ಮೋದಿ ಅಲೆ ಎನ್ನುವುದು ಇಲ್ಲ: ಪ್ರಣಯ್ ರಾಯ್ | Vartha Bharati- ವಾರ್ತಾ ಭಾರತಿ

---

ಮೋದಿ ಅಲೆ ಎನ್ನುವುದು ಇಲ್ಲ: ಪ್ರಣಯ್ ರಾಯ್

ಮೋದಿ ಅಲೆಯ ಬಗ್ಗೆ ನೀವು ಮಾತನಾಡುವುದಾದರೆ, ನನ್ನ ಪ್ರಕಾರ ಅದು ಇರಲೇ ಇಲ್ಲ. 2014ರಲ್ಲಿ ಅವರಿಗೆ ಹೆಚ್ಚು ಸ್ಥಾನಗಳು ಲಭಿಸಿರಬಹುದು. ಆದರೆ ಪಕ್ಷ ಗಳಿಸಿದ್ದು ಶೇ.30 ಮತಗಳನ್ನು ಮಾತ್ರ. ಆ ಗೆಲುವಿಗೆ ಇದ್ದ ಒಂದು ಪ್ರಮುಖ ಕಾರಣ ವಿಭಜನೆಯಾಗಿದ್ದ ವಿರೋಧ ಪಕ್ಷಗಳು. ಜಗತ್ತಿನ ಯಾವುದೇ ದೇಶದಲ್ಲೂ ಅದನ್ನು ಅಲೆಯೆಂದು ಕರೆಯಲು ಸಾಧ್ಯವಿಲ್ಲ.

ಪ್ರಣಯ್ ರಾಯ್ 1980ರ ದಶಕದಿಂದಲೂ ಚುನಾವಣೆಗೆ ಅನ್ವರ್ಥವಾಗಿದ್ದಾರೆ. ಭಾರತದಲ್ಲಿ ಚುನಾವಣಾ ಆಭಿಪ್ರಾಯ ಸಂಗ್ರಹದಲ್ಲಿ ಅಗ್ರಮಾನ್ಯರೆನಿಸಿಕೊಂಡಿರುವ ರಾಯ್ ದೇಶದಲ್ಲಿ ಚುನಾವಣಾಶಾಸ್ತ್ರ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದರು. ಎನ್‌ಡಿಟಿವಿಯ ಸಹಸಂಸ್ಥಾಪಕರಾಗಿರುವ ರಾಯ್ ಅವರ ಅಭಿಪ್ರಾಯಗಳು ಅವುಗಳ ಉದ್ದೇಶ ಮತ್ತು ನಿಖರತೆಯಿಂದಾಗಿ ವೌಲ್ಯಯುತವಾಗಿವೆ.
ದೊರಬ್ ಆರ್. ಸೊಪರಿವಾಲಾ ಎನ್‌ಡಿಟಿವಿಯಲ್ಲಿ ಸಂಪಾದ ಕೀಯ ಸಲಹೆಗಾರರಾಗಿದ್ದಾರೆ. ರಾಯಲ್ ಸಂಖ್ಯಾಶಾಸ್ತ್ರೀಯ ಸಂಘದ ಸದಸ್ಯನಾಗಿರುವ ಅವರು ಕಳೆದ ನಾಲ್ಕು ದಶಕಗಳಿಂದ ಚುನಾವಣೆಯ ವೇಳೆ ಮತದಾರರ ನಾಡಿಮಿಡಿತವನ್ನು ತಿಳಿಯುವ ಕಾಯಕದಲ್ಲಿ ತೊಡಗಿದ್ದಾರೆ.
ತಮ್ಮ ವರದಿಗಾರಿಕೆ, ವಿಶ್ಲೇಷಣೆಗಳಿಂದ ರಾಯ್ ಮತ್ತು ಸೊಪರಿವಾಲಾ ಚುನಾವಣೆಯ ಸಮಯದಲ್ಲಿ ಟಿವಿ ವೀಕ್ಷಣೆಯನ್ನು ಆಸಕ್ತಿದಾಯಕವಾಗಿಸುತ್ತಾರೆ. ಸದ್ಯ ಅವರು ತಮ್ಮ ಹೊಸ ಪುಸ್ತಕ, ‘ದಿ ವರ್ಡಿಕ್ಟ್: ಡಿಕೋಡಿಂಗ್ ಇಂಡಿಯಾಸ್ ಇಲೆಕ್ಷನ್ಸ್’ನಲ್ಲಿ ಭಾರತೀಯ ಚುನಾವಣೆಗಳನ್ನು ಛೇದಿ ಸುವ ತಮ್ಮ ಅನುಭವವನ್ನು ಭಟ್ಟಿ ಇಳಿಸಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿ ನೀಡಲಾಗಿದೆ;
ಪ್ರಶ್ನೆ: ನೀವು ನಿಮ್ಮ ಪುಸ್ತಕದಲ್ಲಿ ಅಡಗಿರುವ ಸಾಂಪ್ರದಾಯಿಕ ಮತದಾರರ ಬಗ್ಗೆ ತಿಳಿಸಿದ್ದೀರಿ. ಭಾರತೀಯ ಬಲಪಂಥ ಮಾಡುತ್ತಿರುವ ಸದ್ದುಗದ್ದಲವನ್ನು ಗಮನಿಸಿದರೆ ನಮ್ಮ ದೇಶಕ್ಕೆ ಈ ಮಾತು ಅನ್ವಯವಾಗುತ್ತದೆಯೇ?
ಪ್ರ.ರಾ:
ಬಹುಶಃ ಇಲ್ಲ. ವಾಸ್ಯವದಲ್ಲಿ ನನ್ನ ಅನುಭವದ ಪ್ರಕಾರ ಇದು ವಿರುದ್ಧವಾಗಿದೆ. ಬಿಜೆಪಿಗೆ ಸಮಾಜದ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದಿಂದ ಬೆಂಬಲ ವ್ಯಕ್ತವಾಗುತ್ತದೆ ಮತ್ತು ಪುರುಷರಿಂದ ಬೆಂಬಲ ವ್ಯಕ್ತವಾಗುತ್ತದೆ. ಅವರು ಸಾಮಾನ್ಯವಾಗಿ ಹೆಚ್ಚು ಧ್ವನಿ ಹೊಂದಿರುತ್ತಾರೆ. ಯಾವಾಗಲೂ ಗುಂಪಿನಲ್ಲಿ ಕಂಡುಬರುವ ಇವರು ಜೋರಾಗಿಯೇ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆ ಮತ್ತು ಸುತ್ತಮುತ್ತಲ ಜನರನ್ನು ಬೆದರಿಸುತ್ತಾರೆ. ಬಡವರಲ್ಲಿ, ಪರಿಶಿಷ್ಟ ಜಾತಿ ಮತ್ತು ಮುಖ್ಯವಾಗಿ ಮುಸ್ಲಿಮರಲ್ಲಿ ಭೀತಿ ಮನೆ ಮಾಡಿದೆ. ಒಮ್ಮೆ ನಾವು ದಲಿತರ ಗ್ರಾಮಕ್ಕೆ ತೆರಳಿದ್ದೆವು ಮತ್ತು ಅಲ್ಲಿ ನಾವು ಜನರೊಂದಿಗೆ ಸಹಜವಾಗಿ ಮಾತನಾಡುತ್ತಿದ್ದೆವು. ನೀವು ಯಾರಿಗೆ ಮತ ಹಾಕುತ್ತೀರಿ ಎಂದು ನಾವು ಅವರಲ್ಲಿ ಕೇಳಿದಾಗ ಅವರೆಲ್ಲ ಬಿಜೆಪಿ, ಬಿಜೆಪಿ ಎಂದು ಘೋಷಿಸಿದರು. ಅವರ ಜೊತೆ ನಾವು ಬಹಳ ಸಮಯ ಕಳೆದೆವು, ಚಹಾ ಸೇವಿಸಿದೆವು ಮತ್ತು ಸ್ವಲ್ಪ ಸಮಯದ ನಂತರ ಅವರೆಲ್ಲರೂ ನಗಲು ಆರಂಭಿಸಿದರು. ಆಗ ನಾವು ಯಾಕೆ ನಗುತ್ತಿರುವಿರಿ ಎಂದು ಕೇಳಿದೆವು. ನಾವು ಈ ಹಿಂದೆ ಹೇಳಿದ್ದೆಲ್ಲವೂ ಸುಳ್ಳು...ನೀವು ಯಾರೋ ಬಿಜೆಪಿ ರಾಜಕಾರಣಿಗಳು ಅಥವಾ ಇನ್ಯಾರೊ ಎಂದು ಭಾವಿಸಿದ್ದೆವು...ಆದರೆ ನಿಮ್ಮಲ್ಲಿ ಯಾರೂ ಬಿಜೆಪಿಯವರಿಲ್ಲ ಎಂದು ಅವರು ತಿಳಿಸಿದರು. ಭಾರತದಲ್ಲಿ ರಹಸ್ಯ ಸಾಂಪ್ರದಾಯಿಕ ಮತದಾರ ಎಂಬುದಿಲ್ಲ.
ಪ್ರ: ಭಾರತದಲ್ಲಿ ಬಿಜೆಪಿ ಬೆಂಬಲವನ್ನು ಅತಿರೇಕವಾಗಿ ವರದಿ ಮಾಡುವ ಅಪಾಯವಿದೆಯೇ?
ಪ್ರ.ರಾ: ಹೌದು, ನಮ್ಮ ಸಮೀಕ್ಷೆಯ ಸಮಯದಲ್ಲಿ ನಾವದನ್ನು ಕಂಡಿದ್ದೇವೆ.
ದೊ.ಸೊ: ಉದಾಹರಣೆಗೆ, ಅಮೆರಿಕದಲ್ಲಿ ಮೇಲ್ವರ್ಗದ ಸಾಂಪ್ರದಾಯಿಕ ಮತದಾರರು ವೌನವಾಗಿರುತ್ತಾರೆ. ಕೆಳವರ್ಗದ, ಕಾರ್ಖಾನೆ ಕಾರ್ಮಿಕರು ಮತ್ತು ಇತರರು ಜೋರಾಗಿ ಸದ್ದು ಮಾಡುತ್ತಾರೆ. ಭಾರತದಲ್ಲಿ ಮೇಲ್ವರ್ಗದ ಸಾಂಪ್ರದಾಯಿಕ ಮತದಾರರು ಎಲ್ಲರೂ ವೌನವಾಗಿರುವುದಿಲ್ಲ, ಆದರೆ ಕೆಳಜಾತಿಯ ಮತದಾರರು ಸಾಮಾನ್ಯವಾಗಿ ವೌನಿಗಳಾಗಿರುತ್ತಾರೆ.
ಪ್ರ: ಈ ಚುನಾವಣೆಯಲ್ಲಿ ಮೈತ್ರಿ ಬಹಳ ಮುಖ್ಯ. ಪಕ್ಷಗಳು ಮೈತ್ರಿ ಮಾಡಿಕೊಂಡಾಗ ಅವುಗಳ ಎಲ್ಲ ಮತದಾರರು ಒಂದು ವಿಭಾಗವಾಗಿ ಸೇರುತ್ತಾರೆಯೇ ಅಥವಾ ಇದರಲ್ಲಿ ಸಹಜ ಲೆಕ್ಕಾಚಾರಕ್ಕಿಂತ ಆಚೆಗಿನ ಆಟವಿದೆಯೇ?
ಪ್ರ.ರಾ:
ಪಕ್ಷಗಳು ಮೈತ್ರಿ ಮಾಡಿ ಕೊಂಡಾಗ ಅವುಗಳಿಗೆ ಸಂಬಂಧಿಸಿದ ಮತದಾರರ ಮತಗಳನ್ನು ಮಾತ್ರ ಪಡೆಯುವುದಲ್ಲ ಜೊತೆಗೆ ಮೈತ್ರಿ ಮಾಡಿಕೊಂಡ ಕಾರಣ ಅವರು ಸೃಷ್ಟಿಸಿದ ಸನ್ನಿಯ ಕಾರಣ ಹೆಚ್ಚುವರಿ ಮತಗಳನ್ನು ಪಡೆಯುತ್ತಾರೆ.
ದೊ.ಸೊ: ತಮಿಳುನಾಡಿನಲ್ಲಿ ಪಿಎಂಕೆ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅದು ಒಂದು ಸ್ಥಾನವನ್ನೂ ಗೆಲ್ಲದಿರಬಹುದು. ಆದರೆ ಮೈತ್ರಿ ಮಾಡಿಕೊಂಡಾಗ-ನಾವಿಲ್ಲಿ ಕಮ್ಯುನಿಸ್ಟ್ ಪಕ್ಷ ಮತ್ತು ಬಿಜೆಪಿ ಜೊತೆಯಾಗಿ ಹೋರಾಡುವ ಬಗ್ಗೆ ಮಾತನಾಡುತ್ತಿಲ್ಲ, ಆದರೆ ಸಾಮಾನ್ಯವಾಗಿ ಯಾವುದೇ ಸೈದ್ಧಾಂತಿಕ ವೈರುಧ್ಯಗಳು ಇಲ್ಲದಿದ್ದರೂ ವಿಭಿನ್ನ ನಾಯಕರ ಅಧೀನದಲ್ಲಿರುವ ಪಕ್ಷಗಳ ನಡುವೆ ಮೈತ್ರಿ ನಡೆದಾಗ ಜನರು ಈ ಮೈತ್ರಿಕೂಟ ಜಯಗಳಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಭಾವಿಸುತ್ತಾರೆ. ಹಾಗಾಗಿ ಈ ಮ್ರೈತಿಗೆ ಹೆಚ್ಚಿನ ಬೆಂಬಲ ದೊರೆಯುತ್ತದೆ. ಹಾಗಾಗಿ ಮೈತ್ರಿಯ ವಿಷಯದಲ್ಲಿ ಎರಡಕ್ಕೆ ಎರಡನ್ನು ಸೇರಿಸಿದರೆ ಐದಾಗುತ್ತದೆ.
ಪ್ರ.ರಾ: ಮಾಯಾವತಿಯ ಬೆಂಬಲಿಗರು ಸಮಾಜವಾದಿ ಪಕ್ಷಕ್ಕೆ ಮತ ಹಾಕುತ್ತಾರೆ. ಆದರೆ ಎಸ್ಪಿ ಬೆಂಬಲಿಗರು ಬಿಎಸ್ಪಿಗೆ ಮತ ಹಾಕುವುದಿಲ್ಲ ಎಂಬ ಸಾಂಪ್ರದಾಯಿಕ ತಿಳುವಳಿಕೆಯೂ ಇದೆ. ಆದರೆ ಇದಕ್ಕೆ ಯಾವುದೇ ಸಾಕ್ಷಿಯಿಲ್ಲ.


ಪ್ರ: ಭಾರತದ ಬಹಳಷ್ಟು ಚುನಾವಣೆಗಳಲ್ಲಿ ಯಾವ ರೀತಿ ಭರ್ಜರಿ ಗೆಲುವು ಸಾಧಿಸಲಾಗಿದೆ ಎಂಬುದನ್ನು ನಿಮ್ಮ ಪುಸ್ತಕದಲ್ಲಿ ತಿಳಿಸಿದ್ದೀರಿ. 2019ರ ಚುನಾವಣೆಯೂ ಇದೇ ರೀತಿ ಇರಲಿದೆ ಎಂದು ನೀವು ನಿರೀಕ್ಷಿಸುತ್ತೀರಾ?
ಪ್ರ.ರಾ:
ಭರ್ಜರಿ ಎಂದು ಹೇಳುವಾಗ ನಾವು ಮಾತನಾಡುತ್ತಿರು ವುದು ರಾಜ್ಯ ಮಟ್ಟದ ಫಲಿತಾಂಶಗಳ ಬಗ್ಗೆ. ಒಟ್ಟಾರೆಯಾಗಿ ಲೋಕಸಭಾ ಫಲಿತಾಂಶ ಭರ್ಜರಿಯಾಗಿರಬಹುದು, ಆದರೆ ಪ್ರತಿ ರಾಜ್ಯದಲ್ಲೂ ಶೇ. 77 ಬಾರಿ ಫಲಿತಾಂಶ ಏಕಪಕ್ಷೀಯವಾಗಿರುತ್ತದೆ. ಹಾಗಾಗಿ, ಪ್ರತಿ ರಾಜ್ಯದಲ್ಲಿ ಯಾರು ಜಯಗಳಿಸುತ್ತಾರೆ ಎಂದು ನೀವು ಯೋಚಿಸುತ್ತೀರೋ ಆ ಪಕ್ಷವೇ ಅಭೂತಪೂರ್ವ ಗೆಲುವು ಸಾಧಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಲೋಕಸಭಾ ಚುನಾವಣೆಗಳಲ್ಲಿ ರಾಜ್ಯವಾರು ಭರ್ಜರಿ ಫಲಿತಾಂಶ ಸಾಮಾನ್ಯವಾಗಿರುತ್ತದೆ, ಆದರೆ ಒಟ್ಟಾರೆ ಭರ್ಜರಿ ಫಲಿತಾಂಶ ಸಾಧ್ಯವಿಲ್ಲ.
ಪ್ರ: ನೀವು, ಒಂದೇ ರೀತಿಯ ಮತದಾನ ವರ್ತನೆ ಪ್ರದರ್ಶಿಸುವ ಏಕರೂಪದ ಸ್ವಿಂಗ್ ವಲಯದ ಬಗ್ಗೆ ಮಾತನಾಡಿದ್ದೀರಿ. 2014ರಲ್ಲಿ ಬಿಜೆಪಿಗೆ ಮತ ಹಾಕಿದ ಪ್ರದೇಶಗಳಾದ ಪಶ್ಚಿಮ, ಉತ್ತರ ಮತ್ತು ಕೇಂದ್ರ ಭಾರತ ಏಕರೂಪ ಸ್ವಿಂಗ್ ವಲಯವಾಗಿವೆಯೇ?
ಪ್ರ.ರಾ: ಏಕರೂಪ ಸ್ವಿಂಗ್ ವಲಯಗಳು ರಾಜ್ಯಗಳಿಗಿಂತ ಸಣ್ಣದಾಗಿರುತ್ತವೆ. ರಾಜ್ಯಗಳ ಒಳಗೆಯೇ ನಾವು ಹಲವು ಬಾರಿ ಎರಡು ಅಥವಾ ಮೂರು ಏಕರೂಪ ಸ್ವಿಂಗ್ ವಲಯಗಳನ್ನು ಕಾಣಬಹುದು. ಕರ್ನಾಟಕವನ್ನೇ ತೆಗೆದುಕೊಳ್ಳೋಣ; ದಕ್ಷಿಣ ಕರ್ನಾಟಕ ಒಕ್ಕಲಿಗರಾಗಿದ್ದರೆ ಉತ್ತರ ಲಿಂಗಾಯತರದ್ದು. ಸ್ವಿಂಗ್ ವಿಷಯಕ್ಕೆ ಬಂದಾಗ ಇವೆರಡು ವಿಭಿನ್ನವಾಗಿ ವರ್ತಿಸುತ್ತವೆ. ನಾವು ಏಕರೂಪ ಸ್ವಿಂಗ್ ವಲಯಗಳನ್ನು ಜಾತಿಯ ಭೌಗೋಳಿಕತೆಯ ಆಧಾರದಲ್ಲಿ ಅಲ್ಲ ಬದಲಿಗೆ ಅಂಕಿಅಂಶಗಳ ಆಧಾರದಲ್ಲಿ ಗುರುತಿಸುತ್ತೇವೆ. ಒಮ್ಮೆ ಸ್ವಿಂಗ್ ವಲಯ ಕಂಡ ನಂತರ ಅಲ್ಲಿ ಕಾರ್ಯನಿರ್ವಹಿಸುವ ಸಾಮಾಜಿಕ ಮತ್ತು ಆರ್ಥಿಕ ಅಂಶಗಳನ್ನು ತಿಳಿಯಲಾಗುತ್ತದೆ.
ಪ್ರ: ಹಲವು ರಾಜ್ಯಗಳಲ್ಲಿ ಬಿಜೆಪಿ ಸಾಮಾನ್ಯವಾಗಿ ಉತ್ತಮ ನಿರ್ವಹಣೆ ತೋರುವಂತೆ ಕಂಡುಬರುತ್ತಿದ್ದರೂ ಈ ರಾಜ್ಯಗಳ ಒಳಗೆಯೇ ಕೆಲವು ಪ್ರದೇಶಗಳು ವಿಭಿನ್ನ ರಾಜಕೀಯ ವರ್ತನೆಯನ್ನು ಹೊಂದಿವೆ.
ಪ್ರ.ರಾ: ಹೌದು, ಖಂಡತವಾಗಿಯೂ.
ದೊ.ಸೊ: ಉದಾಹರಣೆಗೆ, ಪೂರ್ವ ಉತ್ತರ ಪ್ರದೇಶ ಮತ್ತು ಪಶ್ಚಿಮ ಉತ್ತರ ಪ್ರದೇಶ ಪರಸ್ಪರ ವಿಭಿನ್ನ ಸಾಮಾಜಿಕ ರಚನೆಯನ್ನು ಹೊಂದಿದೆ. ಪೂರ್ವ ಯುಪಿಯನ್ನು ಪ್ರಚೋದಿಸುವ ವಿಷಯಗಳು ಪಶ್ಚಿಮ ಯುಪಿಗೆ ವಿಷಯವೇ ಆಗದಿರಬಹುದು. ಆಂಧ್ರ ಪ್ರದೇಶದಲ್ಲಿ ರಾಯಲಸೀಮಾ, ತೆಲಂಗಾಣ ಮತ್ತು ಕರಾವಳಿ ಆಂಧ್ರ ವಿಭಿನ್ನ ಸ್ವಿಂಗ್ ವಲಯಗಳನ್ನು ಹೊಂದಿದ್ದವು.
ಪ್ರ: ಮತದಾರರ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ರಾಷ್ಟ್ರೀಯ ವಿದ್ಯಮಾನವಾಗಿ ಗ್ರಾಮೀಣ-ನಗರ ವಿಭಜನೆ ಎಂಬ ಕಲ್ಪನೆ ಎಷ್ಟು ಸೂಕ್ತ?
ಪ್ರ.ರಾ: ರಾಷ್ಟ್ರೀಯ ವಿದ್ಯಾಮಾನ ಎಂಬುದು ಏನೂ ಇಲ್ಲ. ಲೋಕಸಭಾ ಚುನಾವಣೆ ರಾಜ್ಯ ಚುನಾವಣೆಗಳ ಒಕ್ಕೂಟ. ಪ್ರತಿ ರಾಜ್ಯವೂ ಇನ್ನೊಂದಕ್ಕಿಂತ ಭಿನ್ನ. ಕೆಲವು ರಾಜ್ಯಗಳಲ್ಲಿ ನಗರ-ಗ್ರಾಮೀಣ ವಿಭಜನೆಯಿದೆ, ಕೆಲವು ರಾಜ್ಯಗಳಲ್ಲಿ ಅದು ಇಲ್ಲ. ಒಟ್ಟಾರೆಯಾಗಿ, ಅಂಕಿಅಂಶಗಳ ಆಧಾರದಲ್ಲಿ ಹೇಳುವುದಾದರೆ ನಗರಕ್ಕಿಂತ ಗ್ರಾಮೀಣ ಭಾಗದ ಜನರು ಚುನಾವಣೆಯಲ್ಲಿ ಹೆಚ್ಚು ಭಾಗವಹಿಸುತ್ತಾರೆ. ನಗರದ ಮಹಿಳೆಯರಿಗಿಂತ ಗ್ರಾಮೀಣ ಮಹಿಳೆಯರು ಹೆಚ್ಚುಮತ ಚಲಾಯಿಸುತ್ತಾರೆ.
ಪ್ರ: ಹಾಗಾದರೆ, 2014ರಲ್ಲಿ ಮೋದಿ ಅಲೆ ಎಂದು ಕರೆಯಲ್ಪಟ್ಟಿದ್ದು ಬಿಜೆಪಿ ಉತ್ತಮ ನಿರ್ವಹಣೆ ತೋರಿದ ಹಲವು ಪ್ರದೇಶಗಳ ಒಟ್ಟಾರೆ ಸಂಗ್ರಹವೇ?
ಪ್ರ.ರಾ: ಮೋದಿ ಅಲೆಯ ಬಗ್ಗೆ ನೀವು ಮಾತನಾಡುವುದಾದರೆ, ನನ್ನ ಪ್ರಕಾರ ಅದು ಇರಲೇ ಇಲ್ಲ. ಅವರಿಗೆ ಹೆಚ್ಚು ಸ್ಥಾನಗಳು ಲಭಿಸಿರಬಹುದು ಆದರೆ ಪಕ್ಷ ಗಳಿಸಿದ್ದು ಶೇ.30 ಮತಗಳನ್ನು ಮಾತ್ರ. ಆ ಗೆಲುವಿಗೆ ಇದ್ದ ಒಂದು ಪ್ರಮುಖ ಕಾರಣ ವಿಭಜನೆಯಾಗಿದ್ದ ವಿರೋಧ ಪಕ್ಷಗಳು. ಜಗತ್ತಿನ ಯಾವುದೇ ದೇಶದಲ್ಲೂ ಅದನ್ನು ಅಲೆಯೆಂದು ಕರೆಯಲು ಸಾಧ್ಯವಿಲ್ಲ.

ಕೃಪೆ: thehindu.com

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top