ಹೆಲ್ಮೇಟ್ ಧರಿಸದ ಬೈಕ್ ಸವಾರರಿಗೆ ದಂಡದ ಜೊತೆ ಸ್ಪೆಷಲ್ ಕ್ಲಾಸ್
►ಶಿವಮೊಗ್ಗ ಟ್ರಾಫಿಕ್ ಪೊಲೀಸರಿಂದ ನೂತನ ಪ್ರಯೋಗ ►ನಿಯಮಾನುಸಾರ ಸ್ಥಳದಲ್ಲಿಯೇ ನೋಟಿಸ್
ಶಿವಮೊಗ್ಗ, ಡಿ.14: ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಲು ಮುಂದಾಗುವ ಚಾಲಕರು ಇನ್ನು ಮುಂದೆ ಕಟ್ಟೆಚ್ಚರ ವಹಿಸುವುದು ಅಗತ್ಯವಾಗಿದೆ.ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿ ಪೊಲೀಸರಿಗೆ ಸಿಕ್ಕಿ ಬಿದ್ದ ವೇಳೆ, ದಂಡ ಪಾವತಿಸಿ ಹೋದರಾಯ್ತು ಎಂದು ಕೊಂಡರೆ ದಂಡದ ಜೊತೆಗೆ ಸ್ಪೆಷಲ್ ಕೌನ್ಸೆಲಿಂಗ್ ಕ್ಲಾಸ್ಗೆಹಾಜರಾಗುವುದು ಕಡ್ಡಾಯವಾಗಿದೆ.
ಇಷ್ಟು ದಿನ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದ ಚಾಲಕರಿಗೆ 100 ರೂ. ದಂಡ ವಸೂಲಿ ಮಾಡಿ ಸುಮ್ಮನಾಗುತ್ತಿದ್ದ ಶಿವಮೊಗ್ಗ ನಗರ ಸಂಚಾರ ಪೊಲೀಸರೀಗ ಸಂಬಂಧಿಸಿದ ಚಾಲಕರಿಗೆ ನಿರ್ದಿಷ್ಟ ದಿನಗಳಂದು ಕೆಲ ಗಂಟೆಗಳ ಕಾಲ ’ಕೌನ್ಸೆಲಿಂಗ್’ ಕ್ಲಾಸ್ ಕೂಡ ತೆಗೆದುಕೊಳ್ಳುತ್ತಿದ್ದಾರೆ. ಟ್ರಾಫಿಕ್ ಪೊಲೀಸರ ಈ ಹೊಸ ಪ್ರಯೋಗ ಸಾರ್ವಜನಿಕರ ಗಮನ ಸೆಳೆಯುವುದರ ಜೊತೆಗೆ, ಸಾಕಷ್ಟು ಸದ್ದು ಮಾಡುತ್ತಿದೆ. ಪ್ರಥಮ ಕ್ಲಾಸ್: ಮಂಗಳವಾರ ಸಂಜೆ ನಗರದ ಡಿ.ಎ.ಆರ್. ಸಭಾಂಗಣದಲ್ಲಿ ಪ್ರಥಮ ಕೌನ್ಸೆಲಿಂಗ್ ತರಗತಿ ನಡೆಯಿತು. ನಗರದ ವಿವಿಧೆಡೆ ಹೆಲ್ಮೆಟ್ ಧರಿಸದೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಸುಮಾರು 40 ದ್ವಿಚಕ್ರ ವಾಹನ ಸವಾರರು ತರಗತಿಯಲ್ಲಿ ಭಾಗವಹಿಸಿದ್ದರು. 45 ನಿಮಿಷ ನಡೆದ ಈ ತರಗತಿಯಲ್ಲಿ ಇನ್ಸ್ಪೆಕ್ಟರ್ ಗಂಗಾಧರಪ್ಪ, ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಸಬ್ಇನ್ಸ್ಪೆಕ್ಟರ್ ಸಂತೋಷ್ಕುಮಾರ್, ಪೂರ್ವ ಸಂಚಾರ ಪೊಲೀಸ್ ಠಾಣೆ ಸಬ್ಇನ್ಸ್ಪೆಕ್ಟರ್ ರಾಂಕುಮಾರ್ ಭಾಗವಹಿಸಿದ್ದರು. ಹೆಲ್ಮೆಟ್ ಹಾಕದೆ ದ್ವಿಚಕ್ರ ವಾಹನ ಚಲಾಯಿಸಿದರೆ ಮೋಟಾರು ಕಾಯ್ದೆ ಅನುಸಾರ ವಿಧಿಸಬಹುದಾದ ದಂಡ, ಕೈಗೊಳ್ಳಬಹುದಾದ ಕಾನೂನು ಕ್ರಮ ಹಾಗೆಯೇ ಹೆಲ್ಮೆಟ್ ಧರಿಸುವುದರಿಂದ ಉಂಟಾಗುವ ಅನುಕೂಲ, ಅಪಘಾತ ಸಂಭವಿಸಿದ ವೇಳೆ ಯಾವ ರೀತಿಯಲ್ಲಿ ಪ್ರಾಣಾಪಾಯದಿಂದ ರಕ್ಷಣೆ ಸಿಗುತ್ತದೆ ಎಂಬಿತ್ಯಾದಿ ವಿಷಯಗಳ ಕುರಿತಂತೆ ಸಂಚಾರ ಠಾಣೆ ಪೊಲೀಸ್ ಅಧಿಕಾರಿಗಳು ಸವಾರರಿಗೆ ತಿಳಿಹೇಳಿದ್ದಾರೆ. ಸೂಚನೆ:
ಹೆಲ್ಮೆಟ್ ಧರಿಸದೆ ಪೊಲೀಸರಿಗೆ ಸಿಕ್ಕಿ ಬೀಳುವ ಬೈಕ್ ಸವಾರರಿಗೆ ಇಂತಹ ದಿನ ಡಿಎಆರ್ ಹಾಲ್ನಲ್ಲಿ ನಡೆಯುವ ಕ್ಲಾಸ್ಗೆ ತಪ್ಪದೆ ಹಾಜರಾಗುವಂತೆ ಸೂಚಿಸಲಾಗುತ್ತಿದೆ. ಅವರಿಗೆ ನಿಯಮಾನುಸಾರ ಸ್ಥಳದಲ್ಲಿಯೇ ನೋಟಿಸ್ ಕೂಡ ನೀಡಲಾಗುತ್ತಿದೆ. ಕ್ಲಾಸ್ಗೆ ಆಗಮಿಸದೆ ಗೈರು ಹಾಜರಾದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ಕೂಡ ನೀಡಲಾಗುತ್ತಿದೆ.
‘ಉಪಯುಕ್ತ ಮಾಹಿತಿ ಸಿಕ್ಕಿತು’
ಕೌನ್ಸೆಲಿಂಗ್ ಕ್ಲಾಸ್ನಲ್ಲಿ ಹೆಲ್ಮೆಟ್ಗೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿ ಲಭ್ಯವಾಯಿತು. ಅಪಘಾತ ನಡೆದ ವೇಳೆ ಹೆಲ್ಮೆಟ್ಗಳು ಹೇಗೆ ಜೀವ ರಕ್ಷಣೆ ಮಾಡಲಿದೆ ಎಂಬುವುದರ ಬಗ್ಗೆ ಪೊಲೀಸ್ ಅಧಿಕಾರಿಗಳು ಸವಿವರ ಮಾಹಿತಿ ನೀಡಿದರು. ಇನ್ನುಮುಂದೆ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುವುದಿಲ್ಲ ಎಂದು ಕೌನ್ಸೆಲಿಂಗ್ನಲ್ಲಿ ಭಾಗವಹಿಸಿದ್ದ ಸವಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಪ್ರತೀ ಮಂಗಳವಾರ, ಗುರುವಾರ ಹಾಗೂ ಶನಿವಾರ ನಗರದ ಡಿಎಆರ್ ಸಭಾಂಗಣದಲ್ಲಿ ಕೌನ್ಸೆಲಿಂಗ್ ನಡೆಸಲಾಗುತ್ತದೆ. ಹೆಲ್ಮೆಟ್ ಧರಿಸುವುದರಿಂದ ಆಗುವ ಅನುಕೂಲ, ಅನನುಕೂಲ, ಕಾನೂನು ವಿವರಗಳ ಕುರಿತಂತೆ ಸಮಗ್ರ ಮಾಹಿತಿ ನೀಡಲಾಗುವುದು. ಜೊತೆಗೆ ಸವಾರರ ಅಭಿಪ್ರಾಯ ಕೂಡ ಆಲಿಸಲಾಗುವುದು. ಅವರೊಂದಿಗೆ ಮುಕ್ತ ಸಮಾಲೋಚನೆ ನಡೆಸಿ ತಿಳಿಹೇಳುವ ಕೆಲಸ ಮಾಡಲಾಗುವುದು.
ಗಂಗಾಧರಪ್ಪ, ಇನ್ಸ್ಪೆಕ್ಟರ್