ಪ್ರಶಸ್ತಿಯೆಂಬ ಆಸ್ತಿ | Vartha Bharati- ವಾರ್ತಾ ಭಾರತಿ

ಪ್ರಶಸ್ತಿಯೆಂಬ ಆಸ್ತಿ

ಕೆಲವು ದಶಕಗಳ ಹಿಂದೆ ಯಾವುದೇ ಪ್ರಶಸ್ತಿಯು ಸಹಜವಾಗಿಯೇ ಮತ್ತು ನೈಜಾರ್ಥದಲ್ಲಿ ‘ಪ್ರತಿಷ್ಠಿತ’ವಾಗಿರುತ್ತಿತ್ತು. ಪ್ರಾಯಶಃ 20ನೇ ಶತಮಾನದ ಕೊನೆಯಲ್ಲಿ ಪ್ರಶಸ್ತಿಯ ಗೀಳು ನಭೂತೋ ಆಯಿತು. 21ನೇ ಶತಮಾನದಲ್ಲಿ ಅದೀಗ ಅಭೂತಪೂರ್ವವಾಗಿದೆ. ಕುಮಾರವ್ಯಾಸ ಈಗ ಇದ್ದಿದ್ದರೆ ‘ತಿಣಿಕಿದನು ಫಣಿರಾಯ ಪ್ರಶಸ್ತಿಗಳ ಭಾರದಲಿ’ ಎಂದು ಬರೆಯುತ್ತಿದ್ದ!


ಜೆಸಿಬಿ ಎಂಬೊಂದು ಸಂಸ್ಥೆಯು ಇಂಗ್ಲಿಷ್‌ನಲ್ಲಿ ಬರೆದ ಅಥವಾ ಇಂಗ್ಲಿಷಿಗೆ ಅನುವಾದಗೊಂಡ ಯಾವುದೇ ಭಾರತೀಯ ಕಾದಂಬರಿಗೆ 25 ಲಕ್ಷ ರೂಪಾಯಿಗಳ ಪ್ರಶಸ್ತಿಯನ್ನು ಘೋಷಿಸಿದೆಯೆಂದು ಮಾಧ್ಯಮಗಳು ವರದಿ ಮಾಡಿವೆ. ಭಾರತದಲ್ಲಿ ಇದೊಂದು ದಾಖಲೆಯ ಮೊತ್ತ. ಇದನ್ನು ಪ್ರಶಸ್ತಿ, ಬಹುಮಾನ ಪುರಸ್ಕಾರವೆನ್ನಬೇಕೋ ಅಥವಾ ಲಾಟರಿಯೆನ್ನಬೇಕೋ ಗೊತ್ತಿಲ್ಲ. ಪ್ರಾಯೋಜಕರು ಈ ಬಗ್ಗೆ ಚಿಂತಿಸಬೇಕು. ಇದು ತೆರಿಗೆ ರಹಿತವೇ ಅಥವಾ ತೆರಿಗೆ ಸಹಿತವೇ ಎಂಬುದು ಗೊತ್ತಿಲ್ಲ. ಆದರೆ ಈ ವರದಿ ಸಾಹಿತಿಗಳಲ್ಲಿ ಒಂದು ಸಂಚಲನವನ್ನು ಮೂಡಿಸಿದೆ; ‘ಅರ್ಥಾತ್ ಮೂಡಿಸಿದೆ’ಯೆಂದರೆ ತಪ್ಪಾಗಲಿಕ್ಕಿಲ್ಲ. (‘ಇವರು ಶ್ರೇಷ್ಠ ಸಾಹಿತಿಯೆಂದರೆ ತಪ್ಪಾಗಲಿಕ್ಕಿಲ್ಲ’ ಎಂಬ ರೀತಿಯ ನೇತ್ಯಾತ್ಮಕ ಹೊಗಳಿಕೆ ಸರ್ವೇ ಸಾಮಾನ್ಯ.) ಈಗ ಪ್ರಶ್ನೆಯಿರುವುದು ‘ಕೌನ್ ಬನೇಗಾ ಚೊಚ್ಚಲ ಪಂಚವಿಂಶತಿ ಲಕ್ಷಪತಿ’?

ಸಾಮಾನ್ಯವಾಗಿ ಸಾಹಿತ್ಯ ಕಾರ್ಯಕ್ರಮಗಳಿಗೆ ಆಹ್ವಾನಿಸುವವರು ಅತಿಥಿಗಳ ಪರಿಚಯದ ವಿವರ ಬಯಸುತ್ತಾರೆ. ನೀವೆಷ್ಟೇ ವಿವರಗಳನ್ನು ನೀಡಿ, ಕೊನೆಗೂ ಅವರು ಹೆಚ್ಚು ಇಷ್ಟಪಡುವುದು ನಿಮಗೆ ಬಂದ ಪ್ರಶಸ್ತಿಗಳ ಪಟ್ಟಿಯನ್ನು. (ಪರಿಚಯ ಅಪೇಕ್ಷಿಸುವವರಿಗೂ ಅಲ್ಲಿಯ ತನಕ ನಿಮ್ಮ ಪರಿಚಯವಿರುವುದಿಲ್ಲ; ಇದ್ದರೂ ನೀವೊಬ್ಬ ಸಾಹಿತಿ/ಬರಹಗಾರರು ಎಂದಷ್ಟೇ ಪರಿಚಯವಿರುತ್ತದೆ!) ಪರಿಚಯವನ್ನು ಪಡೆಯುವವರು ಒಬ್ಬರಾದರೆ ಅದನ್ನು ಓದುವುದಕ್ಕೆ ಇನ್ಯಾರನ್ನೋ ನೇಮಿಸಿರುತ್ತಾರೆ. ಅವರಿಗೆ ನಿಮ್ಮ ಪರಿಚಯವೇ ಇರುವುದಿಲ್ಲ. ಅವರು ನಿಮ್ಮತ್ತ ದೃಷ್ಟಿಯನ್ನೇ ಹಾಕದೆ ನಿಮ್ಮ ಪರಿಚಯವನ್ನು ಅತ್ಯಂತ ಯಾಂತ್ರಿಕವಾಗಿ ಬಲವಂತದಿಂದ ಎಂಬಂತೆ ಓದಿ ಪರಿಚಯವೆಂಬ ಸಂಸ್ಕಾರಕರ್ಮವನ್ನು ಮುಗಿಸುತ್ತಾರೆ. ಆ ಹೊತ್ತಿಗೆ ಧ್ವನಿವರ್ಧಕವು (ಮೈಕ್) ಕೈಕೊಟ್ಟರೂ ಅವರು ಅದನ್ನು ಓದಿ ಮುಗಿಸುತ್ತಾರೆಂಬುದು ಇನ್ನೂ ವಿಶೇಷ. ಇದರಲ್ಲಿ ನಿಮಗೆ ಬಂದ ಪ್ರಶಸ್ತಿಗಳ ಪಟ್ಟಿ ಮಾಡಿ ಅದನ್ನು ಸರಿಯಾಗಿಯೋ ತಪ್ಪಾಗಿಯೋ ಓದುತ್ತಾರೆ. ಒಟ್ಟಿನಲ್ಲಿ ನಿಮ್ಮ ಪರಿಚಯದ ಭಾಗ ಹೀಗೆ ಮುಗಿದು ಹೋಗುತ್ತದೆ. ನನಗೆ ಅನೇಕ ಬಾರಿ ‘‘ನಿಮಗೆ ಯಾವ್ಯಾವ ಪ್ರಶಸ್ತಿಗಳು ಬಂದಿವೆ?’’ ಎಂದು ಹೀಗೆ ಸಂಘ-ಸಂಸ್ಥೆಗಳ ಪರವಾಗಿ ಆಹ್ವಾನಿಸಿದವರು/ಆಹ್ವಾನಿಸುವವರು ಪ್ರಶ್ನಿಸಿದಾಗ ನಾನು ನನಗೆ ಲಭಿಸಿದ ಒಂದೇ ಒಂದು ಪ್ರಶಸ್ತಿಯ ಹೆಸರು ಹೇಳಿ ಜೊತೆಗೇ ಅದು ಒಂದು ಖಾಸಗಿ ಪ್ರಶಸ್ತಿಯೆಂಬುದನ್ನು ಹೇಳಿ ಅದರ ಮಿತಿಯನ್ನು ಗುರುತಿಸಲು ಯತ್ನಿಸುತ್ತೇನೆ. ಒಂದೇ ಪ್ರಶಸ್ತಿ ಬಂದಿದೆಯೆಂದು ಹೇಳಿದಾಗ ಅವರ ಮುಖದಲ್ಲಿ ನಿರಾಶೆಯ ಭಾವವನ್ನು ಗುರುತಿಸಿದ್ದೇನೆ. ಈ ಮನುಷ್ಯ ಇಷ್ಟೇ; ಈತನನ್ನು ಆಹ್ವಾನಿಸಿ ತಪ್ಪುಮಾಡಿದೆವೇ ಎಂಬ ಭಾವದ ನೆಲೆ ಅದು. ಆದರೂ ಸಮಾರಂಭದಲ್ಲಿ ನನ್ನ ಪರಿಚಯ ಮಾಡುವವರು ಇವರು ಪ್ರತಿಷ್ಠಿತ ‘...’ ಪ್ರಶಸ್ತಿಯನ್ನು ಗಳಿಸಿದ್ದಾರೆ ಎಂದು ಹೇಳುವುದನ್ನು ಮರೆಯುವುದಿಲ್ಲ.

ಹೀಗಾಗಿ ಪ್ರಶಸ್ತಿ ಎಂಬುದು ಮನುಷ್ಯನಿಗೆ ಸಮಾಜದಲ್ಲಿ ಗುರುತಿಸಿ ಕೊಳ್ಳುವುದಕ್ಕೆ ಮತ್ತು ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಪ್ರದರ್ಶನಕ್ಕೆ ಅಗತ್ಯ ಮತ್ತು ಇತ್ತೀಚೆಗಂತೂ ಅನಿವಾರ್ಯ ಎಂಬಲ್ಲಿಗೆ ಬಂದು ಮುಟ್ಟಿದೆ. ನಿಮಗೆ ಯಾವುದೇ ಪ್ರಶಸ್ತಿ ಬಂದಿಲ್ಲವೋ ಸಂದಿಲ್ಲವೋ ನಿಮ್ಮ ಬದುಕು ವ್ಯರ್ಥ. ನಿಮ್ಮ ಪ್ರಶಸ್ತಿಯ ಮಾಲಿಕೆ ಹೆಚ್ಚಾದಷ್ಟೂ ನೀವು ಡೊಂಕು ಬಾಲಕ್ಕೆ ಚಿನ್ನದ ನಳಿಗೆ ಹಚ್ಚಿ ಬಾಲಭಾರ ಜರ್ಝರಿತರಂತೆ ಅದರ ಬಲದಲ್ಲೇ ಮುಂದೆ-ಹಿಂದೆ, ಅತ್ತ-ಇತ್ತ ನಡೆಯಬೇಕು. ಪ್ರಶಸ್ತಿಗಳನ್ನು ಇಷ್ಟು ಹಗುರವಾಗಿ ಮತ್ತು ಲೇವಡಿ ಮಾಡಿ ಮಾತ ನಾಡಬಾರದೆಂಬುದು ಗೊತ್ತಿದೆ. ಆದರೆ ಸದ್ಯದ ವರ್ಷಗಳಲ್ಲಿ ಪ್ರಶಸ್ತಿಗಳ ದಟ್ಟಣೆಯಿಂದಾಗಿ ಅವು ನಗೆಪಾಟಲಾಗುತ್ತಿವೆ. ಕೆಲವು ದಶಕಗಳ ಹಿಂದೆ ಯಾವುದೇ ಪ್ರಶಸ್ತಿಯು ಸಹಜವಾಗಿಯೇ ಮತ್ತು ನೈಜಾರ್ಥದಲ್ಲಿ ‘ಪ್ರತಿಷ್ಠಿತ’ವಾಗಿರುತ್ತಿತ್ತು. ಪ್ರಾಯಶಃ 20ನೇ ಶತಮಾನದ ಕೊನೆಯಲ್ಲಿ ಪ್ರಶಸ್ತಿಯ ಗೀಳು ನಭೂತೋ ಆಯಿತು. 21ನೇ ಶತಮಾನದಲ್ಲಿ ಅದೀಗ ಅಭೂತಪೂರ್ವವಾಗಿದೆ. ಕುಮಾರವ್ಯಾಸ ಈಗ ಇದ್ದಿದ್ದರೆ ‘ತಿಣಿಕಿದನು ಫಣಿರಾಯ ಪ್ರಶಸ್ತಿಗಳ ಭಾರದಲಿ’ ಎಂದು ಬರೆಯುತ್ತಿದ್ದ!

ಸರಕಾರ ನೀಡುವ ಪ್ರಶಸ್ತಿ-ಪುರಸ್ಕಾರಗಳು ಅಧಿಕೃತವೆಂಬ ಮನ್ನಣೆಗೆ ಅರ್ಹವಾಗಿದ್ದ ಕಾಲವೊಂದಿತ್ತು. ಕೇಂದ್ರ ಮತ್ತು ರಾಜ್ಯದ ಅಕಾಡಮಿಗಳು ಪ್ರತೀ ವರ್ಷ ಒಂದಷ್ಟು ಮಂದಿಯನ್ನು/ಕೃತಿಗಳನ್ನು ಗುರುತಿಸಿ ಸನ್ಮಾನಿಸಿ ಅದ ರೊಂದಿಗೆ ಒಂದು ಗೌರವಧನದ ಕಾಣಿಕೆಯನ್ನೂ ನೀಡುತ್ತಿದ್ದವು. ಪ್ರಾಯಃ ಈ ಧನದ ಮೊತ್ತವು ಗೌಣವಾಗಿರುತ್ತಿತ್ತು. ಸರಕಾರವಲ್ಲದೆ ಇತರ ವ್ಯಕ್ತಿಗಳು, ಸಂಘ-ಸಂಸ್ಥೆಗಳು ವಿಶೇಷ ಸಂದರ್ಭಗಳಲ್ಲಿ ಅರ್ಹರನ್ನು ಗುರುತಿಸುವ ಕ್ರಮವಿತ್ತು. ಆದರೆ ಇದು ಆಯಾಯ ಸಂದರ್ಭಗಳಿಗೆ ಸೀಮಿತವಾಗಿತ್ತೇ ಹೊರತು ಚರ್ಮರೋಗದಂತೆ ಸನ್ಮಾನಿತರಿಗೆ ಅಂಟಿಕೊಳ್ಳುತ್ತಿರಲಿಲ್ಲ. ಇವರು ಇವರನ್ನು ಸನ್ಮಾನಿಸಿದರು ಎಂಬಲ್ಲಿಗೆ ಅದು ಕೊನೆಗೊಳ್ಳುತ್ತಿತ್ತು. ಕ್ರಮೇಣ ಖಾಸಗಿಯವರು ಸಂಸ್ಥೆಗಳು, ಸಂಘಟನೆಗಳು ಇಂತಹ ನಿಯತಕಾಲಿಕ ಪ್ರಶಸ್ತಿ-ಬಹುಮಾನಗಳನ್ನು ಘೋಷಿಸಲಾರಂಭಿಸಿದವು. ಆರಂಭದಲ್ಲಿ ಇವೂ ಪ್ರತಿಷ್ಠಿತವಾಗಿರುತ್ತಿದ್ದವು. ಆದರೆ ಇಂತಹ ಪ್ರಶಸ್ತಿಗಳನ್ನು ನೀಡುವುದಕ್ಕಾಗಿಯೇ ಸಂಘಟನೆಗಳು ಹುಟ್ಟಿಕೊಂಡವು.

ಕೆಲವೊಮ್ಮೆ ತಮ್ಮ ಹೆಸರು ಆಚಂದ್ರಾರ್ಕವಾಗಿ ಚಿರಸ್ಥಾಯಿಯಾಗುವುದಕ್ಕಾಗಿಯೇ ಪ್ರಶಸ್ತಿಗಳನ್ನು ಯೋಜಿಸಿದವರೂ ಇದ್ದಾರೆ. ಇವು ಜಾತಿ, ಮತ, ಭಾಷೆ, ಲಿಂಗ ಇವುಗಳನ್ನು ಮೀರಿಲ್ಲವೆಂಬುದು ಪರೋಕ್ಷ ಮಾತ್ರವಲ್ಲ ಬಹುತೇಕ ಪ್ರತ್ಯಕ್ಷ ಸತ್ಯ. ಕೆಲವು ಪ್ರಶಸ್ತಿಗಳು ಒಂದೊಂದು ಜಾತಿ, ಮತ ಹೀಗೆ ವರ್ಗೀಕರಿಸಲ್ಪಟ್ಟಿದೆ. ಇದು ಎಷ್ಟು ಸರಿಯೆಂಬುದು ಅದನ್ನು ಪಡೆದವರೇ ವಿವೇಚಿಸಬೇಕು. ಇವು ಎಷ್ಟು ಪ್ರತಿಷ್ಠಿತ ಎಂಬುದು ಇವಕ್ಕೆ ಸಿಗುವ ಪ್ರಚಾರದಲ್ಲಿದೆ. ಇದರೊಂದಿಗೆ ಪ್ರಶಸ್ತಿಗಳ ಪ್ರತಿಷ್ಠೆಯನ್ನು ಕಾಯ್ದುಕೊಳ್ಳಲು ಈ ಪ್ರಶಸ್ತಿಗಳ ನಗದು ಮೊತ್ತವನ್ನು ಹೆಚ್ಚಿಸುವುದು ರೂಢಿಯಾಯಿತು. ಪತ್ರಿಕೆಗಳು ನಡೆಸುವ ಕಥೆ-ಕಾದಂಬರಿ-ಕವಿತೆ-ಪ್ರಬಂಧ ಇತ್ಯಾದಿ ಸ್ಪರ್ಧೆಗಳಲ್ಲಿಯೂ ಬಹುಮಾನದ ಮೊತ್ತವೇ ಪ್ರಮುಖವಾಗಿ ಮತ್ತು ವರ್ಣರಂಜಿತವಾಗಿ ಪ್ರಕಟವಾಗುವುದನ್ನು ಕಾಣಬಹುದು. ಬರಹಗಾರರಿಗೆ ತಮ್ಮ ಬರಹದುದ್ದಕ್ಕೂ ಈ ಬಹುಮಾನದ ಮೊತ್ತವೇ ಆಶಯವಾಗಿ ರೂಪುಗೊಳ್ಳುತ್ತಿದೆಯೇನೋ ಎಂಬ ಸಂಶಯ ಬರುವಂತೆ ಇದೊಂದು ದಂಧೆಯಾಗಿ ಪರಿಣಮಿಸಿದೆ. (ನಾನೇಕೆ ಬರೆಯುತ್ತೇನೆ ಎಂದು ಟಿಪ್ಪಣಿ ಬರೆಯುವವರು ಇದನ್ನೂ ಸೇರಿಸಿಕೊಳ್ಳಬಹುದು!) ಈ ಬಹುಮಾನದ ಮೊತ್ತಕ್ಕೆ ಉದ್ಯಮ ಪ್ರಪಂಚದ ಪ್ರಾಯೋಜಕರೂ ಸಿಗುತ್ತಾರೆ. ಅವರಿಗೂ ಇವರಿಗೂ ಜಾಹೀರಾತು! ಬರಹಗಾರರಿಗೆ ಬಹುಮಾನ, ಪ್ರಚಾರ, ಪ್ರತಿಷ್ಠೆ! ಏಕಾಂತದ ಬರಹ ಲೋಕಾಂತದತ್ತ ತಲುಪುವ, ಬುದ್ಧರೆಲ್ಲ ಸಿದ್ಧ್ದಾರ್ಥರಾಗುವ ಈ ಪಯಣ ಆಕರ್ಷಕ.

ಸರಕಾರದ ಪ್ರಶಸ್ತಿಗಳಿಗೆ ಅರ್ಜಿ ಹಾಕಿಕೊಳ್ಳಬೇಕೆಂಬ ಸತ್ಯವನ್ನು ಎಲ್ಲರೂ ಮುಚ್ಚಿಟ್ಟುಕೊಳ್ಳಬೇಕು ಎಂಬ ಒಳಒಪ್ಪಂದವನ್ನು ಸಾಮಾನ್ಯವಾಗಿ ಎಲ್ಲರೂ ಒಪ್ಪುತ್ತಾರೆ- ಸರಕಾರಿ ನೌಕರರು ಭ್ರಷ್ಟಾಚಾರವನ್ನು ಒಪ್ಪಿಕೊಂಡಂತೆ. ಅರ್ಜಿಹಾಕಿದರೆ ಅದು ಅನರ್ಹತೆಯೆಂದು ಯಾವ ಪ್ರಾಧಿಕಾರವಾಗಲೀ, ಸಂಘ-ಸಂಸ್ಥೆಯಾಗಲೀ ಇನ್ನೂ ಘೋಷಿಸಿಲ್ಲ. ಒಂದು ವೇಳೆ ಯಾವೊಬ್ಬ ವ್ಯಕ್ತಿಯು ಅರ್ಜಿ ಹಾಕಿಲ್ಲವೆಂದಾದರೆ ಆತನ ಪರವಾಗಿ ಪ್ರಾಕ್ಸಿ ಅರ್ಜಿಗಳು, ಶಿಫಾರಸುಗಳು ಸಲ್ಲಿಸಲ್ಪಡುತ್ತವೆ. ಈ ಶಿಫಾರಸುಗಳಿಗಾಗಿ ನಡೆದು ದಣಿಯುವ ಪಾಡು ನೋಡುವುದೇ ಒಂದು ಮನರಂಜನೆ. ವ್ಯಕ್ತಿಗಲ್ಲದೆ, ಕೃತಿಗೆ ಪ್ರಶಸ್ತಿ ಸಲ್ಲುವುದಾದರೆ ಆ ಕೃತಿಯ ಇಷ್ಟು ಪ್ರತಿಗಳನ್ನು ಕಳುಹಿಸಬೇಕು. ಕೆಲವೊಮ್ಮೆ ಈ ನಿಯಮಾವಳಿಗಳಿರುವುದು ತಪ್ಪಲ್ಲ. ಹೇಗೂ ಇವು ಪ್ರಶಸ್ತಿಯ ಆಸೆ, ಆಕಾಂಕ್ಷೆಗಳಿಗೆ ತಾಣಗಳು.

 ಇಲ್ಲಿಗೇ ಪ್ರಶಸ್ತಿಗಳ ದುರಂತ ಕಥೆ ಮುಗಿಯುವುದಿಲ್ಲ. ಪ್ರಶಸ್ತಿಯನ್ನು ನಿರ್ಧರಿಸಲು ಒಂದು ಸಮಿತಿಯಿರುತ್ತದೆ. ಅದರ ಸದಸ್ಯರಾಗುವುದೂ ಪ್ರತಿಷ್ಠಿತವೇ. ರಹಸ್ಯವಾಗಿಡಬೇಕಾದ ಇಂತಹ ಸ್ಥಾನವನ್ನು ಹೆಮ್ಮೆಯಿಂದ ಹೇಳಿಕೊಂಡು ಸುತ್ತುವವರಿಗೇನೂ ಅಭಾವವಿಲ್ಲ. ಪ್ರತೀ ವರ್ಷ ಬದಲಾಗುವ ಆಯ್ಕೆಮಂಡಳಿಗಳೂ ಇವೆ. ಕೃತಿರಚನಾ ಸ್ಪರ್ಧೆಯಲ್ಲಿ ಈ ಆಯ್ಕೆದಾರರು ಯಾರೆಂಬುದು ಪ್ರಶಸ್ತಿ-ಬಹುಮಾನ-ಆಯ್ಕೆಯು ಘೋಷಿತವಾದಾಗಲೇ ಗೊತ್ತಾಗುವುದೆಂಬ ಪ್ರತೀತಿಯಿದೆ. ಆದರೆ ಪ್ರಶ್ನೆಪತ್ರಿಕೆಗಳ ಹಾಗೆ, ಸರಕಾರಿ ಕಡತಗಳ ಹಾಗೆ ಈ ಪ್ರಶಸ್ತಿಗಳ ಹಿಂದೆ ಹೋಗುವವರಿಗೆ ಇವೂ ಚಿದಂಬರ ರಹಸ್ಯವೇನಲ್ಲ. ಮಾಹಿತಿಯು ಸರ್ವೇಸಾಧಾರಣವಾಗಿ ಸೋರಿಹೋಗುತ್ತದೆ. ಇದರಿಂದಾಗಿ ಅಧಿಕೃತವಾಗಿ ಪ್ರಶಸ್ತಿಯು ಘೋಷಣೆಯಾಗುವ ಮೊದಲೇ ಆಯ್ಕೆಯು ಬಹಿರಂಗವಾಗಿರುತ್ತದೆ. ಪತ್ರಿಕೆಗಳಿಗಂತೂ ಇಂತಹ ಸೋರಿಕೆಯು ಸುಗ್ಗಿ. ಅವು ‘?’ ಚಿಹ್ನೆಯೊಂದಿಗೆ ಈ ಸಂಚಿನಲ್ಲಿ ಪಾಲ್ಗೊಳ್ಳುತ್ತವೆ.

ಭವಿಷ್ಯ, ಜ್ಯೋತಿಷ್ಯ, ಮುಂತಾದವುಗಳಲ್ಲಿ ನಂಬಿಕೆಯಿಡಬಾರದು. ಅದು ಆಧುನಿಕತೆಗೆ ಸಲ್ಲ. ಅದನ್ನು ಮೂಢ ನಂಬಿಕೆಯೆನ್ನುತ್ತಾರೆ. ಆದರೆ ಅನೇಕ ಬಾರಿ ಅವು ಸತ್ಯವಾಗುತ್ತವೆ. ಮುಂದಿನ ವರ್ಷ ಇಂತಹವರಿಗೇ ಅಥವಾ ಇಂತಹ ಕೃತಿಗೇ ಪ್ರಶಸ್ತಿ ಬರುತ್ತದೆಂದು ಕೆಲವು ಸಾಹಿತ್ಯ ಧುರೀಣರ ಭವಿಷ್ಯ ಸತ್ಯವಾದಾಗ ಭವಿಷ್ಯಕ್ಕೂ ಭವ್ಯ ಭವಿಷ್ಯವಿದೆಯೆಂದು ಸಹಜವಾಗಿ ಅನಿಸುತ್ತದೆ. ಈ ಪ್ರಶಸ್ತಿಗಳ ಇನ್ನೊಂದು ಮುಖ ಹೀಗಿದೆ. ಒಂದು ಪ್ರಶಸ್ತಿಯಲ್ಲಿರುವ ಒಬ್ಬೊಬ್ಬ ಅಥವಾ ಇನ್ನೂ ಹೆಚ್ಚು ಮಂದಿ ಪ್ರಶಸ್ತಿಗಾಗಿ ಆಯ್ಕೆ ಮಾಡುವ ವ್ಯಕ್ತಿ ಇನ್ಯಾವುದೋ ಪ್ರಶಸ್ತಿಯ ಆಯ್ಕೆಮಂಡಳಿಯಲ್ಲಿರುತ್ತಾನೆ. ಮುಂದಿನ ವರ್ಷ ಆತ ತನ್ನ ಆಯ್ಕೆ ಮಂಡಳಿಯ ಮೇಲೆ ಪ್ರಭಾವ ಬೀರಿ ಈ ಹಿಂದೆ ತನಗೆ ಪ್ರಶಸ್ತಿ ನೀಡಿದ ಮಂದಿಗಳಲ್ಲಿ ಒಬ್ಬರಿಗೆ ಪ್ರಶಸ್ತಿ ಬರುವಂತೆ ಮಾಡುತ್ತಾನೆ. ಇದರಿಂದಾಗಿ ಪ್ರಶಸ್ತಿಗಳು ಬೂಟಿನ ಲೇಸು ಹಾಕಿದಂತೆ ಅತ್ತಿತ್ತ ವಿನಿಮಯವಾಗುತ್ತ ಇರುವುದನ್ನು ಕಾಣಬಹುದು. ಇವನ್ನು ವಿನಿಮಯ ಪ್ರಶಸ್ತಿಗಳೆಂದು ಗುರುತಿಸಬಹುದು. ಇವು ಕೆಲವೊಮ್ಮೆ ವಿದೇಶೀ ವಿನಿಮಯವಾಗಿ ಬದಲಾಗುತ್ತದೆ. ವಿದೇಶದ ಭಾರತೀಯನಿಗೆ ಇಂತಹ ಪ್ರಶಸ್ತಿಯನ್ನು ನೀಡಿದರೆ ಈ ಪ್ರಶಸ್ತಿಯ ಹಿಂದೆ ದುಡಿದವನಿ(ರಿ)ಗೆ ವಿದೇಶೀ ಸಭೆ-ಸಮಾರಂಭ-ಕಾರ್ಯಕ್ರಮ-ಗೋಷ್ಠಿಗಳಲ್ಲಿ ಆಮಂತ್ರಣ ಖಾತ್ರಿ. ಇದು ನಿಜಕ್ಕೂ ಕ್ರಾಂತಿಕಾರಕ ಉದ್ಯೋಗ ಖಾತ್ರಿ ಯೋಜನೆಗಳಲ್ಲೊಂದು!

ಪ್ರಶಸ್ತಿಗಳ ವಿಚಾರ ಹೇಗೇ ಇರಲಿ, ಅರ್ಹರಿಗೆ ಪ್ರಶಸ್ತಿ ಬಂದರೆ ಸಂತೋಷ. ಆದರೆ ಇತ್ತೀಚೆಗಿನ ವರ್ಷಗಳ ಸಂದರ್ಭ ಹೇಗಿದೆಯೆಂದರೆ ಈ ಅರ್ಹತೆಯ ಮಾನದಂಡವೇನಿರಬಹುದು ಎಂಬುದು ಚಿಂತಾ-ಜನಕವಾಗುತ್ತದೆ. ನಮ್ಮ ಟಿವಿ ಚಾನೆಲ್‌ಗಳಲ್ಲಿ ಆಯ್ಕೆಗೆ ಗುಣಮಟ್ಟದೊಂದಿಗೇ ವೋಟ್ ಅಗತ್ಯ. ಹೀಗೆ ವೋಟ್‌ಬ್ಯಾಂಕ್ ರಾಜಕಾರಣವು ಮಾಮೂಲು ಪ್ರಶಸ್ತಿಗಳಿಗೂ, ಮೌಲ್ಯಾಧಾರಿತ ಮತ್ತು ಮತಾಧಾರಿತ ಆಯ್ಕೆಗಳು ಜ್ಞಾನದ ಕೊಠಡಿಯೊಳಗೂ ಪ್ರವೇಶಿಸಿರುವುದು ಬಹುಮಾನಿತರ ಭಾಗ್ಯ. ಇದನ್ನು ‘ಪ್ರಶಸ್ತಿ ಭಾಗ್ಯ’ ಯೋಜನೆಯೆಂದು ಕರೆಯಬಹುದು.

ಹೋಗಲಿ, ಅಂತೂ ಇಂತೂ ಪ್ರಶಸ್ತಿಗಳು ಬರಹಗಾರನ ಬದುಕಿನ ಅವಿಭಾಜ್ಯ ಅಂಗವಾಗಿರುವಾಗ ಅವನ್ನು ಹೇಳಿಕೊಂಡು ಸುತ್ತುವುದರಲ್ಲಿ ಸಾರ್ಥಕ್ಯವೇನಿದೆ? ಈಗೀಗ ಪ್ರಶಸ್ತಿಯ ಮೊತ್ತದ ಮೇಲೆ ಅದರ ಯೋಗ್ಯತೆಯು ನಿರ್ಧರಿಸಲ್ಪಡುತ್ತಿದೆ. ಜ್ಞಾನಪೀಠವೆಂಬ ಖಾಸಗಿ ಪ್ರಶಸ್ತಿಯು ಅದ್ಯಾಕೋ ತನ್ನ ಬೃಹತ್ ಎನಿಸಿಕೊಂಡ ಮೊತ್ತದಿಂದಾಗಿ-ಅಥವಾ ಅದನ್ನು ಪ್ರಧಾನಿಯವರ ಕೈಯಿಂದ ಕೊಡಿಸುವ ಕಾರಣದಿಂದ-ಅಧಿಕೃತವಾಗಿದೆ. ನಮ್ಮ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಶಿಕ್ಷಕರಿಗೂ ಇದು ಸರಕಾರ ಕೊಡುವ ಪ್ರಶಸ್ತಿಯೆಂಬ ನಂಬಿಕೆಯಿದೆ. ಜ್ಞಾನಪೀಠ ಪ್ರಶಸ್ತಿ ವಿಜೇತರ ಭಾವಚಿತ್ರಗಳನ್ನು ಸಾಹಿತ್ಯ ಸಮಾರಂಭಗಳಲ್ಲಿ ಪ್ರದರ್ಶಿಸುವುದು ವಾಡಿಕೆಯಾಗಿದೆ. (ಇದರಿಂದಾಗಿ ಡಿವಿಜಿಯವರಂತಹ ಹಿರಿಯ ಸಾಹಿತಿಗಳೂ ಪ್ರದರ್ಶನ ವಂಚಿತರಾಗಿದ್ದಾರೆ!) ಎಸ್.ಎಲ್. ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿಲ್ಲವೆಂದು ಅವರು ತಲೆಕೆಡಿಸಿಕೊಳ್ಳದಿದ್ದರೂ ಅವರ ಅಭಿಮಾನಿಗಳಿಗೆ ಕೊರಗು! ಆದರೆ ಕನ್ನಡದ ನೆಲದಲ್ಲೇ ಬಹುಮಾನ ಮೊತ್ತದಲ್ಲಿ ಈ ಪ್ರಶಸ್ತಿಯನ್ನು ಮೀರಿಸುವ ಪ್ರಶಸ್ತಿಗಳು ಬಂದಿವೆ. ಆದ್ದರಿಂದ ಹೂಡಿಕೆದಾರರ ಬಿಡ್ಡಿನಲ್ಲಿ ನೃಪತುಂಗ ಪ್ರಶಸ್ತಿಯು ಜ್ಞಾನಪೀಠವನ್ನು ಮೀರಿಸಿದೆ. ಅಷ್ಟೇ ಅಲ್ಲ, ಪದ್ಮ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅಧಿಕೃತ ಪ್ರಶಸ್ತಿಗಳೊಂದಿಗೆ ಬರುವ ನಿವೇಶನ, ಸರಕಾರಿ ಸೌಲಭ್ಯಗಳ ರಿಯಾಯಿತಿ ಮುಂತಾದ ಇತರ ಪ್ಯಾಕೇಜುಗಳಿಂದಾಗಿ ಅವು ಜ್ಞಾನಪೀಠಕ್ಕಿಂತಲೂ ಅಗ್ರಪೀಠಗಳಾಗಿವೆ. ಪ್ರಶಸ್ತಿ ರಾಮಾಯಣ ಮುಗಿಯದು. ನದಿಮೂಲ, ಸ್ತ್ರೀಮೂಲ, ಋಷಿಮೂಲದಂತೆ ಪ್ರಶಸ್ತಿಮೂಲವನ್ನೂ ಹುಡುಕಬಾರದು. ಪ್ರಶಸ್ತಿಗಳನ್ನು ಪಡೆದವರು ಅವುಗಳನ್ನು ಅಂಗುಲಿಮಾಲಾನಂತೆ ಧರಿಸಿದರೆ ಯಾವುದಾದರೊಂದು ದಿನ, ಜಾಗ, ಸಂದರ್ಭದಲ್ಲಿ ಬುದ್ಧ ಅವತರಿಸಬಹುದು ಎಂದು ಆಶಿಸೋಣ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top