×
Ad

ಪಟಾಕಿ ಮಾಫಿಯಾಗಳಿಂದ ದೀಪಾವಳಿಗೆ ಅಂಟಿದ ಕಳಂಕ

Update: 2025-10-10 08:59 IST

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಈಗಷ್ಟೇ ಗಣೇಶೋತ್ಸವ ಮುಗಿದಿದೆ. ಈ ಹಬ್ಬದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳದ ಕೆಲವರು ತಂದಿಟ್ಟ ವಿಘ್ನಗಳಿಂದ ನಾಡು ಹಲವು ನಷ್ಟಗಳನ್ನು ಅನುಭವಿಸಿತು. ಹಲವೆಡೆೆ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ದುರಂತಗಳು ಸಂಭವಿಸಿ ಅಮಾಯಕರು ಮೃತಪಟ್ಟಿದ್ದಾರೆ. ಹಾಸನ ಸಮೀಪ ಮೆರವಣಿಗೆಯ ಸಂದರ್ಭದಲ್ಲಿ ಸಂಭವಿಸಿದ ಅವಘಡದಲ್ಲಿ 10 ಜನ ಮೃತಪಟ್ಟರು. ಹಬ್ಬ ಮುಗಿದರೂ, ಈ ದುರಂತದಲ್ಲಿ ಮೃತಪಟ್ಟ ಯುವಕರ ಕುಟುಂಬಗಳು ನೋವು, ಸಂಕಟಗಳಿಂದ ಹೊರ ಬಂದಿಲ್ಲ. ಇದೇ ಸಂದರ್ಭದಲ್ಲಿ ಗಣೇಶೋತ್ಸವವನ್ನು ಕೆಲವು ರಾಜಕೀಯ ನಾಯಕರು ತಮ್ಮ ಕ್ಷುದ್ರ ರಾಜಕೀಯಕ್ಕೆ ಬಳಸಿಕೊಂಡರು. ಎರಡು ಸಮುದಾಯಗಳ ನಡುವೆ ದ್ವೇಷ ಬಿತ್ತಲು ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡ ಪರಿಣಾಮವಾಗಿ ಹಲವೆಡೆ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಅಮಾಯಕರ ಅಂಗಡಿ, ಮುಂಗಟ್ಟುಗಳಿಗೆ ಹಾನಿಯಾದವು. ಮನಸ್ಸನ್ನು ಬೆಸೆಯಬೇಕಾದ ಹಬ್ಬ ದುಷ್ಕರ್ಮಿಗಳಿಂದ ಮನಸ್ಸು ಒಡೆದವು. ಇವೆಲ್ಲಕ್ಕಿಂತ ಆಘಾತಕಾರಿಯಾದ ಅಂಶವೆಂದರೆ ಎಲ್ಲ ಎಚ್ಚರಿಕೆ, ನಿರ್ಬಂಧಗಳನ್ನು ಮೀರಿ ಈ ಬಾರಿಯೂ ಕೆರೆ, ಕೊಳ್ಳಗಳು ಭಾರೀ ಮಾಲಿನ್ಯಗಳಿಗೆ ಬಲಿಯಾಗಿವೆ. ಎಂತಹ ಗಣೇಶ ಪ್ರತಿಮೆಗಳನ್ನು ಬಳಸಬೇಕು ಎನ್ನುವುದರ ಬಗ್ಗೆ ಸರಕಾರ ಪ್ರಕಟಣೆಗಳನ್ನು ನೀಡಿದೆಯಾದರೂ ಹಲವು ಸಂಘಟನೆಗಳು ನಿಯಮಗಳನ್ನು ಪಾಲಿಸಿಲ್ಲ. ಈ ಕಾರಣದಿಂದ ಪರಿಸರದ ಮೇಲೆ ಈ ಬಾರಿಯ ಗಣೇಶೋತ್ಸವ ಸಂದರ್ಭದಲ್ಲೂ ಭಾರೀ ದುಷ್ಪರಿಣಾಮವಾಗಿದೆ. ಬೆಂಗಳೂರು ಸೇರಿದಂತೆ ನಗರದ ಹಲವು ಕೆರೆಗಳ ಶುಚೀಕರಣಕ್ಕಾಗಿ ಸರಕಾರ ಕೋಟ್ಯಂತರ ರೂಪಾಯಿ ವ್ಯಯಿಸುವುದು ಅನಿವಾರ್ಯವಾಗಿದೆ. ಹಾಗೆಯೇ ಡಿಜೆ ಸೇರಿದಂತೆ ಶಬ್ದ ಮಾಲಿನ್ಯಗಳ ವಿರುದ್ಧವೂ ಕಾನೂನು ವ್ಯವಸ್ಥೆ ಬಿಗಿ ಬಂದೋಬಸ್ತು ಮಾಡಿತ್ತಾದರೂ ಅದರ ಪಾಲನೆಯೂ ಆಗಿಲ್ಲ. ಇವೆಲ್ಲವೂ ಗಣೇಶ ಹಬ್ಬ ಪ್ರತಿಪಾದಿಸುವ ಮೌಲ್ಯಗಳ ಮೇಲೆ ದುಷ್ಕರ್ಮಿಗಳಿಂದ ನಡೆದ ದಾಳಿಯೇ ಆಗಿದೆ. ಕೃಷಿ ಸಂಪನ್ಮೂಲಗಳನ್ನು ಸಂಕೇತವಾಗಿಟ್ಟುಕೊಂಡು ಗ್ರಾಮೀಣ ಪ್ರದೇಶದಲ್ಲಿ ಹಬ್ಬ ಆಚರಿಸುತ್ತಾರೆ. ಗಣೇಶ ಪರಿಸರಕ್ಕೂ ರೂಪಕವಾಗಿದ್ದಾನೆ. ಆದರೆ ಆತನ ಹಬ್ಬವನ್ನೇ ಮುಂದಿಟ್ಟು ಪರಿಸರದ ಮೇಲೆ ದಾಳಿಗಳು ಈ ಬಾರಿಯೂ ಮುಂದುವರಿದವು. ಕಾನೂನನ್ನು ಉಲ್ಲಂಘಿಸುವವರಲ್ಲಿ ರಾಜಕೀಯ ನಾಯಕರೇ ಮುಂಚೂಣಿಯಲ್ಲಿ ನಿಂತಿದ್ದು ವಿಷಾದನೀಯವಾಗಿದೆ.

ಗಣೇಶೋತ್ಸವ ಮುಗಿಯುತ್ತಿದ್ದ ಹಾಗೆಯೇ ದೀಪಾವಳಿ ಹತ್ತಿರವಾಗುತ್ತಿದೆ. ಇನ್ನೇನು ದೀಪಾವಳಿಗೆ ಹತ್ತು ದಿನಗಳಷ್ಟೇ ಉಳಿದಿವೆ. ಅಷ್ಟರಲ್ಲೇ ಪಟಾಕಿಗಳು ಜನರ ಜೀವವನ್ನು ಬಲಿತೆಗೆದುಕೊಳ್ಳುತ್ತಿರುವ ಸುದ್ದಿಗಳು ಸದ್ದು ಮಾಡತೊಡಗಿವೆ. ಆಂಧ್ರಪ್ರದೇಶದ ಪಟಾಕಿ ಘಟಕದಲ್ಲಿ ಬುಧವಾರ ಸಂಭವಿಸಿದ ಅವಘಡದಲ್ಲಿ ಆರು ಮಂದಿ ಮೃತಪಟ್ಟಿದ್ದು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮೃತಪಟ್ಟವರೆಲ್ಲರೂ ಪಟಾಕಿ ತಯಾರಿಕಾ ಘಟಕದ ಕಾರ್ಮಿಕರು. ಕಳೆದ ಆಗಸ್ಟ್ ತಿಂಗಳಲ್ಲಿ ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಮೃತಪಟ್ಟಿದ್ದು ಐವರು ಗಾಯಗೊಂಡಿದ್ದರು. ಕಳೆದ ಜುಲೈಯಲ್ಲಿ ತಮಿಳುನಾಡಿನ ಮರಿಯಮ್ಮಾಳ್ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಿಂದ ಮೂವರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದರು. ಯಾವುದೇ ಭದ್ರತೆಯಿಲ್ಲದೆ ಪಟಾಕಿ ಕಾರ್ಖಾನೆಯಲ್ಲಿ ಹೊಟ್ಟೆ ಪಾಡಿಗಾಗಿ ತಮ್ಮ ಪ್ರಾಣ ಒತ್ತೆಯಿಟ್ಟು ದುಡಿಯುತ್ತಿರುವ ಈ ಕಾರ್ಮಿಕರ ಸಾವಿಗೆ ಪರೋಕ್ಷವಾಗಿ ದೀಪಾವಳಿ ಹಬ್ಬವೇ ಕಾರಣವಾಗುತ್ತಿರುವುದು ವಿಷಾದನೀಯ. ಜನಸಾಮಾನ್ಯರ ಬದುಕನ್ನು ಕತ್ತಲೆಯಿಂದ ಬೆಳಕಿನೆಡೆಗೆ ತರುವ ಮಹತ್ತರ ಮೌಲ್ಯಗಳನ್ನು ಒಳಗೊಂಡಿರುವ ಬೆಳಕಿನ ಹಬ್ಬವನ್ನು ನಾವು ನಮ್ಮ ಬೇಜವಾಬ್ದಾರಿಯ ಮೂಲಕ ‘ಕತ್ತಲ ಹಬ್ಬ’ವನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದೇವೆ.

ದೀಪಾವಳಿಯ ಹೆಸರಿನಲ್ಲಿ ಪಟಾಕಿಗೆ ಸಂಬಂಧಿಸಿದ ದುರಂತ ಬರೇ ಕಾರ್ಖಾನೆಗಳಲ್ಲಿ ನಡೆಯುವ ಸ್ಫೋಟಗಳಿಗಷ್ಟೇ ಸೀಮಿತವಾಗಿಲ್ಲ. ಅದೊಂದು ಆರಂಭ ಮಾತ್ರ. ಪ್ರತೀ ವರ್ಷ ದೀಪಾವಳಿಯನ್ನು ಪಟಾಕಿಯ ಮೂಲಕ ಆಚರಿಸಿಕೊಳ್ಳುತ್ತಾ ಕಣ್ಣು ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಪಟಾಕಿ ದೆಸೆಯಿಂದಾಗಿ ಬೇರೆ ಬೇರೆ ರೀತಿಯಲ್ಲಿ ಗಾಯಗೊಂಡು ಆಸ್ಪತ್ರೆಗಳಲ್ಲಿ ದಾಖಲಾಗುವವರ ಸಂಖ್ಯೆಯೂ ಕಡಿಮೆಯಿಲ್ಲ. ಇವರೆಲ್ಲರ ಪಾಲಿಗೆ ದೀಪಾವಳಿ ಒಂದು ಕಹಿ ನೆನಪಾಗಿ ಶಾಶ್ವತವಾಗಿ ಉಳಿದು ಬಿಡುತ್ತದೆ. ಇದೇ ಸಂದರ್ಭದಲ್ಲಿ ವೃದ್ಧರು, ಆಸ್ಪತ್ರೆಯಲ್ಲಿರುವ ರೋಗಿಗಳು, ಪ್ರಾಣಿ ಪಕ್ಷಿಗಳ ಮೇಲೆ ಪಟಾಕಿಗಳು ಬೀರುವ ದುಷ್ಪರಿಣಾಮಗಳ ಬಗ್ಗೆಯೂ ವಿವಿಧ ಸಂಘಟನೆಗಳು ಧ್ವನಿಯೆತ್ತುತ್ತಿವೆ. ನೆಲ, ಜಲವನ್ನೂ ತೀವ್ರ ರೀತಿಯಲ್ಲಿ ಪಟಾಕಿಗಳು ಕಲುಷಿತಗೊಳಿಸುತ್ತಿವೆ. ದಿಲ್ಲಿಯಲ್ಲಿ ವಾಯು ಮಾಲಿನ್ಯ ಗರಿಷ್ಠ ಮಟ್ಟವನ್ನು ತಲುಪಿರುವುದರಿಂದ ಪಟಾಕಿಯ ವಿರುದ್ಧ ನ್ಯಾಯಾಲಯ ಈಗಾಗಲೇ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ.ಕಳೆದ ವರ್ಷ ನವೆಂಬರ್‌ನಲ್ಲಿ ಪಟಾಕಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಮಹತ್ವದ ಆದೇಶವನ್ನು ನೀಡಿತು. ದಿಲ್ಲಿಯಲ್ಲಿ ಹೆಚ್ಚುತ್ತಿರುವ ಪರಿಸರ ಮಾಲಿನ್ಯಕ್ಕಾಗಿ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್ ಪಟಾಕಿಗಳನ್ನು ಶಾಶ್ವತವಾಗಿ ನಿಷೇಧಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲು ದಿಲ್ಲಿ ಸರಕಾರವನ್ನು ಒತ್ತಾಯಿಸಿತು. ‘ಯಾವುದೇ ಧರ್ಮವು ಪರಿಸರ ಮಾಲಿನ್ಯವನ್ನು ಪ್ರೋತ್ಸಾಹಿಸುವುದಿಲ್ಲ’ ಎಂದು ಅದು ಸ್ಪಷ್ಟವಾಗಿ ಅಭಿಪ್ರಾಯಪಟ್ಟಿತು. ಅಷ್ಟೇ ಅಲ್ಲ, ಕಳೆದ ಸೆಪ್ಟಂಬರ್ ತಿಂಗಳಲ್ಲಿ ‘ದಿಲ್ಲಿ ಕೇಂದ್ರಾಡಳಿತ ಪ್ರದೇಶವನ್ನು ಮಾತ್ರ ಆಯ್ದುಕೊಂಡು ಪಟಾಕಿಗೆ ನಿಷೇಧ ವಿಧಿಸಿರುವುದು ಯಾಕೆ?’ ಎಂದು ಸುಪ್ರೀಂಕೋರ್ಟ್ ಕೇಳಿದೆ. ಪರಿಶುದ್ಧ ವಾಯುವನ್ನು ಹೊಂದುವ ಹಕ್ಕು ರಾಷ್ಟ್ರ ರಾಜಧಾನಿಯ ಗಣ್ಯ ವ್ಯಕ್ತಿಗಳಿಗೆ ಮಾತ್ರ ಸೀಮಿತವಲ್ಲ, ಅದನ್ನು ದೇಶಾದ್ಯಂತದ ಪ್ರಜೆಗಳಿಗೆ ವಿಸ್ತರಿಸಬೇಕು ಎಂದು ಅಭಿಪ್ರಾಯಪಟ್ಟಿದೆ.

ದೀಪಾವಳಿಗೂ ಪಟಾಕಿಗೂ ಯಾವುದೇ ಸಂಬಂಧವಿಲ್ಲ ಎನ್ನುವುದು ಪಟಾಕಿಯನ್ನು ಬೆಂಬಲಿಸುತ್ತಾ ಬರುತ್ತಿರುವ ರಾಜಕಾರಣಿಗಳಿಗೂ ಚೆನ್ನಾಗಿಯೇ ಗೊತ್ತಿದೆ. ಮೊದಲೇ ಹೇಳಿದಂತೆ ದೀಪಾವಳಿ ಬೆಳಕಿನ ಹಬ್ಬ. ದೀಪಾವಳಿಯಂದು ಹಣತೆಗಳನ್ನು ಪ್ರೋತ್ಸಾಹಿಸಬೇಕು. ಪಟಾಕಿಗಳು ಸದ್ದುಗಳನ್ನು ಉಂಟು ಮಾಡುತ್ತವೆಯೇ ಹೊರತು, ಬೆಳಕನ್ನು ಕೊಡುವುದಿಲ್ಲ. ಒಂದು ಕ್ಷಣ ಕಣ್ಣು ಕೋರೈಸುವಂತೆ ಬೆಳಗುವ ಪಟಾಕಿ ಕ್ಷಣಾರ್ಧದಲ್ಲಿ ದಟ್ಟ ಕತ್ತಲನ್ನು ಮತ್ತು ಗಂಧಕದ ವಾಸನೆಯನ್ನು ಉಳಿಸಿಹೋಗುತ್ತದೆ. ರಾಜಕಾರಣಿಗಳು ಪಟಾಕಿಗಳನ್ನು ಬೆಂಬಲಿಸುವುದು ಧರ್ಮಗಳ ಮೇಲಿನ ಪ್ರೀತಿಯಿಂದ ಅಲ್ಲ. ಪಟಾಕಿಗಳ ಹಿಂದಿರುವ ವ್ಯಾಪಾರಿಗಳನ್ನು, ಮಾಫಿಯಾವನ್ನು ಅವರು ಬೆಂಬಲಿಸುತ್ತಿದ್ದಾರೆ. ಪಟಾಕಿ ಉದ್ಯಮದೊಂದಿಗೆ ಭಾರೀ ಅಕ್ರಮಗಳು ತಳಕು ಹಾಕಿಕೊಂಡಿವೆ. ಮಹಿಳೆಯರು ಮತ್ತು ಮಕ್ಕಳನ್ನು ಈ ಉದ್ಯಮ ಅಕ್ರಮವಾಗಿ ಶೋಷಿಸುತ್ತಿದೆ ಮಾತ್ರವಲ್ಲ, ಪಟಾಕಿ ಹೆಸರಿನಲ್ಲಿಯೇ ಅಕ್ರಮ ಸ್ಫೋಟಕಗಳನ್ನು ತಯಾರಿಸುವುದು, ಅವುಗಳನ್ನು ದಾಸ್ತಾನು ಮಾಡುವ ಕೆಲಸಗಳೂ ವ್ಯಾಪಕವಾಗಿ ನಡೆಯುತ್ತಿವೆ. ಬೃಹತ್ ಅಕ್ರಮ ಕಲ್ಲು ಗಣಿಗಾರಿಕೆಗಳು ಮತ್ತು ಪಟಾಕಿ ಉದ್ಯಮಗಳ ನಡುವೆ ಅನೈತಿಕ ಸಂಬಂಧಗಳಿವೆ. ಪಟಾಕಿಗಳನ್ನು ನಿಷೇಧಿಸುವುದೆಂದರೆ, ದೀಪಾವಳಿಯನ್ನು ಈ ಎಲ್ಲ ಕಳಂಕಗಳಿಂದ ಮುಕ್ತಗೊಳಿಸುವುದು ಎಂದು ಅರ್ಥ. ದೀಪಾವಳಿಯನ್ನು ಅರ್ಥಪೂರ್ಣವಾಗಿ ಹಣತೆಯ ಬೆಳಕಿನ ಜೊತೆಗೆ ಆಚರಿಸುವುದಕ್ಕಾಗಿ ದೇಶಾದ್ಯಂತ ಪಟಾಕಿ ವಿರುದ್ಧ ಆಂದೋಲನವೊಂದು ಶುರುವಾಗಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News