×
Ad

ಕಾನೂನು ವ್ಯವಸ್ಥೆಯಿಂದ ಅನ್ಯಾಯಕ್ಕೆ ಒಳಗಾದರೆ ಪರಿಹಾರ ನೀಡುವವರಾರು?

Update: 2025-11-03 06:55 IST

ಸಾಂದರ್ಭಿಕ ಚಿತ್ರ

ವ್ಯವಸ್ಥೆಯು ಆರೋಪಿಗಳನ್ನು ಬಲಿಪಶುಗಳನ್ನಾಗಿ ಮಾಡುವ ಮತ್ತು ಅವರ ವಿರುದ್ಧ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸುವ ಪ್ರಕರಣಗಳು ಹೆಚ್ಚುತ್ತಿದ್ದು, ಅಂತಿಮವಾಗಿ ಅವರು ಖುಲಾಸೆಗೊಂಡರೂ ಅದಕ್ಕೂ ಮುನ್ನ ವರ್ಷಗಳ ಕಾಲ ಜೈಲಿನಲ್ಲಿ ಕೊಳೆತಿರುತ್ತಾರೆ. ಹೀಗೆ ತಪ್ಪಾಗಿ ಬಂಧಿಸಲ್ಪಟ್ಟ, ವಿಚಾರಣೆಗೊಳಗಾದ ಅಥವಾ ಶಿಕ್ಷೆಗೆ ಗುರಿಯಾದ ವ್ಯಕ್ತಿಗೆ ಪರಿಹಾರವನ್ನು ನೀಡುವ ಸಂಕೀರ್ಣ ವಿಷಯವನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ಮುಂದಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪದಲ್ಲಿ ಮರಣದಂಡನೆ ಶಿಕ್ಷೆ ಅನುಭವಿಸಿದ ಸಂತ್ರಸ್ತನೊಬ್ಬ ಸುಮಾರು 12 ವರ್ಷ ಜೈಲು ಶಿಕ್ಷೆ ಅನುಭವಿಸಿದ ಬಳಿಕ ನಿರಪರಾಧಿ ಎನ್ನುವುದು ಗೊತ್ತಾಗಿದೆ. ಪೊಲೀಸರು ಆತನ ವಿರುದ್ಧ ಕೃತಕ ಸಾಕ್ಷಿಯನ್ನು ಸೃಷ್ಟಿಸಿ ಶಿಕ್ಷೆ ಅನುಭವಿಸುವಂತೆ ಮಾಡಿದ್ದರು. ದೋಷಮುಕ್ತನಾಗಿರುವ ಆರೋಪಿಯು, ತನ್ನ ಮೂಲಭೂತ ಹಕ್ಕಿನ ಗಂಭೀರ ಉಲ್ಲಂಘನೆಗೆ ಸರಕಾರ ಹೊಣೆಯಾಗಿದ್ದು ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದರು. ಈ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್, ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್‌ನ ನೆರವನ್ನು ಕೋರಿದೆ. ಪೊಲೀಸರು ಯಾರ ಮೇಲಾದರೂ ಆರೋಪ ಪಟ್ಟಿಯನ್ನು ರೂಪಿಸಬಹುದು. ನಿರಪರಾಧಿ ಎನ್ನುವುದನ್ನು ಸಾಬೀತು ಪಡಿಸುವ ಹೊಣೆಗಾರಿಕೆ ಸಂತ್ರಸ್ತನದು ಎನ್ನುವ ವ್ಯವಸ್ಥೆಯೊಳಗೆ ‘ನ್ಯಾಯ’ ಸಿಕ್ಕಿ ಒದ್ದಾಡುತ್ತಿದೆ. ನ್ಯಾಯದಾನದಲ್ಲಿ ತಪ್ಪನ್ನು ಸರಿಪಡಿಸಲು ನಿರ್ದಿಷ್ಟ ಕಾನೂನು ನಿಬಂಧನೆಯನ್ನು ಜಾರಿಗೆ ತರುವಂತೆ ಕಾನೂನು ಆಯೋಗವು 2018ರಲ್ಲಿ ಶಿಫಾರಸು ಮಾಡಿದೆಯಾದರೂ, ಈ ಬಗ್ಗೆ ನಮ್ಮ ಕಾನೂನು ವ್ಯವಸ್ಥೆ ಗಂಭೀರವಾಗಿ ಚಿಂತಿಸಿಲ್ಲ. ಪೊಲೀಸರು ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿರುವುದು ನ್ಯಾಯಾಲಯದಲ್ಲಿ ಬೆಳಕಿಗೆ ಬಂದು ಎಷ್ಟೋ ಪ್ರಕರಣಗಳಲ್ಲಿ ಆರೋಪಿಗಳು ದೋಷಮುಕ್ತರಾಗುತ್ತಾರೆ. ಆದರೆ ಅಷ್ಟರಲ್ಲಿ ಆರೋಪಿಗಳು ಹಲವು ವರ್ಷಗಳನ್ನು ಜೈಲಿನಲ್ಲಿ ಕಳೆದಿರುತ್ತಾರೆ. ಪೊಲೀಸರು ಮಾಡಿದ ತಪ್ಪಿಗಾಗಿ ಅಮಾಯಕರು ಜೈಲು ಪಾಲಾದರೆ ಒಂದೋ ಅಂತಹ ತಪ್ಪು ಎಸಗಿದ ಪೊಲೀಸರಿಗೆ ಶಿಕ್ಷೆಯಾಗಬೇಕು ಅಥವಾ ಕನಿಷ್ಠ ಜೈಲು ಶಿಕ್ಷೆ ಅನುಭವಿಸಿದ ಸಂತ್ರಸ್ತನಿಗೆ ಪರಿಹಾರವನ್ನಾದರೂ ನೀಡಬೇಕು.

ಉತ್ತರ ಪ್ರದೇಶದ ರಾಮಪುರ ಸಿಆರ್‌ಪಿಎಫ್ ಶಿಬಿರದ ಮೇಲೆ 2007ರಲ್ಲಿ ದಾಳಿ ನಡೆಸಿ ಎಂಟು ಮಂದಿಯ ಸಾವಿಗೆ ಕಾರಣವಾದ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿತ್ತು. ಸ್ಥಳೀಯ ನ್ಯಾಯಾಲಯದಲ್ಲಿ ಆವರ ಆರೋಪ ಸಾಬೀತಾಗಿ ಅವರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗಿತ್ತು. ಆದರೆ ಈ ನಾಲ್ವರನ್ನು ಕಳೆದ ಅಕ್ಟೋಬರ್ 31ರಂದು ಅಲಹಾಬಾದ್ ಹೈಕೋರ್ಟ್ ದೋಷಮುಕ್ತಗೊಳಿಸಿದೆ. ಒಂದು ವೇಳೆ ಅವರು ಹೈಕೋರ್ಟ್ ಮೆಟ್ಟಿಲನ್ನು ತುಳಿಯದೇ ಇದ್ದಿದ್ದರೆ ತಾವು ಮಾಡದೇ ಇರುವ ತಪ್ಪಿಗಾಗಿ ಗಲ್ಲು ಶಿಕ್ಷೆಯನ್ನು ಅನುಭವಿಸಬೇಕಾಗಿತ್ತು. ಇವುಗಳ ನಡುವೆಯೂ ಪೊಲೀಸರ ತನಿಖೆಯ ವೈಫಲ್ಯದಿಂದ ಈವರೆಗೆ ಜೈಲಿನಲ್ಲಿ ಕೊಳೆಯಬೇಕಾಗಿ ಬಂದುದರ ನೈತಿಕ ಹೊಣೆಯನ್ನು ಯಾರು ಹೊರುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಯಬೇಕಾಗಿದೆ.

2006ರಂದು ಮುಂಬೈ ಲೋಕಲ್ ಟ್ರೈನ್‌ನಲ್ಲಿ ಸ್ಫೋಟ ನಡೆದು 180 ಜನರು ಮೃತಪಟ್ಟರು. ಮಾಧ್ಯಮಗಳ ಒತ್ತಡಕ್ಕೆ ಮಣಿದು ಪೊಲೀಸರು ಆತುರಾತುರವಾಗಿ ತನಿಖೆ ನಡೆಸಿ, 12 ಜನರನ್ನು ಪ್ರಮುಖ ಆರೋಪಿಗಳನ್ನಾಗಿ ಘೋಷಿಸಿದರು. 2015ರಲ್ಲಿ ಇವರಲ್ಲಿ ಐವರಿಗೆ ಮರಣದಂಡನೆ ಮತ್ತು ಏಳು ಜನರಿಗೆ ಜೀವಾವಧಿಯನ್ನು ನ್ಯಾಯಾಲಯ ಘೋಷಿಸಿತು. ಆದರೆ ಸುಮಾರು 19 ವರ್ಷಗಳ ಬಳಿಕ ಮುಂಬೈ ಹೈಕೋರ್ಟ್ ಎಲ್ಲ ಆರೋಪಿಗಳನ್ನು ನಿರಪರಾಧಿಗಳೆಂದು ಬಿಡುಗಡೆ ಮಾಡಿದೆ. ಆರೋಪಿಗಳು ಸ್ಫೋಟದಲ್ಲಿ ಭಾಗವಹಿಸಿದ್ದಾರೆ ಎನ್ನುವುದಕ್ಕೆ ಯಾವ ಸಾಕ್ಷ್ಯವೂ ಇಲ್ಲ ಎಂದು ನ್ಯಾಯಾಲಯ ಹೇಳಿತು. ಆದರೆ ಅದಾಗಲೇ ಸಂತ್ರಸ್ತರು ತಾವು ಮಾಡದ ತಪ್ಪಿಗಾಗಿ 19 ವರ್ಷಗಳ ಕಾಲ ಜೈಲಿನಲ್ಲಿ ನರಕ ಯಾತನೆಗಳನ್ನು ಅನುಭವಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಅವರಿಗೆ ದೈಹಿಕವಾಗಿ ಬರ್ಬರ ಚಿತ್ರಹಿಂಸೆ ನೀಡಿರುವುದಕ್ಕೆ ನ್ಯಾಯಾಲಯವೇ ಆಕ್ಷೇಪ ವ್ಯಕ್ತಪಡಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆರೋಪಿಗಳ ಹಣೆಯ ಮೇಲೆ ಪೊಲೀಸರು ಛಾಪಿಸಿದ ‘ಭಯೋತ್ಪಾದನೆ’ಯ ಕಳಂಕವನ್ನು ಅಳಿಸುವುದು ಸುಲಭವಿಲ್ಲ. ಈ ಆರೋಪಿಗಳ ಕುಟುಂಬಸ್ಥರು ಸಮಾಜದಲ್ಲಿ ಅಸ್ಪಶ್ಯರಂತೆ ಬಾಳಬೇಕಾಯಿತು. ಪೊಲೀಸರ ಬೇಜವಾಬ್ದಾರಿಯಿಂದ ಒಂದೆಡೆ ಅಮಾಯಕರು ಆರೋಪಿಗಳಾಗಿ ಗುರುತಿಸಿ ಜೈಲು ಶಿಕ್ಷೆ ಅನುಭವಿಸಿದರೆ, ಅತ್ತ ಸ್ಫೋಟ ನಡೆಸಿದ ನಿಜವಾದ ಭಯೋತ್ಪಾದಕರು ಶಿಕ್ಷೆಯಿಂದ ತಪ್ಪಿಸಿಕೊಂಡರು. ದೋಷಮುಕ್ತರಾದ ಅಷ್ಟೂ ಆರೋಪಿಗಳು ಬಳಿಕ ಸಮಾಜದಲ್ಲಿ ಬದುಕನ್ನು ಹೊಸದಾಗಿ ಕಟ್ಟಿಕೊಳ್ಳಬೇಕಾಗುತ್ತದೆ. ಅದು ಎಷ್ಟರಮಟ್ಟಿಗೆ ಸಾಧ್ಯ? ದೋಷಮುಕ್ತರೆಂದು ಘೋಷಿಸಿದಾಕ್ಷಣ ನ್ಯಾಯಾಲಯದ ಕೆಲಸ ಮುಗಿದು ಹೋಯಿತೆ? ಅವರನ್ನು ಅನ್ಯಾಯವಾಗಿ ಜೈಲಿನಲ್ಲಿ ಕೊಳೆಯುವಂತೆ ಮಾಡಿದ ಪೊಲೀಸರಿಗೆ ಶಿಕ್ಷೆಯಾಗಬೇಡವೆ? ಇದೇ ಸಂದರ್ಭದಲ್ಲಿ ಅನ್ಯಾಯವಾಗಿ ಜೈಲುಪಾಲಾಗುವಂತೆ ಮಾಡಿದ ಕಾನೂನು ವ್ಯವಸ್ಥೆಯ ತಪ್ಪಿನ ಹೊಣೆಗಾರಿಕೆಯನ್ನು ಸರಕಾರ ಹೊತ್ತುಕೊಂಡು ಸಂತ್ರಸ್ತರಿಗೆ ಪರಿಹಾರ ನೀಡಬೇಡವೆ?

ಬಹುತೇಕ ಭಯೋತ್ಪಾದನೆ ಸಂಬಂಧಿ ಪ್ರಕರಣಗಳಲ್ಲಿ ಪೊಲೀಸರು ತನಿಖೆಗೆ ಮುನ್ನವೇ ಆರೋಪಿಗಳನ್ನು ಘೋಷಿಸಿ ಬಿಟ್ಟಿರುತ್ತಾರೆ. ಸಾಕ್ಷ್ಯಗಳನ್ನು ಕೃತಕವಾಗಿ ಸೃಷ್ಟಿಸುವುದನ್ನೇ ತನಿಖೆ ಎಂದು ಕರೆಯಲಾಗುತ್ತದೆ. ಇಂತಹ ಪೂರ್ವಾಗ್ರಹ ಪೀಡಿತ ತನಿಖೆಗೆ ಈಗಾಗಲೇ ನೂರಾರು ಜನರು ಬಲಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಯಎಪಿಎ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ದ್ವೇಷ ಸಾಧಿಸುತ್ತಿರುವುದು ವ್ಯವಸ್ಥಿತವಾಗಿ ನಡೆಯುತ್ತಿದೆ. ಕಳೆದ ಐದು ವರ್ಷಗಳಿಂದ ತಾನು ಮಾಡದ ತಪ್ಪಿಗಾಗಿ ಉಮರ್ ಖಾಲಿದ್ ಅವರು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಐದು ವರ್ಷ ಕಳೆದರೂ ಆತನ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಪೊಲೀಸರು ವಿಫಲರಾಗಿದ್ದಾರೆ. ನ್ಯಾಯಾಲಯವು ಆತನಿಗೆ ಜಾಮೀನು ನೀಡಲು ಪದೇ ಪದೇ ನಿರಾಕರಿಸಿದೆ. ಅಂದರೆ ಉಮರ್ ಖಾಲಿದ್ ಜೈಲಿನಲ್ಲಿ ಕೊಳೆಯುವಂತಾಗಲು ಪೊಲೀಸರ ಸಂಚಿಗೆ ನ್ಯಾಯಾಲಯವೂ ಕೈ ಜೋಡಿಸಿದಂತಾಯಿತು. ಈ ಹಿಂದೆ ಫಾದರ್ ಸ್ಟ್ಯಾನ್ ಸ್ವಾಮಿ ವಿಚಾರಣಾ ಹಂತದಲ್ಲಿ ಜೈಲಿನಲ್ಲೇ ಮೃತಪಟ್ಟರು. ಅನಾರೋಗ್ಯವನ್ನು ಮುಂದಿಟ್ಟು ಅವರು ಪದೇ ಪದೇ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರೂ ನ್ಯಾಯಾಲಯ ಅದನ್ನು ನಿರಾಕರಿಸಿತು. ಒಂದು ರೀತಿಯಲ್ಲಿ ಜೈಲಿನಲ್ಲಿ ಅವರನ್ನು ವ್ಯವಸ್ಥಿತವಾಗಿ ಸಾಯಿಸಲಾಯಿತು. ಸಾಮಾಜಿಕ ಹೋರಾಟಗಾರ ಸಾಯಿಬಾಬಾ ಅವರ ಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಜಾಮೀನು ನೀಡಲು ಅವಕಾಶವಿದ್ದಾಗಲೂ ನ್ಯಾಯಾಲಯವೇ ಉದ್ದೇಶಪೂರ್ವವಾಗಿ ಜಾಮೀನು ನಿರಾಕರಣೆ ಮಾಡುವುದರಿಂದ ಹಲವು ಅಮಾಯಕರು ಮಾಡದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದಕ್ಕೆ ಪರಿಹಾರವನ್ನು ನೀಡುವವರು ಯಾರು? ಎನ್ನುವ ಪ್ರಶ್ನೆಗೂ ಸುಪ್ರೀಂಕೋರ್ಟ್ ಉತ್ತರಿಸಬೇಕಾಗುತ್ತದೆ. ಇತ್ತೀಚೆಗೆ ಹಲವು ರಾಜ್ಯಗಳು ಜಾರಿಗೆ ತಂದಿರುವ ಮತಾಂತರ ಕಾಯ್ದೆಯು ರಾಜಕೀಯ ದುರುದ್ದೇಶಕ್ಕಾಗಿಯೇ ಜಾರಿಗೊಂಡದ್ದಾಗಿದೆ. ಈ ಕಾಯ್ದೆಯ ಮೂಲಕ ಹಲವು ಅಮಾಯಕರನ್ನು ಜೈಲಿಗೆ ತಳ್ಳಲಾಗಿದೆ. ಮತಾಂತರ ಕಾಯ್ದೆಯ ದುರುಪಯೋಗದ ವಿರುದ್ಧ ಸುಪ್ರೀಂಕೋರ್ಟ್ ಇತ್ತೀಚೆಗೆ ಕಳವಳವ್ಯಕ್ತಪಡಿಸಿತ್ತು ಮಾತ್ರವಲ್ಲ, ಹಲವು ಎಫ್‌ಐಆರ್‌ಗಳನ್ನು ರದ್ದುಗೊಳಿಸಿತ್ತು. ಗೋಹತ್ಯೆ ನಿಷೇಧ ಕಾಯ್ದೆಯು ನಿರಪರಾಧಿಗಳನ್ನು ಶಿಕ್ಷಿಸುವುದಕ್ಕೆ ಬಳಕೆಯಾಗಿದ್ದೇ ಹೆಚ್ಚು. ಕಾನೂನು ವ್ಯವಸ್ಥೆಯಿಂದಲೇ ಅನ್ಯಾಯಕ್ಕೊಳಗಾಗುವ ಸಂತ್ರಸ್ತರಿಗೆ ಪರಿಹಾರ ನೀಡುವುದೆಂದರೆ ವ್ಯವಸ್ಥೆ ತನ್ನಿಂದ ಘಟಿಸಿದ ತಪ್ಪನ್ನು ಒಪ್ಪಿಕೊಳ್ಳುವುದು ಎಂದು ಅರ್ಥ. ಅಷ್ಟೇ ಅಲ್ಲ ಸಂತ್ರಸ್ತನಿಗೆ ಬದುಕನ್ನು ಮರು ನಿರ್ಮಾಣ ಮಾಡಿಕೊಳ್ಳಲು ನೆರವಾಗುವುದೂ ಅದರ ಕರ್ತವ್ಯ. ಇಲ್ಲದೆ ಇದ್ದರೆ ಅಪರಾಧಿಗಳನ್ನು ಶಿಕ್ಷಿಸಬೇಕಾದ ಕಾನೂನು ವ್ಯವಸ್ಥೆಯೇ ಅಪರಾಧಿಗಳನ್ನು ಸೃಷ್ಟಿಸುವ ಕೆಲಸಕ್ಕೆ ಇಳಿದಂತಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News