ವಂಚಕರ ಬಹುಮಾನದಾಸೆಗೆ ಹಣವನ್ನು ಕಳೆದುಕೊಳ್ಳುತ್ತಿರುವ ಗಲ್ಫ್ ಭಾರತೀಯರು
ಕಳೆದ ಕೆಲವು ದಿನಗಳಿಂದ ಸೌದಿ ಪೊಲೀಸರು ಹಾಗೂ ಟೆಲಿಕಾಂ ಕಂಪೆನಿಗಳು ಲಾಟರಿ ಸ್ಕಾಮರ್ಗಳ ಕುರಿತು ಸತತ ಎಚ್ಚರಿಕೆ ನೀಡುತ್ತಾ ಬಂದಿದ್ದರೂ ಕೂಡ ಸೌದಿ ಅರೇಬಿಯದಲ್ಲಿರುವ ವಿದೇಶಿ ನೌಕರರು ಈ ಸ್ಕಾಮರ್ಗಳಿಗೆ ಪದೇ ಪದೇ ಬಲಿಯಾಗುವ ಪ್ರಕರಣಗಳು ಪತ್ತೆಯಾಗುತ್ತಿವೆ.
ಬಹುತೇಕ ವಿದೇಶಿ ನೌಕರರ ಮೊಬೈಲ್ ಸಂಖ್ಯೆಗೆ ಸ್ಥಳೀಯ ಟೆಲಿಕಾಂ ಸಂಸ್ಥೆಗಳಾದ ಎಸ್ಟಿಸಿ, ಮೊಬೈಲಿ ಅಥವಾ ಲೂಲು ಹೈಫರ್ ಮಾರ್ಕೆಟ್ ಹೆಸರಿನಲ್ಲಿ ಬಹುದೊಡ್ಡ ಮೊತ್ತದ ಹಣ ಬಹುಮಾನವಾಗಿ ಬಂದಿರುತ್ತದೆಂದು ಮೆಸೇಜ್ ರವಾನೆಯಾಗುತ್ತಿದ್ದು, ಇಂತಹ ಮಸೇಜ್ ತಮ್ಮ ಮೊಬೈಲ್ಗೆ ಬಂದರೆ ಅದನ್ನು ನಿರ್ಲಕ್ಷಿಸಿರಿ ಎಂದು ಸ್ಥಳೀಯ ಮಾಧ್ಯಮಗಳು ಹಾಗೂ ಪೊಲೀಸರು ಸಾರ್ವಜನಿಕರಲ್ಲಿ ವಿನಂತಿಸಿ ಕೊಂಡಿದ್ದಾರೆ. ಆದಾಗ್ಯೂ ಈ ಮೆಸೇಜ್ ಸತ್ಯವೆಂದು ನಂಬಿ ಅನೇಕ ಅವಿದ್ಯಾವಂತ ವಿದೇಶಿಯರು ಮೋಸ ಹೋಗಿದ್ದಾರೆ. ಈಗ ಅದಕ್ಕೆ ತದ್ವಿರುದ್ಧ ಎಂಬಂತೆ ಇಬ್ಬರು ವಿದ್ಯಾವಂತ ಭಾರತೀಯ ನರ್ಸ್ಗಳೇ ವಂಚಕರ ಮೋಸದ ಬಲೆಗೆ ಬಿದ್ದು ತಮ್ಮ ಬ್ಯಾಂಕ್ನಲ್ಲಿದ್ದ ಹಣವನ್ನು ಕಳೆದುಕೊಂಡ ಪ್ರಸಂಗವು ಅಭಾ ಪಟ್ಟಣದಲ್ಲಿ ನಡೆದಿದೆ.
ದಕ್ಷಿಣ ಸೌದಿ ಅರೇಬಿಯದ ಅಭಾ ಪಟ್ಟಣದ ಆಸ್ಪತ್ರೆಯೊಂದರಲ್ಲಿ ನರ್ಸ್ಗಳಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಭಾರತೀಯ ಮಹಿಳೆಯರ ಮೊಬೈಲ್ಗೆ ಅನಾಮಿಕ ನಂಬರ್ ನಿಂದ ಒಂದು ಮೆಸೇಜ್ ಬರುತ್ತದೆ. ತಾವು ಲೂಲು ಹೈಪರ್ ಮಾರ್ಕೆಟ್ ಲಕ್ಕಿ ಡ್ರಾ ದಲ್ಲಿ 2 ಲಕ್ಷ ರಿಯಾಲ್ ಹಣವನ್ನು ಬಹುಮಾನವಾಗಿ ಪಡೆದಿದ್ದು, ಈ ಹಣವನ್ನು ಪಡೆಯಲು ಒಂದೋ ನಮ್ಮ ದುಬೈಯಲ್ಲಿರುವ ಹೆಡ್ ಆಫೀಸನ್ನು ಸಂಪರ್ಕಿಸಬೇಕು ಇಲ್ಲದಿದ್ದಲ್ಲಿ ಈ ಮೊಬೈಲ್ ನಂಬರನ್ನು ಸಂಪರ್ಕಿಸಬೇಕೆಂದು ಸೌದಿ ಅರೇಬಿಯದ ಸ್ಥಳೀಯ ಮೊಬೈಲ್ ನಂಬರೊಂದನ್ನು ನೀಡಲಾಗಿತ್ತು. ಈ ದೊಡ್ಡ ಮೊತ್ತದ ಹಣದ ಆಸೆಗೆ ಬಲಿಯಾದ ಭಾರತೀಯ ದಾದಿಯರು ತಕ್ಷಣ ಆ ನಂಬರಿಗೆ ಕರೆ ಮಾಡುತ್ತಾರೆ. ಕರೆಯನ್ನು ಸ್ವೀಕರಿಸಿದ ಸ್ಕಾಮರ್ ದುಬೈಗೆ ಹೋಗಿ ಹಣವನ್ನು ಪಡೆಯುವಂತೆ ದಾದಿಯರಿಗೆ ಹೇಳುತ್ತಾನೆ. ಸೌದಿ ಅರೇಬಿಯದಿಂದ ದುಬೈಗೆ ಹೋಗುವುದು ನಮ್ಮಿಂದ ಸಾಧ್ಯವಿಲ್ಲವೆಂದೂ ಆ ಹಣವನ್ನು ಸೌದಿ ಅರೇಬಿಯದಲ್ಲೇ ಪಾವತಿ ಮಾಡುವಂತೆ ದಾದಿಯರು ಅವನಲ್ಲಿ ವಿನಂತಿಸುತ್ತಾರೆ. ಅದೇ ಅವಕಾಶಕ್ಕಾಗಿ ಕಾಯುತ್ತಿದ್ದ ಸ್ಕಾಮರ್ ನಿಮ್ಮ ಅಕೌಂಟಿಗೆ ಹಣ ವರ್ಗಾಯಿಸಬಹುದೆಂದು ತಿಳಿಸುತ್ತಾನೆ. ಆದರೆ ತಾನು ಹೇಳುವ ಕೆಲವು ವಿವರಗಳನ್ನು ಸರಿಯಾಗಿ ನೀಡಬೇಕೆಂದು ತಪ್ಪಿದರೆ ತಮ್ಮ ಲಾಟರಿ ಹಣ ಬೇರೆಯವರ ಪಾಲಾಗುತ್ತದೆಂದು ಎಚ್ಚರಿಸುತ್ತಾನೆ.
ಅದಕ್ಕೊಪ್ಪಿದ ದಾದಿಯರಲ್ಲಿ ತಮ್ಮ ಖಾತೆಯಿರುವ ಬ್ಯಾಂಕ್ ಹೆಸರು, ಅಕೌಂಟ್ ನಂಬರ್, ಅಕೌಂಟಿನಲ್ಲಿ ನಮೂದಿಸಿರುವ ಹೆಸರು, ಹಾಗೂ ಬ್ಯಾಂಕ್ ಪಾಸ್ ವರ್ಡ್ಗಳನ್ನು ಪಡೆದುಕೊಳ್ಳುತ್ತಾನೆ. ನಂತರ ದಾದಿಯರ ಮೊಬೈಲ್ಗೆ ಬರುವ ಒಟಿಪಿಯನ್ನೂ (ಒನ್ ಟೈಮ್ ಪಾಸ್ವರ್ಡ್) ಕೇಳುತ್ತಾನೆ. ಮುಂದೆ ಬಂದೊದಗುವ ಅಪಾಯದ ಅರಿವಿಲ್ಲದ ದಾದಿಯರು ಯಾವುದೇ ಹಿಂಜರಿಕೆಯಿಲ್ಲದೆ ಅವರು ಕೇಳಿದ ವಿವರಗಳನ್ನು ನೀಡುತ್ತಾರೆ. ತಕ್ಷಣ ಅವರ ಮೊಬೈಲ್ಗೆ ಅವರ ಅಕೌಂಟಿಂದ 13,000 ರಿಯಾಲ್ ಹಣ ಡ್ರಾ ಮಾಡಿದ ಮೆಸೇಜ್ ಬರುತ್ತದೆ. ಆಗ ತಾವು ಮೋಸ ಹೋದ ಸಂಗತಿ ಆ ದಾದಿಯರಿಗೆ ತಿಳಿಯುತ್ತದೆ. ತಕ್ಷಣ ಆ ವ್ಯಕ್ತಿಯ ಮೊಬೈಲ್ಗೆ ಕರೆ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಆ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿತ್ತು.
ಇಂತಹ ಅದೆಷ್ಟೋ ಪ್ರಕರಣಗಳು ಸೌದಿ ಅರೇಬಿಯದಲ್ಲಿ ಬೆಳಕಿಗೆ ಬಂದಿದ್ದು, ಪೊಲೀಸರಿಗೂ ಕೂಡ ಅನೇಕ ದೂರುಗಳು ಬಂದಿವೆ. ಪೊಲೀಸರು ಸ್ಕಾಮರ್ಗಳ ಜಾಡು ಹಿಡಿದು ತನಿಖೆ ನಡೆಸಿದಾಗ ಸಿಕ್ಕಿದ್ದು ಮಾತ್ರ ಸ್ಫೋಟಕ ಮಾಹಿತಿ. ಅದು ಸೌದಿ ಅರೇಬಿಯದ ಸಿಮ್ ಕಾರ್ಡ್ ಬಳಸಿ ಪಾಕಿಸ್ತಾನದಿಂದ ಕರೆಮಾಡುವ ಪಾಕಿಸ್ತಾನದ ವಂಚಕರ ತಂಡವಾಗಿದ್ದು, ಆ ವಂಚಕರು ಪೊಲೀಸರಿಗೆ ಯಾವುದೇ ಕುರುಹು ಸಿಗದಂತೆ ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿದ್ದರು. ನಕಲಿ ಸಿಮ್ ಬಳಸಿ ಇವರು ಅಮಾಯಕರ ಹಣ ಲೂಟಿ ಮಾಡಿ ಆ ಸಿಮ್ ಕಾರ್ಡನ್ನು ಹೂಳುತ್ತಿದ್ದರು. ಆದ ಕಾರಣ ಸಿಮ್ ಟ್ರೇಸ್ ಮಾಡುವುದು ಪೊಲೀಸರಿಗೆ ಅಸಾಧ್ಯವಾಗಿತ್ತು.
ಇತ್ತೀಚೆಗೆ ರಿಯಾದ್ ಪರಿಸರದಲ್ಲಿ ಬಾಂಗ್ಲಾದೇಶದ ಪ್ರಜೆಯೊಬ್ಬನನ್ನು ಪೊಲೀಸರು ಬಂಧಿಸಿದ್ದು ಆತನಿಂದ ವಿವಿಧ ಕಂಪೆನಿಯ ಸುಮಾರು 150 ಸಿಮ್ ಕಾರ್ಡ್ ವಶಪಡಿಸಿಕೊಂಡಿದ್ದು, ಈ ಜಾಲದಲ್ಲಿ ಈತನ ಕೈವಾಡದ ಕುರಿತು ತನಿಖೆ ನಡೆಯುತ್ತಿದೆ. ಅದಲ್ಲದೆ ಜಿದ್ದಾದ ಗುಡ್ಡಗಾಡು ಪ್ರದೇಶವೊಂದರಲ್ಲಿ 12 ಪಾಕಿಸ್ತಾನಿಗಳನ್ನು ಪೊಲೀಸರು ಬಂಧಿಸಿದ್ದು, ಇವರು ಲಾಟರಿ ಮೋಸದಾಟದಲ್ಲಿ ತೊಡಗಿದ್ದವರೆಂದು ತಿಳಿದು ಬಂದಿದೆ. ಇವರು ವಾಸಿಸುತ್ತಿದ್ದ ಗುಡ್ಡ ಪ್ರದೇಶದಲ್ಲಿ ಪೊಲೀಸರು ಪರಿಶೀಲಿಸಿದಾಗ ಸುಮಾರು 100ರಷ್ಟು ಸಿಮ್ ಕಾರ್ಡ್ಗಳು ಹಾಗೂ ಮೊಬೈಲ್ಗಳನ್ನು ಹೊಂಡವೊಂದರಲ್ಲಿ ಹೂತಿರುವುದು ಬೆಳಕಿಗೆ ಬಂದಿದೆ.
ಆದ್ದರಿಂದ, ಕಷ್ಟಪಟ್ಟು ಸೌದಿ ಅರೇಬಿಯದಲ್ಲಿ ದುಡಿಯುತ್ತಿರುವ ಭಾರತೀಯರೇ, ದಯವಿಟ್ಟು ಸುಲಭದಲ್ಲಿ ಹಣ ಮಾಡುವ ಲಾಲಸೆಗೆ ಜೋತುಬಿದ್ದು ಇಂತಹ ವಂಚಕರ ಬಲೆಗೆ ಬಿದ್ದು ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಕಳೆದುಕೊಳ್ಳಬೇಡಿ.