ಅಧಿಕಾರ ಮತ್ತು ಅಜ್ಞಾನ | Vartha Bharati- ವಾರ್ತಾ ಭಾರತಿ

---

ಅಧಿಕಾರ ಮತ್ತು ಅಜ್ಞಾನ

ಈಚೆಗೆ ದೇಶದ ವಿವಿಧೆಡೆಯ, ಎಡಪಂಥದ ಒಂದಷ್ಟು ಹಿರಿಯ, ವಿದ್ಯಾವಂತ, ವೃತ್ತಿಪರರನ್ನು (ಉದ್ದೇಶಪೂರ್ವಕವಾಗಿಯೇ ನಾನು ‘ಬುದ್ಧಿಜೀವಿಗಳು’ ಎಂಬ ಪದವನ್ನು ಬಳಸುತ್ತಿಲ್ಲ; ಏಕೆಂದರೆ ತಕ್ಷಣ ಅವರ ವಿರುದ್ಧ ಒಂದು ದೊಡ್ಡ ಪಡೆಯೇ ಹರಿಹಾಯುತ್ತದೆ!) ಮಾವೋವಾದಿ ಭಯೋತ್ಪಾದನೆಯ ಸೂತ್ರಧಾರಿಗಳೆಂಬ ಆರೋಪದಡಿ ಪುಣೆಯ ಪೊಲೀಸರು ಬಂಧಿಸಿದರು. ಈ ಬಂಧಿತರಲ್ಲಿ ಕವಿಗಳಿದ್ದರು; ವಿಜ್ಞಾನಿಗಳಿದ್ದರು; ಪ್ರೊಫೆಸರುಗಳಿದ್ದರು; ಸಾರ್ವಜನಿಕವಾಗಿ ಸಾಕಷ್ಟು ಗೌರವಗಳನ್ನು, ಪದವಿಗಳನ್ನು ಗಳಿಸಿದವರಿದ್ದರು. ಇವರು ಬಂಧನಕ್ಕೊಳಗಾ ಗಿದ್ದರೆ ಇಷ್ಟು ಹೊತ್ತಿಗೆ ಏನಾಗುತ್ತಿತ್ತೋ ಗೊತ್ತಿಲ್ಲ. ಆದರೆ ಕೆಲವು ಇತರ ವೃತ್ತಿಪರರೂ ವಿದ್ಯಾವಂತರೂ ಸರ್ವೋಚ್ಚ ನ್ಯಾಯಾಲಯದ ಕದ ತಟ್ಟಿದರು; ಬಂಧಿತರ ಅದೃಷ್ಟಕ್ಕೆ ನ್ಯಾಯಾಲಯವು ಈ ಬಂಧಿತರ ನೆರವಿಗೆ ಬಂತು; ಅವರನ್ನು ಮುಂದಿನ ವಿಚಾರಣೆಯವರೆಗೆ ಅಂದರೆ ಸೆಪ್ಟಂಬರ್ 6ರ ವರೆಗೆ ಗೃಹಬಂಧನಕ್ಕಷ್ಟೇ ಸೀಮಿತವಾಗಿಸುವ ಆದೇಶವನ್ನು ಮಾಡಿತು. ಇದು ಕೂಡಾ ಸ್ವಾತಂತ್ರ್ಯಹರಣವೇ ಹೌದಾದರೂ ಕುರುಡುಗಣ್ಣಿನ ದೋಷಕ್ಕಿಂತ ಮೆಳ್ಳೆಗಣ್ಣಿನ ದೋಷ ಪರಮಸುಖವೆನ್ನಿಸಿತು. ಬಂಧನದ ಪರ-ವಿರೋಧ ಅಭಿಪ್ರಾಯಗಳು ಎಲ್ಲ ಬಗೆಯ ಮಾಧ್ಯಮಗಳಲ್ಲಿ ಹರಿದಾಡಿದವು. ಇಂತಹ ಪರ-ವಿರೋಧಗಳಿಗೆ ಕಾರಣ ಬೇಕಿಲ್ಲವೆಂದು ನಮ್ಮ ರಾಜಕೀಯ ನಿಲುವುಗಳು ಹೇಳಿಕೊಟ್ಟಿವೆ. ಪ್ರಜೆಗಳು ಅವನ್ನು ಯಥಾವತ್ತಾಗಿ ಪಾಲನೆಮಾಡುತ್ತಿವೆ! ಬಹುತೇಕ ಮಾಧ್ಯಮಗಳು ಕೂಡಾ ಚಿಂತನಾಪರ ನಿಲುವಿಗೆ ಕಾಯದೆ ತಾವು ಆಳುವವರಿಗೆ ಎಷ್ಟು ನಿಷ್ಠರು ಎಂಬುದನ್ನು ಬಿಂಬಿಸುವಂತೆ ಮತ್ತು ವಂದಿಮಾಗಧರನ್ನು ನಾಚಿಸುವಂತೆ ಈ ಬೆಳವಣಿಗೆಗೆ ಬಣ್ಣ ಹಚ್ಚಿದವು. ಯಾರು ಸರಿ ಯಾರು ತಪ್ಪುಎಂಬುದನ್ನು ವಿಚಾರಿಸಲು ನ್ಯಾಯಾಂಗವೊಂದಿದೆಯೆಂಬ ವ್ಯವಧಾನಕ್ಕೊಳಪಡದೆ ತಾವೇ ಸರಿ-ತಪ್ಪುಗಳನ್ನು ನಿರ್ಧರಿಸುವ ಪುಣ್ಯಕಾಯಕಕ್ಕೆ ತೊಡಗಿದವು. ಆರೋಪಿ ಮತ್ತು ಅಪರಾಧಿ ಎಂಬ ಪದಗಳ ವ್ಯತ್ಯಾಸವನ್ನು ಓದುಗರಿಗೆ, ವೀಕ್ಷಕರಿಗೆ ನೀಡುವುದು ಸದ್ಯಕ್ಕೆ ಪ್ರಸ್ತುತವಲ್ಲವೆಂದು ತೀರ್ಪು ನೀಡಿದವು.

ಮುಂದಿನ ವಿಚಾರಣೆಗೆ ಕಾಯದೆ ಪುಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಬಳಿ ಈ ಮಂದಿಯನ್ನು ವಿಚಾರಿಸಲು ಬೇಕಾದ ಸಾಕ್ಷ್ಯವಿದೆಯೆಂದು ಪತ್ರಿಕಾಗೋಷ್ಠಿ ನಡೆಸಿ ಪ್ರಕಟಿಸಿದರು. ಯಾವ ಮಾಧ್ಯಮ ವಿಚಾರಣೆಯನ್ನು ನ್ಯಾಯಾಲಯಗಳು ಖಂಡಿಸಿವೆಯೋ ಅಂತಹ ಮಾಧ್ಯಮಗಳ ಮುಂದೆ ಸಾರ್ವಜನಿಕರಿಗೆ ಬೇಕಾದ ಗ್ರಾಸವನ್ನು ಈ ಪೊಲೀಸ್ ಅಧಿಕಾರಿ ಉಣಬಡಿಸಿದರು. ಇದರಿಂದಾಗಿ ನ್ಯಾಯ ಮತ್ತು ಕಾನೂನುಗಳು ಬಳಲಿದರೂ ಸಾರ್ವಜನಿಕವಾಗಿ ವಿಚಾರಣೆ ನಡೆಯುವುದಕ್ಕೆ ಬಯಲು ರಂಗಭೂಮಿ ನಿರ್ಮಾಣವಾಯಿತು.

ಅಧಿಕಾರದ ಒಂದು ವೈಶಿಷ್ಟ್ಯ ಮತ್ತು ಗುಣವೆಂದರೆ ಅದು ಅಜ್ಞಾನವನ್ನು ಸುಜ್ಞಾನವನ್ನಾಗಿ ಪರಿವರ್ತಿಸಬಲ್ಲುದು. ನಮ್ಮ ಆರ್ಷೇಯ ಪರಂಪರೆ ಇಂತಹ ಎಡೆಬಿಡಂಗಿತನಕ್ಕೆ ಆಸ್ಪದ ನೀಡಬಲ್ಲ ಹಲವಾರು ಪಠ್ಯಗಳನ್ನು ರೂಪಿಸಿದೆ. ಅವುಗಳಲ್ಲೊಂದು ‘ರಾಜಾ ಪ್ರತ್ಯಕ್ಷ ದೇವತಾ’ ಎಂಬ ಉಕ್ತಿ. ರಾಜನಾದವನು ಆಳಬಲ್ಲ; ಆಳುವವನು ಎಲ್ಲವನ್ನೂ ಬಲ್ಲ. ಆತನೇ ಕಣ್ಣಿಗೆ ಕಾಣುವ ದೇವರು. ಆತ ಸರ್ವ ನಿಯಾಮಕ; ಸರ್ವ ನಿಯಂತ್ರಕ. ಆದ್ದರಿಂದ ಆತನ ಅಧೀನದಲ್ಲಿರುವುದು ಪ್ರಜೆಗಳ ಜನ್ಮಸಿದ್ಧ ಹಕ್ಕು ಮಾತ್ರವಲ್ಲ ಕರ್ತವ್ಯ. ಆತನು ಹೇಳಿದ್ದು ಸರಿಯೋ ತಪ್ಪೋ ಎಂಬ ವ್ಯಾಖ್ಯಾನಕ್ಕೆ ಪ್ರಜೆಗಳು ಅನರ್ಹರು. ಒಂದು ವೇಳೆ ಆತನು ಹೇಳಿದ್ದು ಮೇಲ್ನೋಟಕ್ಕೇ ತಪ್ಪೆಂದು ಅನ್ನಿಸಿದರೂ ಅದು ಆಯಾಯ ಜ್ಞಾನಶಾಖೆಯ ತಪ್ಪೇ ಹೊರತು ಅಧಿಕಾರಸ್ಥನದ್ದಲ್ಲ. ಆತನಿಗೆ ಪ್ರಿಯವಾದ್ದನ್ನೇ ಹೇಳುವುದಕ್ಕೂ ಪ್ರಜೆಗಳು ಬದ್ಧರು. ಅದು ಪ್ರಜೆಗಳ ಬದುಕಿನ ಹಾದಿಯೂ ಹೌದು; ಗುರಿಯೂ ಹೌದು. ಸತ್ಯ ಮತ್ತು ಪ್ರಿಯ ಇವುಗಳ ನಡುವಣ ಸಂಘರ್ಷದಲ್ಲಿ ಸತ್ಯವೇ ಸೋಲಬೇಕು; ಏಕೆಂದರೆ ಪ್ರಿಯವಾಗಿರುವುದೇ ಬದುಕಿನ ಸತ್ಯ. ‘ನ ಬ್ರೂಯಾತ್ ಸತ್ಯಂ ಅಪ್ರಿಯಂ’ ಎಂದು ಈ ದೇಶದ ಆರ್ಷೇಯರು ಹೇಳಿದ್ದೇ ಗೆರೆಮಿರಿವ ಚಿನ್ನದದಿರು. ಹೀಗೆ ಬದುಕನ್ನು ಸುಸೂತ್ರವಾಗಿ ಸಾಗಿಸಲು ಬೇಕಾದ ಎಲ್ಲ ನಡೆನುಡಿಗಳನ್ನು ಹಿರಿಯರು ಹಾಕಿಕೊಟ್ಟಿದ್ದಾರೆ; ಅದನ್ನು ಪಾಲಿಸಿಕೊಂಡು ಬರುವುದು ಎಲ್ಲರಿಗೂ ಭೌತಿಕ, ಮಾನಸಿಕ ಹಿತ.

 ಅಧಿಕಾರದ ಮುಖ್ಯ ಸೌಕರ್ಯವೆಂದರೆ ಅದು ಸರಿ-ತಪ್ಪುಗಳನ್ನು ತಾನೇ ನಿರ್ಧರಿಸುತ್ತದೆ- ಪುಣೆಯ ಪೊಲೀಸ್ ಅಧಿಕಾರಿಯಂತೆ. ಅಧಿಕಾರದಲ್ಲಿರುವವರು ಗಣಿತವನ್ನು ಗಣಿತಜ್ಞರಿಗೆ, ಆರ್ಥಿಕತೆಯನ್ನು ಅರ್ಥಶಾಸ್ತ್ರಜ್ಞರಿಗೆ, ವಿಜ್ಞಾನವನ್ನು ವಿಜ್ಞಾನಿಗಳಿಗೆ, ಹೇಳಿಕೊಡಬಲ್ಲರು. ತರ್ಕಬದ್ಧತೆಯನ್ನು ಗೌಣವಾಗಿಸಿ ಏನನ್ನೂ ಸಮಾಜವು ಸ್ವೀಕರಿಸಬಹುದಾದ ಸ್ಥಿತಿಯನ್ನು ತರಬಲ್ಲರು. ಇದರಿಂದಾಗಿ ನಮ್ಮ ರಾಜಕಾರಣಿಗಳು ಅಧಿಕಾರವೊಂದಿದ್ದರೆ ಭೂಮಿಯನ್ನು ಮತ್ತೆ ಈಗಿರುವ ಗುಂಡಗಿನಾಕಾರದಿಂದ ಸಪಾಟಾಗಿಸಿ, ಇಂದಿನ ಎಲ್ಲ ವೈಜ್ಞಾನಿಕ ಸಾಧನೆೆಗಳನ್ನು ರಾಮಾಯಣ-ಮಹಾಭಾರತ ಮಾತ್ರವಲ್ಲ ಅದಕ್ಕೂ ಮುನ್ನಿನ ಕಾಲಕ್ಕೆ ತಳ್ಳಬಲ್ಲರು. ಮಂಗನಿಂದ ಮನುಷ್ಯನೆಂಬ ವಿಕಾಸವಾದವನ್ನು ತಿರುಗಾಮುರುಗಾ ಮಾಡಿ ಮನುಷ್ಯನಿಂದಲೇ ಮಂಗ ಎಂಬುದನ್ನು ಸಾರ್ವತ್ರಿಕಗೊಳಿಸಬಲ್ಲರು.

ಈಗ ಆಗಿರುವುದು, ಆಗುತ್ತಿರುವುದು ಇದೇ. ಇದನ್ನು ವಿಷದೀಕರಿಸಲು ನಮ್ಮದೇ ನಿಸರ್ಗದ ಒಂದು ಉದಾಹರಣೆಯನ್ನು ಇಲ್ಲಿ ಹೇಳುವುದು ಅಪ್ರಸ್ತು ತವಾಗುವುದಿಲ್ಲವೆಂದುಕೊಂಡಿದ್ದೇನೆ:

ಈಚೆಗೆ ಕೇರಳದಲ್ಲಿ ಮತ್ತು ಕರ್ನಾಟಕದ ಕೊಡಗಿನಲ್ಲಿ ಭಯಾನಕವಾದ ಪ್ರಾಕೃತಿಕ ವೈಪರೀತ್ಯವು ನಡೆದುಹೋಯಿತು. ಅಸಂಖ್ಯ ಜನರು ಮನೆ-ಮಠ (ಮನೆಗೆ ಮಠ ಎಂಬ ಯಮಳ ಪದವಿದೆ!) ಸಂತ್ರಸ್ತರಾದರು. ಸಾಕಷ್ಟು ಜನರು ನೊಂದರು; ನೀರಿನಲ್ಲಿ, ಮಣ್ಣಿನಲ್ಲಿ ಬೆಂದರು.

ಈ ಕುರಿತು ಅಧಿಕಾರಸ್ಥರು ವಿವಿಧ ಬಗೆಯ ಚೋದ್ಯಮಯ ಪ್ರತಿಕ್ರಿಯೆಗಳನ್ನು ನೀಡಿದರು. ಪ್ರಚಾರಕ್ಕೆ ಏನೇನು ಬೇಕೋ ಅವನ್ನೆಲ್ಲವನ್ನೂ ನಡೆಸಿದರು. ಕೇರಳದ ದುರಂತಕ್ಕೆ ಗೋಹತ್ಯೆಯೇ ಕಾರಣವೆಂದು ಒಬ್ಬ ಬೃಹಸ್ಪತಿ ಹೇಳಿದರೆ ಇನ್ನೂ ಹಲವರು ಇದಕ್ಕಿಂತಲೂ ಹೆಚ್ಚು ಪುಕ್ಕಟೆ ಮನರಂಜನೆಯನ್ನು ನೀಡುವ ಹೇಳಿಕೆಗಳನ್ನು ನೀಡಿದರು. ಕೊಡಗಿನ ದುರಂತಕ್ಕೆ ಗೋಹತ್ಯೆಯ ನೆಪ ಸಿಗಲು ಸಾಧ್ಯವಿಲ್ಲದ್ದರಿಂದ ಸುಮ್ಮನಾದರು. ಈ ಡೊಂಬರಾಟಕ್ಕೆ ಮಾಧ್ಯಮಗಳು, ಚಮಚಾಗಳು, ಅಧಿಕಾರಭಗವದ್ಭಕ್ತರು ಸಾಥ್ ನೀಡಿದರು.

ಪ್ರಾಕೃತಿಕ ಅಸಮತೋಲನವೇ ಇಂತಹ ದುರಂತಗಳಿಗೆ ಕಾರಣವೆಂಬ ಸರಳ ಸಾಮಾನ್ಯ ಸತ್ಯವೊಂದಿದೆ. ಅದನ್ನು ಇಂತಹ ಕ್ಷೇತ್ರಗಳಲ್ಲಿ ದುಡಿಯುವವರು ಅಧ್ಯಯನಪೂರ್ವಕವಾಗಿ ಹೇಳುತ್ತಾರೆ. ಇದನ್ನು ಈ ಬಾರಿಯೂ ಹೇಳಿದರು. ಈ ಬಗ್ಗೆ ಕೇಂದ್ರ ಸರಕಾರವೇ ನೇಮಿಸಿದ ಗಾಡ್ಗೀಳ್ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸಿದ್ದರೆ ಪ್ರಾಯಃ ಇಂತಹ ದುರಂತವನ್ನು ಸ್ವಲ್ಪವಾದರೂ ಶಮನಗೊಳಿಸಬಹುದಿತ್ತೆಂದು ಅವರು ಹೇಳಿದರು. ಆದರೆ ಆ ವರದಿಯು ಅಧಿಕಾರಸ್ಥರ ಸಮಾನಾಂತರ ಸತ್ಯದಿಂದಾಗಿ ಸರಕಾರದ ಉಗ್ರಾಣದಲ್ಲಿ ಚಳಿಕಾಯಿಸುವುದಕ್ಕೆ ಉರಿಯಲು ಸನ್ನದ್ಧವಾಗುತ್ತಿದೆ. ಅದರ ಬದಲಿಗೆ ಡಾ ಕಸ್ತೂರಿರಂಗನ್ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು-ತಾನೂ ಧೂಳುಹಿಡಿಯುವ ಅಪಾಯವನ್ನು ಮುಂದಾಲೋಚಿಸಿ- ಗಾಡ್ಗೀಳ್ ಅವರ ವರದಿಯಷ್ಟು ಗಟ್ಟಿಯಾಗದಿದ್ದರೂ ಒಂದಷ್ಟು ಸುಧಾರಣೆಗಳನ್ನು ಸಲಹೆಮಾಡಿ ವರದಿ ನೀಡಿತು. ಈಗ ಅದನ್ನು ಸ್ವೀಕರಿಸಲು ಕೇಂದ್ರ ಸರಕಾರವು ಹಿಂದೆ (ಮುಂದೆ ಅಲ್ಲ!) ನೋಡುತ್ತಿದೆ. ಕೇಂದ್ರದ ಈ ಹಿಂಜರಿಕೆಗೆ ಸಹಜ ಸಾಧಾರಣ ವೈಜ್ಞಾನಿಕ ಕಾರಣಗಳಾಗಲೀ ಅಧಾರಗಳಾಗಲೀ ಇಲ್ಲ; ರಾಜಕಾರಣಿಗಳೂ ಅವರ ಮತಬುಟ್ಟಿಗಳೂ ಈ ಸುಧಾರಣೆಯನ್ನು ವಿರೋಧಿಸುತ್ತಿವೆಯೆಂಬ ಏಕೈಕ ಕಾರಣದಿಂದ ಡಾ ಕಸ್ತೂರಿರಂಗನ್ ಅವರೂ ಗಾಡ್ಗೀಳ್ ಅವರನ್ನು ಹಿಂಬಾಲಿಸಿ ಹೋಗುವ ಸ್ವರ್ಗಾರೋಹಣ ಪರ್ವದಲ್ಲಿ ನಾವಿದ್ದೇವೆ.

 ಆದರೂ ಒಂದಷ್ಟು ಮಂದಿ ವಿಜ್ಞಾನಿಗಳು, ಪರಿಸರ ಪರಿಣತರು ಮತ್ತು ಆಸ್ಥಾನ ವಿದ್ವಾಂಸರಲ್ಲದೆ ರಾಜಕೀಯರಹಿತ ವರ್ತುಲದಲ್ಲಿ ತಿಳಿದವರೆಂಬ ಮಾನ್ಯತೆಯಿರುವವರು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿ ಅಂತಹ ವರದಿಯನ್ನು ಸ್ವೀಕರಿಸುವುದು ಸಾಧುವೆಂದು ತಿಳಿಹೇಳಿದರು. ಆದರೆ ಇದಕ್ಕೆ ಅಜ್ಞಾನಧ್ವಾಂತಸೂರ್ಯರ ಅಗಣಿತ ಪ್ರತಿಕ್ರಿಯೆಗಳು ಬಂದವು; ವಿಜ್ಞಾನಕ್ಕೆ ಬೆಂಕಿಹಾಕುವ ಎಲ್ಲ ಮಾತುಗಳನ್ನೂ ರಾಜಕಾರಣಿಗಳು ತಮ್ಮ ಅನುಯಾಯಿಗಳಿಗೆ ಬಿತ್ತರಿಸಿದರು. ರಾಜಕೀಯ ಮತ್ತು ಅಧಿಕಾರಕ್ಕೆ ಅಗತ್ಯವಿರುವ ಯಾವುದೇ ದೃಷ್ಟಿಕೋನವನ್ನೂ ವಿರೋಧಿಸುವ ಎಲ್ಲ ಬಗೆಯ ಅಭಿಮತಗಳು ಪೊಳ್ಳೆಂದು ಪ್ರಚಾರಮಾಡಿದರು. ವಿಜ್ಞಾನದ ಗಂಧಗಾಳಿಯೂ ಗೊತ್ತಿಲ್ಲದವರು ಕೊಳ್ಳಿ ಹಿಡಿದು ವಿಜ್ಞಾನಿಗಳನ್ನು ಬೆದರಿಸಿದರು. ಅವರನ್ನು ಮೌನವಾಗಿಸಿದರೆ ಪ್ರಜೆಗಳು ಅಜ್ಞಾನಿಗಳಾಗಿ ಮುಂದುವರಿಯಲು ಅನುಕೂಲವಾಗುತ್ತದೆಂಬ ಸಿದ್ಧಾಂತಕ್ಕೆ ಗೌರವ ತಂದರು. ಮರಗಳನ್ನು ಕಡಿದರೆ, ಗಣಿಗಾರಿಕೆ ನಡೆದರೆ ಇಂತಹ ಭೂಕುಸಿತ ನಡೆಯುತ್ತದೆಯೆಂದು ವಿಜ್ಞಾನಿಗಳು ಸುಳ್ಳು ಹೇಳುತ್ತಿದ್ದಾರೆ, ನಮ್ಮ ಗ್ರಾಮದಲ್ಲಿ ಮರಗಳನ್ನು ಕಡಿದಿಲ್ಲ ಮತ್ತು ಗಣಿಗಾರಿಕೆ ನಡೆದಿಲ್ಲ, ಆದರೂ ಭೂಕುಸಿತ ಸಂಭವಿಸಿದೆ ಎಂಬ ಕಾರಣ ಹೇಳಿ (-ಮೇಲ್ನೋಟಕ್ಕೆ ಇದು ಸಮರ್ಥನೀಯವಾಗಿ ಮತ್ತು ತಾರ್ಕಿಕವಾಗಿ ಕಾಣಿಸುತ್ತದೆ-ಮತದಾರರಿಗೆ ಇಷ್ಟು ಸಾಕು!) ವೈಜ್ಞಾನಿಕ ವಾದವನ್ನು ಒಬ್ಬ ರಾಜಕಾರಣಿ ಖಂಡಿಸಿದರು. ಈ ಬಗ್ಗೆ ಪರಿಸರ ವಿಜ್ಞಾನಿಯೊಬ್ಬರು ಹೇಳಿದ್ದಿಷ್ಟು: ‘‘ಏಟು ಬಿದ್ದಲ್ಲೇ ಸೀಳಾಗಬೇಕೆಂದೇನೂ ಇಲ್ಲ, ಅದು ದೇಹದ ಇತರ ಭಾಗದಲ್ಲೂ ಸಂಭವಿಸಬಹುದು; ಹಾಗೆಯೇ ಎಲ್ಲಿ ಮರ ಕಡಿಯಿತೋ ಎಲ್ಲಿ ಗಣಿಗಾರಿಕೆ ನಡೆಯಿತೋ ಅಲ್ಲೇ ಭೂಕುಸಿತ ಸಂಭವಿಸಬೇಕೆಂದೇನೂ ಇಲ್ಲ; ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆಯುವ ಅಕ್ರಮ ಚಟುವಟಿಕೆಗಳ ಭಾರವು ಅದರ ಒಂದು ತುದಿಯಿಂದ ಇನ್ನೊಂದು ತುದಿಯ ವರೆಗೆ ಎಲ್ಲ್ಲಾದರೂ ವ್ಯಾಪಿಸಬಹುದು’’ ಎಂದರು. ಇದನ್ನೇ ಒಬ್ಬ ಭೂವಿಜ್ಞಾನಿಯೂ ಸಮರ್ಥಿಸಿ ಹೇಳಿದರು. ಈ ಸತ್ಯವನ್ನು ಅರಗಿಸಿಕೊಳ್ಳುವಷ್ಟು ಜ್ಞಾನ ಮುಗ್ಧ ಮತದಾರರಲ್ಲಿರುವುದಿಲ್ಲ. ಅವರ ಸತ್ಯ ತತ್ಕಾಲೀನವಾದದ್ದು; ಅನುಕೂಲ ಸಿಂಧು.

‘‘ಮರಗಳನ್ನು ಕಡಿದರೆ ಮಳೆ ಕಡಿಮೆಯಾಗುತ್ತದೆಂಬ ವಾದವು ಅರ್ಥಹೀನವಾದದ್ದು ಮತ್ತು ಇಷ್ಟೊಂದು ಮರಗಳನ್ನು ಕಡಿದರೂ ಇಷ್ಟು ಮಳೆ ಬಂದಿದೆಯಲ್ಲ ಈ ಒಂದು ವಿಚಾರವೇ ವಿಜ್ಞಾನವನ್ನು ಸುಳ್ಳುಮಾಡುತ್ತಿದೆ’’ಯೆಂದು ಇನ್ನೊಬ್ಬ ರಾಜಕಾರಣಿ ಹೇಳಿದರು. ಇಂತಹ ಸುಲಭ ತರ್ಕಗಳು ಪ್ರಜೆಗಳನ್ನು ನಂಬಿಸುತ್ತವೆ. ಇಂತಹ ತರ್ಕವನ್ನು ಹೂಡುವವರು ಒಟ್ಟಾರೆ ವಿಶ್ವದ ಉಷ್ಣತೆಯು ಹೆಚ್ಚಾಗುವುದನ್ನು ಪ್ರಸ್ತಾಪಿಸುವುದಿಲ್ಲ. ಭೂಮಿಯ ಉಷ್ಣತೆಯು ಹೆಚ್ಚಾದಾಗ ಸಹಜವಾಗಿಯೇ ನೀರು ಹೆಚ್ಚು ಹೆಚ್ಚು ಆವಿಯಾಗತೊಡಗುತ್ತದೆ; ಮತ್ತು ಹೀಗೆ ಆವಿಯಾದ ನೀರು ಒಂದು ಹಂತದಲ್ಲಿ ಮರಳಿ ನೀರಾಗಲೇ ಬೇಕಲ್ಲ! ಒಂದೇ ಸವನೆ ಒಡ್ಡು ತೆಗೆದಂತೆ ಭೂಮಿಗೆ ಅಪ್ಪಳಿಸುತ್ತದೆ. ಇದು ಎಲ್ಲ ಕಡೆ ಆಗಬೇಕೆಂದೇನೂ ಇಲ್ಲ; ಎಲ್ಲಿ ಮೋಡಗಳ ಚಲನೆಗೆ ಅಡ್ಡಿಯಾಗುತ್ತದೆಯೋ ಅಲ್ಲಿ ನೈಸರ್ಗಿಕವಾಗಿ ತಣಿದು ನೀರಾಗುತ್ತದೆ. ಕೇರಳ, ಕರ್ನಾಟಕದ ಕರಾವಳಿ ಈ ಬಾರಿ ಇಂತಹ ಪ್ರಾಕೃತಿಕ ವೈಪರೀತ್ಯಕ್ಕೆ ತುತ್ತಾಗಿದೆ.

ಇಂತಹ ನೂರೆಂಟು ಉದಾಹರಣೆಗಳನ್ನು ವಿಜ್ಞಾನಿಗಳು ನೀಡಬಲ್ಲರು. ಅವರ ಅಧ್ಯಯನಪೂರ್ಣ ವರದಿಗಳನ್ನು, ಸಲಹೆಗಳನ್ನು ಸ್ವೀಕರಿಸುವ ವಿವೇಕ ನಮ್ಮಲ್ಲಿರಬೇಕು, ಅಷ್ಟೇ. ಆದರೆ ಅಧಿಕಾರವೇ ಸಕಲ ಬ್ರಹ್ಮಾಂಡವಾಗಿ, ಆಳುವವರ ಉಗುಳೇ ಮಂತ್ರವಾದಾಗ ಪುರೋಹಿತರೂ ಕರ್ತೃವನ್ನೇ ಹಾಡಿ ಹೊಗಳಬೇಕು. ರಾವಣನು ಅಷ್ಟ ದಿಕ್ಪಾಲಕರನ್ನು ತನ್ನ ಆಸ್ಥಾನದಲ್ಲಿ ಕಟ್ಟಿಹಾಕಿ ಗ್ರಹಗತಿಯನ್ನೇ ಬದಲಿಸಹೊರಟಂತೆ.

ಕಾನೂನು, ನಿಸರ್ಗ ಇಂತಹ ಅಧಿಕಾರಕ್ಕೆ ಒಳಪಟ್ಟ ಅನೇಕ ಕ್ಷೇತ್ರಗಳಲ್ಲಿ ಸಂಬಂಧಪಟ್ಟ ಪರಿಣತರ ವಿವೇಕಯುತ ಮಾತುಗಳಿಗೆ ತಲೆಬಾಗುವುದು ಒಳ್ಳೆಯ ಆಳ್ವಿಕೆ. ಆರ್ಥಿಕತೆಯಲ್ಲೂ ಈಗ ಆಗುತ್ತಿರುವ ಅವಾಂತರ ಇದೇ. ಅರ್ಥಶಾಸ್ತ್ರಜ್ಞರ ಮಾತಿಗೆ ಕವಡೆ ಕಾಸು ಬೆಲೆಯನ್ನೂ ನೀಡದೆ ಎಲ್ಲವನ್ನೂ ತಾವೇ (ಅಥವಾ ತಾನೇ) ನಿರ್ಧರಿಸುತ್ತೇವೆ(ನೆ)ಂದು ಭಾವಿಸುವುದು ಕಡು ಮೂರ್ಖತನ. ಆದರೆ ಈ ಮೂರ್ಖತನವನ್ನು ಬಹಿರಂಗವಾಗಿ ಟೀಕಿಸಲು ಎಷ್ಟು ಮಂದಿಗೆ ಧೈರ್ಯವಿರುತ್ತದೆ? ಮತ್ತದೇ ವಿಷ/ವಿಷುವ ವೃತ್ತ ಪ್ರತ್ಯಕ್ಷವಾಗುತ್ತದೆ; ಧೈರ್ಯವಿದ್ದವರೂ ಜಾಣರಾಗಿ ತಮ್ಮ ಮನೆಗಳನ್ನು ಬೆಳಗಿಸಿಕೊಳ್ಳಲು ಅಧಿಕಾರಸ್ಥರ ಶರಣುಹೋಗುತ್ತಾರೆ. ಎಲ್ಲರೂ ಸತ್ಯ ಹೇಳುತ್ತಿದ್ದರೆ ಜಗತ್ತು ಹೀಗಿರುತ್ತಿರಲಿಲ್ಲ. ದೇಶಭಕ್ತಿಯೆಂದರೆ ನಿಮ್ಮ ದೇಶವನ್ನು ಎಲ್ಲ ಕಾಲಕ್ಕೂ ಮತ್ತು ಸರಕಾರವನ್ನು ಅದರ ಯೋಗ್ಯತೆಗೆ ಅನುಗುಣವಾಗಿ ಬೆಂಬಲಿಸುವುದು. ಎಲ್ಲಿ ದೊರೆ ಬತ್ತಲೆಯೆಂದು ಹೇಳಬೇಕಾದರೆ ಧೈರ್ಯಕ್ಕಿಂತಲೂ ಮುಗ್ಧತೆ ಬೇಕಾಗುತ್ತದೆಯೆಂದು ಕಾಣುತ್ತದೆ. ಪ್ರಜೆಗಳಿಗೆ ಧೈರ್ಯವೂ ಇಲ್ಲ, ಮುಗ್ಧತೆಯೂ ಇಲ್ಲವೆಂದಾದರೆ ದೊರೆಯ ಬತ್ತಲೆ ಮೆರವಣಿಗೆಗೆ ಅಡ್ಡಿಯಿಲ್ಲ.

ಅಲ್ಲಿಯ ವರೆಗೆ ತಮಸ್ಸಿನಿಂದ ತಮಸ್ಸಿಗೇ ಯಾತ್ರೆ; ರಾಜಾ ಪ್ರತ್ಯಕ್ಷ ದೇವತಾಃ!

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top