ವಿಶ್ವದ ಅತಿ ಎತ್ತರದ ರಸ್ತೆಯಲ್ಲಿ ಬೋವಿಕ್ಕಾನದ ನಾರಿಯ ಬುಲೆಟ್ ಸವಾರಿ
ಕಾಸರಗೋಡು, ಆ.5: ಬಹುತೇಕ ಯುವಜನರಲ್ಲಿ ದ್ವಿಚಕ್ರ ವಾಹನದಲ್ಲೊಮ್ಮೆ ಜಾಲಿರೈಡ್ ಹೋಗಬೇಕೆಂಬ ಆಸೆ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಯುವಕರು ಬುಲೆಟ್ ಬೈಕ್ ಮೂಲಕ ದೇಶದ ವಿವಿಧ ಭಾಗಗಳಿಗೆ ತೆರಳುತ್ತಾರೆ. ಮುಂಜಾಗರೂಕತೆ, ಸಮರ್ಪಕ ಮಾಹಿತಿಯಿಲ್ಲದೆ ಇದ್ದರೆ ಅಪಾಯಕಾರಿಯಾಗಿ ಪರಿಣಮಿಸಬಹುದಾದ ಇಂತಹ ಜಾಲಿರೈಡನ್ನು ಯಶಸ್ವಿಯಾಗಿ ಮುಗಿಸಿರುವ ಯುವತಿಯೋರ್ವಳು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಬೋವಿಕ್ಕಾನದ ಸೌಮ್ಯಾ ಎಂಬವರೇ ಈ ಸಾಧಕಿ.
ರಾಯಲ್ ಎನ್ಫೀಲ್ಡ್ ಮೊದಲ ಬಾರಿಗೆ ಮಹಿಳೆಯರಿಗೆ ಆಯೋಜಿಸಿದ್ದ ಹಿಮಾಲಯ ಒಡಿಸ್ಸಿ ಯಾತ್ರೆಯಲ್ಲಿ ಸೌಮ್ಯಾ ಕರ್ದುಂಗಕ್ಕೆ ಬುಲೆಟ್ ಮೂಲಕ ತೆರಳಿ ಅಚ್ಚರಿ ಹುಟ್ಟಿಸಿದ್ದಾರೆ. ಆಯ್ಕೆಯಾದ 14 ಮಂದಿಯಲ್ಲಿ ಕೇರಳದಿಂದ ಆಯ್ಕೆಯಾದ ಸೌಮ್ಯಾ, ಹಿಮಾಲಯ ಪರ್ವತ ಶ್ರೇಣಿಯ ಕರ್ದುಂಗದಲ್ಲಿರುವ ವಿಶ್ವದ ಅತೀ ಎತ್ತರದ ರಸ್ತೆಯಲ್ಲಿ ಬೈಕ್ ಚಲಾಯಿಸಿ ಗಮನ ಸೆಳೆದಿದ್ದಾಳೆ.
ಈ ಯಾತ್ರೆಯ ಸಂದರ್ಭ ಹಲವು ಅಪಘಾತಗಳನ್ನು ಕಣ್ಣಾರೆ ಕಂಡಿದ್ದಾಗಿ ಸೌಮ್ಯಾ ಹೇಳುತ್ತಾರೆ. ದೇಶಾದ್ಯಂತ ಬುಲೆಟ್ ರೈಡ್ ಮಾಡಬೇಕೆಂಬ ಕನಸು ಹೊಂದಿರುವ ಇವರು ಈ ನಿಟ್ಟಿನಲ್ಲಿ ತಯಾರಿ ನಡೆಸುತ್ತಿದ್ದಾರೆ.
ರಾಯಲ್ ಎನ್ಫೀಲ್ಡ್ ಪ್ರಥಮ ಬಾರಿ ಆಯೋಜಿಸಿದ್ದ ‘ವಿಮೆನ್ಸ್ ಓನ್ಲಿ ಹಿಮಾಲಯ ಒಡಿಸ್ಸಿ ಯಾತ್ರೆ’ಯಲ್ಲಿ ಭಾಗವಹಿಸಿದ 14 ಮಂದಿಯಲ್ಲಿ ಓರ್ವ ಮಲಯಾಳಿ ನಾನು. ಹಿಮಾಲಯದಲ್ಲಿರುವ ವಿಶ್ವದ ಅತೀ ಎತ್ತರದ ಕರ್ದುಂಗಕ್ಕೆ ತಲುಪಬೇಕೆಂಬ ಗುರಿ ನಮ್ಮದಾಗಿತ್ತು. 14 ಮಂದಿಯಲ್ಲಿ ನಾನು ಸೇರಿ ಹತ್ತು ಮಂದಿ ಗುರಿ ತಲುಪಿದೆವು. ದುರ್ಗಮ ದಾರಿ, ಮಂಜು, ಚಳಿ, ಧೂಳು, ಬೃಹತ್ ಕಂದಕಗಳನ್ನು ಎದುರಿಸಿ ಒಂಬತ್ತು ಪರ್ವತಗಳನ್ನು ಇಳಿದು ಕರ್ದುಂಗಕ್ಕೆ ತಲುಪಿದೆವು.
ಸೌಮ್ಯಾ