ನಿರಂತರ ಮಳೆ : ತುರ್ತು ಪರಿಹಾರ ಕ್ರಮ ಅಗತ್ಯ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಉತ್ತರ ಭಾಗ ಹಾಗೂ ಮಧ್ಯ ಕರ್ನಾಟಕದ ಕೆಲವೆಡೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಬೆಳೆದು ನಿಂತ ಬೆಳೆಗಳು ನೀರಿನಲ್ಲಿ ಮುಳುಗಿ ಹಾಳಾಗಿ ಹೋಗುತ್ತಿವೆ. ಭೀಮಾ ನದಿಯ ಪ್ರವಾಹದ ಪರಿಣಾಮವಾಗಿ ಕಲಬುರಗಿ, ರಾಯಚೂರು ಮೊದಲಾದ ಜಿಲ್ಲೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಪಕ್ಕದ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ವಿಪರೀತ ನೀರು ಹರಿದು ಬರುತ್ತಿದೆ. ಕಲಬುರಗಿ ಮತ್ತು ಬಿಜಾಪುರ, ಬೆಳಗಾವಿ ನಡುವಿನ ವಾಹನ ಸಂಚಾರ ಸಂಪೂರ್ಣ ನಿಂತು ಹೋಗಿದೆ. ಬಾಗಲಕೋಟೆ, ಬಿಜಾಪುರ, ಬಳ್ಳಾರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಕೆಲವೆಡೆ ಮನೆಗಳು ಕುಸಿದು ಬಿದ್ದಿವೆ. ಮಹಾಲಿಂಗಪುರದಲ್ಲಿ ಗೋಡೆ ಕುಸಿದು ಹನ್ನೆರಡು ವರ್ಷದ ಬಾಲಕ ಅಸು ನೀಗಿದ್ದಾನೆ. ಕಲಬುರಗಿ ಜಿಲ್ಲೆಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.
ಆಗಸ್ಟ್ ಮೊದಲ ವಾರದಿಂದಲೇ ಸುರಿಯುತ್ತಿರುವ ಮಳೆಯಿಂದಾಗಿ ಧಾರವಾಡ, ಉತ್ತರ ಕನ್ನಡ, ಹಾವೇರಿ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕಲಬುರಗಿ, ರಾಯಚೂರು ಮೊದಲಾದ ಜಿಲ್ಲೆಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಕಾಫಿ, ತೊಗರಿ, ಉದ್ದು, ಮೆಣಸಿನಕಾಯಿ, ಸೋಯಾಬೀನ್, ಜೋಳ, ಗೋಧಿ ಮುಂತಾದ ಬೆಳೆಗಳು ಹಾನಿಗೀಡಾಗಿವೆ. ಹೀಗಾಗಿ ಕೃಷಿ ಚಟುವಟಿಕೆ ಸಂಪೂರ್ಣ ನಿಂತು ಹೋಗಿದೆ. ಸಾಲ ಮಾಡಿ ಬೀಜ, ರಸ ಗೊಬ್ಬರ, ಕ್ರಿಮಿನಾಶಕಗಳನ್ನು ಖರೀದಿ ಮಾಡಿ ಬಿತ್ತನೆ ಮಾಡಿದ ರೈತರ ಸ್ಥಿತಿ ಚಿಂತಾಜನಕವಾಗಿದೆ.
ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಮತ್ತು ದಕ್ಷಿಣ ಒಳನಾಡಿನ 16 ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದಾಗಿ ಹೆಚ್ಚಿನ ಬೆಳೆಗಳು ಹಾಳಾಗಿ ಹೋಗಿವೆ. ಕಾಫಿಗೆ ಕೊಳೆ ರೋಗ ತಗಲಿ ಕಾಯಿಗಳು ಉದುರಿ ಬೀಳುತ್ತಿವೆ. ಕಾಳು ಮೆಣಸು ಫಸಲಿನ ಮೇಲೆ ದುಷ್ಪರಿಣಾಮ ಉಂಟಾಗಿದೆ. ಕೆಲವು ಜಿಲ್ಲೆಗಳಲ್ಲಿ ಮೆಕ್ಕೆ ಜೋಳವನ್ನು ಬಿಳಿಸುಳಿ ರೋಗ ಕಾಡುತ್ತಿದೆ. ಶುಂಠಿಗೆ ಬೆಂಕಿ ರೋಗ ಮತ್ತು ಹೆಸರು ಬೆಳೆಗೆ ಹಳದಿ ನಂಜುರೋಗ ಕಾಣಿಸಿಕೊಂಡಿದೆ. ಹೀಗಾಗಿ ವಿಪರೀತ ಬೆಳೆ ನಷ್ಟವಾಗಿದೆ.
ಈ ಕಷ್ಟದ ಸಮಯದಲ್ಲಿ ಸರಕಾರ ರೈತರ ನೆರವಿಗೆ ಧಾವಿಸಬೇಕು. ನಿಲ್ಲದ ಮಳೆಯಿಂದಾಗಿ ಮನೆ ಮಾರು ಕಳೆದುಕೊಂಡು ನಿರಾಶ್ರಿತರಾಗಿರುವ ಜನರಿಗೆ ತುರ್ತಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ನೆರೆ ಪೀಡಿತ ಕಲಬುರಗಿ, ಯಾದಗಿರಿ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ತುರ್ತು ರಕ್ಷಣಾ ಮತ್ತು ಪರಿಹಾರ ಕಾರ್ಯ ಆರಂಭಿಸುವಂತೆ ಸೂಚನೆ ನೀಡಿದ್ದಾರೆ. ಆದರೆ ಅಧಿಕಾರಶಾಹಿಯಲ್ಲಿ ಬೇರು ಬಿಟ್ಟಿರುವ ಜಡತ್ವದಿಂದ ಪರಿಹಾರ ಕಾರ್ಯ ತಡವಾಗಿ ಆರಂಭವಾಗಿದೆ. ರೈತರು ತೀವ್ರ ತೊಂದರೆಗೆ ಒಳಗಾಗಿರುವುದರಿಂದ ಸರಕಾರ ಕೂಡಲೇ ರೈತರ ನೆರವಿಗೆ ಬರಬೇಕಾಗಿದೆ.
ಅದರಲ್ಲೂ ಕಲ್ಯಾಣ ಕರ್ನಾಟಕದ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಅನೇಕ ಹಳ್ಳಿಗಳು ನೀರಿನಲ್ಲಿ ಮುಳುಗಿ ಮೂರು ದಿನಗಳಾದವು. ನೂರಾರು ಜನ ಮನೆ ಖಾಲಿ ಮಾಡಿ ಸರಕಾರಿ ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಕಾಳಜಿ ಕೇಂದ್ರಗಳನ್ನು ತೆರೆದಿರುವುದಾಗಿ ಪ್ರವಾಹ ಬಂದ ಮೊದಲ ದಿನದಿಂದ ಹೇಳಲಾಗುತ್ತಿದೆ. ವಾಸ್ತವವಾಗಿ ಸರಡಗಿ ಮತ್ತಿತರ ಊರುಗಳಲ್ಲಿ ಕಾಳಜಿ ಕೇಂದ್ರ ತೆರೆದರೂ ಒಬ್ಬ ಸಿಬ್ಬಂದಿಯೂ ಇಲ್ಲ. ಆಹಾರ ಪೂರೈಕೆಯಾಗಿಲ್ಲ ಎಂದು ನಿರಾಶ್ರಿತರು ದೂರುತ್ತಿದ್ದಾರೆ.
ಪ್ರವಾಹಕ್ಕೆ ಮಳೆಯೊಂದೇ ಕಾರಣವಲ್ಲ. ಮಹಾರಾಷ್ಟ್ರದ ಸಿನಾ ನದಿಯಿಂದ 3.50 ಕ್ಯೂಸೆಕ್ ನೀರು ಬಿಟ್ಟಿದ್ದು ಭೀಮಾ ನದಿ ಉಕ್ಕೇರಿ ಹರಿಯಲು ಕಾರಣ. ಭೀಮಾ ನದಿ ನೀರಿನ ವಿಷಯದಲ್ಲಿ ಹೀಗಾಗಲು ಮಹಾರಾಷ್ಟ್ರ ಮತ್ತು ಕರ್ನಾಟಕ ಈ ಎರಡೂ ರಾಜ್ಯಗಳ ನಡುವೆ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ. ಅಂತರ್‌ರಾಜ್ಯ ಜಂಟಿ ನಿರ್ವಹಣೆ ವ್ಯವಸ್ಥೆ ಇದ್ದರೆ ಹೀಗಾಗುತ್ತಿರಲಿಲ್ಲ. ಪ್ರತಿವರ್ಷ ಮಳೆಗಾಲದಲ್ಲಿ ಈ ಸಮಸ್ಯೆ ಉಲ್ಬಣಿಸಿದರೂ ಶಾಶ್ವತ ಪರಿಹಾರ ರೂಪಿಸಲು ಸಾಧ್ಯವಾಗಿಲ್ಲ. ಇದಕ್ಕೆ ಮಹಾರಾಷ್ಟ್ರ ಸರಕಾರದ ನಕಾರಾತ್ಮಕ ಧೋರಣೆ ಕಾರಣವೆಂದರೆ ಅತಿಶಯೋಕ್ತಿಯಲ್ಲ.
ರಾಜಧಾನಿ ಬೆಂಗಳೂರಿಗೆ ಬಹುದೂರದಲ್ಲಿರುವ ಕಲ್ಯಾಣ ಕರ್ನಾಟಕದ ಸಂಕಟಗಳು, ಸಮಸ್ಯೆಗಳು ಸರಕಾರಕ್ಕೆ ತಲುಪುವುದು ಸುಲಭವಲ್ಲ. ಬೇಸಿಗೆಯಲ್ಲಿ ಉರಿ ಬಿಸಿಲು. ಕುಡಿಯುವ ನೀರಿಗೆ ಹಾಹಾಕಾರ. ಮಳೆಗಾಲದಲ್ಲಿ ಸಾಕೆನಿಸುವಷ್ಟು ಮಳೆ. ಜೊತೆಗೆ ಪ್ರವಾಹ, ಬೆಳೆ ನಾಶ, ಮನೆ ಮಾರು ನೆರೆಯ ನೀರಿಗೆ ಮುಳುಗಿ ಬದುಕು ಅಸ್ತವ್ಯಸ್ತ. ಹೀಗಾಗಿ ತೊಗರಿ ಕಣಜ ಎಂದು ಹೆಸರಾಗಿರುವ ಕಲಬುರಗಿ, ಯಾದಗಿರಿ ಜಿಲ್ಲೆಗಳು ತತ್ತರಿಸಿ ಹೋಗಿವೆ. ಪ್ರವಾಹ ಬಂದಾಗ ಉಕ್ಕಿ ಹರಿಯುವ ಭೀಮಾ ನದಿ ನೀರು ಹಳ್ಳಿಗಳಿಗೆ ನುಗ್ಗುತ್ತದೆ. ಆದರೆ ಬೇಸಿಗೆಯಲ್ಲಿ ಕುಡಿಯಲು ಹನಿ ನೀರು ಸಿಗುವುದಿಲ್ಲ.ಎಪ್ರಿಲ್, ಮೇ ತಿಂಗಳಲ್ಲಿ ಜನರು ಹಾಗೂ ದನಕರುಗಳಿಗೆ ಕುಡಿಯುವ ನೀರಿಲ್ಲದೆ ಯಾತನೆಯನ್ನು ಅನುಭವಿಸಬೇಕಾಗುತ್ತದೆ. ಆಗ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ದೊರಕಿಸುವಂತೆ ಜನರು ಹೋರಾಟ ಮಾಡುತ್ತಾರೆ. ಆನಂತರ ಮಳೆಗಾಲದಲ್ಲಿ ನೀರು ನಿಲ್ಲಿಸುವಂತೆ ಮನವಿ ಮಾಡುತ್ತಾರೆ. ಇದಕ್ಕೆ ಒಂದು ಶಾಶ್ವತ ಪರಿಹಾರ ಕಲ್ಪಿಸುವುದು ಅಗತ್ಯವಾಗಿದೆ.
ಈ ಸಲವಂತೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮುಂಗಾರು ಬೆಳೆಗಳು ಸರ್ವನಾಶವಾಗಿವೆ. ಹಿಂಗಾರು ಬಿತ್ತನೆಗೂ ಕಾರ್ಮೋಡ ಕವಿದಿದೆ. ಬರ ಮತ್ತು ನೆರೆಯಿಂದ ತತ್ತರಿಸಿ ಹೋಗಿರುವ ಈ ಭಾಗದ ರೈತರ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರಗಳಿಂದ ಪ್ರಯೋಜನವಿಲ್ಲ. ಇದಕ್ಕೆ ಸದ್ಯದ ಶಾಶ್ವತ ಪರಿಹಾರವೆಂದರೆ ನಮ್ಮ ರಾಜ್ಯದಲ್ಲಿ 259 ಕಿ.ಮೀ. ಹರಿಯುವ ಭೀಮಾ ನದಿ ನೀರನ್ನು ವ್ಯರ್ಥವಾಗಿ ಹರಿಯಲು ಬಿಡಬಾರದು. ಈ ಭೀಮಾ ನದಿಗೆ ಕೆರೆ ಕಟ್ಟೆಗಳನ್ನು ಕಟ್ಟಿ ನೀರು ಸಂಗ್ರಹಿಸುವ ಕೆಲಸ ಮೊದಲು ಆಗಬೇಕಾಗಿದೆ. ಇದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ನಿವಾರಣೆಯಾಗುತ್ತದೆ. ಅಂತರ್ಜಲ ಹೆಚ್ಚುವುದರಿಂದ ರೈತರಿಗೂ ಪ್ರಯೋಜನವಾಗುತ್ತದೆ. ಪ್ರವಾಹದ ದುಷ್ಪರಿಣಾಮವೂ ಉಂಟಾಗುವುದಿಲ್ಲ. ಇದಕ್ಕೆ ಅಧಿಕಾರದಲ್ಲಿರುವವರು ಇಚ್ಛಾಶಕ್ತಿ ತೋರಿಸಬೇಕು. ಕಾವೇರಿಗೆ ಸಿಗುವಷ್ಟು ಆದ್ಯತೆ ಕೃಷ್ಣಾ, ಭೀಮಾ ತೀರದ ಜನರ ಸಮಸ್ಯೆಗಳಿಗೂ ಸಿಗಬೇಕು.