ಯಾರು ಹಿತವರು? | Vartha Bharati- ವಾರ್ತಾ ಭಾರತಿ

ಯಾರು ಹಿತವರು?

ಸಮಾಜ ಸದಾ ಕತ್ತಲಿನಲ್ಲೇ ಇರುತ್ತದೆ ಮತ್ತು ಬಹುಪಾಲು ಕತ್ತಲಿನಲ್ಲೇ-ಕನಿಷ್ಠ ಮಬ್ಬುಗತ್ತಲಿನಲ್ಲಾದರೂ- ಇರಬೇಕೆಂದು ಬಯಸುತ್ತದೆ. ಯಾರಾದರೂ ಕೈಹಿಡಿದು ನಡೆಸಬೇಕು; ಲಾಟೀನು ಹಿಡಿದು ದಾರಿ ತೋರಿಸಬೇಕು. ಆದರೆ ಹೀಗೆ ಮಾರ್ಗದರ್ಶಿಸುವವರು ಪ್ರಮಾಣಿಕರಾಗಿರುತ್ತಾರೆಂದು, ದಕ್ಷರಾಗಿರುತ್ತಾರೆಂದು ಕರುಣಾಳುಗಳಾಗಿರುತ್ತಾರೆಂದು ಖಾತ್ರಿಯೇನು?


ರಾಜಕೀಯ ಮತ್ತು ರಾಜಕಾರಣವೆಂದರೆ ಅಸ್ಪಶ್ಯವೆಂದು ಬಗೆಯುವ ಚಿಂತನೆಯು ಆದರ್ಶವೂ ಅಲ್ಲ, ವಾಸ್ತವವೂ ಅಲ್ಲ. ಒಬ್ಬನೇ ವ್ಯಕ್ತಿ ಅಥವಾ ಒಂದು ವಂಶವು ದೇಶವನ್ನು, ರಾಜ್ಯವನ್ನು ಆಳುವುದು ಈಗ ಜಗತ್ತಿನೆಲ್ಲೆಡೆ (ಉತ್ತರ ಕೊರಿಯಾ, ಮಧ್ಯಪೂರ್ವ ಮತ್ತು ಆಫ್ರಿಕಾದ ಖಂಡದ ಕೆಲವು ಅಪವಾದಗಳನ್ನು ಹೊರತುಪಡಿಸಿ) ಅಳಿದಿದೆ. ಅದನ್ನು ರಾಜಸತ್ತೆಯೆಂದೋ ಸರ್ವಾಧಿಕಾರವೆಂದೋ ಕರೆಯಬಹುದಿತ್ತು. ಅದು ಅಳಿದು ಪ್ರಜಾಸತ್ತೆಯು ಉದಿಸಿದ ಮೇಲೆ ಜನರಿಗೆ ಎಂದಿಗಿಂತ ಹೆಚ್ಚು ಹೊಣೆ ಹೆಗಲೇರಿದೆ. ತಮ್ಮನ್ನು ತಾವು ಆಳುವ, ಆಳಿಸಿಕೊಳ್ಳುವ ಪದ್ಧತಿ-ಅದು ಪ್ರಜಾತಂತ್ರವೆನಿಸುತ್ತದೆ. ಅದರ ಹಿಂದೆ ಸಮಾಜವಾದವಿರಬಹುದು, ಸಮತಾವಾದವಿರಬಹುದು, ಅಥವಾ ತಾತ್ವಿಕ ಹಿನ್ನೆಲೆಯಿಲ್ಲದೇ ಇರುವ ಸರಳ ಮತ್ತು ಬಹುಮತದ ಪ್ರಜಾಪ್ರಭುತ್ವ ಪದ್ಧತಿಯಿರಬಹುದು ಅಂತೂ ಜನರೇ ತಮ್ಮ ಬದುಕಿನ ಭವಿಷ್ಯವನ್ನು ಆಯ್ಕೆಮಾಡುತ್ತಿರುತ್ತಾರೆ. ಇದರಲ್ಲೂ ಸಂಸದೀಯ ಮತ್ತು ಅಧ್ಯಕ್ಷೀಯ ರೀತಿಯ ರಾಜನೀತಿ ಕೆಲಸ ಮಾಡುತ್ತಿರುತ್ತದೆ. ಕಮ್ಯುನಿಸ್ಟ್ ಚೀನಾದಲ್ಲೂ ಸರ್ವಾಧಿಕಾರದ ವ್ಯಕ್ತಿಯೊಬ್ಬನನ್ನು ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆಯಿಂದ ವಿಮುಕ್ತಿ ಹೊಂದಲು ಮತ್ತೆ ಚುನಾವಣೆ ಅಥವಾ ಇನ್ನಿತರ ಆಯ್ಕೆಯ ಪ್ರಕ್ರಿಯೆ ನಡೆಯಬೇಕಷ್ಟೇ. ಅಷ್ಟು ಹೊತ್ತಿಗೆ ಆಯ್ಕೆಯಾದವನು ಸರ್ವಶಕ್ತನಾಗಿ ತಾನೇರಿದ ಏಣಿಯ ಮೆಟ್ಟಲುಗಳನ್ನು ಒದೆಯುತ್ತಿರುತ್ತಾನೆ. ಜನರ ಮಟ್ಟಿಗೆ ಇದೊಂದು ರೀತಿಯಲ್ಲಿ ಚಾಟಿಯನ್ನು ಕಟ್ಟಿ ಅದನ್ನು ಇನ್ನೊಬ್ಬರಲ್ಲಿ ಕೊಟ್ಟು ಹೊಡೆಸಿಕೊಂಡಂತೆ!

ಪ್ರಜಾಪ್ರಭುತ್ವದಲ್ಲೂ ಪ್ರಜೆ ನಿರ್ಣಾಯಕನಲ್ಲವೆಂಬುದನ್ನು ಆಧುನಿಕ ರಾಜಕಾರಣ ತೋರಿಸಿಕೊಟ್ಟಿದೆ. ಹೆಚ್ಚಿನ ಪ್ರಜಾಪ್ರಭುತ್ವ ದೇಶಗಳಲ್ಲಿ ಸರಳಬಹುಮತವೇ ಆಯ್ಕೆಯ ಬುನಾದಿ. ಆದರೆ ಇಲ್ಲೂ ಇರುವ ಕಗ್ಗಂಟೆಂದರೆ- ಇಬ್ಬರೇ ಅಭ್ಯರ್ಥಿಗಳಿದ್ದರೆ ಆಗ ಬಹುಮತ ನಿರ್ಣಾಯಕ ಹೌದು; ಆದರೆ ಇಬ್ಬರಿಗಿಂತ ಹೆಚ್ಚಿನ ಅಭ್ಯರ್ಥಿಗಳಿ ದ್ದಾಗ ಬಹುಮತವೆಂಬುದು ಒಂದು ಪ್ರಹಸನವಾಗುತ್ತದೆ. ಅತೀ ಹೆಚ್ಚು ಮತಗಿಟ್ಟಿಸಿಕೊಂಡವರು ಆಯ್ಕೆಯಾಗುತ್ತಾರೆ. ಈ ದೇಶದ ಚುನಾವಣೆಗಳಲ್ಲಿ ಕೇವಲ ಒಂದು ಮತ ಹೆಚ್ಚು ಬಂದು ಆಯ್ಕೆಯಾದ ಉದಾಹರಣೆಗಳಿವೆ; ಒಟ್ಟು ಮತಗಳಲ್ಲಿ ಅರ್ಧ ಬಿಡಿ; ಕಾಲು ಭಾಗದಷ್ಟೂ ಮತ ಬೀಳದೆ ಆಯ್ಕೆಯಾದವರಿದ್ದಾರೆ; ಸಮಾನ ಮತಗಳು ಬಂದು ಲಾಟರಿಯಿಂದ ಆಯ್ಕೆಯಾದವರೂ ಇದ್ದಾರೆ. ಹೀಗಾಗಿ ಬಹಳಷ್ಟು ಜನಪ್ರತಿನಿಧಿಗಳು-ಅದ್ಯಾವ ಚುನಾವಣೆಯಾದರೂ ತಾವು ಸಮಗ್ರವಾಗಿ ತಮ್ಮ ಕ್ಷೇತ್ರವನ್ನು ಪ್ರತಿನಿಧಿಸುತ್ತೇವೆಂದು ಬೀಗುವುದು ಸಾಧ್ಯವಿಲ್ಲ.

ವ್ಯವಸ್ಥೆ ಯಾವತ್ತೂ ಶಾಶ್ವತ ಮತ್ತು ಅತ್ಯುತ್ತಮ ಪರಿಹಾರಗಳನ್ನು ನೀಡುವುದಿಲ್ಲ; ಅಂತಹ ಪರಿಹಾರದ ಔಷಧವನ್ನು ನೀಡುವುದು ಯಾವ ಚಾಣಾಕ್ಷನಿಗೂ ಸಾಧ್ಯವಾಗಿಲ್ಲ; ಚಾಣಕ್ಯನಿಗೂ ತನ್ನ ನೀತಿಯಲ್ಲಿ ಇಂತಹ ಒಂದು ಪ್ರಮೇಯ ಭವಿಷ್ಯದಲ್ಲಿ ಎದುರಾಗಬಹುದೆಂಬ ನಿರೀಕ್ಷೆಯೂ ಇರಲಿಲ್ಲವೇನೋ? ಬದಲಾಗಿ ಇದ್ದುದರಲ್ಲಿ ತರ್ಕಿಸಬಲ್ಲ ಒಂದು ಮಾರ್ಗೋಪಾಯವನ್ನು ನೀಡಿ ಕಾಯಿಲೆ ಗುಣವಾದ ಅನುಭವವನ್ನು ನೀಡುತ್ತದೆ ಮತ್ತು ಇಂತಹ ಸೂತ್ರದಲ್ಲೇ ಜಯಗಳಿಸಬಲ್ಲ ಕುಟಿಲೋಪಾಯಗಳನ್ನು ಅದು ಕುಮತಿಗಳಿಗೆ ಹೇಳಿಕೊಡುತ್ತದೆ. ಮೈಗೆ ಎಣ್ಣೆ ಹಚ್ಚಿಕೊಂಡು ಕುಸ್ತಿಮಾಡುವಾಗ ಕೈಜಾರುವಿಕೆಯನ್ನು ತಪ್ಪಿಸಿಕೊಳ್ಳುವ ಸ್ಪರ್ಧೆ ನಡೆಯುತ್ತದೆಯೇ ಹೊರತು ಶಕ್ತಿಯ ಅಥವಾ ಕೌಶಲ್ಯದ ಸ್ಪರ್ಧೆಯಲ್ಲ. (ಇಂತಹ ಕುಟಿಲತೆಗಳಿಂದಾಗಿಯೇ ಚಾಣಕ್ಯನಿಗೆ ಕೌಟಿಲ್ಯನೆಂದೂ ಕರೆದರೇನೋ?) ನಮ್ಮೆಲ್ಲ ಸಂಶೋಧನೆಗಳು ಇದ್ದುದರಲ್ಲೇ ಅತ್ತ-ಇತ್ತ ಹೊಂದಿಸುವುದಕ್ಕೇ ವ್ಯಯವಾಗುತ್ತದೆಯೇ ಹೊರತು ಹೊಸತನ್ನು ಹುಡುಕುವುದಕ್ಕಲ್ಲ. ಇಂತಹ ಯಥಾಸ್ಥಿತಿಯಲ್ಲಿ ಆಯ್ಕೆಯ ಸಂದರ್ಭ ಬಂದಾಗ ಜನತೆ ಹೀಗೇ ವರ್ತಿಸಬೇಕೆಂದು ಹೇಳುವವರಾದರೂ ಯಾರು? ಸಮಾಜ ಸದಾ ಕತ್ತಲಿನಲ್ಲೇ ಇರುತ್ತದೆ ಮತ್ತು ಬಹುಪಾಲು ಕತ್ತಲಿನಲ್ಲೇ-ಕನಿಷ್ಠ ಮಬ್ಬುಗತ್ತಲಿನಲ್ಲಾದರೂ-ಇರಬೇಕೆಂದು ಬಯಸುತ್ತದೆ. ಯಾರಾದರೂ ಕೈಹಿಡಿದು ನಡೆಸಬೇಕು; ಲಾಟೀನು ಹಿಡಿದು ದಾರಿ ತೋರಿಸಬೇಕು. ಆದರೆ ಹೀಗೆ ಮಾರ್ಗದರ್ಶಿಸುವವರು ಪ್ರಮಾಣಿಕರಾಗಿರುತ್ತಾರೆಂದು, ದಕ್ಷರಾಗಿರುತ್ತಾರೆಂದು ಕರುಣಾಳುಗಳಾಗಿರುತ್ತಾರೆಂದು ಖಾತ್ರಿಯೇನು? ಮುಂದಿರುವುದು ಭವ್ಯ ಬದುಕೇ ಅಥವಾ ಹಾಳುಕೊಂಪೆಯೇ ಎಂದು ಮುನ್ನೆಚ್ಚರಿಕೆ ನೀಡುವವರ್ಯಾರು?

ಇಂಥಲ್ಲೇ ಸಮಾಜದ ಚಿಂತಕರ ಅನುಭವದ ಮೂಸೆಯಿರುವುದು. ಇದ್ದರೆ ಸಾಲದು; ಅದನ್ನು ಜನತೆಯ ಮುಂದಿಡಬೇಕು. ಆದರೆ ಕ್ಲಿಷ್ಟಕರವಾದ ಪ್ಲೇಟೋ, ರಸೆಲ್, ಫುಕೋ, ಗ್ರಾಮ್ಶಿ, ಚೋಮ್ಸ್ಕಿ ಮುಂತಾದವರ ಗಹನವಾದ ರಾಜಕೀಯ ಸಮೀಕರಣದ ಭಾಷೆಯಲ್ಲಿ ಹೇಳಿದರೆ ಪ್ರಯೋಜನವಿಲ್ಲ. ಜನರಿಗೆ ಅರ್ಥವಾಗುವ ಭಾಷೆ, ತರ್ಕ ಮತ್ತು ರೀತಿ-ನೀತಿಗಳಲ್ಲಿ ವಿವರಿಸಬೇಕು. ಒಟ್ಟರ್ಥದಲ್ಲಿ ಜನರಿಗೆ ಚಿಂತಕರು ದಾರಿದೀಪವಾಗಬೇಕು; ಬೆಳಕಾಗಬೇಕು. ಕವಿಯು ‘‘ಕರುಣಾಳು ಬಾ ಬೆಳಕೆ, ಮಸುಕಿದೀ ಮಬ್ಬಿನಲಿ, ಕೈಹಿಡಿದು ನಡೆಸೆಮ್ಮನು’’ ಎಂದು ಹೇಳಿದ್ದು ಇದೇ ಹಿನ್ನೆಲೆಯಲ್ಲಿ ಎಂದೂ ಹೇಳಬಹುದು. ಅಲ್ಲೂ ಕೊನೆಯ ಪದವು ‘ಎನ್ನನು’ ಎಂದಿಲ್ಲ; ‘ಎಮ್ಮನು’ ಎಂದಿದೆ. ಇಂತಹ ಸಮುಷ್ಟಿ ಪ್ರಜ್ಞೆಯು ಅಲಿಖಿತ, ಅನಧಿಕೃತ ಜನಪ್ರತಿನಿಧಿಗಳಂತಹ ನಾಗರಿಕರಲ್ಲೂ ಇರಬೇಕು. ಇಷ್ಟೆಲ್ಲ ತಾತ್ವಿಕ ಹಿನ್ನೆಲೆಯಲ್ಲಿ ನಾವು ಎಲ್ಲಾ ಚುನಾವಣೆಗಳನ್ನೂ ಎದುರಿಸ ಬೇಕಾಗಿದೆ: ಪ್ರಾಯಃ ನಮ್ಮ ಬದುಕನ್ನು ಅತೀ ಹೆಚ್ಚು ಪ್ರಭಾವಿಸುವ ದೇಶದ ಮತ್ತು ರಾಜ್ಯಗಳ ಚುನಾವಣೆಯನ್ನು ನಾವು ‘ಇದೂ ಒಂದು ನಾಟಕ’ ಎಂದು ತಿಳಿದು ಹತಾಶಭಾವದಿಂದ ವರ್ತಿಸುವುದರಿಂದಲೇ ಅದರ ಲಾಭ ವನ್ನು ಎಲ್ಲ ದುರುಳರು, ಧೂರ್ತರು ಪಡೆದುಕೊಂಡು ನಮಗೆ ಮುಂದಿನ ಅವಧಿಗೆ ‘ಕೈಕಟ್ಟು-ಬಾಯ್ಮುಚ್ಚು’ ಎಂಬ ಸಂದರ್ಭವನ್ನು ಸೃಷ್ಟಿಸುತ್ತಾರೆ.

ಇಂದಿನ ಸಂದರ್ಭದಲ್ಲಿ ಸಮಾಜವನ್ನು ಕಟ್ಟುವ ಕೆಲಸಕ್ಕೆ ನಮ್ಮ ರಾಜಕಾರಣಿಗಳು ಬದ್ಧರಾಗಿದ್ದಾರೆಂದು ತಿಳಿಯುವಷ್ಟು ಮೂರ್ಖತನ ಬೇರೊಂದಿಲ್ಲ. ಹೇಳೀಕೇಳೀ ರಾಜಕಾರಣಿಗಳು ವೃತ್ತಿಪರರು. ಸಮಾಜ ದಲ್ಲಿರುವ ಇತರರು ಒಳ್ಳೆಯವರೆಂದೇನಿಲ್ಲ. ಉದರನಿಮಿತ್ತಂ ಬಹುಕೃತ ವೇಷಂ! ಆದರೆ ರಾಜಕಾರಣದ ವೇಷ ನಮ್ಮೆಲ್ಲ ಕಲ್ಪನೆಗಳನ್ನು ಮೀರಿದ್ದು. ಅಲ್ಲಿ ಇಂದು ರಾಮನ ವೇಷ ತೊಟ್ಟವನು ನಾಳೆ ರಾವಣನ ವೇಷ ತೊಡುತ್ತಾನೆ (ರಾವಣನೇ ಆಗುತ್ತಾನೆ!) ನಾವು ಯಾರಿಗೆ ಕೈಚಪ್ಪಾಳೆ ತಟ್ಟಿದ್ದೇವೆಂದು ಗೊತ್ತಿಲ್ಲದೆ ತಡಕಾಡುತ್ತೇವೆ. ಒಂದಷ್ಟು ಜನರು ಹಣ ಸಂಪಾದಿಸುವ ಬಗೆಯನ್ನು ಬಹುಜನರು ಹಣ ಕಳೆದುಕೊಳ್ಳುವ ಮೂಲಕ ತೋರಿಸಿಕೊಡುತ್ತಾರೆ. ನಮ್ಮ ಮತದಾನದ ಬಗೆ ಹೇಗಿದೆಯೆಂದರೆ ‘ನೋಡು ಕೈಯನ್ನು ಬೆಂಕಿಯಲ್ಲಿಟ್ಟರೆ ಕೈಸುಡುತ್ತದೆ’ ಎಂದು ಕೈಯನ್ನು ಬೆಂಕಿಯಲ್ಲಿಟ್ಟೇ ತೋರಿಸುವ ಮತದಾರನನ್ನು ನೋಡಿ ಇನ್ನೊಬ್ಬನೂ ತನ್ನ ಕೈಯನ್ನು ಅದೇ ಬೆಂಕಿಯಲ್ಲಿಡುತ್ತಾನೆ. ಇದನ್ನು ನೋಡುವ ಮತ್ತೊಬ್ಬನ ಗತಿಯೂ ಅದೇ. ಬಳ್ಳಿಗುರುಡರು ಕೂಡಿ ಹಳ್ಳವನ್ನು ಕಳೆದಂತೆ ಎಲ್ಲರೂ ನೀರಿನಲ್ಲಿ ಮುಳುಗುತ್ತಾರೆ. ಇದನ್ನು ನೋಡುತ್ತಲೇ ಇರುವ ಮಕರಾಕ್ಷ ರಾಜಕಾರಣಿಗಳು ನಗುತ್ತಿರುತ್ತಾರೆ.

 ಜನರು ಇಂತಹ ಪ್ರಶ್ನೆಗಳನ್ನು ಎದುರಿಸಿ ಉತ್ತರಿಸುವುದಿರಲಿ, ಇಂತಹ ಪ್ರಶ್ನೆಗಳಿವೆಯೇ ಇಲ್ಲವೇ ಎಂದೂ ಪ್ರಶ್ನೆ ಹಾಕುವುದಿಲ್ಲ; ಹಾಕಿಕೊಳ್ಳುವುದಿಲ್ಲ. ಕಾಣುವಂತಹ ಯಾವ ಜೀವನ ನಿಮಿತ್ತವೂ ಇಲ್ಲದೇ ರಾಜಕಾರಣಿಗಳು ಹೇಗೆ ಇಷ್ಟೊಂದು ಭವ್ಯವಾಗಿ, ದಿವ್ಯವಾಗಿ ಬದುಕುತ್ತಾರೆ? ಚುನಾವಣೆ ಬರಬೇಕಾಗಿಲ್ಲ; ನಿತ್ಯದ ಬದುಕಿನಲ್ಲೂ ಅವರದು ಪಂಚತಾರಾ ವೈಭವ. ವೇಶ್ಯೆಗಾದರೂ ತನ್ನ ಆದಾಯದ ಮೂಲವೇನೆಂದು ಗೊತ್ತಿರುತ್ತದೆ. ಸಾರ್ವಜನಿಕವಾಗಿ ಹೇಳದಿದ್ದರೂ ಜನರಿಗೆ ಗೊತ್ತಿದೆ. ಆದರೆ ರಾಜಕಾರಣಿಗಳಿಗೆ ತಮ್ಮ ಅದಾಯಮೂಲವನ್ನು ಹೇಳುವುದು ಸಾಧ್ಯವಿಲ್ಲ; ವಿವರಿಸುವ ಗೋಜಿಗೆ ಅವರು ಹೋಗುವುದೂ ಇಲ್ಲ. ಆದರೂ ಜನರು ಅವರನ್ನು ಪ್ರಶ್ನೆ ಮಾಡದೆ ನಂಬುವುದೂ ಜಗತ್ತಿನ ಎಂಟನೆಯ ಅದ್ಭುತ. ರಾಜಕಾರಣದಲ್ಲೂ ಇನ್ನೊಂದು ಒಳಸುಳಿಯಿದೆ: ಗೊತ್ತಿರಬಹುದಾದ ಆದಾಯ ಮೂಲಕ್ಕಿಂತ ಹೆಚ್ಚು ಆದಾಯವಿರುವ ಸರಕಾರಿ ಅಧಿಕಾರಿ ಗಳ ವಿರುದ್ಧ ಭ್ರಷ್ಟಾಚಾರದ ಕಾನೂನಿನ ತೂಗುಕತ್ತಿಯಾದರೂ ಇರುತ್ತದೆ. ಆದರೆ ಆಳುವ ರಾಜಕಾರಣಿಗಳನ್ನು ಆದಾಯಕರ ಅಥವಾ ಇತರ ಕಾನೂನುಪಾಲಕರ ಇಲಾಖೆಗಳು ಪ್ರಶ್ನಿಸುವುದಿಲ್ಲ. ಅವರ ಪ್ರಶ್ನೆಗಳೇನಿದ್ದರೂ ಅದು ಅಧಿಕಾರದಲ್ಲಿಲ್ಲದ ಇತರ ರಾಜಕಾರಣಿಗಳ ಮತ್ತು ಕೆಳಹಂತದ ನೌಕರರ ಮೇಲೆ.

ಅಲ್ಲೂ ಇಂತಹ ಇಲಾಖೆಗಳು ತಮ್ಮ ಸುರಕ್ಷತೆಯನ್ನು ಕಾಪಾಡಿಕೊಂಡಿರುತ್ತಾರೆ. ಕಾನೂನಿನ ಹೆಣಿಗೆಯ ಸೂಕ್ಷ್ಮ ಸೂತ್ರದ ಬದ್ಧತೆಯನ್ನು ಸಡಿಲಗೊಳಿಸಿದರಾಯಿತು; ಅದು ಯಥಾರ್ಥದಲ್ಲಿ ಪ್ರಯೋಗವಾಗುವುದಿಲ್ಲ; ಅನುಷ್ಠಾನಗೊಳ್ಳುವುದಿಲ್ಲ. ಅದಿಲ್ಲವಾದರೆ ಇಷ್ಟೊಂದು ಭ್ರಷ್ಟಾಚಾರದ ಪ್ರಕರಣಗಳು ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿಗಳ ಮತ್ತು ಇತರ ಪ್ರತಿಷ್ಠಿತ ರಾಜಕಾರಣಿಗಳ ವಿರುದ್ಧ ದಾಖಲಾದರೂ ಅವರಿನ್ನೂ ಜನಹಿತವೇ ನಮ್ಮ ಹಿತ ಎನ್ನುತ್ತ ನೂರಾರು ಕೋಟಿಗಟ್ಟಲೆ ಮಂಜೂರಾತಿಯ ಭರವಸೆಗಳನ್ನು ನೀಡುತ್ತಾ ನಿರ್ಲಜ್ಜೆಯಿಂದ ತಲೆಯೆತ್ತಿ ಪ್ರವಾಸ-ಪ್ರಚಾರ ಕೈಗೊಳ್ಳುತ್ತಾರಲ್ಲ-ಇದು ಹೇಗೆ ಸಾಧ್ಯ? ಕೆಲವರ ಮೇಲಾದರೂ ಜಾಮೀನು ರಹಿತ ವಾರಂಟುಗಳು ಪೊಲೀಸರ ಜೇಬಿನಲ್ಲಿರುತ್ತವಾದರೂ ಅವು ಅಲ್ಲೇ ಉಳಿದು ಅದೇ ಪೊಲೀಸರು ಅದೇ ರಾಜಕಾರಣಿಗೆ ಭದ್ರತೆಯ ಹೊಣೆಯಲ್ಲಿರುತ್ತಾರೆ. ‘‘ತನ್ನ ಶಾಪಗ್ರಸ್ತ ಸೆರೆಗೆ ತಾನೇ ಪಹರೆ’’ ಎಂಬ ಕವಿವಾಣಿಯ ಕ್ರೂರ, ವ್ಯಂಗ್ಯವಿದು.

ಜನರಲ್ಲೂ ಬಹುಪಾಲು ಸ್ವಾರ್ಥಸಾಧಕರು. ಅದರಲ್ಲೇ ಜನರಿಗೆ ಬದುಕು ಸಾರ್ಥಕವಾಗುತ್ತದೆ. ಕಾಲ-ದೇಶದ ವ್ಯತ್ಯಾಸ, ಅಂತರಗಳಿಲ್ಲದೆ ಜನರು ಉನ್ಮಾದದಿಂದ ವ್ಯವಹರಿಸುವುದು ಕೆಟ್ಟ ನಡತೆಯಲ್ಲಿ ಮಾತ್ರವೆಂದೆನ್ನಿಸುತ್ತದೆ. ಇಂಥವರಿಗೆ ರಾಜಕಾರಣಿಗಳು ಚಿನ್ನದ ಗಣಿಗಳು. ಆದ್ದರಿಂದಲೇ ರಾಜಕಾರಣಿಗಳಿಗೆ ಅಷ್ಟೊಂದು ಬೆಂಬಲಿಗರು. ಒಂದು ರ್ಯಾಲಿ, ಮೆರವಣಿಗೆ, ಸಭೆ ಎಂದಾದರೆ ಸಾಕು, ಅಲ್ಲಿ ಎಷ್ಟೊಂದು ಜನ! ಇವರೆಲ್ಲ ಉದ್ಯೋಗ ಮತ್ತು ಉದ್ದೇಶದ ಹಂಗಿಲ್ಲದೆ ನೆರೆದಿರುತ್ತಾರೆ. ಒಂದಷ್ಟು ಲಾಭ, ಒಂದಷ್ಟು ಭರವಸೆ ಇವುಗಳ ಹಿಂದೆ ಹೋಗುವ ಇಂತಹವರಿಂದಾಗಿಯೇ ರಾಜಕಾರಣಿಗಳು ಇಷ್ಟೊಂದು ಸೊಕ್ಕಿದ್ದಾರೆ. ಜನಸೇವಕರೆಂದು ಹೇಳಿಕೊಳ್ಳುವ ಯಾವ ರಾಜಕಾರಣಿಯೂ ಅಂತಹ ಮನಸ್ಥಿತಿಯನ್ನು ಹೊಂದಿರುವುದಿಲ್ಲವೆಂಬುದು ಜನರಿಗೆ ಅರ್ಥವಾಗುವುದೇ ಇಲ್ಲ. ಈ ಬಾರಿ (ಅಥವಾ ಇನ್ನೊಮ್ಮೆ) ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ ಎಂದು ಯಾವನೊಬ್ಬ ರಾಜಕಾರಣಿಯು ಜನರೆದುರು ಬಂದಾಗ ಆತನನ್ನು ನಿಮಗೇ ಈ ಅವಕಾಶವೇಕೆ ಇತರರಿಗೂ ಇಂತಹ ಅವಕಾಶ ಸಿಕ್ಕಲಿ ಎಂದು ಯಾರೂ ಕೇಳುವುದಿಲ್ಲ ಯಾಕೆ?

ಜನರಿಗೂ ಗುಲಾಮತನದ ಸುಖ ಬೇಕು. ಇನ್ನೊಬ್ಬರ ಆಣತಿಯಂತೆ ದುಡಿಯುವುದು, ಇನ್ನೊಬ್ಬರು ಕೊಟ್ಟ ಭಿಕ್ಷೆಯಲ್ಲಿ ಬದುಕುವುದು ಇವು ಬಹುಜನರ ಸುಖದ ಸೂತ್ರ. ಮುಖ್ಯವಾಗಿ ನಮ್ಮೆಲ್ಲ ಸರಕಾರಿ ಉದ್ಯೋಗಗಳು ಅವೆಷ್ಟೇ ದೊಡ್ಡವಿರಲಿ, ಇಂತಹ ತತ್ವದ ಅಧಾರದಲ್ಲೇ ನಿಂತಿವೆ. ಇದರ ಅನುಕೂಲವೆಂದರೆ ನಮ್ಮ ಬದುಕಿಗೆ ಮತ್ತು ನಮ್ಮ ನಿರ್ಣಯಗಳಿಗೆ ನಾವು ಜವಾಬ್ದಾರರಲ್ಲ. ಸರಕಾರಿ ಉದ್ಯೋಗಕ್ಕೆ ಸೇರುವ ಅನೇಕರು ಹೇಳುವುದು ಇದನ್ನೇ: ರಿಸ್ಕ್ ಇಲ್ಲ. ಇವರಿಗೆ ಬದುಕು ಉದರನಿಮಿತ್ತ ಮಾತ್ರ. ಇಂತಹ ಬಾಲಬಡುಕರೂ ಹಿಂಬಾಲಕರು ಇರುವಾಗ ನಾಯಕರಾಗಲು ಶ್ರಮವಿಲ್ಲ. ಹೆಗಲು ಕೊಟ್ಟು ಏರಿಸುವವರಿದ್ದರೆ ಮರ ಹತ್ತಲು ಶ್ರಮವೇನಿದೆ?

ಇವೆಲ್ಲದರ ನಡುವೆಯೋ ಈ ರಾಜಕಾರಣಿಗಳಲ್ಲಿ ಒಳ್ಳೆಯವರೂ ಇರಬಹುದು ಎಂಬ ನಂಬಿಕೆಯಲ್ಲೇ ಸುಖ. ಆದರೂ ಬಹುಮಂದಿ ಕಳ್ಳರೆಂಬ ಗುಮಾನಿ ಸದಾ ಇರಬೇಕು. ಆಲಿಬಾಬಾ ಮತ್ತು ನಲ್ವತ್ತು ಕಳ್ಳರು ಕಥೆ ನಿತ್ಯ ನಮ್ಮ ಮುಂದಿದೆ. ಸಂಖ್ಯೆ ಎಷ್ಟೇ ಇರಲಿ, ಜಾಗೃತ ಪ್ರಜ್ಞೆಯು ಎಂಥ ದುರುಳರನ್ನೂ ಎದುರಿಸಿ ಯಶಸ್ವಿಯಾಗಬಹುದು. ಇದನ್ನು ಮನಸ್ಸಿನಲ್ಲಿಟ್ಟುಕೊಂಡರೆ ಒಳ್ಳೆಯವರನ್ನು ಆಯ್ಕೆಮಾಡಬಹುದು; ಒಂದು ವೇಳೆ ಶುದ್ಧಹಸ್ತರು ಇಲ್ಲವೇ ಇಲ್ಲವೆಂದು ಬಗೆದರೂ ಇರುವವರಲ್ಲಿ ಅತ್ಯಂತ ಕಡಿಮೆ ಹಾನಿಕಾರಕರನ್ನು ಆಯ್ಕೆ ಮಾಡಬಹುದು. ಕೊನೆಗೂ ಸಮಾಧಾನವಿರುವುದೇ ನಾವು ತಪ್ಪುಮಾಡಿಲ್ಲವೆಂಬುದರಲ್ಲಿ.

ಚೊಕ್ಕ ಬಂಗಾರವೇ ಬೇಕೆಂಬ ಹಟವೇಕೆ ನಿನಗೆ, ಈ ಲೋಕದಲಿ ನಾನಾ ನಮೂನೆ ಲೋಹವಿರುವಾಗ? ಗಟ್ಟಿಕಾಳುಗಳನ್ನೇ ಮುಟ್ಟಿಗೆಯಲಿ ಹಿಡಿಯಬೇಕೆಂದೇಕೆ ಚಪಲ, ಎಲ್ಲವೂ ಹೊಟ್ಟೆಗೆ ಹೋಗುವಾಗ? ಎಂದು ಕವಿ ಹೇಳಿದ್ದು ಇದೇ ವಾಸ್ತವದ ಅರಿವಿನಿಂದಿರಬಹುದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top