×
Ad

ಖಾಸಗಿ ಕಾಲೇಜುಗಳಿಗೆ ಅವೈಜ್ಞಾನಿಕ ಅನುಮತಿ

Update: 2025-11-18 09:28 IST

ಸಾಂದರ್ಭಿಕ ಚಿತ್ರ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೇಶದ ಇತರ ಕಡೆಗಳಂತೆ ರಾಜ್ಯದಲ್ಲೂ ಒಂದೆಡೆ ಸರಕಾರಿ ಪ್ರಾಥಮಿಕ ಶಾಲೆಗಳು ಮುಚ್ಚಿಹೋಗುತ್ತಿದ್ದರೆ, ಇನ್ನೊಂದೆಡೆ ಪದವಿ ಪೂರ್ವ ಕಾಲೇಜುಗಳು ಕೂಡ ಒಂದೊಂದಾಗಿ ಬಾಗಿಲು ಹಾಕುತ್ತಿವೆ. ಮೇಲ್ನೋಟಕ್ಕೆ ಇದಕ್ಕೆ ವಿದ್ಯಾರ್ಥಿಗಳ ಕೊರತೆಯೇ ಕಾರಣ ಎಂದು ಕಂಡು ಬಂದರೂ ವಾಸ್ತವವಾಗಿ ಖಾಸಗಿ ಕಾಲೇಜುಗಳ ಆರಂಭಕ್ಕೆ ಸರಕಾರ ಅವೈಜ್ಞಾನಿಕ ಪರವಾನಿಗೆ ನೀಡುತ್ತಿರುವುದು ಕಾರಣವಾಗಿದೆಯೆಂದರೆ ತಪ್ಪಿಲ್ಲ. ಸರಕಾರವೇನೋ ಸರಕಾರಿ ಪದವಿ ಪೂರ್ವ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಹೇಳುತ್ತಿದೆ. ಅದು ನಿಜ ಕೂಡ. ಈ ನಿಟ್ಟಿನಲ್ಲಿ ಬಾಲಕಿಯರಿಗೆ ಉಚಿತ ಶಿಕ್ಷಣ ನೀಡುವುದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ವ್ಯವಸ್ಥೆಯನ್ನು ಕೆಲವು ಸರಕಾರಿ ಕಾಲೇಜುಗಳಲ್ಲಿ ಒದಗಿಸಿರುವುದು ನಿಜ. ಆದರೆ ಇವೆಲ್ಲ ಮಾಡಿದರೂ ದುಡ್ಡು ಮಾಡಲೆಂದೇ ಆರಂಭವಾದ ಖಾಸಗಿ ಕಾಲೇಜುಗಳ ವ್ಯಾಪಾರಿ ತಂತ್ರಗಳೆದುರು ವಿದ್ಯಾರ್ಥಿಗಳನ್ನು ಆಕರ್ಷಿಸಲು ಸರಕಾರಿ ಕಾಲೇಜುಗಳು ಯಾಕೆ ಯಶಸ್ವಿಯಾಗುತ್ತಿಲ್ಲ?

ಸರಕಾರಿ ಕಾಲೇಜುಗಳು ಮುಚ್ಚುವ ಸ್ಥಿತಿಗೆ ಬರಲು ಹಲವಾರು ಕಾರಣಗಳಿವೆ. ಮುಖ್ಯವಾಗಿ ಪ್ರತಿವರ್ಷ ಎಸೆಸೆಲ್ಸಿ ಪರೀಕ್ಷೆಯಲ್ಲಿ ಪಾಸಾಗುವ ವಿದ್ಯಾರ್ಥಿಗಳ ಸಂಖ್ಯೆಗಿಂತ ಪ್ರಥಮ ಪಿಯುಸಿ ಸೀಟುಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಇದಕ್ಕೆ ಕಾರಣವಾಗಿದೆ. ಉದಾಹರಣೆಗೆ 2025-26ನೇ ವರ್ಷದಲ್ಲಿ ಪ್ರಥಮ ಪಿಯುಸಿಗೆ 7,72,402 ಸೀಟುಗಳು ಲಭ್ಯವಿದ್ದರೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳ ಸಂಖ್ಯೆ 6,54,399. ಹೀಗಾಗಿ 1,18,003 ಸೀಟುಗಳು ಖಾಲಿ ಉಳಿದಿವೆ. ಇದಕ್ಕೆ ಕಾರಣ ಕಳೆದ ಐದು ವರ್ಷಗಳಲ್ಲಿ ಖಾಸಗಿ ಪಿಯು ಕಾಲೇಜುಗಳಿಗೆ ಸರಕಾರ ಅನುಮತಿ ನೀಡಿರುವುದಾಗಿದೆ. ಇದು ಸರಕಾರಿ ಕಾಲೇಜುಗಳ ಪ್ರವೇಶ ಪ್ರಕ್ರಿಯೆಯ ಮೇಲೆ ದುಷ್ಪರಿಣಾಮ ಉಂಟು ಮಾಡಿದೆಯೆಂದರೆ ಅತಿಶಯೋಕ್ತಿಯಲ್ಲ. ರಾಜ್ಯದಲ್ಲಿ ಒಟ್ಟು 3,623 ಪದವಿ ಪೂರ್ವ ಕಾಲೇಜುಗಳಿವೆ. ಅವುಗಳಲ್ಲಿ 1,319 ಸರಕಾರಿ ಪಿಯು ಕಾಲೇಜುಗಳಿವೆ ಹಾಗೂ 815 ಅನುದಾನಿತ ಕಾಲೇಜುಗಳಿವೆ. ಇವುಗಳು ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಿವೆ.

ಖಾಸಗಿ ಪಿಯು ಕಾಲೇಜುಗಳ ಆಕರ್ಷಣೆಗೆ ಮುಖ್ಯ ಕಾರಣ ಅವುಗಳು ನೀಡುವ ತರಾವರಿ ಜಾಹೀರಾತುಗಳು. ಮುಂದಿನ ಸಿಇಟಿ, ನೀಟ್, ಜೆಇಇ ಪರೀಕ್ಷೆಯ ತರಬೇತಿಯ ಆಮಿಷಗಳು ಹಾಗೂ ಯಶಸ್ವಿ ಅಭ್ಯರ್ಥಿಗಳ ಭಾವಚಿತ್ರಗಳನ್ನು ಪತ್ರಿಕೆಗಳಲ್ಲಿ, ಜಾಹೀರಾತು ಫಲಕಗಳಲ್ಲಿ ಪ್ರದರ್ಶಿಸುವುದರಿಂದಾಗಿ ಆಕರ್ಷಣೆಗೊಳಗಾಗುವ ಪೋಷಕರು ಖಾಸಗಿ ಕಾಲೇಜುಗಳಲ್ಲಿ ಲಕ್ಷಾಂತರ ರೂಪಾಯಿ ಶುಲ್ಕ ತೆತ್ತು ತಮ್ಮ ಮಕ್ಕಳನ್ನು ಸೇರಿಸಲು ಮುಂದಾಗುತ್ತಾರೆ. ಇದರಿಂದಾಗಿ ಸರಕಾರಿ ಪದವಿ ಪೂರ್ವ ಕಾಲೇಜುಗಳು ಮುಚ್ಚುವ ಅನಿವಾರ್ಯತೆಗೆ ಒಳಗಾಗಿವೆ. ಇದರ ನೇರ ಪ್ರರಿಣಾಮ ಉಂಟಾಗುವುದು ಗ್ರಾಮೀಣ ಪ್ರದೇಶಗಳ ಬಡ, ಹಿಂದುಳಿದ ವಿದ್ಯಾರ್ಥಿಗಳ ಮೇಲೆ. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.

ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ, ಅಲ್ಪಸಂಖ್ಯಾತ ಮಕ್ಕಳಿಗೆ ಖಾಸಗಿ ಶಾಲೆಗಳ ಶುಲ್ಕವನ್ನು ಭರಿಸುವುದು ಕಷ್ಟವಾಗುತ್ತದೆ. ಸರಕಾರಿ ಕಾಲೇಜುಗಳ ಸೌಕರ್ಯ ಇಲ್ಲದಿದ್ದರೆ ಬಹುತೇಕ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು ವಿದ್ಯೆಯಿಂದ ವಂಚಿತರಾಗಬೇಕಾಗುತ್ತದೆ. ಸಮೀಪದಲ್ಲಿ ಸುಲಭಕ್ಕೆ ಲಭ್ಯವಾಗುವ ಸರಕಾರಿ ಕಾಲೇಜುಗಳು ಮುಚ್ಚಿ ಹೋದರೆ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳನ್ನು ಹೆಚ್ಚು ಹಣ ಖರ್ಚು ಮಾಡಿ ದೂರದ ಕಾಲೇಜುಗಳಿಗೆ ಕಳಿಸಲು ಅವರ ಪೋಷಕರು ಇಷ್ಟ ಪಡುವುದಿಲ್ಲ.

ಸರಕಾರಿ ಪದವಿ ಪೂರ್ವ ಕಾಲೇಜುಗಳ ದುರವಸ್ಥೆಗೆ ಖಾಸಗಿ ಕಾಲೇಜುಗಳ ಪ್ರಭಾವಿ ಲಾಬಿ ಕಾರಣ. ಸರಕಾರದ ಮಹತ್ವದ ಸ್ಥಾನದಲ್ಲಿ ಇರುವವರು ತಮ್ಮದೇ ಆದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮಾಡಿಕೊಂಡಿರುತ್ತಾರೆ. ಹಣ ಗಳಿಸಲೆಂದೇ ಮಾಡಿರುವ ಇಂಥ ಕಾಲೇಜುಗಳಿಗೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಸರಕಾರವೂ ಮನ್ನಣೆ ಕೊಡುತ್ತದೆ. ಜನಪ್ರತಿನಿಧಿಗಳಾಗಿ ಸರಕಾರಿ ಶಾಲೆ, ಕಾಲೇಜುಗಳನ್ನು ಕಾಪಾಡಿ ಬೆಳಸಬೇಕಾದವರು ತಮ್ಮ ಸ್ವಂತದ ಶಾಲೆ, ಕಾಲೇಜುಗಳ ಹಿತಾಸಕ್ತಿಗಾಗಿ ಸರಕಾರಿ ಕಾಲೇಜುಗಳನ್ನು ಬಲಿ ಕೊಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಿಲ್ಲ.

ಎಲ್ಲವನ್ನೂ ಆವರಿಸುತ್ತಿರುವ ಖಾಸಗೀಕರಣದ ವ್ಯಾಧಿಗೆ ಶೈಕ್ಷಣಿಕ ಕ್ಷೇತ್ರವೂ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಮಕ್ಕಳ ಕೊರತೆ ಮತ್ತು ವಿಲೀನದ ಹೆಸರಿನಲ್ಲಿ ಕನ್ನಡ ಪ್ರಾಥಮಿಕ ಶಾಲೆಗಳಿಗೆ ಬೀಗ ಹಾಕುತ್ತಿರುವುದು ಈಗ ಸಾಮಾನ್ಯ ಸಂಗತಿಯಾಗಿದೆ. ಸಂಶೋಧನೆ ಮತ್ತು ಮೂಲ ಸೌಕರ್ಯಗಳ ಕೊರತೆಯಿಂದ ಸರಕಾರಿ ವಿಶ್ವವಿದ್ಯಾನಿಲಯಗಳು ಬಳಲುತ್ತಿವೆ. ಈಗ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣದ ನಡುವಿನ ಕೊಂಡಿಯಂತಿರುವ ಪದವಿ ಪೂರ್ವ ಕಾಲೇಜುಗಳು ಮುಚ್ಚುವ ಹಂತಕ್ಕೆ ಬಂದಿರುವುದು ಒಳ್ಳೆಯ ಸೂಚನೆಯಲ್ಲ.

ಇದೆಲ್ಲದರ ಒಟ್ಟು ಪರಿಣಾಮವೆಂದರೆ ಶಿಕ್ಷಣ ಕ್ಷೇತ್ರದ ನಿರ್ವಹಣೆ ಸರಕಾರದಿಂದ ಆಗದ ಕಾರ್ಯ ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ಖಾಸಗಿಯವರಿಂದ ಮಾತ್ರ ಸಾಧ್ಯ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುವಂತಾಗಿದೆ. ಇದಕ್ಕೆ ಸರಕಾರದ ಲೋಪ ದೋಷಗಳೇ ಕಾರಣವಾಗಿವೆ.

ಯಾವುದೇ ಕಾರಣಕ್ಕೂ ಗುಣಮಟ್ಟದ ಹಾಗೂ ಉಚಿತ ಶಿಕ್ಷಣವನ್ನು ಒದಗಿಸುವ ಮಹತ್ತರ ಕರ್ತವ್ಯದಿಂದ ಸರಕಾರ ವಿಮುಖವಾಗಬಾರದು. ಇದು ಪ್ರಜಾಪ್ರಭುತ್ವಕ್ಕೆ ಬಗೆಯುವ ದ್ರೋಹ ಎಂದು ಕರೆದರೆ ತಪ್ಪಿಲ್ಲ. ಸಮಾಜದ ಆರ್ಥಿಕ, ಸಾಮಾಜಿಕ ಅಸಮಾನತೆಯನ್ನು ನಿವಾರಿಸುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ. ಆದರೆ ಅದೇ ಶಿಕ್ಷಣ ವ್ಯವಸ್ಥೆ ಖಾಸಗೀಕರಣಗೊಳ್ಳುತ್ತಾ ಹೋದರೆ ಅದು ಅಸಮಾನತೆ ಹೆಚ್ಚಲು ಕಾರಣವಾಗುತ್ತದೆ ಎಂಬುದನ್ನು ಸರಕಾರ ಮರೆಯಬಾರದು. ಸರಕಾರ ಈಗಲಾದರೂ ಎಚ್ಚೆತ್ತು ಸರಕಾರಿ ಶಾಲೆ, ಕಾಲೇಜುಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಕ್ರಮಗಳನ್ನು ಕೈಗೊಳ್ಳುವುದು ತುರ್ತು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News