×
Ad

ಸುವರ್ಣ ಯುಗದಿಂದ ವರ್ಣ ಯುಗದೆಡೆಗೆ

Update: 2025-08-16 09:17 IST

PC: PTI

ಕೆಂಪು ಕೋಟೆಯಿಂದ ಪ್ರಧಾನಿ ಮೋದಿಯವರು ಮತ್ತೊಮ್ಮೆ ‘ಸಮೃದ್ಧ ಸ್ವಾವಲಂಬಿ ಭಾರತದ ಸಂಕಲ್ಪ’ವನ್ನು ತೊಟ್ಟಿದ್ದಾರೆ. ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್ಸವ ಭಾಷಣ ಮಾಡುವ ಮೂಲಕ ಮೋದಿಯವರು ಇಂದಿರಾಗಾಂಧಿಯವರ ದಾಖಲೆಯನ್ನು ಮುರಿದಿದ್ದಾರೆ. ಇದೇ ಸಂದರ್ಭದಲ್ಲಿ ಭಾಷಣಗಳಿಂದ ದೇಶವನ್ನು ಕಟ್ಟಲು ಸಾಧ್ಯವಿಲ್ಲ ಎನ್ನುವುದನ್ನು ಕೂಡ ಅವರು ಈ ಮೂಲಕ ದೇಶಕ್ಕೆ ಮನವರಿಕೆ ಮಾಡಿಸಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಅವರು ಕೆಂಪು ಕೋಟೆಯಿಂದ ಮಾತನಾಡಿದಾಗ ಈ ದೇಶ ಅವರ ಭಾಷಣದ ಮೇಲೆ ಭರವಸೆಯಿಟ್ಟಿತ್ತು. ಮುಂದಿನ ಹತ್ತು ವರ್ಷಗಳಲ್ಲಿ ಭಾರತದ ಗತಿ ಬದಲಾಗುತ್ತದೆ ಎಂದೇ ಭಾವಿಸಿದ್ದರು. ಆದರೆ ಅಂದಿನ ಮತ್ತು ಇಂದಿನ ಭಾಷಣಗಳಲ್ಲಿ ಭಾರೀ ವ್ಯತ್ಯಾಸಗಳೇನೂ ಇಲ್ಲ. 2014ಕ್ಕೆ ಹೋಲಿಸಿದರೆ ಭಾರತ ಈ ಅವಧಿಯಲ್ಲಿ ಸಾಧಿಸಿದ್ದೇನು? ಎನ್ನುವ ಪ್ರಶ್ನೆ ಉತ್ತರವಿಲ್ಲದೆ ಉಳಿದೇ ಬಿಟ್ಟಿದೆ. ಭಾರತ ಆರ್ಥಿಕವಾಗಿ ಹಿಂದಕ್ಕೆ ಜಗ್ಗಲ್ಪಟ್ಟಿದೆ. ಅಮೆರಿಕದಂತಹ ಶ್ರೀಮಂತ ದೇಶಗಳು ಬಹಿರಂಗವಾಗಿಯೇ ಭಾರತಕ್ಕೆ ಬೆದರಿಕೆಗಳನ್ನು ಹಾಕುತ್ತಿವೆ. ‘ಆಪರೇಷನ್ ಸಿಂಧೂರ’ವನ್ನು ತನ್ನ ಸಾಧನೆಯಾಗಿ ಬಿಂಬಿಸಲು ಯತ್ನಿಸುತ್ತಿರುವ ಮೋದಿಯವರು, ಪಹಲ್ಗಾಮ್ ದಾಳಿಯ ಹಿಂದಿರುವ ಭದ್ರತಾ ವೈಫಲ್ಯವನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ. ದೇಶದ ಆರ್ಥಿಕತೆಯ ಕಾಲುಗಳನ್ನು ಜಿಎಸ್‌ಟಿಯಿಂದ ಬಂಧಿಸಿಟ್ಟಿರುವ ಪ್ರಧಾನಿ ಮೋದಿಯವರು, ಇದೀಗ ಅದರ ಸುಧಾರಣೆಯನ್ನೇ ದೇಶದ ಜನರಿಗೆ ನೀಡುವ ಉಡುಗೊರೆಯೆಂದು ಕೆಂಪುಕೋಟೆಯಲ್ಲಿ ನಿಂತು ನಂಬಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ವಿಕಸಿತ ಭಾರತವಾಗಲು ಈಗ ಇರುವ 6.5 ಜಿಡಿಪಿ ಬೆಳವಣಿಗೆಯಿಂದ ಸಾಧ್ಯವಿಲ್ಲ ಎನ್ನುವುದನ್ನು ಸ್ವತಃ ನೀತಿ ಆಯೋಗದ ಸಿಇಒ ಅವರೇ ಹೇಳುತ್ತಿದ್ದಾರೆ.

ಇವೆಲ್ಲದರ ನಡುವೆ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಹಸಿವಿನ ಸೂಚ್ಯಂಕದಲ್ಲಿ ಹೆಚ್ಚಳವಾಗಿದೆ. ನಿರುದ್ಯೋಗಗಳು ಹೆಚ್ಚುತ್ತಿವೆ. ಸರಕಾರಕ್ಕೆ ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಲು ಧರ್ಮಗಳ ಹೆಸರಿನಲ್ಲಿ ರಾಜಕೀಯ ನಡೆಸುವುದು ಅನಿವಾರ್ಯವಾಗಿದೆ. ದೇಶ ಹಿಂಸೆಯ ಕಡೆಗೆ ಹೊರಳಿದೆ. ಗೋವಿನ ಹೆಸರಿನಲ್ಲಿ ಮನುಷ್ಯರನ್ನು ಗುಂಪುಗಳು ಥಳಿಸಿ ಕೊಂದು ಹಾಕುತ್ತಿವೆ. ಸ್ವಾತಂತ್ರ್ಯದ ದಿನ ದೇಶದ ಹಲವೆಡೆ ಮಾಂಸಾಹಾರ ನಿಷೇಧಿಸುವ ಪ್ರಯತ್ನ ನಡೆಯಿತು. ಯಾವ ದೇಶ ಹಸಿವಿಗಾಗಿ, ಅಪೌಷ್ಟಿಕತೆಗಾಗಿ ವಿಶ್ವದಲ್ಲೇ ಕುಖ್ಯಾತಿಯನ್ನು ಪಡೆದಿದೆಯೋ ಆ ದೇಶದಲ್ಲಿ ಆಹಾರದ ಹೆಸರಿನಲ್ಲಿ ನಿಷೇಧಗಳನ್ನು ಹೇರುವುದು 79ನೇ ಸ್ವಾತಂತ್ರ್ಯ ದಿನಾಚರಣೆಯ ಅತಿ ದೊಡ್ಡ ವಿಡಂಬನೆಯಾಗಿದೆ. ಒಂದೆಡೆ ಗೋಮಾಂಸ ರಫ್ತಿನಲ್ಲಿ ಭಾರತ ಮುಂಚೂಣಿಯಲ್ಲಿದೆ. ಇನ್ನೊಂದೆಡೆ ಭಾರತದ ಜನರನ್ನು ಪೌಷ್ಟಿಕ ಮಾಂಸಾಹಾರದಿಂದ ವಂಚಿಸಲಾಗುತ್ತಿದೆ. ಇದು ಜನರ ಆರೋಗ್ಯ ಮತ್ತು ಆರ್ಥಿಕತೆಯ ಮೇಲೆ ಏಕಕಾಲದಲ್ಲಿ ಪ್ರಹಾರಗಳನ್ನು ನೀಡುತ್ತಿದೆ. ರೈತರು ತಾವು ಸಾಕಿದ ಜಾನುವಾರುಗಳನ್ನು ಮಾರುವ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಿದೆ. ಕಾಶ್ಮೀರದಲ್ಲಿ ಉಗ್ರರನ್ನು ನಿಯಂತ್ರಿಸಲು ಸರಕಾರ ವಿಫಲವಾಗಿದೆ. ಇದೇ ಸಂದರ್ಭದಲ್ಲಿ ಪ್ರಜಾಸತ್ತೆಯನ್ನು ಅಣಕಿಸುವಂತೆ ದೇಶಾದ್ಯಂತ ಮತಗಳ್ಳತನ ಸುದ್ದಿಯಲ್ಲಿದೆ. ಚುನಾವಣಾ ಆಯೋಗವೇ ಇದರಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬರುತ್ತಿದೆ. ಬಿಹಾರದಲ್ಲಿ ಚುನಾವಣಾ ಆಯೋಗ ಮತ ಪರಿಷ್ಕರಣೆಯ ಹೆಸರಿನಲ್ಲೇ ಎಸಗಿರುವ ಭಾರೀ ವಂಚನೆಗಳು ಒಂದೊಂದಾಗಿ ಹೊರ ಬರುತ್ತಿವೆ. ಸುಪ್ರೀಂಕೋರ್ಟ್ ಕೂಡ ಈ ಬಗ್ಗೆ ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ಪ್ರಧಾನಿ ಮೋದಿಯವರ ಕೆಂಪು ಕೋಟೆಯ ಭಾಷಣದಲ್ಲಿ ಇವೆಲ್ಲವುಗಳ ಬಗ್ಗೆ ಗಾಢ ಮೌನವಿತ್ತು.

ವಿಪರ್ಯಾಸವೆಂದರೆ, ಕೆಂಪು ಕೋಟೆಯಲ್ಲಿ ನಿಂತು ಸ್ವಾತಂತ್ರ್ಯೋತ್ಸವ ದಿನದಂದು ಪ್ರಧಾನಿ ಮೋದಿಯವರು ಯಾವ ಸಂಘಟನೆಯ ಹೆಸರನ್ನು ನೆನೆಯಲೂ ಬಾರದಿತ್ತೋ ಅದರ ಹೆಸರನ್ನು ಪ್ರಸ್ತಾಪಿಸಿ ಅದನ್ನು ದೇಶದ ಹೆಗ್ಗಳಿಕೆಯಾಗಿ ಘೋಷಿಸಿದ್ದು. ‘ಆರೆಸ್ಸೆಸ್ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಕೊಂಡ ಬಹುದೊಡ್ಡ ಸರಕಾರೇತರ ಸಂಘಟನೆ’ ಎಂದು ತಮ್ಮ ಭಾಷಣದಲ್ಲಿ ಬಣ್ಣಿಸಿದ ಪ್ರಧಾನಿ ಮೋದಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಇತಿಹಾಸದ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಹೇಳಿದರು. ಪ್ರಧಾನಿ ಮೋದಿಗೆ ಆರೆಸ್ಸೆಸ್ ಇತಿಹಾಸದ ಬಗ್ಗೆ ಹೆಮ್ಮೆಯಿದೆ ಎನ್ನುವುದು ಅವರ ವೈಯಕ್ತಿಕ ಅರಿವು, ವಿವೇಕದ ದಿವಾಳಿತನಕ್ಕೆ ಮಾನದಂಡವಾಗಿದೆಯೇ ಹೊರತು, ಆರೆಸ್ಸೆಸ್‌ನ ಹಿರಿಮೆಯೇನೂ ಅದರಲ್ಲಿ ಇಲ್ಲ. ಸ್ವತಂತ್ರ ಭಾರತದ ರೈತರ, ಕಾರ್ಮಿಕರ, ದಲಿತರ, ಮಹಿಳೆಯರ ಪರವಾಗಿ ಹೋರಾಟ ನಡೆಸಿದ ಯಾವುದೇ ಇತಿಹಾಸ ಆರೆಸ್ಸೆಸ್‌ಗೆ ಇಲ್ಲ. ಕನಿಷ್ಠ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧವಾಗಿ ಹೋರಾಡಿದ ಇತಿಹಾಸವಾದರೂ ಆರೆಸ್ಸೆಸ್‌ನ ಹಿರಿಯರಿಗೆ ಇದೆಯೋ ಎಂದು ನೋಡಿದರೆ ಅಲ್ಲೂ ನಿರಾಸೆಯೇ. ಆರೆಸ್ಸೆಸ್‌ಗಾಗಿ ಮಣ್ಣು ಹೊತ್ತ ಅದರ ಹಿರಿಯ ಮುಖಂಡರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಯಾವುದೇ ಹಿನ್ನೆಲೆಯಿಲ್ಲ. ಬದಲಿಗೆ, ಸಾವರ್ಕರ್ ಕಾಲಾಪಾನಿ ಶಿಕ್ಷೆಗೆ ಹೆದರಿ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದು ಬಿಡುಗಡೆಗೊಂಡರು.

ಆ ಬಳಿಕ ಸ್ವಾತಂತ್ರ್ಯ ಹೋರಾಟದಿಂದ ದೂರ ಸರಿದು, ಬ್ರಿಟಿಷರು ಮಾಸಿಕವಾಗಿ ನೀಡುತ್ತಿದ್ದ ಪಿಂಚಣಿಯಿಂದ ಜೀವನ ಸಾಗಿಸಿದರು. ನೇತಾಜಿಯವರು ತಮ್ಮ ಸೇನೆಗೆ ಸೇರಲು ಭಾರತದ ಯುವಕರಿಗೆ ಕರೆಕೊಟ್ಟಾಗ ಸಾವರ್ಕರ್ ಅದಕ್ಕೆ ಸೇರದಂತೆ ತಡೆದರು. ಆರೆಸ್ಸೆಸ್ ಸಿದ್ಧಾಂತದ ತಳಹದಿಯಾಗಿದ್ದ ಗೋಳ್ವಾಲ್ಕರ್ ಅವರು ಜಾತಿ ವ್ಯವಸ್ಥೆಯನ್ನು ಕೊನೆಯವರೆಗೂ ಎತ್ತಿ ಹಿಡಿದಿದ್ದರು. ಭಾರತದ ಸಂವಿಧಾನದ ಬಗ್ಗೆ ಭಿನ್ನಾಭಿಪ್ರಾಯವನ್ನು ಹೊಂದಿದ್ದರು. ಆರೆಸ್ಸೆಸ್ ಕಚೇರಿಗಳಲ್ಲಿ ಇತ್ತೀಚಿನವರೆಗೂ ರಾಷ್ಟ್ರಧ್ವಜವನ್ನು ಹಾರಿಸುತ್ತಿರಲಿಲ್ಲ. 2001 ಜನವರಿ 26ರಂದು ರಾಷ್ಟ್ರಪ್ರೇಮಿ ಯುವದಳದ ಮೂವರು ಕಾರ್ಯಕರ್ತರು ನಾಗಪುರದ ಆರೆಸ್ಸೆಸ್ ಮುಖ್ಯ ಕಚೇರಿಗೆ ಭೇಟಿ ನೀಡಿ, ಕಚೇರಿಯ ಮುಂದೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ಅದಕ್ಕಾಗಿ ಆ ಮೂವರು ಯುವಕರ ವಿರುದ್ಧ ಆರೆಸ್ಸೆಸ್ ದೂರು ದಾಖಲಿಸಿತು. ಸುಮಾರು 12 ವರ್ಷ ನ್ಯಾಯಾಲಯದಲ್ಲಿ ಅವರು ವಿಚಾರಣೆಯನ್ನು ಎದುರಿಸಬೇಕಾಯಿತು. ಮಹಾತ್ಮಾಗಾಂಧೀಜಿಯನ್ನು ಕೊಂದ ನಾಥೂರಾಂ ಗೋಡ್ಸೆ ಆರೆಸ್ಸೆಸ್ ವಿಚಾರಧಾರೆಗಳಿಂದ ಪ್ರೇರಿತನಾಗಿದ್ದ. ದೇಶದಲ್ಲಿ ಅಭದ್ರತೆಯನ್ನು ಸೃಷ್ಟಿಸಲು ಸಂಚು ನಡೆಸಿದ ಕಾರಣಕ್ಕೆ ವಲ್ಲಭಭಾಯಿ ಪಟೇಲರು ಆರೆಸ್ಸೆಸ್‌ಸನ್ನು ನಿಷೇಧಿಸಿದ್ದರು. ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಆರೆಸ್ಸೆಸ್‌ನ ಮುಖಂಡರ ಹೆಸರು ಕೂಡ ಕೇಳಿ ಬಂದಿತ್ತು. ಇಂದಿಗೂ ಆರೆಸ್ಸೆಸ್ ಉಗ್ರ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿರುವ ಬಗ್ಗೆ ಆರೋಪಗಳಿವೆ. ಆರೆಸ್ಸೆಸ್ ಸೋದರ ಸಂಘಟನೆಗಳನ್ನು ನಿಷೇಧಿಸಬೇಕು ಎನ್ನುವ ಒತ್ತಾಯಗಳು ವಿದೇಶದಲ್ಲೂ ಕೇಳಿ ಬರುತ್ತಿವೆ. ದೇಶದ ಪರಿಸರದ ಪರವಾಗಿ, ರೈತರ ಪರವಾಗಿ, ದಲಿತರು, ಆದಿವಾಸಿಗಳ ಪರವಾಗಿ ಧ್ವನಿಯೆತ್ತುತ್ತಿದ್ದ ಹಲವು ಸರಕಾರೇತರ ಸಂಘಟನೆಗಳನ್ನು ವಿವಿಧ ನೆಪಗಳನ್ನು ಒಡ್ಡಿ ದಮನಿಸಿರುವ ಮೋದಿ ನೇತೃತ್ವದ ಸರಕಾರ ಆರೆಸ್ಸೆಸ್‌ನ ಇತಿಹಾಸಕ್ಕೆ ಹೆಮ್ಮೆ ಪಡುತ್ತಿದೆಯೆಂದರೆ ಭವಿಷ್ಯದಲ್ಲಿ ಅದು ರೂಪಿಸುವ ಸಮೃದ್ಧ ಭಾರತದ ಸ್ವರೂಪ ಹೇಗಿರುತ್ತದೆ ಎನ್ನುವುದನ್ನು ಸುಲಭದಲ್ಲಿ ಊಹಿಸಬಹುದು. ಆರೆಸ್ಸೆಸ್ ಸಿದ್ಧಾಂತದ ತಳಹದಿಯಲ್ಲಿ ಕಟ್ಟುವ ಭಾರತವು ಬ್ರಾಹ್ಮಣ್ಯದ ಗುಲಾಮಗಿರಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಅಸ್ಪಶ್ಯತೆ, ಜಾತಿ ವ್ಯವಸ್ಥೆ ಭಾರತದ ಪಾಲಿಗೆ ಮತ್ತೆ ಹೆಮ್ಮೆಯ ವಿಷಯವಾಗುತ್ತದೆ. ಅಂಬೇಡ್ಕರ್ ಕನಸು ಕಂಡ ಸಮಾನತೆಯ ಸುವರ್ಣಯುಗದಿಂದ, ಮನುವಾದಿಗಳು ಕಂಡ ಅಸಮಾನತೆಯ ‘ವರ್ಣ ಯುಗ’ದ ಕಡೆಗೆ ಭಾರತ ಜಾರುತ್ತದೆ. ಅತಿ ದೊಡ್ಡ ಸರಕಾರೇತರ ಸಂಸ್ಥೆಯಾಗಿರುವ ಆರೆಸ್ಸೆಸ್‌ನ ಆರ್ಥಿಕ ಮೂಲದ ಬಗ್ಗೆ, ಅದರ ಸಂವಿಧಾನ ವಿರೋಧಿ ಕಾರ್ಯ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಬೇಕಾದ ಸರಕಾರ ಬದಲಿಗೆ ಹೆಮ್ಮೆ ಪಡುತ್ತಿದೆ. ಆದುದರಿಂದಲೇ, ಈ ಬಾರಿಯ ಪ್ರಧಾನಿ ಭಾಷಣ ಭಾರತದ ಭವಿಷ್ಯದ ಬಗ್ಗೆ ದೇಶದ ಜನರೊಳಗೆ ಅತ್ಯಂತ ಆತಂಕ ಮತ್ತು ಕಳವಳವನ್ನು ಬಿತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News