ಆಯುಷ್ಮಾನ್ ಯೋಜನೆ ಎನ್ನುವ ಮಹಾ ಹಗರಣ!
PC: wikipedia.org
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕಳಪೆ ಔಷಧಿಗಳು ದೇಶಾದ್ಯಂತ ಮಕ್ಕಳನ್ನು ಬಲಿತೆಗೆದುಕೊಂಡ ವರದಿಗಳು ಮಾಧ್ಯಮಗಳಲ್ಲಿ ಸಾಲು ಸಾಲಾಗಿ ಪ್ರಕಟವಾಗುತ್ತಿರುವ ಬೆನ್ನಿಗೇ , ದೇಶದ ಆರೋಗ್ಯ ವ್ಯವಸ್ಥೆ ಮತ್ತೆ ಚರ್ಚೆಯಲ್ಲಿದೆ. ಕೊರೋನ ಕಾಲದಲ್ಲಿ ಲಸಿಕೆ ಮಾಡಿದ ಅವಾಂತರಗಳು, ಲಸಿಕೆಗಳ ಹೆಸರಿನಲ್ಲಿ ನಡೆದ ಅಕ್ರಮಗಳು ಸಾಮಾಜಿಕ ಆರೋಗ್ಯ ವಲಯದ ಮೇಲೆ ಬೀರಿರುವ ಪರಿಣಾಮಗಳ ಬಗ್ಗೆ ಗಂಭೀರ ತನಿಖೆಯೊಂದು ನಡೆದಿದ್ದರೆ ಇಂದು ಇಂತಹದೊಂದು ಮುಜುಗರವನ್ನು ದೇಶ ಎದುರಿಸಬೇಕಾಗಿರಲಿಲ್ಲ. ಕೊರೋನ ದಿನಗಳಲ್ಲಿ ಲಸಿಕೆಗಳಿಗೆ ನೀಡಿದ ಆದ್ಯತೆಯಿಂದಾಗಿ ಇತ್ತ ಕ್ಷಯ, ಅಸ್ತಮಾದಂತಹ ಮಾರಕ ರೋಗಗಳು ನಿಧಾನಕ್ಕೆ ಮತ್ತೆ ತಲೆಯೆತ್ತತೊಡಗಿದವು. ಲಸಿಕೆಗಳಿಗೆ ಸುರಿದ ದೊಡ್ಡ ಮೊತ್ತದ ಕಾರಣದಿಂದಾಗಿ ಕ್ಷಯ, ಎಚ್‌ಐವಿ, ಅಸ್ತಮಾದಂತಹ ರೋಗಗಳಿಗೆ ಹಣದ ಕೊರತೆ ಎದುರಾಯಿತು. ಸರಕಾರ ವಿಧಿಸತೊಡಗಿದ್ದ ಜಿಎಸ್‌ಟಿ ತೆರಿಗೆ ಅದಾಗಲೇ ಔಷಧಿಗಳನ್ನು ಇನ್ನಷ್ಟು ದುಬಾರಿಯಾಗಿಸಿತ್ತು. ಮೋದಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಸಾರ್ವಜನಿಕ ಆರೋಗ್ಯ ಕೇಂದ್ರಗಳು ತೀವ್ರ ನಿರ್ಲಕ್ಷ್ಯಕ್ಕೊಳಗಾದವು.ಕಾರ್ಪೊರೇಟ್ ಆಸ್ಪತ್ರೆಗಳ ಹಿತಾಸಕ್ತಿಗಳಿಗೆ ಪೂರಕವಾಗಿ ಸರಕಾರದ ಯೋಜನೆಗಳು ಘೋಷಣೆಯಾಗತೊಡಗಿದವು.ಸರಕಾರಿ ಆಸ್ಪತ್ರೆಗಳನ್ನು ಮೇಲೆತ್ತಲು ಯೋಜನೆಗಳನ್ನು ರೂಪಿಸುವ ಬದಲು, 2018ರಲ್ಲಿ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯವನ್ನು ಸರಕಾರ ಜಾರಿಗೆ ತಂದಿತು. ಇದರ ಲಾಭವನ್ನು ಜನಸಾಮಾನ್ಯರು ಪಡೆದುಕೊಂಡದ್ದಕ್ಕಿಂತ, ಈ ಕಾರ್ಪೊರೇಟ್ ಆಸ್ಪತ್ರೆಗಳೇ ತನ್ನದಾಗಿಸಿಕೊಂಡವು. ತಜ್ಞರ ವಲಯದಿಂದ ಆಯುಷ್ಮಾನ್ ಯೋಜನೆಯ ಬಗ್ಗೆ ಸಾಕಷ್ಟು ಟೀಕೆಗಳೂ ಕೇಳಿ ಬಂದವು. ಸರಕಾರ ಸಾರ್ವಜನಿಕ ಆಸ್ಪತ್ರೆಗಳ ಕಡೆಗೆ ಗಮನ ಕೊಟ್ಟಿದ್ದರೆ ಕೊರೋನ ಕಾಲದಲ್ಲಿ ಜನರು ತೀವ್ರ ಸಂಕಷ್ಟಕ್ಕೆ ಈಡಾಗುವ ಸಂದರ್ಭ ಎದುರಾಗುತ್ತಿರಲಿಲ್ಲ ಎಂದು ಹಲವರು ಅಭಿಪ್ರಾಯಪಟ್ಟರು.
ಇದೀಗ ಆಯುಷ್ಮಾನ್ ಯೋಜನೆಗಳು ಹಗರಣದ ಕೂಪವಾಗಿ ಪರಿವರ್ತನೆಗೊಂಡಿದೆ ಎನ್ನುವುದನ್ನು ಸರಕಾರಿ ಅಂಕಿಅಂಶಗಳೇ ಬಹಿರಂಗಪಡಿಸುತ್ತಿವೆ. ಮಧ್ಯಪ್ರದೇಶದ ಭೋಪಾಲದಲ್ಲಿ ಎರಡು ದಿನಗಳ ರಾಷ್ಟ್ರೀಯ ಪುನರ್‌ಪರಿಶೀಲನೆ ಸಭೆಯಲ್ಲಿ ಬಿಡುಗಡೆ ಮಾಡಲಾದ ಎನ್‌ಎಚ್‌ಎ ವಾರ್ಷಿಕ ವರದಿ 2024-25ರ ಪ್ರಕಾರ, 1,33,611ಕ್ಕೂ ಅಧಿಕ ಕ್ಲೇಮ್‌ಗಳನ್ನು ಅಕ್ರಮವೆಂದು ಗುರುತಿಸಲಾಗಿದೆ. ಒಟ್ಟು 272 ಕೋಟಿ ರೂ.ಗಳ ವಂಚನೆ ಇದಾಗಿದೆ. ಅಷ್ಟೇ ಅಲ್ಲ, ಸೆ.2023ರಿಂದ ಮಾ.2025ರವರೆಗೆ ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ(ಎಬಿ-ಪಿಎಂ-ಜೆಎವೈ) 4.6 ಲಕ್ಷಕ್ಕೂ ಅಧಿಕ ಶಂಕಾಸ್ಪದ ಕ್ಲೇಮ್‌ಗಳನ್ನು ಪತ್ತೆ ಹಚ್ಚಲಾಗಿದೆ. ಅಂದರೆ ನಕಲಿ ರೋಗಿಗಳನ್ನು ಸೃಷ್ಟಿಸಿ ಆಸ್ಪತ್ರೆಗಳೇ ದೊಡ್ಡ ಪ್ರಮಾಣದ ವಿಮಾ ಹಣವನ್ನು ದೋಚಿದೆ ಎಂದು ಪ್ರಾಧಿಕಾರ ಶಂಕಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯ ಈ ವಂಚನೆಯ ಅಂಕಿ ಅಂಶಗಳನ್ನು ಪ್ರತಿ ವರ್ಷ ನೀಡುತ್ತಲೇ ಬರುತ್ತಿದೆ. ನಿಜವಾದ ಸಂತ್ರಸ್ತರಿಗಿಂತ, ನಕಲಿ ರೋಗಿಗಳಿಗೆ ಭಾರೀ ಪ್ರಮಾಣದಲ್ಲಿ ಹಣ ಸಂದಾಯವಾಗಿರುವುದನ್ನು ಇದು ಬಹಿರಂಗಪಡಿಸುತ್ತಿದೆ.
2018ರಲ್ಲಿ ಈ ಯೋಜನೆ ಆರಂಭಗೊಂಡಾಗಲೇ ಇದರ ವಿರುದ್ಧ ವೈದ್ಯರೂ ಸೇರಿದಂತೆ ಹಲವು ತಜ್ಞರು ಆಕ್ಷೇಪಗಳನ್ನು ಎತ್ತಿದ್ದರು. ಯೋಜನೆಗಾಗಿ ಕೇಂದ್ರ ಸರಕಾರ ಶೇ. 60ರಷ್ಟು ಹಣವನ್ನು ಪಾವತಿ ಮಾಡಿದರೆ, ರಾಜ್ಯ ಸರಕಾರ ಶೇ. 40ರಷ್ಟನ್ನು ಪಾವತಿ ಮಾಡುತ್ತಾ ಬರುತ್ತಿದೆ. ಬೃಹತ್ ಕಾರ್ಪೊರೇಟ್ ಆಸ್ಪತ್ರೆಗಳನ್ನು, ಖಾಸಗಿ ಸಂಸ್ಥೆಗಳನ್ನು ಸಾಕುವುದಕ್ಕಾಗಿಯೇ ಈ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎನ್ನುವುದು ತಜ್ಞರ ಪ್ರಮುಖ ಆಕ್ಷೇಪವಾಗಿದೆ. ಭವಿಷ್ಯದಲ್ಲಿ ಈ ಯೋಜನೆ ಭಾರೀ ಅಕ್ರಮಗಳಿಗೆ ಕಾರಣವಾಗಲಿದ್ದು, ಜನಸಾಮಾನ್ಯರ ಕೋಟಿಗಟ್ಟಲೆ ಹಣವನ್ನು ಖಾಸಗಿ ಆಸ್ಪತ್ರೆಗಳು ಲೂಟಿ ಮಾಡಲಿವೆ ಎನ್ನುವ ಆತಂಕ ಆಗಲೇ ವ್ಯಕ್ತವಾಗಿದ್ದವು. ಈ ಯೋಜನೆ ದೇಶದ ಎಲ್ಲ ವರ್ಗದ ಜನಸಮುದಾಯವನ್ನು ಒಳಗೊಂಡಿಲ್ಲ. ಮುಖ್ಯವಾಗಿ ಬಿಪಿಎಲ್ ಕಾರ್ಡುದಾರರು ಯೋಜನೆಯ ಸವಲತ್ತುಗಳನ್ನು ನೇರವಾಗಿ ಪಡೆದುಕೊಳ್ಳಬಹುದು. ಉಳಿದವರು ಶೇ. 30ರಷ್ಟು ನೆರವನ್ನು ತನ್ನದಾಗಿಸಿಕೊಳ್ಳಬಹುದು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಈ ಯೋಜನೆಯನ್ನು 70 ವರ್ಷ ದಾಟಿದ ಎಲ್ಲರಿಗೂ ಅನ್ವಯಿಸಲಾಗಿದೆ. ಆಯುಷ್ಮಾನ್ ಯೋಜನೆಯ ಮೂಲಕ ತಳಸ್ತರದ ಜನರಿಗೆ ಲಾಭವಾಗುವುದೇನೋ ನಿಜ. ಆದರೆ, ಇದು ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಸರಕಾರಿ ಆಸ್ಪತ್ರೆಗಳನ್ನು ಸರಕಾರ ಮೂಲೆಗುಂಪು ಮಾಡಿ, ಖಾಸಗಿ ಆಸ್ಪತ್ರೆಗಳನ್ನು ಈ ಮೂಲಕ ಲಾಭದಾಯಕ ಮಾಡಿಸುತ್ತದೆ ಎನ್ನುವುದು ಹಲವರ ಆರೋಪವಾಗಿದೆ. ಕೊರೋನ ಕಾಲದಲ್ಲಿ ಆಯುಷ್ಮಾನ್ ಯೋಜನೆ ಸಾಕಷ್ಟು ಚರ್ಚೆಗೆ ಕಾರಣವಾಯಿತು. ಬಡ ಕೊರೋನ ರೋಗಿಗಳು ಈ ಯೋಜನೆಯಡಿಯಲ್ಲಿ ಬರುತ್ತಾರೆಯೇ ಇಲ್ಲವೇ ಎನ್ನುವುದು ಸಾಕಷ್ಟು ಗೊಂದಲಗಳಿಗೆ ಕಾರಣವಾಯಿತು. ಕೊರೋನೋತ್ತರ ಭಾರತವು ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಹಿನ್ನಡೆಯನ್ನು ಅನುಭವಿಸಿದ್ದು, ಸರಕಾರದ ಯೋಜನೆಗಳು ನಿರೀಕ್ಷಿತ ಫಲಗಳನ್ನು ನೀಡುತ್ತಿಲ್ಲ ಎನ್ನುವುದು ನಿರ್ಲಕ್ಷಿಸುವಂತಹ ವಿಷಯ ಖಂಡಿತ ಅಲ್ಲ. ಇದೀಗ ಕೇಂದ್ರವು ತನ್ನ ಸಾಧನೆಯೆಂದು ಹೇಳಿಕೊಳ್ಳುವ ಆಯುಷ್ಮಾನ್ ಭಾರತ್ ಯೋಜನೆಯಲ್ಲೂ ಕಾಣಿಸಿಕೊಂಡಿರುವ ಭಾರೀ ಅಕ್ರಮಗಳು ಭವಿಷ್ಯದಭಾರತವನ್ನು ಇನ್ನಷ್ಟು ರೋಗ ಪೀಡಿತಗೊಳಿಸುವ ಸಾಧ್ಯತೆಗಳು ಕಾಣುತ್ತಿವೆ.
ಯೋಜನೆಗೆ ಸಂಬಂಧಿಸಿ 2023ರ ಆಗಸ್ಟ್ ತಿಂಗಳಲ್ಲಿ ಮಹಾ ಲೆಕ್ಕಪಾಲಕರ ಮೊತ್ತ ಮೊದಲ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಇದರಲ್ಲೂ ಆಯುಷ್ಮಾನ್ ಭಾರತ್ ಯೋಜನೆಯ ವೈಫಲ್ಯಗಳನ್ನು, ದೌರ್ಬಲ್ಯಗಳನ್ನು ಉಲ್ಲೇಖಿಸಲಾಗಿದೆ. ಅಲ್ಲಿಯವರೆಗೆ 67,000 ಕೋಟಿ ರೂಪಾಯಿಯನ್ನು ಯೋಜನೆಗಾಗಿ ವ್ಯಯಿಸಲಾಗಿದೆ ಎಂದು ಹೇಳಲಾಗಿದ್ದರೂ, ಇದು ನಿಜವಾದ ಸಂತ್ರಸ್ತರಿಗೆ ತಲುಪಿದೆಯೇ ಎನ್ನುವುದರ ಬಗ್ಗೆ ಮಾತ್ರ ಅನುಮಾನಗಳಿವೆ. ಸುಮಾರು 10 ಲಕ್ಷ ಫಲಾನುಭವಿಗಳನ್ನು ಒಂದೇ ದೂರವಾಣಿ ಸಂಖ್ಯೆಯಡಿ ನೋಂದಾಯಿಸಿರುವುದು ವರದಿಯಲ್ಲಿ ಬಹಿರಂಗವಾಗಿದೆ. ಆಸ್ಪತ್ರೆಗಳ ಒಟ್ಟು ಸಾಮರ್ಥ್ಯಕ್ಕಿಂತ 2-3 ಪಾಲು ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿರುವುದು ಕೂಡ ಯೋಜನೆಯ ದುರುಪಯೋಗದ ಬಗ್ಗೆ ಅನುಮಾನಗಳನ್ನು ಹುಟ್ಟಿಸಿವೆ. ಈ ಯೋಜನೆಯನ್ನು ಸುಲಭವಾಗಿ ದುರುಪಯೋಗ ಪಡಿಸಲು ಸಕಲ ಅನುಕೂಲಗಳು ಖಾಸಗಿ ಆಸ್ಪತ್ರೆಗಳಿಗೆ ಇರುವುದರಿಂದ ಯೋಜನೆಯ ನಿಜವಾದ ಫಲಾನುಭವಿಗಳು ಈ ಆಸ್ಪತ್ರೆಗಳೇ ಆಗಿವೆ. ಜನಸಾಮಾನ್ಯರು ಈ ಆಸ್ಪತ್ರೆಗಳ ವಂಚನೆಯ ಬಲಿಪಶುಗಳಾಗಿದ್ದಾರೆ. ಹೆಚ್ಚಿನ ರೋಗಿಗಳಿಗೆ ಈ ಯೋಜನೆಯ ಹೆಸರಿನಲ್ಲಿ ಆಸ್ಪತ್ರೆಗಳು ತಮ್ಮನ್ನು ಲೂಟಿ ಮಾಡುತ್ತಿರುವುದು ಗೊತ್ತೇ ಇರುವುದಿಲ್ಲ. 2023ರವರೆಗೆ ಈ ಯೋಜನೆಯಲ್ಲಿ 1.6 ಲಕ್ಷ ಪಾವತಿ ಅರ್ಜಿಗಳಲ್ಲಿ 278 ಕೋಟಿ ರೂಪಾಯಿ ಅಕ್ರಮಗಳು ನಡೆದಿರುವ ಬಗ್ಗೆ ಅನುಮಾನಿಸಲಾಗಿದೆ. ಕರ್ನಾಟಕ ರಾಜ್ಯವೊಂದರಲ್ಲೇ 2023ರವರೆಗೆ 127 ಆಸ್ಪತ್ರೆಗಳ ವಿರುದ್ಧ 349 ದೂರುಗಳು ದಾಖಲಾಗಿವೆ. ಈ ಆಸ್ಪತ್ರೆಗಳು ಸುಮಾರು ಒಂದೂವರೆ ಕೋಟಿ ರೂಪಾಯಿಗಳನ್ನು ರೋಗಿಗಳ ಹೆಸರಿನಲ್ಲಿ ಸರಕಾರದಿಂದ ಲೂಟಿ ಮಾಡಿವೆ ಎಂದು ಆರೋಪಿಸಲಾಗಿದೆ.
ಒಂದೆಡೆ ಔಷಧಿಗಳಲ್ಲಿ ಹುಳಗಳು ಪತ್ತೆಯಾಗುತ್ತಿವೆ. ನಕಲಿ ಔಷಧಿಗಳಿಂದಾಗಿ ಮಕ್ಕಳು ಸಾಯುತ್ತಿರುವ ಬಗ್ಗೆ ವರದಿಗಳಾಗುತ್ತಿವೆ. ಇದೀಗ ಬೃಹತ್ ಕಾರ್ಪೊರೇಟ್ ಆಸ್ಪತ್ರೆಗಳು ನಕಲಿ ರೋಗಿಗಳನ್ನು ಸೃಷ್ಟಿಸಿ, ಬಡ ರೋಗಿಗಳಿಗೆ ಸಲ್ಲಬೇಕಾಗಿದ್ದ ಹಣವನ್ನು ನುಂಗಿ ಹಾಕುತ್ತಿವೆ. ಪರಿಣಾಮವಾಗಿ ಆಯುಷ್ಮಾನ್ ಯೋಜನೆಯೇ ಒಂದು ಬೃಹತ್ ಹಗರಣವಾಗಿ ಬೆಳೆದು ನಿಂತಿದೆ. ಈ ಹಗರಣದಲ್ಲಿ ಬೃಹತ್ ಉದ್ಯಮಿಗಳು, ವೈದ್ಯರೇ ಶಾಮೀಲಾಗಿರುವುದರಿಂದ ಸರಕಾರ ಸ್ವತಂತ್ರ ತನಿಖಾ ಸಂಸ್ಥೆಯಿಂದ ಈ ಬಗ್ಗೆ ತನಿಖೆ ನಡೆಸುವುದು ಉಚಿತ. ಹಾಗೆಯೇ ಆಯುಷ್ಮಾನ್ ಯೋಜನೆಗೆ ಸೂಕ್ತ ಶಸ್ತ್ರಕ್ರಿಯೆಯನ್ನು ಮಾಡಿ, ಅದನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಬಗ್ಗೆ ಇನ್ನಾದರೂ ಕ್ರಮ ತೆಗೆದುಕೊಳ್ಳಬೇಕು. ನಿರ್ಲಕ್ಷ್ಯಕ್ಕೊಳಗಾಗಿರುವ ಸರಕಾರಿ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಿ, ಆಯುಷ್ಮಾನ್ ಯೋಜನೆಗಳ ಫಲಾನುಭವಿಗಳು ಈ ಅಸ್ಪತ್ರೆಗಳ ಮೂಲಕವೇ ಬಹುತೇಕ ಚಿಕಿತ್ಸೆಯನ್ನು ತಮ್ಮದಾಗಿಸಿಕೊಳ್ಳುವಂತೆ ಯೋಜನೆಗಳನ್ನು ರೂಪಿಸಲು ಇದು ಸರಿಯಾದ ಸಮಯವಾಗಿದೆ.