ಶಾಂತಿಯನ್ನು ಅಣಕಿಸುವ ಶಾಂತಿ ನೊಬೆಲ್
ಮರಿಯಾ ಕೊರಿನಾ ಮಚಾದೊ|ಡೊನಾಲ್ಡ್ ಟ್ರಂಪ್ (PC: ndtv.com)
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈಬಾರಿಯ ಶಾಂತಿ ನೊಬೆಲ್‌ಗೆ ವೆನೆಝುವೆಲಾದ ವಿರೋಧ ಪಕ್ಷದ ನಾಯಕಿ ಮರಿಯಾ ಕೊರಿನಾ ಮಚಾದೊ ಅವರು ಆಯ್ಕೆಯಾಗಿದ್ದಾರೆ. ವೆನೆಝುವೆಲಾದ ಸರ್ವಾಧಿಕಾರಿ ಪ್ರಭುತ್ವದ ವಿರುದ್ಧ ನಡೆಸುತ್ತಿರುವ ಹೋರಾಟ ಮತ್ತು ಪ್ರಜಾಪ್ರಭುತ್ವ ಸ್ಥಾಪನೆಗೆ ನಡೆಸಿದ ಪ್ರಯತ್ನವನ್ನು ಪರಿಗಣಿಸಿ ಅವರನ್ನು ಶಾಂತಿ ನೊಬೆಲ್‌ಗೆ ಆರಿಸಲಾಗಿದೆ ಎಂದು ನೊಬೆಲ್ ಸಮಿತಿ ಹೇಳಿಕೊಂಡಿದೆ. ಮರಿಯಾ ಅವರಿಗೆ ಶಾಂತಿ ನೊಬೆಲ್ ಸಿಕ್ಕಿರುವುದಕ್ಕಿಂತಲೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಈ ಪ್ರಶಸ್ತಿ ಸಿಗಲಿಲ್ಲವಲ್ಲ ಎಂದು ಕೆಲವರು ಸಮಾಧಾನ ಪಡುತ್ತಿದ್ದಾರೆ. ಈ ಬಾರಿ ಶಾಂತಿ ನೊಬೆಲ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಯಂಘೋಷಿತ ಅಭ್ಯರ್ಥಿಯಾಗಿದ್ದರು. ಜಗತ್ತಿನಲ್ಲಿ ಶಾಂತಿ ವರ್ಷದಿಂದ ವರ್ಷಕ್ಕೆ ದುಬಾರಿಯಾಗುತ್ತಾ ಹೋಗುತ್ತಿರುವುದರಿಂದ, ಶಾಂತಿ ನೊಬೆಲ್ ಘೋಷಣೆಯೂ ಪ್ರತಿ ಬಾರಿ ಚರ್ಚೆಯ ವಿಷಯವಾಗುತ್ತಿರುತ್ತದೆ. ಯಾವುದು ಶಾಂತಿ? ಯಾವುದು ಅಶಾಂತಿ? ಯಾವುದು ಭಯೋತ್ಪಾದನೆ? ಯಾವುದು ಭಯೋತ್ಪಾದನಾ ವಿರುದ್ಧದ ಹೋರಾಟ? ಎಂಬಿತ್ಯಾದಿಗಳನ್ನು ಅಮೆರಿಕವೇ ನಿರ್ಧರಿಸುತ್ತಾ ಬರುತ್ತಿರುವುದರಿಂದ, ನೊಬೆಲ್ ಶಾಂತಿ ಪ್ರಶಸ್ತಿಯ ಆಯ್ಕೆ ಅಮೆರಿಕದ ಮೂಗಿನ ನೇರಕ್ಕಿರುತ್ತದೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಅಮೆರಿಕದ ರಾಜಕೀಯ ಹಿತಾಸಕ್ತಿಗೆ ಪೂರಕವಾಗಿ ಶ್ರಮಿಸಿದವರನ್ನು ಈ ಮೂಲಕ ಗುರುತಿಸಿ, ಅವರಿಗೆ ಜಾಗತಿಕ ಮಾನ್ಯತೆಯನ್ನು ನೀಡುವುದು ಶಾಂತಿ ನೊಬೆಲ್‌ನ ಉದ್ದೇಶ ಎಂದು ಹಲವರು ವ್ಯಾಖ್ಯಾನಿಸುತ್ತಾ ಬರುತ್ತಿದ್ದಾರೆ.
ಈ ಬಾರಿಯ ಶಾಂತಿ ನೊಬೆಲ್ ಪರೋಕ್ಷವಾಗಿ ಟ್ರಂಪ್‌ಗೆ ಸಂದಾಯವಾಗಿರುವುದು ಎನ್ನುವುದನ್ನು ಸ್ವತಃ ಮರಿಯಾ ಕೊರಿನಾ ಮಚಾದೊ ಅವರೇ ಒಪ್ಪಿಕೊಂಡಿದ್ದಾರೆ. ತಮಗೆ ಸಿಕ್ಕಿದ ನೊಬೆಲ್ ಪ್ರಶಸ್ತಿಯನ್ನು ಅವರು ವೆನೆಝುವೆಲಾ ಜನತೆಗೆ ಮಾತ್ರವಲ್ಲದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೂ ಅರ್ಪಿಸಿದ್ದಾರೆ. ಈ ಮೂಲಕ ಅವರ ಹೋರಾಟದ ಹಿಂದೆ ಅಮೆರಿಕದ ಹಸ್ತಕ್ಷೇಪವಿರುವುದನ್ನು ಒಪ್ಪಿಕೊಂಡಂತಾಗಿದೆ. ವೆನೆಝುವೆಲಾವನ್ನು ಸರ್ವಾಧಿಕಾರಿ ಶಕ್ತಿಗಳಿಂದ ಮುಕ್ತಗೊಳಿಸುವುದೆಂದರೆ, ಅದನ್ನು ಅಮೆರಿಕದ ಹಿತಾಸಕ್ತಿಗೆ ಪೂರಕವಾಗಿಸುವುದು ಎಂದು ಮರಿಯಾ ತಿಳಿದುಕೊಂಡಿದ್ದರೆ, ಅಂತಹ ಪ್ರಜಾಪ್ರಭುತ್ವ ವೆನೆಝುವೆಲಾಕ್ಕೆ ಯಾವತ್ತೂ ಶಾಂತಿಯನ್ನು ತರಲಾರದು. ಅಮೆರಿಕ ಹಸ್ತಕ್ಷೇಪ ಮಾಡಿದ ಯಾವುದೇ ದೇಶಗಳು ತಮ್ಮ ಸಾರ್ವಭೌಮತೆಯನ್ನು ಉಳಿಸಿಕೊಂಡಿಲ್ಲ. ಮರಿಯಾ ಅವರು ಸಮಾಜವಾದಿ ಸಿದ್ಧಾಂತದ ಜೊತೆಗೆ ಅಸಮಾಧಾನವನ್ನು ಹೊಂದಿದ್ದಾರೆ ಮತ್ತು ವೆನೆಝುವೆಲಾದ ಹಿತಾಸಕ್ತಿಯನ್ನು ಅಮೆರಿಕಕ್ಕೆ ಬಲಿಕೊಡುತ್ತಿದ್ದಾರೆ ಎನ್ನುವ ಆರೋಪಗಳಿಗೆ ಸ್ವತಃ ಮರಿಯಾ ಅವರ ಹೇಳಿಕೆಯೇ ಪುಷ್ಟಿ ನೀಡುತ್ತಿದೆ. ಇಷ್ಟಕ್ಕೂ ಅಮೆರಿಕವು ಜಗತ್ತಿನ ಹಲವು ಸರ್ವಾಧಿಕಾರಿ ದೇಶಗಳ ಜೊತೆಗೆ ಅತ್ಯಂತ ಆತ್ಮೀಯ ಸಂಬಂಧಗಳನ್ನು ಹೊಂದಿದೆ. ತನ್ನ ಹಿತಾಸಕ್ತಿಗೆ ಪೂರಕವಾಗಿದ್ದರೆ ಅದು ಸರ್ವಾಧಿಕಾರಿಗಳನ್ನು ಬೆಂಬಲಿಸುತ್ತದೆ ಎನ್ನುವುದನ್ನು ಅಮೆರಿಕ ಈಗಾಗಲೇ ಹಲವು ಬಾರಿ ಸಾಬೀತು ಮಾಡಿದೆ. ಹೀಗಿರುವಾಗ ವೆನೆಝುವೆಲಾದಲ್ಲಿ ಪ್ರಜಾಸತ್ತೆಯ ಸ್ಥಾಪನೆಗಾಗಿ ಅಮೆರಿಕ ಯಾಕೆ ತುಡಿಯುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಿಲ್ಲ.
ದುರಂತವೆಂದರೆ ಗಾಝಾ ನರಮೇಧವನ್ನು ಈಕೆ ಪರೋಕ್ಷವಾಗಿ ಬೆಂಬಲಿಸಿದ್ದರು. ಇಸ್ರೇಲನ್ನು ತನ್ನ ಮಿತ್ರನೆಂದು ಬಗೆಯುತ್ತಾರೆ. ಇದನ್ನು ಈಗಾಗಲೇ ಬಹಿರಂಗವಾಗಿ ಹಲವು ಬಾರಿ ಹೇಳಿಕೊಂಡಿದ್ದಾರೆ. ಗಾಝಾದಲ್ಲಿ ಮಕ್ಕಳು, ಮಹಿಳೆಯರ ಸಾವು ನೋವುಗಳನ್ನು ಕಂಡೂ ಅದರ ವಿರುದ್ಧ ನಿಲುವುಗಳನ್ನು ತಳೆಯಲು ಮರಿಯಾ ಅವರು ವಿಫಲರಾಗಿದ್ದಾರೆ. ಗಾಝಾದಲ್ಲಿ ನಡೆಯುತ್ತಿರುವ ನರಮೇಧಗಳನ್ನು ವರದಿ ಮಾಡಲು ತೆರಳಿದ ನೂರಾರು ಪತ್ರಕರ್ತರು, ಮಾನವ ಹಕ್ಕು ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಇಸ್ರೇಲ್‌ನಿಂದ ಕೊಲ್ಲಲ್ಪದ್ದಾರೆ. ಇವೆೆಲ್ಲವೂ ಮರಿಯಾ ಅವರ ಗಮನಕ್ಕೆ ಬಂದೇ ಇಲ್ಲ. ಹಾಗಾದರೆ ಅವರು ವೆನೆಝುವೆಲಾದಲ್ಲಿ ಎಂತಹ ಶಾಂತಿಯನ್ನು ಬಯಸುತ್ತಾರೆ? ವೆನೆಝುವೆಲಾದ ಪ್ರಭುತ್ವದಲ್ಲಿ ಸರ್ವಾಧಿಕಾರವನ್ನು ಕಾಣುವ ಮರಿಯಾ ಅವರಿಗೆ ಇಸ್ರೇಲ್ ಪ್ರಜಾಪ್ರಭುತ್ವದ ಹರಿಕಾರನಾಗಿ ಕಾಣುತ್ತಿರುವುದಾದರೂ ಹೇಗೆ? ಪ್ರಜಾಪ್ರಭುತ್ವದ ಮುಖವಾಡ ಹಾಕಿಕೊಂಡು ಲಕ್ಷಾಂತರ ಮಹಿಳೆಯರು, ಮಕ್ಕಳ ಹತ್ಯಾಕಾಂಡ ನಡೆಸುವುದು ಮಾನ್ಯವಾಗುವುದಾದರೆ ಅಂತಹ ಪ್ರಜಾಸತ್ತೆಯಿಂದ ಜಗತ್ತಿನಲ್ಲಿ ಶಾಂತಿ ನೆಲೆಸುವುದು ಸಾಧ್ಯವೆ? ಈ ಪ್ರಶ್ನೆಗಳನ್ನು ಜಗತ್ತಿನ ಪ್ರಜ್ಞಾವಂತರು ಕೇಳುತ್ತಿದ್ದಾರೆ. ಗಾಝಾದಲ್ಲಿ ಮಕ್ಕಳು, ಮಹಿಳೆಯರ ಬರ್ಬರ ಹತ್ಯಾಕಾಂಡ ನಡೆಯುತ್ತಿರುವ ಹೊತ್ತಿನಲ್ಲೇ ಇಸ್ರೇಲನ್ನು ಬೆಂಬಲಿಸುವ ಮರಿಯಾ ಮಚಾದೊ ಅವರಿಗೆ ಶಾಂತಿ ನೊಬೆಲ್ ಸಿಕ್ಕಿರುವುದು ಶಾಂತಿಯ ಕ್ರೂರ ಅಣಕವೇ ಸರಿ. ಇದಕ್ಕಿಂತಲೂ ನೇರವಾಗಿ ಡೊನಾಲ್ಡ್ ಟ್ರಂಪ್ ಅವರಿಗೇ ಈ ಪ್ರಶಸ್ತಿಯನ್ನು ನೀಡಬಹುದಿತ್ತು. ಅಲ್ಲಿಗೆ ಪ್ರಶಸ್ತಿಯ ಯೋಗ್ಯತೆ ಜಗತ್ತಿಗೆ ಸ್ಪಷ್ಟವಾಗಿ ಬಿಡಬಹುದಿತ್ತು.
ಟ್ರಂಪ್ ಅವರು ತನ್ನನ್ನು ತಾನೇ ಪ್ರಶಸ್ತಿಗೆ ಅರ್ಹ ಎಂದು ಘೋಷಿಸಿಕೊಂಡಿರುವುದೇ ಶಾಂತಿ ನೊಬೆಲ್‌ನ ವಿಶ್ವಾಸಾರ್ಹತೆ ಎಂತಹ ದೈನೇಸಿ ಸ್ಥಿತಿಗೆ ಬಂದು ನಿಂತಿದೆ ಎನ್ನುವುದನ್ನು ಹೇಳುತ್ತದೆ. ‘ಯುದ್ಧಗಳನ್ನು ನಾನು ನಿಲ್ಲಿಸಿದೆ’ ಎನ್ನುವ ಅಮೆರಿಕವೇ ಜಗತ್ತಿನ ಬಹುತೇಕ ಯುದ್ಧಗಳನ್ನು ಪ್ರಾಯೋಜಿಸುತ್ತಾ ಬಂದಿದೆ. ತನ್ನ ಆರ್ಥಿಕ ಸ್ಥಿರತೆಗೆ ಶಸ್ತ್ರಾಸಗಳನ್ನು ಮಾರಾಟ ಮಾಡುವುದನ್ನೇ ನೆಚ್ಚಿಕೊಂಡಿರುವ ದೇಶವೊಂದು ಶಾಂತಿಯ ವಾರಸುದಾರನೆಂದು ಹೇಳಿಕೊಳ್ಳುವುದೇ ಅತಿ ದೊಡ್ಡ ವಿಪರ್ಯಾಸವಾಗಿದೆ. ಗಾಝಾದಲ್ಲಿ ನಡೆಯುತ್ತಲೇ ಇರುವ ನಾಗರಿಕರ ಭಯಾನಕ ನರಮೇಧದಲ್ಲಿ ಅಮೆರಿಕ ನೇರ ಪಾತ್ರವನ್ನು ವಹಿಸಿರುವುದು ಜಗತ್ತಿಗೆ ತಿಳಿಯದ್ದೇನೂ ಅಲ್ಲ. ಕಳೆದ ವರ್ಷ ಇದೇ ಶಾಂತಿ ನೊಬೆಲ್‌ನ್ನು ಪರಮಾಣು ನಿಶಸ್ತ್ರೀಕರಣಕ್ಕಾಗಿ ಶ್ರಮಿಸುತ್ತಿರುವ ನಿಹೋನ್ ಹಿಡಾಂಕ್ಯೋ ಸಂಸ್ಥೆಗೆ ನೀಡಲಾಗಿತ್ತು. ಆದರೆ ಇಂದು ಗಾಝಾದಲ್ಲಿ ನಡೆಯುತ್ತಿರುವ ಹತ್ಯಾಕಾಂಡ ಯಾವುದೇ ಹಿರೋಶಿಮಾ, ನಾಗಸಾಕಿ ದುರಂತಕ್ಕಿಂತ ಬಿನ್ನವಾಗಿಲ್ಲ. ಪರಮಾಣು ಶಸ್ತ್ರಾಸ್ತ್ರವಿಲ್ಲ ಎನ್ನುವ ಒಂದೇ ಒಂದು ಧೈರ್ಯದಿಂದ ಅಮೆರಿಕ, ರಶ್ಯದಂತಹ ದೇಶಗಳು ಹಲವು ದುರ್ಬಲ ದೇಶಗಳ ಮೇಲೆ ದಾಳಿ ನಡೆಸಿವೆ. ಇಂದು ಈ ಜಗತ್ತಿನಲ್ಲಿ ಒಂದಿಷ್ಟಾದರೂ ಶಾಂತಿ ನೆಲೆಸಿದೆಯಾದರೆ ಅದರ ಹೆಗ್ಗಳಿಕೆ ಪರಮಾಣು ಶಸ್ತ್ರಾಸ್ತ್ರಕ್ಕೆ ಸಲ್ಲಬೇಕು ಎನ್ನುವುದು ಕಟು ವಾಸ್ತವವಾಗಿದೆ. ಪರಮಾಣು ಶಸ್ತ್ರಾಸ್ತ್ರ ಪ್ರಯೋಗದ ಭಯದಿಂದ ಹಲವು ದೇಶಗಳು ಹಲವು ದೇಶಗಳ ಮೇಲೆ ದಾಳಿ ನಡೆಸದೆ ಸಂಯಮವನ್ನು ಕಾಪಾಡಿಕೊಳ್ಳುತ್ತಿವೆ. ಉಕ್ರೇನ್ ಜನ್ಮತಳೆದಾಗ ಅದರ ಬಳಿ ಇದ್ದ ಪರಮಾಣು ಶಸ್ತ್ರವನ್ನು ತ್ಯಜಿಸುವಂತೆ ಮಾಡಲಾಯಿತು. ಇಂದು ಅದರ ಪರಿಣಾಮವನ್ನು ಉಕ್ರೇನ್ ಅನುಭವಿಸುತ್ತಿದೆ. ಒಬಾಮ, ಸೂಕಿ, ಮರಿಯಾ ಮೊದಲಾದವರಿಗೆ ಶಾಂತಿ ಪ್ರಶಸ್ತಿಯನ್ನು ನೀಡಿರುವುದನ್ನು ಗಮನಿಸಿದಾಗ, ತಾತ್ಕಾಲಿಕವಾಗಿಯಾದರೂ ಜಗತ್ತಿನಲ್ಲಿ ಹಲವು ಯುದ್ಧಗಳನ್ನು ತಡೆದು ನಿಲ್ಲಿಸಿರುವ ಪರಮಾಣು ಶಸ್ತ್ರಾಸ್ತ್ರಕ್ಕೇ ಅಧಿಕೃತವಾಗಿ ‘ಶಾಂತಿ ನೊಬೆಲ್’ನ್ನು ಯಾಕೆ ನೀಡಬಾರದು? ಎನ್ನುವ ಪ್ರಶ್ನೆ ಏಳುತ್ತದೆ.