ಚೆಂಗಳ ಶಾಲೆಗೆ ಅವಳಿ ಮಕ್ಕಳ ಆಕರ್ಷಣೆ!
ಕಾಸರಗೋಡು, ಜೂ.6: ಅವಳಿ ಮಕ್ಕಳ ಸಂಗಮದೊಂದಿಗೆ ಕಾಸರಗೋಡಿನ ಶಾಲೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಒಂಬತ್ತು ಜೋಡಿ ಅವಳಿ ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ.
ನಗರ ಹೊರವಲಯದ ಚೆಂಗಳ ಸೆಂಟ್ರಲ್ ಸರಕಾರಿ ಹೈಯರ್ ಸೆಕಂಡರಿ ಶಾಲೆಯಲ್ಲಿ ಚೆಂಗಳ ಗ್ರಾಪಂನ ಬೇರ್ಕ, ಪೊಡಿಪಳ್ಳ ವ್ಯಾಪ್ತಿಗೊಳಪಟ್ಟ ಈ ಅವಳಿ ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಒಂದೇ ಸಾಮ್ಯತೆ ಇರುವುದರಿಂದ ಸುಲಭವಾಗಿ ಮಕ್ಕಳನ್ನು ಗುರುತಿಸಲು ಅಧ್ಯಾಪಕರಿಗೂ ಸಾಧ್ಯವಾಗುತ್ತಿಲ್ಲ. ಅಲ್ಲದೆ ಮಕ್ಕಳ ಹೆಸರು, ಧರಿಸುವ ವಸ್ತ್ರಗಳಿಂದಲೂ ಶಿಕ್ಷಕರು ಹಲವು ಬಾರಿ ಗೊಂದಲಕ್ಕೀಡಾದ ಉದಾಹರಣೆಗಳಿವೆ. ಅವಳಿ ಮಕ್ಕಳಿಗೆ ಒಂದೇ ರೀತಿಯ ವಸ್ತ್ರ, ಬ್ಯಾಗ್ಗಳಿರುವುದು ಈ ಗೊಂದಲಕ್ಕೆ ಪ್ರಮುಖ ಕಾರಣ.
ಅವಳಿ ಮಕ್ಕಳು ಒಬ್ಬರಿಂದ ಒಬ್ಬರು ಬೇರ್ಪಡಲು ಸಾಧ್ಯವಾಗದೆ ಇರುವುದರಿಂದ ಒಂದೇ ತರಗತಿಯಲ್ಲಿ ಕಲಿಯು ತ್ತಿದ್ದಾರೆ. ಅವಳಿಯಲ್ಲಿ ಒಬ್ಬರು ಶಾಲೆಗೆ ಹಾಜರಾಗದಿದ್ದಲ್ಲಿ ಇನ್ನೊಬ್ಬರೂ ರಜೆ ಹಾಕುತ್ತಾರೆ!. ಪರೀಕ್ಷೆ ಹಾಲ್ ಮತ್ತು ಶಾಲಾ ಕಲೋತ್ಸವ ಸಂದರ್ಭಗಳಲ್ಲಿ ಹೆಚ್ಚಾಗಿ ಗೊಂದಲ ಉಂಟಾಗುತ್ತಿವೆ ಎನ್ನುತ್ತಾರೆ ಶಿಕ್ಷಕರು.
ಏಳನೆ ತರಗತಿಯ ಹಾಜಿರಾ ನಝೀಲಾ-ಸಾರಾ ನಫಲಾ, ಎಂಟನೆ ತರಗತಿಯ ಹಾಜಿರಾ-ಸಾರ, ಎಲ್ಕೆಜಿ ವಿದ್ಯಾರ್ಥಿ ಗಳಾದ ನಬಿಯಾ-ನಿಹಾಲ್, ಒಂದನೆ ತರಗತಿಯ ಸುಹೈಲ್-ಸುಮೈನಾ, ಅಬ್ದುಲ್ ಮಜೀಬ್-ಖದೀಜತ್ ಮುಬೀನ್, ಫರ್ಝಾನ್-ಫರ್ಹಾನ್, ಸಿನಾನ್-ಶಹಾಬ್ ಮೊದಲಾದ ಅವಳಿ ಮಕ್ಕಳು ಈ ಶಾಲೆಯಲ್ಲಿ ಗಮನಸೆಳೆ ಯುತ್ತಿದ್ದಾರೆ. ಈ ವರ್ಷ ನಾಲ್ಕು ಅವಳಿ ಮಕ್ಕಳು ಶಾಲೆಗೆ ಸೇರ್ಪಡೆಗೊಂಡಿದ್ದಾರೆ.
ವರ್ಷ ಕಳೆದಂತೆ ಶಾಲೆಯಲ್ಲಿ ಅವಳಿ ಮಕ್ಕಳ ಸಂಖ್ಯೆ ಹೆಚ್ಚುತ್ತಾ ಇದೆ. ಕೆಲವರ್ಷಗಳ ಹಿಂದೆ ಈ ಶಾಲೆಯಲ್ಲಿ 40 ಅವಳಿ ಮಕ್ಕಳಿದ್ದರು.