ಮೊಸುಲ್‌ನ ಹುತಾತ್ಮರು | Vartha Bharati- ವಾರ್ತಾ ಭಾರತಿ

ಮೊಸುಲ್‌ನ ಹುತಾತ್ಮರು

ನಾಲ್ಕು ವರ್ಷಗಳ ಹಿಂದೆ ಇರಾಕಿನಲ್ಲಿ ಕಳೆದು ಹೋದ 39 ಭಾರತೀಯರ ಗತಿ ಕೊನೆಗೂ ಪ್ರಕಟವಾಯಿತು. ‘‘ಅವರೆಲ್ಲರೂ ಸುರಕ್ಷಿತವಾಗಿದ್ದಾರೆ; ಅವರ ರಕ್ಷಣೆಯು ನಮ್ಮ ಹೊಣೆ’’ ಎಂದು ಘೋಷಿಸುತ್ತಿದ್ದ ನಮ್ಮ ಸರಕಾರದ ಭರವಸೆ ಮಾತಿನಲ್ಲೇ ಉಳಿಯಿತು; ಅವರೆಲ್ಲರೂ ಐಸಿಸ್‌ನ ಕ್ರೌರ್ಯಕ್ಕೆ ಬಲಿಯಾಗಿದ್ದಾರೆಂದು ಈಗ ತಿಳಿಯಿತು. ನಮ್ಮ ವರ್ಣರಂಜಿತ ವಿದೇಶಾಂಗ ಸಚಿವರು ಸಂಸತ್ತಿನಲ್ಲಿ ಈ ಸುದ್ದಿಯನ್ನು ನಿರ್ಲಜ್ಜೆಯಿಂದ ಪ್ರಕಟಿಸಿದ ಆನಂತರ ಎಲ್ಲರೂ ಅಗಲಿದ ಆತ್ಮಗಳಿಗೆ ಚಿರಶಾಂತಿಯನ್ನು ಕೋರುವುದರೊಂದಿಗೆ ನಮ್ಮ ವೀರಾವೇಶದ ಮತ್ತೊಂದು ಅಧ್ಯಾಯವು ಮುಗಿಯಿತು. ಹೀಗೆ ಬಲಿಯಾದ ಅಮಾಯಕರ ಹೆಸರು, ವಿಳಾಸ, ಜಾತಿ, ಧರ್ಮ ಇವನ್ನು ವಿವರಿಸಿದರೆ ಆ ನೆಪದಲ್ಲಿ ಈ ದೇಶದ ರಾಜಕಾರಣಿಗಳು ಮತ್ತು ಸಾಮಾಜಿಕ ಮಾಧ್ಯಮಗಳ ಜಾಲತಾಣದ ಮೋಹಿಗಳು ತಮ್ಮ ರಾಜಕೀಯ ತೀಟೆಗಳನ್ನು ತೀರಿಸಿಕೊಂಡಾರು. ಹೋದ ಪ್ರಾಣಗಳು ಮರಳಿ ಬಾರವು. ಇಂತಹ ಘಟನೆಗಳು ಹೇಳುವ ಪಾಠಗಳನ್ನು ಕಲಿಯದಿದ್ದರೆ ವಿಶ್ವ ಭೂಪಟದಲ್ಲಿ ಭಾರತವು ಆಗಾಗ ನಗೆಪಾಟಲಿಗೀಡಾಗುವುದು ತಪ್ಪದು.

ಕಳೆದ ನಾಲ್ಕು ವರ್ಷಗಳಿಂದೀಚೆಗೆ ಹೀಗಾಗುತ್ತದೆಂದು ಹೇಳುವುದು ಅತಿಶಯೋಕ್ತಿಯಾದೀತು. ಭಾರತವು ಅಂತಾರಾಷ್ಟ್ರೀಯ ವಿದ್ಯಮಾನಗಳಲ್ಲಿ ಮೊದಲಿನಿಂದಲೂ ಕಾರ್ಯಭಾರವನ್ನು ನಡೆಸುವುದರಲ್ಲಿ ಹಿಂದುಳಿದಿದೆ. ನೆಹರೂ ಯುಗದಿಂದಲೂ ಇದು ಹೀಗಿದೆ. ಆದರೆ ನೆಹರೂ ತನ್ನ ಚಾಣಾಕ್ಷಮತಿಯಿಂದ ಅದಕ್ಕೊಂದು ಅಲಿಪ್ತತೆಯ ಹೊದಿಕೆಯನ್ನು ಹೊದಿಸಿ ಭಾರತ ಮತ್ತು ಇನ್ನನೇಕ ದೇಶಗಳನ್ನು ಬೆಳೆಯುವ ರಾಷ್ಟ್ರಗಳ ಒಂದು ಗುಂಪಾಗಿಸಿ ಶಾಂತಿಯ ಒಂದು ತಾತ್ವಿಕ ನೆಲೆಯನ್ನು ಕಲ್ಪಿಸಿ ಭಾರತೀಯರು ವಿಶ್ವದಲ್ಲಿ ಅನಗತ್ಯ ಆಗ್ರಹಕ್ಕೀಡಾಗುವುದನ್ನು ತಪ್ಪಿಸಿದ್ದರು. ಯುರೋಪಿನಲ್ಲಿ ಮಾತ್ರವಲ್ಲ, ಭಾರತದ ಲಗತ್ತಿನ ಪೂರ್ವ-ಪಶ್ಚಿಮಗಳಲ್ಲಿ ನಡೆದಷ್ಟು ಹಿಂಸೆ ಭಾರತದಲ್ಲಿ ನಡೆದಿರಲಿಲ್ಲ. ಪ್ರಾಯಃ ಕಳೆದ ಶತಮಾನದಲ್ಲಿ ಹಿಂಸಾತ್ಮಕ ಪ್ರವೃತ್ತಿಯು, ಅರಾಜಕತೆಯು ಈಗಿನಷ್ಟು ಇರಲಿಲ್ಲವೆಂಬುದೂ ಅವರಿಗೆ ಅನುಕೂಲವಾಗಿದ್ದಿತು. ಇರಾಕಿನಿಂದ ಮಲೇಶ್ಯಾದ ವರೆಗೆ ಇರುವ ಅರ್ಧಚಂದ್ರಾಕೃತಿಯ ವರ್ತುಲದಲ್ಲಿ ಭಾರತವೊಂದೇ (ನಕ್ಸಲ್, ಸಿಖ್, ಕಾಶ್ಮೀರದ ಪ್ರತಿಭಟನೆಯ ಹೊರತಾಗಿಯೂ) ಸತತ ಹಿಂಸೆಯಿಂದ ಪಾರಾಗಿದ್ದ ದೇಶವೆಂಬ ಹೆಗ್ಗಳಿಕೆಯನ್ನು ಹೊಂದಿತ್ತು.

ಕಾಲ ಬದಲಾಗಿದೆ. ಭಾರತೀಯರು ಭಾರತದ ಕುರಿತು ಭರವಸೆ ಕಳೆದುಕೊಂಡವರಂತೆ ವಿಶ್ವದ ಎಲ್ಲೆಡೆ ವಿಪರೀತ ವಲಸೆಹೋಗಿದ್ದಾರೆ. ನಮ್ಮ ದಾಖಲಿತ ಜನಸಂಖ್ಯೆಯು ಈ ಅನಿವಾಸಿಗಳನ್ನೂ ಸೇರಿದೆ. ಯಾವುದೇ ವಿದೇಶಗಳಲ್ಲಿ ಅತೀ ಹೆಚ್ಚು ದೇಶೀಯರನ್ನು ಹೊಂದಿದೆಯೆಂಬ ಕುಖ್ಯಾತಿಯನ್ನು ಭಾರತವು ಹೊಂದಿದೆ. ಇದು ವಿದೇಶಿ ವಿನಿಮಯವನ್ನು ತರಬಲ್ಲ ಶಕ್ತಿಯನ್ನು ಹೊಂದಿದರೂ ಮಧ್ಯಪೂರ್ವ ದೇಶಗಳಲ್ಲಿನ ಭಾರತೀಯರನ್ನು ಹೊರತುಪಡಿಸಿದರೆ ಅಂತಹ ವಿದೇಶಿ ವಿನಿಮಯವನ್ನು ಇತರ ಅಂತಹ ವಲಸಿಗರು, ಅನಿವಾಸಿ ಭಾರತೀಯರು ತರಲಿಲ್ಲವೆಂಬುದನ್ನು ಎಲ್ಲರೂ ಬಲ್ಲರು; ಅದಕ್ಕೆ ಅರ್ಥ-ಕಾರಣಗಳನ್ನು ನಮ್ಮ ತಜ್ಞರು ವಿವರಿಸಿಯಾರು.

ಜಾಗತೀಕರಣದ ಆನಂತರ ಇಡೀ ವಿಶ್ವವೇ ಒಂದು ಗ್ರಾಮವಾಗುತ್ತದೆಂದು ಭಾವಿಸಲಾಯಿತು. ಕೃತಕ ಗಡಿಗಳು ಅಳಿದು ಮನುಷ್ಯನು ವಿಶ್ವದ ಪ್ರಜೆಯಾಗುವ ಕಾಲ ಸನ್ನಿಹಿತವಾಯಿತೆಂದು ಮತ್ತು ಇನ್ನು ಮುಂದೆ ವಿದೇಶಿ ನೆಲೆಯು ಸುಲಭವಾಗುತ್ತದೆಂದೂ ದೇಶಗಳು ಸಾಂಕೇತಿಕವಾಗುತ್ತದೆಂದೂ ಭಾವಿಸಲಾಯಿತು. ಅನ್ಯ ಗ್ರಹಗಳಿಗೆ ಹೋಗುವುದಕ್ಕೆ ಧನಿಕರು ತುದಿಗಾಲಿನಲ್ಲಿ ನಿಂತು ಮುಂಗಡ ಕೊಟ್ಟು ಕಾಯಲಾರಂಭಿಸಿದ್ದಾರೆಂದೂ ವರದಿಯಾಗಿದೆ. ಯುರೋಪಿನ ಅನೇಕ ದೇಶಗಳು ಒಂದೇ ಹಣಕಾಸಿನ ವ್ಯವಸ್ಥೆಗೆ ಒಗ್ಗೂಡಿದ್ದು, ಭಾರತದಂತಹ ಬಡ ದೇಶವೂ ರೂಪಾಯಿಯನ್ನು ವಿನಿಮಯಕ್ಕೆ ಸುಲಭವಾಗಿಸಿದ್ದು ಹೊಸ ಬೆಳವಣಿಗೆಯ ಆರ್ಥಿಕ-ರಾಜಕೀಯ ಮುಖಗಳನ್ನು ಸ್ಪಷ್ಟವಾಗಿಸುವಂತಿತ್ತು. ಫೆಲೆಸ್ತೀನ್, ಟಿಬೆಟ್, ಮುಂತಾದ ಭೂಭಾಗಗಳ ಸಮಸ್ಯೆಯು ಇನ್ನು ನಿರಾಳವಾಗಿ ಬಗೆಹರಿಯಬಹುದೆಂಬ ದೃಷ್ಟಿಕೋನವು ಚಿಗುರೊಡೆದಿತ್ತು. ಅಮೆರಿಕದಲ್ಲಿ ಶೋಷಿತ ಕರಿ ಜನಾಂಗವು ಒಬಾಮರಂತಹ ನಾಯಕನ ಮೂಲಕ ಹೊಸಹಾದಿಯನ್ನು ಕ್ರಮಿಸುತ್ತದೆಂಬ ಆಶಯವು ಜನಜನಿತವಾಗಿತ್ತು. ಶತಮಾನದ ಈ ವರೆಗಿನ ಸುಮಾರು ಎರಡು ದಶಕಗಳ ಚರಿತ್ರೆಯು ಇವನ್ನು ಸುಳ್ಳಾಗಿಸಿದೆ. ಸಮಕಾಲೀನವಾಗಿರುವುದು, ಪ್ರಚಲಿತವಿರುವುದು ಚರಿತ್ರೆಯಲ್ಲ, ರಾಜಕೀಯವೆಂಬ ಪ್ರಮೇಯವನ್ನು ಸತ್ಯವಾಗಿಸಿದೆ. ಆಳುವವರ ಹೆಬ್ಬಯಕೆಗಳು ವಿಶ್ವಾದ್ಯಂತ ಒಂದೇ ತರಂಗಾಂತರದಲ್ಲಿ ಕ್ರಿಯಾಶೀಲವಾಗಿವೆ. ಮಾತುಬಲ್ಲ ಕೆಲವೇ ಶಕ್ತರು ಬಹುಪಾಲು ಅಶಕ್ತ ಮೌನಿಗಳನ್ನು ಆಳುವುದು ಮಾತ್ರವಲ್ಲ, ತಮ್ಮ ಬಲಿಷ್ಠ ತೆಕ್ಕೆಗಳೊಳಗೆ ಇತರರನ್ನು ನರಳಿಸಬಲ್ಲರೆಂಬುದನ್ನು ಕಳೆದ ಕೆಲವು ವರ್ಷಗಳ ರಾಜಕೀಯವು ತೋರಿಸಿಕೊಟ್ಟಿದೆ. ಸದ್ದಾಮ್ ಹುಸೈನ್, ಕರ್ನಲ್ ಗಡ್ಡಫಿಯಂತಹವರು ಹಿಂಸಾತ್ಮಕ ಆಡಳಿತಶಾಹಿಯ ಪ್ರತಿನಿಧಿಗಳೆಂಬುದನ್ನು ಒಪ್ಪಿಕೊಂಡರೂ ಅವರ ಅಳಿವು ಹೊಸ ಬೆಳಕಿಗೆ-ಬೆಳಗಿಗೆ ಕಾರಣವಾಗಲಿಲ್ಲವೆಂಬುದೂ ಅವು ಅಂತಾರಾಷ್ಟ್ರೀಯ ಆರ್ಥಿಕ ಸಂಚಿನ ಒಂದು ಭಾಗವೆಂಬುದೂ ನಿಜವಾಗಿದೆ. ಸಿರಿಯದಲ್ಲಿ ನಡೆಯುತ್ತಿರುವ ಹಿಂಸೆಯು ಅಮೆರಿಕ ಪ್ರಣೀತ ನ್ಯಾಟೋ ಮತ್ತಿತರ ಸಂಸ್ಥೆಗಳ (ವಿಶ್ವದ ಬಹಳಷ್ಟು ದೇಶಗಳು ರಾಜಕೀಯ ಒಕ್ಕೂಟವಾಗುಳಿಯದೆ ಆರ್ಥಿಕ ಸಂಸ್ಥೆಗಳಾಗಿವೆ!) ಹಾಗೂ ರಶ್ಯಾ ನಾಯಕತ್ವದ ದೇಶಗಳ ಶೀತಲ ಯುದ್ಧದ ಮುಂದುವರಿದ ಭಾಗವಾಗಿರುವುದು ವಿಷಾದದ ಸಂಗತಿಯಾದರೂ ಅದನ್ನು ತಡೆಯುವುದು ಅಸಾಧ್ಯವಾಗಿದೆ.

 ಅಧಿಕಾರ ದಾಹ ಮತ್ತು ಆರ್ಥಿಕ ಅನುಕೂಲಗಳು ಪರಸ್ಪರ ಪಾಲುದಾರರು. ಇವನ್ನು ಯಾವ ದೇಶವೂ ಬಹಿರಂಗವಾಗಿ ಒಪ್ಪಲಾರರು. ನಮ್ಮ ದೇಶದ ನಾಯಕರು ವಿದೇಶಿ ಪ್ರವಾಸ ಹೋಗುತ್ತಾರೆಂದರೆ ಮತ್ತು ಅಲ್ಲಿ ವ್ಯಾಪಾರಿ ಒಪ್ಪಂದಗಳಿಗೆ ಸಹಿ ಹಾಕುತ್ತಾರೆಂದರೆ ಅವು ನಮ್ಮ ದೇಶದ ಅಗತ್ಯಗಳನ್ನು ಪೂರೈಸುತ್ತವೆಂದೇನಿಲ್ಲ; ಬದಲಾಗಿ ವಿಶ್ವ ರಾಜಕೀಯದ ಸಂಚಿನ ಭಾಗವಾಗಿ, ಆ ಸಂಚಿನ ಮುಂದುವರಿಕೆಯಾಗಿ ಕಾಣುತ್ತದೆ. ಭಾರತದ ಪ್ರಧಾನಿ ಇಸ್ರೇಲ್ ಪ್ರವಾಸ ಕೈಗೊಂಡು ಅಲ್ಲಿ ಸಾವಿರಾರು ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಕೊಳ್ಳಲು ಒಪ್ಪಂದ ಮಾಡಿಕೊಂಡರು. ಅಮೆರಿಕಕ್ಕೆ ಹೋದಾಗಲೂ ಅಲ್ಲಿನ ಮಹತ್ವದ ಒಪ್ಪಂದವೆಂದರೆ ಅಮೆರಿಕದ ಶಸ್ತ್ರಾಸ್ತ್ರಗಳ ಖರೀದಿ. ಇವುಗಳಿಂದ ಭಾರತಕ್ಕೆ ಏನು ಲಾಭವಾಗಿದೆಯೆಂದರೆ ರಾಜಕೀಯವಾಗಿ ದೇಶದೊಳಗೆ ಶಕ್ತಿ ಪ್ರದರ್ಶನದ ಅಬ್ಬರದ ಪ್ರಚಾರವಷ್ಟೇ ಹೊರತು ಬೇರೇನಿಲ್ಲ. ನಾವು ನಮ್ಮ ನೆರೆಯ ದೇಶಗಳೊಂದಿಗೆ ಹೋರಾಡಲು ಸ್ವಂತ ನಿರ್ಮಾಣ ಶಕ್ತಿಯನ್ನು ಹೊಂದಿಲ್ಲ. ಏನಿದ್ದರೂ ಮೇಡ್ ಇನ್ ಅಮೆರಿಕ, ಇಸ್ರೇಲ್ ಅಥವಾ ಇನ್ನೊಂದು ದೇಶ! ನಮ್ಮ ಅಣುಶಕ್ತಿಯು ಆಗಾಗ ಸಿಡಿಯುತ್ತಿದ್ದರೂ ನಮ್ಮ ಪ್ರತ್ಯಕ್ಷ ಶಕ್ತಿಯು ಇನ್ನೊಂದು ದೇಶದ ನೆಲದಲ್ಲಿ, ನೆಲೆಯಲ್ಲಿ ಬೆಳೆಯಬೇಕಾಗಿದೆಯೆಂಬುದು ಜಾಗತೀಕರಣದ ಆನಂತರವೂ ಆಗಿರುವ ವಿಪರ್ಯಾಸ.

 ಯಹೂದಿಗಳಿಗಾಗಿ ಸೃಷ್ಟಿಗೊಂಡ ಇಸ್ರೇಲ್ ಎಂಬೊಂದು ರಾಷ್ಟ್ರವಿದೆ. ತನ್ನ ಅಗತ್ಯಗಳಿಗೆ ಅದು ಅಮೆರಿಕದೊಂದಿಗೆ ಅನ್ಯೋನ್ಯ ಬಾಂಧವ್ಯವನ್ನು ಹೊಂದಿದರೂ ಅದರ ಆಂತರಿಕ ಶಕ್ತಿ ಅದರದ್ದೇ ನಿರ್ಮಾಣ; ಅದರದ್ದೇ ಅಭಿಮಾನ. ತನ್ನ ಅವಮಾನಗಳಿಗೆ ಎದಿರೇಟು ಕೊಡಲು ಅದು ಎಂದಿಗೂ ಹಿಂಜರಿಯದು. 1970ರ ದಶಕದಲ್ಲಿ ಉಗಾಂಡದ ಮಿಲಿಟರಿ ಸರ್ವಾಧಿಕಾರಿ ಇದಿ ಅಮೀನ್ ಇಸ್ರೇಲಿನ ವಿಮಾನವೊಂದನ್ನು ಅದರಲ್ಲಿದ್ದ ಪ್ರಯಾಣಿಕರ ಸಹಿತ ತನ್ನ ದೇಶದ ಎಂಟೆಬ್ಬಿ ವಿಮಾನ ನಿಲ್ದಾಣದಲ್ಲಿ ಒತ್ತೆಯಾಗಿರಿಸಿಕೊಂಡ. (ಅದೂ ಒಂದು ಅಂತಾರಾಷ್ಟ್ರೀಯ ಸಂಚಾಗಿತ್ತು!) ಭಾರತದಲ್ಲಾಗಿದ್ದರೆ ಅದು ಭಾರೀ ಹಾಹಾಕಾರಕ್ಕೆ ದಾರಿಯಾಗುತ್ತಿತ್ತು. ಆದರೆ ಇಸ್ರೇಲ್ ತನ್ನ ಶಕ್ತಿಯಿಂದಲೇ ಅದನ್ನು ಪರಿಹರಿಸಿತು. ಕೆಲವೇ ಗಂಟೆಗಳ ಅವಧಿಯಲ್ಲಿ ಅದು ಎಂಟೆಬ್ಬಿಯ ಮೇಲೆ ಧಾಳಿಯನ್ನು ನಡೆಸಿ ಅಲ್ಲಿನ ಭಯೋತ್ಪಾದಕರನ್ನು ಮಣಿಸಿ ವಿಮಾನವನ್ನು ಮರಳಿ ತಂದಿತು. ತನ್ನ ರಾಷ್ಟ್ರೀಯ ಅಸ್ಮಿತೆಯನ್ನು ಮೊೆಯಿತು. ಕೂಗಳತೆಯ ದೂರದ ತನ್ನ ಅರಮನೆಯಲ್ಲಿದ್ದ ಇದಿ ಅಮೀನ್ ಈ ವಿಚಾರವನ್ನು ಅರಿಯುವ ಹೊತ್ತಿಗೆ ಅಪಹೃತ ವಿಮಾನ ಇಸ್ರೇಲಿಗೆ ಮರಳಿತ್ತು. (ಈ ಬಗ್ಗೆ ‘90 ಮಿನಿಟ್ಸ್ ಇನ್ ಎಂಟೆಬ್ಬಿ’ ಎಂಬ ಕೃತಿಯನ್ನು ಓದಬಹುದು.) ಭಾರತವು 2001ರಲ್ಲಿ ಪಾಕಿಸ್ತಾನಕ್ಕೆ ಐವರು ಭಯೋತ್ಪಾದಕರನ್ನು ಮರಳಿಸಿ ತನ್ನೊಬ್ಬ ರಾಜಕಾರಣಿಯನ್ನು ಮರಳಿಪಡೆಯಿತು ಎಂಬುದು ಈಗ ಐತಿಹಾಸಿಕ ಸತ್ಯ. ಕೆಲವೊಮ್ಮೆ ಅನಿವಾರ್ಯವಾಗಬಹುದಾದರೂ ನಮ್ಮ ಪಾಲಿಗೆ ಇದು ನಿತ್ಯದ ಗಂಜಿಯೂಟವಾಗಿರುವುದು ಬೇಸರದ ವಿಚಾರ. ನಮ್ಮ ನಾಯಕರು ವೀರಾವೇಶದಿಂದ ಕೆಂಪುಕೋಟೆಯ ಮೇಲೆ, ಸಂಸತ್ತಿನಲ್ಲಿ ವೈರಿದೇಶಗಳ ವಿರುದ್ಧ ಗುಡುಗಿ ಗುಟ್ಟಾಗಿ ಅವರೊಂದಿಗೆ ಮೆಹರುಬಾನಿ ನಡೆಸುತ್ತಾರೆ. ಪಾಕಿಸ್ತಾನವು ಕೊಲ್ಲುವ ಪ್ರತಿಯೊಬ್ಬ ಭಾರತೀಯನ ರುಂಡಕ್ಕೆ ಪ್ರತಿಯಾಗಿ ಹತ್ತರಷ್ಟು ರಂಡಗಳನ್ನು ಪಡೆಯುವ ಚುನಾವಣಾ ಭಾಷಣಗಳ ಘೋಷಣೆಗಳ ಮೂಲಕ ನಮ್ಮ ಜನರನ್ನು ಮರುಳಾಗಿಸುತ್ತಾರೆ. ಅಮೆರಿಕದೊಂದಿಗೆ, ಯುರೋಪಿನ ಎಲ್ಲ ಅಭಿವೃದ್ಧಿಹೊಂದಿದ ರಾಷ್ಟ್ರಗಳೊಂದಿಗೆ, ಮಧ್ಯಪೂರ್ವದ ಎಲ್ಲ ಇಸ್ಲಾಮಿಕ್ ದೇಶಗಳೊಂದಿಗೆ ಸೌಹಾರ್ದ ಸಂಬಂಧವನ್ನು ಬೆಳೆಸುವ ನಮ್ಮ ದೇಶವು ಅಲ್ಲಿಂದ ಯಥಾರ್ಥ ನೆರವನ್ನು ಪಡೆಯುತ್ತಿಲ್ಲವೆಂಬುದು ಬಹಿರಂಗ ಗುಟ್ಟು. ನಮ್ಮ ವೀಸಾ ಸಂಕಟವು ಹಾಗೇ ಉಳಿದಿದೆ. ಅಮೆರಿಕ, ಬ್ರಿಟನ್ ಮಾತ್ರವಲ್ಲ, ಸೌದಿ ಅರೇಬಿಯ, ಯುಎಇ, ಒಮನ್, ಮಾತ್ರವಲ್ಲ, ಸಿಂಗಾಪುರ, ಇಂಡೋನೇಶ್ಯಾದಂತಹ ಪುಟ್ಟ ಮತ್ತು ನಿಕಟರಾಷ್ಟ್ರಗಳೂ ತಮ್ಮ ದೇಶೀಯತೆಯನ್ನು ಗಟ್ಟಿಗೊಳಿಸುತ್ತಿವೆ.

ನಾವೆಷ್ಟೇ ಬಾರಿ ‘ಮೇಕ್ ಇನ್ ಇಂಡಿಯಾ’ ಎಂದು ಹೇಳಿದರೂ ಅದು ಸಾಂದ್ರವಾಗುತ್ತಿಲ್ಲ. ನಮ್ಮ ದೇಶಭಕ್ತಿಯನ್ನು ಹೇಳುವ ಬಹುಪಾಲು ಅನಿವಾಸಿಗಳು ರಜಾದ ಮಜಾಕ್ಕಷ್ಟೇ ಭಾರತಕ್ಕೆ ಬರುತ್ತಾರೆಂಬುದು ಮತ್ತು ತಮ್ಮ ಕಷ್ಟಪಟ್ಟ ಉಳಿತಾಯವನ್ನು ಭಾರತದಲ್ಲಿ ಹೂಡಲು ಸಕಾರಣವಾಗಿಯೇ ಆಸಕ್ತಿ ಹೊಂದಿಲ್ಲವೆಂಬುದು ಈ ಬಹುಕೋಟಿ ಪ್ರಜೆಗಳಿಗೆ ಅಷ್ಟು ಬೇಗ ಗೊತ್ತಾಗದು. ಎಷ್ಟೇ ಕೈಗಾರಿಕಾ ಮೇಳಗಳನ್ನು, ಬಂಡವಾಳ ಹೂಡಿಕೆದಾರರ ಸಮಾವೇಶಗಳನ್ನು ಮಾಡಿದರೂ ಅದು ಕಾರ್ಯರೂಪಕ್ಕೆ ಬರುತ್ತಿಲ್ಲ. ನಾವು ದೊಡ್ಡವರೆಂದು ನಮ್ಮ ನೀಳಕೈಗಳಿಗಷ್ಟೇ ಗೊತ್ತಿರುವುದರಿಂದ ಅವಷ್ಟೇ ನಮ್ಮ ವಿಶಾಲಬೆನ್ನನ್ನು ತಟ್ಟುತ್ತಿವೆ. ಬರುವ ಬಹುಪಾಲು ರಾಜಕಾರಣದ ಅತಿಥಿಗಳು ಹಸ್ತಲಾಘವ, ರಾಷ್ಟ್ರಪತಿ ಭವನದ ಅದ್ದೂರಿ ಭೋಜನಕೂಟ, ರಾಜಘಾಟಿನ ಶ್ರದ್ಧಾಂಜಲಿ, ತಾಜಮಹಲಿನ ಸಂದರ್ಶನ, ಮುಂತಾದ ಔಪಚಾರಿಕ ಕಾಟಾಚಾರಕ್ಕೆ ತಮ್ಮ ಭೇಟಿಯನ್ನು ಸೀಮಿತಗೊಳಿಸಿ ಉಭಯಕುಶಲೋಪರಿಯ ಪತ್ರಿಕಾಗೋಷ್ಠಿಯನ್ನು ನಡೆಸಿ ಭಾರತಕ್ಕೆ ಶೂನ್ಯಬಂಡವಾಳದ ಪಾಠ ಹೇಳಿ ಹೋಗುತ್ತಿದ್ದಾರೆ. ನಮ್ಮ ಅಶಕ್ತತೆಯನ್ನು ಅಳಿಸಿ ಶಕ್ತತೆಯನ್ನು ಸಂಪಾದಿಸದಿದ್ದರೆ ನಾವು ನಮ್ಮ ಜನರನ್ನು ಮರುಳುಗೊಳಿಸುತ್ತೇವಷ್ಟೇ ಹೊರತು ಬೇರೇನನ್ನೂ ಸಾಧಿಸಲಾರೆವು.

ಇದೆಲ್ಲ ಮರುಕಳಿಸುವುದು ನಮ್ಮವರು ದಾರುಣ ಹತ್ಯೆಗೊಳಗಾದಾಗ; ಒಂದು ಹನಿ ಕಣ್ಣೀರಷ್ಟೇ ನಮ್ಮ ಸಾಧ್ಯತೆ ಗಳಾದಾಗ. ಮಾಸ್ಟರ್ ಹಿರಣ್ಯಯ್ಯನವರ ನಾಟಕವೊಂದರಲ್ಲಿ ಪೊಲೀಸ್ ಠಾಣೆಯ ಒಂದು ಸನ್ನಿವೇಶ: ನಾಗರಿಕನೊಬ್ಬ ಬಂದು ತನ್ನ ಮನೆಯಲ್ಲಿ ಕಳ್ಳತನವಾಗಿದೆಯೆಂದು ದೂರು ನೀಡುತ್ತಾನೆ. ಆಗ ಪೊಲೀಸ್ ಅಧಿಕಾರಿ ಅಲ್ಲಿದ್ದ ಸಿಬ್ಬಂದಿಗೆ ‘‘ಎಲ್ರು ನಿಂತ್ಕೊಳ್ರೋ’’ ಎನ್ನುತ್ತಾನೆ. ಎಲ್ಲರೂ ಕಕ್ಕಾಬಿಕ್ಕಿಯಾಗಿ ಎದ್ದುನಿಂತು ಸೆಲ್ಯೂಟ್ ಹೊಡೆದು ‘‘ಯಾಕ್ಸಾರ್? ಎನ್ನುತ್ತಾರೆ. ಅಧಿಕಾರಿ ‘‘ಇನ್ಯಾಕೆ? ಪಾಪ, ಈ ನನ್ಮಗನ ಮನೇಲಿ ಕಳವಾಯ್ತಲ್ಲ, ಆಗ್ಬಾರ್ದಿತ್ತು; ಅದಕ್ಕೇ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡೋಣ’’ ಎನ್ನುತ್ತಾನೆ. ಅದಾದ ಮೇಲೆ ಆತ ಫಿರ್ಯಾದಿಗೆ ಒಂದು ಕಂಪ್ಲೇಂಟ್ ಬರೆದು ಕೊಟ್ಟು ‘‘6 ತಿಂಗಳು ಕಳೆೆದು ಬಾ, ಹುಡುಕ್ತೀವಿ’’ ಎನ್ನುತ್ತಾನೆ. ಆತ ‘‘6 ತಿಂಗ್ಳು! ಏನು ಹುಡ್ಕೋದು?’’ ಎಂದು ಕೇಳುತ್ತಾನೆ. ‘‘ಇನ್ಯಾಕೆ? ಅಷ್ಟ್ರಲ್ಲಿ ನಿನ್ ಕಂಪ್ಲೇಂಟು ಕಳೆದುಹೋಗಿರುತ್ತೆ, ಅದನ್ನು ಹುಡುಕ್ತೀವಿ!’’ ಎಂದು ಉತ್ತರಿಸುತ್ತಾನೆ ಆತ.

ತಮಾಷೆ ಅನ್ನಿಸಿದರೂ ಇದು ದೇಶದ ಸದ್ಯದ ಶಕ್ತಿಯ ಸಂಕೇತವಾಗಿ ಕಾಣಿಸುತ್ತಿದೆ. ಇಂತಹ ಶಕ್ತಿಯಿರುವಾಗ ಇರಾಕ್ ಅಂತಲ್ಲ ವಿದೇಶದಲ್ಲಾಗಲೀ ದೇಶದ ನೆಲದಲ್ಲಾಗಲೀ ಹಿಂಸೆ ಬಹಿರಂಗವಾಗಿ ನಡೆಯುತ್ತದೆ; ಕಾನೂನನ್ನು ಕೆಲವೇ ಪಟ್ಟಭದ್ರ ಹಿತಾಸಕ್ತಿಗಳು ಕೈಗೆತ್ತಿಕೊಳ್ಳುತ್ತವೆ. ದೇಶದ ಬಗ್ಗೆ ಪ್ರಜೆಗಳಿಗೆ ಪ್ರೀತಿ, ಶ್ರದ್ಧೆ, ಭಕ್ತಿ ಇದ್ದರೆ ಸಾಕಾಗುವುದಿಲ್ಲ. ಅದು ದೇಶವನ್ನಾಳುವವರಿಗಿರಬೇಕು. ದೇಶರಕ್ಷಣೆಯು ವೈಯಕ್ತಿಕ ಹಿತಾಸಕ್ತಿಯ ಮತ್ತು ರಾಜಕೀಯದ ಅಧಿಕಾರದ ರಕ್ಷಣೆಯಷ್ಟೇ ಆಗಿ ಉಳಿದರೆ ಗೂಡಿನೊಳಗಣ ಅಮಾಯಕ, ಮುಗ್ಧ ಮರಿಗಳು ಸಾಯುತ್ತವೆ. ಹುತಾತ್ಮರೆಂದರೆ ವಿದೇಶಿ ವೈರಿಗಳಿಂದ ಸಾಯುವವರು ಮಾತ್ರವಲ್ಲ; ನಮ್ಮ ಅಧಿಕಾರದಾಹಿಗಳಿಗೆ ಬಲಿಯಾಗುವವರೂ ಹುತಾತ್ಮರೇ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top