ಬಂಟ್ವಾಳ ಪುರಸಭೆಗೆ ಮೀಸಲಾತಿ ಪ್ರಕಟ: ಗದ್ದುಗೆ ಏರಲು ಕಾಂಗ್ರೆಸ್, ಬಿಜೆಪಿ ತಂತ್ರ
*ಎಸ್ಡಿಪಿಐ ಪಾತ್ರ ನಿರ್ಣಾಯಕ
ಬಂಟ್ವಾಳ, ಅ.10: ಕೊನೆಗೂ ಬಂಟ್ವಾಳ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದ್ದು, ಪುರಸಭೆಯ ಗದ್ದುಗೆ ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯತಂತ್ರವನ್ನು ಆರಂಭಿಸಿದೆ. ಆದರೆ ಇಲ್ಲಿ ಯಾರು ಅಧಿಕಾರ ಹಿಡಿಯುವುದಾದರೂ ಎಸ್ಡಿಪಿಐ ಪಾತ್ರ ನಿರ್ಣಾಯಕವಾಗಲಿದೆ.
ಪುರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಮಹಿಳೆಗೆ ಮೀಸಲಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಲ್ಲ 27 ಸದಸ್ಯರೂ ಅರ್ಹರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಹಿಂದುಳಿದ ವರ್ಗ ಬಿಗೆ ಸೇರಿದ ಮಹಿಳಾ ಸದಸ್ಯರು ಇದ್ದಾರೆ. ಎಸ್ಡಿಪಿಐಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಯಾವ ಸದಸ್ಯರೂ ಅರ್ಹರಿಲ್ಲ. ಹೀಗಾಗಿ ಬಂಟ್ವಾಳ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಕುತೂಹಲಕಾರಿಯಾಗಿ ಮಾರ್ಪಟ್ಟಿದೆ.
ಪುರಸಭೆಗೆ 2018ರಲ್ಲಿ ಚುನಾವಣೆ ನಡೆದಿದ್ದು ಒಂದು ಬಾರಿ ಮೀಸಲಾತಿ ಪ್ರಕಟಗೊಂಡಿತ್ತು. ಆದರೆ ಮೀಸಲಾತಿ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವಿಳಂಬಗೊಂಡಿತು. ಇದೀಗ ಮತ್ತೆ ಮೀಸಲಾತಿ ಘೋಷಣೆಯಾಗಿದ್ದು ಆದಷ್ಟು ಬೇಗ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸರಕಾರ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.
ಪುರಸಭೆಯ ಒಟ್ಟು 27 ಸ್ಥಾನಗಳ ಪೈಕಿ, ಕಾಂಗ್ರೆಸ್ 12, ಬಿಜೆಪಿ 11, ಎಸ್ಡಿಪಿಐ 4 ಸ್ಥಾನಗಳನ್ನು ಗೆದ್ದಿವೆ. ಬಂಟ್ವಾಳ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಲೋಕಸಭೆ ಮತ್ತು ವಿಧಾನಸಭೆಯ ಸದಸ್ಯರ ಮತವೂ ಸೇರುತ್ತದೆ. ಹೀಗಾಗಿ ಒಟ್ಟು 29 ಮಂದಿ ಮತದಾನದ ಹಕ್ಕನ್ನು ಹೊಂದಿದ್ದು ಬಹುಮತಕ್ಕೆ 15 ಮತಗಳು ಅಗತ್ಯವಾಗಿದೆ. ಲೋಕಸಭೆ ಮತ್ತು ವಿಧಾನಸಭೆಯ ಸದಸ್ಯರು ಬಿಜೆಪಿಯವರೇ ಆಗಿರುವುದರಿಂದ ಪುರಸಭೆಯಲ್ಲಿ ಬಿಜೆಪಿಯ ಬಲ 13ಕ್ಕೆ ಏರಲಿದೆ. ಹೀಗಾಗಿ ಬಂಟ್ವಾಳ ಪುರಸಭೆಯಲ್ಲಿ ಸದ್ಯ ಬಿಜೆಪಿ ಬಹುಮತವನ್ನು ಹೊಂದಿದೆ. ಆದರೆ ಕೊನೆ ಗಳಿಗೆಯಲ್ಲಿ ಬಂಡಾಯ, ಮೈತ್ರಿ, ಅಡ್ಡ ಮತದಾನ ಈ ಲೆಕ್ಕಾಚಾರಗಳನ್ನು ಬುಡಮೇಲು ಮಾಡುವ ಸಾಧ್ಯತೆಯೂ ಇದೆ.
ಎಸ್ಡಿಪಿಐ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೂ ಎಸ್ಡಿಪಿಐ ಬಳಿ ಉಪಾಧ್ಯಕ್ಷ ಸ್ಥಾನಕ್ಕೆ ಅರ್ಹ ಸದಸ್ಯರಿಲ್ಲ. 12 ಸ್ಥಾನವನ್ನು ಹೊಂದಿರುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಎಸ್ಡಿಪಿಐಗೆ ಬಿಟ್ಟು ಕೊಡುವುದು ಕಷ್ಟ. ಹೀಗಾಗಿ ಇವೆರಡು ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಬಿಜೆಪಿ ಸುಲಭವಾಗಿ ಗದ್ದುಗೆ ಏರಲಿದೆ. ಒಂದು ವೇಳೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಇಟ್ಟುಕೊಂಡು ಅಭಿವೃದ್ಧಿಯಲ್ಲಿ ಸಿಂಹಪಾಲು ಒಪ್ಪಂದದ ಮೂಲಕ ಎಸ್ಡಿಪಿಐಯ ಬೆಂಬಲ ಪಡೆಯುವಲ್ಲಿ ಯಶಸ್ವಿಯಾದರೆ ಬಿಜೆಪಿ ವಿರೋಧ ಪಕ್ಷವಾಗಿ ಉಳಿಯಲಿದೆ. ಆದರೆ ಮಾಜಿ ಸಚಿವ ರಮಾನಾಥ ರೈ ಈ ಹಿಂದಿನಿಂದಲೂ ಬಂಟ್ವಾಳ ಪುರಸಭೆಯಲ್ಲಿ ಎಸ್ಡಿಪಿಐ ಜೊತೆ ಮೈತ್ರಿ ಮಾಡುವುದಿಲ್ಲ ಎಂದು ಹೇಳುತ್ತಾ ಬಂದಿದ್ದು ಅವರ ಮುಂದಿನ ನಡೆ ಕಾದು ನೋಡಬೇಕಿದೆ.
ಸದ್ಯ ಪುರಸಭೆಯ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್, ಬಿಜೆಪಿಯಿಂದ ತಂತ್ರಗಳು ಆರಂಭಗೊಂಡಿವೆ.
ಎರಡು ವರ್ಷ ಬೋನಸ್!
ಬಂಟ್ವಾಳ ಪುರಸಭೆಗೆ ಚುನಾವಣೆ ನಡೆದು ಎರಡು ವರ್ಷಗಳೇ ಕಳೆದರೂ ಮೀಸಲಾತಿ ತಕರಾರಿನಿಂದ ಇನ್ನೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಆಗಿಲ್ಲ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿ ಸದಸ್ಯರ ಮೊದಲ ಮಾಸಿಕ ಸಭೆ ನಡೆದ ದಿನಾಂಕದಿಂದ ಮುಂದಿನ ಐದು ವರ್ಷಗಳ ವರೆಗೆ ಅಧಿಕಾರ ಅವಧಿ ಇರಲಿದೆ. ಹೀಗಾಗಿ ಶೀಘ್ರದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದರೆ ಪುರಸಭೆಯ ಹಾಲಿ ಸದಸ್ಯರು ಆಯ್ಕೆಯಾಗಿ ಏಳು ವರ್ಷ ಅಧಿಕಾರದಲ್ಲಿ ಇರಲಿದ್ದು, ಎರಡು ವರ್ಷ ಬೋನಸ್ ಆಗಲಿದೆ.
ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಯಾರ ಜೊತೆಯೂ ಮೈತ್ರಿ ಮಾಡುವುದಿಲ್ಲ. ಎರಡು ಸ್ಥಾನಕ್ಕೂ ಅರ್ಹರಾದ ಸದಸ್ಯರು ಕಾಂಗ್ರೆಸ್ನಲ್ಲಿ ಇದ್ದು ಎರಡೂ ಸ್ಥಾನಕ್ಕೂ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
- ಬಿ.ರಮಾನಾಥ ರೈ, ಮಾಜಿ ಸಚಿವ
ಸಂಸದ, ಶಾಸಕ ಸೇರಿ ಬಂಟ್ವಾಳ ಪುರಸಭೆಯಲ್ಲಿ ಬಿಜೆಪಿಗೆ ಬಹುಮತ ಇದೆ. ಒಂದು ವೇಳೆ ಕಾಂಗ್ರೆಸ್ ಮತ್ತು ಎಸ್ಡಿಪಿಐ ಮೈತ್ರಿ ಮಾಡಿದರೆ ಬಿಜೆಪಿ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲಿದೆ. ಚುನಾವಣೆಗೆ ದಿನಾಂಕ ಪ್ರಕಟವಾದ ಬಳಿಕ ಪಕ್ಷದ ಸಭೆ ಕರೆದು ಅಭ್ಯರ್ಥಿಗಳ ಆಯ್ಕೆ ಸಹಿತ ಇತರ ವಿಷಯಗಳ ಬಗ್ಗೆ ಚರ್ಚಿಸಲಾಗುವುದು.
- ದೇವದಾಸ ಶೆಟ್ಟಿ, ಬಂಟ್ವಾಳ ವಿ.ಸ. ಕ್ಷೇತ್ರದ ಬಿಜೆಪಿ ಚುನಾವಣಾ ಪ್ರಭಾರಿ
ಎಸ್ಡಿಪಿಐಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಬೇಕಾದ ಸದಸ್ಯರಿಲ್ಲ. ಅಧ್ಯಕ್ಷ ಸ್ಥಾನ ಎಸ್.ಡಿ.ಪಿ.ಐ.ಗೆ ನೀಡಿದರೆ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಗೆ ಬೆಂಬಲ ನೀಡಲಾಗುವುದು. ಇಲ್ಲದಿದ್ದರೆ ಅಧ್ಯಕ್ಷ ಸ್ಥಾನಕ್ಕೆ ಎಸ್ಡಿಪಿಐ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಚುನಾವಣೆಗೆ ದಿನಾಂಕ ಘೋಷಣೆ ಆದ ಬಳಿಕ ಪಕ್ಷದ ಮುಖಂಡರ, ಕಾರ್ಯಕರ್ತರ ಸಭೆ ಕರೆದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು.
- ಶಾಹುಲ್ ಹಮೀದ್, ಎಸ್ಡಿಪಿಐ ದ.ಕ. ಜಿಲ್ಲಾ ಪ್ರ. ಕಾರ್ಯದರ್ಶಿ