ತೆರಿಗೆ ನಷ್ಟ ಭರ್ತಿ: ರಾಜ್ಯಗಳ ಆಗ್ರಹ ನ್ಯಾಯ ಸಮ್ಮತ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ತೆರಿಗೆ ಹಂತಗಳನ್ನು ಕಡಿಮೆ ಮಾಡುವುದರಿಂದ ತಮ್ಮ ರಾಜ್ಯಗಳಿಗೆ 85 ಸಾವಿರ ಕೋಟಿಯಿಂದ 2.5 ಲಕ್ಷ ಕೋಟಿ ರೂ. ವರೆಗಿನ ವರಮಾನ ನಷ್ಟವಾಗಲಿದೆ. ಈ ನಷ್ಟವನ್ನು ತುಂಬಿ ಕೊಡಬೇಕೆಂದು ಕರ್ನಾಟಕ ಸೇರಿ ಎಂಟು ರಾಜ್ಯಗಳು ಆಗ್ರಹಿಸಿರುವುದು ನ್ಯಾಯ ಸಮ್ಮತವಾಗಿದೆ. ಕಳೆದ ಶುಕ್ರವಾರ ಅನ್ಯಾಯಕ್ಕೆ ಒಳಗಾದ ಎಂಟು ಸಮಾನ ಮನಸ್ಕ ರಾಜ್ಯಗಳ ಹಣಕಾಸು ಮಂತ್ರಿಗಳ ಸಭೆ ಜಿಎಸ್‌ಟಿ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿತು. ಸೆಪ್ಟಂಬರ್ 3 ಮತ್ತು 4ರಂದು ನಡೆಯಲಿರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ತಮ್ಮ ರಾಜ್ಯಗಳ ಹಿತವನ್ನು ಕಾಪಾಡಲು ಕೇಂದ್ರಕ್ಕೆ ಒತ್ತಾಯಿಸಲು ತೀರ್ಮಾನಿಸಿತು.
ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದದ್ದು 2017ರಲ್ಲಿ. ಇದರಿಂದಾಗಿ ರಾಜ್ಯಕ್ಕೆ 25 ಸಾವಿರ ಕೋಟಿಯಿಂದ 30 ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಯಿತು. ಈ ವರಮಾನ ನಷ್ಟವನ್ನು ಸರಿದೂಗಿಸಲು ರಾಜ್ಯಗಳಿಗೆ ಐದು ವರ್ಷ ಪರಿಹಾರವನ್ನು ನೀಡಲಾಯಿತು. ಈ ಪರಿಹಾರ ವ್ಯವಸ್ಥೆಯನ್ನು ಇನ್ನಷ್ಟು ವರ್ಷಗಳ ಕಾಲ ಮುಂದುವರಿಸಬೇಕೆಂದು ರಾಜ್ಯ ಸರಕಾರ ಮಾಡಿಕೊಂಡ ಮನವಿಗೆ ಕೇಂದ್ರ ಸರಕಾರ ಕಿವಿಗೊಡಲಿಲ್ಲ. ಹೊಸ ವ್ಯವಸ್ಥೆ ಜಾರಿಗೆ ಬಂದರೆ ರಾಜ್ಯಕ್ಕೆ ವಾರ್ಷಿಕ 15 ಸಾವಿರ ಕೋಟಿ ರೂಪಾಯಿ ವರಮಾನ ಕಡಿಮೆಯಾಗಲಿದೆ. ಅದನ್ನು ತುಂಬಿ ಕೊಡಬೇಕೆಂಬ ರಾಜ್ಯಗಳ ಬೇಡಿಕೆ ಸಮರ್ಥನೀಯವಾಗಿದೆ.
ತೆರಿಗೆ ಹಂಚಿಕೆ ಸೇರಿದಂತೆ ಒಟ್ಟಾರೆ ಸಂಪನ್ಮೂಲಗಳ ಹಂಚಿಕೆಯಲ್ಲಿ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಅವ್ಯಾಹತವಾಗಿ ಅನ್ಯಾಯವಾಗುತ್ತಲೇ ಇದೆ. ಈ ಕುರಿತು ರಾಜ್ಯ ಸರಕಾರ ಆರೋಪಿಸುತ್ತಲೇ ಬಂದಿದೆ. ಕರ್ನಾಟಕದಿಂದ ಸಂಗ್ರಹವಾಗುವ ಒಂದು ರೂಪಾಯಿ ತೆರಿಗೆಯಲ್ಲಿ 15 ಪೈಸೆ ಮಾತ್ರ ರಾಜ್ಯಕ್ಕೆ ವಾಪಸ್ ಬರುತ್ತಿದೆ ಎಂಬ ರಾಜ್ಯ ಸರಕಾರದ ಆರೋಪದಲ್ಲಿ ಹುರುಳಿಲ್ಲದಿಲ್ಲ. ದೇಶದಲ್ಲಿ ಅತ್ಯಂತ ಹೆಚ್ಚು ತೆರಿಗೆಯನ್ನು ಸಂಗ್ರಹಿಸಿಕೊಡುವ ಎರಡನೇ ರಾಜ್ಯವಾದ ಕರ್ನಾಟಕಕ್ಕೆ ನಿರಂತರವಾದ ಅನ್ಯಾಯ ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊದಲಿನಿಂದಲೂ ಪ್ರಶ್ನಿಸುತ್ತಲೇ ಇದ್ದಾರೆ. ಕರ್ನಾಟಕ ಮಾತ್ರವಲ್ಲ ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಗೆ ನಿರಂತರವಾಗಿ ಅನ್ಯಾಯ ವಾಗುತ್ತಿದೆ. ಈ ಬಗ್ಗೆ ಈ ರಾಜ್ಯಗಳು ಪ್ರತಿಭಟಿಸುತ್ತಲೇ ಇವೆ. ಆದರೆ ಕೇಂದ್ರದ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಸ್ಪಂದಿಸುತ್ತಲೇ ಇಲ್ಲ.
ಇನ್ನೊಂದೆಡೆ ಅತ್ಯಂತ ಕಡಿಮೆ ತೆರಿಗೆ ಪಾಲನ್ನು ನೀಡುವ, ದುರಾಡಳಿತ ಹಾಗೂ ಭ್ರಷ್ಟಾಚಾರಕ್ಕೆ ಹೆಸರಾಗಿರುವ ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆಯನ್ನು ಮಾಡಿರುವ ಉತ್ತರ ಪ್ರದೇಶಕ್ಕೆ 31,962 ಕೋಟಿ ರೂ., ಬಿಹಾರಕ್ಕೆ 17,821 ಕೋಟಿ ರೂ., ಮಧ್ಯಪ್ರದೇಶಕ್ಕೆ 13,987 ಕೋಟಿ ರೂ., ರಾಜಸ್ಥಾನಕ್ಕೆ 10,737 ಕೋಟಿ ರೂಪಾಯಿ ತೆರಿಗೆ ಪಾಲನ್ನು ನೀಡಲಾಗಿದೆ. ಉತ್ತರದ ರಾಜ್ಯಗಳು ದಕ್ಷಿಣ ಭಾರತದ ರಾಜ್ಯಗಳ ಅದರಲ್ಲೂ ಕರ್ನಾಟಕದ ಪಾಲನ್ನು ಕಬಳಿಸುತ್ತವೆ. ಈ ರಾಜ್ಯಗಳಲ್ಲಿ ಬಿಜೆಪಿ ಸರಕಾರಗಳು ಇರುವುದರಿಂದಲೇ ಈ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ.
ತೆರಿಗೆ ನಷ್ಟಕ್ಕೆ ಒಳಗಾಗಿರುವ ರಾಜ್ಯಗಳ ಆಗ್ರಹವೇನೆಂದರೆ ರಾಜ್ಯಗಳಿಗೆ ಉಂಟಾಗಿರುವ ಆದಾಯ ನಷ್ಟವನ್ನು ಜಿಎಸ್‌ಟಿ ಪರಿಹಾರ ಸೆಸ್ ಮೂಲಕ ಸರಿದೂಗಿಸಬೇಕು, ಹಾನಿಕಾರಕ ಹಾಗೂ ಐಷಾರಾಮಿ ಸರಕುಗಳ ಮೇಲೆ ಹೆಚ್ಚುವರಿ ತೆರಿಗೆಯನ್ನು ಹಾಕಿ ಈ ಆದಾಯವನ್ನು ಸಂಪೂರ್ಣವಾಗಿ ರಾಜ್ಯಗಳಿಗೆ ವರ್ಗಾಯಿಸಬೇಕು, ರಾಜ್ಯಗಳ ಆದಾಯ ನಷ್ಟವನ್ನು ಪರಿಹರಿಸಲು ಕೇಂದ್ರ ಸರಕಾರ ಸಾಲಗಳನ್ನು ಪಡೆಯಬೇಕು. ಈ ಸಾಲವನ್ನು ಐದು ವರ್ಷಗಳ ನಂತರವೂ ಪರಿಹಾರ ಸೆಸ್ ವಿಸ್ತರಿಸುವ ಮೂಲಕ ಪಾವತಿಸಬೇಕು ಹಾಗೂ ರಾಜ್ಯಗಳಿಗೆ ಪರಿಹಾರವನ್ನು 2024-25 ಹಣಕಾಸು ವರ್ಷದಿಂದಲೇ ನೀಡಬೇಕು ಮತ್ತು ವಾರ್ಷಿಕ ಶೇಕಡಾ 14ರ ದರದಲ್ಲಿ ಪರಿಹಾರ ನೀಡಬೇಕು. ಈ ಬೇಡಿಕೆಗಳು ಸಮರ್ಥನೀಯವಾಗಿವೆ.
ಜಿಎಸ್‌ಟಿ ಕೌನ್ಸಿಲ್ ರಾಜ್ಯಗಳ ಮುಂದಿಟ್ಟಿರುವ ತೆರಿಗೆ ಸರಳೀಕರಣ ಸ್ವಾಗತಾರ್ಹವೆ. ಆದರೆ ಇದರಿಂದ ರಾಜ್ಯಗಳ ತೆರಿಗೆ ಆದಾಯಕ್ಕೆ ಧಕ್ಕೆಯಾಗಬಾರದು. ಇದರ ಪ್ರಯೋಜನ ದೇಶದ ಜನಸಾಮಾನ್ಯರಿಗೆ ತಲುಪಬೇಕೇ ಹೊರತು ಕೆಲವು ಕಾರ್ಪೊರೇಟ್ ಕಂಪೆನಿಗಳಿಗೆ ಲಾಭವಾಗುವಂತಿರಬಾರದು. ಆದರೆ ಕೇಂದ್ರ ಸರಕಾರ ಆರೋಗ್ಯ ವಿಮೆ ಮೇಲಿನ ಜಿಎಸ್‌ಟಿಯನ್ನು ಕಡಿತ ಮಾಡಲು ಮೀನಾ ಮೇಷ ಎಣಿಸಿತು. ಆದರೆ ಈಗ ಆಟೊಮೊಬೈಲ್ ಹಾಗೂ ಇಲೆಕ್ಟ್ರಾನಿಕ್ ವಸ್ತುಗಳ ಬೆಲೆಯನ್ನು ಇಳಿಸಲು ಕಾರಣವೇನು? ಇದು ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಯ ರಕ್ಷಣೆಗಾಗಿ ಅಲ್ಲವೇ? ರಾಜ್ಯದ ಕಂದಾಯ ಸಚಿವ ಕೃಷ್ಣ ಭೈರೇಗೌಡರ ಪ್ರಕಾರ ಉದ್ದೇಶಿತ ಜಿಎಸ್‌ಟಿ ಸರಳೀಕರಣದಿಂದಾಗಿ ರಾಜ್ಯ ಸರಕಾರಗಳಿಗೆ ಯಾವ ಪ್ರಮಾಣದಲ್ಲಿ ಆದಾಯ ಖೋತಾ ಆಗಬಹುದು ಎಂಬ ಅಂದಾಜಿನ ಬಗ್ಗೆ ಕೇಂದ್ರ ಸರಕಾರ ಈ ವರೆಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ರಾಜ್ಯ ಸರಕಾರಗಳಿಗೆ ಆದಾಯ ನಷ್ಟ ಉಂಟಾದರೆ ಕೇಂದ್ರ ಸರಕಾರಕ್ಕೂ ನಷ್ಟವಾಗಲಿದೆ. ಹೀಗಾಗಿ ಜಿಎಸ್‌ಟಿ ಸ್ಥಿರಗೊಳ್ಳುವವರೆಗೆ ಕೇಂದ್ರ ಸರಕಾರ ತನ್ನ ಖಜಾನೆಯಿಂದ ಹಣ ನೀಡುವ ಅಗತ್ಯವಿಲ್ಲ, ಬದಲಾಗಿ ಜಿಎಸ್‌ಟಿ ಕೌನ್ಸಿಲ್ ಪರಿಧಿಯಲ್ಲಿ ಪ್ರತಿಯೊಂದು ರಾಜ್ಯಕ್ಕೂ ಪರಿಹಾರ ನೀಡಲಿ ಎಂಬ ಬೇಡಿಕೆ ನ್ಯಾಯ ಸಮ್ಮತವಾಗಿದೆ.
ಹೆಚ್ಚು ತೆರಿಗೆಯನ್ನು ಸಂಗ್ರಹಿಸಿಕೊಡುವ ರಾಜ್ಯಗಳಿಗೆ ಒಂದಿಷ್ಟು ಹೆಚ್ಚು ಅನುದಾನವನ್ನು ನೀಡುವುದರಲ್ಲಿ ತಪ್ಪಿಲ್ಲ. ಈ ಮಾನದಂಡದ ಅನ್ವಯ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ನೀಡುವ ಅನುದಾನದಲ್ಲಿ ರಾಜಕೀಯ ಅಡ್ಡಿಯಾಗಬಾರದು. ರಾಜ್ಯಕ್ಕೆ ನೀಡುವ ಅನುದಾನದ ಹಣ ಮುಖ್ಯಮಂತ್ರಿಗಳ ಇಲ್ಲವೇ ಯಾವುದೇ ಮಂತ್ರಿಯ ವೈಯಕ್ತಿಕ ಬ್ಯಾಂಕ್ ಖಾತೆಗೆ ಹೋಗುವುದಿಲ್ಲ. ಇದು ರಾಜ್ಯದ ಅಭಿವೃದ್ಧಿಗೆ ಒದಗಿಸಲೇಬೇಕಾದ ಕರ್ನಾಟಕದ ಪಾಲಿನ ತೆರಿಗೆ ಹಣ. ಇದರಲ್ಲಿ ವ್ಯತ್ಯಯವಾಗಬಾರದು. ಕರ್ನಾಟಕದಿಂದ ಚುನಾಯಿತರಾದ ಸಂಸದರು, ಅವರು ಯಾವುದೇ ಪಕ್ಷಕ್ಕೆ ಸೇರಿದವರಾಗಿರಲಿ ಪಕ್ಷಭೇದ ಬದಿಗೊತ್ತಿ ರಾಜ್ಯದ ಪಾಲಿನ ತೆರಿಗೆ ಹಣಕ್ಕಾಗಿ ಒಕ್ಕೊರಲಿನಿಂದ ಧ್ವನಿಯೆತ್ತಬೇಕು. ವಿಷಾದದ ಸಂಗತಿಯೆಂದರೆ ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೂ ರಾಜ್ಯದಿಂದ ಚುನಾಯಿತರಾಗಿರುವ ಬಿಜೆಪಿ ಸಂಸದರು ಮತ್ತು ಮಂತ್ರಿಗಳು ರಾಜ್ಯದ ಪಾಲಿನ ತೆರಿಗೆಗಾಗಿ ಧ್ವನಿ ಎತ್ತುವುದಿಲ್ಲ. ಇನ್ನು ಹೀಗಾಗಬಾರದು.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಕಾಲದಿಂದಲೂ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಕೇಂದ್ರ ಮತ್ತು ರಾಜ್ಯಗಳಿಗೆ ಪೂರಕವಾದ ಸ್ವತಂತ್ರ ಯೋಜನಾ ಆಯೋಗವನ್ನು ರಚಿಸಲಾಯಿತು. ಆದರೆ ಹನ್ನೊಂದು ವರ್ಷಗಳ ಹಿಂದೆ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಬಂದ ನಂತರ ಈ ಯೋಜನಾ ಆಯೋಗವನ್ನೇ ರದ್ದು ಮಾಡಲಾಯಿತು. ಅದರ ಜಾಗದಲ್ಲಿ ನೀತಿ ಆಯೋಗವನ್ನು ಸ್ಥಾಪಿಸಲಾಯಿತು. ಆಗಿನಿಂದಲೂ ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ಈ ಅನ್ಯಾಯವಾಗುತ್ತಲೇ ಇದೆ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ. ಹೀಗಾಗದಂತೆ ನೋಡಿಕೊಳ್ಳಬೇಕಾದುದು ಇಂದಿನ ಮೊದಲ ಆದ್ಯತೆಯಾಗಬೇಕು.