×
Ad

ದುರ್ಬಳಕೆಯಾಗುತ್ತಿರುವ ಮತಾಂತರ ಕಾಯ್ದೆ ರದ್ದಾಗಲಿ

Update: 2025-10-25 09:18 IST

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಇತ್ತೀಚೆಗೆ ಉತ್ತರ ಪ್ರದೇಶ ಧಾರ್ಮಿಕ ಮತಾಂತರ ಕಾಯ್ದೆಯಡಿಯಲ್ಲಿ ದಾಖಲಾಗಿದ್ದ ಹಲವು ಎಫ್‌ಐಆರ್‌ಗಳನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. ಈ ಕ್ರಿಮಿನಲ್ ಕಾನೂನು ಅಮಾಯಕ ನಾಗರಿಕರಿಗೆ ಕಿರುಕುಳ ನೀಡುವ ಸಾಧನವಾಗಿ ಬಳಕೆಯಾಗಬಾರದು ಎಂದು ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ. ‘‘ಕಾನೂನು ಪ್ರಕ್ರಿಯೆಯ ದೌರ್ಬಲ್ಯಗಳು, ತನಿಖಾ ಲೋಪಗಳು ಹಾಗೂ ವಿಶ್ವಾಸಾರ್ಹ ಸಾಕ್ಷ್ಯಾಧಾರಗಳ ಕೊರತೆಯಿಂದ ಈ ಎಫ್‌ಐಆರ್‌ಗಳು ಅಸ್ತಿತ್ವವನ್ನು ಕಳೆದುಕೊಂಡಿವೆ. ಅಂತಹ ವಿಚಾರಣೆ ಮುಂದುವರಿಸುವುದು ನ್ಯಾಯದ ಅಣಕ’ ಎಂದು ಸುಪ್ರೀಂಕೋರ್ಟ್ ಈ ಸಂದರ್ಭದಲ್ಲಿ ಹೇಳಿತು. ‘‘ಕ್ರಿಮಿನಲ್ ಕಾನೂನು ಅಮಾಯಕ ವ್ಯಕ್ತಿಗಳ ಕಿರುಕುಳಕ್ಕೆ ಉಪಯೋಗವಾಗಬಾರದು. ನಂಬಲಾಗದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮೊಕದ್ದಮೆ ಹೂಡುವುದು ಕಾನೂನಿನ ದುರುಪಯೋಗವಾಗಿದೆ. ಒಂದೇ ಘಟನೆಯ ಬಗ್ಗೆ ಪದೇ ಪದೇ ಎಫ್‌ಐಆರ್‌ಗಳನ್ನು ಮಾಡುವುದು ತನಿಖಾ ಪ್ರಕ್ರಿಯೆಯ ನೈತಿಕತೆಯನ್ನು ಹಾಳು ಮಾಡುತ್ತದೆ. ಆರೋಪಿಗಳಿಗೆ ಅನಗತ್ಯ ಕಿರುಕುಳಗಳನ್ನು ನೀಡುವ ದುರುದ್ದೇಶವನ್ನು ಇದು ಹೊಂದಿದೆ’’ ಎಂದು ಕಳವಳ ವ್ಯಕ್ತಪಡಿಸಿತು. ಸುಮಾರು ಆರು ಎಫ್‌ಐಆರ್‌ಗಳನ್ನು ಈ ಸಂದರ್ಭದಲ್ಲಿ ಅದು ರದ್ದುಗೊಳಿಸಿದೆ. ವಿಪರ್ಯಾಸವೆಂದರೆ, ದೇಶಾದ್ಯಂತ ಇಂತಹ ದುರುದ್ದೇಶಪೂರಿತ ಎಫ್‌ಐಆರ್‌ಗಳಿಂದಾಗಿ ನೂರಾರು ಅಮಾಯಕರು ಮಾಡದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಬಹುತೇಕ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು, ಅವುಗಳು ನ್ಯಾಯಾಲಯದಲ್ಲಿ ನಿಲ್ಲುವುದೇ ಇಲ್ಲ. ರಾಜಕೀಯ ದುರುದ್ದೇಶಗಳನ್ನು ಸಾಧಿಸಿಕೊಳ್ಳಲು ಕೋಮು ವಿದ್ವೇಷಗಳನ್ನು ಸೃಷ್ಟಿಸುವುದಕ್ಕಾಗಿಯೇ ಇಂತಹ ಎಫ್‌ಐಆರ್‌ಗಳು ದಾಖಲಾಗುತ್ತವೆ.

ಈ ದೇಶದಲ್ಲಿ ಗೋಹತ್ಯೆ ನಿಷೇಧ ಅಥವಾ ಜಾನುವಾರು ಮಾರಾಟ ನಿಷೇಧ ಮತ್ತು ಧಾರ್ಮಿಕ ಮತಾಂತರ ಕಾಯ್ದೆಗಳನ್ನು ಜಾರಿಗೊಳಿಸಿರುವುದೇ ರಾಜಕೀಯ ದುರುದ್ದೇಶಗಳಿಗಾಗಿ. ಜಾನುವಾರು ಮಾರಾಟ ನಿಷೇಧ ಕಾಯ್ದೆ ಅಥವಾ ಗೋಹತ್ಯೆ ನಿಷೇಧದಿಂದ ಗೋವುಗಳ ಸಂಖ್ಯೆ ಹೆಚ್ಚಳವಾಗದೆ ಇಳಿಕೆಯಾಗುತ್ತಿದೆ. ಈ ಕಾಯ್ದೆಯಿಂದ ಅತಿ ಹೆಚ್ಚು ಬಾಧಿತರಾಗಿರುವುದು ಗ್ರಾಮೀಣ ಪ್ರದೇಶದ ರೈತರು. ಈ ಕಾಯ್ದೆಯಿಂದಾಗಿ ರೈತರು ತಾವು ಸಾಕಿ ಬೆಳೆಸಿದ ಗೋವುಗಳನ್ನು ಯಾರಿಗೆ, ಯಾವಾಗ, ಯಾವ ದರಕ್ಕೆ ಮಾರಬೇಕು ಎನ್ನುವ ಹಕ್ಕಿನಿಂದ ವಂಚಿತರಾದರು. ಇಂದು ಗ್ರಾಮೀಣ ಹೈನೋದ್ಯಮದ ಮೇಲೆ ಭಾರೀ ದುಷ್ಪರಿಣಾಮವನ್ನು ಬೀರಿದೆ ಮಾತ್ರವಲ್ಲ, ಗೋಸಾಕಣೆಯೊಂದಿಗೆ ಸಂಬಂಧವಿಲ್ಲದವರು ಇದರ ಲಾಭವನ್ನು ತಮ್ಮದಾಗಿಸಿಕೊಳ್ಳತೊಡಗಿದ್ದಾರೆ. ಗೋರಕ್ಷಕರ ವೇಷದಲ್ಲಿ ರೌಡಿಶೀಟರ್‌ಗಳು ರೈತರ ಜಾನುವಾರು ಮಾರಾಟಕ್ಕೆ ತಡೆಗೋಡೆಯಾದರು. ಕಾನೂನಿನ ಅನುಮತಿಗಿಂತಲೂ ಈ ನಕಲಿ ಗೋರಕ್ಷಕರ ಅನುಮತಿ ರೈತರಿಗೆ ಅತ್ಯಗತ್ಯವಾಯಿತು. ಈ ನಕಲಿ ಗೋರಕ್ಷಕರ ಜೊತೆಗೆ ಕಾನೂನು ಕೂಡ ಜಾನುವಾರು ವ್ಯಾಪಾರಿಗಳು ಮತ್ತು ರೈತರ ಪಾಲಿಗೆ ಕುಣಿಕೆಯಾಯಿತು. ಇಂದು ಅನುಪಯುಕ್ತ ಗೋವುಗಳು ರೈತರ ಪಾಲಿಗೆ ಭಾರವಾಗಿದ್ದು ಅದನ್ನು ಹಟ್ಟಿಯಲ್ಲಿಟ್ಟುಕೊಳ್ಳಲೂ ಆಗದೆ, ಮಾರಾಟ ಮಾಡಲೂ ಆಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಹೈನೋದ್ಯಮ ನಷ್ಟದಲ್ಲಿದೆ.

ಒಬ್ಬ ಯಾವ ಧರ್ಮವನ್ನು ಆಚರಿಸಬೇಕು, ಆಚರಿಸಬಾರದು ಎನ್ನುವುದು ಆತನ ಮೂಲಭೂತ ಹಕ್ಕಿನ ಭಾಗವಾಗಿದೆ. ನಂಬಿಕೆಯ ಪ್ರಶ್ನೆ ಇದಾಗಿರುವುದರಿಂದ, ಅದನ್ನು ಇನ್ನೊಬ್ಬ ನಿಯಂತ್ರಿಸುವುದು ಸಂವಿಧಾನದ ಉಲ್ಲಂಘನೆ. ಹಿಂದಿನ ಕಾಲದಂತೆ ಕತ್ತಿ ಹಿಡಿದೋ, ದೊಣ್ಣೆ ಹಿಡಿದೋ ಬಲವಂತವಾಗಿ ಮತಾಂತರಿಸುವ ವಾತಾವರಣ ಈಗ ಇಲ್ಲ. ಇದೇ ಸಂದರ್ಭದಲ್ಲಿ ಆಮಿಷ ಒಡ್ಡಿ ಮತಾಂತರ ಮಾಡಲಾಗುತ್ತಿದೆ ಎನ್ನುವ ಆರೋಪಗಳಿವೆ. ಇಷ್ಟಕ್ಕೂ ಯಾವುದು ಆಮಿಷ? ಯಾವುದು ಆಮಿಷ ಅಲ್ಲ? ಆಮಿಷ ಯಾವ ರೂಪದ್ದು? ಎನ್ನುವುದನ್ನು ನಿರ್ಧರಿಸುವುದೂ ಸುಲಭವಿಲ್ಲ. ಹಾಗೆಯೇ ವಿವಿಧ ರಾಜ್ಯಗಳ ರಾಜಕೀಯ ಧೋರಣೆಗಳಿಗೆ ತಕ್ಕಂತೆ ಈ ಮತಾಂತರ ಕಾಯ್ದೆಗಳಲ್ಲಿ ಬದಲಾವಣೆಗಳಿವೆ. ಮುಖ್ಯವಾಗಿ ಈ ದೂರನ್ನು ಯಾರು ನೀಡಬೇಕು? ಸಂತ್ರಸ್ತನ ಜೊತೆಗೆ ಯಾವುದೇ ಕೌಟುಂಬಿಕ ಸಂಬಂಧಗಳನ್ನು ಹೊಂದಿಲ್ಲದ ಮೂರನೇ ವ್ಯಕ್ತಿ ನೀಡಿದ ದೂರನ್ನು ಪರಿಗಣಿಸುವುದು ಎಷ್ಟು ಸರಿ? ಇದು ದುರುಪಯೋಗವಾಗುವ ಸಾಧ್ಯತೆಗಳಿಲ್ಲವೆ? ಎನ್ನುವ ಪ್ರಶ್ನೆಗಳು ಈಗಾಗಲೇ ಬಹಳಷ್ಟು ಚರ್ಚೆಗೆ ಒಳಗಾಗಿವೆ. ಈ ದೇಶದಲ್ಲಿ ಬಲವಂತದ ಮತಾಂತರಕ್ಕಿಂತ ದೊಡ್ಡ ಸಮಸ್ಯೆ ಜಾತಿ ಕಾರಣಕ್ಕಾಗಿ ಅನುಭವಿಸುತ್ತಿರುವ ದೌರ್ಜನ್ಯಗಳು. ತಾವು ನಂಬಿದ ಧರ್ಮದಲ್ಲಿ ನೆಮ್ಮದಿಯಿಂದ, ಸ್ವಾಭಿಮಾನದಿಂದ ಬದುಕುವ ವಾತಾವರಣ ಇಲ್ಲದೇ ಇರುವುದು ಮತಾಂತರಕ್ಕೆ ಮುಖ್ಯ ಕಾರಣವಾಗಿದೆ. ಇಂದಿಗೂ ಜಾತಿ ಶೋಷಣೆಯಿಂದ ಬಿಡುಗಡೆಗೊಳ್ಳುವ ಏಕೈಕ ಉದ್ದೇಶದಿಂದಲೇ ದೊಡ್ಡ ಸಂಖ್ಯೆಯ ದಲಿತರು ಬೌದ್ಧ ಧರ್ಮಕ್ಕೆ ಪ್ರತೀ ವರ್ಷ ಮತಾಂತರವಾಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೆಲವರು ಇತರ ಧರ್ಮಗಳನ್ನೂ ಆಯ್ಕೆ ಮಾಡಿಕೊಳ್ಳುತ್ತಾರೆ. ಮತಾಂತರವನ್ನು ತಡೆಯಬೇಕಾದರೆ ಮೊತ್ತ ಮೊದಲಾಗಿ ತಮ್ಮ ಧರ್ಮದೊಳಗಿರುವ ಜಾತಿ ವ್ಯವಸ್ಥೆಯನ್ನು, ಶೋಷಣೆಯನ್ನು ನಿವಾರಿಸುವುದಕ್ಕೆ ಆಯಾ ಧರ್ಮೀಯರು ಕ್ರಮ ತೆಗೆದುಕೊಳ್ಳಬೇಕು. ಈ ದೌರ್ಜನ್ಯಗಳನ್ನು ತಡೆಯಲು ಕಾನೂನನ್ನು ಕಠಿಣ ಗೊಳಿಸಿದಾಕ್ಷಣ ಮತಾಂತರಗಳು ತನ್ನಷ್ಟಕ್ಕೆ ಕಡಿಮೆಯಾಗುತ್ತವೆ. ವಿಪರ್ಯಾಸವೆಂದರೆ, ಅದನ್ನು ಮಾಡುವ ಬದಲು ಮತಾಂತರವನ್ನು ತಡೆಯಲು ಸರಕಾರ ಕಠಿಣ ಕಾಯ್ದೆಯನ್ನು ಜಾರಿಗೊಳಿಸಿತು. ಈ ಮೂಲಕ ಜಾತಿ ಶೋಷಣೆಯನ್ನು ಪರೋಕ್ಷವಾಗಿ ಕಾನೂನು ಬದ್ಧಗೊಳಿಸುವ ಪ್ರಯತ್ನ ನಡೆದಿದೆ. ಎಷ್ಟೇ ದೌರ್ಜನ್ಯಗಳು, ಅಸಮಾನತೆಗಳು ಇದ್ದರೂ ನೀವು ಅದನ್ನು ಅನುಭವಿಸುತ್ತಾ ಇಲ್ಲೇ ಉಳಿಯಬೇಕು ಎಂದು ಪರೋಕ್ಷವಾಗಿ ಆದೇಶ ನೀಡಿದಂತಾಗಿದೆ. ಈ ಕಾರಣಕ್ಕಾಗಿಯೇ ಶೋಷಿತರ ಪಾಲಿಗೆ ಮತಾಂತರ ನಿಷೇಧ ಕಾಯ್ದೆ ಅತ್ಯಂತ ಅಮಾನವೀಯವಾದುದು ಮತ್ತು ಸಂವಿಧಾನ ವಿರೋಧಿಯಾದುದಾಗಿದೆ.

ಒಬ್ಬ ಮತಾಂತರಗೊಳ್ಳಬೇಕಾದರೆ ಜಿಲ್ಲಾಡಳಿತದ ಪೂರ್ವಾನುಮತಿ ಪಡೆದುಕೊಳ್ಳಬೇಕು ಎನ್ನುವುದು ಮತಾಂತರಗೊಳ್ಳುವ ವ್ಯಕ್ತಿಯ ಖಾಸಗಿತನದ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಬೇರೆ ಬೇರೆ ರಾಜಕೀಯ ಶಕ್ತಿಗಳಿಂದ ಆತನಿಗೆ ಒತ್ತಡಗಳನ್ನು ಹಾಕಿ ಮತಾಂತರಗಳನ್ನು ತಡೆಯಲು ಇದು ಅನುಕೂಲ ಮಾಡಿಕೊಡುತ್ತದೆ. ಜೀವ ಬೆದರಿಕೆ, ಹಲ್ಲೆಗಳೂ ಈ ಸಂದರ್ಭದಲ್ಲಿ ನಡೆಯಬಹುದು. ಬಲವಂತವಾಗಿ ಮತಾಂತರಗೊಳಿಸುವುದು ಎಷ್ಟು ತಪ್ಪೋ, ಮತಾಂತರಗೊಳ್ಳುವುದನ್ನು ಬೆದರಿಸಿ ತಡೆಯುವುದು ಅಷ್ಟೇ ತಪ್ಪು. ಇದರ ಜೊತೆ ಜೊತೆಗೇ ಅಂತರ್‌ಧರ್ಮೀಯ ವಿವಾಹಿತರ ಮೇಲೆ ಅಕ್ರಮವಾಗಿ ಈ ಕಾಯ್ದೆಯನ್ನು ಬಳಸಿ ಅವರ ವಿರುದ್ಧ ನಿರಂತರ ದಾಳಿಗಳು ನಡೆಯುತ್ತಿವೆ.

ಕರ್ನಾಟಕದಲ್ಲಿ ಮತಾಂತರ ಕಾಯ್ದೆಯನ್ನು ಹಿಂದೆಗೆಯುವುದಾಗಿ ಕಾಂಗ್ರೆಸ್ ಪಕ್ಷ ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿತ್ತು. ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರವನ್ನು ತೆಗೆದುಕೊಂಡಿದೆಯಾದರೂ, ಅದನ್ನು ಸಂಪೂರ್ಣ ರದ್ದುಗೊಳಿಸಲು ಶಾಸನಾತ್ಮಕವಾಗಿ ಯಾವುದೇ ಅಗತ್ಯ ಕ್ರಮ ತೆಗೆದುಕೊಂಡಿಲ್ಲ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ದುರುಪಯೋಗ ನಿರಂತರವಾಗಿ ನಡೆಯುತ್ತಲೇ ಇದೆ. ಅಮಾಯಕರು ಮಾಡದ ತಪ್ಪಿಗೆ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿ ಇಳಿಯುತ್ತಲೇ ಇದ್ದಾರೆ. ಸುಪ್ರೀಂಕೋರ್ಟ್ ವ್ಯಕ್ತಪಡಿಸಿದ ಕಳವಳವನ್ನು ಗಂಭೀರವಾಗಿ ತೆಗೆದುಕೊಂಡು, ಇನ್ನಾದರೂ ಈ ಕಾಯ್ದೆಯನ್ನು ರದ್ದುಗೊಳಿಸುವುದಕ್ಕೆ ಸರಕಾರ ದೃಢ ಹೆಜ್ಜೆ ಮುಂದಿಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News