150ರ ಜನ್ಮವರ್ಧಂತಿಯಲ್ಲಿ ಹರದಾಸ ಅಪ್ಪಚ್ಚ ಕವಿ | Vartha Bharati- ವಾರ್ತಾ ಭಾರತಿ

150ರ ಜನ್ಮವರ್ಧಂತಿಯಲ್ಲಿ ಹರದಾಸ ಅಪ್ಪಚ್ಚ ಕವಿ

20ನೇ ಶತಮಾನದ ಆದಿಯಲ್ಲಿ ವಿಭಿನ್ನ ವಸ್ತುಗಳನ್ನು ಆರಿಸಿಕೊಂಡು ನಾಟಕಗಳನ್ನು ಬರೆದಿರುವುದು ಸಣ್ಣ ಕೆಲಸವೇನಲ್ಲ. ವಿಶೇಷವೆಂದರೆ ಕನ್ನಡ ಮತ್ತಿತರ ಭಾಷೆಗಳಲ್ಲಿ ಬರುವ ಮೊದಲೇ ಸಾವಿತ್ರಿ ಕೊಡವ ಭಾಷೆಯಲ್ಲಿ ನಾಟಕದ ವಸ್ತುವಾದಳು. ಯಯಾತಿ ನಾಟಕವಾಗಿ ಕಾರ್ನಾಡರ ಮತ್ತು ಕಾದಂಬರಿಯಾಗಿ ಖಾಂಡೇಕರ ಅವರ ವರೆಗೂ ಚಾಚಿದ ವಸ್ತು. ಸುಬ್ರಹ್ಮಣ್ಯಸ್ವಾಮಿ ಕುಮಾರಸಂಭವದಂತೆ ವಿಸ್ತಾರವಾದ ಪೌರಾಣಿಕ ವಸ್ತು. ಕಾವೇರಿ ಕೊಡಗಿನ ಪುರಾಣದ ಕಥೆ. ಇವೆಲ್ಲವನ್ನೂ ಈ ಕವಿ ಸಂಸ್ಕೃತ, ಕನ್ನಡದ ಕಾವ್ಯಮಯ ವಿನ್ಯಾಸದಲ್ಲಿ ಕೊಡವ ಭಾಷೆಯಲ್ಲಿ ಸೃಷ್ಟಿಸಿದ್ದಾರೆ.


1868ರ ಸೆಪ್ಟಂಬರ್‌ನಲ್ಲಿ (ಜನ್ಮ ದಿನಾಂಕ ಲಭ್ಯವಿಲ್ಲ) ಹುಟ್ಟಿ 1940ರ ನವೆಂಬರ್ 21ರಂದು ಗತಿಸಿದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಗೆ ಈ ವರುಷ 150ರ ಜನ್ಮ ವರ್ಧಂತಿಯ ಸಂಭ್ರಮ. ಕೊಡಗಿನ ಮತ್ತು ಕೊಡವ ಭಾಷೆಯ ಈ ಕವಿ ಅನೇಕ ಕಾರಣಗಳಿಗಾಗಿ ವಿಶಿಷ್ಟ ಸ್ಮರಣೀಯರು. ಯಾವುದೇ ಭಾಷೆಯ ಜನರು ತಮ್ಮ ಭಾಷೆಯ ಸಾಹಿತ್ಯವನ್ನು ಎಷ್ಟು ಓದುತ್ತಾರೆಂಬುದರ ಆಧಾರದಲ್ಲಿ ಆ ಸಾಹಿತಿಯ ಜನಪರತೆ ಅಡಗಿದೆ; ಎಷ್ಟು ಜನರು ಆ ಭಾಷೆಯನ್ನು ಮಾತನಾಡುತ್ತಾರೆಂಬುದರಲ್ಲಲ್ಲ. ಇಂಗ್ಲಿಷ್ ಸಾಹಿತ್ಯವನ್ನು ಹೆಚ್ಚು ಜನರು ಓದುತ್ತಾರೆ. ಆದ್ದರಿಂದ ಇಂಗ್ಲಿಷ್ ಸಾಹಿತ್ಯ ಹೆಚ್ಚು ಜನಪ್ರಿಯವಾಗಿದೆ. ಹಾಗಲ್ಲದಿದ್ದರೆ ಅದಕ್ಕೂ ಹೆಚ್ಚು ಜನರು ಮಾತನಾಡುವ ಚೀನಾದ ಭಾಷೆ ಅಥವಾ ಹಿಂದಿ ಇಂದು ಲೋಕಮಾನ್ಯ ಭಾಷೆಯಾಗಬೇಕಾಗಿತ್ತು. ಇಷ್ಟೇ ಅಲ್ಲ, ಯಾವ ಭಾಷೆ ಇತರ ಭಾಷೆಗಳನ್ನು ಅಸ್ಪಶ್ಯವಾಗಿ ಕಾಣುವುದಿಲ್ಲವೋ ಅದು ಸರ್ವ ಸ್ವೀಕೃತವಾಗುತ್ತದೆ. ಕೊಡವ ಭಾಷೆ ಲಿಪಿಯಿಲ್ಲದ, ಆದರೆ ಕೊಡಗಿನಲ್ಲಿ ಸುಮಾರು ಹದಿನೆಂಟು ಜನಾಂಗದವರು ಆಡುವ ಮನೆಭಾಷೆ. ವ್ಯಾವಹಾರಿಕ ಅಗತ್ಯಕ್ಕಾಗಿ ಕೊಡಗಿನಲ್ಲಿರುವ ಇತರರೂ ಕನ್ನಡದೊಂದಿಗೆ ಕೊಡವ ಭಾಷೆಯನ್ನು ಆಡುತ್ತಾರೆ.

ಸಂಖ್ಯಾಬಲದಿಂದ ಮತ್ತು ಆಡಳಿತವು ಕನ್ನಡದಲ್ಲೇ ನಡೆಯುತ್ತಿದ್ದುದರಿಂದ ಕನ್ನಡ ಭಾಷಿಕರೇ ಇಲ್ಲಿ ಹೆಚ್ಚಿದ್ದರೂ ಕೊಡವ ಭಾಷೆಯ ನೆಲೆಗಟ್ಟು ಶಕ್ತವಾಗಿದ್ದು ಅದು ಕೊಡಗಿನ ಸಾಂಸ್ಕೃತಿಕ ಪರಂಪರೆಯ ಕನ್ನಡಿಯಂತಿತ್ತು. ಆದರೆ ಕೊಡವ ಭಾಷೆ ಮಾತನಾಡುವ ಜನರಲ್ಲಿ ಅನೇಕರು ಹೊರ ದೇಶ, ರಾಜ್ಯ, ಜಿಲ್ಲೆಗಳಿಗೆ ವಲಸೆ ಹೋಗಲಾರಂಭಿಸಿದ ಮೇಲೆ ಇಲ್ಲಿ ಕೊಡವ ಭಾಷೆ ಮಾತನಾಡುವ ಜನರು ಕಡಿಮೆಯಾಗುತ್ತಿದ್ದಾರೆ ಅಥವಾ ಅವರ ಸಂಖ್ಯೆಯು ವೃದ್ಧಿಯಾಗುತ್ತಿಲ್ಲ. ವಲಸೆ ಬಂದ ಮಲೆಯಾಳಿ ಭಾಷೆ ಮಾತನಾಡುವ ಜನರು ಹೆಚ್ಚಾಗುತ್ತಿದ್ದಾರೆ. (ಇನ್ನಿತರ ಭಾಷಿಗರ ಸಂಖ್ಯೆಯೂ ಸಾಕಷ್ಟಿದೆ.) ಕೊಡವ ಭಾಷೆಯು ಅನಾದಿಯಿಂದ ಬಂದಿದ್ದರೂ ಕೊಡವ ಸಾಹಿತ್ಯ ಜಾನಪದವನ್ನು ಮೀರಿ ಮಾರ್ಗಕ್ಕೆ ಬಂದಿರಲಿಲ್ಲ. ಹಾಲೇರಿ ರಾಜರ ಆಳ್ವಿಕೆಯಲ್ಲಿ ಕನ್ನಡವೇ ಪ್ರಚಾರವಾಯಿತು; ಕೊಡವ ಭಾಷೆಯಲ್ಲ. 1834ರಲ್ಲಿ ಕೊಡಗು ಹಾಲೇರಿ ರಾಜರ ಕಾವಲಿಯಿಂದ ಮುಕ್ತವಾಗಿ ಬ್ರಿಟಿಷರ ಬೆಂಕಿಯೊಲೆಗೆ ಬಿತ್ತು. ಮೆಕಾಲೆ ಪ್ರಚುರಪಡಿಸುವ ಮೊದಲೇ ಇಲ್ಲಿ ಇಂಗ್ಲಿಷ್ ಸಾಕಷ್ಟು ಪ್ರಭಾವ ಬೀರಿತ್ತು. ನಡೆನುಡಿಯಲ್ಲಿ ಬ್ರಿಟಿಷರನ್ನು ಅನುಕರಿಸುವ, ಅನುಸರಿಸುವ ಪ್ರವೃತ್ತಿಯನ್ನು ಕೊಡಗಿನ ಶ್ರೀಮಂತ ಕಾಫಿ ಬೆಳೆಗಾರರು ಹೊಂದಿದ್ದರು. ಇಲ್ಲಿನ ಶ್ರೀಮಂತರ ಬದುಕುವ ಶೈಲಿ ಪರಕೀಯದಂತಿದ್ದರೆ, ಹಳ್ಳಿಗಾಡಿನ ಮತ್ತು ಬಡವರ ಬದುಕುವ ಶೈಲಿಯು ಮಣ್ಣಿನ ವಾಸನೆಯನ್ನು ಹೊಂದಿತ್ತು. ಈ ವಾತಾವರಣದಲ್ಲಿ ಕೊಡವ ಭಾಷೆಯಲ್ಲಿ ಲಿಖಿತ ಸಾಹಿತ್ಯವು ಅಗತ್ಯವಿತ್ತು. ಅಪ್ಪಚ್ಚ ಕವಿ ಈ ಅಭಾವವನ್ನು ನೀಗಿಸಲು ಪ್ರಯತ್ನಿಸಿದರು.

ಮಡಿಕೇರಿ ತಾಲೂಕಿನ ನಾಪೊಕ್ಲು (ಆಗ ನಾಡು, ಈಗ ಹೋಬಳಿ) ಸಮೀಪದ ಕಿರುಂದಾಡಿನಲ್ಲಿ ಅಪ್ಪಚ್ಚನ ಜನನ. ಹೆತ್ತವರು ಅಪ್ಪನೆರವಂಡ ಮೇದಯ್ಯ ಮತ್ತು ಬೊಳ್ಳವ್ವ. ಬಡತನ ಮತ್ತು ಸಮೀಪದಲ್ಲಿ ಶಾಲೆಯಿಲ್ಲದಿದ್ದುದರಿಂದ ಅಪ್ಪಚ್ಚ ವೀರಾಜಪೇಟೆಯ ಸಮೀಪದ ಆರ್ಜಿಯಲ್ಲಿದ್ದ ತನ್ನ ಸೋದರಮಾವನ ಮನೆಯಿಂದ ಶಾಲೆಗೆ ಹೋಗಬೇಕಾಯಿತು. ಕೇವಲ ಮೂರನೇ ತರಗತಿಯ ವರೆಗೆ ಓದು. ಆನಂತರ ಹೊಟ್ಟೆಪಾಡಿಗಾಗಿ ಅಲ್ಲಿ ಇಲ್ಲಿ ಉದ್ಯೋಗದ ಹುಡುಕಾಟ. ಒಂದೆರಡು ವರ್ಷ ಸರಕಾರಿ (ಪೊಲೀಸ್ ಇಲಾಖೆಯೂ ಸೇರಿ!) ಸ್ವಯಂಸೇವೆ. ಅಷ್ಟರಲ್ಲಿ ಮಡಿಕೇರಿಯ ಓಂಕಾರೇಶ್ವರ ದೇವಾಲಯದ ಕಚೇರಿಯಲ್ಲಿ ಉದ್ಯೋಗ. ಆಗ ಕೊಡಗಿನಲ್ಲಿ ಹೊರಜಿಲ್ಲೆಗಳ ನಾಟಕ ಕಂಪೆನಿಗಳು ಬಂದು ಪ್ರದರ್ಶನ ನೀಡುತ್ತಿದ್ದವು. 1890ರಲ್ಲಿ ಅವರಿಗೆ ತಿಪಟೂರಿನ ನಾಟಕ ಕಂಪೆನಿಯೊಂದರ ಸಂಪರ್ಕವಾಯಿತು. ಅಭಿನಯ ಆರಂಭವಾಯಿತು. ಅಪ್ಪಚ್ಚನ ಉದ್ಯೋಗವು ಸಹಜವಾಗಿಯೇ ಸಾಹಿತ್ಯ-ಸಂಗೀತ-ನಾಟಕದಲ್ಲಿ ಆಸಕ್ತನಾಗಿದ್ದ ಅಪ್ಪಚ್ಚನನ್ನು ಅಪ್ಪಚ್ಚಕವಿಯಾಗಿಸಲು ಮುನ್ನುಡಿ ಬರೆಯಿತು. ಮಡಿಕೇರಿಯ ಆಗಿನ ಅರಣ್ಯ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ವೆಂಕಟಾದ್ರಿ ಶಾಮರಾವ್ ಎಂಬವರು ಸಾಹಿತ್ಯ-ಸಂಗೀತ-ನಾಟಕ ಪಾರಂಗತರಾಗಿದ್ದರು. (ಅವರ ತಂದೆ ಕೊಡಗು ರಾಜರ ಉದ್ಯೋಗಿಯಾಗಿದ್ದು ಅರಸರ ಆಗ್ರಹಕ್ಕೆ ತುತ್ತಾಗಿ ನಾಡನ್ನು ತೊರೆದು ಹೋಗುತ್ತಿದ್ದ ನೆಂಟನೊಬ್ಬನನ್ನು ಸಂಸಾರ ಸಹಿತ ಆಶ್ರಯ ನೀಡಿ ಅಡಗಿಸಿದ್ದಕ್ಕಾಗಿ ಮರಣದಂಡನೆಗೆ ತುತ್ತಾಗಿದ್ದರಂತೆ.) ಸ್ವತಃ ನಾಟಕಗಳನ್ನು ರಚಿಸಿ ಅಭಿನಯಿಸುತ್ತಿದ್ದರು.

ರತ್ನಾವಳೀ ನಾಟಕ ಕಂಪೆನಿಯನ್ನು ಕಟ್ಟಿದ್ದರು. ಅವರಲ್ಲಿ ತಮ್ಮ ರಚನೆಗಳನ್ನು ತಿದ್ದಿಸಿಕೊಳ್ಳಲು ಮಂಗಳೂರು ಮತ್ತು ಮೈಸೂರು ಭಾಗಗಳಿಂದ ಕಲಾವಿದರು ಬರುತ್ತಿದ್ದರಂತೆ. ವೆಂಕಟಾದ್ರಿ ಶಾಮರಾವ್ ಮೂಲಕ ಅಪ್ಪಚ್ಚನಿಗೆ ಸಾಹಿತ್ಯ-ಸಂಗೀತದ ಪರಿಚಯವಾಯಿತು. ಅಪ್ಪಚ್ಚ ಕಾವ್ಯ, ಪುರಾಣ ಮತ್ತು ಅವುಗಳ ಸಂಗೀತ ಹಾಗೂ ಸಾಹಿತ್ಯವನ್ನು ಅಧ್ಯಯನ ಮಾಡಿದರು. ಒಂದೆರಡು ವರ್ಷಗಳಲ್ಲಿ ಅಪ್ಪಚ್ಚ ಭಾಗಮಂಡಲಕ್ಕೆ ವರ್ಗವಾದರು. ಅಲ್ಲಿ ಅರ್ಚಕರಾಗಿದ್ದ ವೈದ್ಯನಾಥ ಭಟ್ಟರ ಪರಿಚಯವಾಗಿ ಅವರಲ್ಲಿ ಮಂತ್ರಗಳನ್ನೂ, ವೇದೋಪನಿಷತ್ತನ್ನೂ ಪಾರಾಯಣ-ಅಧ್ಯಯನ ಮಾಡಿದರು. ಹೀಗೆ ಆರಂಭವಾದ ಅನೌಪಚಾರಿಕ ಶಿಕ್ಷಣ ಅಪ್ಪಚ್ಚನನ್ನು ಒಬ್ಬ ವಿದ್ವಾಂಸನನ್ನಾಗಿ ಮಾಡಿತು. ಮುಂದೆ ಆತ ಮಡಿಕೇರಿಗೆ ವರ್ಗವಾದರು. ಅಲ್ಲಿ ವೆಂಕಟಾದ್ರಿ ಶಾಮರಾವ್ ಅವರ ನಾಟಕ ಕಂಪೆನಿಯಲ್ಲಿ ಪಾತ್ರವಹಿಸಿದರು.

ಅಭಿನಯದ ಶಕ್ತಿಯಿಂದಾಗಿ ಪ್ರಮುಖ ಪಾತ್ರಗಳೇ ಅವರಿಗೆ ಪ್ರಾಪ್ತವಾಯಿತು. ಮುಂದೆ ವೆಂಕಟಾದ್ರಿ ಶಾಮರಾವ್ ಅವರ ಕಂಪೆನಿ ಮುಚ್ಚಿಹೋದಾಗ ಆಪ್ಪಚ್ಚನೇ ಒಂದು ಕೊಡವ ಭಾಷೆಯ ನಾಟಕ ಕಂಪೆನಿಯನ್ನು ಕಟ್ಟಿದರು. 22 ಮಂದಿಯ ಈ ತಂಡ ಕೊಡಗಿನೆಲ್ಲೆಡೆ ಕೊಡವ ನಾಟಕಗಳನ್ನು ಮತ್ತು ಕನ್ನಡ ನಾಟಕಗಳನ್ನು ಕೊಡವ ಭಾಷೆಗೆ ಅನುವಾದಿಸಿ ಅಭಿನಯಿಸುತ್ತಿತ್ತು. ಆದರೆ ಈ ಕಂಪೆನಿಯು ಧನಾಭಾವದಿಂದಾಗಿ ಮುಚ್ಚಿಹೋಯಿತು. ಈ ಅವಧಿಯಲ್ಲಿ ಅಂದರೆ 1906ರಲ್ಲಿ ಯಯಾತಿ ರಾಜ ನಾಟಕ, 1908ರಲ್ಲಿ ಸಾವಿತ್ರಿ ನಾಟಕ ಮತ್ತು ಸುಬ್ರಹ್ಮಣ್ಯ ಸ್ವಾಮಿ ನಾಟಕ ಹೀಗೆ ಅಪ್ಪಚ್ಚ ಮೂರು ನಾಟಕಗಳನ್ನು ಪ್ರಕಟಿಸಿದರು. ಆಗಿನ ಕಾಲದಲ್ಲಿ 500 ಪ್ರತಿಗಳನ್ನು ಮುದ್ರಿಸುವುದೆಂದರೆ ದೊಡ್ಡ ಸಾಹಸವೇ ಸರಿ. ಹಾಗಿದ್ದರೂ ಸಾವಿತ್ರಿ ನಾಟಕವು 1913ರಲ್ಲಿ ಎರಡನೆಯ ಮುದ್ರಣವನ್ನು ಕಂಡಿದೆಯೆಂಬುದರಲ್ಲಿ ಅವರ ಖ್ಯಾತಿಯ ಅರಿವಾಗಬಹುದು. ಆನಂತರ ಅಪ್ಪಚ್ಚ ಕನ್ನಡ ನಾಟಕ ಕಂಪೆನಿಯೊಂದನ್ನು ಕಟ್ಟಿ ಕೊಡಗು ಮತ್ತು ನೆರೆಯ ಮೈಸೂರು ಜಿಲ್ಲೆಗಳಲ್ಲಿ ನಾಟಕ ಪ್ರದರ್ಶನ ಮಾಡಿದರು. ಈ ನಾಟಕ ತಂಡದಲ್ಲಿ ಹಾಸನ ಮತ್ತು ಮೈಸೂರಿನ ಅನೇಕ ಕಲಾವಿದರು ಭಾಗವಹಿಸುತ್ತಿದ್ದರಂತೆ.

1917ರಲ್ಲಿ ಅಪ್ಪಚ್ಚ ಮುಜರಾಯಿ ಇಲಾಖೆಯ ಉದ್ಯೋಗಕ್ಕೆ ರಾಜೀನಾಮೆ ನೀಡಿ ಪೂರ್ಣಾವಧಿ ಕಲೆಗೆ ತಮ್ಮನ್ನು ಅರ್ಪಿಸಿಕೊಂಡರು. ಪ್ರವೃತ್ತಿ ವೃತ್ತಿಯಾಯಿತು. ಜೊತೆಗೇ 1918ರಲ್ಲಿ ಶ್ರೀ ಕಾವೇರಿ ನಾಟಕವನ್ನು ಪ್ರಕಟಿಸಿದರು. ಅವರ ನಾಟಕಗಳು ಗದ್ಯ ಪದ್ಯಗಳ ಸಂಗಮವಾಗಿದ್ದು ಗೀತನಾಟಕಗಳೆಂದು ಕರೆಯಬಹುದಾದ ವರ್ಗಕ್ಕೆ ಸೇರಿದವುಗಳು. ಆದ್ದರಿಂದ ಅಪ್ಪಚ್ಚ ನಾಟಕಕಾರ ಮತ್ತು ನಟರಾಗಿ ಹೆಸರು ಮಾಡಿರುವುದರ ಜೊತೆಗೇ ಅಪ್ಪಚ್ಚ ಕವಿಯಾದರು. ನಾಟಕವೂ ಒಂದು ಕಾವ್ಯವೇ. (ಕಾವ್ಯೇಷು ನಾಟಕಂ ರಮ್ಯಂ!)

ಅಪ್ಪಚ್ಚ ಕೆಲವು ವರ್ಷ ಹಾಗೂ ಹೀಗೂ ನಾಟಕದಲ್ಲೇ ಜೀವನ ಸವೆಸಿದರು. 1926ರಲ್ಲಿ ಅವರ ಮನೆ ಸುಟ್ಟುಹೋಗಿ ಅವರು ತೀರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಇದನ್ನು ಭರಿಸುವುದಕ್ಕಾಗಿ ಅವರು ಹರಿಕಥೆಗಳನ್ನು ನಡೆಸುವುದಕ್ಕೆ ಆರಂಭಿಸಿದರು. ಕೊಡಗಿನಲ್ಲಿ ಮಾತ್ರವಲ್ಲ, ಪುತ್ತೂರು, ಮಂಗಳೂರು ಮತ್ತಿತರ ಹಲವು ಪ್ರದೇಶಗಳಲ್ಲಿ ಅವರ ಹರಿಕಥೆ ಪ್ರಖ್ಯಾತವಾಗಿತ್ತು. ಸಂಗೀತದ ಪ್ರಾವಿಣ್ಯ, ವಿದ್ವತ್ತು ಹಾಗೂ ಸುಶ್ರಾವ್ಯ ಕಂಠ ಇವುಗಳಿಂದಾಗಿ ಅಪ್ಪಚ್ಚ ಯಶಸ್ವಿ ಹರಿದಾಸರಾದರು ಮತ್ತು ಅವರ ಹೆಸರಿಗೆ ಕವಿ ಮಾತ್ರವಲ್ಲ, ಈ ಹೊಸ ವೃತ್ತಿಯೂ ಅಂಟಿಕೊಂಡು ‘ಹರದಾಸ ಅಪ್ಪಚ್ಚ ಕವಿ’ಯಾದರು. ಹರಿಕಥೆಯ ಅಪ್ಪಚ್ಚ ಕವಿ ಹರದಾಸರಾದರು ಹೇಗೆ ಎಂಬ ಬಗ್ಗೆ ವಿವರಗಳು ಲಭ್ಯವಿಲ್ಲ. ಕೆಲವರು ಅವರು ಶಿವನ ಭಕ್ತರೆಂದೂ ಈ ಕಾರಣಕ್ಕೆ ಅವರು ಹರದಾಸರೆಂದು ಹೆಸರಾದರೆಂದೂ ಹೇಳುತ್ತಾರೆ. ಆದರೆ ರವಿ ಕಾಣದ್ದನ್ನು ಕಾಣಬಲ್ಲ ಕವಿಯೊಬ್ಬ ಹರಿ-ಹರರ ನಡುವೆ ಭೇದ ಕಲ್ಪಿಸಿದರೆಂದು ಅನ್ನಿಸುವುದಿಲ್ಲ. ಪ್ರಾಯಃ ಪ್ರಾದೇಶಿಕ ಭಾಷಾ ಪ್ರಯೋಗದಲ್ಲಿ ಅವರು ಹರದಾಸರಾಗಿದ್ದಿರಬಹುದು. ಇಷ್ಟಕ್ಕೂ ಹರಿದಾಸರು ಹರನ ಕಥೆಯನ್ನು ಮಾಡುವುದಿಲ್ಲವೆಂದಿಲ್ಲವಲ್ಲ! ಈ ಬಳಕೆ ಗೌಣ ಮತ್ತು ಈ ಕೂದಲು ಸೀಳುವ ಚರ್ಚೆ ಅನವಶ್ಯಕ. 1929ರಲ್ಲಿ ಯಯಾತಿ ರಾಜ ನಾಟಕ ಮತ್ತು ಶ್ರೀ ಕಾವೇರಿ ನಾಟಕ ಮರು ಮುದ್ರಣದ ಭಾಗ್ಯವನ್ನು ಕಂಡವು. 1934ರಲ್ಲಿ ಈ ಹರದಾಸ ಕವಿ ವೃತ್ತಿಯಿಂದ ನಿವೃತ್ತಿ ಹೊಂದಿದರು. 1936ರಲ್ಲಿ ಅವರು ತಮ್ಮ ಆತ್ಮ ಚರಿತ್ರೆಯನ್ನು ಬರೆದರೆನ್ನುತ್ತಾರೆ. 1942ರಲ್ಲಿ ಶ್ರೀ ಸುಬ್ರಹ್ಮಣ್ಯ ನಾಟಕ ಮರುಮುದ್ರಣಗೊಂಡಿತು. 1944ರ ನವೆಂಬರ 21ರಂದು ಈ ಹರದಾಸ ಕವಿ ಬದುಕಿಗೆ ನಿವೃತ್ತಿ ಹಾಡಿದರು.

ಈ ಕಲಾವಿದ-ಕವಿ-ನಾಟಕಕಾರ-ಹರದಾಸನ ಬದುಕು ಒಂದು ಆಯಾಮವಾದರೆ ಅವರ ಕೃತಿ ಇನ್ನೊಂದು ಆಯಾಮ. ಈ ನಾಲ್ಕು ನಾಟಕಗಳು ಅವರನ್ನು ಶಾಶ್ವತವಾಗಿ ಸಾಹಿತ್ಯದಲ್ಲಿ ಸ್ಥಾಪಿಸಬಲ್ಲವು. ಅವರು ಚಾರಿತ್ರಿಕವಾಗಿಯೂ ಗುಣಾತ್ಮಕವಾಗಿಯೂ ಪ್ರಮುಖ ಬರಹಗಾರರು. 20ನೇ ಶತಮಾನದ ಆದಿಯಲ್ಲಿ ವಿಭಿನ್ನ ವಸ್ತುಗಳನ್ನು ಆರಿಸಿಕೊಂಡು ನಾಟಕಗಳನ್ನು ಬರೆದಿರುವುದು ಸಣ್ಣ ಕೆಲಸವೇನಲ್ಲ. ವಿಶೇಷವೆಂದರೆ ಕನ್ನಡ ಮತ್ತಿತರ ಭಾಷೆಗಳಲ್ಲಿ ಬರುವ ಮೊದಲೇ ಸಾವಿತ್ರಿ ಕೊಡವ ಭಾಷೆಯಲ್ಲಿ ನಾಟಕದ ವಸ್ತುವಾದಳು. ಯಯಾತಿ ನಾಟಕವಾಗಿ ಕಾರ್ನಾಡರ ಮತ್ತು ಕಾದಂಬರಿಯಾಗಿ ಖಾಂಡೇಕರ ಅವರ ವರೆಗೂ ಚಾಚಿದ ವಸ್ತು. ಸುಬ್ರಹ್ಮಣ್ಯಸ್ವಾಮಿ ಕುಮಾರಸಂಭವದಂತೆ ವಿಸ್ತಾರವಾದ ಪೌರಾಣಿಕ ವಸ್ತು. ಕಾವೇರಿ ಕೊಡಗಿನ ಪುರಾಣದ ಕಥೆ. ಇವೆಲ್ಲವನ್ನೂ ಈ ಕವಿ ಸಂಸ್ಕೃತ, ಕನ್ನಡದ ಕಾವ್ಯಮಯ ವಿನ್ಯಾಸದಲ್ಲಿ ಕೊಡವ ಭಾಷೆಯಲ್ಲಿ ಸೃಷ್ಟಿಸಿದ್ದಾರೆ. ಸೂತ್ರಧಾರನ ಮೂಲಕ ನಾಟಕಕ್ಕೆ ಪ್ರವೇಶ ಕಲ್ಪಿಸುತ್ತಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top