ಅಪಾಯಕಾರಿ ಯೋಜನೆಗಳನ್ನು ಸರಕಾರ ಕೈಬಿಡಲಿ
PC: x.com/KJGeorgeOffice
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಜಾಗತೀಕರಣದ ಕಳೆದ ನಾಲ್ಕು ದಶಕಗಳ ಕಾಲಾವಧಿಯಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಜಾರಿಗೆ ಬರುತ್ತಿರುವ ಪರಿಸರ ವಿನಾಶಕವಾದ ಲಂಗು ಲಗಾಮಿಲ್ಲದ ಯೋಜನೆಗಳ ಪರಿಣಾಮವಾಗಿ ಜಗತ್ತು ಸಾಕಷ್ಟು ಬೆಲೆ ತೆರತೊಡಗಿದೆ.ಹವಾಮಾನ ವೈಪರೀತ್ಯ ಮಿತಿ ಮೀರಿದೆ. ನಮ್ಮ ರಾಜ್ಯದಲ್ಲೇ ಇಂಥ ಯೋಜನೆಗಳು ಬಂದಿವೆ, ಬರುತ್ತಿವೆ. ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಸೇರಿದ ಪ್ರದೇಶದಲ್ಲೂ ಈ ಅಪಾಯಕಾರಿ ಯೋಜನೆಗಳು ಕಾಲಿಟ್ಟಿವೆ. ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಈ ಸೂಕ್ಷ್ಮ ಪ್ರದೇಶದಲ್ಲಿ ಯೋಜಿಸಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ವಿರೋಧಿಸಿ ಸ್ಥಳೀಯ ಜನರು ಮತ್ತು ಪರಿಸರವಾದಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಕಳೆದ ವಾರ ನಡೆದ ವಿಚಾರ ಸಂಕಿರಣದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲ ಗೌಡ, ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ, ‘ಪರಿಸರಕ್ಕಾಗಿ ನಾವು’ ಸಂಘಟನೆಯ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಸೇರಿದಂತೆ ಹಲವಾರು ಚಿಂತಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯಕ್ಕೆ ಗುಣಮಟ್ಟದ ವಿದ್ಯುತ್ ಪೂರೈಕೆಯ ಏಕೈಕ ಕಾರಣಕ್ಕಾಗಿ ಜಗತ್ಪ್ರಸಿದ್ಧ ಜೋಗ ಜಲಪಾತವನ್ನು ಹೊಂದಿರುವ ಜೀವ ವೈವಿಧ್ಯದ ತಾಣವಾದ ಅಭಯಾರಣ್ಯದ ಪ್ರದೇಶದಲ್ಲಿ ಈ ಯೋಜನೆಯನ್ನು ಕೈಗೊಳ್ಳಲು ಸಾರ್ವಜನಿಕ ಅಹವಾಲು ಸಭೆಯಲ್ಲಿ ಸುಮಾರು ಹತ್ತು ಸಾವಿರ ಅಹವಾಲುಗಳು ಸಲ್ಲಿಕೆಯಾಗಿವೆ. ಈ ವಿದ್ಯುತ್ ಯೋಜನೆಗಾಗಿ ಸುರಂಗ ನಿರ್ಮಾಣ, 16 ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿಯುವುದು ಹಾಗೂ ಆಗಾಗ ಸ್ಫೋಟದಂತಹ ಚಟುವಟಿಕೆಗಳು ಮುಂತಾದವುಗಳಿಂದ ಭಾರೀ ದುಷ್ಪರಿಣಾಮ ಉಂಟಾಗುತ್ತದೆ. ಈ ಅಭಯಾರಣ್ಯದಲ್ಲಿ ಸಿಂಹ, ಬಾಲದ ಸಿಂಗಳಿಕಗಳು ಇರುವುದರಿಂದ ಪಾರದರ್ಶಕವಲ್ಲದ ಇಂಥ ವಿನಾಶಕಾರಿ ಯೋಜನೆಗಳನ್ನು ಕೈಗೊಳ್ಳುವುದು ಸರಿಯಲ್ಲ ಎಂಬುದು ಸ್ಥಳೀಯರ ಹಾಗೂ ಪರಿಸರ ವಾದಿಗಳ ಪ್ರತಿಪಾದನೆಯಾಗಿದೆ.
ಇದರಿಂದಾಗಿ ಅರುವತ್ತು ವರ್ಷಗಳ ಹಿಂದೆ ಲಿಂಗನಮಕ್ಕಿ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ಮನೆ ಮಾರು ಕಳೆದುಕೊಂಡು ನಿರ್ವಸಿತರಾಗಿದ್ದ ಕುಟುಂಬಗಳಿಗೆ ಈಗ ಮತ್ತೆ ಭೀತಿ ಎದುರಾಗಿದೆ. ಲಿಂಗನಮಕ್ಕಿ ಜಲಾಶಯ ನಿರ್ಮಾಣವಾಗುವಾಗ ಭೂಮಿಯನ್ನು ಕಳೆದುಕೊಂಡಿದ್ದ ಜನರಿಗೆ ಸಿಗಬೇಕಾಗಿದ್ದ ನ್ಯಾಯ ಸಮ್ಮತವಾದ ಪರಿಹಾರ ಹಾಗೂ ಮೂಲ ಸೌಕರ್ಯಗಳ ಭರವಸೆಗಳನ್ನು ಪೂರ್ಣ ಪ್ರಮಾಣದಲ್ಲಿ ಈಡೇರಿಸಲು ಈ ವರೆಗೆ ಸರಕಾರದಿಂದ ಸಾಧ್ಯವಾಗಿಲ್ಲ. ಜೀವನೋಪಾಯಕ್ಕಾಗಿ ಇದ್ದ ಭೂಮಿಯನ್ನು ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿರುವ ಜನರು ನಂಬಿಕೆ ದ್ರೋಹದಿಂದ ಸರಕಾರದ ಭರವಸೆಯಲ್ಲಿ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಹಿಂದೆ ತ್ಯಾಗ ಮಾಡಿದವರಿಗೇ ಮತ್ತೆ ತ್ಯಾಗ ಮಾಡಬೇಕೆಂದು ಒತ್ತಾಯಿಸುವುದು ಸರಿಯಲ್ಲ. ವಾಸ್ತವವಾಗಿ ಗುಣಮಟ್ಟದ ವಿದ್ಯುತ್ ಪೂರೈಕೆಯ ಹೆಸರಿನಲ್ಲಿ ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ನೀರು ಒದಗಿಸುವ ಯೋಜನೆ ಇದಾಗಿದೆ ಎಂಬ ಸಂಶಯ ಈ ಪ್ರದೇಶದ ಜನರಲ್ಲಿದೆ. ಈ ಸಂಶಯವನ್ನು ಸರಕಾರ ಹೇಗೆ ನಿವಾರಿಸುತ್ತದೆ? ಈ ಯೋಜನೆಯನ್ನು ಕೈಗೊಳ್ಳುವುದು ಅನಿವಾರ್ಯ ಎಂದಾದರೆ ಇದರಿಂದ ಪರಿಸರದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಸ್ವತಂತ್ರವಾದ ಪರಿಸರ ಮೌಲ್ಯಮಾಪನವನ್ನು ಸರಕಾರ ಹೊಸದಾಗಿ ನಡೆಸುವುದು ಅಗತ್ಯವಿದೆ. ಯಾವುದೇ ಯೋಜನೆ ಜನಸಾಮಾನ್ಯರು ಮಾತ್ರವಲ್ಲ ಸಕಲ ಜೀವ ರಾಶಿಗಳಿಗೆ ಪೂರಕವಾಗುವಂತಿರಬೇಕು. ಅದು ಮಾರಕವಾಗುವ ಸೂಚನೆ ಕಂಡು ಬಂದರೆ ಸ್ಥಳೀಯ ಸಾರ್ವಜನಿಕರು ಸಹಜವಾಗಿ ವಿರೋಧಿಸುತ್ತಾರೆ.
ಇವೆಲ್ಲಕ್ಕಿಂತ ಮುಖ್ಯವಾಗಿ ಭೂಸ್ವಾಧೀನ, ಪುನರ್ವಸತಿ ಹಾಗೂ ಪುನರ್ ವ್ಯವಸ್ಥೆ ಕಾಯ್ದೆ 2013ರ ಅನ್ವಯ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಮ್ಮತವಾದ ಪರಿಹಾರ ದೊರೆಯುವಂತೆ ಮಾಡಬೇಕು. ಇಷ್ಟು ಮಾತ್ರವಲ್ಲದೆ ಭೂಮಿ ಕಳೆದುಕೊಂಡ ಜನರಿಗೆ ಜೀವನೋಪಾಯಕ್ಕಾಗಿ ಸರಕಾರ ಎಲ್ಲ ನೆರವನ್ನೂ ನೀಡಬೇಕು. ರಾಜ್ಯಕ್ಕೆ ಗುಣಮಟ್ಟದ ವಿದ್ಯುತ್ ಪೂರೈಕೆ ಅಗತ್ಯವಿದೆ ಎಂಬುದು ಸರಿ ಇರಬಹುದು. ಆದರೆ ಅದಕ್ಕಾಗಿ ಪರಿಸರ ಬಲಿ ಕೊಡುವುದನ್ನು ಒಪ್ಪಿಕೊಳ್ಳಲು ಸಾಧ್ಯವಾಗದು.
ರಾಜಕಾರಣಿಗಳು ಯಾವುದೇ ಪಕ್ಷದವರಾಗಿರಲಿ ಅವರಿಗೆ ಚುನಾವಣೆಯ ಗೆಲುವು ಸೋಲುಗಳು ಮುಖ್ಯ. ಇಂಥ ಯೋಜನೆಗಳಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂಬುದು ಗೊತ್ತಿದ್ದರೂ ಅದನ್ನು ನಿರ್ಲಕ್ಷಿಸಿ ಅಪಾಯಕಾರಿ ಯೋಜನೆಗಳಿಗೆ ಸಮ್ಮತಿ ನೀಡುತ್ತಾರೆ. ಇದರಿಂದಾಗಿ ಪರಿಸರದ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಅವರು ಜಾಣ ಮೌನವನ್ನು ತಾಳುತ್ತಾರೆ.
ಸರಕಾರವೇನೋ ಗುಣಮಟ್ಟದ ವಿದ್ಯುತ್ ಪೂರೈಕೆಯ ಸಲುವಾಗಿ ಈ ಯೋಜನೆಯನ್ನು ಹಮ್ಮಿಕೊಂಡಿರುವುದಾಗಿ ಹೇಳಬಹುದು, ಆದರೆ ಇದನ್ನೇ ದುರ್ಬಳಕೆ ಮಾಡಿಕೊಂಡು ಗಣಿ ಮಾಫಿಯಾ ಹಾಗೂ ಟಿಂಬರ್ ಮಾಫಿಯಾಗಳು ಒಳ ನುಸುಳುತ್ತವೆ. ಸರಕಾರದ ಉನ್ನತ ಅಧಿಕಾರಿಗಳು, ರಾಜಕಾರಣಿಗಳು ಪರೋಕ್ಷವಾಗಿ ಇಂಥ ಮಾಫಿಯಾಗಳಿಗೆ ಅನುಕೂಲ ಮಾಡಿಕೊಡುತ್ತಾರೆ. ಇದರಿಂದಾಗಿ ಭವಿಷ್ಯದ ಪೀಳಿಗೆ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ.
ರಾಜ್ಯದ ಹಲವು ಕಡೆಯ ಜೀವ ವೈವಿಧ್ಯದ ತಾಣವೆನಿಸಿದ ಸೂಕ್ಷ್ಮ ಅರಣ್ಯ ಪ್ರದೇಶಗಳಲ್ಲಿ ಈಗಾಗಲೇ ಐಷಾರಾಮಿ ರೆಸಾರ್ಟ್‌ಗಳು, ಹೋಟೆಲ್‌ಗಳು ಹಾಗೂ ಅಪಾಯಕಾರಿ ಉದ್ಯಮಗಳಿಗೆ ಅವಕಾಶ ನೀಡಿರುವ ಪರಿಣಾಮವಾಗಿ ಆನೆ ಕಾರಿಡಾರುಗಳು ಅತಿಕ್ರಮಣಕ್ಕೆ ಒಳಗಾಗಿವೆ. ಹೀಗಾಗಿ ಚಿರತೆ, ಆನೆಗಳು ಹಳ್ಳಿಗಳು, ಜನ ವಸತಿ ಪ್ರದೇಶಗಳು ಹಾಗೂ ಕೆಲವು ಕಡೆ ನಗರಗಳಿಗೂ ಬಂದು ಸಾಕಷ್ಟು ಸಮಸ್ಯೆಗಳು ಉಂಟಾಗಿವೆ. ಮಾಧ್ಯಮಗಳಲ್ಲಿ ‘ಆನೆಗಳ ಹಾವಳಿ’, ‘ಚಿರತೆಯ ಹಾವಳಿ’ ಎಂಬರ್ಥದ ವರದಿಗಳು ಬರುತ್ತಿವೆ. ಆದರೆ ಉಳಿದ ಜೀವಿಗಳಿಗಿಂತ ತಿಳುವಳಿಕೆ ಉಳ್ಳ ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ಹುಲಿ, ಚಿರತೆ, ಆನೆಗಳಿಗೆ ಸೇರಿದ ಪ್ರದೇಶಗಳಲ್ಲಿ ರೆಸಾರ್ಟ್, ರೆಸ್ಟೋರೆಂಟ್‌ಗಳನ್ನು ಮಾಡುತ್ತಿರುವ ಬಗ್ಗೆ ಎಂದೂ ಚರ್ಚೆಯಾಗುವುದಿಲ್ಲ.
ಈಗಲಾದರೂ ಸರಕಾರ ಸ್ಥಳೀಯ ಜನರ ಹಾಗೂ ಪರಿಸರವಾದಿಗಳ ಆಗ್ರಹವನ್ನು ಮನ್ನಿಸಿ ಶರಾವತಿ ಮತ್ತು ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ಪಶ್ಚಿಮ ಘಟ್ಟದ ಸಂರಕ್ಷಿತ ಪ್ರದೇಶಗಳಿಂದ ಹಿಂದೆಗೆದುಕೊಳ್ಳುವುದು ಸೂಕ್ತ.