ದೇವರಾಜ ಅರಸು ಅವರ ಮೂರನೆಯ ಮತ್ತು ಕೊನೆಯ ಮಗಳು ಭಾರತಿ ಅರಸು, ಅಪ್ಪನ ಮುದ್ದಿನ ಮಗಳು. ಅರಸು ದಂಪತಿಗಳಿಗೆ ಒಟ್ಟು ಒಂಬತ್ತು ಜನ ಮಕ್ಕಳು. ಅವರಲ್ಲಿ ಉಳಿದವರು ಮೂವರು ಹೆಣ್ಣುಮಕ್ಕಳು. ಆ ಮೂವರಲ್ಲಿ ಈಗ ಉಳಿದಿರುವವರು ಭಾರತಿ ಅರಸು(57) ಮಾತ್ರ. ಪ್ರಾಥಮಿಕ ಶಿಕ್ಷಣ ಬೆಂಗಳೂರಿನ ಸೈಂಟ್ ಮೇರೀಸ್ ಸ್ಕೂಲ್‌ನಲ್ಲಿ. ನಂತರ ಪ್ರತಿಷ್ಠಿತ ವೌಂಟ್ ಕಾರ್ಮೆಲ್ ಕಾಲೇಜ್ ಸೇರಿ, ಪಿಯುಸಿ ಮುಗಿಸುವಷ್ಟರಲ್ಲಿ, ಮೈಸೂರು ಮೂಲದ ನಾಗರಾಜ್ ಅರಸು ಅವರೊಂದಿಗೆ ಮದುವೆ ಮಾಡಿದರು. ಮದುವೆಯ ನಂತರ ಮೈಸೂರಿನಲ್ಲಿ ವಾಸ. ಒಬ್ಬಳು ಮಗಳು. ಮಗಳಿಗೂ ಮದುವೆಯಾಗಿ, ಆಕೆಗೊಂದು ಮಗುವಿದೆ. ಈಗ ಮೊಮ್ಮಗಳೊಂದಿಗೆ ಭಾರತಿಯವರ ಬದುಕು ನಡೆಯುತ್ತಿದೆ. ಅಪ್ಪ ದೇವರಾಜ ಅರಸು ರಾಜಕೀಯ ನಾಯಕರು, ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ರಾಷ್ಟ್ರ ರಾಜಕಾರಣದಲ್ಲೂ ಗುರುತಿಸಿಕೊಂಡವರು. ರಾಜಕಾರಣಿಗಳ ಮಕ್ಕಳು ರಾಜಕೀಯ ರಂಗಕ್ಕೆ ಆಕರ್ಷಿತರಾಗುವುದು ಸಹಜ. ಅದೇ ರೀತಿ ದೇವರಾಜ ಅರಸರ ನಿಧನಾನಂತರ ಮೊದಲ ಪುತ್ರಿ ಚಂದ್ರಪ್ರಭಾ ಅರಸು, ರಾಜಕಾರಣಕ್ಕೆ ಇಳಿದು ಶಾಸಕರಾಗಿ ಗೆದ್ದು ಮಂತ್ರಿಯಾಗಿದ್ದರು. ಭಾರತಿ ಅರಸು ಕೂಡ 2000ದಲ್ಲಿ ರಾಮಕೃಷ್ಣ ಹೆಗಡೆಯವರ ಆಹ್ವಾನದ ಮೇರೆಗೆ ಲೋಕಶಕ್ತಿ ಸೇರುವ ಮೂಲಕ ರಾಜಕೀಯಕ್ಕೆ ಧುಮುಕಿದ್ದರು. ಆ ನಂತರ ಜೆಡಿ (ಯು)ನಲ್ಲಿ ಸ್ವಲ್ಪ ದಿನವಿದ್ದರು. ನಂತರ ದೇವೇಗೌಡರ ಪಕ್ಷ ಜೆಡಿ (ಎಸ್)ಗೆ ಸೇರಿದರು. ಅಲ್ಲಿ ಪಕ್ಷದ ಉಪಾಧ್ಯಕ್ಷ ಸ್ಥಾನ ಅಲಂಕರಿಸಿ, ನಾಲ್ಕು ಉಪಚುನಾವಣೆಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡು, ರಾಜಕಾರಣದ ಏಳುಬೀಳುಗಳನ್ನು ಕಣ್ಣಾರೆ ಕಂಡವರು. ಆ ನಂತರ, 2004ರಲ್ಲಿ ಆಕಸ್ಮಿಕವಾಗಿ, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೊಲೆ ಕೇಸಿನಲ್ಲಿ ಭಾಗಿಯಾಗಿ, ಕೋರ್ಟಿನ ತೀರ್ಪಿಗೆ ತಲೆಬಾಗಿ ಆರು ವರ್ಷ ಜೈಲುವಾಸವನ್ನೂ ಅನುಭವಿಸಿದರು. ಈಗ ಜೈಲಿನಿಂದ ಹೊರಬಂದು, ಸಾಮಾಜಿಕವಾಗಿ ಕಾಣಿಸಿಕೊಳ್ಳುತ್ತಿರುವ ಭಾರತಿಯವರು, ಯಾವ ರಾಜಕೀಯ ಪಕ್ಷಗಳೊಂದಿಗೂ ಗುರುತಿಸಿಕೊಳ್ಳದೆ ತಟಸ್ಥವಾಗಿದ್ದಾರೆ. ಅಪ್ಪಾಜಿ ದೇವರಾಜ ಅರಸರೊಂದಿಗೆ ಕಳೆದ ವಾತ್ಸಲ್ಯಮಯ ಕ್ಷಣಗಳನ್ನು, ಮನೆಯಲ್ಲಿ ಅವರಿರುತ್ತಿದ್ದ ಬಗೆಯನ್ನು, ಅವರ ನಡೆ-ನುಡಿಗಳನ್ನು, ಹವ್ಯಾಸ-ಅಭ್ಯಾಸಗಳನ್ನು, ಅವರಿಂದ ಕಲಿತದ್ದನ್ನು; ಅಜ್ಜಿಯಿಂದ, ಅಮ್ಮನಿಂದ, ಅಕ್ಕಂದಿರಿಂದ, ಚಿಕ್ಕಪ್ಪನಿಂದ ಮತ್ತು ಊರಿನ ಜನರಿಂದ ಕೇಳಿದ್ದನ್ನು; ಅದಕ್ಕಿಂತ ಹೆಚ್ಚಾಗಿ ಮಗಳಾಗಿ ಅಪ್ಪನನ್ನು ಕಂಡ ಬಗೆಯನ್ನು ಇಲ್ಲಿ ಬಿಡಿಸಿಟ್ಟಿದ್ದಾರೆ.