ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ಆನಂದ್ ತೇಲ್ತುಂಬ್ಡೆ ಪ್ರಕರಣ | Vartha Bharati- ವಾರ್ತಾ ಭಾರತಿ

---

ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ಆನಂದ್ ತೇಲ್ತುಂಬ್ಡೆ ಪ್ರಕರಣ

ಪ್ರಸ್ತುತ ನಮ್ಮನ್ನು ಆಳುತ್ತಿರುವ ಸಾಂಸ್ಕೃತಿಕ ಸಾಮ್ರಾಜ್ಯಶಾಹಿ, ಆರ್ಥಿಕ ಸಾಮ್ರಾಜ್ಯಶಾಹಿ, ಹಿಂದೂ ಮೂಲಭೂತವಾದಿ ಶಕ್ತಿಗಳು ಮತ್ತು ಸಾಮಾಜಿಕ ನ್ಯಾಯವಿರೋಧಿ ಶಕ್ತಿಗಳು ತೇಲ್ತುಂಬ್ಡೆಯಂತಹ ಪ್ರಜ್ಞಾವಂತರ ವಿರುದ್ಧ ನಡೆಸುತ್ತಿರುವ ಅಪ್ರಜಾಸತ್ತಾತ್ಮಕ ಮತ್ತು ಅಸಾಂವಿಧಾನಿಕ ದೌರ್ಜನ್ಯಗಳು ಭಾರತದ ಪ್ರಜಾಸತ್ತೆಗೆ ಶೋಭೆ ತರುವುದಿಲ್ಲ. ಜನತಂತ್ರದ ಬೇರುಗಳು, ಸಂವಿಧಾನಾತ್ಮಕ ಮೌಲ್ಯಗಳು, ಸಮಸಮಾಜ ನಿರ್ಮಾಣ, ಅಭಿವ್ಯಕ್ತಿ ಸ್ವಾತಂತ್ರ್ಯ ಮೊದಲಾದವುಗಳನ್ನು ಪ್ರತಿಪಾದಿಸುವವರಿಗೆ ರಕ್ಷಣೆ ನೀಡುವ ಬದಲು ಹೀಗೆ ದಮನಕಾರಿ ಪ್ರವೃತ್ತಿಗಳಿಗೆ ಒಳಪಡಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಆನಂದ್ ತೇಲ್ತುಂಬ್ಡೆ ಪ್ರಸ್ತುತ ಸಂದರ್ಭದಲ್ಲಿ ತಮ್ಮ ಪ್ರಗತಿಪರ ಚಿಂತನೆಗಳು ಮತ್ತು ಹೋರಾಟಗಳಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಮೂಲತಃ ಇವರೊಬ್ಬರು ನಿರ್ವಹಣಾ ತಜ್ಞರು. ಆದರೆ ಇವರು ಸಾಹಿತ್ಯ, ಮಾಧ್ಯಮ, ಶಿಕ್ಷಣ, ನಾಗರಿಕ ಹಕ್ಕುಗಳು, ಮಾನವ ಹಕ್ಕುಗಳು, ಪರಿಸರ ರಕ್ಷಣೆ, ಶೋಷಿತರ ಹಕ್ಕುಗಳು, ಸಂವಿಧಾನ, ಪ್ರಜಾಸತ್ತೆ ಮೊದಲಾದ ಕ್ಷೇತ್ರಗಳಲ್ಲಿಯೂ ಕೂಡ ತಮ್ಮ ವಿಭಿನ್ನ ಚಿಂತನೆ ಮತ್ತು ಚಳವಳಿ ಮನೋಧರ್ಮಗಳಿಂದಾಗಿ ದೇಶದ ಪ್ರಮುಖ ವ್ಯಕ್ತಿಯಾಗಿ ರೂಪುಗೊಂಡಿದ್ದಾರೆ. ಇವರು ಹಲವಾರು ವಿಷಯಗಳು ಮತ್ತು ಕಾಳಜಿಗಳ ಬಗ್ಗೆ ಬಹಳಷ್ಟು ವಿದ್ವತ್ಪೂರ್ಣ ಲೇಖನಗಳು ಮತ್ತು ಕೃತಿಗಳನ್ನು ರಚಿಸಿ ಬಂಡಾಯ ಮನೋಧರ್ಮ ಮತ್ತು ಸಾರ್ವಜನಿಕ ಕಾಳಜಿಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಳಿಸಿದ್ದಾರೆ. ಇವರು ಸಮಕಾಲೀನ ಭಾರತದ ಪ್ರಮುಖ ಅಂಬೇಡ್ಕರ್ ವಾದಿಯಾಗಿ ಮತ್ತು ಜನಪರ ಹೋರಾಟಗಾರರಾಗಿ ದೇಶದ ಗಮನ ಸೆಳೆದಿದ್ದಾರೆ.
ತೇಲ್ತುಂಬ್ಡೆ ದೇಶ ವಿದೇಶಗಳಲ್ಲಿ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್‌ನಲ್ಲಿ ನಿರ್ವಾಹಕ ನಿರ್ದೇಶಕ, ಪೆಟ್ರೊನೆಟ್ ಇಂಡಿಯಾ ಲಿಮಿಟೆಡ್ ಸಂಸ್ಥೆಯಲ್ಲಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಖರಗ್‌ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ನೈಜೀರಿಯಾ, ಕೀನ್ಯಾ, ತಾಂಜಾನಿಯಾ, ಚೀನಾ ಮೊದಲಾದ ದೇಶಗಳ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ಹೊಂದಿ ತಮ್ಮ ನಿರ್ವಹಣಾ ಪಾಂಡಿತ್ಯ ಮತ್ತು ಸಾಮರ್ಥ್ಯಗಳನ್ನು ರುಜುವಾತು ಪಡಿಸಿದ್ದಾರೆ. ಇವರು ಮನಸ್ಸು ಮಾಡಿದ್ದರೆ ಕಾರ್ಪೊರೇಟ್ ವಲಯದಲ್ಲಿ ಅತ್ಯುನ್ನತ ಸ್ಥಾನಮಾನಗಳು ಮತ್ತು ಕೋಟ್ಯಂತರ ರೂಪಾಯಿಗಳ ಸಂಪಾದನೆ ಮಾಡಬಹುದಾಗಿತ್ತು. ಇವರು ಅಂಬೇಡ್ಕರ್‌ರವರ ಬದುಕು, ಹೋರಾಟ ಮತ್ತು ವಿಚಾರಧಾರೆಗಳಿಂದ ಪ್ರಭಾವಿತರಾಗಿ ಶೋಷಿತ ಸಮುದಾಯದೆಡೆಗೆ ಮುನ್ನಡೆದಿದ್ದಾರೆ. ತೇಲ್ತುಂಬ್ಡೆ ತಮ್ಮ ಕಾರ್ಯಕ್ಷೇತ್ರವನ್ನು ಇತ್ತೀಚಿನ ವರ್ಷಗಳಲ್ಲಿ ಜಗತ್ತಿನಾದ್ಯಂತ ವಿಸ್ತರಿಸಿಕೊಂಡಿದ್ದಾರೆ. ಯೂರೋಪ್, ಅಮೆರಿಕ, ಕೆನಡಾ, ಲ್ಯಾಟಿನ್ ಅಮೆರಿಕ ಮೊದಲಾದ ದೇಶಗಳಲ್ಲಿ ವ್ಯಾಪಕವಾಗಿ ಸಂಚರಿಸಿ ಜಾಗತೀಕರಣ ಯುಗದಲ್ಲಿ ಜಗತ್ತಿನ ಬಡರಾಷ್ಟ್ರಗಳು ಮತ್ತು ಶೋಷಿತ ಜನಸಮುದಾಯಗಳು ಅನುಭವಿಸುತ್ತಿರುವ ಕಷ್ಟ ನಷ್ಟಗಳನ್ನು ಕುರಿತು ಜನಜಾಗೃತಿ ಮೂಡಿಸಿದ್ದಾರೆ. ಹಲವಾರು ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣೆಗೆ ಬದ್ಧವಾದ ಪ್ರಗತಿಪರ ಸಂಘಟನೆಗಳಲ್ಲಿ ಇವರು ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಭಾರತದಲ್ಲಿ ಆದಿವಾಸಿಗಳು, ದಲಿತರು, ಕೊಳಚೆ ಪ್ರದೇಶದ ಬಡವರು, ಅಲ್ಪಸಂಖ್ಯಾತರು ಮತ್ತು ಅವಕಾಶವಂಚಿತ ಹಿಂದುಳಿದ ಜನಸಮುದಾಯಗಳ ಪ್ರಧಾನ ವಕ್ತಾರರಾಗಿ ತೇಲ್ತುಂಬ್ಡೆ ಗಣನೀಯ ಸೇವೆ ಸಲ್ಲಿಸಿದ್ದಾರೆ. ನಾಗರಿಕ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಇವರು 100ಕ್ಕೂ ಹೆಚ್ಚು ಸತ್ಯಶೋಧನಾ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿ ಅಲಕ್ಷಿತ ಜನವರ್ಗಗಳ ಹಕ್ಕು ಮತ್ತು ಸವಲತ್ತುಗಳನ್ನು ಪ್ರತಿಪಾದಿಸಿ ಆಳುವವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ರಬುದ್ಧ ಚಿಂತಕರಾಗಿ ದೇಶದ ಉದ್ದಗಲಕ್ಕೂ ಸಂಚರಿಸಿ ಹಲವಾರು ವಿಷಯಗಳು ಮತ್ತು ಹೋರಾಟಗಳ ಬಗ್ಗೆ ನಿರಂತರವಾಗಿ ಜನಜಾಗೃತಿ ಮೂಡಿಸಿದ್ದಾರೆ. ಮರಾಠಿ ಭಾಷೆಯಲ್ಲಿ ಪ್ರತಿಷ್ಠಿತ ಜನಪರ ಪತ್ರಿಕೆಗಳ ಸಂಪಾದಕೀಯ ಮಂಡಳಿಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿ ಮಾಧ್ಯಮಗಳು ಧ್ವನಿ ಇಲ್ಲದವರ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಬೇಕೆಂಬ ಅಂಬೇಡ್ಕರ್ ಚಿಂತನೆಯನ್ನು ವಿಸ್ತರಿಸಿದ್ದಾರೆ.
ತೇಲ್ತುಂಬ್ಡೆ ಇದುವರೆಗೂ ವಿಕಾಸ್‌ರತ್ನ, ಅಂಬೇಡ್ಕರ್ ಶತಮಾನೋತ್ಸವ ಪ್ರಶಸ್ತಿ, ರಾಮ ಮನೋಹರ್ ಲೋಹಿಯಾ ಶತಮಾನೋತ್ಸವ ಪ್ರಶಸ್ತಿ ಮೊದಲಾದವುಗಳಿಗೆ ಭಾಜನರಾಗಿದ್ದಾರೆ. ಪ್ರಸ್ತುತ ಗೋವಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ನಿರ್ವಹಣೆ ವಿಷಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಪ್ರಜಾಸತ್ತಾತ್ಮಕ ಹಕ್ಕುಗಳ ಸಂಸ್ಥೆಗಳಲ್ಲಿ ಇವರು ಸಂಘಟಕರು ಮತ್ತು ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ವ್ಯಕ್ತಿಪೂಜೆ ಪ್ರಜಾಪ್ರಭುತ್ವಕ್ಕೆ ಮಾರಕವೆಂಬುದನ್ನು ಅರಿತ ಇವರು ಎಲ್ಲ ಕ್ಷೇತ್ರಗಳಲ್ಲಿಯೂ ಸಾಮ್ರಾಜ್ಯಶಾಹಿ ಶಕ್ತಿಗಳು ಮತ್ತು ಪ್ರವೃತ್ತಿಗಳನ್ನು ಉಗ್ರವಾಗಿ ವಿರೋಧಿಸಿದ್ದಾರೆ.
ಆರ್ಥಿಕ ಸುಧಾರಣೆಗಳು ರೈತರು, ಕಾರ್ಮಿಕರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಹಿಂದುಳಿದವರು, ಮಹಿಳೆಯರು ಮೊದಲಾದ ಶೋಷಿತ ಜನವರ್ಗಗಳ ಬದುಕಿಗೆ ಮಾರಕ ಪ್ರಾಯವೆಂದು ತೇಲ್ತುಂಬ್ಡೆ ಅಧಿಕಾರಯುತವಾಗಿ ಪ್ರತಿಪಾದಿಸಿದ್ದಾರೆ. ಜಾಗತೀಕರಣವೆಂಬುದು ಜಗತ್ತಿನ ಅಲಕ್ಷಿತ ಜನವರ್ಗಗಳ ಬಲಿಪೀಠವಾಗಿದೆಯೆಂದು ಇವರು ಜನಜಾಗೃತಿ ಮೂಡಿಸಿದ್ದಾರೆ. ಆಪರೇಷನ್ ವಾಲ್‌ಸ್ಟ್ರೀಟ್ ಎಂಬ ಪ್ರಭುತ್ವ ಹಾಗೂ ಜಾಗತೀಕರಣ ವಿರೋಧಿ ಜಾಗತಿಕ ಚಳವಳಿಯನ್ನು ಬಲಪಡಿಸುವಲ್ಲಿ ಇವರು ವಹಿಸಿರುವ ಪಾತ್ರ ಗಣನೀಯವಾಗಿದೆ. ರೈತರನ್ನು ಆತ್ಮಹತ್ಯೆಯೆಡೆ, ಕಾರ್ಮಿಕರನ್ನು ಅವನತಿಯೆಡೆ, ಮಹಿಳೆಯರನ್ನು ಶೋಷಣೆಯೆಡೆ, ಅಲಕ್ಷಿತರನ್ನು ಸಾವಿನೆಡೆ ದಬ್ಬುವ ಭಾರತದ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಗಳನ್ನು ತೇಲ್ತುಂಬ್ಡೆ ಉಗ್ರವಾಗಿ ಖಂಡಿಸಿದ್ದಾರೆ.
ಮಹಾರಾಷ್ಟ್ರದ ಖೈರ್ಲಾಂಜಿ ಎಂಬ ಊರಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ದಲಿತರ ಮಾರಣ ಹೋಮ, ಉತ್ತರ ಪ್ರದೇಶದಲ್ಲಿ ದನದ ಮಾಂಸವನ್ನು ಮನೆಯಲ್ಲಿ ಇಟ್ಟಿದ್ದರೆಂಬ ಕಾರಣಕ್ಕೆ ಮುಹಮ್ಮದ್ ಅಖ್ಲಾಕ್ ಕಗ್ಗೊಲೆ, ಉನ್ನತ ಶಿಕ್ಷಣದಲ್ಲಿ ಜಾತೀಯತೆಯನ್ನು ಪ್ರಶ್ನಿಸಿದ ರೋಹಿತ್ ವೇಮುಲಾ ಆತ್ಮಹತ್ಯೆ, ಗುಜರಾತ್‌ನಲ್ಲಿ ಜೀನ್ಸ್‌ಪ್ಯಾಂಟ್ ತೊಟ್ಟ ಕಾರಣಕ್ಕೆ ದಲಿತ ಯುವಕರ ಮೇಲೆ ಮಾರಣಾಂತಿಕ ಹಲ್ಲೆ, ಮೀಸೆ ಬಿಟ್ಟ ದಲಿತ ಯುವಕನ ಮೇಲೆ ದಬ್ಬಾಳಿಕೆ, ಹೊಸ ಗಡಿಯಾರ ಕಟ್ಟಿದ ದಲಿತ ಯುವಕನ ಕೈ ಕತ್ತರಿಸಿದ ಬಗೆ, ಉತ್ತರ ಪ್ರದೇಶದಲ್ಲಿ ಸಾಲ ವಾಪಸ್ ಕೇಳಿದ ದಲಿತ ಮಹಿಳೆ ಮತ್ತು ಆಕೆಯ ಗಂಡನ ಬೆತ್ತಲೆ ಮೆರವಣಿಗೆ, ಮೊದಲಾದವುಗಳು ಹಿಂದುತ್ವ ಕೇಂದ್ರಿತ ಶೋಷಣಾ ಪ್ರವೃತ್ತಿಗಳಾಗಿವೆ.
ಜಾತಿವಿನಾಶವಾಗದ ಹೊರತು ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯವಿಲ್ಲವೆಂಬ ಅಂಬೇಡ್ಕರ್ ವಾದವನ್ನು ಇವರು ಪುಷ್ಟೀಕರಿಸಿದ್ದಾರೆ. ಶೋಷಿತ ಜನರಿಗೆ ಈಗ ಲಭಿಸಿರುವ ಮೀಸಲಾತಿ ಆಳುವ ವರ್ಗದ ಗುಲಾಮರನ್ನು ಸೃಷ್ಟಿಸಲು ಕಾರಣವಾಗಿದೆಯೇ ಹೊರತಾಗಿ ಶೋಷಿತರ ಸಬಲೀಕರಣದ ರೂವಾರಿಗಳ ನಾಯಕತ್ವಕ್ಕೆ ಬಹುದೊಡ್ಡ ಅಡ್ಡಗಲ್ಲಾಗಿದೆ ಯೆಂದು ಪೂನಾ ಒಪ್ಪಂದ 1932ರ ಹಿನ್ನೆಲೆಯಲ್ಲಿ ಅಧಿಕೃತವಾಗಿ ವಿಶ್ಲೇಷಿಸಿದ್ದಾರೆ. ರಾಮ್ ಮನೋಹರ್ ಲೋಹಿಯಾ ಪ್ರತಿಪಾದಿಸಿದ ಎಲ್ಲ ಜನಾಂಗಗಳಿಗೂ ಶಿಕ್ಷಣ, ಉದ್ಯೋಗ, ವಾಣಿಜ್ಯ, ರಾಜಕಾರಣ ಮೊದಲಾದ ಕ್ಷೇತ್ರಗಳಲ್ಲಿ ಅವರ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಲಭಿಸಬೇಕೆಂಬ ವಿಚಾರಧಾರೆಯನ್ನು ಇವರು ಎತ್ತಿಹಿಡಿದಿದ್ದಾರೆ. ಮೀಸಲಾತಿಗಿಂತ ಪ್ರಕೃತಿ ಧರ್ಮವನ್ನು ಆಧರಿಸಿದ ಪ್ರಾತಿನಿಧ್ಯ ಎಲ್ಲರಿಗೂ ಸಿಕ್ಕಿದಾಗ ಸಾಮಾಜಿಕ ಪ್ರಜಾಪ್ರಭುತ್ವ ಮತ್ತು ಆರ್ಥಿಕ ಪ್ರಜಾಪ್ರಭುತ್ವಗಳು ಭಾರತದಲ್ಲಿ ರೂಪುಗೊಳ್ಳುತ್ತವೆಯೆಂಬುದು ಇವರ ಆಶಯವಾಗಿದೆ.
ತೇಲ್ತುಂಬ್ಡೆ ಹಿಂದುತ್ವವಾದದ ಪ್ರಬಲ ವಿಮರ್ಶಕರು. ಭಾರತಕ್ಕೆ ಬೇಕಿರುವುದು ಸರ್ವಧರ್ಮಗಳಿಗೂ, ಸರ್ವಜನಾಂಗಗಳಿಗೂ ಮತ್ತು ಸಮಸ್ತ ಭಾರತೀಯರಿಗೂ ಒಳಿತನ್ನುಂಟುಮಾಡುವ ಸ್ವಾತಂತ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯಗಳು ಎಂದು ಇವರು ಪ್ರತಿಪಾದಿಸಿದ್ದಾರೆ. ಭಾರತವನ್ನು ನೂತನ ಸಹಸ್ರಮಾನದಲ್ಲಿ ಸಮಾನತೆಯೆಡೆಗೆ ಮುನ್ನಡೆಸಲು ಭ್ರಾತೃತ್ವ, ಬಂಧುತ್ವ, ಬಹುತ್ವ ಮತ್ತು ಧರ್ಮನಿರಪೇಕ್ಷತೆಗಳು ಅತ್ಯವಶ್ಯಕವೆಂದು ತೇಲ್ತುಂಬ್ಡೆ ತಮ್ಮ ಬರಹಗಳು, ಭಾಷಣಗಳು ಮತ್ತು ಹೋರಾಟಗಳಲ್ಲಿ ಸ್ಪಷ್ಟವಾಗಿ ಅಭಿವ್ಯಕ್ತಗೊಳಿಸಿ ಹಿಂದುತ್ವವಾದಿಗಳ ಕಣ್ಣಿನಲ್ಲಿ ‘ನಗರದ ನಕ್ಸಲೀಯ’ ಎಂದು ಗುರುತಿಸಲ್ಪಟ್ಟಿದ್ದಾರೆ. ಪ್ರಭುತ್ವ ವಿರೋಧಿ ಹೋರಾಟಗಾರರಾದ ತೇಲ್ತುಂಬ್ಡೆ ಮತ್ತಿತರರನ್ನು ನಗರದ ನಕ್ಸಲೀಯ ಎಂಬ ಹಣೆಪಟ್ಟಿ ನೀಡಿ ಗೃಹಬಂಧನ, ನ್ಯಾಯಾಂಗ ಬಂಧನ ಮೊದಲಾದವುಗಳಿಗೆ ಗುರಿಪಡಿಸುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ತೇಲ್ತುಂಬ್ಡೆ ಇತ್ತೀಚೆಗೆ ಐತಿಹಾಸಿಕ ಭೀಮಾ ಕೋರೆಗಾಂವ್ ಕುರಿತಂತೆ ಕೃತಿಯೊಂದನ್ನು ರಚಿಸಿ ಭೂಮಿಯ ಮೇಲಿನ ದುಷ್ಟರನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಿದ ಕಾರಣಕ್ಕೆ ಕೋಮುವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪುಣೆ ನಗರದ ಪೊಲೀಸರು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನೀಡಿದ ದೂರಿನ ಆಧಾರದ ಮೇಲೆ ಇವರನ್ನು ಬಂಧಿಸಲು ಗೋವಾಕ್ಕೆ ಭೇಟಿ ನೀಡಿದ್ದರು. ಈ ಘಟನೆಯನ್ನು ಚಿತ್ರೀಕರಿಸಲು ಬಹಳಷ್ಟು ಟಿವಿ ವಾಹಿನಿಗಳು ತೇಲ್ತುಂಬ್ಡೆಯವರ ಸಂಸ್ಥೆಗೆ ಧಾಳಿ ಮಾಡಿದವು. ದೇಶದ ಹಲವೆಡೆ ಪ್ರಭುತ್ವ ವಿರೋಧಿಗಳು ಮತ್ತು ಹಿಂದುತ್ವ ವಿರೋಧಿಗಳನ್ನು ನಗರದ ನಕ್ಸಲೀಯರು ಎಂದು ಬಿಂಬಿಸಿ ಪುಣೆ ನಗರದಲ್ಲಿ ಕಳೆದ ತಿಂಗಳು ದಸ್ತಗಿರಿ ಮಾಡಿ ಇವರ ಪ್ರಜಾಸತ್ತಾತ್ಮಕ ಹೋರಾಟವನ್ನು ದಮನಗೊಳಿಸುವ ಸಲುವಾಗಿ ಪ್ರಭುತ್ವ ನೆಲದ ಕಾನೂನು ಮತ್ತು ಆರಕ್ಷಕರನ್ನು ದುರುಪಯೋಗಪಡಿಸಿಕೊಂಡಿದ್ದನ್ನು ಪ್ರಜ್ಞಾವಂತರು ಎಲ್ಲೆಡೆ ಪ್ರಬಲವಾಗಿ ಖಂಡಿಸಿದ್ದಾರೆ.
ಇತ್ತೀಚೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಪ್ರಜ್ಞಾವಂತ ಹಾಗೂ ಜನಪರ ಚಳವಳಿಗಾರರಾದ ಸುಧಾ ಭಾರದ್ವಾಜ್, ಸ್ಟಾನ್‌ಸ್ವಾಮಿ, ಶೋಮಸೇನ್ ಮೊದಲಾದವರನ್ನು ಸಂವಿಧಾನಬಾಹಿರವಾಗಿ ಬಂಧಿಸುವುದು ಅಥವಾ ಗೃಹಬಂಧನದಲ್ಲಿರಿಸುವುದನ್ನು ಪ್ರಶ್ನಿಸಿ ನೋಟೀಸ್ ಜಾರಿ ಮಾಡಿದೆ. ಗೋವಾದಲ್ಲಿ ತೇಲ್ತುಂಬ್ಡೆ ಮತ್ತು ಕುಟುಂಬದವರನ್ನು ವಿಚಾರಣೆ ಮತ್ತು ಪರಿಶೀಲನೆಗಳ ಹೆಸರಿನಲ್ಲಿ ಪೊಲೀಸರು ನಡೆಸಿಕೊಂಡ ಬಗೆ ಖಂಡನೀಯ. ಇದೊಂದು ರೀತಿಯಲ್ಲಿ ರಾಜ್ಯ ಪ್ರಾಯೋಜಿತ ಭಯೋತ್ಪಾದನೆ ಮತ್ತು ತೇಲ್ತುಂಬ್ಡೆಯಂತಹ ಹೋರಾಟಗಾರರ ಮೇಲಿನ ದಬ್ಬಾಳಿಕೆಯೆಂದೇ ಹೇಳಬಹುದು. ಮಧ್ಯರಾತ್ರಿಯಲ್ಲಿ ಸ್ವಾತಂತ್ರ್ಯ ಗಳಿಸಿದ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಜನಪರ ಹೋರಾಟಗಾರರ ಮನೆ ಮೇಲೆ ಮಧ್ಯರಾತ್ರಿ ಧಾಳಿ ನಡೆಸುವುದು, ಅನವಶ್ಯಕವಾಗಿ ಚಾರಿತ್ರ್ಯವಧೆ ಮಾಡುವುದು, ವೃತ್ತಿಪರ ಹಿತಾಸಕ್ತಿಗಳಿಗೆ ಧಕ್ಕೆಯುಂಟು ಮಾಡುವುದು, ಗೃಹಬಂಧನಕ್ಕೆ ಗುರಿಪಡಿಸುವುದು ಭಾರತದಲ್ಲಿ ಸಂವಿಧಾನಾತ್ಮಕ ಮೌಲ್ಯಗಳು ಕ್ಷೀಣಿಸುತ್ತಿರುವುದಕ್ಕೆ ಪುರಾವೆ ಒದಗಿಸುತ್ತವೆ. ಇತ್ತೀಚೆಗೆ ಪುಣೆ ನ್ಯಾಯಾಲಯ ತೇಲ್ತುಂಬ್ಡೆಯವರ ದಸ್ತಗಿರಿಯನ್ನು ಕಾನೂನುಬಾಹಿರ ಕ್ರಮವೆಂದು ಪರಿಗಣಿಸಿದೆ.
ಪ್ರಸ್ತುತ ನಮ್ಮನ್ನು ಆಳುತ್ತಿರುವ ಸಾಂಸ್ಕೃತಿಕ ಸಾಮ್ರಾಜ್ಯಶಾಹಿ, ಆರ್ಥಿಕ ಸಾಮ್ರಾಜ್ಯಶಾಹಿ, ಹಿಂದೂ ಮೂಲಭೂತವಾದಿ ಶಕ್ತಿಗಳು ಮತ್ತು ಸಾಮಾಜಿಕ ನ್ಯಾಯವಿರೋಧಿ ಶಕ್ತಿಗಳು ತೇಲ್ತುಂಬ್ಡೆಯಂತಹ ಪ್ರಜ್ಞಾವಂತರ ವಿರುದ್ಧ ನಡೆಸುತ್ತಿರುವ ಅಪ್ರಜಾಸತ್ತಾತ್ಮಕ ಮತ್ತು ಅಸಾಂವಿಧಾನಿಕ ದೌರ್ಜನ್ಯಗಳು ಭಾರತದ ಪ್ರಜಾಸತ್ತೆಗೆ ಶೋಭೆ ತರುವುದಿಲ್ಲ. ಜನತಂತ್ರದ ಬೇರುಗಳು, ಸಂವಿಧಾನಾತ್ಮಕ ಮೌಲ್ಯಗಳು, ಸಮಸಮಾಜ ನಿರ್ಮಾಣ, ಅಭಿವ್ಯಕ್ತಿ ಸ್ವಾತಂತ್ರ್ಯ ಮೊದಲಾದವುಗಳನ್ನು ಪ್ರತಿಪಾದಿಸುವವರಿಗೆ ರಕ್ಷಣೆ ನೀಡುವ ಬದಲು ಹೀಗೆ ದಮನಕಾರಿ ಪ್ರವೃತ್ತಿಗಳಿಗೆ ಒಳಪಡಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ದೇಶದ ಸುರಕ್ಷತೆ ಹೆಸರಿನಲ್ಲಿ ರಕ್ಷಕರನ್ನು ರಾಕ್ಷಸರಂತೆ ಬಿಂಬಿಸಿ ದಮನಗೊಳಿಸುವವರಿಗೆ ನಾಗರಿಕ ಸಮಾಜ ಸರಿಯಾದ ಶಿಕ್ಷೆಯನ್ನೇ ನೀಡಲಿದೆ. ಭಾರತದ ಸಮಾಜ ಮತ್ತು ಸಂವಿಧಾನ ಇಂತಹ ರಚನಾತ್ಮಕ ಚಿಂತಕರು ಮತ್ತು ಅಸಲಿ ದೇಶಭಕ್ತರ ರಕ್ಷಣೆಗೆ ಸದಾಬದ್ಧವಾಗಿವೆ.
ಈಮೇಲ್‍: bpmcguru@yahoo.com

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top