ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡುವರೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದಿಲ್ಲಿಯ ಕೆಂಪು ಕೋಟೆ ಸಮೀಪ ಕಾರೊಂದರಲ್ಲಿ ನಡೆದ ಸ್ಫೋಟಕ್ಕೆ ದೇಶ ತಲ್ಲಣಿಸಿದೆ. ಉಗ್ರರ ಈ ಕೃತ್ಯಕ್ಕೆ 13 ಜನರು ಬಲಿಯಾಗಿದ್ದು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಹಿಂಸಾಚಾರದ ಗಾಯ ಆರುವ ಮುನ್ನವೇ ದಿಲ್ಲಿಯಲ್ಲಿ ಈ ಸ್ಫೋಟ ನಡೆದಿದೆ. ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಕೇಂದ್ರ ಸರಕಾರ ಅಕ್ಷರಶಃ ಉಗ್ರರಿಗೆ ಬಲಿಕೊಟ್ಟಿತ್ತು. ಅಷ್ಟೊಂದು ಸಂಖ್ಯೆಯಲ್ಲಿ ಪ್ರವಾಸಿಗರು ಅಲ್ಲಿದ್ದರೂ, ಒಬ್ಬನೇ ಒಬ್ಬ ಭದ್ರತಾ ಸಿಬ್ಬಂದಿಯನ್ನು ಅಲ್ಲಿ ನಿಲ್ಲಿಸದೇ ಇರುವುದು ಉಗ್ರರಿಗೆ ಆಹ್ವಾನ ನೀಡಿದಂತಿತ್ತು. ಒಂದು ವೇಳೆ ಅಲ್ಲಿ ಸಾಕಷ್ಟು ಭದ್ರತಾ ಸಿಬ್ಬಂದಿಯಿದ್ದಿದ್ದರೆ ಹಾಡ ಹಗಲೇ ಯದ್ವಾತದ್ವಾ ಗುಂಡು ಹಾರಿಸುವ ಧೈರ್ಯವನ್ನು ಆ ನಾಲ್ಕು ಮಂದಿ ಉಗ್ರರು ತೋರಿಸುತ್ತಿರಲಿಲ್ಲ. ತನ್ನ ಭದ್ರತಾ ವೈಫಲ್ಯವನ್ನು ಮುಚ್ಚಿ ಹಾಕಲು ಕೇಂದ್ರ ಸರಕಾರ ಸಾಕಷ್ಟು ಪ್ರಯತ್ನ ನಡೆಸಿತು. ಆಪರೇಷನ್ ಸಿಂಧೂರವನ್ನು ನಡೆಸುವುದು ದೇಶಕ್ಕೆ ಅನಿವಾರ್ಯವಾಯಿತು. ಕೇಂದ್ರ ಸರಕಾರದ ಈ ವೈಫಲ್ಯದಿಂದಾಗಿ ದೇಶ ಸಾಕಷ್ಟು ನಾಶ, ನಷ್ಟವನ್ನು ಅನುಭವಿಸಿತು. ವಿಪರ್ಯಾಸವೆಂದರೆ, ದಾಳಿ ನಡೆಸಿದ ಆ ಉಗ್ರರನ್ನು ಬಂಧಿಸುವುದು ಈವರೆಗೆ ಸರಕಾರಕ್ಕೆ ಸಾಧ್ಯವಾಗಿಲ್ಲ. ಇದೀಗ ಈ ದೇಶದ ಹೃದಯ ಭಾಗವಾಗಿರುವ ದಿಲ್ಲಿಯಲ್ಲೇ ಸ್ಫೋಟ ನಡೆಸಿ, ದೇಶದ ಕಾನೂನು ವ್ಯವಸ್ಥೆಗೆ ಉಗ್ರರು ಸವಾಲು ಹಾಕಿದ್ದಾರೆ. ಈ ಕೃತ್ಯ ಎಸಗಿದ ಸಂಘಟನೆ ಯಾವುದೇ ಆಗಿರಲಿ, ದುಷ್ಟರು ಯಾವ ಧರ್ಮಕ್ಕೇ ಸೇರಿರಲಿ ಅವರನ್ನು ಬೇಟೆಯಾಡಲೇ ಬೇಕು. ಅಮಾಯಕರನ್ನು ಕೊಂದ ಉಗ್ರರು ಗಲ್ಲಿಗೇರಲೇ ಬೇಕು. ದೇಶದಲ್ಲಿ ಪದೇ ಪದೇ ನಡೆಯುತ್ತಿರುವ ಇಂತಹ ಭಯೋತ್ಪಾದನಾ ಕೃತ್ಯಗಳು ಭದ್ರತಾ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಈ ವೈಫಲ್ಯದ ಹೊಣೆಯನ್ನು ಹೊತ್ತುಕೊಂಡು ಗೃಹ ಸಚಿವರು ತಕ್ಷಣ ರಾಜೀನಾಮೆ ನೀಡಬೇಕಾಗಿತ್ತು. ಆದರೆ ಈವರೆಗೆ ಅಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ.
ಸ್ಫೋಟದ ಬೆನ್ನಿಗೇ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಸ್ಫೋಟದ ಹಿಂದೆ ರಾಜಕೀಯ ಕಾರಣಗಳಿವೆಯೇ ಎಂದು ಹಲವರು ಅನುಮಾನಿಸುತ್ತಿದ್ದಾರೆ. ಪ್ರತೀ ಬಾರಿ ಚುನಾವಣೆ ಹತ್ತಿರವಿರುವಾಗಲೇ ಯಾಕೆ ಸ್ಫೋಟ, ದಾಳಿಗಳು ನಡೆಯುತ್ತವೆ? ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಣದ ಶಕ್ತಿಗಳು ಈ ದಾಳಿಗಳನ್ನು ಪ್ರಾಯೋಜಿಸುತ್ತಿವೆಯೇ ಎಂಬ ಶಂಕೆ ತೀರಾ ನಿರಾಕರಿಸುವಂತಹದೇನೂ ಅಲ್ಲ. ಈ ಹಿಂದೆ ಪುಲ್ವಾಮಾ ದಾಳಿ ನಡೆದಾಗಲೂ ದೇಶ ಚುನಾವಣೆಯನ್ನು ಎದುರಿಸುತ್ತಿತ್ತು. ಪುಲ್ವಾಮಾ ದಾಳಿಯ ಬಳಿಕ ಸೈನಿಕರನ್ನು ಮುಂದಿಟ್ಟುಕೊಂಡು ಒಂದು ಪಕ್ಷ ಸಾರ್ವಜನಿಕವಾಗಿ ಮತ ಯಾಚನೆ ಮಾಡಿದ್ದು ಇನ್ನೂ ಹಸಿಯಾಗಿದೆ. ಸೈನಿಕರ ವೇಷ ಧರಿಸಿ ಕೆಲವರು ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಪಹಲ್ಗಾಮ್ ದಾಳಿ ನಡೆದಾಗ, ವಿದೇಶದಿಂದ ಪ್ರಧಾನಿ ಮೋದಿಯವರು ಆಗಮಿಸಿದರಾದರೂ, ಹಿಂಸಾಚಾರ ನಡೆದ ಕಾಶ್ಮೀರಕ್ಕೆ ಭೇಟಿ ನೀಡದೆ, ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಇದೀಗ ದಿಲ್ಲಿ ಸ್ಫೋಟ ನಡೆದ ಸಂದರ್ಭದಲ್ಲಿ ಕೊನೆಯ ಹಂತದ ಮತದಾನಕ್ಕೆ ಬಿಹಾರದ ಜನತೆ ಸಿದ್ಧರಾಗುತ್ತಿದ್ದರು. ದಿಲ್ಲಿಯ ಕಾನೂನು ಸುವ್ಯವಸ್ಥೆಯ ಹೊಣೆ ಕೇಂದ್ರ ಸರಕಾರದ್ದು. ಈ ಹಿಂದೆ ಕೇಜ್ರಿವಾಲ್ ನೇತೃತ್ವದಲ್ಲಿ ದಿಲ್ಲಿ ಹತ್ತು ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಸುದ್ದಿಯಲ್ಲಿತ್ತು. ಕೇಜ್ರಿವಾಲ್‌ರನ್ನು ಕೆಳಗಿಳಿಸಿ ಬಿಜೆಪಿ ಅಧಿಕಾರಕ್ಕೆ ಬಂದದ್ದೇ ದಿಲ್ಲಿಯ ಜನರು ಇಂತಹದೊಂದು ಭೀಕರ ಕೃತ್ಯಕ್ಕೆ ಸಾಕ್ಷಿಯಾಗಬೇಕಾಯಿತು. ದಿಲ್ಲಿಯನ್ನು ವಾಸಿಸಲು ಯೋಗ್ಯವಾದ ನಗರವಾಗಿಸುತ್ತೇನೆ ಎಂದು ಭರವಸೆ ಕೊಟ್ಟು ಅಧಿಕಾರ ಹಿಡಿದ ಬಿಜೆಪಿ, ಇದೀಗ ನಡೆದ ಸ್ಫೋಟಕ್ಕಾಗಿ ದಿಲ್ಲಿಯ ಜನರ ಮಾತ್ರವಲ್ಲ ಇಡೀ ದೇಶದ ಕ್ಷಮೆ ಯಾಚಿಸುವುದು ಅನಿವಾರ್ಯವಾಗಿದೆ. ಈ ಹಿಂದೆ ಮುಂಬೈ ದಾಳಿ ನಡೆದಾಗ ಈ ದೇಶದ ಗೃಹ ಸಚಿವರು ಹಿಂದು ಮುಂದು ನೋಡದೆ ರಾಜೀನಾಮೆ ನೀಡಿದ್ದರು. ಮೋದಿ ನೇತೃತ್ವದ ಸರಕಾರ ಈ ದೇಶವನ್ನು ಆಳುತ್ತಿರುವಾಗ, ಪುಲ್ವಾಮಾದಿಂದ ಪಹಲ್ಗಾಮ್‌ವರೆಗೆ ಹಲವು ದಾಳಿಗಳು ನಡೆದಿವೆಯಾದರೂ, ಯಾವನೇ ಒಬ್ಬ ನಾಯಕ ಈವರೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿಲ್ಲ. ಬಹುಶಃ ನೈತಿಕ ಹೊಣೆಯನ್ನು ಹೊರಬೇಕಾದರೆ ಎದೆಯೊಳಗೆ ಒಂದಿಷ್ಟಾದರೂ ನೈತಿಕ ಮೌಲ್ಯಗಳು ಆಳುವವರಲ್ಲಿ ಇರಬೇಕು. ಅದು ಇಲ್ಲದೇ ಇದ್ದಾಗ ಅವರಿಂದ ನೈತಿಕ ಹೊಣೆಯನ್ನು ಹೊರಲು ಒತ್ತಾಯಿಸುವುದು ವ್ಯರ್ಥ.
ಪುಲ್ವಾಮಾ ದಾಳಿ ನಡೆದಾಗ ಈ ದೇಶದ ಪ್ರಧಾನಿ ಫೋಟೊ ಶೂಟ್ ನಡೆಸುತ್ತಿದ್ದರು. ಪುಲ್ವಾಮ ದಾಳಿ ನಡೆದ ಮಾಹಿತಿ ಸಿಕ್ಕಿದ ಬಳಿಕವೂ ಅವರು ಪೋಟೊ ಶೂಟ್‌ನಲ್ಲಿ ಮುಂದುವರಿದಿದ್ದರು ಎಂದು ಮಾಧ್ಯಮಗಳ ವರದಿಗಳು ಆರೋಪಿಸಿದ್ದವು. ಇದೀಗ ದಿಲ್ಲಿಯಲ್ಲಿ ಸ್ಫೋಟ ನಡೆದಾಗ ಪ್ರಧಾನಿ ಮೋದಿಯವರು ಭೂತಾನ್‌ಗೆ ತೆರಳಿ ಅಲ್ಲಿನ ನಾಯಕನ ಹುಟ್ಟು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಭೂತಾನ್‌ನಲ್ಲಿ ನಿಂತು ಸ್ಫೋಟ ನಡೆಸಿದ ಭಯೋತ್ಪಾದಕರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ತನ್ನ ಪ್ರವಾಸವನ್ನು ಸ್ಥಗಿತಗೊಳಿಸಿ ದಿಲ್ಲಿಗೆ ಆಗಮಿಸಿ ಜನರಲ್ಲಿ ಸ್ಥೈರ್ಯ ತುಂಬಬೇಕಾದ ಅಗತ್ಯ ಅವರಿಗೆ ಕಾಣಲಿಲ್ಲ. ಸ್ಫೋಟ ಕೃತ್ಯವನ್ನು ಅವರು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎನ್ನುವುದನ್ನು ಇದರಿಂದ ಅರ್ಥ ಮಾಡಿಕೊಳ್ಳಬಹುದಾಗಿದೆ.
ಸ್ಫೋಟ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಲಾಗಿದೆ. ಈ ದೇಶದಲ್ಲಿ ಯಾವುದೇ ಅಪರಾಧಗಳಿಗಿಂತ ಸ್ಫೋಟದ ತನಿಖೆ ತುಂಬಾ ಸುಲಭ ಎನ್ನುವಂತಾಗಿದೆ. ಇಲ್ಲಿ ಸ್ಫೋಟ ನಡೆದ ಬೆನ್ನಿಗೇ ಸ್ಫೋಟ ನಡೆಸಿದ ಸಂಘಟನೆ, ಸ್ಫೋಟಕ್ಕ್ಕೆ ಎಲ್ಲಿ ಸಂಚು ನಡೆಯಿತು, ಆರೋಪಿಗಳ ಹೆಸರು, ಉದ್ಯೋಗ ಇತ್ಯಾದಿಗಳೆಲ್ಲ ಕೆಲವೇ ಕ್ಷಣಗಳಲ್ಲಿ ಮಾಧ್ಯಮಗಳು ಪತ್ತೆ ಹಚ್ಚಿ ಬಿಡುತ್ತವೆ. ಅಷ್ಟೇ ಅಲ್ಲ, ವಿಚಾರಣೆ ನಡೆಸಿ ಮರಣ ದಂಡನೆಯನ್ನೂ ಘೋಷಿಸಿ ಬಿಡುತ್ತವೆ. ಉಗ್ರರ ಸ್ಫೋಟ ಪ್ರಕರಣಗಳಲ್ಲಿ ಪೊಲೀಸರಿಗೆ ತೀವ್ರ ಒತ್ತಡಗಳಿರುವುದರಿಂದ ಸಾರ್ವಜನಿಕರನ್ನು ತೃಪ್ತಿ ಪಡಿಸುವುದಕ್ಕಾದರೂ ಕೆಲವು ಸಂಘಟನೆಗಳ, ಒಂದಿಷ್ಟು ಆರೋಪಿಗಳ ಹೆಸರುಗಳನ್ನು ತಕ್ಷಣ ಘೋಷಿಸುವುದು ಅನಿವಾರ್ಯವಾಗುತ್ತದೆ. ಇದರಿಂದಾಗಿಯೇ ಅನೇಕ ಸಂದರ್ಭಗಳಲ್ಲಿ ತನಿಖೆ ಹಾದಿ ತಪ್ಪುತ್ತದೆ. ನಿಜವಾದ ಅಪರಾಧಿಗಳು ನುಣುಚಿಕೊಳ್ಳುತ್ತಾರೆ. 2006ರಲ್ಲಿ 150ಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡ ಮುಂಬೈ ರೈಲು ಸ್ಫೋಟಕ್ಕೆ ಸಂಬಂಧಿಸಿದ ತನಿಖೆಯ ಸ್ಥಿತಿ ಏನಾಯಿತು ಎನ್ನುವುದನ್ನು ಇತ್ತೀಚೆಗಷ್ಟೇ ನೋಡಿದ್ದೇವೆ. ಈ ಪ್ರಕರಣದಲ್ಲಿ ಆರೋಪಿಗಳೆಂದು ಪೊಲೀಸರು 12 ಜನರನ್ನು ಬಂಧಿಸಿದ್ದರು. ಆದರೆ ಇತ್ತೀಚೆಗೆ ಮುಂಬೈ ಹೈಕೋರ್ಟ್ ಎಲ್ಲ ಆರೋಪಿಗಳನ್ನು ನಿರಪರಾಧಿಗಳೆಂದು ಘೋಷಿಸಿತು ಮಾತ್ರವಲ್ಲ, ಅವರನ್ನು ತಕ್ಷಣವೇ ಬಿಡುಗಡೆ ಮಾಡಲು ಆದೇಶಿಸಿತು. ಪೊಲೀಸರು ಉದ್ದೇಶಪೂರ್ವಕವಾಗಿ ಅವರನ್ನು ಸಿಲುಕಿಸಿದ್ದಾರೆ ಎಂದು ಕೋರ್ಟ್ ಶಂಕೆ ವ್ಯಕ್ತಪಡಿಸಿತು. ಆರೋಪಿಗಳಿಗೆ ಚಿತ್ರಹಿಂಸೆ ನೀಡಿರುವುದರ ಬಗ್ಗೆ ಕಳವಳವ್ಯಕ್ತ ಪಡಿಸಿತು. ಇತ್ತ ಮಾಲೆಗಾಂವ್ ಸ್ಫೋಟದ ಪ್ರಕರಣವನ್ನು ಸ್ವತಃ ಎನ್‌ಐಎ ಹೇಗೆ ಹಳ್ಳ ಹಿಡಿಸಿತು ಎನ್ನುವುದನ್ನೂ ನೋಡಿದ್ದೇವೆ. ತನಿಖಾಧಿಕಾರಿಗಳೇ ತನಿಖೆಯನ್ನು ದುರ್ಬಲಗೊಳಿಸಲು ಮುಂದಾಗಿರುವ ಆರೋಪವನ್ನು ಅಂದಿನ ಮುಖ್ಯ ಸಾರ್ವಜನಿಕ ಅಭಿಯೋಜಕಿ ರೋಹಿಣಿ ಸಾಲ್ಯಾನ್ ಅವರು ಮಾಡಿದ್ದರು. ಅಷ್ಟೇ ಅಲ್ಲ ಬಳಿಕ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಾಕ್ಷಿಗಳ ಕೊರತೆಯನ್ನು ಮುಂದಿಟ್ಟು ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳನ್ನು ನ್ಯಾಯಾಲಯ ಬಿಡುಗಡೆ ಮಾಡಿತು. ದಿಲ್ಲಿ ಸ್ಫೋಟಕ್ಕೆ ಸಂಬಂಧಿಸಿದ ತನಿಖೆಗೆ ಯಾವ ಕಾರಣಕ್ಕೂ ಈ ಗತಿ ಬರಬಾರದು. ಮುಖ್ಯವಾಗಿ ಸಾರ್ವಜನಿಕರ ಒತ್ತಡ, ಮಾಧ್ಯಮಗಳ ವದಂತಿಗಳಿಗೆ ಬಲಿಯಾಗಿ ತನಿಖೆ ದಾರಿ ತಪ್ಪಬಾರದು. ಸಾರ್ವಜನಿಕರ ಸಂತೃಪ್ತಿಗಾಗಿ ತನಿಖೆ ಅವಸರವಸರವಾಗಿ ಮುಗಿದರೆ ಅಮಾಯಕರು ಅಪರಾಧಿಗಳಾಗುತ್ತಾರೆ ಮಾತ್ರವಲ್ಲ, ನಿಜವಾದ ಅಪರಾಧಿಗಳು ಮುಕ್ತವಾಗಿ ಓಡಾಡುತ್ತ್ತಾರೆ. ಇದು ಇನ್ನೊಂದು ಸ್ಫೋಟ ಕೃತ್ಯಕ್ಕೆ ದಾರಿಯನ್ನು ತೆರೆದುಕೊಡುತ್ತದೆ. ಆದುದರಿಂದ ನ್ಯಾಯಯುತ ತನಿಖೆ ನಡೆದು, ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಇನ್ನೊಂದು ಇಂತಹ ಕೃತ್ಯ ನಡೆಯದೇ ಇರುವುದಕ್ಕೆ ಅತಿ ಅಗತ್ಯವಾಗಿದೆ.