ಬಂಟ್ವಾಳ ಪೇಟೆ ನಿವಾಸಿಗಳಿಗೆ ಎಲ್ಲಾ ಸವಲತ್ತು ಒದಗಿಸಲು ಗರಿಷ್ಠ ಪ್ರಯತ್ನ : ಬಂಟ್ವಾಳ ಪುರಸಭೆ
ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿರು ಕಂಟ್ರೋಲ್ ರೂಂ
ಬಂಟ್ವಾಳ, ಎ.24: ಕೋವಿಡ್ - 19 (ಕೊರೋನ) ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೀಲ್ಡೌನ್ ಆಗಿರುವ ಬಂಟ್ವಾಳ ಪೇಟೆಯ ನಿವಾಸಿಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಸವಲತ್ತುಗಳನ್ನು ಒದಗಿಸಲು ಪುರಸಭೆಯಿಂದ ಗರಿಷ್ಠ ಪ್ರಯತ್ನ ಮಾಡಲಾಗುತ್ತಿದೆ ಎಂದು ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಹೇಳಿದ್ದಾರೆ.
ತಮ್ಮನ್ನು ಭೇಟಿ ಮಾಡಿದ ಪತ್ರಕರ್ತನೊಂದಿಗೆ ಮಾತನಾಡಿದ ಅವರು, ಸೀಲ್ಡೌನ್ ವ್ಯಾಪ್ತಿಯಲ್ಲಿರುವ ಜನರಿಗೆ ನೆರವಾಗುವ ಉದ್ದೇಶದಿಂದ ಪುರಸಭಾ ಕಚೇರಿಯಲ್ಲಿ ಕಂಟ್ರೋಲ್ ರೂಂ ಆರಂಭಿಸಲಾಗಿದ್ದು ಇದು ದಿನದ 24 ಗಂಟೆಯೂ ಕಾರ್ಯಾಚರಿಸುತ್ತಿದೆ. ಹಗಲು ಸಮಯದಲ್ಲಿ ಇಬ್ಬರು ಮಹಿಳಾ ಸಿಬ್ಬಂದಿ ಹಾಗೂ ರಾತ್ರಿ ಸಮಯದಲ್ಲಿ ಇಬ್ಬರು ಪುರುಷ ಸಿಬ್ಬಂದಿ ಕಂಟ್ರೋಲ್ ರೂಂಗೆ ಬರುವ ಕರೆಗಳನ್ನು ಸ್ವೀಕರಿಸಿ ಕರೆ ಮಾಡಿದವರಿಗೆ ಬೇಕಾದ ವ್ಯವಸ್ಥೆಯನ್ನು ತಕ್ಷಣವೇ ಪೂರೈಸುತ್ತಿದ್ದಾರೆ ಎಂದರು.
ಸೀಲ್ಡೌನ್ ಆದ ಪ್ರದೇಶದ ಜನರು ಮುಂದಿನ ಆದೇಶದವರೆಗೆ ಮನೆಯಿಂದ ಹೊರ ಬರುವಂತಿಲ್ಲ. ಹಾಗಾಗಿ ಎಲ್ಲಾ ಮನೆಗಳಿಗೆ ಅಗತ್ಯ ಇರುವ ದಿನಸಿ, ತರಕಾರಿ, ಹಾಲು ಸಹಿತ ದಿನಬಳಕೆಯ ಅಗತ್ಯ ವಸ್ತುಗಳನ್ನು ಪೂರೈಸಲು ಕೆಲವು ಅಂಗಡಿಗಳನ್ನು ಆಯ್ಕೆ ಮಾಡಿ ಪಟ್ಟಿ ಮಾಡಲಾಗಿದ್ದು ಪಟ್ಟಿಯನ್ನು ಎಲ್ಲಾ ಮನೆಗಳಿಗೆ ತಲುಪಿಸಲಾಗಿದೆ. ಪಟ್ಟಿಯಲ್ಲಿ ಯಾವ ಅಂಗಡಿಯ, ಅಂಗಡಿ ಮಾಲಕರ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಲಾಗಿದ್ದು ಆ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಅಂಗಡಿಯವರೇ ಮನೆಗೆ ವಸ್ತುಗಳನ್ನು ತಲುಪಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸೀಲ್ಡೌನ್ ಆರಂಭದಲ್ಲಿ ಪುರಸಭೆಯ ಸಿಬ್ಬಂದಿ ಸೇರಿ ಮನೆಗಳಿಗೆ ಬೇಕಾದ ಸಮಾಗ್ರಿ ತಲುಪಿಸಿದ್ದೇವೆ. ಅಂಗಡಿಯವರ ಪಟ್ಟಿ ನೀಡಿದ ಬಳಿಕ ಪುರಸಭೆಯ ಕಂಟ್ರೋಲ್ ರೂಂಗೆ ಕರೆ ಬರುವುದು ಕಡಿಮೆಯಾಗಿದೆ. ಮಂಗಳೂರಿನಿಂದ ಔಷಧ ತರಿಸುವುದು, ಅನಾರೋಗ್ಯದಲ್ಲಿರುವವರ ತಪಾಸನೆ ಸಹಿತ ಕೆಲವು ವಿಷಯಗಳಿಗೆ ಸಂಬಂಧಿಸಿ ಕಂಟ್ರೋಲ್ ರೂಂಗೆ ಕರೆಗಳು ಬರುತ್ತಿದ್ದು ಅವರಿಗೆ ಸೂಕ್ತ ಸಮಯದೊಳಗೆ ವ್ಯವಸ್ಥೆ ಮಾಡಿ ಕೊಡಲಾಗುತ್ತಿದೆ ಎಂದು ಹೇಳಿದರು.
ಕೊರೋನ ಸೋಂಕು ದೃಢಪಟ್ಟ ಮಹಿಳೆಯ ಮನೆ ಸಹಿತ ಸೀಲ್ಡೌನ್ ಆಗಿರುವ ಪ್ರದೇಶದ ಎಲ್ಲಾ ಓಣಿ ಸಹಿತ ಮನೆಗಳ ಸುತ್ತ ಮುತ್ತ ರಾಸಾಯಣಿಕ ಸಿಂಪಡನೆ ಮಾಡಲಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಈ ಹಿಂದಿನಂತೆ ನಡೆಯುತ್ತಿದ್ದು ಪೌರ ಕಾರ್ಮಿಕರಿಗೆ ಪಿಪಿಇ ಕಿಟ್ಗಳ ಸಹಿತ ಎಲ್ಲಾ ಸುರಕ್ಷಾ ಕವಚಗಳನ್ನು ಒದಗಿಸಲಾಗಿದೆ ಎಂದು ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ತಿಳಿಸಿದರು.
ನಿರ್ಗತಿಕರಿಗೆ ಊಟದ ವ್ಯವಸ್ಥೆ
ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾದ ರಸ್ತೆಬದಿ, ಬಸ್ಸು ನಿಲ್ದಾಣಗಳಲ್ಲಿ ಇದ್ದ ನಿರ್ಗತಿಕರು, ಭಿಕ್ಷುಕರಿಗೆ ಆರಂಭದಿಂದಲೂ ಊಟದ ವ್ಯವಸ್ಥೆ ಮಾಡಲಾಗಿದೆ. ಅವರಲ್ಲಿ ಕೆಲವರಿಗೆ ಪುರಸಭೆಗೆ ಸೇರಿದ ಕಟ್ಟಡವೊಂದಲ್ಲಿ ಆಶ್ರಯ ನೀಡಲಾಗಿದೆ. ಇನ್ನು ಕೆಲವರನ್ನು ಕಟ್ಟಡದಲ್ಲಿ ಸೇರಿದರೂ ಮತ್ತೆ ಅದೇ ಸ್ಥಳಕ್ಕೆ ಹೋಗಿ ಕುಳಿತಿದ್ದಾರೆ. ಯಾರು ಎಲ್ಲಿದ್ದಾರೋ ಅಲ್ಲಿಗೆ ತೆರಳಿ ಪುರಸಭೆಯಿಂದ ಊಟ ನೀಡಲಾಗುತ್ತಿದೆ.
ಕೊರೋನ ಸೋಂಕು ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರ ತುಂಬಾ ಅಗತ್ಯವಾಗಿದೆ. ಸಾಧ್ಯವಾದಷ್ಟು ಮನೆಯಲ್ಲೇ ಇದ್ದು ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ. ಜನಜಂಗುಲಿ ಇರುವ ಪ್ರದೇಶದಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳಿ. ಸೋಂಕಿನ ಬಗ್ಗೆ ಭಯಬೇಡ. ಆದರೆ ಎಚ್ಚರಿಕೆ ಬೇಕು. ಯಾರಿಗಾದರೂ ಜ್ವರ, ಉಸಿರಾಟದ ಸಮಸ್ಯೆ ಕಂಡು ಬಂದರೆ ಕೂಡಲೇ ಸಂಬಂಧಿಸಿದವರಿಗೆ ತಿಳಿಸಿ. ಪುರಸಭೆಯ ಕಂಟ್ರೋಲ್ ರೂಂಗೆ (ಸಂಖ್ಯೆ: 08255 - 233130) ಕರೆ ಮಾಡಿ ತಿಳಿಸಿದರೂ ಕೂಡಲೇ ಸ್ಪಂದಿಸಲಾಗುದು.
- ಲೀನಾ ಬ್ರಿಟ್ಟೊ,
ಪುರಸಭಾ ಮುಖ್ಯಾಧಿಕಾರಿ
ಲಾಕ್ಡೌನ್ನಿಂದ ಸಂಕಷ್ಟಕ್ಕೀಡಾದ ನಿರ್ಗತಿಕರು, ಭಿಕ್ಷುಕರು, ವಲಸೆ ಕಾರ್ಮಿಕರನ್ನು ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಅವರು ಉತ್ತಮ ರೀತಿಯಲ್ಲಿ ಉಪಚರಿಸುತ್ತಿದ್ದಾರೆ. ಕೊರೋನ ಪಾಸಿಟಿವ್ ಆಗಿ ಪುರಸಭೆ ವ್ಯಾಪ್ತಿಯ ಬಂಟ್ವಾಳ ಪೇಟೆ ಸೀಲ್ ಆದ ಬಳಿಕ ಪುರಸಭೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ. ಲಾಕ್ಡೌನ್ ಬಳಿಕ ಮುಖ್ಯಾಧಿಕಾರಿ ಸಹಿತ ಅವರ ತಂಡ ರವಿವಾರ ಕೂಡಾ ರಜೆ ಮಾಡದೆ ಕೆಲಸ ಮಾಡುತ್ತಿದೆ. ಇವರ ಕೆಲಸ ರಾಜ್ಯಕ್ಕೆ ಮಾದರಿಯಾಗಿದೆ. ಕೊರೋನ ವೈರಸ್ ನಿಯಂತ್ರಿಸಲು ಅಧಿಕಾರಿಗಳೊಂದಿಗೆ ಸಾರ್ವಜನಿಕರು ಕೂಡಾ ಸಹಕರಿಸಬೇಕು.
- ಲುಕ್ಮಾನ್ ಬಿ.ಸಿ.ರೋಡ್,
ಪುರಸಭಾ ಸದಸ್ಯ