×
Ad

ರಾಜ್ಯಪಾಲರ ವರ್ತನೆ; ಕೇಂದ್ರದ ಸಲ್ಲದ ಸಮರ್ಥನೆ

Update: 2025-08-26 09:25 IST

PC: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜ್ಯ ವಿಧಾನಸಭೆಯಲ್ಲಿ ಅಂಗೀಕಾರಗೊಂಡ ವಿಧೇಯಕಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ನಿರ್ದಿಷ್ಟ ಕಾಲ ಮಿತಿಯೊಳಗೆ ಅಂಕಿತ ಹಾಕಬೇಕೆಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಚಾರಿತ್ರಿಕ ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ ಮತ್ತು ಆರ್. ಮಹಾದೇವನ್ ಅವರ ಪೀಠವು ರಾಜ್ಯಪಾಲರು ಚುನಾಯಿತ ಸರಕಾರವನ್ನು ಗೌರವಿಸಬೇಕೆಂದು ತಿಳಿಸಿತ್ತು. ರಾಜ್ಯಪಾಲರು ಕೇಂದ್ರ ಸರಕಾರದ ರಾಜಕೀಯ ಏಜೆಂಟ್ ರೀತಿ ನಡೆದುಕೊಂಡು ಚುನಾಯಿತ ಸರಕಾರದ ಅಧಿಕಾರವನ್ನು ಕಸಿದುಕೊಳ್ಳುವುದು ಸರಿಯಲ್ಲ ಎಂದು ಈ ಪೀಠ ಹೇಳಿತ್ತು. ಸುಪ್ರೀಂ ಕೋರ್ಟ್‌ನ ಈ ಮಹತ್ವದ ತೀರ್ಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕೇಂದ್ರ ಸರಕಾರ ‘‘ಇದರಿಂದ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಲಿದೆ’’ ಎಂದು ತಿಳಿಸಿದೆ. ಈ ಕುರಿತು ಕೇಂದ್ರ ಸರಕಾರದ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕಳೆದ ವಾರ ಹೇಳಿಕೆಯನ್ನು ಸಲ್ಲಿಸಿದ್ದಾರೆ. ಕೇಂದ್ರ ಸರಕಾರದ ಹೇಳಿಕೆಯ ಪ್ರಕಾರ ‘ರಾಜ್ಯಪಾಲರನ್ನು ಅನ್ಯಗ್ರಹ ಜೀವಿಗಳು ಅಥವಾ ವಿದೇಶಿಗರು ಎಂದು ಪರಿಗಣಿಸಬಾರದು. ರಾಜ್ಯಪಾಲರು ಕೇವಲ ಕೇಂದ್ರದ ರಾಯಭಾರಿಗಳಲ್ಲ, ಅವರು ಪ್ರಜಾಸತ್ತಾತ್ಮಕ ಕಾನೂನು ಬದ್ಧತೆಯನ್ನು ಹೊಂದಿದ್ದಾರೆ’ ಎಂಬುದಾಗಿದೆ.

ಆದರೆ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ನೇತೃತ್ವದ ಐವರ ಸದಸ್ಯರಿರುವ ಸಂವಿಧಾನ ಪೀಠವು ರಾಜ್ಯಪಾಲರ ನೇಮಕ ಮತ್ತು ಅಧಿಕಾರ ಕುರಿತು ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗಳನ್ನು ಉಲ್ಲೇಖಿಸಿ ಸಂವಿಧಾನ ರಚನಾಕಾರರ ಪರಿಕಲ್ಪನೆಯಂತೆ ರಾಜ್ಯಪಾಲರು ಹಾಗೂ ಸಂಬಂಧಿಸಿದ ರಾಜ್ಯ ಸರಕಾರಗಳ ನಡುವೆ ಸೌಹಾರ್ದ ಸಂಬಂಧ ಇದೆಯೇ ಎಂದು ಕೇಂದ್ರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಕೇಳಿತು. ವಿಧಾನಸಭೆಯಲ್ಲಿ ಅಂಗೀಕಾರಗೊಂಡ ವಿಧೇಯಕಗಳಿಗೆ ಅಂಕಿತ ಹಾಕುವ ಕುರಿತು ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳಿಗೆ ಕಾಲಮಿತಿ ನಿಗದಿ ಮಾಡುವುದಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳು ಸುಪ್ರೀಂಕೋರ್ಟ್‌ನ ಸಲಹೆಯನ್ನು ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ನೇತೃತ್ವದ ಪೀಠ ‘‘ರಾಜ್ಯಪಾಲರು ಹಾಗೂ ಸರಕಾರ ಎರಡು ಶಕ್ತಿ ಕೇಂದ್ರಗಳಾಗಿದ್ದು ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಬೇಕು ಮತ್ತು ಸೌಹಾರ್ದ ಸಂಬಂಧ ಇರಬೇಕು, ಇದು ಇದೆಯೇ?’’ ಎಂದು ತುಷಾರ್ ಮೆಹ್ತಾ ಅವರನ್ನು ಕೇಳಿದೆ.

ರಾಜ್ಯಪಾಲರು ಮತ್ತು ರಾಜ್ಯ ಸರಕಾರಗಳ ನಡುವೆ ಸೌಹಾರ್ದ ಸಂಬಂಧ ಇದ್ದರೆ ಆಡಳಿತ ನಿರ್ವಹಣೆ ನಿರಾತಂಕವಾಗಿ ನಡೆಯುತ್ತದೆ. ಆದರೆ ಕಳೆದ ಹನ್ನೊಂದು ವರ್ಷಗಳಿಂದ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಹಾಗೂ ಚುನಾಯಿತ ಸರಕಾರಗಳ ನಡುವೆ ಸಂಬಂಧ ಹದಗೆಟ್ಟು ಹೋಗಿದೆ. ಕೇರಳ ಮತ್ತು ತಮಿಳುನಾಡಿನ ರಾಜ್ಯಪಾಲರು ರಾಜ್ಯ ಸರಕಾರಗಳ ಜೊತೆಗೆ ನೇರವಾಗಿ ಸಂಘರ್ಷಕ್ಕೆ ಇಳಿದು ಅವಾಂತರ ಉಂಟು ಮಾಡಿದರು. ವಿಧಾನಸಭೆಯಲ್ಲಿ ಬಹುಮತದಿಂದ ಅಂಗೀಕಾರಗೊಂಡ ವಿಧೇಯಕಗಳಿಗೆ ಅಂಕಿತ ಹಾಕಿ ರಾಷ್ಟ್ರಪತಿಗಳಿಗೆ ಕಳಿಸದೇ ತಮ್ಮ ಬಳಿಯೇ ಇಟ್ಟುಕೊಂಡು ಕುಳಿತರು. ಈ ಕುರಿತು ತಮಿಳುನಾಡು ಡಿಎಂಕೆ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ಅವರಂತೂ ರಾಜ್ಯದ ಡಿಎಂಕೆ ಸರಕಾರದ ವಿರುದ್ಧ ನೇರವಾಗಿ ಸಂಘರ್ಷಕ್ಕೆ ಇಳಿದಿದ್ದಾರೆ. ವಿಧೇಯಕಗಳಿಗೆ ಅಂಕಿತ ಹಾಕದಿರುವುದು ಮಾತ್ರವಲ್ಲ, ತಮ್ಮ ಕಾರ್ಯವ್ಯಾಪ್ತಿ ಮೀರಿ ಹಲವಾರು ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ.ಕೆಲ ತಿಂಗಳ ಹಿಂದೆ ತಮಿಳು ದೂರದರ್ಶನದ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಆಯೋಜಿಸಿದ ಹಿಂದಿ ಮಾಸಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ತಮಿಳುನಾಡಿನ ನಾಡಗೀತೆಯಲ್ಲಿ ಇರುವ ‘ದ್ರಾವಿಡ’ ಪದವನ್ನು ಬಿಟ್ಟು ಹಾಡಲಾಯಿತು. ಅವರ ಈ ಉದ್ಧಟ ವರ್ತನೆಯ ಬಗ್ಗೆ ರಾಜ್ಯದ ದ್ರಾವಿಡ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ತಮಿಳುನಾಡಿನಲ್ಲಿ ಈಗ ಇರುವುದು ದ್ರಾವಿಡ ಸೈದ್ಧಾಂತಿಕ ಮೂಲದ ಡಿಎಂಕೆ ಪಕ್ಷದ ಸರಕಾರ. ಉತ್ತರ ಭಾರತದ ನಾಲ್ಕೈದು ರಾಜ್ಯಗಳಿಗೆ ಸೇರಿದ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಾ ಬಂದ ಡಿಎಂಕೆಗೆ ವೈಚಾರಿಕ ಸ್ಫೂರ್ತಿಯಾದವರು ಪೆರಿಯಾರ್ ರಾಮಸ್ವಾಮಿ. ಡಿಎಂಕೆ ಮಾತ್ರವಲ್ಲ ಜಯಲಲಿತಾ ಅವರ ಅಣ್ಣಾ ಡಿಎಂಕೆ ಪಕ್ಷ ಕೂಡ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಾ ಬಂದಿದೆ. ಹಾಗಾಗಿಯೇ ಈ ಪಕ್ಷ ಬಿಜೆಪಿ ಜೊತೆಗಿನ ಸಂಬಂಧವನ್ನು ಕಡಿದು ಕೊಂಡಿದೆ. ಹೀಗಾಗಿ ಇಲ್ಲಿ ನೆಲೆಯೂರಲು ಸಂಘ ಪರಿವಾರ ನಡೆಸುತ್ತ ಬಂದ ಯತ್ನ ವಿಫಲಗೊಳ್ಳುತ್ತಲೇ ಬಂದಿವೆ. ಇಂಥ ರಾಜ್ಯದ ರಾಜ್ಯಪಾಲ ರವಿ ಅವರು ಯಾವುದೇ ವಿವಾದಕ್ಕೆ ಕೈ ಹಾಕದೆ ಚುನಾಯಿತ ಸರಕಾರದ ಜೊತೆಗೆ ಸೌಹಾರ್ದ ಸಂಬಂಧವಿರಿಸಿಕೊಳ್ಳಬೇಕಾಗಿತ್ತು. ಆದರೆ ಅವರು ಪದೇ ಪದೇ ವಿವಾದ ಉಂಟು ಮಾಡುತ್ತಲೇ ಇದ್ದಾರೆ.

ತಮಿಳುನಾಡಿನ ರಾಜ್ಯಪಾಲರ ಅತಿರೇಕದ ಅವಾಂತರ ಒಂದೆರಡಲ್ಲ. ಈ ಹಿಂದೆ ರಾಜ್ಯ ಸಚಿವ ಸಂಪುಟ ಸಿದ್ಧಪಡಿಸಿದ ಲಿಖಿತ ಭಾಷಣದಲ್ಲಿನ ಕೇಂದ್ರ ಸರಕಾರದ ಬಗೆಗಿನ ಟೀಕೆಗಳಿರುವ ಸಾಲುಗಳನ್ನು ಓದಲು ನಿರಾಕರಿಸಿದರು. ಇದು ತಮಿಳುನಾಡಿನ ಕತೆಯಾದರೆ ಕೇರಳದ ಹಿಂದಿನ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ರಾಜ್ಯ ವಿಧಾನಸಭೆ ಅಂಗೀಕರಿಸಿದ ವಿಧೇಯಕಗಳಿಗೆ ಸಹಿ ಹಾಕಲು ನಿರಾಕರಿಸಿದ್ದರು. ಅವರ ವರ್ತನೆ ವಿರುದ್ಧ ಕೇರಳ ಸರಕಾರ ಸುಪ್ರೀಂ ಕೋರ್ಟ್ ಮೆಟ್ಟಿಲನ್ನು ಏರಿತ್ತು. ಪಂಜಾಬ್ ರಾಜ್ಯಪಾಲರು ಇದೇ ರೀತಿ ವರ್ತಿಸಿದಾಗ ಸುಪ್ರೀಂ ಕೋರ್ಟ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯಪಾಲರಾದವರು, ರಾಷ್ಟ್ರಪತಿ ಯಾದವರು ಮುಂಚೆ ಯಾವುದೇ ಪಕ್ಷದಲ್ಲಿ ಇರಲಿ ಅವರ ನಿಷ್ಠೆ ಸಂವಿಧಾನಕ್ಕೆ ಇರಬೇಕು.

ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯಪಾಲರಾಗಿ ನೇಮಕಗೊಂಡ ವರು ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು. ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾಗಿ ನಡೆದು ಕೊಳ್ಳಬಾರದು. ಸಂವಿಧಾನದ ಪ್ರಕಾರ ರಾಜ್ಯಪಾಲರಿಗೆ ಯಾವುದೇ ಆಡಳಿತಾತ್ಮಕ ಅಧಿಕಾರವಿಲ್ಲ. ರಾಜ್ಯದ ಚುನಾಯಿತ ಸರಕಾರದ ದಾಖಲೆ ಹಾಗೂ ಕಾಗದ ಪತ್ರಗಳಿಗೆ ಅಂಕಿತ ಹಾಕುವುದಷ್ಟೇ ಅವರ ಕರ್ತವ್ಯ. ರಾಜ್ಯದ ಚುನಾಯಿತ ಸರಕಾರ ಮತ್ತು ರಾಜ ಭವನದ ನಡುವೆ ಯಾವುದೇ ಅನಗತ್ಯ ಸಂಘರ್ಷ ಉಂಟಾಗಬಾರದು. ಇದನ್ನು ಗಮನದಲ್ಲಿಟ್ಟುಕೊಂಡೇ ನಮ್ಮ ಸಂವಿಧಾನದ ನಿರ್ಮಾಪಕರು ಎಚ್ಚರ ವಹಿಸಿದ್ದಾರೆ. ರಾಜ್ಯಪಾಲರುಗಳು ತಮ್ಮ ಹೊಣೆಗಾರಿಕೆಯನ್ನು ಅರಿತುಕೊಂಡು ಕಾರ್ಯ ನಿರ್ವಹಿಸುವುದು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News