×
Ad

ಜಿಎಸ್‌ಟಿ ಕಡಿತದ ನಿಜವಾದ ಫಲಾನುಭವಿಗಳು ಯಾರು?

Update: 2025-09-20 09:13 IST

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಬಿಹಾರ ಚುನಾವಣಾ ಪ್ರಚಾರದ ಉದ್ದಕ್ಕೂ ಬಿಜೆಪಿಯು ಜಿಎಸ್‌ಟಿ ತೆರಿಗೆಗೆ ಸಂಬಂಧಿಸಿ ಪ್ರಧಾನಿ ಮೋದಿಯವರು ಜನರ ಮೇಲೆ ತೋರಿಸಿದ ಉದಾರತನವನ್ನು ಮುಂದಿಟ್ಟು ಮತಯಾಚನೆಯಲ್ಲಿ ತೊಡಗಿದೆ. ಅಂದರೆ ಈವರೆಗೆ ಜಿಎಸ್‌ಟಿಯಿಂದಾಗಿ ದೇಶದ ಜನರು ಸಂಕಟ ಅನುಭವಿಸುತ್ತಿದ್ದರು ಮತ್ತು ಮೋದಿಯವರು ಮಧ್ಯ ಪ್ರವೇಶಿಸಿ ಜನರ ಸಂಕಟಗಳನ್ನು ದೂರ ಮಾಡಿದರು ಎನ್ನುವುದು ಬಿಜೆಪಿಯ ವಾದವಾಗಿದೆ. ವಿಪರ್ಯಾಸವೆಂದರೆ, ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೆ ತಂದು ಜನರನ್ನು ಸಂಕಟಕ್ಕೆ ತಳ್ಳಿರುವುದೇ ಪ್ರಧಾನಿ ಮೋದಿ. ತೆರಿಗೆಯಲ್ಲಿ ಭಾರೀ ಸುಧಾರಣೆ ಎನ್ನುವ ಘೋಷಣೆಯೊಂದಿಗೆ ಮಧ್ಯರಾತ್ರಿ ಜಿಎಸ್‌ಟಿ ಗಂಟೆ ಬಾರಿಸಿದ ಮೋದಿ ನೇತೃತ್ವದ ಸರಕಾರ ಕಳೆದ ಎಂಟು ವರ್ಷಗಳಿಂದ ಜನರನ್ನು ಅಕ್ಷರಶಃ ಸುಲಿಗೆ ಮಾಡಿತು. ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ ಎನ್ನುವ ಭರವಸೆ ಹುಸಿಯಾಯಿತು ಮಾತ್ರವಲ್ಲ, ಜಿಎಸ್‌ಟಿಯಿಂದಾಗಿ ವ್ಯಾಪಾರ ಚಟುವಟಿಕೆಗಳು ಅಸ್ತವ್ಯಸ್ತ ವಾಯಿತು. ಈವರೆಗೆ ವ್ಯಾಪಾರಗಳಿಗಾದ ನಷ್ಟ ಮತ್ತು ಗ್ರಾಹಕರಿಗಾದ ತೊಂದರೆಗಳಿಗೆ ಕ್ಷಮೆಯಾಚಿಸದ ಸರಕಾರ ಇದೀಗ ಜಿಎಸ್‌ಟಿಯಲ್ಲಿ ಸುಧಾರಣೆ ತಂದಿದ್ದು, ಅದನ್ನೇ ದೇಶಕ್ಕೆ ಮಾಡಿದ ಮಹದುಪಕಾರವೆಂದು ಬಿಂಬಿಸುತ್ತಿದೆ. ಇಷ್ಟಕ್ಕೂ ಈ ಕಡಿತದಿಂದ ದೇಶದ ಬಡವರು ಎಷ್ಟರಮಟ್ಟಿಗೆ ಲಾಭಪಡೆಯಲಿದ್ದಾರೆ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ. ಜಿಎಸ್‌ಟಿ ಸುಧಾರಣೆಯಿಂದ ಜನರು ಭಾರೀ ಸುಲಿಗೆಯಿಂದ ಸಣ್ಣ ಮಟ್ಟಿಗೆ ಪಾರಾಗಿದ್ದಾರೆಯೇ ಹೊರತು, ಅವರ ಸಾಮಾಜಿಕ, ಆರ್ಥಿಕ ಬದುಕಿನ ಮೇಲೆ ಯಾವ ರೀತಿಯ ವಿಶೇಷ ಲಾಭಗಳನ್ನು ಉಂಟು ಮಾಡಿಲ್ಲ ಎನ್ನುವ ವಾಸ್ತವವನ್ನು ಮಾಧ್ಯಮಗಳು ಮುಚ್ಚಿಡುತ್ತಿವೆ.

ಕೇಂದ್ರ ಸರಕಾರವು ತೆರಿಗೆ ಮಜಲುಗಳ ಸಂಖ್ಯೆಯನ್ನು ನಾಲ್ಕರಿಂದ ಎರಡಕ್ಕೆ ಇಳಿಸಿದೆ. ಕೆಲವು ವಸ್ತುಗಳು 5ಶೇ. ಮಜಲಿಗೆ ಸೇರ್ಪಡೆಗೊಂಡರೆ, ಇನ್ನು ಕೆಲವು ವಸ್ತುಗಳು 12ಶೇ. ಮಜಲಿಗೆ ಸೇರಿಕೊಂಡವು. ಅದೇ ವೇಳೆ, ಸಿಗರೆಟ್ ಮುಂತಾದ ಆರೋಗ್ಯಕ್ಕೆ ಹಾನಿಕಾರಕ ವಸ್ತುಗಳಿಗೆ 40 ಶೇಕಡ ತೆರಿಗೆ ದರವನ್ನು ವಿಧಿಸಲಾಗಿದೆ. ತೆರಿಗೆ ದರ ಕಡಿತವು ಪ್ರಮುಖ ‘ಸುಧಾರಣೆ’ಯಾಗಿದೆ ಎಂದು ಹೇಳುತ್ತಾ ಕೇಂದ್ರ ಸರಕಾರವು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದೆ. ‘‘ಈ ಸುಧಾರಣೆಗಳು, ಉಳಿತಾಯ ಮಾಡಲು ಕುಟುಂಬಗಳಿಗೆ ನೆರವಾಗುತ್ತವೆ ಮತ್ತು ಆರ್ಥಿಕತೆಯನ್ನು ಸದೃಢಗೊಳಿಸುತ್ತವೆ‘‘ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. ಅದರಲ್ಲಿ ಎಷ್ಟು ನಿಜವಿದೆ ಎನ್ನುವುದನ್ನು ನಾವು ಕಾದು ನೋಡಬೇಕಾಗಿದೆ.

ತೆರಿಗೆಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ: ಪ್ರತ್ಯಕ್ಷ ತೆರಿಗೆ ಮತ್ತು ಪರೋಕ್ಷ ತೆರಿಗೆ. ಪ್ರತ್ಯಕ್ಷ ತೆರಿಗೆಯನ್ನು ವ್ಯಕ್ತಿಗಳು ಅಥವಾ ಸಂಸ್ಥೆಗಳು ತಮ್ಮ ಆದಾಯದ ಆಧಾರದಲ್ಲಿ ಪಾವತಿಸುತ್ತವೆ. ಪರೋಕ್ಷ ತೆರಿಗೆಯನ್ನು ಗ್ರಾಹಕರು ಖರೀದಿಸಲಾದ ಸರಕುಗಳ ಆಧಾರದಲ್ಲಿ ಪಾವತಿಸಲಾಗುತ್ತದೆ. ಪರೋಕ್ಷ ತೆರಿಗೆಯನ್ನು ಸರಕುಗಳ ಖರೀದಿದಾರರು ವ್ಯಾಪಾರಿಗಳಿಗೆ ಪಾವತಿಸುತ್ತಾರೆ ಮತ್ತು ವ್ಯಾಪಾರಿಗಳು ಅದನ್ನು ಬಳಿಕ ಸರಕಾರಕ್ಕೆ ರವಾನಿಸುತ್ತಾರೆ. ಇತ್ತೀಚೆಗೆ ಕೇಂದ್ರ ಸರಕಾರ ಮಾಡಿರುವ ಬದಲಾವಣೆಯು ಪರೋಕ್ಷ ತೆರಿಗೆಗಳಿಗೆ ಸಂಬಂಧಿಸಿದೆ. ಆದಾಯ ತೆರಿಗೆಯನ್ನು ಯಾರು ಪಾವತಿಸುತ್ತಾರೆ? ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು, ಭೂಮಾಲಕರು, ಲೇವಾದೇವಿಗಾರರು- ಅಂದರೆ ಲಾಭ, ಬಾಡಿಗೆ ಅಥವಾ ಬಡ್ಡಿ ಸಂಪಾದಿಸುವವರು. ವೇತನ ಪಡೆಯುವ ಉದ್ಯೋಗಿಗಳ ಪೈಕಿ, ಅಧಿಕ ಆದಾಯ ಹೊಂದಿರುವ ಉನ್ನತ ಮಟ್ಟದ ಬೌದ್ಧಿಕ ಕೆಲಸ ಮಾಡುವ ಜನರ ಒಂದು ಸಣ್ಣ ವರ್ಗ ಆದಾಯ ತೆರಿಗೆ ಪಾವತಿಸುತ್ತದೆ. ಕಡಿಮೆ ವೇತನ ಹೊಂದಿರುವ ಸಾಮಾನ್ಯ ನೌಕರರು ಆದಾಯ ತೆರಿಗೆಯ ವ್ಯಾಪ್ತಿಗೆ ಬರುವುದಿಲ್ಲ.

ಪರೋಕ್ಷ ತೆರಿಗೆಗಳ ಬಗ್ಗೆ ಹೇಳುವುದಾದರೆ, ವ್ಯಾಪಾರಿಗಳು ವಿವಿಧ ತೆರಿಗೆಗಳನ್ನು ಸರಕಾರಕ್ಕೆ ಪಾವತಿಸಬೇಕು. ಅಂದರೆ ವ್ಯಾಪಾರಿಗಳು ತಮ್ಮ ಗ್ರಾಹಕರಿಂದ ಜಿಎಸ್‌ಟಿ ಸಂಗ್ರಹಿಸಿ ಸರಕಾರಕ್ಕೆ ಪಾವತಿಸಬೇಕು. ಹಾಗಾದರೆ, ಈ ವಸ್ತುಗಳ ಖರೀದಿದಾರರು ಯಾರು? 1) ದೈನಂದಿನ ಬಳಕೆಗಾಗಿ ವಸ್ತುಗಳನ್ನು ಖರೀದಿಸುವ ಸಾಮಾನ್ಯ ಜನರು (ಬಡವರು ಮತ್ತು ಶ್ರೀಮಂತರಿಬ್ಬರೂ) ಮತ್ತು 2) ಹೊಸ ಉತ್ಪನ್ನಗಳನ್ನು ತಯಾರಿಸಲು ಕಚ್ಚಾ ಸಾಮಗ್ರಿಗಳನ್ನು ಖರೀದಿಸುವ ಕೈಗಾರಿಕೋದ್ಯಮಿಗಳು. ಕೆಲಸಗಾರರು ಈ ತೆರಿಗೆಗಳನ್ನು ತಮ್ಮ ವೇತನಗಳಿಂದ ಕೊಡುತ್ತಾರೆ. ಆದರೆ, ಯಾವುದೇ ಶ್ರಮ ಪಡದೆ, ‘ಲಾಭ’ದ ಹೆಸರಿನಲ್ಲಿ ತಮ್ಮ ಆದಾಯಗಳನ್ನು ಸಂಪಾದಿಸುವ ಬಂಡವಾಳಶಾಹಿಗಳು ತಮ್ಮ ಲಾಭಗಳಿಂದ ತೆರಿಗೆಗಳನ್ನು ಪಾವತಿಸುತ್ತಾರೆ. ಆದರೆ, ಕೈಗಾರಿಕೋದ್ಯಮಿಗಳು ಕಚ್ಚಾವಸ್ತುಗಳನ್ನು ಖರೀದಿಸುವಾಗ ಅದಕ್ಕೆ ಜಿಎಸ್‌ಟಿ ಪಾವತಿಸುತ್ತಾರಾದರೂ, ಆ ಮೊತ್ತವನ್ನು ಅವರು ತಮ್ಮ ಉತ್ಪನ್ನಗಳ ಅಂತಿಮ ಮಾರಾಟ ಬೆಲೆಗೆ ಸೇರಿಸುತ್ತಾರೆ. ಪ್ರತ್ಯಕ್ಷ ಮತ್ತು ಪರೋಕ್ಷ ಎರಡೂ ತೆರಿಗೆಗಳಲ್ಲಿ, ಪಾವತಿಯ ಮೂಲವು ಕಾರ್ಮಿಕರಿಂದ ಕಸಿದುಕೊಳ್ಳಲಾದ ಹೆಚ್ಚುವರಿ ಹಣವೇ ಆಗಿದೆ.

ಹಾಗಾದರೆ, ಜಿಎಸ್‌ಟಿ ಕಡಿತದಿಂದ ಪ್ರಯೋಜನ ಪಡೆಯುವವರು ಯಾರು? ಭಾರತವೆಂದರೆ, ಕನಿಷ್ಠ ವೇತನಗಳಿಂದ ವಂಚಿತರಾಗಿರುವ, ಅಗತ್ಯ ವಸ್ತುಗಳ ಬೆಲೆಗಳು ಅನಿಯಂತ್ರಿತವಾಗಿ ಏರುವ, ಸಾವಿರಾರು ಉದ್ಯೋಗಗಳು ಕಡಿತಗೊಳ್ಳುವ, ಪ್ರತಿಯೊಂದು ಪಟ್ಟಣದ ಕೆಲವು ಸ್ಥಳಗಳಲ್ಲಿ ದಿನಗೂಲಿ ಕಾರ್ಮಿಕರು ಕೆಲಸಕ್ಕಾಗಿ ಕೊನೆಯಿಲ್ಲದೆ ಕಾಯುತ್ತಿರುವ, ಬಡತನದಿಂದಾಗಿ ಜನರು ವಲಸೆ ಹೋಗುತ್ತಿರುವ, ಜನರ ಖರೀದಿ ಸಾಮರ್ಥ್ಯ ಕುಸಿಯುತ್ತಿರುವ, ಕಡು ಬಡತನವನ್ನು ಸಂಕೇತಿಸುವ ಕೊಳೆಗೇರಿಗಳು ಹರಡುತ್ತಿರುವ ಮತ್ತು ಮತಗಳ ಬೇಟೆಗಾಗಿ ಉಚಿತಗಳ ಹೆಸರಿನಲ್ಲಿ ಸರಕಾರಗಳು ವಿತರಿಸುವ ಭಿಕ್ಷೆಗಾಗಿ ಸುದೀರ್ಘ ಸರತಿ ಸಾಲುಗಳಲ್ಲಿ ಅಸಹಾಯಕರಾಗಿ ಕಾಯುತ್ತಿರುವ ದೇಶ. ಇಲ್ಲಿ ತೆರಿಗೆಗಳನ್ನು ಎಷ್ಟೇ ಕಡಿಮೆ ಮಾಡಿದರೂ ಕಾರ್ಮಿಕರ ಕುಟುಂಬಗಳಿಗೆ ಏನನ್ನೂ ಉಳಿಸಲು ಸಾಧ್ಯವಾಗುವುದಿಲ್ಲ.

ಈ ತೆರಿಗೆ ಕಡಿತಗಳಿಂದ ತಮಗೆ ಏನೂ ಲಾಭವಿಲ್ಲ ಎಂದು ಹೇಳಿ ಈಗಾಗಲೇ ಸಣ್ಣ ಕೈಗಾರಿಕೆಗಳು ಸರಕಾರಕ್ಕೆ ಮನವಿ ಸಲ್ಲಿಸಿವೆ. ತಮ್ಮ ವ್ಯವಹಾರ 2 ಕೋಟಿ ರೂ. ದಾಟಿದರೆ ಮಾತ್ರ ತಾವು ಜಿಎಸ್‌ಟಿ ಪಾವತಿಸಬಹುದು ಎಂದು ಅವರು ಹೇಳುತ್ತಾರೆ. ಹಾಗಾಗಿ, ನೈಜ ಫಲಾನುಭವಿಗಳು ಬೃಹತ್ ಕೈಗಾರಿಕೋದ್ಯಮಿಗಳಾಗಿದ್ದಾರೆ. ತಮ್ಮ ಗಣನೀಯ ಪ್ರಮಾಣದ ವ್ಯವಹಾರಗಳಿಂದಾಗಿ ತೆರಿಗೆ ಕಡಿತಗಳಿಂದ ಬೃಹತ್ ಪ್ರಮಾಣದಲ್ಲಿ ಲಾಭಗಳನ್ನು ಪಡೆಯಲು ಅವರಿಗೆ ಸಾಧ್ಯವಾಗುತ್ತದೆ. ಲಾಭ, ಬಾಡಿಗೆ ಮತ್ತು ಬಡ್ಡಿ ಮುಂತಾದ ತಮ್ಮ ಆದಾಯಗಳ ಮೇಲಿನ ತೆರಿಗೆ ಕಡಿಮೆಯಾಗುವುದರಿಂದ ಅವರಿಗೆ ಹೆಚ್ಚು ಲಾಭಗಳನ್ನು ಬಾಚಿಕೊಳ್ಳುತ್ತಾರೆ.

ಬಹುತೇಕ ಎಲ್ಲಾ ಪತ್ರಿಕೆಗಳು, ಟಿ.ವಿ. ಚಾನೆಲ್‌ಗಳು ಮತ್ತು ರಾಜಕೀಯ ಪಕ್ಷಗಳು ಈ ತೆರಿಗೆ ಕಡಿತಗಳನ್ನು ವೈಭವೀಕರಿಸುತ್ತಿವೆ ಹಾಗೂ ಈ ತೆರಿಗೆ ಕಡಿತಗಳು ನೈಜ ಲಾಭಗಳನ್ನು ತರುತ್ತಿವೆ ಎಂಬುದಾಗಿ ಜನಸಮೂಹವನ್ನು ನಂಬಿಸುತ್ತಿವೆ. ಆದರೆ, ಈ ತೆರಿಗೆ ಕಡಿತಗಳಿಂದ ದುಡಿಯುವ ವರ್ಗಕ್ಕೆ ಲಾಭವಿದೆ ಎಂದು ನಂಬುವುದು ದೊಡ್ಡ ಭ್ರಮೆಯಾಗಿದೆ. ಅದು ಕಾರ್ಮಿಕರ ಶೋಷಣೆಯಿಂದ ಮೆರೆಯುತ್ತಿರುವ ಬಂಡವಾಳಶಾಹಿ ವರ್ಗಕ್ಕೆ ಮಾತ್ರ ಲಾಭದಾಯಕವಾಗಿದೆ. ಈ ಹಿಂದಿನ ಅಧ್ಯಯನದ ಪ್ರಕಾರ ಬಡವರು ಮತ್ತು ಗ್ರಾಹಕರು ಅತಿ ಹೆಚ್ಚು ಜಿಎಸ್‌ಟಿ ತೆರಿಗೆಯನ್ನು ಈ ದೇಶದಲ್ಲಿ ಪಾವತಿಸುತ್ತಿದ್ದಾರೆ. ಇದೀಗ ಸರಕಾರದ ತೆರಿಗೆ ಸುಧಾರಣೆಯು ಮತ್ತೆ ಅದೇ ಬಡವರು ಮತ್ತು ಮಧ್ಯಮವರ್ಗದ ಮೇಲೆಯೇ ಹೊರೆಯನ್ನು ಹಾಕುತ್ತಿದೆ. ಕನಿಷ್ಠ ಆರೋಗ್ಯ, ಔಷಧ, ಶಿಕ್ಷಣದಂತಹ ಮೂಲಭೂತ ಅಗತ್ಯಗಳನ್ನು ಜಿಎಸ್‌ಟಿಯಿಂದ ಸಂಪೂರ್ಣ ಹೊರಗಿಟ್ಟರೆ ಅದರ ನೇರ ಲಾಭ ಈ ದೇಶದ ಬಡವರಿಗೆ ಸಿಗಬಹುದೇನೋ. ಆದರೆ ಆ ಪ್ರಯತ್ನ ಈ ಸುಧಾರಣೆಯಲ್ಲಿ ನಡೆದಿಲ್ಲ. ಈ ಜಿಎಸ್‌ಟಿ ಸುಧಾರಣೆಯೆನ್ನುವುದು ಬಡವರ ಕಣ್ಣೊರೆಸುವ ತಂತ್ರ ಮಾತ್ರವಲ್ಲ, ಗುಟ್ಟಾಗಿ ಕಾರ್ಪೊರೇಟ್‌ಗಳನ್ನು ಇನ್ನಷ್ಟು ಕೊಬ್ಬಿಸುವ ಉದ್ದೇಶವನ್ನು ಹೊಂದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News