×
Ad

'ಕನ್ನಡ ರಾಜ್ಯೋತ್ಸವ ಸಂಭ್ರಮ' ಪ್ರಶಸ್ತಿಗಷ್ಟೇ ಸೀಮಿತವಾಗದಿರಲಿ

Update: 2025-10-31 07:13 IST

PC: facebook.com/BengaluruPage

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕನ್ನಡ ರಾಜ್ಯೋತ್ಸವ ದಿನ ಹತ್ತಿರವಾಗುತ್ತಿದ್ದಂತೆಯೇ ವಿಧಾನಸೌಧದಲ್ಲಿ ನೂಕುನುಗ್ಗಲು ಶುರುವಾಗುತ್ತದೆ. ‘ರಾಜ್ಯೋತ್ಸವ ಪ್ರಶಸ್ತಿ’ಯ ಫಲಿತಾಂಶ ಹೊರಬೀಳುವ ದಿನ ಇದಾಗಿರುವುದರಿಂದ ಬರೇ ಸಾಹಿತ್ಯವಲಯ ಮಾತ್ರವಲ್ಲ, ನಾಡಿನ ಬೇರೆ ಬೇರೆ ಕ್ಷೇತ್ರದ ಜನರು ವಿಧಾನಸೌಧದ ಬಾಗಿಲ ಮುಂದೆ ನಿಂತು ಕಾಯುತ್ತಿರುತ್ತಾರೆ. ಒಂದೆಡೆ ಆಯ್ಕೆ ಸಮಿತಿಗಳು ಆಯ್ಕೆಯ ಪ್ರಹಸನ ನಡೆಸಿದ ಬೆನ್ನಿಗೇ, ವಿವಿಧ ಸಚಿವರು, ಜನಪ್ರತಿನಿಧಿಗಳು ತಮ್ಮ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಹಿಡಿದುಕೊಂಡು ಮುಖ್ಯಮಂತ್ರಿ ಕಚೇರಿಯ ಬಾಗಿಲು ತಟ್ಟತೊಡಗುತ್ತಾರೆ. ರಾಜ್ಯದ ನಾಡು ನುಡಿಗೆ ನಿಜವಾದ ಸೇವೆ ಸಲ್ಲಿಸಿದ ಸಾಧಕರು ಹಲವು ಬಾರಿ ಇದರಿಂದ ಮುಜುಗರವನ್ನು ಅನುಭವಿಸಬೇಕಾಗುತ್ತದೆ. ರಾಜಕೀಯ ಶಿಫಾರಸುಗಳನ್ನು ಪಡೆದು ಪ್ರಶಸ್ತಿಗಿಟ್ಟಿಸಿಕೊಂಡವರ ಜೊತೆಗೆ ಇವರೂ ಗುರುತಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಅನೇಕ ಸಂದರ್ಭಗಳಲ್ಲಿ ನಿಜವಾದ ಸಾಧಕರಿಗೆ ಪ್ರಶಸ್ತಿ ಸಲ್ಲಬೇಕಾದರೂ ಅವರಿಗೆ ರಾಜಕೀಯ ಕಪಾಕಟಾಕ್ಷವಿರಬೇಕಾಗುತ್ತದೆ. ಆಯ್ಕೆ ಸಮಿತಿ ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಾಯವಾಗುವುದು ತೀರಾ ಅಪರೂಪ. ಹಲವು ಒತ್ತಡ, ವಶೀಲಿ ಬಾಜಿ ಇವುಗಳ ನಡುವೆಯೇ ಈ ಬಾರಿಯೂ ಸುಮಾರು 70 ಮಂದಿಗೆ ಸರಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದೆ. ಗೌರವವನ್ನು ಪಡೆದವರ ಸಾಲಿನಲ್ಲಿ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಹಲವು ಸಾಧಕರ ಹೆಸರುಗಳಿರುವುದು ಸಮಾಧಾನಕರ ಅಂಶವಾಗಿದೆ. ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಲು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಮಾಡಿರುವ ಕಾರಣದಿಂದ ಕೆಲವು ವರ್ಷಗಳಿಂದ ಎಲ್ಲ ರಾಜಕೀಯ ವಶೀಲಿಗಳ ನಡುವೆಯೂ ಕೆಲವು ಅರ್ಹರಿಗೆ ಸಲ್ಲ ತೊಡಗಿದೆ.

ಈ ಬಾರಿಯ ಪ್ರಶಸ್ತಿಯನ್ನು ಪಡೆದವರಲ್ಲಿ ಒಂದಿಷ್ಟು ಅರ್ಹರಿರುವುದು ರಾಜ್ಯೋತ್ಸವದ ಸಂಭ್ರಮವನ್ನು ಹೆಚ್ಚಿಸಿದೆ. ಪ್ರಕಾಶ್ ರೈ, ರಹಮತ್ ತರೀಕೆರೆ, ರಾಜೇಂದ್ರ ಚೆನ್ನಿ, ತುಂಬಾಡಿ ರಾಮಯ್ಯ, ಸೂಲಗಿತ್ತಿ ಈರಮ್ಮಯ, ಫಕ್ಕೀರಿ, ಕೋಣಂದೂರು ಲಿಂಗಪ್ಪ...ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಹಳಷ್ಟು ಹೆಸರುಗಳು ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಅರ್ಹರಿಗೆ ಸಂದಷ್ಟು ಪ್ರಶಸ್ತಿ ತನ್ನ ಘನತೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಪ್ರಶಸ್ತಿ ನೀಡಿಕೆಯಲ್ಲಿ ಜಿಲ್ಲಾವಾರು ಆದ್ಯತೆಗಳನ್ನು ನೀಡಲಾಗಿದೆ ಮಾತ್ರವಲ್ಲ ಸಾಮಾಜಿಕ ಪ್ರಾತಿನಿಧ್ಯವನ್ನು ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಯಾವಾಗಲೂ ಮೈಸೂರು, ಬೆಂಗಳೂರನ್ನೇ ಕೇಂದ್ರವಾಗಿಟ್ಟುಕೊಂಡು ಕೊಡುವ ಪ್ರಶಸ್ತಿ ಈ ಬಾರಿ ರಾಯಚೂರು, ಬೀದರ್, ಬೆಳಗಾವಿ, ಬಳ್ಳಾರಿ, ಬಾಗಲಕೋಟೆ, ವಿಜಯನಗರ, ಚಿತ್ರದುರ್ಗ ಮೊದಲಾದ ಜಿಲ್ಲೆಗಳಿಗೂ ಸಂದಿವೆೆ. ದಕ್ಷಿಣ ಕನ್ನಡ ಜಿಲ್ಲೆಗೆ ಅತ್ಯಧಿಕ ಸುಮಾರು 6 ಪ್ರಶಸ್ತಿಗಳು ಸಂದಿವೆ. ಇದೇ ಸಂದರ್ಭದಲ್ಲಿ ಸಮಗಾರ ಹರಳಯ್ಯ ಸಮುದಾಯವನ್ನು ಗುರುತಿಸಿರುವುದು ಒಂದು ಹೆಗ್ಗಳಿಕೆಯಾಗಿದೆ ಎಂದು ಸಚಿವರು ಹೇಳಿಕೊಂಡಿದ್ದಾರೆ. ಪೌರಕಾರ್ಮಿಕರೊಬ್ಬರನ್ನು ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅಭಿನಂದನೀಯ. ಶುಚಿತ್ವಕ್ಕಾಗಿ ತಮ್ಮ ಆರೋಗ್ಯವನ್ನು ಬಲಿಕೊಟ್ಟು ಕೆಲಸ ಮಾಡುವ ನೂರಾರು ಕಾರ್ಮಿಕರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿದ್ದಾರೆ. ಕೊರೋನ ಸಾಂಕ್ರಾಮಿಕ ದಿನಗಳಲ್ಲಿ ಪ್ರಾಣ ತೆತ್ತ ವೈದ್ಯರು ಮಾಧ್ಯಮಗಳಲ್ಲಿ ಸುದ್ದಿಯಾದರು. ಸಾಂಕ್ರಾಮಿಕ ರೋಗದ ಕಾಲದಲ್ಲೂ ಪ್ರಾಣ ಒತ್ತೆಯಿಟ್ಟು ಶುಚಿತ್ವ ಕೆಲಸವನ್ನು ಮುಂದುವರಿಸಿದ ಪೌರ ಕಾರ್ಮಿಕರನ್ನು ಗುರುತಿಸುವ ಕೆಲಸ ನಡೆದೇ ಇರಲಿಲ್ಲ. ನಾಡಿಗಾಗಿ ಇವರು ಮಾಡಿದ ಕೆಲಸ ಗಡಿಯಲ್ಲಿರುವ ಯೋಧರಿಗೆ ಸರಿಗಟ್ಟುವಂತಹದು. ಈ ಹಿನ್ನೆಲೆಯಲ್ಲಿ ಪೌರಕಾರ್ಮಿಕರೊಬ್ಬರನ್ನು ಗುರುತಿಸಿ ಅವರಿಗೆ ಪ್ರಶಸ್ತಿಯನ್ನು ನೀಡುವ ಸಂಪ್ರದಾಯ ಆರಂಭಿಸಿರುವುದು ರಾಜ್ಯೋತ್ಸವ ಪ್ರಶಸ್ತಿಗೆ ಇನ್ನಷ್ಟು ಗೌರವವನ್ನು ತಂದಿದೆ. ಜೊತೆಗೇ, ಮ್ಯಾನ್‌ಹೋಲ್‌ಗಳಲ್ಲಿ ಇಳಿದು ಪ್ರಾಣ ತ್ಯಾಗ ಮಾಡಿದ ಕಾರ್ಮಿಕರನ್ನು ಗುರುತಿಸಿ ಅವರ ಕುಟುಂಬವನ್ನು ಮರಣೋತ್ತರವಾಗಿ ಗೌರವಿಸುವ ಕೆಲಸವೂ ನಡೆಯಬೇಕಾಗಿದೆ.

ಈ ಹಿಂದೆ ಕಂಡವರಿಗೆಲ್ಲ ಕರೆ ಕರೆದು ಹಂಚುತ್ತಿದ್ದ ರಾಜ್ಯೋತ್ಸವ ಪ್ರಶಸ್ತಿ ಇದೀಗ ತನ್ನ ಗೌರವ, ಘನತೆಯನ್ನು ಮರುಸ್ಥಾಪಿಸಿಕೊಂಡಿರುವುದಕ್ಕೆ ಸಿದ್ದರಾಮಯ್ಯ ಸರಕಾರವನ್ನು ಅಭಿನಂದಿಸಬೇಕಾಗಿದೆ. ಇದೇ ಸಂದರ್ಭದಲ್ಲಿ, ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ರಾಜಕಾರಣಿಗಳು ಯಾವ ರೀತಿಯಲ್ಲೂ ಮೂಗು ತೂರಿಸದಂತೆ ನಿಯಮವನ್ನು ಇನ್ನಷ್ಟು ಕಠಿಣಗೊಳಿಸುವ ಅಗತ್ಯವಿದೆ. ಆಯ್ಕೆ ಸಮಿತಿಯನ್ನು ರಚಿಸಿದ ಬಳಿಕ, ಸಾಧಕರನ್ನು ಗುರುತಿಸುವಲ್ಲಿ ಸಮಿತಿಗೆ ಪೂರ್ಣ ಸ್ವಾತಂತ್ರ್ಯವನ್ನು ನೀಡಬೇಕು ಮತ್ತು ಯಾವುದೇ ಬದಲಾವಣೆಗಳನ್ನು ಕೇವಲ ಮುಖ್ಯಮಂತ್ರಿಯಷ್ಟೇ ಕೊನೆಯ ಗಳಿಗೆಯಲ್ಲಿ ಮಾಡಬೇಕು. ಸಚಿವರು, ಜನಪ್ರತಿನಿಧಿಗಳ ಒತ್ತಡಗಳಿಗೆ ಮಣಿಯುವಂತಾಗಬಾರದು. ಇದೇ ಸಂದರ್ಭದಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಎಲೆಮರೆಯಲ್ಲಿ ಗುರುತಿಸಿಕೊಂಡ ಸಾಧಕರನ್ನು, ಗುಡಿಕೈಗಾರಿಕೆ, ಕೃಷಿಯಂತಹ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಆಯ್ಕೆ ಮಾಡಲು ವಿಶೇಷ ಉಪಸಮಿತಿಗಳನ್ನು ರಚಿಸಬೇಕಾಗಿದೆ. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಬ್ಬರನ್ನು ಈ ಬಾರಿ ಗುರುತಿಸಲಾಗಿದೆ. ಅವರ ಸಂಖ್ಯೆಯಲ್ಲಿ ಹೆಚ್ಚಳವಾಗಬೇಕು. ಇದೇ ಸಂದರ್ಭದಲ್ಲಿ ಜಿಲ್ಲಾಮಟ್ಟದಲ್ಲಿ ಹಂಚುವ ಪ್ರಶಸ್ತಿಗಳಿಗೂ ನಿಯಮಗಳನ್ನು ರೂಪಿಸುವ ಅಗತ್ಯವಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿದ ಜಿಲ್ಲೆಯ 20 ಮಂದಿಯನ್ನು ಗುರುತಿಸಿ ಅವರಿಗೆ ನಗದು ಮತ್ತು ಚಿನ್ನದ ಪದಕ ನೀಡುವಂತಾದರೆ, ಜಿಲ್ಲಾ ಮಟ್ಟದ ಪ್ರಶಸ್ತಿಯ ಘನತೆ ಹೆಚ್ಚಿ ರಾಜ್ಯ ಮಟ್ಟದ ಪ್ರಶಸ್ತಿಗೆ ನೂಗು ನುಗ್ಗಲು ಒಂದಿಷ್ಟು ಕಡಿಮೆಯಾಗಬಹುದು.

ರಾಜ್ಯೋತ್ಸವದ ಸಂಭ್ರಮ ಪ್ರಶಸ್ತಿ ಘೋಷಣೆಯಲ್ಲೇ ಮುಗಿಯಬಾರದು. ಮೈಸೂರು ದಸರಾದ ಬದಲಿಗೆ ಕನ್ನಡ ರಾಜ್ಯೋತ್ಸವವನ್ನೇ ‘ನಾಡಹಬ್ಬ’ವೆಂದು ಘೋಷಿಸಿ ಆಚರಣೆ ಮಾಡಲು ಮುಂದಾದರೆ, ಕನ್ನಡ ನಾಡು ನುಡಿಗೆ ಬಹಳಷ್ಟು ಲಾಭವಿದೆ. ಕನ್ನಡ ಸಂಸ್ಕೃತಿ, ಭಾಷೆ, ಕಲೆ, ಕಾವ್ಯಗಳಿಗೆ ಸಂಬಂಧ ಪಟ್ಟ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಕನಿಷ್ಠ ಮೂರು ದಿನಗಳು ಆಚರಿಸುವಂತಾಗಬೇಕು. ಕನ್ನಡ ರಾಜ್ಯೋತ್ಸವದ ಹೆಸರಿನಲ್ಲಿ ಯಾವುದೇ ಧಾರ್ಮಿಕ, ವೈದಿಕ ಸಂಕೇತಗಳನ್ನು ಹೇರದೆ, ಕನ್ನಡದ ಬಾವುಟದ ಅಡಿಯಲ್ಲಿ ಎಲ್ಲ ಜಾತಿ, ಧರ್ಮದ ಜನರು ಕನ್ನಡತನವನ್ನೇ ಅಸ್ಮಿತೆಯಾಗಿಸಿ ಒಂದಾಗುವಂತಾಗಬೇಕು. ಎಲ್ಲ ಜಾತಿ ಧರ್ಮಗಳ ಮನಸ್ಸುಗಳನ್ನು ಈ ಮೂಲಕ ಕನ್ನಡತನ ಬೆಸೆಯುವಂತಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News