×
Ad

ಆರೆಸ್ಸೆಸ್ Vs ಭಾರತ!

Update: 2025-10-03 06:55 IST

PC | PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಗಾಂಧೀಜಿಯ 156ನೇ ಜನ್ಮದಿನಾಚರಣೆಯನ್ನು ದೇಶ ಆಚರಿಸುತ್ತಿರುವ ಹೊತ್ತಿಗೇ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ತನ್ನ ಶತಮಾನೋತ್ಸವವನ್ನು ಆಚರಿಸುತ್ತಿದೆ. ಆರೆಸ್ಸೆಸ್ ಮತ್ತು ಗಾಂಧಿ ಈ ದೇಶದ ಎರಡು ಭಿನ್ನ ಮೌಲ್ಯಗಳು. ಒಂದು ಜೀವಪರವಾದುದಾದರೆ ಇನ್ನೊಂದು ಜೀವವಿರೋಧಿಯಾದುದು. ಒಂದು ಅಹಿಂಸಾ ಮೌಲ್ಯದ ಮೇಲೆ ನಂಬಿಕೆಯನ್ನು ಹೊಂದಿದ್ದರೆ ಇನ್ನೊಂದು ಹಿಂಸಾ ಮೌಲ್ಯಗಳನ್ನು ನೆಚ್ಚಿಕೊಂಡಿರುವಂತಹದ್ದು. ಒಂದು ಈ ದೇಶದ ಪ್ರಜಾಸತ್ತಾತ್ಮಕ, ಜಾತ್ಯತೀತ ಮೌಲ್ಯಗಳ ಮೇಲೆ ನಂಬಿಕೆಯನ್ನು ಹೊಂದಿದ್ದರೆ, ಇನ್ನೊಂದು ಇಲ್ಲಿನ ಪ್ರಜಾಸತ್ತಾತ್ಮಕ ಜಾತ್ಯತೀತ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಅದರ ಮೇಲೆ ವರ್ಣ ವ್ಯವ್ಯಸ್ಥೆಯನ್ನು ಹೇರುವ ದುರುದ್ದೇಶವನ್ನು ಹೊಂದಿದೆ. ಈ ದೇಶದ ಸಮಾನತೆ, ಜಾತ್ಯತೀತತೆಯ ವಿರುದ್ಧ ಆರೆಸ್ಸೆಸ್ ನಡೆಸುತ್ತಾ ಬರುತ್ತಿರುವ ಸುದೀರ್ಘ ಹೋರಾಟಕ್ಕೆ ಇದೀಗ ನೂರು ವರ್ಷ ಸಂದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಅದು ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಒಳಗಿಂದೊಳಗೆ ಸಂಚುಗಳನ್ನು ನಡೆಸುತ್ತಾ ಬಂದಿದ್ದರೆ, ಸ್ವಾತಂತ್ರ್ಯಾನಂತರ ಅದು ಪ್ರಜಾಸತ್ತಾತ್ಮಕ ವ್ಯವಸ್ಥೆಯೊಳಗಿದ್ದೇ ಆ ವ್ಯವಸ್ಥೆಯನ್ನು ದುರ್ಬಲಗೊಳಿಸಲು ತನ್ನ ಸಕಲ ಶಕ್ತಿಯನ್ನು ಬಳಸುತ್ತಾ ಬಂದಿದೆ. ಸಂವಿಧಾನದ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಲೇ ಅದು ಸಂವಿಧಾನದ ವಿರುದ್ಧ ನಿರಂತರ ವಿಫಲ ಸಂಚುಗಳನ್ನು ನಡೆಸಿದೆ. ತನ್ನ ಸಿದ್ಧಾಂತವನ್ನು ಹರಡುವುದಕ್ಕೆ ಗಾಂಧೀಜಿ ಬಹುದೊಡ್ಡ ತೊಡಕು ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಆ ಸಿದ್ಧಾಂತವು ಅವರನ್ನು ಬಲಿ ತೆಗೆದುಕೊಂಡಿತು. ಆದರೆ, ಗಾಂಧೀಜಿಯನ್ನು ದೈಹಿಕವಾಗಿಯಷ್ಟೇ ಮುಗಿಸಲು ಸಾಧ್ಯವಾಯಿತು. ಇಂದಿಗೂ ಆರೆಸ್ಸೆಸ್‌ಗೆ ಗಾಂಧೀಜಿಯ ಮೌಲ್ಯ ಒಂದು ಸವಾಲಾಗಿದೆ. ಆರೆಸ್ಸೆಸ್‌ನ ಹಿಂದುತ್ವಕ್ಕೆ ಗಾಂಧೀಜಿಯ ಹಿಂದೂ ಸ್ವರಾಜ್ ಸವಾಲಾಗಿದೆ. ಆರೆಸ್ಸೆಸ್‌ನ ರಾಮನಿಗೆ ಗಾಂಧೀಜಿಯ ರಾಮರಾಜ್ಯ ಸೆಡ್ಡು ಹೊಡೆಯುತ್ತಿದೆ. ನೂರು ವರ್ಷ ಕಳೆದರೂ ಆರೆಸ್ಸೆಸ್ ತನ್ನ ಸಂಚಿನಲ್ಲಿ ವಿಫಲವಾಗುವುದಕ್ಕೆ ಈ ದೇಶ ಇನ್ನೂ ಗಾಂಧೀಜಿಯ ಮೌಲ್ಯದ ಮೇಲೆ ಬಲವಾದ ನಂಬಿಕೆಯಿಟ್ಟಿರುವುದೇ ಕಾರಣವಾಗಿದೆ. ಎಲ್ಲಿಯವರೆಗೆ ಗಾಂಧಿಯ ಮೌಲ್ಯಗಳು ಈ ದೇಶದಲ್ಲಿ ಜೀವಂತವಾಗಿರುತ್ತದೆಯೇ ಅಲ್ಲಿಯವರೆಗೆ ಆರೆಸ್ಸೆಸ್‌ನ ಜೀವವಿರೋಧಿ ಗೆಲವು ಸಾಧಿಸಲು ಸಾಧ್ಯವೇ ಇಲ್ಲ ಎನ್ನುವುದು ಈಗೀಗ ಆರೆಸ್ಸೆಸ್ ನಾಯಕರಿಗೂ ಮನವರಿಕೆಯಾದಂತಿದೆ. ಆದುದರಿಂದ, ಗಾಂಧೀಜಿಯನ್ನೇ ‘ಹೈಜಾಕ್’ ಮಾಡುವ ಯೋಜನೆ ರೂಪಿಸುತ್ತಿದೆ. ಅದರಲ್ಲಿ ಬಹಳಷ್ಟು ಸಾಧನೆಗಳನ್ನೂ ಮಾಡಿದೆ.

ವಿಪರ್ಯಾಸವೆಂದರೆ, ರಾಜ್‌ಘಾಟ್‌ನಲ್ಲಿ ಮಹಾತ್ಮಾ ಗಾಂಧೀಜಿಗೆ ಗೌರವ ಸಲ್ಲಿಸಿದ ದೇಶದ ಪ್ರಧಾನಿ ನರೇಂದ್ರ ಮೋದಿಯವರು, ಜೊತೆಗೇ ಆರೆಸ್ಸೆಸ್ ವೇದಿಕೆಯಲ್ಲಿ ನಿಂತು ಅದನ್ನು ‘ದೇಶಪ್ರೇಮಿ’ ಸಂಘಟನೆ ಎಂದು ಹೊಗಳಿದ್ದಾರೆ. ಅದು ಸಲ್ಲಿಸಿದ ದೇಶ ಸೇವೆಗಾಗಿ ಅಭಿನಂದಿಸಿದ್ದಾರೆ. ಬ್ರಿಟಿಷರ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ವಹಿಸಿದ ಆರೆಸ್ಸೆಸ್ ಪಾತ್ರವೇನು ಮತ್ತು ಸ್ವಾತಂತ್ರ್ಯಾನಂತರ ನಮಗೆ ಸಿಕ್ಕಿದ ಸಂವಿಧಾನಕ್ಕೆ ಎಷ್ಟು ಬದ್ಧವಾಗಿದೆ ಎನ್ನುವುದು ಜಗತ್ತಿಗೆ ತಿಳಿದ ವಿಚಾರ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಯಾವುದೇ ಇತಿಹಾಸ ಆರೆಸ್ಸೆಸ್ ಸಿದ್ಧಾಂತವನ್ನು ನಂಬಿದ ನಾಯಕರಿಗೆ ಇದ್ದಿರಲಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಹಿಂದೂ ಮಹಾಸಭಾದ ನಾಯಕರು ಮಹಾತ್ಮಾ ಗಾಂಧೀಜಿಯ ನೇತೃತ್ವದ ಹೋರಾಟಗಳಿಗೆ ಬೆಂಬಲವನ್ನು ನೀಡಿರಲಿಲ್ಲ. ಆರೆಸ್ಸೆಸ್ ಸಿದ್ಧಾಂತದ ಜೊತೆಗೆ ಬದ್ಧವಾಗಿದ್ದ ನಾಯಕರು ಜಾತೀಯತೆ, ವರ್ಣ ವ್ಯವಸ್ಥೆಯನ್ನು ಬಹಿರಂಗವಾಗಿಯೇ ಬೆಂಬಲಿಸಿದ್ದರು. ಗೋಳ್ವಾಲ್ಕರ್ ಅವರು ಬರೆದ ಹಲವು ಲೇಖನಗಳು ಜಾತಿ ವ್ಯವಸ್ಥೆಯನ್ನು ಹಿಂದೂ ಧರ್ಮದ ಹಿರಿಮೆಯೆಂದು ಘೋಷಿಸುತ್ತದೆ. ಕೇರಳದಂತಹ ರಾಜ್ಯದಲ್ಲಿ ಶೂದ್ರ ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಗೆ ಕಾಲಿಡುವ ಮೊದಲು ಬ್ರಾಹ್ಮಣ ನಂಬೂದರಿಯ ಸದಸ್ಯನ ಜೊತೆಗೆ ರಾತ್ರಿ ಕಳೆಯುವುದನ್ನು ಕೂಡ ಅವರು ಹಿಂದೂ ಧರ್ಮದ ಹಿರಿಮೆಯೆಂದು ಸಮರ್ಥಿಸಿಕೊಂಡಿದ್ದರು. ಭಾರತದ ರಾಷ್ಟ್ರಧ್ವಜವನ್ನು ತಿರಸ್ಕರಿಸಿದ್ದರು. ಸಂವಿಧಾನವನ್ನು ಟೀಕಿಸಿದ್ದರು. ಮಹಾತ್ಮಾಗಾಂಧೀಜಿಯವರು ಆರೆಸ್ಸೆಸ್ ಸಿದ್ಧಾಂತವನ್ನು ಬದುಕಿನ ಕೊನೆಯವರೆಗೂ ಒಪ್ಪಿರಲಿಲ್ಲ. ಕಟ್ಟಕಡೆಗೆ ಆ ಸಿದ್ಧಾಂತದಿಂದ ಪ್ರಭಾವಿತನಾಗಿದ್ದ ನಾಥೂರಾಂಗೋಡ್ಸೆ ಎನ್ನುವವನೊಬ್ಬ ಗಾಂಧೀಜಿಯನ್ನು ಕೊಂದ. ಸ್ವತಂತ್ರ ಭಾರತದ ಮೊತ್ತ ಮೊದಲ ಭಯೋತ್ಪಾದಕನ್ನು ಈ ದೇಶಕ್ಕೆ ಕೊಡುಗೆಯಾಗಿ ಕೊಟ್ಟಿರುವುದು ಆರೆಸ್ಸೆಸ್‌ನ ದ್ವೇಷ ಸಿದ್ಧಾಂತವಾಗಿದೆ. ಈ ದೇಶದ ಹಿರಿಯ ನಾಯಕ ವಲ್ಲಭಭಾಯಿ ಪಟೇಲ್ ಅವರು ಆರೆಸ್ಸೆಸ್‌ನ್ನು ಮೊದಲ ಬಾರಿ ನಿಷೇಧಿಸಿದರು. ದೇಶ ವಿರೋಧಿ ಕೃತ್ಯದಲ್ಲಿ ಅದು ಭಾಗವಹಿಸುತ್ತಿರುವುದರ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದರು. ಬಳಿಕ ಆರೆಸ್ಸೆಸ್ ‘ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ’ ಎಂದು ಸರಕಾರಕ್ಕೆ ಭರವಸೆಯನ್ನು ಕೊಟ್ಟು ನಿಷೇಧವನ್ನು ಹಿಂದೆಗೆಯಲು ಮನವಿ ಮಾಡಿತು. ಆದರೆ ನಿಷೇಧ ಹಿಂದೆಗೆದ ಬಳಿಕ ಕೊಟ್ಟ ಭರವಸೆಯನ್ನು ಆರೆಸ್ಸೆಸ್ ಉಲ್ಲಂಘಿಸುತ್ತಲೇ ಬಂದಿದೆ. ಇತ್ತೀಚೆಗೆ ಈ ದೇಶದಲ್ಲಿ ನಡೆದ ವಿವಿಧ ಸ್ಫೋಟ ಕೃತ್ಯಗಳ ಕುರಿತಂತೆ ತನಿಖೆ ನಡೆಸಿದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ತಂಡ ಸಂಘಪರಿವಾರದ ಬೇರುಗಳನ್ನು ಅದರಲ್ಲಿ ಗುರುತಿಸಿತ್ತು. ಮಾತ್ರವಲ್ಲ ಆರೆಸ್ಸೆಸ್‌ನ ಹಿರಿಯ ನಾಯಕನ ಕಡೆಗೂ ಅನುಮಾನದ ಬೆರಳು ತೋರಿಸಿತ್ತು. ತನಿಖೆಯನ್ನು ಇನ್ನಷ್ಟು ಆಳಕ್ಕಿಳಿಸುವ ಹೊತ್ತಿಗೆ ಇಡೀ ತಂಡವೇ ಭಯೋತ್ಪಾದಕರ ದಾಳಿಗೆ ನಿಗೂಢವಾಗಿ ಬಲಿಯಾಯಿತು.

ಆರೆಸ್ಸೆಸ್ ‘ಹಿಂದೂ ಎಲ್ಲರೂ ಒಂದು’ ಎನ್ನುತ್ತದೆಯಾದರೂ ಅದು ವರ್ಣವ್ಯವಸ್ಥೆಯ ಮೇಲೆ ಬಲವಾದ ನಂಬಿಕೆಯನ್ನು ಹೊಂದಿದೆ. ಹಿಂದೂ ಧರ್ಮದೊಳಗೆ ಬಿಡಿ, ಕನಿಷ್ಠ ಆರೆಸ್ಸೆಸ್‌ನ ವ್ಯವಸ್ಥೆಯೊಳಗೆಯಾದರೂ ಒಬ್ಬ ದಲಿತನನ್ನು ನಾಯಕನನ್ನಾಗಿ ಮಾಡಲು ಅದು ವಿಫಲವಾಗಿದೆ. ಇತರ ಧರ್ಮಗಳನ್ನು ತೋರಿಸಿ ‘ಹಿಂದೂಗಳೆಲ್ಲ ಒಂದು’ ಎಂದು ಹೇಳುವ ಆರೆಸ್ಸೆಸ್ ದಲಿತರ ಮೇಲೆ ದೌರ್ಜನ್ಯಗಳು ನಡೆದಾಗ ಅದನ್ನು ಖಂಡಿಸಿ ಒಂದೇ ಒಂದು ಹೇಳಿಕೆಯನ್ನು ನೀಡಿದ ಉದಾಹರಣೆಗಳಿಲ್ಲ. ಹಿಂದುತ್ವ ವಾದವನ್ನು ಬಳಸಿಕೊಂಡು ಅದು ಈ ನೆಲದ ದಲಿತರು, ಶೂದ್ರರನ್ನು ತನ್ನ ದ್ವೇಷ ರಾಜಕಾರಣಕ್ಕೆ ಕಾಲಾಳುವಾಗಿ ಬಳಸಿಕೊಂಡಿದೆ. ಹಿಂದುತ್ವದ ಹೆಸರಿನಲ್ಲಿ ಆರೆಸ್ಸೆಸ್ ದೇಶದಲ್ಲಿ ಬ್ರಾಹ್ಮಣ ಧರ್ಮವನ್ನು, ವರ್ಣ ವ್ಯವಸ್ಥೆಯನ್ನು ಜಾರಿಗೊಳಿಸಲು ಸಂಚು ನಡೆಸುತ್ತಾ ಬಂದಿದೆ. ಅದಕ್ಕಾಗಿ ಅದು ಕಾಲ ಕಾಲಕ್ಕೆ ಬೇರೆ ಬೇರೆ ವೇಷಗಳನ್ನು ಹಾಕಿದೆ. ಮೊಗಲರ ಕಾಲದಲ್ಲಿ ಮೊಗಲರಿಗೆ ತಕ್ಕಂತೆ, ಬ್ರಿಟಿಷರ ಕಾಲದಲ್ಲಿ ಬ್ರಿಟಿಷರ ಜೊತೆಗೆ, ಟಿಪ್ಪು ಗೆದ್ದಾಗ ಆತನ ನೆರಳಲ್ಲಿ , ಒಡೆಯರ ಕಾಲದಲ್ಲಿ ಒಡೆಯರಿಗೆ ತಕ್ಕಂತೆ ಬದುಕಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದ ಈ ಸಿದ್ಧಾಂತ ಇದೀಗ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅದರ ಸೌಲಭ್ಯಗಳನ್ನು ಪಡೆದುಕೊಂಡೇ ಭಾರತದ ವಿರುದ್ಧ ಕೆಲಸ ಮಾಡುತ್ತಿದೆ. ಇಂದು ಕಾಂಗ್ರೆಸ್ ಪಕ್ಷ ದ ನಾಯಕರುಆರೆಸ್ಸೆಸ್‌ನ್ನು ‘ಕೋಮುವಾದಿ ಸಂಘಟನೆ’ ಎಂದು ಕರೆಯುತ್ತಿದ್ದಾರಾದರೂ, ಈ ಸಂಘಟನೆ ತನ್ನ ಜಾಲವನ್ನು ವಿಸ್ತರಿಸಿದ್ದು ಕಾಂಗ್ರೆಸ್ ಅಧಿಕಾರದಲ್ಲಿದ್ದ 70 ವರ್ಷಗಳಲ್ಲಿ ಎನ್ನುವುದನ್ನು ಅವರು ಮರೆತಿದ್ದಾರೆ. ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಕಾಂಗ್ರೆಸ್ ನಾಯಕರನ್ನೇ ಬಳಸಿಕೊಂಡು ಅದು ತನ್ನ ಬೇರನ್ನು ದೇಶಾದ್ಯಂತ ಇಳಿಸಿಕೊಂಡಿತು. ಇಂದು ಆರೆಸ್ಸೆಸ್ ದೇಶಾದ್ಯಂತ ಉತ್ತು ಬಿತ್ತಿದ ದ್ವೇಷ ಸಿದ್ಧಾಂತದ ಫಲವನ್ನು ಬಿಜೆಪಿ ಕೊಯ್ಯುತ್ತಿದೆ. ಆ ಕಾರಣಕ್ಕಾಗಿಯೇ ಬಿಜೆಪಿ ಮತ್ತು ಪ್ರಧಾನಿ ಮೋದಿಯವರು ಆರೆಸ್ಸೆಸ್‌ಗೆ ಋಣಿಯಾಗಿದ್ದಾರೆ. ತಾನು ಅಧಿಕಾರದಲ್ಲಿದ್ದಾಗ ಈ ಆರೆಸ್ಸೆಸ್‌ನ ಸಂಚುಗಳನ್ನು ಗುರುತಿಸಿ ಅದನ್ನು ನಿಯಂತ್ರಿಸಿದ್ದರೆ ಇಂದು ಕಾಂಗ್ರೆಸ್‌ಗೆ ಈ ಗತಿ ಬರುತ್ತಿರಲಿಲ್ಲ. ಭಾರತವೂ ಇಷ್ಟೊಂದು ಕಳವಳ, ಆತಂಕದ ದಿನಗಳನ್ನು ಎದುರಿಸಬೇಕಾಗಿರಲಿಲ್ಲ.

ಅದೇನೇ ಇದ್ದರೂ, ಈ ನೂರು ವರ್ಷಗಳಲ್ಲಿ ಭಾರತದ ಜಾತ್ಯತೀತ, ಸೌಹಾರ್ದ ಮೌಲ್ಯಗಳನ್ನು ನಾಶ ಮಾಡುವ ಆರೆಸ್ಸೆಸ್ ಪ್ರಯತ್ನ ವಿಫಲವಾಗುತ್ತಲೇ ಬಂದಿದೆ ಎನ್ನುವುದು ಸಮಾಧಾನ ತರುವ ವಿಷಯ. ಆರೆಸ್ಸೆಸ್ ಸಿದ್ಧಾಂತ ಹಿಂದುತ್ವ, ರಾಮರಾಜ್ಯ, ಸ್ವದೇಶ ಹೀಗೆ ಯಾವ ವೇಷದಲ್ಲೇ ಬರಲಿ, ಅದರ ಬಣ್ಣ ಗಾಂಧಿ-ಅಂಬೇಡ್ಕರ್‌ರ ಬೆಳಕಿಗೆ ಕರಗಿ ಬಿಡುತ್ತದೆ. ಈ ದೇಶದಲ್ಲಿ ಗಾಂಧಿ, ಅಂಬೇಡ್ಕರ್ ಚಿಂತನೆಗಳನ್ನು ಜೀವಂತವಾಗಿಟ್ಟು ಅದನ್ನು ಹೊಸ ತಲೆಮಾರಿಗೆ ಪರಿಣಾಮಕಾರಿಯಾಗಿ ತಲುಪಿಸುವುದೇ ಆರೆಸ್ಸೆಸ್ ದ್ವೇಷ ಸಿದ್ಧಾಂತವನ್ನು ಎದುರಿಸಲು ಈ ದೇಶಕ್ಕಿರುವ ಏಕೈಕ ದಾರಿ. ತನ್ನ ನೂರು ವರ್ಷದ ನೆನಪಿಗಾಗಿ ಆರೆಸ್ಸೆಸ್ ಬಿಡುಗಡೆ ಮಾಡಿರುವ ನಾಣ್ಯ ಈ ದೇಶದ ಸಂವಿಧಾನದ ಮುಂದೆ ನಯಾ ಪೈಸೆ ಬೆಲೆ ಬಾಳುವುದಿಲ್ಲ. ಈ ದೇಶದ ಮೌಲ್ಯಗಳನ್ನು ಆ ನಾಣ್ಯದಿಂದ ಕೊಂಡುಕೊಳ್ಳಲಾಗುವುದಿಲ್ಲ ಎನ್ನುವುದು ಅವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಪಷ್ಟ ಪಡಿಸಿಕೊಡುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News