×
Ad

ಜಾತಿ ಸಮೀಕ್ಷೆಯ ಮುಂದಿರುವ ತೊಡಕುಗಳು ನಿವಾರಣೆಯಾಗಲಿ

Update: 2025-09-26 09:02 IST

PC: x.com/IndiaToday

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸುವ ಮೂಲಕ, ಗಣತಿಯ ಮುಂದಿದ್ದ ಇನ್ನೊಂದು ತೊಡಕು ತಾತ್ಕಾಲಿಕವಾಗಿ ನಿವಾರಣೆಯಾಗಿದೆ. ಸೆಪ್ಟಂಬರ್ 22ರಿಂದ ಸಮೀಕ್ಷೆ ಆರಂಭವಾಗಿದ್ದರೂ ಕೆಲವು ಸಂಘಟನೆಗಳು ಈ ಸಮೀಕ್ಷೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ, ಯಾವುದೇ ಕ್ಷಣದಲ್ಲಿ ಇದಕ್ಕೆ ತಡೆ ಬೀಳುವ ಸಾಧ್ಯತೆಗಳಿದ್ದವು. ಹತ್ತು ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆಯ ವರದಿ ಜಾರಿಗೊಳ್ಳದಂತೆ ತಡೆಯುವಲ್ಲಿ ಯಶಸ್ವಿಯಾದ ಶಕ್ತಿಗಳು ಇದೀಗ ಮರು ಸಮೀಕ್ಷೆ ಕೂಡ ನಡೆಯದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿವೆೆ. ಈ ಹಿಂದಿನ ವರದಿಯಲ್ಲಿ ತಪ್ಪುಗಳಿವೆ ಎಂದು ವರದಿ ಮಂಡನೆಗೆ ಮುನ್ನವೇ ತಕರಾರು ತೆಗೆದವರು, ಇದೀಗ ಸಮೀಕ್ಷೆ ನಡೆಸುವ ಮುನ್ನವೇ ತಪ್ಪುಗಳನ್ನು ಹುಡುಕುತ್ತಿದ್ದಾರೆ. ಈ ಹಿಂದಿನ ವರದಿಯನ್ನು ತಿರಸ್ಕರಿಸಿದ ಸರಕಾರ, ತಪ್ಪುಗಳನ್ನು ಸರಿಪಡಿಸಿ ಮರು ಸರ್ವೇ ನಡೆಸುವ ಭರವಸೆ ನೀಡಿತ್ತು. ಸರಕಾರ ಯಾವಾಗ ಮರು ಸರ್ವೇ ದಿನಾಂಕವನ್ನು ಘೋಷಿಸಿತೋ ಅಲ್ಲಿಂದ ವಿರೋಧಿ ಶಕ್ತಿಗಳು ಈ ಸಮೀಕ್ಷೆ ನಡೆಯದಂತೆ ಸರಕಾರದ ಮೇಲೆ ಒತ್ತಡ ಹೇರತೊಡಗಿದವು. ಹೆಚ್ಚುವರಿ ಜಾತಿಗಳ ಉಲ್ಲೇಖ, ಕ್ರಿಶ್ಚಿಯನ್ ಜಾತಿಗಳಲ್ಲಿರುವ ಗೊಂದಲಗಳನ್ನು ಮುಂದಿಟ್ಟು ಸಮೀಕ್ಷೆ ನಡೆಸದಂತೆ ಕೆಲವು ಸಂಘಟನೆಗಳು ಒತ್ತಾಯಿಸಿದವು. ಲಿಂಗಾಯತ-ವೀರಶೈವರ ನಡುವಿನ ಭಿನ್ನಮತಗಳೂ ಮುನ್ನೆಲೆಗೆ ಬಂದವು. ಬಿಜೆಪಿ ಮತ್ತು ಸಂಘಪರಿವಾರವಂತೂ ‘ಜಾತಿ ಸಮೀಕ್ಷೆ ನಡೆಸುವುದಕ್ಕೆ ರಾಜ್ಯ ಸರಕಾರಕ್ಕೆ ಅಧಿಕಾರವೇ ಇಲ್ಲ’ ಎನ್ನುವ ಹೊಸ ವಾದವನ್ನು ಮಂಡಿಸಿತು. ‘ಹಿಂದೂ ಸಮಾಜವನ್ನು ಒಡೆಯುವುದಕ್ಕಾಗಿ ಸರಕಾರ ಜಾತಿ ಸಮೀಕ್ಷೆಯನ್ನು ನಡೆಸುತ್ತಿದೆ’ ಎನ್ನುವ ಹಳೆ ಹಾಡನ್ನು ಹೊಸ ರಾಗದಲ್ಲಿ ಹಾಡತೊಡಗಿತು. ಕಾಂಗ್ರೆಸ್‌ನೊಳಗಿರುವ ಬಲಾಢ್ಯ ಜಾತಿಗಳೂ ಸಮೀಕ್ಷೆ ನಡೆಸದಂತೆ ಮುಖ್ಯಮಂತ್ರಿಯ ಮೇಲೆ ಗರಿಷ್ಠ ಒತ್ತಡವನ್ನು ಹೇರಿದ್ದವು. ಆದರೆ ‘ಸಮೀಕ್ಷೆಯನ್ನು ಮುಂದೂಡುವ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದಾಗ ಅವರೆಲ್ಲರಿಗೂ ಹೈಕೋರ್ಟ್ ಕಟ್ಟಕಡೆಯ ಭರವಸೆಯಾಯಿತು.

ರಾಜ್ಯ ಸರಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲನ್ನು ಏರಿರುವುದು ರಾಜ್ಯ ಒಕ್ಕಲಿಗರ ಸಂಘ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ. ಇವರೆಲ್ಲರೂ ಮೇಲ್‌ಜಾತಿಗೆ ಸೇರಿದವರೆನ್ನುವುದು ಆಕಸ್ಮಿಕವಲ್ಲ. ಇವರ ಬೆನ್ನಿಗೆ ಕೇಂದ್ರ ಸರಕಾವೂ ನಿಂತಿದ್ದು, ಹೈಕೋರ್ಟ್‌ನಲ್ಲಿ ಸಮೀಕ್ಷೆಯನ್ನು ವಿರೋಧಿಸಿ ತನ್ನ ವಾದವನ್ನು ಮಂಡಿಸಿತ್ತು. ಕೆಲವು ತಾಂತ್ರಿಕ ಅಂಶಗಳನ್ನು ಮುಂದಿಟ್ಟು ಸಮೀಕ್ಷೆಗೆ ತಡೆ ನೀಡಬೇಕು ಎಂದು ವಾದಿಸಿದರೂ, ಅವರ ಮೂಲ ಉದ್ದೇಶ ರಾಜ್ಯ ಸರಕಾರ ಯಾವ ಕಾರಣಕ್ಕೂ ಸಮೀಕ್ಷೆ ನಡೆಸಬಾರದು ಎನ್ನುವುದಾಗಿದೆ. ಸಮೀಕ್ಷೆಗೆ ಬೇಕಾದ ಪೂರ್ವ ಸಿದ್ಧತೆಯನ್ನು ರಾಜ್ಯ ಸರಕಾರ ಮಾಡಿಲ್ಲ ಎನ್ನುವುದು ಬಲಾಢ್ಯ ಜಾತಿ ಸಂಘಟನೆಗಳ ವಾದವಾದರೆ, ಕೇಂದ್ರ ಸರಕಾರವಂತೂ ‘ರಾಜ್ಯಕ್ಕೆ ಗಣತಿ ನಡೆಸುವ ಅಧಿಕಾರವಿಲ್ಲ’ ಎಂದು ವಾದಿಸಿತು. ವಾದ-ಪ್ರತಿವಾದವನ್ನು ಆಲಿಸಿದ ಹೈಕೋರ್ಟ್, ತಡೆ ನೀಡಲು ನಿರಾಕರಿಸಿದೆ. ಇದೇ ಸಂದರ್ಭದಲ್ಲಿ ರಾಜ್ಯ ಸರಕಾರಕ್ಕೂ ಕೆಲವು ಸ್ಪಷ್ಟ ನಿರ್ದೇಶನವನ್ನು ನೀಡಿದೆ. ಮುಖ್ಯವಾಗಿ ಸಮೀಕ್ಷೆಗಾಗಿ ಜನರ ಮೇಲೆ ಒತ್ತಡ ಹೇರಬಾರದು ಮತ್ತು ದತ್ತಾಂಶ ಸಂರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ. ತಾತ್ಕಾಲಿಕವಾಗಿಯಾದರೂ ಸಮೀಕ್ಷೆಗೆ ತಡೆಯೊಡ್ಡಬೇಕು ಎಂದು ಹಟದಲ್ಲಿದ್ದ ಹಿತಾಸಕ್ತಿಗಳಿಗೆ ಇದೊಂದು ಭಾರೀ ಹಿನ್ನಡೆಯಾಗಿದೆ.

ಹೈಕೋರ್ಟ್‌ನ ಈ ನಿರ್ಧಾರದಿಂದಾಗಿ ಈಗಾಗಲೇ ನಡೆಯುತ್ತಿರುವ ಸಮೀಕ್ಷೆಯ ಹಾದಿ ಸುಗಮವಾಗಿದೆ. ಕಳೆದೆರಡು ದಿನಗಳಿಂದ ಈ ಸಮೀಕ್ಷೆ ನಿರೀಕ್ಷೆಗೆ ತಕ್ಕಷ್ಟು ಯಶಸ್ವಿಯನ್ನು ಕಂಡಿಲ್ಲ ಎನ್ನುವ ಆರೋಪಗಳಿವೆ. ಸರ್ವರ್ ಸಮಸ್ಯೆಗಳು, ಕೈಕೊಟ್ಟ ಆ್ಯಪ್, ಸಮೀಕ್ಷಕರನ್ನು ತಲುಪದ ಕೈ ಪಿಡಿ ಇತ್ಯಾದಿಗಳಿಂದ ಸಮೀಕ್ಷೆಗೆ ಬಹಳಷ್ಟು ಸಮಸ್ಯೆಗಳಾಗಿವೆ. ಇದೇ ಹೊತ್ತಿಗೆ ಕೆಲವೆಡೆೆ ಈ ಸಮೀಕ್ಷೆಗೆ ಅಧಿಕಾರಿಗಳು, ಸಿಬ್ಬಂದಿ ಅಸಹಕಾರ ತೋರುತ್ತಿರುವುದು ಕೂಡ ಕಂಡು ಬರುತ್ತಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸುವ ವಿಷಯದಲ್ಲಿ ಸಮೀಕ್ಷೆ ನಡೆಸುವ ಸಿಬ್ಬಂದಿ ಅನಕ್ಷರಸ್ಥರಾಗಿರುವುದು ಸಮೀಕ್ಷೆಗೆ ತೊಡಕುಗಳುಂಟು ಮಾಡುತ್ತಿವೆ. ಹತ್ತು ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆಗೆ ಸಾಕಷ್ಟು ಪೂರ್ವ ತಯಾರಿಗಳನ್ನು ನಡೆಸಲಾಗಿತ್ತು. ಆದರೆ ಈ ಬಾರಿಯ ಸಮೀಕ್ಷೆ ಆತುರದಿಂದ ನಡೆಯುತ್ತಿದೆ ಎನ್ನುವ ಆರೋಪಗಳಿವೆ. ಮುಖ್ಯವಾಗಿ ಬಲಾಢ್ಯ ಜಾತಿ ಸಂಘಟನೆಗಳು ಈ ಸಮೀಕ್ಷೆ ಸರಿಯಾಗಿ ನಡೆಯದಂತೆ ನೋಡಿಕೊಳ್ಳಲು ಸಂಚುಗಳನ್ನು ಮಾಡುತ್ತಿವೆ ಮತ್ತು ಅಧಿಕಾರಿಗಳು, ಸಿಬ್ಬಂದಿಗೆ ಒತ್ತಡಗಳನ್ನು ಹಾಕುತ್ತಿವೆ ಎಂಬ ದೂರುಗಳೂ ಇವೆ. ಹೈಕೋರ್ಟ್‌ನ ದೊಣ್ಣೆೆಯಿಂದ ಪಾರಾದಾಕ್ಷಣ ಸಮೀಕ್ಷೆಯ ಮುಂದಿರುವ ಸವಾಲುಗಳು ಪೂರ್ಣ ಪ್ರಮಾಣದಲ್ಲಿ ಇಲ್ಲವಾದಂತಾಗಲಿಲ್ಲ. ಶೀಘ್ರದಲ್ಲೇ ಸಮೀಕ್ಷೆ ಮುಗಿಸ ಬೇಕಾದ ಒತ್ತಡಗಳು ಸಿಬ್ಬಂದಿಯ ಮೇಲಿರುವುದರಿಂದ ತಪ್ಪುಗಳು ಸಂಭವಿಸುವ ಸಾಧ್ಯತೆಗಳೂ ಇವೆ. ಸಮೀಕ್ಷೆಗೆ ಸಂಬಂಧಿಸಿದಂತೆ ಕರ್ತವ್ಯಕ್ಕೆ ಹಾಜರಾಗದ ನಿಯೋಜಿತ ಅಧಿಕಾರಿಗಳು, ನೌಕರರು, ಸಿಬ್ಬಂದಿಯ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲು ಈಗಾಗಲೇ ಸಚಿವ ಸಂಪುಟ ಮಹತ್ವದ ನಿರ್ಣಯ ಕೈಗೊಂಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಬಹುತೇಕ ಸಮಸ್ಯೆಗಳು ನಿವಾರಣೆಯಾಗಿದೆ ಎಂದು ಸರಕಾರ ಹೇಳಿಕೊಂಡಿದೆಯಾದರೂ, ಗ್ರಾಮೀಣ ಪ್ರದೇಶದಲ್ಲಿ ಸಮೀಕ್ಷೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಗುರುವಾರದ ಅಂತ್ಯಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 1,78,186 ಕುಟುಂಬಗಳ ಸಮೀಕ್ಷೆ ನಡೆದಿದೆ ಎಂದು ಆಯೋಗ ಹೇಳುತ್ತಿದೆ. ಆದರೆ ಸಮೀಕ್ಷೆಯಲ್ಲಿ ಭಾಗವಹಿಸಿದ ಸಿಬ್ಬಂದಿ ಬೇರೆ ಬೇರೆ ಅಡಚನೆಗಳನ್ನು ಮುಂದಿಡುತ್ತಲೇ ಇದ್ದಾರೆ. ಆ್ಯಪ್ ತೆರೆಯಲು ಸಾಧ್ಯವಾಗದೇ ಇರುವುದು, ನಿಗದಿ ಪಡಿಸಿದ ಲೊಕೇಶನ್‌ಗಳಲ್ಲಿ ಮನೆಗಳು ಸಿಗದೇ ಇರುವುದು, ಒಟಿಪಿ ಸಮಸ್ಯೆ, ಮೇಲ್ವಿಚಾರಕರಿಗೆ ಸೂಕ್ತ ತರಬೇತಿ ಇಲ್ಲದಿರುವುದು, ಸೂಕ್ತ ಸಹಾಯವಾಣಿ ಲಭ್ಯವಿಲ್ಲದೆ ಇರುವುದು, ನೆಟ್‌ವರ್ಕ್

ಸಮಸ್ಯೆ ಇತ್ಯಾದಿಗಳು ಸಮೀಕ್ಷೆಯ ಮೇಲೆ ತೀವ್ರ ಪರಿಣಾಮಗಳನ್ನು ಬೀರುತ್ತಿವೆ.

ಈಗಾಗಲೇ ಒಂದು ಸಮೀಕ್ಷೆಯನ್ನು ನಡೆಸಿ ಅದನ್ನು ಕಸದಬುಟ್ಟಿಗೆ ಹಾಕಿರುವ ಸರಕಾರ ಹೊಸ ಸಮೀಕ್ಷೆಯನ್ನು ಯಾವುದೇ ದೋಷಗಳಿಲ್ಲದೆ ಪೂರ್ತಿಗೊಳಿಸುವುದು ಅತ್ಯಗತ್ಯವಾಗಿದೆ. ಈ ಬಾರಿಯ ಸಮೀಕ್ಷೆ ವಿಫಲವಾಗಿ ವರದಿಯು ಪೂರ್ಣವಾಗದೇ ಇದ್ದರೆ ಇದನ್ನು ನೆಪ ಮಾಡಿ ಭವಿಷ್ಯದಲ್ಲಿ ಹೊಸದಾಗಿ ಸಮೀಕ್ಷೆಯೇ ನಡೆಸದಂತೆ ತಡೆಯಲು ಕೆಲವು ಶಕ್ತಿಗಳು ಪ್ರಯತ್ನಿಸಬಹುದು. ಸಮೀಕ್ಷೆ ತನ್ನ ಉದ್ದೇಶವನ್ನು ಸಾಧಿಸದೇ ಇದ್ದರೆ, ಸಮೀಕ್ಷೆಗಾಗಿ ಒಟ್ಟು ವ್ಯಯ ಮಾಡಿದ ಸುಮಾರು 500 ಕೋಟಿ ರೂಪಾಯಿ ನೀರಿನಲ್ಲಿ ಹೋಮಮಾಡಿದಂತಾಗಬಹುದು. ಅಷ್ಟೇ ಅಲ, ಸಮೀಕ್ಷೆಯೇನಾದರೂ ವಿಫಲವಾಗಿ ವರದಿ ಹೊರ ಬೀಳದೆ ಇದ್ದರೆ, ಸರಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಬಹುದೊಡ್ಡ ಹಿನ್ನಡೆಯಾಗುತ್ತದೆ. ಇದರ ಲಾಭವನ್ನು ಬಲಾಢ್ಯ ಜಾತಿಗಳು ತಮ್ಮದಾಗಿಸಿಕೊಳ್ಳಬಹುದು. ಎರಡು ವಾರಗಳ ಸಮೀಕ್ಷೆ ಇದಾಗಿದ್ದರೂ ಅಗತ್ಯ ಬಿದ್ದರೆ, ಈ ದಿನಗಳನ್ನು ಸರಕಾರ ವಿಸ್ತರಿಸಬೇಕು. ಸಮೀಕ್ಷೆ ಯಶಸ್ವಿಯಾಗಿ ವರದಿ ಸಿದ್ಧಗೊಂಡು ಅದು ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲೇ ಮಂಡನೆಯಾಗುವಂತಾಗಬೇಕು. ಮತ್ತು ಆ ವರದಿಯ ಆಧಾರದಲ್ಲಿ ಸರಕಾರ ದುರ್ಬಲ ಸಮುದಾಯಗಳನ್ನು ಗುರುತಿಸಿ ಸಾಮಾಜಿಕ ನ್ಯಾಯವನ್ನು ಪರಿಣಾಮಕಾರಿಯಾಗಿ ಅನು ಷ್ಠಾನಗೊಳಿಸುವಂತಾಗಬೇಕು. ಕರ್ನಾಟಕದ ಸಮೀಕ್ಷೆ ಸಾಮಾಜಿಕ ನ್ಯಾಯವನ್ನು ಹಂಚಲು ದೇಶಕ್ಕೆ ಮಾದರಿ ಸಮೀಕ್ಷೆಯಾಗಿ ಹೊರ ಹೊಮ್ಮಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News