×
Ad

ದೇಶದಲ್ಲಿ ಹೆಚ್ಚುತ್ತಿರುವ ದಲಿತರ ಮೇಲಿನ ದ್ವೇಷ

Update: 2025-10-11 09:27 IST

ಅನಿಲ್ ಮಿಶ್ರಾ | ರಾಕೇಶ್‌ ಕಿಶೋರ್ (PC: x.com/Adv_Anil_Mishra/ANI) 

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸಿಜೆಐ ಬಿ. ಆರ್. ಗವಾಯಿ ಮೇಲೆ ಸನಾತನವಾದಿಯೊಬ್ಬ ಶೂ ಎಸೆದ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದೇ ಸಂದರ್ಭದಲ್ಲಿ ಸುಳ್ಳು ಸುದ್ದಿಗಳನ್ನು ಹರಡಿ ಕೃತ್ಯವನ್ನು ಸಮರ್ಥಿಸುವ ಕೆಲಸವೂ ವ್ಯವಸ್ಥಿತವಾಗಿ ನಡೆಯುತ್ತಿದೆ. ನ್ಯಾಯಮೂರ್ತಿಯವರು ಹಿಂದೂ ದೇವರನ್ನು ನಿಂದಿಸಿದ್ದರು ಎನ್ನುವ ವದಂತಿಗಳನ್ನು ಕೆಲವರು ಹರಡುತ್ತಿದ್ದರೆ, ಶೂ ಎಸೆದ ವಕೀಲನು ಮೇಲ್‌ಜಾತಿಗೆ ಸೇರಿದವನಲ್ಲ, ಆತನೂ ದಲಿತ ಸಮುದಾಯಕ್ಕೇ ಸೇರಿದವನು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್‌ಗಳನ್ನು ಹಾಕಿ ದಾರಿ ತಪ್ಪಿಸುತ್ತಿದ್ದಾರೆ. ಪ್ರಕರಣವನ್ನು ಸಮರ್ಥಿಸುವ ಭರದಲ್ಲಿ ಕೆಲವರು ಅಂಬೇಡ್ಕರ್ ಅವರನ್ನು ನಿಂದಿಸುತ್ತಿದ್ದಾರೆ. ದಲಿತರ ವಿರುದ್ಧ ದ್ವೇಷ ಹರಡುತ್ತಿದ್ದಾರೆ. ಈ ದೇಶದಲ್ಲಿ ವಿದ್ಯಾವಂತ ಮೇಲ್‌ಜಾತಿಯ ಜನರು ತಮ್ಮೊಳಗೆ ಬಚ್ಚಿಟ್ಟುಕೊಂಡಿರುವ ಅಂಬೇಡ್ಕರ್ ಮೇಲಿನ ಅಸಹನೆ, ದ್ವೇಷವನ್ನು ಈ ನೆಪದಲ್ಲಿ ಹೊರಹಾಕುತ್ತಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ.

ಮಧ್ಯಪ್ರದೇಶದ ಹೈಕೋರ್ಟ್ ವಕೀಲರ ಸಂಘದ ಮಾಜಿ ಅಧ್ಯಕ್ಷ ಅನಿಲ್ ಮಿಶ್ರಾ ಎಂಬಾತ, ಅಂಬೇಡ್ಕರ್‌ರನ್ನು ನೇರವಾಗಿ ನಿಂದಿಸಿದ್ದಾನೆ. ‘ಅಂಬೇಡ್ಕರ್ ಒಬ್ಬ ಕೊಳಕು ವ್ಯಕ್ತಿ. ಬ್ರಿಟಿಷರ ಗುಲಾಮ’ ಎಂದು ಆತ ಬರೆದುಕೊಂಡಿದ್ದಾನೆ. ಈ ಬಗ್ಗೆ ದೂರು ದಾಖಲಾದರೂ ತನ್ನನ್ನು ತಾನು ಸಮರ್ಥಿಸಿಕೊಂಡಿರುವ ಈತ ‘‘ನಾನು ತಪ್ಪು ಮಾಡಿಲ್ಲ. ಇಂತಹ 100 ಎಫ್‌ಐಆರ್‌ಗಳು ದಾಖಲಾದರೂ ನನ್ನನ್ನು ಮೌನಗೊಳಿಸಲು ಸಾಧ್ಯವಿಲ್ಲ. ಸಂವಿಧಾನ ನನಗೆ ಅಭಿವ್ಯಕ್ತಿಯ ಸ್ವಾತಂತ್ರ್ಯ ನೀಡಿದೆ. ಅದರ ಪ್ರಕಾರ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ನನಗೆ ಭಯವಿಲ್ಲ’’ ಎಂಬ ಹೇಳಿಕೆಯನ್ನು ನೀಡಿದ್ದಾನೆೆ. ಈತನೂ ಮೇಲ್‌ಜಾತಿಗೆ ಸೇರಿರುವುದು ಆಕಸ್ಮಿಕ ಅಲ್ಲ. ಈತನಿಗೆ ಯಾವ ಸಂವಿಧಾನ ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ನೀಡಿದೆಯೋ ಆ ಸಂವಿಧಾನವನ್ನು ಬರೆದವರು ಡಾ. ಬಿ. ಆರ್. ಅಂಬೇಡ್ಕರ್ ಎನ್ನುವ ವಾಸ್ತವ ಈತನಿಗೆ ತಿಳಿಯದ್ದೇನೂ ಅಲ್ಲ. ಸಂವಿಧಾನವನ್ನು ಓದಿಕೊಂಡೇ ಈತ ಹೈಕೋರ್ಟ್‌ನ ವಕೀಲನಾಗುವ ಅರ್ಹತೆಯನ್ನು ಪಡೆದಿದ್ದಾನೆ. ದೇಶದಲ್ಲಿ ಸಂವಿಧಾನ ಅಸ್ತಿತ್ವಕ್ಕೆ ಬರುವ ಮೊದಲು, ಇಲ್ಲಿ ಅಭಿವ್ಯಕ್ತಿಯ ಸ್ವಾತಂತ್ರ್ಯ ಮೇಲ್‌ಜಾತಿಯ ಜನರಿಗಷ್ಟೇ ಇತ್ತು. ಇಂದು ಅದರ ಹಕ್ಕನ್ನು ದಲಿತರು, ಶೋಷಿತ ಸಮುದಾಯದ ಜನರು ಕೂಡ ಪಡೆಯುತ್ತಿರುವುದು ಈತನ ಅಸಮಾಧಾನಕ್ಕೆ ಕಾರಣವಾಗಿದೆ. ಆದುದರಿಂದಲೇ, ಸಂವಿಧಾನ ಕೊಟ್ಟ ಹಕ್ಕನ್ನು ಬಳಸಿಕೊಂಡೇ ಈತ ಸಂವಿಧಾನದ ವಿರುದ್ಧ ದಾಳಿ ನಡೆಸುತ್ತಿದ್ದಾನೆ. ಅಂಬೇಡ್ಕರ್‌ರನ್ನು ಬ್ರಿಟಿಷರ ಗುಲಾಮ ಎನ್ನುವ ಈತ, ಸಾವರ್ಕರ್ ಸಹಿತ ಹಿಂದೂ ಮಹಾಸಭಾದ ನಾಯಕರು ಬ್ರಿಟಿಷರ ಜೊತೆಗೆ ಕೈಜೋಡಿಸಿರುವುದನ್ನು ‘ದೇಶಪ್ರೇಮ’ವೆಂದು ನಂಬಿದಂತಿದೆ. ಶತಶತಮಾನಗಳ ಸನಾತನವಾದಿಗಳ ಗುಲಾಮತನದ ವಿರುದ್ಧ ಬಲವಾದ ಪ್ರತಿರೋಧ ತೋರಿದ ಅಂಬೇಡ್ಕರ್ ಈತನಿಗೆ ಕೊಳಕನಂತೆ ಕಂಡಿರುವುದರಲ್ಲಿ ಅಚ್ಚರಿಯೂ ಇಲ್ಲ. ವಿಪರ್ಯಾಸವೆಂದರೆ, ಈತನ ವಿರುದ್ಧ ದೂರು ದಾಖಲಾಗಿದ್ದರೂ ಈವರೆಗೆ ಬಂಧನವಾಗಿಲ್ಲ. ಈ ದೇಶದಲ್ಲಿ ಸಂವಿಧಾನ ನೀಡಿದ ಹಕ್ಕನ್ನು ಬಳಸಿಕೊಂಡು ‘ಐ ಲವ್ ಮುಹಮ್ಮದ್’ ಎಂದರೆ ಅವರನ್ನು ತಕ್ಷಣ ಬಂಧಿಸಲಾಗುತ್ತದೆ. ಫೆಲೆಸ್ತೀನ್ ಸಂತ್ರಸ್ತರ ಪರವಾಗಿ ಮಾತನಾಡಿದರೂ ಅವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸುತ್ತಾರೆ. ಆದರೆ ಈ ದೇಶದ ಸಂವಿಧಾನವನ್ನು ಬರೆದ ಅಂಬೇಡ್ಕರ್‌ರನ್ನು ನಿಂದಿಸಿದ ಸನಾತನವಾದಿಯೊಬ್ಬ ‘ಅಭಿವ್ಯಕ್ತಿ ಸ್ವಾತಂತ್ರ್ಯ’ವನ್ನು ಬಳಸಿಕೊಂಡು ಸ್ವತಂತ್ರವಾಗಿ ಓಡಾಡುತ್ತಾನೆ.

ಶೂ ಎಸೆತ ದಾಳಿ ಒಂದು ಪೂರ್ವಯೋಜಿತ ಸಂಚಾಗಿತ್ತು. ಈ ದಾಳಿಗೆ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಗವಾಯಿಯ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ಕೆಲವರು ನೀಡಿದ್ದರು. ಸಿಜೆಐ ವಿರುದ್ಧ ದಾಳಿಗೆ ಪ್ರಚೋದಿಸಿದ್ದರು. ಇವರಲ್ಲಿ ವಿದ್ಯಾವಂತರು, ಕಾನೂನು ಓದಿಕೊಂಡವರೇ ಹೆಚ್ಚಿದ್ದರು ಮತ್ತು ಇವರೆಲ್ಲಾ ಮೇಲ್‌ಜಾತಿಗೆ ಸೇರಿದವರಾಗಿದ್ದರು. ಶೂ ಎಸೆದ ಬಳಿಕ ಗವಾಯಿ ವಿರುದ್ಧ ನಿಂದನಾತ್ಮಕ ಪೋಸ್ಟ್‌ಗಳನ್ನು ಹಾಕಿದ 100ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಪಂಜಾಬ್ ಪೊಲೀಸರು ಬುಧವಾರ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಈ ಎಲ್ಲ ಪೋಸ್ಟ್‌ಗಳಲ್ಲಿ ಎದ್ದು ಕಾಣುವ ಸಮಾನ ಅಂಶ ದಲಿತರ ಮೇಲಿರುವ ದ್ವೇಷವಾಗಿದೆ. ಹಾಗೆಯೇ ಅವುಗಳಲ್ಲಿ ಅಂಬೇಡ್ಕರ್ ಕುರಿತಂತೆ ಅಸಹನೆಯೂ ತುಂಬಿ ತುಳುಕುತ್ತಿದ್ದವು. ಇಂತಹ ದ್ವೇಷ ಪೋಸ್ಟ್‌ಗಳ ವಿರುದ್ಧ ಎಫ್‌ಐಆರ್ ಹಾಕಲು ಪಂಜಾಬ್ ಸರಕಾರ ತೋರಿಸಿದ ಉತ್ಸಾಹವನ್ನು ಇತರ ರಾಜ್ಯಗಳು ತೋರಿಸಿಲ್ಲ. ಕರ್ನಾಟಕದಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಗವಾಯಿ ಮೇಲಿನ ದಾಳಿಯನ್ನು ಸಮರ್ಥಿಸಿ ಹಲವರು ಸ್ಟೇಟಸ್‌ಗಳನ್ನು ಹಾಕಿದ್ದಾರೆ. ಆದರೆ ಇವುಗಳನ್ನು ಸರಕಾರ ಕಂಡೂ ಕಾಣದಂತಿದೆ. ಅಂಬೇಡ್ಕರ್ ಮೇಲೆ ನಡೆಯುತ್ತಿರುವ ಈ ದಾಳಿಯನ್ನು ಸಹಿಸುವುದೆಂದರೆ ಸಂವಿಧಾನದ ಮೇಲಿನ ದಾಳಿಯನ್ನು ಸಹಿಸಿದಂತೆ. ಸಂವಿಧಾನವನ್ನು ದುರ್ಬಲಗೊಳಿಸಲು ಮುಂದಾಗಿರುವ ಸಂಚುಗಾರರಿಗೆ ಪರೋಕ್ಷವಾಗಿ ಸಹಕರಿಸಿದಂತೆ ಎನ್ನುವುದು ರಾಜ್ಯ ಸರಕಾರಕ್ಕೆ ಇನ್ನೂ ಅರ್ಥವಾಗಿಲ್ಲ.

ಸದ್ಯದ ದಿನಗಳಲ್ಲಿ ಜಾತಿ ವ್ಯವಸ್ಥೆಯನ್ನು ಪೋಷಿಸುವವರಲ್ಲಿ ವಿದ್ಯಾವಂತರೇ ಮುಂಚೂಣಿಯಲ್ಲಿದ್ದಾರೆ ಎನ್ನುವುದನ್ನು ಈ ಬೆಳವಣಿಗೆಗಳು ಸಾಬೀತು ಮಾಡಿವೆ. ಅದರಲ್ಲೂ ಸಂವಿಧಾನವನ್ನು ಓದಿದ ವಿದ್ಯಾವಂತರೇ ಅಗ್ರಸ್ಥಾನದಲ್ಲಿದ್ದಾರೆ. ಇಲ್ಲಿ ದಲಿತನೊಬ್ಬ ವಿದ್ಯೆ ಕಲಿತು ಅದೆಷ್ಟೇ ಉನ್ನತ ಸ್ಥಾನವನ್ನೇರಿದರೂ ಆತನ ಬಗ್ಗೆ ಇರುವ ಅಸಹನೆಯಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಗವಾಯಿ ಇದಕ್ಕೆ ಒಂದು ಉದಾಹರಣೆಯಾದರೆ, ಮೇಲಧಿಕಾರಿಗಳಿಂದ ಜಾತಿ ಆಧಾರಿತ ತಾರತಮ್ಯ, ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಚಂಡಿಗಡದ ದಲಿತ ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಇನ್ನೊಂದು ಉದಾಹರಣೆ. ಅಕ್ಟೋಬರ್ 9ರಂದು ಈ ಐಪಿಎಸ್ ಅಧಿಕಾರಿ ತನ್ನ ನಿವಾಸದಲ್ಲಿ ಗುಂಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈತ ಬಿಟ್ಟು ಹೋಗಿರುವ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಮೇಲಧಿಕಾರಿಗಳು ಜಾತಿ ಆಧಾರಿತ ತಾರತಮ್ಯ ಹಾಗೂ ಕಿರುಕುಳವನ್ನು ನೀಡುತ್ತಿದ್ದ ಕಾರಣದಿಂದ ತಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಬರೆದಿದ್ದಾರೆ. ಹಲವು ವರ್ಷಗಳಿಂದ ನನಗೆ ಸಾರ್ವಜನಿಕವಾಗಿ ಅಪಮಾನಿಸಲಾಗಿದೆ. ಯೋಜಿತವಾಗಿ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಆತ ಈ ಹಿಂದೆಯೇ ಹಲವು ಬಾರಿ ಮೇಲಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜವಾಗಿರಲಿಲ್ಲ. ದಲಿತ ಐಪಿಎಸ್ ಅಧಿಕಾರಿಯ ಸ್ಥಿತಿಯೇ ಇಷ್ಟು ದಯನೀಯವಾಗಿದ್ದರೆ, ಈ ದೇಶದಲ್ಲಿ ಉಳಿದ ದಲಿತರ ಸ್ಥಿತಿ ಹೇಗಿರಬಹುದು?

ವರ್ಷದಿಂದ ವರ್ಷಕ್ಕೆ ದಲಿತರ ಮೇಲಿನ ದಾಳಿಗಳು, ದೌರ್ಜನ್ಯಗಳು ಹೆಚ್ಚುತ್ತಿವೆ ಎನ್ನುವುದನ್ನು ಸರಕಾರವೇ ಹೇಳುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಪ್ರಕಾರ 2023ರಲ್ಲಿ ಎಸ್‌ಟಿಗಳ ವಿರುದ್ಧ ನಡೆದ ದೌರ್ಜನ್ಯ ಪ್ರಕರಣಗಳಲ್ಲಿ ಶೇ. 28. 8ರಷ್ಟು ಮತ್ತು ಸೈಬರ್ ಅಪರಾಧಗಳಲ್ಲಿ ಶೇ. 31.2ರಷ್ಟು ಹೆಚ್ಚಳವಾಗಿತ್ತು. ರಾಷ್ಟ್ರಮಟ್ಟದಲ್ಲಿ ದಾಖಲಾದ ಎಸ್‌ಟಿಗಳ ವಿರುದ್ಧ ಅಪರಾಧ ಪ್ರಕರಣಗಳ ಒಟ್ಟು ಸಂಖ್ಯೆ 2022ಕ್ಕೆ ಹೋಲಿಸಿದರೆ 2023ರಲ್ಲಿ 10,064ರಿಂದ 12,960ಕ್ಕೆ ಏರಿಕೆಯಾಗಿದೆ. ಇದೀಗ ಈ ದೇಶದ ವಿದ್ಯಾವಂತ ವರ್ಗ ದಲಿತರ ಮೇಲಿನ ದೌರ್ಜನ್ಯಗಳಿಗೆ ಕಾನೂನು ಸಮ್ಮತಿ ಕೊಡಿಸುವುದಕ್ಕಾಗಿ ನೇರವಾಗಿ ಸಂವಿಧಾನದ ಮೇಲೆಯೇ ದಾಳಿಗೆ ತೊಡಗಿದೆೆ. ಇಂತಹ ದಾಳಿಗಳನ್ನು ಸನಾತನವಾದದ ರಕ್ಷಣೆಯ ಹೆಸರಿನಲ್ಲಿ ಬಹಿರಂಗವಾಗಿ ಸಮರ್ಥಿಸಲಾಗುತ್ತಿರುವುದು ಇವರ ಮುಂದೆ ಸರಕಾರ ಮತ್ತು ಕಾನೂನು ವ್ಯವಸ್ಥೆ ಅಸಹಾಯಕವಾಗಿರುವುದು ಅತ್ಯಂತ ಕಳವಳಕಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News