ಜಾನುವಾರು ಸಾಕಣೆ ಅಪರಾಧವೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಭೂಗಳ್ಳತನ, ಅಕ್ರಮ ಮರಳುಗಾರಿಕೆ, ಅಕ್ರಮ ಕಲ್ಲು ಗಣಿಗಾರಿಕೆ ಇವೆಲ್ಲದರ ವಿರುದ್ಧ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಸಾಕಿದ ದನವನ್ನು ಮಾರಾಟ ಮಾಡಿದ ಆರೋಪಕ್ಕಾಗಿ ಬಡ ವೃದ್ಧೆಯೊಬ್ಬರ ಮನೆಯನ್ನು ಮುಟ್ಟುಗೋಲು ಹಾಕುವ ಮೂಲಕ ರಾಜ್ಯ ಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ. ನವೆಂಬರ್ 4ರಂದು, ಅಕ್ರಮವಾಗಿ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಬೆಳ್ತಂಗಡಿಯ ಪೊಲೀಸರು ಪತ್ತೆ ಹಚ್ಚಿದ್ದರು. ಈ ವ್ಯಾಪಾರಿಗಳಿಗೆ ಜಾನುವಾರನ್ನು ಮಾರಾಟ ಮಾಡಿರುವುದು ಬೆಳ್ತಂಗಡಿಯ ಪಟ್ರಮೆ ಗ್ರಾಮದ ರೊಹರಾ ಎಂದು ಗೊತ್ತಾಗಿದ್ದೇ ಆಕೆಯ ವಿರುದ್ಧವೂ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದರು. ನಾಡಿನ ಕಾನೂನು ಸುವ್ಯವಸ್ಥೆಯ ಕುರಿತಂತೆ ಬೆಳ್ತಂಗಡಿಯ ಪೊಲೀಸರಿಗೆ ಏಕಾಏಕಿ ಕಾಳಜಿ ಉಕ್ಕಿ ಹರಿದು, ನೇರವಾಗಿ ರೊಹರಾ ಅವರ ಮನೆಗೆ ತೆರಳಿ, ಅವರ ತಾಯಿ ಸಾರಮ್ಮ ಹೆಸರಿನಲ್ಲಿದ್ದ ಮನೆಯನ್ನು ಮುಟ್ಟುಗೋಲು ಹಾಕಿಯೇ ಬಿಟ್ಟರು. ಮನೆಯಲ್ಲಿರುವ ಮೂವರು ಮಕ್ಕಳು, ಅವರಲ್ಲೂ ಇಬ್ಬರು ಹೆಣ್ಣು ಮಕ್ಕಳ ಸಹಿತ ಕುಟುಂಬ ಏಕಾಏಕಿ ಬೀದಿ ಪಾಲಾಗಬೇಕಾಯಿತು. ಗುಬ್ಬಚ್ಚಿಯ ಮೇಲೆ ಪೊಲೀಸರು ಬಿಟ್ಟ ಈ ಬ್ರಹ್ಮಾಸ್ತ್ರ ರಾಜ್ಯ ಮಟ್ಟದಲ್ಲಿ ಚರ್ಚೆಯ ವಿಷಯವಾಯಿತು. ಕರಾವಳಿಯಲ್ಲಿ ಸ್ವಚ್ಛಂದ ಓಡಾಡುತ್ತಿರುವ ಭೂಗತ ಮಾಫಿಯಾ ಮಂದಿ, ರೌಡಿಶೀಟರ್‌ಗಳು, ಕೊಲೆ ಆರೋಪಿಗಳು, ಗಾಂಜಾ ಮಾರಾಟಗಾರರು ಪೊಲೀಸರ ಈ ಕ್ರಮವನ್ನು ನೋಡಿ ಮೀಸೆಯ ಮರೆಯಲ್ಲೇ ನಗತೊಡಗಿದರು. ಕಾನೂನು ವ್ಯವಸ್ಥೆಯ ಅತಿ ಕ್ರೂರ ಅಣಕವಾಗಿತ್ತು ಅದು. ವಿವಿಧ ಸಾಮಾಜಿಕ ಕಾರ್ಯಕರ್ತರು ಇದರ ವಿರುದ್ಧ ಧ್ವನಿಯೆತ್ತ ತೊಡಗಿದಾಗ, ಪುತ್ತೂರಿನ ಸಹಾಯಕ ಆಯುಕ್ತರು ತಕ್ಷಣ ಮಧ್ಯ ಪ್ರವೇಶಿಸಿದರು. ಮುಟ್ಟುಗೋಲಿನ ಬಗ್ಗೆ ವಿಚಾರಣೆ ನಡೆಸಿದ ಅವರು, ಪೊಲೀಸರು ಕಾನೂನು ವ್ಯಾಪ್ತಿಯನ್ನು ಮೀರಿರುವುದು ಮನವರಿಕೆಯಾಗಿ, ಮುಟ್ಟುಗೋಲನ್ನು ತಡೆದರು. ಆದರೆ, ಕಾನೂನನ್ನು ದುರುಪಯೋಗಗೊಳಿಸಿ ಬಡ ಕುಟುಂಬವನ್ನು ಬೀದಿಪಾಲು ಮಾಡಲು ಯತ್ನಿಸಿದ ಪೊಲೀಸರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ದನಗಳನ್ನು ಪೊಲೀಸರು ಹಿಡಿಯುವುದು ಇದೇ ಮೊದಲೇನಲ್ಲ. ಆದರೆ ತಾನು ಸಾಕಿದ ದನವನ್ನು ಮಾರಾಟ ಮಾಡಿದ ಆರೋಪದಲ್ಲಿ ಒಬ್ಬ ಮಹಿಳೆಯ ಮೇಲೆ ಮೊಕದ್ದಮೆ ದಾಖಲಿಸಿ ಆಕೆಯ ಮನೆಯನ್ನು ಮುಟ್ಟುಗೋಲು ಮಾಡುತ್ತಿರುವುದು ರಾಜ್ಯದ ಇತಿಹಾಸದಲ್ಲೇ ಇದೇ ಮೊದಲು ಇರಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ದನಸಾಗಾಟ ಆರೋಪದಲ್ಲಿ ಈ ಹಿಂದೆ ಹಲವರು ಬಂಧಿತರಾಗಿದ್ದಾರೆ. ಅವರಲ್ಲಿ ಸಂಘಪರಿವಾರದ ಕಾರ್ಯಕರ್ತರೂ ಸೇರಿದ್ದಾರೆ. ಹೀಗೆ ಬಂಧಿತರಾದ ಯಾವುದೇ ಆರೋಪಿಗಳ ಮನೆಯನ್ನು ಪೊಲೀಸರು ಅತ್ಯಾಸಕ್ತಿಯಿಂದ, ಆತುರಾತುರವಾಗಿ ಮುಟ್ಟುಗೋಲು ಹಾಕಿದ ಇತಿಹಾಸ ಕರಾವಳಿಯಲ್ಲಿ ಇಲ್ಲ. ಹೀಗೆ ಬಂಧಿತರಾದವರಿಗೆ ದನಗಳನ್ನು ಮಾರಾಟ ಮಾಡಿದ ರೈತರ ಮೇಲೆಯೂ ಪೊಲೀಸರು ಈ ರೀತಿಯಲ್ಲಿ ಕಠಿಣ ಕ್ರಮ ತೆಗೆದುಕೊಂಡಿಲ್ಲ. ರೈತರು ದನಗಳನ್ನು ಸಾಕುವುದು, ತಾವು ಸಾಕಿದ ದನಗಳನ್ನು ಬೇಕೆನಿಸಿದಾಗ ಮಾರಾಟ ಮಾಡುವುದು ಹೈನೋದ್ಯಮದ ಒಂದು ಭಾಗವಾಗಿ ಬೆಳೆದು ಬಂದಿದೆ. ಕರಾವಳಿಯೇತರ ಜಿಲ್ಲೆಗಳಲ್ಲಿ ಜಾನುವಾರು ಸಂತೆಗಳು ನಡೆಯುತ್ತವೆ. ಅಲ್ಲಿ ರೈತರು ತಮ್ಮ ದನ, ಎತ್ತುಗಳನ್ನು ಮಾರಾಟ ಮಾಡುವುದಕ್ಕಾಗಿ ತರುತ್ತಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ಜಾನುವಾರು ಸಂತೆಗಳು ಇಳಿಮುಖವಾಗುತ್ತಿವೆ. ಕಾರಣ, ಜಾನುವಾರು ಕಾಯ್ದೆಯನ್ನು ಮುಂದಿಟ್ಟುಕೊಂಡು ವ್ಯಾಪಾರಿಗಳಿಗೆ ಪೊಲೀಸರು ಮತ್ತು ನಕಲಿ ಗೋರಕ್ಷಕರು ನೀಡುತ್ತಿರುವ ಕಿರುಕುಳ. ಇದರಿಂದಾಗಿ, ತೀರಾ ಹಣದ ತತ್ವಾರ ಇದ್ದಾಗಲೂ ತಮ್ಮದೇ ಜಾನುವಾರುಗಳನ್ನು ಯೋಗ್ಯಬೆಲೆಗೆ ಮಾರಾಟ ಮಾಡಲಾಗದ ಸ್ಥಿತಿಗೆ ಬಂದಿದ್ದಾರೆ ರೈತರು.
ರೈತರು ತಾವು ಸಾಕಿದ ದನಗಳನ್ನು ಮಾರಾಟ ಮಾಡುತ್ತಾರೆಯೇ ಹೊರತು, ಎಲ್ಲಿಂದಲೋ ಕದ್ದು ತಂದುದನ್ನಲ್ಲ. ಮಾರಾಟ ಮಾಡುವ ದನಗಳನ್ನು ಸಾಕಲು, ಪೋಷಿಸಲು ಅಪಾರ ವೆಚ್ಚವನ್ನು ಮಾಡಿರುತ್ತಾರೆ. ಇಷ್ಟಕ್ಕೂ ರೈತರು ಅನುಪಯುಕ್ತ ದನಗಳನ್ನಷ್ಟೇ ಮಾರುತ್ತಾರೆಯೇ ಹೊರತು, ಹಾಲು ಕೊಡುವ ಜಾನುವಾರುಗಳನ್ನಲ್ಲ. ಈ ಮೂಲಕ ಅನುಪಯುಕ್ತ ಜಾನುವಾರುಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಇತರ ಜಾನುವಾರುಗಳಿಗೆ ಹುಲ್ಲು, ಆಹಾರಗಳನ್ನು ಕೊಂಡುಕೊಳ್ಳಲು ಬಳಸುತ್ತಾರೆ. ಅಥವಾ ಇತರ ಅಗತ್ಯಗಳನ್ನು ಈಡೇರಿಸಿಕೊಳ್ಳುತ್ತಾರೆ. ತಾವು ಮಾರಾಟ ಮಾಡಿದ ಜಾನುವಾರುಗಳನ್ನು ವ್ಯಾಪಾರಿಗಳು ಏನು ಮಾಡುತ್ತಾರೆ, ಅದನ್ನು ಅವರು ಕಸಾಯಿಖಾನೆಗೆ ಕೊಂಡೊಯ್ಯುತ್ತಾರೆಯೋ ಅಥವಾ ಸಾಕಲು ಕೊಂಡೊಯ್ಯುತ್ತಾರೆಯೋ ಎನ್ನುವುದನ್ನು ತಿಳಿಯುವುದು ಹೇಗೆ?
ಎಲ್ಲಕ್ಕಿಂತ ಮುಖ್ಯವಾಗಿ, ದನ ಸಾಕುವ ರೈತರು ಮತ್ತು ಅದನ್ನು ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುವ ಆರೋಪಿಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಎಷ್ಟು ಸರಿ? ಅಕ್ರಮವಾಗಿ ದನ ಸಾಗಾಟ ಮಾಡುವ ಕಳ್ಳರ, ಕ್ರಿಮಿನಲ್‌ಗಳ ಸಾಲಿನಲ್ಲಿ ನಿಲ್ಲಿಸಿ ರೈತರ ಮನೆಗಳನ್ನು ಜಪ್ತಿ ಮಾಡಿ ಅವರ ಕುಟುಂಬವನ್ನು ಬೀದಿ ಪಾಲು ಮಾಡುವುದೆಂದರೆ, ಕುಡಿಯುವ ಹಾಲಿಗೆ ವಿಷ ಹಾಕಿದಂತೆಯೇ ಅಲ್ಲವೆ? ಯಾಕೆಂದರೆ, ಇಂದು ಈ ನಾಡು ಹಾಲು ಉತ್ಪಾದನೆಯಲ್ಲಿ ಸಾಧನೆಗಳನ್ನು ಮಾಡಿದ್ದರೆ ಅದಕ್ಕೆ ಮುಖ್ಯ ಕಾರಣರೇ ಈ ರೈತರು. ಈ ಅಮಾಯಕ ರೈತರನ್ನು ಕ್ರಿಮಿನಲ್‌ಗಳ ಸಾಲಿನಲ್ಲಿ ನಿಲ್ಲಿಸಿ ಕಾನೂನು ಪಾಲನೆಯ ಹೆಸರಿನಲ್ಲಿ ಅವರ ಮನೆಗಳನ್ನು ಮುಟ್ಟುಗೋಲು ಹಾಕುವುದು ಬೇರೆಯಲ್ಲ, ಕುಡಿಯುವ ಹಾಲಿಗೆ ವಿಷ ಬೆರೆಸುವುದು ಬೇರೆಯಲ್ಲ.
ಕರಾವಳಿಯಲ್ಲಿ ದನಗಳನ್ನು ಸಾಕುವವರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಇದೀಗ ನಕಲಿ ಗೋರಕ್ಷಕರ ಜೊತೆಗೆ ಪೊಲೀಸರು ಕೂಡ ಯಾವುದೇ ಲಜ್ಜೆಯಲ್ಲದೆ ಈ ದನ ಸಾಕಣೆದಾರರ ಮೇಲೆ ದಾಳಿಗೆ ಇಳಿದಿರುವುದರಿಂದ, ಇರುವ ದನಗಳನ್ನು ಸಾಗ ಹಾಕಿ ನೆಮ್ಮದಿಯಿಂದ ಬದುಕಿದರೆ ಸಾಕು ಎನ್ನುವ ಸ್ಥಿತಿಗೆ ಬಂದು ನಿಂತಿದ್ದಾರೆ. ದನಗಳನ್ನು ಸಾಕುವುದೇ ಅಪರಾಧ ಎನ್ನುವ ವಾತಾವರಣವನ್ನು ಪೊಲೀಸರು ಜಿಲ್ಲೆಯಲ್ಲಿ ನಿರ್ಮಿಸುತ್ತಿದ್ದಾರೆ. ಇವರಿಂದಾಗಿ ನಕಲಿ ಗೋರಕ್ಷಕರ ದಾಂಧಲೆಗಳೂ ಜಿಲ್ಲೆಯಲ್ಲಿ ಹೆಚ್ಚಿವೆ. ನಿಜವಾದ ಜಾನುವಾರು ಸಾಕಣೆಗಾರರು ಭಯದಿಂದ, ಆತಂಕದಿಂದ ಕಾಲ ಕಳೆಯಬೇಕಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಪೂಜೆ ಮಾಡುವುದಕ್ಕೂ ಕೂಡ ಗೋವುಗಳು ಸಿಗದೇ ಇರುವ ಸ್ಥಿತಿ ನಿರ್ಮಾಣವಾಗಲಿದೆ.
ಮತಾಂತರ ಕಾಯ್ದೆಯ ದುರ್ಬಳಕೆಯ ಬಗ್ಗೆ ಸುಪ್ರೀಂಕೋರ್ಟ್ ಈಗಾಗಲೇ ಕಳವಳ ವ್ಯಕ್ತಪಡಿಸಿದೆ ಮಾತ್ರವಲ್ಲ, ಪೊಲೀಸರ ಸಂಚಿನಿಂದ ದಾಖಲಾದ ಹಲವು ಎಫ್‌ಐಆರ್‌ಗಳನ್ನು ರದ್ದುಗೊಳಿಸಿದೆ. ಮತಾಂತರ ಕಾಯ್ದೆ ರಾಜಕೀಯ ದುರುದ್ದೇಶಗಳಿಗಾಗಿ, ದ್ವೇಷ ಸಾಧನೆಗಾಗಿ ಬಳಕೆಯಾಗುತ್ತಿರುವುದರ ಬಗ್ಗೆ ಸುಪ್ರೀಂಕೋರ್ಟ್ ಗಮನ ಸೆಳೆದಿದೆ. ಗೋಹತ್ಯೆ ನಿಷೇಧ ಕಾನೂನು ಕೂಡ ರಾಜಕೀಯ ದುರುದ್ದೇಶಗಳಿಗಾಗಿಯೇ ಜಾರಿಗೊಂಡಿರುವುದು. ನಕಲಿ ಗೋರಕ್ಷಕರ ವೇಷದಲ್ಲಿರುವ ಕ್ರಿಮಿನಲ್‌ಗಳು ಈ ಕಾಯ್ದೆಯ ಲಾಭವನ್ನು ಅತಿ ಹೆಚ್ಚು ತಮ್ಮದಾಗಿಸಿಕೊಂಡಿದ್ದಾರೆ. ಉಳಿದಂತೆ ಗೋಶಾಲೆಗಳ ಹೆಸರಿನಲ್ಲಿ ಸರಕಾರದ ಅನುದಾನಗಳನ್ನು ಕಬಳಿಸಲು, ಅವ್ಯವಹಾರಗಳನ್ನು ನಡೆಸಲು ಕೆಲವು ಶಕ್ತಿಗಳು ಕಾಯ್ದೆಯನ್ನು ದುರ್ಬಳಕೆ ಮಾಡುತ್ತಿವೆ. ಕೃಷಿಕರಿಗೆ, ರೈತರಿಗೆ ಈ ಕಾಯ್ದೆ ಉಪಕಾರ ಮಾಡಿದ್ದಕ್ಕಿಂತ ಉಪದ್ರಕೊಟ್ಟದ್ದೇ ಅಧಿಕ. ಈ ಜಾನುವಾರು ಕಾಯ್ದೆಯನ್ನು ರದ್ದುಗೊಳಿಸುವ ಬಗ್ಗೆ ಸರಕಾರ ಇನ್ನಾದರೂ ಕ್ರಮ ತೆಗೆದುಕೊಳ್ಳಬೇಕು. ಆ ಮೂಲಕ ಜಾನುವಾರುಗಳನ್ನು ಸಾಕುವ ಕೃಷಿಕರನ್ನು ನಕಲಿ ಗೋರಕ್ಷಕರು ಮತ್ತು ಖಾಕಿಗಳ ಲಾಠಿ ಬೂಟುಗಳ ದೌರ್ಜನ್ಯಗಳಿಂದ ರಕ್ಷಿಸಲು ಮುಂದಾಗಬೇಕು.