ಮಕ್ಕಳ ಬಗ್ಗೆ ಗಮನಕೊಡಿ
ಮಾನ್ಯರೆ,
ರಜೆಯ ದಿನಗಳೆಂದರೆ ಮಕ್ಕಳಿಗೆಲ್ಲ ಎಲ್ಲಿಲ್ಲದ ಖುಷಿ, ಈ ಸಂದರ್ಭದಲ್ಲಿ ಹೆಚ್ಚಿನ ಮಕ್ಕಳು ತಮ್ಮ ಸಮಯವನ್ನು ಆಟ ಮತ್ತು ವಿನೋದಗಳಲ್ಲಿ ಕಳೆಯಲು ಬಯಸುತ್ತಾರೆ, ನಗರಗಳ ಕೆಲವು ಕಡೆಗಳಲ್ಲಿ ಮಕ್ಕಳಿಗೆ ಆಟಕ್ಕಾಗಿ ಮೈದಾನದ ಸವತ್ತುಗಳಿದ್ದರೆ ಇನ್ನು ಅನೇಕ ಪ್ರದೇಶಗಳಲ್ಲಿ ಮಕ್ಕಳು ಇದರಿಂದ ವಂಚಿತರಾಗಿ ಮನೆಗಳ ಅಕ್ಕಪಕ್ಕದ ರಸ್ತೆಗಳಲ್ಲಿಯೇ ಆಟವಾಡಲು ತೊಡಗುತ್ತಾರೆ. ಇದರಿಂದಾಗಿ ಪಾದಚಾರಿಗಳು ತುಂಬಾ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಮಕ್ಕಳೂ ಅಪಘಾತಕ್ಕೀಡಾಗುವ ಸಂಭವವೂ ಹೆಚ್ಚಿರುತ್ತದೆ.
ಆದ್ದರಿಂದ ಪಾಲಕರು ರಜೆಯ ಈ ದಿನಗಳಲ್ಲಿ ತಮ್ಮ ಮಕ್ಕಳ ಮೇಲೆ ವಿಶೇಷ ಮುತುವರ್ಜಿಯನ್ನು ವಹಿಸಬೇಕಾಗಿದೆ. ಇಂದು ಪಾಲಕರು ಎಷ್ಟು ಬ್ಯೂಸಿಯಾಗಿರುತ್ತಾರೆಂದರೆ ಮನೆಗಳಲ್ಲಿ ಅವರಿಗೆ ಮಕ್ಕಳೊಂದಿಗೆ ಮಾತನಾಡುವುದು ಬಿಡಿ ಆ ಮುದ್ದು ಮಕ್ಕಳು ಹೇಳಲು ಬಯಸುವ ಮಾತುಗಳನ್ನು ಕೇಳುವಷ್ಟು ಸಮಯವಿರುವುದಿಲ್ಲ. ಮಕ್ಕಳಿಗೆ ಮನೆಯಲ್ಲಿ ತಮ್ಮ ಮಾತುಗಳನ್ನು ಆಲಿಸಲು ಯಾರೂ ಸಿದ್ಧರಿರದಾಗ ಈ ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಗೆಳೆಯರ ಅಥವಾ ಮನೆಗಳ ಹೊರಗೆ ಕಳೆಯಲು ಬಯಸುತ್ತಾರೆ ಆದ್ದರಿಂದ ಪಾಲಕರು ಮನೆಯ ವಾತಾವರಣವನ್ನೂ ಉತ್ತಮಗೊಳಿಸಬೇಕು. ಇದೇ ಸಂದರ್ಭದಲ್ಲಿ ಅವರಿಗೆ ದಾರಿಯ ಶಿಷ್ಟಾಚಾರದ ಪಾಠವನ್ನೂ ಹೇಳಿಕೊಟ್ಟು ಮಕ್ಕಳಿಂದಾಗಿ ಸಾರ್ವಜನಿಕರಿಗೆ ಉಂಟಾಗುವ ತೊಂದರೆಯಿಂದ ತಪ್ಪಿಸಬೇಕು.