×
Ad

ಶಾಲೆಯ ಶೌಚಾಲಯಗಳು ಹೆರಿಗೆ ಆಸ್ಪತ್ರೆಯಾಗದಿರಲಿ

Update: 2025-09-03 09:34 IST

ಸಾಂದರ್ಭಿಕ ಚಿತ್ರ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನಾಗರಿಕ ಸಮಾಜ ನಾಚಿ ತಲೆತಗ್ಗಿಸುವಂತಹ ಪ್ರಕರಣವೊಂದು ನಡೆಯಿತು. ಇಲ್ಲಿನ ವಸತಿ ನಿಲಯವೊಂದರ ಶೌಚಾಲಯದಲ್ಲಿ ಒಂಭತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಮಗುವೊಂದಕ್ಕೆ ಜನ್ಮ ನೀಡಿದ್ದಳು. ವಿದ್ಯಾರ್ಥಿನಿ ಏಕಾಏಕಿ ನೋವಿನಿಂದ ಚೀರಾಡ ತೊಡಗಿದಾಗ ಆಕೆ ಗರ್ಭಿಣಿ ಎನ್ನುವುದು ಬಹಿರಂಗವಾಯಿತು. ತಕ್ಷಣ ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿದ್ದ ವಸತಿ ನಿಲಯದ ಸಿಬ್ಬಂದಿ ಶೌಚಾಲಯದಲ್ಲೇ ಬಾಲಕಿಯ ಹೆರಿಗೆ ಮಾಡಿಸಿದ್ದಲ್ಲದೆ, ಈ ಘಟನೆಯನ್ನೇ ಮುಚ್ಚಿ ಹಾಕಲು ಯತ್ನಿಸಿದರು. ಘಟನೆ ಬೆಳಕಿಗೆ ಬರುತ್ತಿದ್ದ ಹಾಗೆಯೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು ಇದೀಗ ಶಾಲಾ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ವಿದ್ಯಾರ್ಥಿನಿಯ ಕುಟುಂಬ ಸದಸ್ಯರ ಮೇಲೂ ಪ್ರಕರಣ ದಾಖಲಿಸಲಾಗಿದೆ. ವಿದ್ಯಾರ್ಥಿಯ ಬಾಲ್ಯವನ್ನು ಮಾತ್ರವಲ್ಲ, ಭವಿಷ್ಯವನ್ನೇ ಪರೋಕ್ಷವಾಗಿ ಕೊಂದು ಹಾಕಿದ ಈ ಪ್ರಕರಣ ನಮ್ಮ ಸಮಾಜ ಇನ್ನೂ ನೈತಿಕವಾಗಿ ಎಷ್ಟು ಕೆಳ ಮಟ್ಟದಲ್ಲಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ. ವಿಪರ್ಯಾಸವೆಂದರೆ, ಈ ಘಟನೆ ನಡೆದ ಬೆನ್ನಿಗೇ ಶಿವಮೊಗ್ಗದಲ್ಲೂ ಇಂತಹದೇ ಪ್ರಕರಣ ಮರುಕಳಿಸಿದೆ. ಇಲ್ಲಿಯೂ ವಿದ್ಯಾರ್ಥಿನಿ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಹೊಟ್ಟೆ ನೋವು ಎನ್ನುವ ಕಾರಣಕ್ಕೆ ವಿದ್ಯಾರ್ಥಿನಿ ರಜೆ ಹಾಕಿದ್ದಳು. ಈ ಸಂದರ್ಭದಲ್ಲಿ ಆಕೆ ಗರ್ಭಿಣಿ ಎನ್ನುವುದು ಪೋಷಕರಿಗೆ ತಿಳಿಯಿತು. ಸಮಾಜಕ್ಕೆ ಹೆದರಿದ ಕುಟುಂಬಸ್ಥರು ಮನೆಯಲ್ಲೇ ಗುಟ್ಟಾಗಿ ಹೆರಿಗೆಯನ್ನು ಮಾಡಿಸಿದ್ದಾರೆ. ಇಲ್ಲೂ ಆರೋಪಿಗಳ ಮೇಲೆ ಕ್ರಮ ತೆಗೆದುಕೊಳ್ಳಲು ತಡವಾಗಿದೆ. ಶಿವಮೊಗ್ಗದಲ್ಲಿ ಇದು ಒಂದೇ ತಿಂಗಳಲ್ಲಿ ನಾಲ್ಕನೇ ಪ್ರಕರಣ ಎಂದು ಅಲ್ಲಿನ ಜಿಲ್ಲಾ ವೈದ್ಯರು ಹೇಳುತ್ತಾರೆ. ಒಂದು ಪ್ರಕರಣದಲ್ಲಿ ಬಾಲಕಿಗೆ ಗರ್ಭಪಾತ ಮಾಡಲಾಗಿದೆ.

ದೇಶ ಬಾಲ್ಯ ವಿವಾಹದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದೆ. ಬಾಲ್ಯವಿವಾಹವಾದ ಕುಟುಂಬಗಳ ಮೇಲೆ ಪ್ರಕರಣಗಳನ್ನು ದಾಖಲಿಸುವ ಕೆಲಸವೂ ನಡೆಯುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ವಿವಾಹಕ್ಕೆ ಪೂರ್ವದಲ್ಲೇ ಮಕ್ಕಳನ್ನು ಶೋಷಣೆ ಮಾಡಿ ಅವರನ್ನು ಗರ್ಭಿಣಿಯರನ್ನಾಗಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದರ ಬಗ್ಗೆ ಸರಕಾರ ಕುರುಡಾಗಿದೆ. ಸಾಧಾರಣವಾಗಿ ಕೊಡಗು, ಚಿಕ್ಕಮಗಳೂರಿನಂತಹ ಗ್ರಾಮೀಣ ಪ್ರದೇಶಗಳಲ್ಲಿ ಬಾಲ ಗರ್ಭಿಣಿಯರ ಬಗ್ಗೆ ವರದಿಗಳಾಗುತ್ತಿರುತ್ತವೆ. ಇವರೆಲ್ಲರೂ ಅನಕ್ಷರಸ್ಥರು ಮತ್ತು ಬಡವರು. ಮುಖ್ಯವಾಗಿ ಎಸ್ಟೇಟ್‌ಗಳಲ್ಲಿ ದುಡಿಯುವ ಕೂಲಿ ಕಾರ್ಮಿಕರು. ತಂದೆ ತಾಯಿ ಇಬ್ಬರೂ ಕೂಲಿ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಹೆಣ್ಣು ಮಗಳು ಮನೆಯಲ್ಲಿ ಒಂಟಿಯಾಗಿರಬೇಕಾಗುತ್ತದೆ. ಈ ಸಂದರ್ಭವನ್ನು ಬಳಸಿಕೊಂಡು ದುಷ್ಕರ್ಮಿಗಳು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಕೊಡಗಿನಲ್ಲಿ 2023ರಲ್ಲಿ 127 ಬಾಲ ಗರ್ಭಿಣಿಯರು ಪತ್ತೆಯಾಗಿದ್ದರು. 2023ರಲ್ಲಿ ರಾಜ್ಯದಲ್ಲಿ 28,657 ಬಾಲ ಗರ್ಭಿಣಿಯರು ಪತ್ತೆಯಾಗಿದ್ದರು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿಅಂಶಗಳು ಹೇಳುತ್ತವೆ. ಅಸ್ಸಾಂ, ಪಶ್ಚಿಮಬಂಗಾಳ ಮೂಲದ ಕಾರ್ಮಿಕರ ದುರಂತ ಬದುಕಿನ ಬಗ್ಗೆ ಪೊಲೀಸ್ ಇಲಾಖೆಯೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಲೈಂಗಿಕ ಶೋಷಣೆಯಲ್ಲಿ ಸ್ಥಳೀಯ ಬಲಾಢ್ಯ ಸಮುದಾಯಕ್ಕೆ ಸೇರಿದ ಗಂಡಸರಿದ್ದರೆ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲನ್ನು ಹತ್ತುವುದೇ ಇಲ್ಲ. ಪೊಕ್ಸೊ ಕಾಯ್ದೆಗಳು ಇಷ್ಟೊಂದು ಕಠಿಣವಾಗಿ ಜಾರಿಯಲ್ಲಿದ್ದರೂ ಇಂತಹ ಕೃತ್ಯಗಳು ನಡೆಯುತ್ತಲೇ ಇವೆ ಎನ್ನುವುದೇ ಇದರ ಹಿಂದಿರುವ ಬಲಾಢ್ಯರ ಕೈವಾಡಗಳನ್ನು ಹೇಳುತ್ತದೆ.

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 80,813 ಮಂದಿ ಬಾಲಕಿಯರು ಗರ್ಭಿಣಿಯರಾಗಿದ್ದಾರೆ ಎಂದು ವರದಿ ಹೇಳುತ್ತದೆ. ವರ್ಷದಿಂದ ವರ್ಷಕ್ಕೆ ಈ ಸಂಖ್ಯೆ ಹೆಚ್ಚುತ್ತಲೇ ಇವೆ. ಬಾಲಗರ್ಭಿಣಿಯರಿಗಾಗಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದ್ದರೆ, ಬೆಳಗಾವಿ ದ್ವಿತೀಯ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ 8,891 ಪ್ರಕರಣಗಳು ವರದಿಯಾಗಿದ್ದರೆ, ಬೆಳಗಾವಿಯಲ್ಲಿ 8,169, ವಿಜಯಪುರದಲ್ಲಿ 6,229, ತುಮಕೂರಿನಲ್ಲಿ 4,282, ರಾಯಚೂರಿನಲ್ಲಿ 4,100 ಪ್ರಕರಣಗಳು ವರದಿಯಾಗಿವೆ. ಅತಿ ಕಡಿಮೆ ಎಂದರೆ ಉಡುಪಿಯಲ್ಲಿ 182 ಬಾಲ ಗರ್ಭಿಣಿಯರು ಪತ್ತೆಯಾಗಿದ್ದಾರೆ. ಹೀಗೆ ಪತ್ತೆಯಾದವರ ಹಿನ್ನೆಲೆ ನೋಡಿದರೆ ಬಹುತೇಕರು ಬಡವರು ಮತ್ತು ಕೂಲಿ ಕಾರ್ಮಿಕರು. ಹೀಗೆಂದು ಮಧ್ಯಮವರ್ಗಕ್ಕೆ ಸೇರಿದವರೂ ಇಲ್ಲವೆಂದಲ್ಲ. ತೀರಾ ಬಡವರ ಪ್ರಕರಣಗಳು ವರದಿಯಾಗುತ್ತವೆ. ಮಧ್ಯಮ, ಮೇಲ್ಮಧ್ಯಮ ವರ್ಗದ ಜನರು ಇಂತಹ ಪ್ರಕರಣಗಳನ್ನು ತಮ್ಮ ಹಣ ಬಲವನ್ನು ಬಳಸಿಕೊಂಡು ಮುಚ್ಚಿಡುತ್ತಾರೆ. ಅವರು ಸಮಾಜ, ಬಾಲಕಿಯ ಭವಿಷ್ಯ ಎಂದು ಪರೋಕ್ಷವಾಗಿ ಆರೋಪಿಗಳನ್ನು ರಕ್ಷಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತಾರೆ. ಇಂತಹ ಪ್ರಕರಣಗಳಲ್ಲಿ ಬಹುತೇಕ ಬಹಿರಂಗವಾಗದೆ ಗುಟ್ಟಾಗಿ ಮುಚ್ಚಿ ಹೋಗುತ್ತವೆ. ಸಾಧಾರಣವಾಗಿ ಕೂಲಿ ಕಾರ್ಮಿಕರ ಮನೆಗಳಲ್ಲಿ ನಡೆಯುವ ಇಂತಹ ದುರಂತಗಳಿಗೆ ಪೋಷಕರು ಕೆಲವೊಮ್ಮೆ ಬೇರೆ ಬೇರೆ ಕಾರಣಗಳಿಂದ ಅಸಹಾಯಕರಾಗಿರುತ್ತಾರೆ. ಅನಕ್ಷರಸ್ಥರೂ, ಬಡವರೂ ಆಗಿರುವುದರಿಂದ ದುಷ್ಕರ್ಮಿಗಳಿಂದ ತಮ್ಮ ಮಕ್ಕಳು ದುರುಪಯೋಗವಾಗುವುದನ್ನು ತಡೆಯುವುದು ಅವರಿಗೆ ಕಷ್ಠವಾಗಬಹುದು. ಆದರೆ ಶಿಕ್ಷಕರ, ಪೋಷಕರ ಕಣ್ಗಾವಲಿನಲ್ಲಿರುವ ಮಕ್ಕಳು ಇಂತಹ ದುರಂತಕ್ಕೆ ಬಲಿಯಾಗುವುದಕ್ಕೆ ಯಾರನ್ನು ಹೊಣೆ ಮಾಡಬೇಕು? ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿನಿಯೊಬ್ಬಳ ದೈಹಿಕ ಸ್ಥಿತಿಗತಿಯನ್ನು ಗಮನಿಸಲು ಸಾಧ್ಯವಾಗದೇ ಇರುವುದು ಹೇಗೆ?

ಶಹಾಪುರ ವಸತಿ ಶಾಲೆಯಲ್ಲಿ ಸಂಭವಿಸಿದ ಪ್ರಕರಣವನ್ನೇ ತೆಗೆದುಕೊಳ್ಳೋಣ. 9ನೇ ತರಗತಿಯಲ್ಲಿ ಕಲಿಯುತ್ತಿರುವ ಮಗುವಿನ ದೈಹಿಕ ಬದಲಾವಣೆಗಳನ್ನು, ಆಕೆಯ ಚಟುವಟಿಕೆಗಳನ್ನು, ಮಾನಸಿಕ ಸ್ಥಿತಿಗತಿಗಳನ್ನು ವಸತಿ ಶಾಲೆಯ ಸಿಬ್ಬಂದಿ ಯಾಕೆ ಗಮನಿಸಲಿಲ್ಲ? ವಸತಿ ಶಾಲೆಗೆ ಆಗಾಗ ವೈದ್ಯರು ಭೇಟಿ ನೀಡುತ್ತಿರಬೇಕು. ಬಾಲಕಿ ಗರ್ಭಿಣಿಯಾಗಿದ್ದು ಇವರ ಗಮನಕ್ಕೂ ಯಾಕೆ ಬರಲಿಲ್ಲ? ಅಥವಾ ಎಲ್ಲವೂ ಗೊತ್ತಿದ್ದು ಸಿಬ್ಬಂದಿ ಸಂಘಟಿತವಾಗಿ ಘಟನೆಯನ್ನು ಮುಚ್ಚಿಟ್ಟರೆ? ಅಥವಾ ಲೈಂಗಿಕ ಶೋಷಣೆಯಲ್ಲೇ ವಸತಿ ಶಾಲೆಯ ಸಿಬ್ಬಂದಿಯ ಪಾತ್ರವಿದೆಯೆ? ಎಂಬೆಲ್ಲ ಪ್ರಶ್ನೆಗಳು ಎದುರಾಗುತ್ತವೆ. ವಸತಿ ಶಾಲೆಯ ಇತರ ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆಯ ತುರ್ತು ಅಗತ್ಯವನ್ನು ಇದು ಹೇಳುತ್ತದೆ. ಸಾಧಾರಣವಾಗಿ ಇಂತಹ ವಸತಿ ಶಾಲೆಗಳಲ್ಲಿ ಬಡ ಕುಟುಂಬದಿಂದ ಬರುವ ವಿದ್ಯಾರ್ಥಿಗಳು ನೆಲೆಸಿದರೆ ಕೆಲವೊಮ್ಮೆ ಅವರ ಆರ್ಥಿಕ ಅಸಹಾಯಕತೆಯನ್ನು ಬಳಸಿಕೊಂಡು ಅವರನ್ನು ಶೋಷಿಸುವ ಸಾಧ್ಯತೆಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಅವರಿಗೆ ಪೂರ್ಣ ಪ್ರಮಾಣದಲ್ಲಿ ರಕ್ಷಣೆ ನೀಡಬೇಕಾದವರು ಶಿಕ್ಷಕರು ಮತ್ತು ಸಿಬ್ಬಂದಿ. ಶಿವಮೊಗ್ಗದ ಪ್ರಕರಣದಲ್ಲೂ ಪೋಷಕರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಎಳೆ ವಿದ್ಯಾರ್ಥಿನಿಯನ್ನೇ ಹೊಣೆ ಮಾಡಿ ಪೋಷಕರು, ಶಿಕ್ಷಕರು ತಮ್ಮ ಜವಾಬ್ದಾರಿಯಿಂದ ಇಂತಹ ಪ್ರಕರಣಗಳಲ್ಲಿ ನುಣುಚಿಕೊಳ್ಳುವುದೇ ಅಧಿಕ.

ಮೊಬೈಲ್, ಇಂಟರ್‌ನೆಟ್‌ಗಳ ಈ ಜಗತ್ತಿನಲ್ಲಿ ಮಕ್ಕಳು ಲೈಂಗಿಕ ಶೋಷಣೆಗಳಿಗೆ ಬಲಿಯಾಗಲು ಹತ್ತು ಹಲವು ಸುಲಭದ ದಾರಿಗಳಿವೆ. ಜೊತೆಗೆ ಮಾದಕ ವ್ಯಸನಗಳೂ ಪೂರಕವಾಗಿ ಕೆಲಸ ಮಾಡುತ್ತವೆ. ಆದುದರಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಶಾಲೆಗಳು ನೈತಿಕ ಶಿಕ್ಷಣ ಮತ್ತು ಲೈಂಗಿಕ ಶಿಕ್ಷಣ ಎರಡನ್ನೂ ನೀಡುವ ಅಗತ್ಯವಿದೆ. ಮುಖ್ಯವಾಗಿ ಹೆಣ್ಣು ಮಕ್ಕಳ ದೈಹಿಕ ಬದಲಾವಣೆಯ ಸಂದರ್ಭದಲ್ಲಿ ಅವರಿಗೆ ಮಾನಸಿಕ ಸ್ಥೆರ್ಯ ತುಂಬುವುದು ಮಾತ್ರವಲ್ಲ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಪೋಷಕರ ಮತ್ತು ಶಿಕ್ಷಕರ ಕರ್ತವ್ಯವಾಗಿದೆ. ಹಾಗೆಯೇ ಇಂತಹ ಅವಘಡಗಳು ಸಂಭವಿಸಿದಾಗ ಅದನ್ನು ಮುಚ್ಚಿ ಹಾಕಲು ಹೊರಟು ಇನ್ನಷ್ಟು ಅಪರಾಧಗಳಿಗೆ ಕಾರಣವಾಗಬಾರದು. ಶೌಚಾಲಯದಲ್ಲಿ ಹೆರಿಗೆ ಮಾಡಿಸಿಕೊಂಡ ಆ ವಿದ್ಯಾರ್ಥಿನಿಯ ಮನಸ್ಸು ಅದೆಷ್ಟು ಜರ್ಜರಿತವಾಗಿರಬಹುದು? ಶೌಚಾಲಯದಲ್ಲಿ ಹುಟ್ಟಿದ ಆ ನವಜಾತ

ಶಿಶು ಮಾಡಿದ ತಪ್ಪಾದರೂ ಏನು? ಯಾರದೋ ಅಪರಾಧಕ್ಕೆ ಬಲಿಯಾಗಿ ವಿದ್ಯಾರ್ಥಿನಿ ಗರ್ಭಿಣಿಯಾಗಿರುವುದು ಗೊತ್ತಾದರೆ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸದೆ ಅವರಿಗೆ ಆತ್ಮವಿಶ್ವಾಸ ತುಂಬಿ ಅವರನ್ನು ಸೂಕ್ತ ವೈದ್ಯರಿಗೆ, ಆಸ್ಪತ್ರೆಗೆ ಸೇರಿಸುವುದು ಪೋಷಕರ ಮತ್ತು ಶಾಲಾ ಶಿಕ್ಷಕರ ಹೊಣೆಗಾರಿಕೆಯಾಗಿದೆ. ಹಾಗೆಯೇ ತಪ್ಪಿತಸ್ಥರನ್ನು ಗುರುತಿಸಿ ಆತನಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಂಡರೆ ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳು ಕಡಿಯಾಗುತ್ತಾ ಹೋಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News