×
Ad

ಜೀವಂತ ಸಮಾಧಿಯಾದ ನಿಥಾರಿ ಹತ್ಯಾಕಾಂಡ ಪ್ರಕರಣ

Update: 2025-11-13 07:38 IST

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೇಶವನ್ನು ಬೆಚ್ಚಿ ಬೀಳಿಸಿದ್ದ ನಿಥಾರಿ ಸರಣಿ ಹತ್ಯೆ ಪ್ರಕರಣವನ್ನು ಕೊನೆಗೂ ‘ಮುಗಿಸುವಲ್ಲಿ’ ಸಿಬಿಐ ಯಶಸ್ವಿಯಾಗಿದೆ. 2006ರ ನಿಥಾರಿ ಹತ್ಯಾಕಾಂಡ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೊಳಗಾಗಿದ್ದ ಸುರೇಂದ್ರ ಕೋಲಿಯನ್ನು ತಕ್ಷಣವೇ ಬಿಡುಗಡೆ ಗೊಳಿಸಿ ಎಂದು ಸುಪ್ರೀಂಕೋರ್ಟ್ ಆದೇಶ ನೀಡುವ ಮೂಲಕ, ಮಹಿಳೆಯರು, ಮಕ್ಕಳ ಸರಣಿ ಅತ್ಯಾಚಾರ -ಕೊಲೆ ಪ್ರಕರಣ ಜೀವಂತ ಸಮಾಧಿಯಾಗಿದೆ. ಈ ಹತ್ಯಾಕಾಂಡವನ್ನು ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದ ಇಬ್ಬರೂ ನಿರ್ದೋಷಿಗಳೆಂದು ಹೇಳುವ ಮೂಲಕ, ನಿಥಾರಿಯಲ್ಲಿ ಮಕ್ಕಳನ್ನು ಯಾರೂ ಕೊಂದಿಲ್ಲ ಎಂದು ಸುಪ್ರೀಂಕೋರ್ಟ್ ಘೋಷಿಸಿದಂತಾಗಿದೆ ಅಥವಾ ಅವರೆಲ್ಲರೂ ಸ್ವಯಂ ತಮ್ಮ ಮೇಲೆ ತಾವೇ ಅತ್ಯಾಚಾರ ಮಾಡಿಕೊಂಡು ತಮ್ಮನ್ನು ತಾವೇ ಕೊಂದು ಕೊಂಡರೆ? ಎಂದು ಜನತೆ ಕೇಳುವಂತಾಗಿದೆ. ಸುರೇಂದ್ರ ಕೋಲಿಯ ಖುಲಾಸೆಯು ಹತ್ಯಾಕಾಂಡದ ತನಿಖೆಯಲ್ಲಿ ಪೊಲೀಸರು ಮತ್ತು ಸಿಬಿಐ ಸಂಸ್ಥೆ ಪ್ರದರ್ಶಿಸಿದ ಬೇಜವ್ದಾರಿತನ ಮುನ್ನೆಲೆಗೆ ಬಂದಿದೆ. ಆರೋಪಿಗಳಂತೂ ಬಿಡುಗಡೆಗೊಂಡಿದ್ದಾರೆ. ಹಾಗಾದರೆ ನಿಥಾರಿ ಸರಣಿ ಹತ್ಯೆಯಲ್ಲಿ ನಿಜವಾದ ಅಪರಾಧಿಗಳು ಯಾರು? ಅವರಿಗೆ ಶಿಕ್ಷೆಯಾಗುವುದು ಹೇಗೆ? ಎನ್ನುವ ಪ್ರಶ್ನೆ ಉತ್ತರವಿಲ್ಲದೆ ಕೊಳೆಯ ತೊಡಗಿದೆ. ನಿಥಾರಿಯಲ್ಲಿ ನಡೆದ ಸರಣಿ ಹತ್ಯೆಯನ್ನು ಯಾರೇ ಮಾಡಿರಲಿ, ಈ ಪ್ರಕರಣದ ತನಿಖೆಯನ್ನು ಭೀಕರವಾಗಿ ಹತ್ಯೆಗೈದ ಹೆಗ್ಗಳಿಕೆ ತನಿಖಾ ಸಂಸ್ಥೆಗಳಿಗೇ ಸಲ್ಲಬೇಕು. ಸುಪ್ರೀಂಕೋರ್ಟ್ ಇದನ್ನು ತನ್ನ ತೀರ್ಪಿನಲ್ಲೂ ಪರೋಕ್ಷವಾಗಿ ಉಲ್ಲೇಖಿಸಿದೆ.

ನಿಥಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೊದಲ ಎಫ್ಐಆರ್ ದಾಖಲಾಗಿರುವುದು 2006 ಅಕ್ಟೋಬರ್ 7ರಂದು. 22 ವರ್ಷದ ಮಹಿಳೆ ನಾಪತ್ತೆಯಾಗಿ ಸುಮಾರು ಐದು ತಿಂಗಳ ನಂತರ ಸ್ಥಳೀಯ ನ್ಯಾಯಾಲಯದಲ್ಲಿ ಎಫ್ಐಆರ್ ದಾಖಲಾಗುತ್ತದೆ. ಅದೇ ವರ್ಷದ ಡಿಸೆಂಬರ್ 29ರಂದು ನಿಥಾರಿ ಗ್ರಾಮದ ಚರಂಡಿಯೊಂದರಲ್ಲಿ ಗೋಣಿ ಚೀಲವೊಂದರಲ್ಲಿ 16 ಮಾನವ ತಲೆ ಬುರುಡೆಗಳು, ಅಸ್ಥಿ ಪಂಜರದ ಅವಶೇಷಗಳು ಮತ್ತು ಬಟ್ಟೆಗಳು ಪತ್ತೆಯಾಗುತ್ತವೆ. ಆಗ ಎಚ್ಚೆತ್ತುಕೊಂಡ ಪೊಲೀಸರು ಸಮೀಪದ ನಿವಾಸಿ ಮೊನಿಂದರ್ ಸಿಂಗ್ ಪಂದೇರ್, ಮನೆಗೆಲಸದಾಳು ಸುರೇಂದ್ರ ಕೋಲಿಯನ್ನು ಬಂಧಿಸುತ್ತಾರೆ. ಅದಾಗಲೇ ಹಲವು ನಾಪತ್ತೆ ಕುರಿತಂತೆ ಸಾರ್ವಜನಿಕರು ದೂರುಗಳನ್ನು ನೀಡಿದ್ದರೂ ಪೊಲೀಸರು ಅವುಗಳನ್ನು ನಿರ್ಲಕ್ಷಿಸಿದ್ದರು. ಈ ಪ್ರಕರಣವನ್ನು ನಿರ್ವಹಿಸುವ ಸಂದರ್ಭದಲ್ಲಿ ಪೊಲೀಸರು ಎಸಗಿದ ಲೋಪಕ್ಕಾಗಿ ಮೂವರು ಹಿರಿಯ ಮತ್ತು ಇತರ ಕಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. 2007ರಲ್ಲಿ ಈ ಪ್ರಕರಣವನ್ನು ಉತ್ತರ ಪ್ರದೇಶ ಸರಕಾರ ಸಿಬಿಐಗೆ ಹಸ್ತಾಂತರಿಸಿತ್ತು. ಅಷ್ಟರಲ್ಲೇ ಇನ್ನಷ್ಟು ಅಸ್ಥಿಪಂಜರಗಳು ಪತ್ತೆಯಾಗಿ ಇಡೀ ರಾಜ್ಯವೇ ದಂಗು ಬಡಿದುಹೋಗಿತ್ತು. ಪೊಲೀಸರು ದಾಖಲಿಸಿದ ಹೇಳಿಕೆಯಲ್ಲಿ ಆರೋಪಿ ಕೋಲಿಯು ಆರು ಮಕ್ಕಳನ್ನು, ಓರ್ವ ಮಹಿಳೆಯನ್ನು ಕೊಂದು ಹಾಕಿರುವುದನ್ನು ಒಪ್ಪಿಕೊಂಡಿದ್ದ. 2009ರಲ್ಲಿ ನ್ಯಾಯಾಲಯ ಇಬ್ಬರಿಗೂ ಮರಣದಂಡನೆ ಶಿಕ್ಷೆಯನ್ನು ವಿಧಿಸಿತ್ತು. 2012ರಲ್ಲಿ ಕೋಲಿಗೆ ಇನ್ನೂ ಮೂರು ಪ್ರಕರಣಗಳಲ್ಲಿ ಮರಣದಂಡನೆ ವಿಧಿಸಲಾಯಿತು. ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಕೋಲಿಯ ಕ್ಷಮಾದಾನ ಅರ್ಜಿಯನ್ನೂ ತಿರಸ್ಕರಿಸಿದ್ದರು.

2014ರಲ್ಲಿ ಇಡೀ ಪ್ರಕರಣ ತಿರುವು ಪಡೆಯಿತು. ಸೆಪ್ಟಂಬರ್ 8ರಂದು ಕೋಲಿಯನ್ನು ಗಲ್ಲಿಗೇರಿಸಬೇಕು ಆದರೆ, ಕೆಲವೇ ಗಂಟೆಗಳ ಮುಂಚೆ ಆತನ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ಸ್ವೀಕರಿಸಿತು. ಮರಣದಂಡನೆಗೆ ತಡೆಯಾಜ್ಞೆಯನ್ನು ವಿಧಿಸಿತು. ಬಳಿಕ ವಿಚಾರಣೆ ಮುಂದುವರಿದು ಅಲಹಾಬಾದ್ ಹೈಕೋರ್ಟ್ 2023ರಲ್ಲಿ ಕೋಲಿ ಮತ್ತು ಪಂಧೇರ್ ಇಬ್ಬರನ್ನೂ ಖುಲಾಸೆಗೊಳಿಸಿತು. ಕೋಲಿಯ ವಿರುದ್ಧ ಜೀವಾವಧಿ ಶಿಕ್ಷೆಗೆ ಸಂಬಂಧ ಪಟ್ಟ ಒಂದು ಪ್ರಕರಣ ಮಾತ್ರ ವಿಚಾರಣೆಗಾಗಿ ಉಳಿದಿತ್ತು. ಇದೀಗ ಕಳೆದ ನವೆಂಬರ್ 11ರಂದು ಸುಪ್ರೀಂಕೋರ್ಟ್ ಆತನ ವಿರುದ್ಧದ ಶಿಕ್ಷೆಯನ್ನು ರದ್ದುಗೊಳಿಸಿ, ಬೇರೆ ಯಾವುದೇ ಪ್ರಕರಣದಲ್ಲಿ ಅಗತ್ಯವಿಲ್ಲದೇ ಇದ್ದರೆ ಆತನನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆದೇಶಿಸಿತು. ತನಿಖೆಯಲ್ಲಿ ಪೊಲೀಸರ ವೈಫಲ್ಯವನ್ನು ಸುಪ್ರೀಂಕೋರ್ಟ್ ಎತ್ತಿ ತೋರಿಸಿದೆ. ಪ್ರಕರಣ ಕೇವಲ ಹತ್ಯೆ, ಅತ್ಯಾಚಾರಕ್ಕೆ ಮಾತ್ರ ಸಂಬಂಧ ಪಟ್ಟಿರುವುದಲ್ಲ. ದೇಹದ ಅಂಗಾಗ ಮಾರಾಟ ಜಾಲವೊಂದು ವ್ಯವಸ್ಥಿತವಾಗಿ ಇದರ ಹಿಂದಿದೆ ಎನ್ನುವ ಆರೋಪಕ್ಕೆ ಪೂರಕವಾದ ಸಾಕ್ಷಿ ಪೊಲೀಸರ ಬಲಿ ಇರಲಿಲ್ಲ. ಪೊಲೀಸರು ಯಾರನ್ನೋ ರಕ್ಷಿಸಲು ಪ್ರಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ತನಿಖೆಯ ಹಂತದಲ್ಲಿರುವಾಗಲೇ ಮಾಧ್ಯಮಗಳು ಆರೋಪಿಗಳ ಕುರಿತಂತೆ ಹೊರ ಬಿಟ್ಟ ಪುಂಖಾನುಪುಂಖ ಕತೆಗಳು ತನಿಖೆಯ ಹಾದಿಯನ್ನು ತಪ್ಪಿಸಿತು. ಪೊಲೀಸರ ಮೇಲೆ ಇದು ತೀವ್ರ ಒತ್ತಡ ಹೇರಿತ್ತು. ಮಾಧ್ಯಮಗಳು ಆರೋಪಿಗಳನ್ನು ಘೋಷಿಸಿ ಬಿಟ್ಟಿದ್ದ್ದವು. ಸಾರ್ವಜನಿಕರು ಅದನ್ನು ನಂಬಿದ್ದರು. ಬಂಧಿತ ಆರೋಪಿಗಳಿಂದ ತಪ್ಪೊಪ್ಪಿಗೆ ಪಡೆಯುವುದಷ್ಟೇ ಪೊಲೀಸರ ತನಿಖೆಯ ಭಾಗವಾಯಿತು. ಈ ಕಾರಣದಿಂದಲೇ ಆರೋಪಿಗಳು ನುಣುಚಿಕೊಳ್ಳಲು ಸಾಧ್ಯವಾಯಿತು.

ಸುಪ್ರೀಂಕೋರ್ಟ್ ಹೇಳುವಂತೆ ಪೊಲೀಸರು ಯಾವುದೇ ವಿಧಿವಿಜ್ಞಾನಗಳ ಆಧಾರಗಳನ್ನು ಮಂಡಿಸಿರಲಿಲ್ಲ. ಬದಲಿಗೆ, ಆರೋಪಿಗಳು ನೀಡಿದ್ದ ತಪ್ಪೊಪ್ಪಿಗೆಯನ್ನೇ ಪ್ರಧಾನವಾಗಿಸಿದ್ದರು. ಕೋಲಿಯಿಂದ ಬಲವಂತವಾಗಿ ಹೇಳಿಕೆಯನ್ನು ಪಡೆಯಲಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ. 60 ದಿವಸಗಳಿಗೂ ಅಧಿಕ ಸಮಯ ಆತ ಪೊಲೀಸ್ ಕಸ್ಟಡಿಯಲ್ಲಿದ್ದುದರಿಂದ ಆತನ ತಪ್ಪೊಪ್ಪಿಗೆಯು ವಿಶ್ವಾಸಾರ್ಹವಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಅನುಮಾನದ ಆಧಾರದಲ್ಲಿ ಒಬ್ಬನಿಗೆ ಶಿಕ್ಷೆ ವಿಧಿಸುವುದು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅಸಹಾಯಕತೆ ವ್ಯಕ್ತಪಡಿಸಿದೆ. ಈ ತೀರ್ಪು ಇದೀಗ ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಕೆಳ ನ್ಯಾಯಾಲಯಗಳು ಯಾವ ಆಧಾರದಲ್ಲಿ ಈ ತೀರ್ಪನ್ನು ನೀಡಿತು? ಕೊನೆಯ ಕ್ಷಣದಲ್ಲಿ ಆರೋಪಿಯ ಮರಣದಂಡನೆಯನ್ನು ತಡೆ ಹಿಡಿಯಲಾಯಿತು. ಒಂದು ವೇಳೆ ಆರೋಪಿಗೆ ಶಿಕ್ಷೆಯಾದ ಬಳಿಕ ವಾಸ್ತವ ಗೊತ್ತಾಗಿದ್ದರೆ? ಎಲ್ಲಕ್ಕಿಂತ ಮುಖ್ಯವಾಗಿ ಕೋಲಿ ಆರೋಪಿಯಲ್ಲ ಎಂದಾದರೆ, ನಿಜವಾದ ಆರೋಪಿ, ಸರಣಿ ಹಂತಕ ಯಾರು? ಒಂದೆಡೆ ನಿರಪರಾಧಿಗೆ ಶಿಕ್ಷೆಯಾದಂತೆಯೇ ಇನ್ನೊಂದೆಡೆ ನಿಜವಾದ ಆರೋಪಿ ಮುಕ್ತವಾಗಿ ಓಡಾಡುತ್ತಿರುವುದು ಕಾನೂನು ವ್ಯವಸ್ಥೆಗೆ ಅವಮಾನವಲ್ಲವೆ? ಇದೀಗ ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ನ್ಯಾಯ ನೀಡುವವರು ಯಾರು? ನಿಥಾರಿ ಹತ್ಯಾಕಾಂಡದ ತನಿಖೆಯನ್ನು ಹೊಸದಾಗಿ ಆರಂಭಿಸಬೇಕೇ? ಅಂತಹ ತನಿಖೆ ನಿಜವಾದ ಅಪರಾಧಿಯನ್ನು ಪತ್ತೆ ಹಚ್ಚಲು ಯಶಸ್ವಿಯಾಗಬಹುದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಪ್ರದೇಶ ಸರಕಾರ ಉತ್ತರ ಕಂಡುಕೊಳ್ಳುವುದು ಅತ್ಯಗತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News