರ್ಥ. ತನ್ನನ್ನು ಅತ್ಯಂತ ಹೀನಾಯವಾಗಿ ನಿಂದಿಸಿದ ವಿರೋಧಿ ಗುಂಪನ್ನು ಒಪ್ಪಿಕೊಂಡು ಪಕ್ಷ ಕಟ್ಟುವವರಿಗೆ ವಿಜಯೇಂದ್ರ ಅವರು ಸಹಕರಿಸುತ್ತಾರೆ ಎನ್ನುವುದನ್ನು ನಿರೀಕ್ಷಿಸುವುದು ಕಷ್ಟ.

ವಿಜಯೇಂದ್ರ ಅವರಿಂದ ರಾಜ್ಯಾಧ್ಯಕ್ಷ ಸ್ಥಾನವನ್ನು ಕಿತ್ತುಕೊಂಡು, ಯಡಿಯೂರಪ್ಪ ಬಣವನ್ನು ಮೂಲೆಗುಂಪು ಮಾಡಿದರೆ ಏನಾಗಬಹುದು? ಯಡಿಯೂರಪ್ಪ ಮತ್ತೊಮ್ಮೆ ಬಿಜೆಪಿಯನ್ನು ಒಡೆದು ಇತರ ಪಕ್ಷಗಳ ಜೊತೆಗೆ ಕೈಜೋಡಿಸಲು ಮುಂದಾಗಬಹುದೆ? ಕಾಂಗ್ರೆಸ್‌ನೊಳಗೂ ಅಸಮಾಧಾನಗಳು ಕುದಿಯುತ್ತಿವೆ. ಇತ್ತ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿಯಲ್ಲೂ ಅತೃಪ್ತಿಗಳಿವೆ. ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಯಲು ಡಿಕೆಶಿಯವರ ಮೇಲೆ ಒತ್ತಡಗಳು ಹೆಚ್ಚಿದ್ದೇ ಅದು ಕಾಂಗ್ರೆಸ್‌ನೊಳಗೂ ಭಾರೀ ಕಂಪನಗಳಿಗೆ ಕಾರಣವಾಗಬಹುದು. ಈ ಎಲ್ಲ ಅತೃಪ್ತಿಗಳು ರಾಜ್ಯದಲ್ಲಿ ಪರ್ಯಾಯ ರಾಜಕೀಯ ಬೆಳವಣಿಗೆಗಳಿಗೆ ಕಾರಣವಾಗುವ ಸಾಧ್ಯತೆಗಳನ್ನು ಕೂಡ ನಾವು ನಿರಾಕರಿಸಲು ಸಾಧ್ಯವಿಲ್ಲ. ಬಿಜೆಪಿಯೊಳಗಿರುವ ಬ್ರಾಹ್ಮಣ ಲಾಬಿಯ ವಿರುದ್ಧ ರಾಜ್ಯದ ಲಿಂಗಾಯತ ಮತ್ತು ಒಕ್ಕಲಿಗ ಲಾಬಿ ಎಷ್ಟರಮಟ್ಟಿಗೆ ಸಂಘಟಿತವಾಗಲಿದೆ ಎನ್ನುವುದರ ಮೇಲೆ ಎಲ್ಲವೂ ನಿಂತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News