ಬಿಡುಗಡೆಯಾಗದ ಬರ ಪರಿಹಾರ

Update: 2024-03-26 05:11 GMT

Photo: freepik

ಹಿಂದೆಂದೂ ಕಂಡರಿಯದ ಭೀಕರ ಬರಗಾಲದ ದವಡೆಗೆ ಕರ್ನಾಟಕ ಸಿಲುಕಿದೆ. ರಾಜ್ಯದಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿದೆ. ಒಟ್ಟು 35,162.05 ಕೋಟಿ ರೂಪಾಯಿ ಬೆಳೆ ನಷ್ಟವಾಗಿದೆ. ರೈತರ ಬೆಳೆಗಳು ಒಣಗಿ ಹೋಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್.ಡಿ.ಆರ್.ಎಫ್) 18,171.44 ಕೋಟಿ ರೂಪಾಯಿ ನೆರವು ಕೋರಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿ ಆರು ತಿಂಗಳ ಮೇಲಾದರೂ ಈ ವರೆಗೆ ಈ ಮನವಿಗೆ ಸ್ಪಂದಿಸಿಲ್ಲ.ರಾಜ್ಯದ ಜನ ಪ್ರಾಣ ಸಂಕಟ ಅನುಭವಿಸುತ್ತಿರುವಾಗಲೂ ನೆರವಿಗೆ ಬಾರದ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಬಗ್ಗೆ ಸಹಜವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ವಿಪತ್ತು ಪರಿಹಾರ ನಿಧಿಯಿಂದ ನೆರವು ಕೊಡಿಸುವಂತೆ ಕೇಂದ್ರ ಗೃಹ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಸಂವಿಧಾನದ 14 ಮತ್ತು 21ನೇ ವಿಧಿಯನ್ವಯ ಸುಪ್ರೀಂ ಕೋರ್ಟಿಗೆ ರಾಜ್ಯ ಸರಕಾರ ರಿಟ್ ಅರ್ಜಿ ಸಲ್ಲಿಸಿದೆ.ಬರಗಾಲದ ಸಂಕಷ್ಟದ ಸನ್ನಿವೇಶದಲ್ಲಿ ಕೇಂದ್ರ ಸರಕಾರ ನೆರವು ನೀಡುವುದು ಸಾಂವಿಧಾನಿಕ ಹೊಣೆಗಾರಿಕೆ ಮಾತ್ರವಲ್ಲ ಸಹಜ ಮಾನವೀಯ ಕರ್ತವ್ಯ. ಇದರಲ್ಲಿ ಪಕ್ಷ ರಾಜಕೀಯ ಅಡ್ಡಿಯಾಗಬಾರದು.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ನೆರವು ಕೋರಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿರುವುದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಅಸಮಾಧಾನವನ್ನುಂಟು ಮಾಡಿದೆ. ರಾಜ್ಯದ ಬರ ಪೀಡಿತ ಜನರ ಪರವಾಗಿ ನಿಲ್ಲಬೇಕಾಗಿದ್ದ ಕರ್ನಾಟಕದ ಬಿಜೆಪಿ ನಾಯಕರೂ ನಿರ್ಮಲಾ ಸೀತಾರಾಮನ್ ಅವರ ಮಾತಿಗೆ ದನಿ ಗೂಡಿಸಿದ್ದಾರೆ. ಕರ್ನಾಟಕ ಸಂಕಷ್ಟದ ಸುಳಿಗೆ ಸಿಲುಕಿದಾಗಲೆಲ್ಲ ಕೇಂದ್ರ ಸರಕಾರ ಈ ರೀತಿ ಅಸಹಕಾರ ತೋರಿಸುತ್ತಲೇ ಬಂದಿದೆ. ಕೋವಿಡ್ ಕಾಲದಲ್ಲಿ ಹಾಗೂ ರಾಜ್ಯದಲ್ಲಿ ನೆರೆ ಹಾವಳಿ ಉಂಟಾದಾಗ ಕೇಂದ್ರ ನೆರವಿಗೆ ಬರಲೇ ಇಲ್ಲ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ ಎಂಬುದನ್ನು ಮೋದಿ ಸರಕಾರ ಮರೆತಂತೆ ಕಾಣುತ್ತದೆ.

ಕಳೆದ ವರ್ಷ ಮಳೆ ಕೈ ಕೊಟ್ಟಿತು. ರಾಜ್ಯದ 240 ತಾಲೂಕುಗಳ ಪೈಕಿ 223 ತಾಲೂಕುಗಳು ಬರಪೀಡಿತ ಎಂದು ಸರಕಾರ ಈಗಾಗಲೇ ಘೋಷಿಸಿದೆ. ನಾಲ್ಕು ಸಲ ಮೌಲ್ಯಮಾಪನವನ್ನು ಮಾಡಲಾಗಿದೆ. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ನಷ್ಟ ಆಗಿದೆ. ಈ ಬಗ್ಗೆ ಮೂರು ಬಾರಿ ಮನವಿ ಮಾಡಿಕೊಂಡರೂ ಕೇಂದ್ರ ಸರಕಾರ ಅಮಾನವೀಯ ನಿರ್ಲಕ್ಷ್ಯ ತಾಳಿರುವುದು ಸರಿಯಲ್ಲ. ರಾಜ್ಯ ಸರಕಾರ ಪದೇ ಪದೇ ಮನವಿ ಮಾಡಿಕೊಂಡ ನಂತರ ಕೇಂದ್ರ ತಂಡ ತಡವಾಗಿ ಅಕ್ಟೋಬರ್ ತಿಂಗಳಿನಲ್ಲಿ ಬಂದು ಪರಿಶೀಲನೆ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಿದೆ.ವರದಿ ಸಲ್ಲಿಸಿದ ಒಂದು ತಿಂಗಳಿನಲ್ಲಿ ರಾಜ್ಯಕ್ಕೆ ಬರ ಪರಿಹಾರ ನೀಡುವ ಬಗ್ಗೆ ಕೇಂದ್ರ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುವುದು ನಿಯಮ. ಆದರೆ ಇದುವರೆಗೆ ಕೇಂದ್ರ ಸರಕಾರ ರಾಜ್ಯದ ಮನವಿಗೆ ಸ್ಪಂದಿಸಿಲ್ಲ. ಕೊನೆಗೆ ಸ್ವತ ಕೃಷಿ ಸಚಿವ ಕೃಷ್ಣ ಭೈರೇಗೌಡರು ದಿಲ್ಲಿಗೆ ಹೋದರೂ ಕೇಂದ್ರ ಸಚಿವರು ಭೇಟಿಗೆ ಅವಕಾಶ ನೀಡಲಿಲ್ಲ. ಇದಾದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಕೃಷ್ಣ ಭೈರೇಗೌಡರು ಡಿಸೆಂಬರ್ 19ರಂದು ದಿಲ್ಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಮಾಡಿದ ನಂತರವೂ ಪ್ರಯೋಜನವಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಗಿದೆ.

ಸಂಪನ್ಮೂಲಗಳ ಹಂಚಿಕೆಯ ಪ್ರಶ್ನೆಯಲ್ಲೂ ಕರ್ನಾಟಕ ಮಾತ್ರವಲ್ಲ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಬಗ್ಗೆ ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳ ಬಗ್ಗೆ ಕೇಂದ್ರ ಸರಕಾರ ಪಕ್ಷಪಾತ ಮಾಡುತ್ತಲೇ ಬಂದಿದೆ ಎಂಬುದು ಬರೀ ಆರೋಪವಲ್ಲ. ಅಂಕಿ ಸಂಖ್ಯೆಗಳೇ ಸತ್ಯದ ಮೇಲೆ ಬೆಳಕು ಚೆಲ್ಲುತ್ತವೆ. 2023-24ನೇ ಸಾಲಿನ ಕೇಂದ್ರದ ಮೋದಿ ಸರಕಾರದ ಮುಂಗಡಪತ್ರದಲ್ಲಿ ಉತ್ತರ ಭಾರತದ ಮೂರು ರಾಜ್ಯಗಳಿಗೆ ಕೇಂದ್ರದಿಂದ 2,31,207 ಕೋಟಿ ರೂಪಾಯಿ ನೇರ ತೆರಿಗೆಯ ಪಾಲನ್ನು ನೀಡಲಾಗಿದೆ. ಆದರೆ ದಕ್ಷಿಣ ಭಾರತದ ಮೂರು ರಾಜ್ಯಗಳಿಗೆ ಕೇವಲ 62,245 ಕೋಟಿ ರೂಪಾಯಿ ಮಾತ್ರ ನೀಡಲಾಗಿದೆ. ಇದು ಪಕ್ಷಪಾತವಲ್ಲದೆ ಮತ್ತೇನು?

ವಾಸ್ತವವಾಗಿ ಉತ್ತರ ಭಾರತದ ರಾಜ್ಯಗಳಿಗಿಂತ ದಕ್ಷಿಣ ಭಾರತದ ರಾಜ್ಯಗಳು ಹೆಚ್ಚು ತೆರಿಗೆಯನ್ನು ಪಾವತಿ ಮಾಡುತ್ತವೆ. ಉದಾಹರಣೆಗೆ 2021-22ನೇ ವರ್ಷದಲ್ಲಿ ದಕ್ಷಿಣದ ಮೂರು ರಾಜ್ಯಗಳು ಶೇ. 20ರಷ್ಟು ನೇರ ತೆರಿಗೆಯನ್ನು ಪಾವತಿಸಿವೆ. ಆದರೆ ಉತ್ತರದ ರಾಜ್ಯಗಳು ಕೇವಲ ಶೇ. 4ರಷ್ಟು ತೆರಿಗೆಯನ್ನು ಪಾವತಿಸಿವೆ. ರಾಜ್ಯದಿಂದ ಕೇಂದ್ರಕ್ಕೆ ಹೋಗುವ ಪ್ರತೀ ಒಂದು ರೂಪಾಯಿ ತೆರಿಗೆಗೆ ಉತ್ತರ ಪ್ರದೇಶ ವಾಪಸ್ ಪಡೆಯುವುದು 1.78 ರೂಪಾಯಿ. ಆದರೆ ಕರ್ನಾಟಕ ಪಡೆಯುವುದು ಕೇವಲ 47 ಪೈಸೆ ಮಾತ್ರ. ಈ ಪಕ್ಷಪಾತದ ನೀತಿ ಒಕ್ಕೂಟ ವ್ಯವಸ್ಥೆಗೆ ಅಪಚಾರ ಮಾಡಿದಂತೆ.

ಹಣಕಾಸು ಆಯೋಗವು ಕರ್ನಾಟಕ ರಾಜ್ಯಕ್ಕೆ ವಿಶೇಷ ಅನುದಾನವನ್ನು ಶಿಫಾರಸು ಮಾಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿರುವುದು ಸತ್ಯಾಂಶದಿಂದ ಕೂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿಕ್ರಿಯೆ ನೀಡಿರುವುದು ಸರಿಯಾಗಿದೆ. 2020-21ರ 15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯು ಮೂರು ರಾಜ್ಯಗಳಿಗೆ 6,764 ಕೋಟಿ ರೂಪಾಯಿ ಮಂಜೂರು ಮಾಡಿದೆ. ಅದರಲ್ಲಿ ಕರ್ನಾಟಕಕ್ಕೆ 5,495 ಕೋಟಿ ರೂಪಾಯಿ ನೀಡಲು ಶಿಫಾರಸು ಮಾಡಿದೆ. ಮತ್ತೊಮ್ಮೆ ಈ ಹಣಕಾಸು ಆಯೋಗದ ಅಂತಿಮ ವರದಿಯಲ್ಲಿ ಕರ್ನಾಟಕಕ್ಕೆ 6,000 ಕೋಟಿ ರೂಪಾಯಿ ನೀಡಲು ಶಿಫಾರಸು ಮಾಡಿದೆ. ಈ ಶಿಫಾರಸುಗಳನ್ನು ಸ್ವೀಕರಿಸಲು ಕೇಂದ್ರ ಸರಕಾರ ತಯಾರಿಲ್ಲ. ಹೀಗಾಗಿ ಕರ್ನಾಟಕದ ನ್ಯಾಯವಾದ ಪಾಲನ್ನು ನಿರಾಕರಿಸಿದಂತಾಗಿದೆ.

ಒಂದೇ ದೇಶ, ಒಂದೇ ತೆರಿಗೆ, ಒಂದೇ ಧರ್ಮ, ಒಂದೇ ಭಾಷೆ ಎಂದೆಲ್ಲಾ ಕೇಂದ್ರದ ಆಡಳಿತಾರೂಢ ಪಕ್ಷ ಏನನ್ನೇ ಹೇಳಲಿ ಭಾರತದಲ್ಲಿ ಇರುವುದು ಒಕ್ಕೂಟ ವ್ಯವಸ್ಥೆ. ಈ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಪಾಲಿನ ಸಂಪನ್ಮೂಲಗಳನ್ನು ನ್ಯಾಯವಾಗಿ ಪಾವತಿ ಮಾಡಬೇಕು. ಇಲ್ಲವಾದರೆ ಪ್ರತ್ಯೇಕತಾ ಭಾವನೆ ಬೆಳೆಯಲು ಕೇಂದ್ರ ಸರಕಾರವೇ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ಗ್ಯಾರಂಟಿ ಯೋಜನೆಗಳಿಗಾಗಿ ಕೇಂದ್ರ ನೀಡಿರುವ ಅನುದಾನದ ಹಣವನ್ನು ಬಳಸಿಕೊಳ್ಳಲಾಗುತ್ತದೆ ಎಂಬ ನಿರ್ಮಲಾ ಸೀತಾರಾಮನ್ ಆರೋಪದಲ್ಲಿ ಹುರುಳಿಲ್ಲ.

ಉಳಿದುದೇನೇ ಇರಲಿ ಬರಗಾಲದಿಂದ ಕರ್ನಾಟಕದ ಜನರು ತತ್ತರಿಸಿ ಹೋಗಿರುವ ಈ ಸಂದರ್ಭದಲ್ಲಿ ಕೇಂದ್ರ ಸರಕಾರ ರಾಜ್ಯದ ಮನವಿಗೆ ತಕ್ಷಣ ಸ್ಪಂದಿಸಬೇಕು. ವಿಪತ್ತು ಪರಿಹಾರ ನಿಧಿಯ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಇದು ಮಾನವೀಯ ಪ್ರಶ್ನೆ. ಇಂಥ ಸಂದರ್ಭದಲ್ಲಿ ಕೇಂದ್ರ ಸರಕಾರ ಪಕ್ಷಪಾತದ ನೀತಿ ಅನುಸರಿಸುವುದು ಸರಿಯಲ್ಲ. ಈ ಬಗ್ಗೆ ರಾಜ್ಯದ ಸರ್ವಪಕ್ಷಗಳ ನಿಯೋಗ ದಿಲ್ಲಿಗೆ ಹೋಗಿ ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News