ರಶ್ಯದ ಉಕ್ರೇನ್ ಮೇಲಿನ ಆಕ್ರಮಣವೂ ಜಾಗತಿಕ ಶಕ್ತಿಗಳ ಹಿಡಿತದಲ್ಲಿನ ಪಲ್ಲಟವೂ
ಜಾಗತಿಕ ಹಿಡಿತ ಸಾಧಿಸುವಲ್ಲಿ ಅಮೆರಿಕ ನೇತೃತ್ವದ ಬಣವಾಗಲೀ ಚೀನಾ-ರಶ್ಯ ನೇತೃತ್ವದ ಬಣವಾಗಲೀ ಗೆಲುವು ಸಾಧಿಸುವುದರಿಂದ ಜಗತ್ತಿನ ಜನಸಾಮಾನ್ಯರಿಗೆ ಅನುಕೂಲವೇನೂ ಆಗುವುದಿಲ್ಲ. ಅಮೆರಿಕದ ಏಕ ಶಕ್ತಿಯ ಮೇಲಾಳ್ವಿಕೆಗೆ ಸ್ವಲ್ಪತಡೆಗಳುಂಟಾಗಿ ಅದರ ಅಲ್ಪಸ್ವಲ್ಪಲಾಭ ಸದ್ಯಕ್ಕೆ ದೊರೆಯಬಹುದು ಅಷ್ಟೆ. ಜಾಗತಿಕ ಲೂಟಿ ಹಾಗೂ ಹಿಡಿತದ ಮುಖಗಳ ಬದಲಾವಣೆಯಾಗಬಹುದು. ಆದರೆ ಅದರಿಂದ ಜಾಗತಿಕ ಶಾಂತಿ, ಭದ್ರತೆ, ಸಾಮರಸ್ಯ ಖಾತರಿಯಾಗದು. ಯುದ್ಧ ಭೀತಿಯೂ ಅಂತ್ಯವಾಗದು. ಯುದ್ಧಗಳು ಯಾವಾಗ ಬೇಕಾದರೂ ಸ್ಫೋಟಗೊಳ್ಳುವಂತಹ ಪರಿಸ್ಥಿತಿ ನಿರಂತರವಾಗಿರುತ್ತದೆ.
ಉಕ್ರೇನ್ ಮೇಲಿನ ರಶ್ಯದ ನೇರ ಸೇನಾ ದಾಳಿಗಳು ಒಂದು ವಾರಕ್ಕೂ ಹೆಚ್ಚು ಕಾಲದಿಂದ ಮುಂದುವರಿದಿವೆ. ಉಕ್ರೇನ್ನ ಪೂರ್ವಭಾಗಗಳನ್ನು ಆಕ್ರಮಿಸಿಕೊಳ್ಳುತ್ತಾ ಉಕ್ರೇನ್ ರಾಜಧಾನಿ ಕೀವ್ ಅನ್ನು ವಶಪಡಿಸುವ ಹಂತದಲ್ಲಿ ರಶ್ಯ ಮುಂದುವರಿದಿದೆ. ಚೆರ್ನೊಬಿಲ್ ಸೇರಿದಂತೆ ಉಕ್ರೇನ್ನ ಎರಡು ಅಣು ವಿದ್ಯುತ್ ಸ್ಥಾವರಗಳನ್ನು ರಶ್ಯ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಇದರಿಂದಾಗಿ ನೂರಾರು ಜನರು ಸಾವಿಗೀಡಾಗಿದ್ದಾರೆ. ಉಕ್ರೇನ್ನ ಜನರ ಆಸ್ತಿಪಾಸ್ತಿಗಳು ನಾಶವಾಗುತ್ತಿವೆ. ಒಂದು ಮಿಲಿಯನ್ಗಿಂತಲೂ ಹೆಚ್ಚು ಉಕ್ರೇನಿಯನ್ನರು ನಿರಾಶ್ರಿತರಾಗಿ ಪಕ್ಕದ ಐರೋಪ್ಯ ರಾಷ್ಟ್ರಗಳಿಗೆ ಈಗಾಗಲೇ ವಲಸೆ ಹೋಗಿದ್ದಾರೆ ಎಂಬ ವರದಿಗಳು ಬರುತ್ತಿವೆ. ದಾಳಿಗಳು ಮತ್ತೂ ಮುಂದುವರಿದಲ್ಲಿ ವಲಸೆ ಸಮಸ್ಯೆ ಐರೋಪ್ಯ ರಾಷ್ಟ್ರಗಳನ್ನು ಬಾಧಿಸಲಿದೆ. ಇದು ನ್ಯಾಟೊ ರಾಷ್ಟ್ರಗಳೊಳಗೆ ಬಿಕ್ಕಟ್ಟಿಗೆ ಒಂದು ಕಾರಣವಾಗಲಿದೆ.
ಅಮೆರಿಕ ಹಾಗೂ ನ್ಯಾಟೊ ರಶ್ಯದ ಮೇಲೆ ಭಾರೀ ಆರ್ಥಿಕ ನಿರ್ಬಂಧಗಳನ್ನು ಹೇರುತ್ತಾ ಸಾಗಿವೆ. ಆಂಶಿಕವಾಗಿ ಸೊಸೈಟಿ ಫಾರ್ ವರ್ಲ್ಡ್ ವೈಡ್ ಇಂಟರ್ ಬ್ಯಾಂಕ್ ಫೈನಾನ್ಷಿಯಲ್ ಟೆಲಿಕಮ್ಯೂನಿಕೇಶನ್ (SWIFT) ವ್ಯವಸ್ಥೆಯಿಂದ ಹಾಗೂ ಪಾಶ್ಚಿಮಾತ್ಯ ಅಂತರ್ರಾಷ್ಟ್ರೀಯ ಬ್ಯಾಂಕಿಂಗ್ ವ್ಯವಸ್ಥೆಯಿಂದ ರಶ್ಯವನ್ನು ಹೊರಗಿಡಲಾಗಿದೆ. ರಶ್ಯದಿಂದ ಯೂರೋಪಿಗೆ ನೇರವಾಗಿ ಕೊಳವೆ ಮೂಲಕ ನೈಸರ್ಗಿಕ ಅನಿಲ ಹಾಗೂ ತೈಲ ಸರಬರಾಜಿನ ಎರಡನೇ ಯೋಜನೆಯಾದ ನಾರ್ಡ್ ಸ್ಟ್ರೀಮ್-2 ಜಾರಿಯಾಗದಂತೆ ನಿರ್ಬಂಧಿಸಲಾಗಿದೆ.ಇದು ನೇರವಾಗಿ ಐರೋಪ್ಯ ರಾಷ್ಟ್ರ ಜರ್ಮನಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಆದರೆ ಈಗಾಗಲೇ ಜಾರಿಯಾಗಿರುವ ನಾರ್ಡ್ ಸ್ಟ್ರೀಮ್ 1 ಈಗಲೂ ಚಾಲ್ತಿಯಲ್ಲಿದೆ. ಒಟ್ಟಾರೆ ನಾರ್ಡ್ ಸ್ಟ್ರೀಮ್ ಯೋಜನೆಯನ್ನು ತಡೆಯಲು ಅಮೆರಿಕ ಹಲವಾರು ಪ್ರಯತ್ನಗಳನ್ನು ನಡೆಸುತ್ತಲೇ ಬಂದಿತ್ತು. ಜರ್ಮನಿಯ ಮೇಲೆ ಹಲವಾರು ರೀತಿಯಲ್ಲಿ ಒತ್ತಡಗಳನ್ನು ಹಾಕಿತ್ತು. ಯೋಜನೆ ನಿರ್ಮಾಣದ ಕಂಪೆನಿಗಳ ಮೇಲೆ ಅಮೆರಿಕ ನಿರ್ಬಂಧವನ್ನು ಹೇರಿತ್ತು. ಕೊನೆಗೆ ರಶ್ಯ ಆ ಯೋಜನೆಯ ನಿರ್ಮಾಣವನ್ನು ಪೂರ್ಣಗೊಳಿಸಿತ್ತು. ಬಾಲ್ಟಿಕ್ ಸಮುದ್ರದಡಿಯಲ್ಲಿ ಹಾದು ಹೋಗುವ 1,222 ಕಿ.ಮೀಟರುಗಳ ಆ ಕೊಳವೆ ಸಂಪರ್ಕವನ್ನು ಬಾಂಬ್ ದಾಳಿಗೆ ಒಳಪಡಿಸುವ ಬೆದರಿಕೆಯನ್ನೂ ಅಮೆರಿಕ ಹಾಕಿದೆ ಎಂದು ಹೇಳಲಾಗುತ್ತಿದೆ.
ಅಂತರ್ರಾಷ್ಟ್ರೀಯ ಶೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತಗಳು ಕಾಣಿಸತೊಡಗಿವೆ. ಇದರಿಂದಾಗಿ ಕೆಲವು ದೊಡ್ಡ ಕಾರ್ಪೊರೇಟ್ಗಳ ಸಂಪತ್ತು ಕರಗುತ್ತಾ ಸಾಗುತ್ತಿದೆ. ಇಂಡಿಯಾದಲ್ಲೂ ಇದು ಕಾಣಿಸುತ್ತಿದೆ. ಜಾಗತಿಕವಾಗಿ ಪೆಟ್ರೋಲ್ ಹಾಗೂ ಅನಿಲದ ಸರಬರಾಜು ಹಾಗೂ ಬೆಲೆಗಳ ಮೇಲೆ ಬಹಳ ಪರಿಣಾಮ ಬೀರತೊಡಗಿದೆ. ಅಂತರ್ರಾಷ್ಟ್ರೀಯ ವ್ಯಾಪಾರ ವ್ಯವಹಾರಗಳು ಕಡಿತವಾಗುತ್ತಾ ಸಾಗಿದೆ. ರಶ್ಯದ ಮೇಲೆ ಹೇರುವ ನಿರ್ಬಂಧಗಳು ಕೇವಲ ರಶ್ಯವನ್ನು ಮಾತ್ರ ಬಾಧಿಸುವುದಿಲ್ಲ ಬದಲಿಗೆ ಯೂರೋಪ್, ಅಮೆರಿಕ ಸೇರಿದಂತೆ ಹಲವಾರು ರಾಷ್ಟ್ರಗಳನ್ನು ನೇರವಾಗಿ ಹಾಗೂ ಪರೋಕ್ಷವಾಗಿ ಬಾಧಿಸುತ್ತದೆ. ಯೂರೋಪ್ ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳು ರಶ್ಯದ ಸೇನಾ ವಸ್ತುಗಳು, ತೈಲ ಮತ್ತು ಅನಿಲ, ಆಹಾರ ವಸ್ತುಗಳು, ಖನಿಜಗಳನ್ನು ಅವಲಂಬಿಸಿವೆ. ರಶ್ಯ ತನ್ನ ಮೇಲಿನ ಆರ್ಥಿಕ ನಿರ್ಬಂಧಗಳನ್ನು ಹೇರುವ ರಾಷ್ಟ್ರಗಳ ಮೇಲೆ ಪ್ರತೀಕಾರವಾದ ಕ್ರಮಗಳನ್ನು ತೆಗೆದುಕೊಳ್ಳತೊಡಗಿದೆ.
ಚೀನಾ, ರಶ್ಯ ಮೇಲಿನ ಅಮೆರಿಕ ಹಾಗೂ ನ್ಯಾಟೊ ನಿರ್ಬಂಧಗಳನ್ನು ಒಪ್ಪುವುದಿಲ್ಲ ಎಂದು ಬಹಿರಂಗಪಡಿಸಿದೆ. ಅದೇ ರೀತಿ ಇರಾನ್, ಕ್ಯೂಬಾ, ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳು ಕೂಡ ಒಪ್ಪದು. ಇಂಡಿಯಾ ಶೇಕಡಾ 70ರಷ್ಟು ಸೇನಾ ಸಾಮಗ್ರಿಗಳಿಗೆ ರಶ್ಯವನ್ನು ಅವಲಂಬಿಸಿದೆ. ಹಾಗಾಗಿ ರಶ್ಯದ ಮೇಲಿನ ನಿರ್ಬಂಧಗಳನ್ನು ಇಂಡಿಯಾ ಪಾಲಿಸುವುದು ಕಷ್ಟ. ರಶ್ಯದ ಉಕ್ರೇನ್ ಆಕ್ರಮಣದ ವಿರುದ್ಧದ ನಿರ್ಣಯದ ಪರವಾಗಿ ವಿಶ್ವ ಸಂಸ್ಥೆಯಲ್ಲಿ ಮತ ಚಲಾಯಿಸುವುದರಿಂದ ಭಾರತ ಹೊರಗೆ ಉಳಿದಿದ್ದನ್ನು ಗಮನಿಸಬಹುದು. ಅಲ್ಲದೆ ಉಕ್ರೇನ್ ಮೇಲಿನ ಆಕ್ರಮಣವನ್ನು ಭಾರತ ಮತ್ತು ಚೀನಾ ಇದುವರೆಗೂ ಖಂಡಿಸಲಿಲ್ಲ. ರಶ್ಯ ತನ್ನ ವೀಟೊ ಅಧಿಕಾರ ಬಳಸಿ ಆ ನಿರ್ಣಯವನ್ನು ತಡೆಯಿತು. ರಶ್ಯ-ಉಕ್ರೇನ್ ಯುದ್ಧಕ್ಕೆ ಕಾರಣಕರ್ತರಾದ ಅಮೆರಿಕ, ನ್ಯಾಟೊ ರಾಷ್ಟ್ರಗಳ, ಹಾಗೂ ರಶ್ಯ ಮತ್ತು ಚೀನಾದ ಸಾಮ್ರಾಜ್ಯಶಾಹಿ ಶಕ್ತಿಗಳು ತಮ್ಮ ಗುರಿ ಮುಟ್ಟುವವರೆಗೆ ಈ ಯುದ್ಧವನ್ನು ಸದ್ಯಕ್ಕೆ ನಿಲ್ಲಿಸುವಂತೆ ಕಾಣುತ್ತಿಲ್ಲ. ಬದಲಿಗೆ ಮತ್ತಷ್ಟು ವಿಸ್ತರಿಸುವಂತಹ ನಡೆಗಳನ್ನು ನಡೆಸುತ್ತಿವೆ. ಅಮೆರಿಕ ಮತ್ತು ನ್ಯಾಟೊ ಉಕ್ರೇನ್ನ ಸೇನೆಗೆ ಭಾರೀ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿವೆ. ರಶ್ಯದ ವಿರುದ್ಧ ಅಂತರ್ರಾಷ್ಟ್ರೀಯ ಪ್ರಚಾರಯುದ್ಧವನ್ನು ಬಿರುಸುಗೊಳಿಸಿವೆ. ಆದರೆ ರಶ್ಯ ಮತ್ತು ಚೀನಾ ಉಕ್ರೇನ್ ಅನ್ನು ನಿಶ್ಯಸ್ತ್ರಗೊಳಿಸಿ, ನ್ಯಾಟೊ ವಿಸ್ತರಣೆಗೆ ತಡೆ ಹಾಕುವ ಕಾರ್ಯದಲ್ಲಿ ಮೇಲುಗೈ ಸಾಧಿಸಿದಾಗ ಯುದ್ಧವನ್ನು ನಿಲ್ಲಿಸಬಹುದು. ಆದರೆ ಅಮೆರಿಕ ಮತ್ತದರ ಕೆಲವು ನ್ಯಾಟೊ ರಾಷ್ಟ್ರಗಳಿಗೆ ಯುದ್ಧ ಮುಂದುವರಿಯಬೇಕಾಗಿದೆ. ಆ ಮೂಲಕ ರಶ್ಯವನ್ನು ಏಕಾಂಗಿಯಾಗಿಸುವ ಇಲ್ಲವೇ ತಟಸ್ಥಗೊಳಿಸುವ, ಚೀನಾವನ್ನು ಕಟ್ಟಿ ಹಾಕುವ ಉದ್ದೇಶವನ್ನು ಸೇನಾನಷ್ಟವಿಲ್ಲದೇ ಸಾಧಿಸಬೇಕಾಗಿದೆ.
ಉಕ್ರೇನ್ನ ಅಧ್ಯಕ್ಷ ಝೆಲೆನ್ಸ್ಕಿ ಅಮೆರಿಕ ಮತ್ತು ನ್ಯಾಟೊ ತಮ್ಮ ಪಡೆಗಳನ್ನು ನೇರವಾಗಿ ಉಕ್ರೇನ್ನ ಪರವಾಗಿ ಕಳಿಸುವಂತೆ ಅಪಾಯಕಾರಿಯಾದ ಒತ್ತಾಯವನ್ನು ಮೊದಲಿನಿಂದಲೂ ಪದೇ ಪದೇ ಮಾಡುತ್ತಾ ಬರುತ್ತಿದ್ದಾರೆ. ಇದೀಗ ನ್ಯಾಟೊ ಉಕ್ರೇನ್ನ ವಾಯುಪ್ರದೇಶವನ್ನು ವಾಯು ಹಾರಾಟ ಮುಕ್ತ ವಲಯವನ್ನಾಗಿ ಘೋಷಿಸಬೇಕೆಂಬ ಒತ್ತಾಯವನ್ನು ಝೆಲೆನ್ಸ್ಕಿ ಮಾಡಿದ್ದರ ಬೆನ್ನ ಹಿಂದೆಯೇ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಂತಹ ಕ್ರಮಗಳಿಗೆ ಮುಂದಾದರೆ ಅಂತಹ ರಾಷ್ಟ್ರಗಳು ನೇರವಾಗಿ ರಶ್ಯದ ಮೇಲೆ ಯುದ್ಧ ಘೋಷಿಸಿರುವುದಾಗಿ ನಾವು ಪರಿಗಣಿಸುತ್ತೇವೆ ಎಂದಿದ್ದಾರೆ. ಅಮೆರಿಕ ಮತ್ತು ನ್ಯಾಟೊ ನೇರವಾಗಿ ಯುದ್ಧದಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದನ್ನು ಪುನರುಚ್ಚರಿಸುತ್ತಾ ಬಂದಿವೆ. ಆದರೆ ಪ್ರಚೋದನಾಕಾರಿಯಾಗಿ ವ್ಯವಹರಿಸುತ್ತಿವೆ.
ರಶ್ಯವನ್ನು ಯುದ್ಧಕ್ಕೆ ಇಳಿಯುವಂತೆ ಮಾಡಲು ಅಮೆರಿಕದ ಪ್ರಯತ್ನ ಆರಂಭವಾಗಿ ಹಲವು ವರ್ಷಗಳಾಗುತ್ತಾ ಬಂದಿವೆ. ಯಾಕೆಂದರೆ ಜಗತ್ತಿನ ದೊಡ್ಡ ಸೈನಿಕ ಶಕ್ತಿಯಾಗಿರುವ ರಶ್ಯದ ಅಂತರ್ರಾಷ್ಟ್ರೀಯ ವ್ಯಾಪಾರಗಳನ್ನು ಹಾಳುಗೆಡವಿ ಅದರ ಜಾಗದಲ್ಲಿ ತನ್ನನ್ನು ಸಂಪೂರ್ಣವಾಗಿ ಸ್ಥಾಪಿಸಿಕೊಳ್ಳುವ ಹುನ್ನಾರ ಅಮೆರಿಕದ್ದಾಗಿದೆ. ಅದರಂತೆ ರಶ್ಯದೊಂದಿಗಿನ ಒಪ್ಪಂದವನ್ನು ಉಲ್ಲಂಘಿಸಿ ನ್ಯಾಟೊವನ್ನು ಪೂರ್ವ ಯೂರೋಪಿನ ರಾಷ್ಟ್ರಗಳಿಗೆ ವಿಸ್ತರಿಸುತ್ತಾ ಸಾಗಿ ರಶ್ಯವನ್ನು ಏಕಾಂಗಿಗೊಳಿಸಿ ಸೇನಾತ್ಮಕವಾಗಿ ಮತ್ತು ಆರ್ಥಿಕವಾಗಿ ಸುತ್ತುವರಿಯುವ ನಡೆಗಳನ್ನು ನಡೆಸುತ್ತಾ ಬರಲಾಗಿತ್ತು. ರಶ್ಯವನ್ನು ಗುರಿಯಾಗಿರಿಸಿ ಪೋಲ್ಯಾಂಡ್, ರೊಮೇನಿಯಾ, ಝೆಕ್ ರಿಪಬ್ಲಿಕ್, ಸ್ಲೋವಾಕಿಯಾ, ಹಂಗೇರಿ, ಬಲ್ಗೇರಿಯಾ ಮೊದಲಾದ ರಶ್ಯ ಸುತ್ತಮುತ್ತಲಿನ ರಾಷ್ಟ್ರಗಳಲ್ಲಿ ಕ್ಷಿಪಣಿಗಳನ್ನು ನಿಲ್ಲಿಸಲಾಗಿತ್ತು. ಅದನ್ನು ‘ಬಿ9 ಫರ್ಮಾಟ್’ ಎಂದು ಸೇನಾತ್ಮಕವಾಗಿ ಹೆಸರಿಸಲಾಗಿದೆ. ಪೂರ್ವ ಯೂರೋಪಿನ ಹಲವಾರು ರಾಷ್ಟ್ರಗಳ ಸರಕಾರಗಳನ್ನು ತಮ್ಮ ಕೈಗೊಂಬೆಯಾಗುವಂತೆ ಒತ್ತಡ ತಂತ್ರ ಮತ್ತು ಬುಡಮೇಲು ಕೃತ್ಯಗಳ ಮೂಲಕ ಮಾಡಿಕೊಂಡು ರಶ್ಯದ ಹಿತಾಸಕ್ತಿಗಳಿಗೆ ಹೊಡೆತ ಕೊಡಲಾಗಿತ್ತು. ಸಿರಿಯಾ, ಚೆಚನ್ಯಗಳಂತಹ ಕೆಲ ರಾಷ್ಟ್ರಗಳಲ್ಲಿ ಅಮೆರಿಕದ ಅಂತಹ ನಡೆಗಳನ್ನು ರಶ್ಯ ತಡೆದು ನಿಲ್ಲಿಸಿತ್ತು.
ರಶ್ಯ-ಉಕ್ರೇನ್ ಬಿಕ್ಕಟ್ಟನ್ನು ನಾವು ಗ್ರಹಿಸಬೇಕಾದರೆ ಅಮೆರಿಕ ಮತ್ತು ನ್ಯಾಟೊದ ಪರಿಸ್ಥಿತಿಯನ್ನು ಅವಲೋಕಿಸಬೇಕಾಗುತ್ತದೆ. ಅಮೆರಿಕ ಜಗತ್ತಿನ ಅತೀ ದೊಡ್ಡ ಆರ್ಥಿಕತೆಯೆಂದೇ ಹೇಳಲಾಗುತ್ತಿದೆ. ಆದರೆ ಅದೇ ವೇಳೆಯಲ್ಲಿ ಅಮೆರಿಕ ಜಗತ್ತಿನ ಅತೀ ದೊಡ್ಡ ಸಾಲಗಾರ ರಾಷ್ಟ್ರವೆಂದು ಅದರ ಅಂಕಿ -ಅಂಶಗಳು ಹೇಳುತ್ತವೆ.
ಅದರ ಆಂತರಿಕ ಸಾಲವೇ ಮೂವತ್ತು ಟ್ರಿಲಿಯನ್ ಡಾಲರ್ಗಳಿಗೂ ಹೆಚ್ಚು ಇದೆ. ಇದು ಅದರ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕಿಂತಲೂ ಏಳು ಟ್ರಿಲಿಯನ್ ಡಾಲರ್ಗಳಷ್ಟು ಹೆಚ್ಚಿನದಾಗಿದೆ. ಇನ್ನು ಬಾಹ್ಯ ಸಾಲ 2,25,95,448 ದಶಲಕ್ಷ ಅಮೆರಿಕನ್ ಡಾಲರ್ಗಳಾಗಿದ್ದವು ಎಂದು 2021ರ ಎರಡನೇ ತ್ರೈಮಾಸಿಕದ ಸರಕಾರಿ ಅಂಕಿ-ಅಂಶ ಹೇಳುತ್ತದೆ. 2022ರ ಫೆಬ್ರವರಿ ವೇಳೆಗೆ ಅಮೆರಿಕಕ್ಕೆ ಬಾಹ್ಯ ಸಾಲದಲ್ಲಿ ಜಪಾನಿನ ಸಾಲ 1,304 ಬಿಲಿಯನ್ ಡಾಲರ್ಗಳಷ್ಟು ಅಂದರೆ ಒಟ್ಟು ಬಾಹ್ಯ ಸಾಲದ ಶೇಕಡಾ 17ರಷ್ಟು ಇದ್ದರೆ ಎರಡನೇ ಅತೀ ಹೆಚ್ಚು ಸಾಲ ಅಂದರೆ 1,068 ಬಿಲಿಯನ್ ಅಮೆರಿಕನ್ ಡಾಲರ್ಗಳಷ್ಟು, ಸಾಲ ಚೀನಾದೊಂದಿಗೆ ಇತ್ತು. ಅದು ಒಟ್ಟು ಬಾಹ್ಯ ಸಾಲದ ಶೇಕಡಾ 14ರಷ್ಟು ಆಗಿದೆ. ಇದು ಅಮೆರಿಕ ಎದುರಿಸುತ್ತಿರುವ ಅಂತರಿಕ ಬಿಕ್ಕಟ್ಟಿನ ಪ್ರಮಾಣವನ್ನು ತೋರಿಸುತ್ತದೆ.
ಅಮೆರಿಕದ ರಾಜಕೀಯ ಆಗುಹೋಗುಗಳನ್ನು ನಿಯಂತ್ರಿಸುತ್ತಿರುವುದು ಸೇನಾ, ಶಸ್ತ್ರಾಸ್ತ್ರ, ತೈಲ, ಅನಿಲ, ಗಣಿಗಾರಿಕಾ, ಬ್ಯಾಂಕಿಂಗ್ ಹಾಗೂ ರಿಯಲ್ ಎಸ್ಟೇಟ್ ಕಾರ್ಪೊರೇಟ್ಗಳಾಗಿವೆ. ಈ ಕ್ಷೇತ್ರಗಳನ್ನು ಹಿಡಿತದಲ್ಲಿ ಇಟ್ಟುಕೊಂಡಿರುವ ಕೆಲವೇ ಕಾರ್ಪೊರೇಟ್ಗಳು ಅಮೆರಿಕದ ಪ್ರಜಾಪ್ರಭುತ್ವವನ್ನು ಹಾಗೆಯೇ ಜಾಗತಿಕ ಪ್ರಜಾಪ್ರಭುತ್ವವನ್ನೂ ಕೂಡ ತೀರ್ಮಾನಿಸುತ್ತವೆ. ಅಮೆರಿಕದ ಆಡಳಿತಗಾರರು ಒಂದಲ್ಲಾ ಒಂದು ರೀತಿಯಲ್ಲಿ ಈ ಕ್ಷೇತ್ರಗಳ ಕಾರ್ಪೊರೇಟ್ಗಳೊಂದಿಗೆ ನೇರವಾಗಿ ಇಲ್ಲವೇ ಪರೋಕ್ಷವಾಗಿ ಸಂಬಂಧಪಟ್ಟವರಾಗಿರುತ್ತಾರೆ. ಇದು ಜನಸಾಮಾನ್ಯರ ಪರಿಕಲ್ಪನೆಯ ಪ್ರಜಾಪ್ರಭುತ್ವದ ವ್ಯಂಗ್ಯವಾಗಿದೆ.
ಈಗ ರಶ್ಯ ಮತ್ತು ಉಕ್ರೇನ್ ಯುದ್ಧದಲ್ಲಿ ಅಮೆರಿಕದ ಈ ಕೆಲವೇ ಕಾರ್ಪೊರೇಟ್ಗಳ ಹಿತಾಸಕ್ತಿಗಳು ಪ್ರಧಾನವಾಗಿ ಕೆಲಸ ಮಾಡುತ್ತಿವೆ. ಆದರೆ ನೇರವಾಗಿ ರಶ್ಯದೊಂದಿಗೆ ಸೇನಾ ಸಮರಕ್ಕೆ ಹೋಗುವ ಪರಿಸ್ಥಿತಿಯಲ್ಲಿ ಅಮೆರಿಕ ಸದ್ಯಕ್ಕೆ ಇಲ್ಲ. ಅದು ಅವರಿಗೆ ದುಬಾರಿಯಾದುದು. ಜೊತೆಗೆ ಸ್ವತಹ ಅಮೆರಿಕದ ಜನಸಾಮಾನ್ಯರು ಅಮೆರಿಕ ನೇರವಾಗಿ ಯುದ್ಧದಲ್ಲಿ ತೊಡಗುವುದರ ವಿರುದ್ಧವಿದ್ದಾರೆ. ಅದರಿಂದಾಗಿ ರಾಜಕೀಯವಾಗಿಯೂ ಅಮೆರಿಕದ ಆಡಳಿತಗಾರರಿಗೆ ಗಿಟ್ಟುವುದು ಕಡಿಮೆಯೇ. ರಶ್ಯ ಕೂಡ ಯುದ್ಧವನ್ನು ಉಕ್ರೇನ್ನ ಆಚೆಗೆ ವಿಸ್ತರಿಸುವ ಇರಾದೆ ಹೊಂದಿದಂತೆ ಕಾಣುತ್ತಿಲ್ಲ. ರಶ್ಯ ಸದ್ಯಕ್ಕೆ ಉಕ್ರೇನ್ ಆಕ್ರಮಣದ ಮೂಲಕ ನ್ಯಾಟೊ ಹಾಗೂ ಅಮೆರಿಕದ ವಿಸ್ತರಣೆಗಳನ್ನು ಹಾಗೂ ತನ್ನ ಆರ್ಥಿಕ ತಡೆಗಳನ್ನು ನಿವಾರಿಸಿಕೊಂಡು, ಚೀನಾದೊಂದಿಗೆ ಸೇರಿಕೊಂಡು ಕೂಟ ರಚಿಸಿಕೊಂಡು ಜಾಗತಿಕ ಪ್ರಾಬಲ್ಯ ಹಾಗೂ ಪ್ರಭಾವವನ್ನು ಬೆಳಸಿಕೊಳ್ಳುವ ಉದ್ದೇಶ ಸ್ಪಷ್ಟವಾಗಿ ಹೊಂದಿದೆ.
ಅದೇ ವೇಳೆಯಲ್ಲಿ ಅಮೆರಿಕಕ್ಕೆ ಬೆಳೆಯುತ್ತಿರುವ ರಶ್ಯ ಮತ್ತು ಚೀನಾಗಳ ಜಾಗತಿಕ ಹಿಡಿತವನ್ನು ತಡೆದು ತಮ್ಮ ಆರ್ಥಿಕ ಹಾಗೂ ಸೇನಾ ಪ್ರಭಾವಗಳನ್ನು ಬೆಳಸಬೇಕು. ಹಾಗಾಗಿಯೇ ತಮ್ಮ ಕೈಗೊಂಬೆಯಾದ ಉಕ್ರೇನ್ನ ಅಧ್ಯಕ್ಷರನ್ನು ಇಟ್ಟುಕೊಂಡು ರಶ್ಯವನ್ನು ಯುದ್ಧಕ್ಕೆ ಎಳೆಯಲಾಗಿದೆ. ಅಮೆರಿಕ ಹಾಗೂ ನ್ಯಾಟೊ ಬಹಳ ಕಾಲದಿಂದ ರಶ್ಯ ವಿರೋಧಿ ಪ್ರಚಾರ ಹಾಗೂ ಪ್ರಚೋದನಕಾರಿ ಅಭಿಯಾನ ಕೈಗೊಂಡು ಅದರಂತೆ ಕಾರ್ಯಭಾರ ನಡೆಸುತ್ತಾ ಬಂದಿವೆ. ರಶ್ಯದಿಂದ ಯೂರೋಪಿಗೆ ಬೆದರಿಕೆಯಿದೆ ಎಂಬ ಪ್ರಚಾರವನ್ನು ಕೂಡ ನಡೆಸುತ್ತಾ ಬರಲಾಗಿದೆ.
ಅಮೆರಿಕದ ಈಗಿನ ಅಧ್ಯಕ್ಷ ಬೈಡನ್ ರಶ್ಯ-ಉಕ್ರೇನ್ ಅನ್ನು ಆಕ್ರಮಿಸಲಿದೆ ಎಂದು ನಿರಂತರವಾಗಿ ಹೇಳುತ್ತಲೇ ಬಂದಿದ್ದಾರೆ. ಕೊನೆಗದು ಎಷ್ಟು ಮಟ್ಟಕ್ಕೆಂದರೆ ಅವರೇ ರಶ್ಯದ ಅಧ್ಯಕ್ಷರೇನೋ ಎಂದು ಅನುಮಾನ ಬರುವಷ್ಟು ನೇರವಾಗಿ ದಿನವೂ ಹೇಳುತ್ತಾ ಬಂದಿದ್ದಾರೆ. ಉಕ್ರೇನ್ ವಿಚಾರದಲ್ಲಿ ಮಾತುಕತೆ, ಇನ್ನಿತರ ಒತ್ತಡ ತಂತ್ರ, ರಾಜತಾಂತ್ರಿಕ ನಡೆ ಇತ್ಯಾದಿ ಎಲ್ಲಾ ನಡೆಗಳನ್ನೂ ರಶ್ಯ ನಡೆಸುತ್ತಾ ಬಂದಿತ್ತು. ಆದರೆ ಝೆಲೆನ್ಸ್ಕಿ, ಅಮೆರಿಕ ಹಾಗೂ ನ್ಯಾಟೊ ನಡೆಗಳು ಅದಕ್ಕೆ ವಿರುದ್ಧವಾಗಿದ್ದು ರಶ್ಯದ ಹಿತಾಸಕ್ತಿಗಳಿಗೆ ನೇರವಾಗಿ ಮಾರಕವಾಗಿರುವುದರಿಂದಾಗಿ ರಶ್ಯ ನೇರವಾಗಿ ಉಕ್ರೇನ್ನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಸಾಹಸಕ್ಕೆ ಕೈಹಾಕಿದೆ.
ರಶ್ಯದ ಮೇಲಿನ ಅಮೆರಿಕ ನಿರ್ದೇಶಿತ ನಿರ್ಬಂಧಗಳ ಪರಿಣಾಮವಾಗಿ ರಶ್ಯ, ಚೀನಾ, ಇರಾನ್ ಮತ್ತು ಇತರ ರಾಷ್ಟ್ರಗಳು ಸೇರಿಕೊಂಡು ಪರ್ಯಾಯ ಜಾಗತಿಕ ಆರ್ಥಿಕ ವ್ಯವಹಾರಕ್ಕಾಗಿನ ತಮ್ಮದೇ ವ್ಯವಸ್ಥೆಯನ್ನು ರೂಪಿಸುವ ಸಾಧ್ಯತೆಗಳಿವೆ. ಸ್ವಿಫ್ಟ್ಗೆ ಬದಲಿಗೆ ತಮ್ಮದೇ ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ರೂಪಿಸಿಕೊಳ್ಳುವ ಸಾಧ್ಯತೆಗಳಿವೆ. ಈಗಾಗಲೇ ಇಂಡಿಯಾ ಸೇರಿದಂತೆ ನೂರ ಐದು ರಾಷ್ಟ್ರಗಳನ್ನು ಒಳಗೊಳಿಸಿಕೊಂಡು ಏಶ್ಯನ್ ಇನ್ ಫ್ರಾಸ್ಟ್ರಕ್ಚರ್ ಆ್ಯಂಡ್ ಡೆವಲಪ್ ಮೆಂಟ್ ಬ್ಯಾಂಕ್ ಅನ್ನು 2015ರಲ್ಲೇ ರೂಪಿಸಿ 2016ರಿಂದ ಚಾಲನೆಗೊಳಿಸಲಾಗಿದೆ.
ಹಾಗೆಯೇ ಬ್ರೆಝಿಲ್, ರಶ್ಯ, ಚೀನಾ, ಭಾರತ, ದಕ್ಷಿಣ ಆಫ್ರಿಕಾ, ಬಾಂಗ್ಲಾ ದೇಶ, ಈಜಿಪ್ಟ್, ಯುನೈಟೆಡ್ ಅರಬ್ ಎಮಿರೇಟ್ಸ್, ಉರುಗ್ವೆ ರಾಷ್ಟ್ರಗಳನ್ನು ಒಳಗೊಂಡಿರುವ ಬ್ರಿಕ್ಸ್ ರಾಷ್ಟ್ರಗಳ ಹೆಸರಿನ ತಮ್ಮದೇ ನ್ಯೂ ಡೆವಲಪ್ ಮೆಂಟ್ ಬ್ಯಾಂಕ್ ಎಂಬ ಬ್ಯಾಂಕಿಂಗ್ ವ್ಯವಸ್ಥೆಯನ್ನು 2014ರಿಂದ ಚೀನಾ, ರಶ್ಯ ನೇತೃತ್ವ ರೂಪಿಸಿಕೊಂಡಿವೆ. ಅಲ್ಲದೇ ರಶ್ಯದ ರೂಬಲ್ ಹಾಗೂ ಚೀನಾದ ಯುವಾನ್ಗಳಿಗೆ ಅಂತರ್ರಾಷ್ಟ್ರೀಯ ನಾಣ್ಯವೆಂಬ ಮಾನ್ಯತೆ ಇದೆ. ಚೀನಾ ತನ್ನ ವ್ಯಾಪಾರ ವ್ಯವಹಾರವನ್ನು ಪ್ರಧಾನವಾಗಿ ಯುವಾನ್ ಮೂಲಕವೇ ನಡೆಸತೊಡಗಿದೆ.
ವಿಶ್ವಸಂಸ್ಥೆ ರಶ್ಯ ಮತ್ತು ಚೀನಾವನ್ನು ಹೊರಗಿಟ್ಟು ಯಾವುದೇ ತೀರ್ಮಾನವನ್ನು ಅಂಗೀಕರಿಸಲಾಗದ ಸ್ಥಿತಿ ಮೊದಲಿನಿಂದಲೂ ಇದೆ. ಅದಷ್ಟೇ ಅಲ್ಲದೆ ಅಮೆರಿಕದ ಒತ್ತಡಗಳಿಗೆ ಒಳಗಾಗುವುದು ಅಷ್ಟೇನೂ ಲಾಭದಾಯಕವಾಗದು ಎಂಬ ವಾಸ್ತವ ಗ್ರಹಿಕೆ ನ್ಯಾಟೊ ರಾಷ್ಟ್ರಗಳ ಅನುಭವಕ್ಕೂ ಬಂದಿದೆ. ಜಾಗತಿಕ ವ್ಯವಹಾರ ಹಾಗೂ ತಮ್ಮ ರಾಷ್ಟ್ರಗಳ ಆಳುವ ಹಿತಾಸಕ್ತಿಗಳ ರಕ್ಷಣೆಗಾಗಿ ಲಾಭವಾಗುವ ಅಂತರ್ರಾಷ್ಟ್ರೀಯ ಬಣದ ಜೊತೆಗೆ ಅವುಗಳು ಅನಿವಾರ್ಯವಾಗಿ ನಿಲ್ಲಲೇ ಬೇಕಾಗುತ್ತದೆ.
ಜಾಗತಿಕ ಹಿಡಿತ ಸಾಧಿಸುವಲ್ಲಿ ಅಮೆರಿಕ ನೇತೃತ್ವದ ಬಣವಾಗಲೀ ಚೀನಾ-ರಶ್ಯ ನೇತೃತ್ವದ ಬಣವಾಗಲೀ ಗೆಲುವು ಸಾಧಿಸುವುದರಿಂದ ಜಗತ್ತಿನ ಜನಸಾಮಾನ್ಯರಿಗೆ ಅನುಕೂಲವೇನೂ ಆಗುವುದಿಲ್ಲ. ಅಮೆರಿಕದ ಏಕ ಶಕ್ತಿಯ ಮೇಲಾಳ್ವಿಕೆಗೆ ಸ್ವಲ್ಪತಡೆಗಳುಂಟಾಗಿ ಅದರ ಅಲ್ಪಸ್ವಲ್ಪಲಾಭ ಸದ್ಯಕ್ಕೆ ದೊರೆಯಬಹುದು ಅಷ್ಟೆ. ಜಾಗತಿಕ ಲೂಟಿ ಹಾಗೂ ಹಿಡಿತದ ಮುಖಗಳ ಬದಲಾವಣೆಯಾಗಬಹುದು. ಆದರೆ ಅದರಿಂದ ಜಾಗತಿಕ ಶಾಂತಿ, ಭದ್ರತೆ, ಸಾಮರಸ್ಯ ಖಾತರಿಯಾಗದು. ಯುದ್ಧ ಭೀತಿಯೂ ಅಂತ್ಯವಾಗದು. ಯುದ್ಧಗಳು ಯಾವಾಗ ಬೇಕಾದರೂ ಸ್ಫೋಟಗೊಳ್ಳುವಂತಹ ಪರಿಸ್ಥಿತಿ ನಿರಂತರವಾಗಿರುತ್ತದೆ.
ಜಾಗತಿಕ ಶಾಂತಿ ಹಾಗೂ ಭದ್ರತೆ ಹಾಗೂ ಜನಸಾಮಾನ್ಯರ ಅಭಿವೃದ್ಧಿಗಾಗಿ ಜಾಗತಿಕ ಜನಸಾಮಾನ್ಯರು ಸಂಘಟಿತ ಶಕ್ತಿಯಾಗಿ ರಾಜಕೀಯವಾಗಿ ತೊಡಗಿಸಿಕೊಳ್ಳುತ್ತಾ ಇಂತಹ ಲೂಟಿಕೋರ ಹಿತಾಸಕ್ತಿಗಳಿಂದ ಜಗತ್ತನ್ನು ಮುಕ್ತಗೊಳಿಸುವತ್ತ, ಜಾಗತಿಕ ಶಾಂತಿ, ಭದ್ರತೆ, ಸುವ್ಯವಸ್ಥೆಯನ್ನು ರೂಪಿಸಿಕೊಳ್ಳುವತ್ತ ಕಾರ್ಯಪ್ರವೃತ್ತರಾಗಬೇಕಿದೆ.
ಮಿಂಚಂಚೆ: nandakumarnandana67@gmail.com