ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಕೆಗೆ ಸಹಕಾರಿ
ಮಾನ್ಯರೇ,
ರಾಜ್ಯ ಸರಕಾರವು 1ರಿಂದ 10ನೇ ತರಗತಿಯವರೆಗೆ ಇರುವ 500 ಸರಕಾರಿ ಪ್ರೌಢ ಶಾಲೆಗಳಲ್ಲಿ ಪ್ರಥಮ ಪಿಯು ತರಗತಿಗಳನ್ನು ಈ ವರ್ಷದಿಂದಲೇ ಪ್ರಾರಂಭಿಸುವಂತೆ ಆದೇಶ ನೀಡಿರುವುದು ಸರಕಾರದ ಉತ್ತಮ ನಿರ್ಧಾರಗಳಲ್ಲಿ ಒಂದಾಗಿದೆ. ತರಗತಿಗಳ ಅಭಿವೃದ್ಧಿ, ವ್ಯಾಸಂಗಗಳಲ್ಲಿ ಬದಲಾವಣೆಗೆ ಸಂಬಂಧಿಸಿದಂತೆ ಪ್ರಾಥಮಿಕ ಪ್ರೌಢ ಶಿಕ್ಷಣ ಇಲಾಖೆಯು ಸಲ್ಲಿಸಿದ್ದ ಮನವಿಗೆ ಸ್ಪಂದಿಸಿ ಇದೇ ತಿಂಗಳ 20ರಂದು ಸರಕಾರವು ಈ ಆದೇಶ ಹೊರಡಿಸಿದೆ.
ಅಲ್ಲದೆ 1ರಿಂದ 7ನೇ ತರಗತಿಯವರೆಗೆ ನಡೆಯುತ್ತಿರುವ 500 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ರಾಷ್ಟ್ರಿಯ ಶಿಕ್ಷಕರ ಶಿಕ್ಷಣ ಮಂಡಳಿಯ ನಿಯಮಾವಳಿಗಳ ಪ್ರಕಾರ 8ನೇ ತರಗತಿ ಪ್ರಾರಂಭಿಸಲು ಒಪ್ಪಿಗೆ ನೀಡಿತು. ಅವುಗಳ ಜೊತೆಗೆ 1ರಿಂದ 5ನೇ ತರಗತಿಯವರೆಗೆ ನಡೆಯುತ್ತಿರುವ 1,000 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 6ನೇ ತರಗತಿ ಪ್ರಾರಂಭಿಸಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ನಡೆಸಲು ಮಂಜೂರಾತಿ ನೀಡಲಾಗಿದೆ. ಅಷ್ಟೇ ಅಲ್ಲದೆ ತರಗತಿಗಳ ಉನ್ನತಿಗಾಗಿ ಸರಕಾರಿ ಶಾಲೆಗಳಲ್ಲಿ ಹಾಲಿ ಇರುವಂತಹ ಮೂಲ ಸೌಕರ್ಯ ಶಿಕ್ಷಕರು ಮತ್ತು ಉಪನ್ಯಾಸಕರ ಸೇವೆಯನ್ನು ಬಳಸಿಕೊಂಡು ಯಾವುದೇ ರೀತಿಯ ಆರ್ಥಿಕ ಹೊರೆ ಉಂಟಾಗದಂತೆ ಶಾಲಾ ಕಾಲೇಜುಗಳನ್ನು ತೆರೆಯುವಂತೆ ಆದೇಶ ನೀಡಲಾಗಿದೆ.
ಉಪನ್ಯಾಸಕರಿಗೆ ಸಂಬಂಧಿಸಿದಂತೆ ಪಿಯು ಕಾಲೇಜುಗಳಲ್ಲಿ ಹೆಚ್ಚುವರಿ ಇರುವ ಉಪನ್ಯಾಸಕರನ್ನು 500 ಸರಕಾರಿ ಪ್ರೌಢ ಶಾಲೆಗಳಲ್ಲಿನ ಪಿಯು ತರಗತಿಗಳಿಗೆ ಬಳಸಿಕೊಳ್ಳಲು ರಾಜ್ಯ ಸರಕಾರವು ಸೂಚನೆ ನೀಡಿದೆ. ಹಾಗೂ ಪಿಯು ಇಲಾಖೆಯು 1,204 ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ ಎಂಬುದಾಗಿ ತಿಳಿಸಿದೆ.
ರಾಜ್ಯ ಸರಕಾರವು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಉನ್ನತಿಗಾಗಿ ತೆಗೆದುಕೊಂಡ ಈ ನಿರ್ಧಾರವು ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಏಕೆಂದರೆ ವಿದ್ಯಾರ್ಥಿಗಳು ತಮ್ಮ ಪ್ರೌಢ ಶಿಕ್ಷಣ ಮುಗಿದ ನಂತರ ಬೇರೆ ಇನ್ನಾವುದೋ ದೂರದಲ್ಲಿರುವ ಕಾಲೇಜಿಗೆ ಸೇರಬೇಕಾಗುತ್ತದೆ. ಅದು ಸಾಧ್ಯವಾಗದಿದ್ದರೆ ಶಿಕ್ಷಣವನ್ನು ಅರ್ಧದಲ್ಲೇ ಕೈಬಿಡಬೇಕಾಗುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಡೋಲಾಯಮಾನವಾಗುತ್ತಿತ್ತು. ಹಾಗಾಗಿ ಸರಕಾರದ ಇಂತಹ ನಿರ್ಧಾರ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಕೆಗೆ ಸಹಕಾರಿಯಾಗಲಿದೆ.