ಭ್ರಮಾತ್ಮಕ ಅಭಿವೃದ್ಧಿಯ ಮಂಪರಿನಡಿ ನಲುಗುತ್ತಿರುವ ಇಸ್ರೇಲ್
File Photo (source: PTI)
ಬಂಡವಾಳವು ಕ್ರೋಡೀಕೃತಗೊಂಡಂತೆ ಏಕಸ್ವಾಮ್ಯವಾಗುತ್ತಾ ಸಾಗಿದಂತೆಲ್ಲಾ ಅದು ಸ್ಥಗಿತತೆಗೆ ತಲುಪಿ ಇಳಿಮುಖ ಬೆಳವಣಿಗೆ ಅನಿವಾರ್ಯವಾಗುತ್ತದೆ. ಅದನ್ನು ಸರಿಹೊಂದಿಸಲು ಯುದ್ಧಗಳನ್ನು ನಡೆಸುವುದು, ಸಾಮಾಜಿಕ ಕ್ಷೋಭೆಗಳನ್ನು ಹುಟ್ಟು ಹಾಕಿ ಉತ್ಪಾದನಾ ಸಲಕರಣೆಗಳ ನಾಶದೆಡೆ ತಿರುಗಿಸುವುದು, ಜನಾಂಗೀಯ, ಜಾತೀಯ, ಧರ್ಮೀಯ ದಾಳಿಗಳಿಗೆ ಜನಸಮೂಹಗಳನ್ನು ತೊಡಗಿಸುವುದು, ಸಾರ್ವಜನಿಕ ಹಾಗೂ ಜನಸಾಮಾನ್ಯರ ಆದಾಯಗಳನ್ನು ಹಲವಾರು ವಿಧಾನಗಳ ಮೂಲಕ ನೇರವಾಗಿ ಭಾರೀ ಬಂಡವಾಳಿಗರ ಕೈಗೆ ತಲುಪುವಂತೆ ಮಾಡುವುದು, ಅದು ಮತ್ತಷ್ಟು ಏಕಸ್ವಾಮ್ಯತೆಗೆ ಕಾರಣವಾಗುವುದು ಹೀಗೆ ಬಿಕ್ಕಟ್ಟುಗಳ ಸರಪಳಿಗಳೇ ಬೆಳೆಯತೊಡಗುತ್ತದೆ. ಈ ಎಲ್ಲಾ ಪರಿಣಾಮಗಳನ್ನು ನಾವು ಈಗ ಜಾಗತಿಕವಾಗಿ ಕಾಣಬಹುದು. ಇಸ್ರೇಲಿನಲ್ಲಿ ನಡೆಯುತ್ತಿರುವ ಇಂದಿನ ಬೆಳವಣಿಗೆಗಳು ಇವೆಲ್ಲದರ ನೇರ ಹಾಗೂ ಅಡ್ಡ ಪರಿಣಾಮಗಳಾಗಿವೆ.
ಕೆಲವು ವರ್ಷಗಳ ಹಿಂದೆ ಬಂಡವಾಳವಾದ ಅಪಾಯದಲ್ಲಿದೆ ಎಂಬ ಚರ್ಚೆ ಮುನ್ನೆಲೆಗೆ ಬಂದಿತ್ತು. ಭಾರತದ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ ರಾಜನ್ ಕೂಡ ಈ ಚರ್ಚೆಯ ಭಾಗವಾಗಿದ್ದರು. ಜಾಗತಿಕ ಭಾರೀ ಕಾರ್ಪೊರೇಟ್ಗಳು ಇತರ ಕಾರ್ಪೊರೇಟ್ ಸಂಸ್ಥೆಗಳನ್ನು ಹಲವಾರು ವಿಧಾನಗಳಿಂದ ಕೊಂಡುಕೊಳ್ಳುವುದು ಅಥವಾ ಮುಚ್ಚಿಹೋಗುವಂತೆ ಮಾಡುತ್ತಾ ಕೆಲವೇ ಕೆಲವು ಭಾರೀ ಕಾರ್ಪೊರೇಟ್ಗಳು ಜಾಗತಿಕ ಏಕಸ್ವಾಮ್ಯ ಸಾಧಿಸುತ್ತಾ ಹೋಗುವಾಗ ಆರೋಗ್ಯಕರ ಸ್ಪರ್ಧೆೆಗೂ, ಹೊಸ ಹೊಸ ಕಂಪೆನಿಗಳ ಹುಟ್ಟು ಬೆಳವಣಿಗೆಗಳಿಗೂ ತಡೆಯನ್ನುಂಟು ಮಾಡುತ್ತಿವೆ. ಹಾಗಾದಾಗ ಬಂಡವಾಳವಾದಕ್ಕೆ ಬೆಳವಣಿಗೆ ಹೊಂದಲು ಅವಕಾಶವೇ ಇಲ್ಲದಂತಾಗುತ್ತದೆ. ಬಂಡವಾಳವು ಕ್ರೋಡೀಕೃತಗೊಂಡಂತೆ ಏಕಸ್ವಾಮ್ಯವಾಗುತ್ತಾ ಸಾಗಿದಂತೆಲ್ಲಾ ಅದು ಸ್ಥಗಿತತೆಗೆ ತಲುಪಿ ಇಳಿಮುಖ ಬೆಳವಣಿಗೆ ಅನಿವಾರ್ಯವಾಗುತ್ತದೆ. ಅದನ್ನು ಸರಿಹೊಂದಿಸಲು ಯುದ್ಧಗಳನ್ನು ನಡೆಸುವುದು, ಸಾಮಾಜಿಕ ಕ್ಷೋಭೆಗಳನ್ನು ಹುಟ್ಟು ಹಾಕಿ ಉತ್ಪಾದನಾ ಸಲಕರಣೆಗಳ ನಾಶದೆಡೆ ತಿರುಗಿಸುವುದು, ಜನಾಂಗೀಯ, ಜಾತೀಯ, ಧರ್ಮೀಯ ದಾಳಿಗಳಿಗೆ ಜನಸಮೂಹಗಳನ್ನು ತೊಡಗಿಸುವುದು, ಸಾರ್ವಜನಿಕ ಹಾಗೂ ಜನಸಾಮಾನ್ಯರ ಆದಾಯಗಳನ್ನು ಹಲವಾರು ವಿಧಾನಗಳ ಮೂಲಕ ನೇರವಾಗಿ ಭಾರೀ ಬಂಡವಾಳಿಗರ ಕೈಗೆ ತಲುಪುವಂತೆ ಮಾಡುವುದು, ಅದು ಮತ್ತಷ್ಟು ಏಕಸ್ವಾಮ್ಯತೆಗೆ ಕಾರಣವಾಗುವುದು ಹೀಗೆ ಬಿಕ್ಕಟ್ಟುಗಳ ಸರಪಳಿಗಳೇ ಬೆಳೆಯತೊಡಗುತ್ತದೆ. ಈ ಎಲ್ಲಾ ಪರಿಣಾಮಗಳನ್ನು ನಾವು ಈಗ ಜಾಗತಿಕವಾಗಿ ಕಾಣಬಹುದು. ಇಸ್ರೇಲಿನಲ್ಲಿ ನಡೆಯುತ್ತಿರುವ ಇಂದಿನ ಬೆಳವಣಿಗೆಗಳು ಇವೆಲ್ಲದರ ನೇರ ಹಾಗೂ ಅಡ್ಡ ಪರಿಣಾಮಗಳಾಗಿವೆ.
ಇಸ್ರೇಲ್ ಫೆಲೆಸ್ತೀನ್ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುತ್ತಾ ರೂಪುಗೊಳಿಸಿದ ರಾಷ್ಟ್ರ. 19ನೇ ಶತಮಾನದ ಆರಂಭದಲ್ಲಿ ಕೇವಲ 5,000ದಷ್ಟು ಯೆಹೂದಿ ಸಮುದಾಯವನ್ನು ಫೆಲೆಸ್ತೀನ್ ಪ್ರದೇಶ ಹೊಂದಿತ್ತು. ಆಗ ಇದನ್ನು ಫೆಲೆಸ್ತೀನ್ಎಂದೇ ಕರೆಯಲಾಗುತ್ತಿತ್ತು. ಜರ್ಮನಿಯ ಹಿಟ್ಲರ್ ನಾಝಿ ಜನಾಂಗೀಯ ಶ್ರೇಷ್ಠತೆಯನ್ನು ಮುಂದೊಡ್ಡಿ ಯೆಹೂದಿಗಳ ಮಾರಣಹೋಮ ನಡೆಸಿ ಫ್ಯಾಶಿಸ್ಟ್ ವ್ಯವಸ್ಥೆ ಹೇಗೆಲ್ಲಾ ಕ್ರೌರ್ಯಗಳನ್ನು ಜನಸಮೂಹದ ಮೇಲೆ ಹರಿಸಬಹುದು ಎಂದು ಜಗತ್ತಿಗೆ ತೋರಿಸಿದ್ದ. ಅದರಿಂದಾಗಿ ಜರ್ಮಿನಿಯಲ್ಲಿನ ಯೆಹೂದಿಗಳು ವಲಸೆ ಹೋಗಬೇಕಾಗಿ ಬಂದಿತ್ತು. 1948ರಲ್ಲಿ ಬ್ರಿಟಿಷ್ ಆಡಳಿತ ಫೆಲೆಸ್ತೀನ್ ಪ್ರದೇಶವನ್ನು ಒಡೆದು ಇಸ್ರೇಲ್ ಎಂಬ ರಾಷ್ಟ್ರವನ್ನು ಹುಟ್ಟುಹಾಕಿತ್ತು. ಫೆಲೆಸ್ತೀನ್ನ ಟೆಲ್ ಅವೀವ್ ಪ್ರದೇಶವನ್ನು ಕೊಂಡುಕೊಂಡು ಅದನ್ನೇ ನಂತರ ಇಸ್ರೇಲಿನ ರಾಜಧಾನಿಯನ್ನಾಗಿಸಲಾಯಿತು. 1915ರ ವೇಳೆಗೆ ಸುಮಾರು 83,000ದಷ್ಟು ಇದ್ದ ಯೆಹೂದಿ ಜನಸಂಖ್ಯೆ 1947ರ ಸಮಯಕ್ಕೆ 6,30,000ದಷ್ಟು ಹೆಚ್ಚಿತು. 2015ರ ವೇಳೆಗೆ 6.2 ದಶಲಕ್ಷ ಯೆಹೂದಿಗಳು ಇಸ್ರೇಲಿನ ಭಾಗವಾದರು. ಇದು ಸ್ಪಷ್ಟ ಉದ್ದೇಶದೊಂದಿಗೆ ನಡೆಸಿದ ಯೆಹೂದಿ ಜನಸಂಖ್ಯಾ ಹೆಚ್ಚಳವಾಗಿತ್ತು ಎನ್ನುವುದನ್ನು ಇಲ್ಲಿ ಗಮನಿಸಬೇಕು.
ಇಸ್ರೇಲ್ ರಾಷ್ಟ್ರ ಜಾಗತಿಕವಾಗಿ ಭಾರೀ ಅಭಿವೃದ್ಧಿಯನ್ನು ದಾಖಲಿಸುತ್ತಾ ಬಂದಿತ್ತು. ಕೃಷಿಯೋಗ್ಯ ಭೂಮಿಯ ತೀವ್ರ ಕೊರತೆಯಿದ್ದಾಗಲೂ ಹಲವಾರು ವಿಧಾನಗಳಿಂದ ಕೃಷಿ ಉತ್ಪನ್ನದಲ್ಲಿ ಸ್ವಾವಲಂಬನೆ ಸಾಧಿಸಿದ್ದಲ್ಲದೆ ರಫ್ತ್ತನ್ನೂ ಮಾಡುತ್ತಿತ್ತು. ಇಸ್ರೇಲ್ ಕೇವಲ ಶೇ. 20ರಷ್ಟು ಮಾತ್ರ ಕೃಷಿಯೋಗ್ಯ ಭೂಮಿಯನ್ನು ಹೊಂದಿದೆ. ಬಟ್ಟೆ ತಯಾರಿಕೆಯಲ್ಲಿ ಅಗ್ರಗಣ್ಯ ರಾಷ್ಟ್ರಗಳ ಸಾಲಿನಲ್ಲಿ ನಿಂತಿತು. ಆಧುನಿಕ ತಾಂತ್ರಿಕತೆಯ ಅಭಿವೃದ್ಧಿ ಪಡಿಸುವಿಕೆ, ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದಾಪುಗಾಲಿಡುತ್ತಾ ಸಾಗುತ್ತಿತ್ತು. ರಕ್ಷಣಾ ತಂತ್ರಜ್ಞಾನದಲ್ಲೂ ಅಭಿವೃದ್ಧಿ ಸಾಧಿಸಿ ರಕ್ಷಣಾ ಉಪಕರಣಗಳ ರಫ್ತುದಾರ ರಾಷ್ಟ್ರವಾಗಿತ್ತು. ಅತಿಸಣ್ಣ, ಸಣ್ಣ, ಮಧ್ಯಮ ಕೈಗಾರಿಕಾ ಘಟಕಗಳಲ್ಲೂ ಜಾಗತಿಕವಾಗಿ ಭಾರೀ ಬೆಳವಣಿಗೆ ದಾಖಲಿಸಿತ್ತು. ಯೂರೋಪಿನ ರಾಷ್ಟ್ರಗಳನ್ನು ಮೀರಿಸುವಷ್ಟು ಆರ್ಥಿಕ ಬೆಳವಣಿಗೆ ತೋರಿಸಿತ್ತು. ಎಪ್ಪತ್ತು-ಎಂಬತ್ತರ ದಶಕಗಳಲ್ಲಿ ಇಸ್ರೇಲ್ ವಾರ್ಷಿಕವಾಗಿ ಶೇ. 10ರಷ್ಟು ಬೆಳವಣಿಗೆ ದರವನ್ನು ಸತತವಾಗಿ ಕಾಯ್ದುಕೊಂಡು ಬಂದಿತ್ತು. ಅದೇ ವೇಳೆಗೆ ಜಾಗತೀಕರಣ ಆರಂಭವಾಗಿ ಇಸ್ರೇಲ್ನ ಆಳುವ ವರ್ಗ ಜಾಗತೀಕರಣಕ್ಕೆ ರಾಷ್ಟ್ರವನ್ನು ತೆರೆದಿಟ್ಟಿತು.
ಇದರ ಪರಿಣಾಮವಾಗಿ ಮೈಕ್ರೋಸಾಫ್ಟ್, ಇಂಟೆಲ್, ಆ್ಯಪಲ್, ಸ್ಯಾಮ್ಸಂಗ್, ಜನರಲ್ ಇಲೆಕ್ಟ್ರಿಕ್, ಸೀಮೆನ್ಸ್ ಮೊದಲಾದ ಜಾಗತಿಕ ಬೃಹತ್ ಕಾರ್ಪೊರೇಟ್ಸಂಸ್ಥೆಗಳು ಇಸ್ರೇಲಿನಲ್ಲಿ ತಮ್ಮ ಬಂಡವಾಳವನ್ನು ಹೂಡಿ ಅಲ್ಲಿನ ಪರಿಣಿತ ಶ್ರಮಿಕ ಸಮುದಾಯವನ್ನು ತನ್ನ ದುಡಿಮೆಗೆ ಹಚ್ಚಿ ಲಾಭಗಳಿಸತೊಡಗಿದವು. ವಿದೇಶಿ ನೇರ ಬಂಡವಾಳದಡಿ ಇಸ್ರೇಲ್ ಸಿಲುಕಿತು. ಇದೇ ಸಂದರ್ಭದಲ್ಲೇ ಫೆಲೆಸ್ತೀನ್ ಪ್ರದೇಶಗಳ ಮೇಲೆ ಇಸ್ರೇಲ್ ಆಕ್ರಮಣವನ್ನು ತೀವ್ರಗೊಳಿಸುತ್ತಾ ಸಾಗಿತು. ಇಪ್ಪತ್ತನೇ ಶತಮಾನದ ಮಧ್ಯಭಾಗದಿಂದ ಹಣದುಬ್ಬರ ಏರತೊಡಗಿತು. ಸಾವಿರಾರು ಅತೀ ಸಣ್ಣ, ಸಣ್ಣ, ಮಧ್ಯಮ, ಸ್ಟಾರ್ಟ್ ಅಪ್ ಕೈಗಾರಿಕೆಗಳನ್ನು ಬೃಹತ್ ಜಾಗತಿಕ ಕಾರ್ಪೊರೇಟ್ಗಳು ಹಲವು ವಿಧಾನಗಳನ್ನು ಬಳಸಿ ಕೊಂಡುಕೊಂಡವು. ಈ ಕಾರ್ಪೊರೇಟ್ಗಳ ಕುಟಿಲ ಕಾರ್ಯತಂತ್ರಗಳ ಕಾರಣಗಳಿಂದಾಗಿಯೇ ಸಾವಿರಾರು ಅತೀ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಗಳು ಮುಚ್ಚಿಹೋದವು. ಇಪ್ಪತ್ತೊಂದನೇ ಶತಮಾನದ ಆರಂಭದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಬಿಕ್ಕಟ್ಟಿನ ಪರಿಣಾಮ ಇಸ್ರೇಲಿಗೂ ಗಂಭೀರವಾಗಿ ತಟ್ಟಿತು. 2016ರಲ್ಲಿ ಇಸ್ರೇಲಿನ ರಾಷ್ಟ್ರೀಯ ಉತ್ಪನ್ನದ ಅಭಿವೃದ್ಧಿ ದರ ಶೇ 4.1ರಷ್ಟಕ್ಕೆ ಇಳಿದಿತ್ತು. ಇಸ್ರೇಲಿನ ಸೆಂಟ್ರಲ್ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್ ಪ್ರಕಾರ 2020ರ ಜುಲೈಯಲ್ಲಿ ಒಟ್ಟು ರಾಷ್ಟ್ರೀಯ ಉತ್ಪನ್ನ -9.1ಕ್ಕೆ ತಲುಪಿತ್ತು. ಈಗ ಅದು -0.5ಗಿಂತ ಕೆಳಹಂತದಲ್ಲಿ ಸಾಗುತ್ತಿದೆ.
ಇಸ್ರೇಲ್ನ ಆರ್ಥಿಕತೆಯಲ್ಲಿ ಪ್ರವಾಸೋದ್ದಿಮೆಯಂತಹ ಸೇವಾ ಕ್ಷೇತ್ರವು ಶೇ. 80ರಷ್ಟು ಪಾಲನ್ನು ಪಡೆದಿದೆ. ಕೃಷಿ ಕ್ಷೇತ್ರ ಹಾಗೂ ಕೈಗಾರಿಕೆಯದು ನಂತರದ್ದಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇಸ್ರೇಲ್ ಯೂರೋಪಿನ ರಾಷ್ಟ್ರಗಳನ್ನು ಒಂದು ಕಾಲದಲ್ಲಿ ಹಿಂದಿಕ್ಕಿದ್ದರೂ ಈಗದು ಇಳಿಮುಖ ಹಾದಿಯಲ್ಲಿ ಸಾಗುತ್ತಿರುವುದು ಅಲ್ಲಿನ ಅಂಕಿಅಂಶಗಳು ಹೇಳುತ್ತಿವೆ. ಇಸ್ರೇಲಿನ ಸೆಂಟ್ರಲ್ ಬ್ಯೂರೋ ಆಫ್ ಸ್ಟಾಟಸ್ಟಿಕ್ಸ್ ಪ್ರಕಾರವೇ ಇಸ್ರೇಲಿನ ಸಾಲ ಬಾಧ್ಯತೆ ಅದರ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ. 66.06ರಷ್ಟಿದೆ. ಇದು ಹಿಂದೆ ಬಹಳ ಹೆಚ್ಚಿತ್ತು ಈಗ ಕಡಿಮೆಯಾಗಿದೆ ಎಂದು ಇಸ್ರೇಲಿ ಆಡಳಿತ ವ್ಯವಸ್ಥೆ ಹೇಳಿಕೊಳ್ಳುತ್ತಿದೆ. ಬಾಹ್ಯ ಸಾಲ 1,63,848.50 ಮಿಲಿಯನ್ ಅಮೆರಿಕ ಡಾಲರುಗಳಾಗಿವೆ. ಅಂತರ್ರಾಷ್ಟ್ರೀಯ ವಾಣಿಜ್ಯ ವ್ಯವಹಾರ ಕೊರತೆ ಏರುಗತಿಯಲ್ಲಿ ಸಾಗುತ್ತಾ ಇದೆ. ಕಳೆದ ವರ್ಷದ ಜೂನ್ನಲ್ಲಿ ಅದು 5,146.60 ಮಿಲಿಯನ್ ಅಮೆರಿಕನ್ ಡಾಲರ್ಗಳಾಗಿದ್ದವು. ಇಸ್ರೇಲಿನ ರಫ್ತು ಕುಸಿಯುತ್ತಾ ಆಮದು ಏರುಗತಿಯಲ್ಲಿ ಸಾಗುತ್ತಿದೆ.
ಕಳೆದ ವರ್ಷ ಇಸ್ರೇಲ್ 10,366.90 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ವಸ್ತುಗಳನ್ನು ಆಮದು ಮಾಡಿದ್ದರೆ 4,870.10 ಮಿಲಿಯನ್ ಅಮೆರಿಕನ್ ಡಾಲರುಗಳಷ್ಟು ರಫ್ತು ಮಾಡಿತ್ತು. ಅದೇ ವೇಳೆಯಲ್ಲಿ ವಿದೇಶಿ ನೇರ ಹೂಡಿಕೆ ಏರುಗತಿಯಲ್ಲಿ ಸಾಗುತ್ತಿದೆ. ಹಿಂದಿನ ವರ್ಷ 1,04,175.50 ಮಿಲಿಯನ್ ಅಮೆರಿಕನ್ ಡಾಲರ್ಗಳಿದ್ದ ವಿದೇಶಿ ನೇರ ಹೂಡಿಕೆ ಕಳೆದ ವರ್ಷ 1,08,833.00 ಮಿಲಿಯನ್ ಅಮೆರಿಕನ್ ಡಾಲರ್ಗಳಿಗೆ ಏರಿತ್ತು. ವಿದೇಶಿ ನೇರ ಹೂಡಿಕೆ ಹೆಚ್ಚಾಗುವುದನ್ನು ರಾಷ್ಟ್ರದ ಅಭಿವೃದ್ಧಿಯ ಭಾಗವಾಗಿ ಗ್ರಹಿಸುವುದು ಎಷ್ಟು ಅಪಾಯಕರ ಎಂಬುದು ಇಸ್ರೇಲಿನ ಈ ಉದಾಹರಣೆಯಿಂದಲೂ ನಾವು ಗ್ರಹಿಸಬಹುದು. ಇಸ್ರೇಲ್ ಅಮೆರಿಕದ ಸಹಕಾರದೊಂದಿಗೆ ಜಾಗತಿಕವಾಗಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುವ ನಿರಂತರ ಪ್ರಯತ್ನ ನಡೆಸುತ್ತಾ ಬಂದಿತ್ತು. ಫೆಲೆಸ್ತೀನ್ ಪ್ರಜೆಗಳನ್ನು ಜನಾಂಗೀಯವಾಗಿ ಏಕಾಂಗಿಗೊಳಿಸಿ ಫ್ಯಾಶಿಸ್ಟ್ ದಮನವನ್ನು ಇಸ್ರೇಲಿ ಆಡಳಿತ ವ್ಯವಸ್ಥೆ ಮೊದಲಿನಿಂದಲೂ ನಡೆಸುತ್ತಾ ಬಂದಿದೆ. ಜನಾಂಗೀಯ ದ್ವೇಷದಡಿಯಲ್ಲಿ ಯೆಹೂದಿ ಸಮೂಹವನ್ನು ಮುಳುಗಿಸಿ ಫೆಲೆಸ್ತೀನಿಯರ ಮೇಲೆ ಹರಿಬಿಡುವ ಕಾರ್ಯವನ್ನು ನಿರಂತರವಾಗಿ ನಡೆಸಲಾಯಿತು. ಫೆಲೆಸ್ತೀನ್ನ ಜಾಗತಿಕ ಪ್ರಸಿದ್ಧವಾದ ಜೆರುಸಲೇಮ್ ಮೊದಲಾದ ಪ್ರದೇಶಗಳ ಮೇಲೆ ಹಿಡಿತ ಸಾಧಿಸತೊಡಗಿತು. ಇಸ್ರೇಲಿ ಸೇನೆ ಸಾವಿರಾರು ಫೆಲೆಸ್ತೀನಿಯರ ಕಗ್ಗೊಲೆಗಳನ್ನು ನಡೆಸಿತು. ಲಕ್ಷಾಂತರ ಫೆಲೆಸ್ತೀನಿಯರು ವಲಸೆ ಹೋಗುವಂತಾಯಿತು. ಮಕ್ಕಳು ಮಹಿಳೆಯರನ್ನು ಬಹಳ ಗಂಭೀರವಾದ ಕ್ರೂರತೆಗಳಿಗೆ ಈಡು ಮಾಡಲಾಯಿತು. ಇವೆಲ್ಲವನ್ನೂ ಬಂಡವಾಳಶಾಹಿ ಹುಸಿ ಅಭಿವೃದ್ಧಿಗಳನ್ನು ಬಿಂಬಿಸುತ್ತಾ ಜನರನ್ನು ಅದರ ಭ್ರಮೆಯಲ್ಲಿ ಮುಳುಗಿಸುತ್ತಾ ನಡೆಸಲಾಯಿತು. ಆದರೆ ಅದೀಗ ಇಸ್ರೇಲಿಗರಿಗೆ ಭಾರೀ ದೊಡ್ಡ ವಿಪತ್ತನ್ನು ತಂದಿಟ್ಟಿದೆ. ತೀವ್ರ ಆರ್ಥಿಕ ಬಿಕ್ಕಟ್ಟು ಅದರ ಪರಿಣಾಮವಾಗಿ ರಾಜಕೀಯ ಅಸ್ಥಿರತೆ ದಿನನಿತ್ಯದ ಕತೆಯಾಗಿದೆ.
ಕೇವಲ ಎರಡು ವರ್ಷಗಳ ಅವಧಿಯಲ್ಲಿ ನಾಲ್ಕು ಸಾರ್ವತ್ರಿಕ ಚುನಾವಣೆಗಳನ್ನು ನಡೆಸಬೇಕಾಗಿ ಬಂದರೂ ರಾಜಕೀಯ ಅಸ್ಥಿರತೆ ತೀವ್ರವಾಗಿ ಮುಂದುವರಿದಿದೆ. ಚುನಾಯಿತ ಜನಪ್ರತಿನಿಧಿಗಳನ್ನು ಕೊಂಡುಕೊಂಡು ಸರಕಾರ ರಚಿಸುವುದು, ವ್ಯಾಪಕ ಪಕ್ಷಾಂತರಗಳು ಇತ್ಯಾದಿಗಳಿಂದಾಗಿ ಸರಕಾರ ತನ್ನ ನಾಲ್ಕು ವರ್ಷಗಳ ಅವಧಿಯನ್ನು ಪೂರೈಸಲಾಗುತ್ತಿಲ್ಲ. ಇದು ಶುರುವಾಗಿ ಬಹಳ ಕಾಲವಾಗಿದೆ. 1996ರಿಂದ ಈಚೆಗೆ ಇಸ್ರೇಲಿನಲ್ಲಿ ಯಾವುದೇ ಸರಕಾರ ಕೂಡ ಎರಡೂವರೆ ವರ್ಷಗಳಿಗೂ ಹೆಚ್ಚು ಕಾಲ ಆಡಳಿತ ನಡೆಸಲಾಗಿಲ್ಲ. ಹತ್ತರಷ್ಟು ಪಕ್ಷಗಳ ಸಮ್ಮಿಶ್ರ ಸರಕಾರಗಳ ರಚನೆಗಳೇ ಪ್ರಧಾನವಾಗಿದ್ದರೂ ಈಗ ಯಾವುದೇ ರಾಜಕೀಯ ಪಕ್ಷವೂ ಸರಕಾರ ರಚಿಸಲಾಗದಂತಹ, ಸಮ್ಮಿಶ್ರ ಸರಕಾರವನ್ನೂ ಕೂಡ ರಚಿಸಿಕೊಳ್ಳಲಾರದಷ್ಟು ರಾಜಕೀಯ ಬಿಕ್ಕಟ್ಟು ತಲೆದೋರಿದೆ. ಬಂಡವಾಳಶಾಹಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೇಲು ಮಟ್ಟದಲ್ಲೂ ಕೂಡ ಪಾಲಿಸಲಾಗದಷ್ಟು ಪರಿಸ್ಥಿತಿ ಸುದೀರ್ಘ ಕಾಲದಿಂದ ಮುಂದುವರಿದಿದೆ. ಈ ಅಸ್ಥಿರತೆಯ ತೀವ್ರತೆಯಿಂದಾಗಿ ಇಸ್ರೇಲ್ ತತ್ತರಿಸತೊಡಗಿದೆ. ಫೆಲೆಸ್ತೀನ್ನೊಂದಿಗೆ ನಡೆಸಿದ ಸುದೀರ್ಘ ಕಾಲದ ಫ್ಯಾಶಿಸ್ಟ್ ಯುದ್ಧವೂ ಇಂದಿನ ಬಿಕ್ಕಟ್ಟಿಗೆ ಒಂದು ಪ್ರಮುಖ ಕಾರಣವಾಗಿದೆ.
ಯೆಹೂದಿ ಜನಸಮೂಹವನ್ನು ಯೂರೋಪಿನ ರಾಷ್ಟ್ರಗಳಷ್ಟು ಅಭಿವೃದ್ಧಿಯನ್ನು ತೋರಿಸಿ ಯಾಮಾರಿಸಿ ಕುಳ್ಳಿರಿಸಿದ ಅದೇ ವೇಳೆಯಲ್ಲಿ ಅವರನ್ನು ಯೆಹೂದಿ ಶ್ರೇಷ್ಠತೆಯ ಜನಾಂಗೀಯವಾದವನ್ನು ಪಸರಿಸಿ ಮಂಪರಿನಲ್ಲಿ ಬೀಳಿಸಿಡಲಾಯಿತು. ಮುಸ್ಲಿಮ್ ಜನಸಮೂಹ ಹಾಗೂ ಅರಬರ ಬಗ್ಗೆ ಭಯಾಂದೋಲನ ಪಸರಿಸುವ ಅಮೆರಿಕ ಹಾಗೂ ಯೂರೋಪಿನ ರಾಷ್ಟ್ರಗಳ ಕುತಂತ್ರಗಳೊಂದಿಗೆ ಇಸ್ರೇಲಿ ಆಡಳಿತ ಜೊತೆಗೂಡಿತು. ಇರಾಕ್, ಲಿಬಿಯಾ ಮೊದಲಾದ ರಾಷ್ಟ್ರಗಳ ಮೇಲಿನ ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳು ಸೇರಿ ನಡೆಸಿದ ಅನ್ಯಾಯ ಹಾಗೂ ಅಕ್ರಮ ಯುದ್ಧದಲ್ಲಿ ಇಸ್ರೇಲಿ ಆಡಳಿತ ಕೂಡ ಕೈ ಜೋಡಿಸಿತ್ತು. ಅದು ಪ್ರತ್ಯಕ್ಷ ಹಾಗೂ ಪರೋಕ್ಷ ವಿಧಾನಗಳಲ್ಲೂ ಇತ್ತು. ಅಲ್ಲದೇ ಇಸ್ರೇಲಿನ ಕುಖ್ಯಾತ ಗೂಢಚಾರಿ ಸಂಸ್ಥೆ 'ಮೊಸ್ಸಾದ್' ಅಂತರ್ರಾಷ್ಟ್ರೀಯ ಕಾರ್ಯಾಚರಣೆಗಳನ್ನು ನಡೆಸುತ್ತಾ ಹತ್ತು ಹಲವು ಬುಡಮೇಲು ಕೃತ್ಯಗಳಲ್ಲಿ ತೊಡಗಿತು. ಇಸ್ರೇಲ್ ಕಳೆದ ವರ್ಷ ನಮ್ಮ ದೇಶದಲ್ಲಿ ಭಾರೀ ವಿವಾದ ಹಾಗೂ ಸುದ್ದಿಯಲ್ಲಿದ್ದ ಪೆಗಾಸಸ್ನಂತಹ ಗೂಢಚಾರಿ ಸ್ಪೈವೇರ್ಗಳನ್ನು ಉತ್ಪಾದಿಸಿ ಮಾರುತ್ತಿದೆ. ಅಮೆರಿಕದ 'ಸಿಐಎ' ಹಾಗೂ ಇಂಡಿಯಾದ 'ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್'ನಂತಹ ಸಂಸ್ಥೆಗಳೊಂದಿಗೆ ಮೊಸ್ಸಾದ್ ನೇರ ಸಂಬಂಧವನ್ನು ಹೊಂದಿದೆ. ಇಸ್ರೇಲ್ ಇಂತಹ ಕಾರ್ಯಾಚರಣೆಗಳಿಗಾಗಿಯೂ ದೊಡ್ಡ ಮೊತ್ತವನ್ನು ವ್ಯಯಿಸುತ್ತಾ ಬಂದಿದೆ. ಆದರೆ ಅದು ಇಸ್ರೇಲಿಗೆ ಲಾಭದ ಬದಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿಯೂ ದೊಡ್ಡ ನಷ್ಟದ ಬಾಬತ್ತಾಗಿ ಪರಿಣಮಿಸಿತು. ಅಂತರ್ರಾಷ್ಟ್ರಿಯವಾಗಿ ಇಸ್ರೇಲ್ ಭಾರೀ ಟೀಕೆಗಳಿಗೆ ಗುರಿಯಾಗಿತ್ತು.
ಶ್ರೀಲಂಕಾ, ಪಾಕಿಸ್ತಾನ, ಯುನೈಟೆಡ್ ಕಿಂಗ್ಡಂ, ಪೆರು, ಮೊದಲಾದ ರಾಷ್ಟ್ರಗಳಲ್ಲಿ ಆಗುತ್ತಿರುವ ಅಲ್ಲೋಲ ಕಲ್ಲೋಲಗಳು ಇಸ್ರೇಲಿನಲ್ಲೂ ಕಾಣಿಸಿಕೊಳ್ಳತೊಡಗಿದೆ. ಜಾಗತಿಕ ಬಂಡವಾಳದ ಆಕ್ರಮಣಗಳ ಪ್ರಧಾನ ಪರಿಣಾಮಗಳಲ್ಲಿ ಇದು ಕೂಡ ಒಂದಾಗಿದೆ. ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕೆಂಬ ಹಿತಾಸಕ್ತಿಗಳು ಇನ್ನಿಲ್ಲದ ಶ್ರಮಗಳನ್ನು ಹಾಕುತ್ತಿದ್ದರೂ ಹಿಡಿತಕ್ಕೆ ಸಿಗಲಾರದ ಮಟ್ಟದಲ್ಲಿ ಈ ರೀತಿಯ ಬಿಕ್ಕಟ್ಟು ಜಾಗತಿಕವಾಗಿ ವ್ಯಾಪಿಸುತ್ತಿದೆ. ನಮ್ಮ ದೇಶದಲ್ಲಿಯೂ ಇದರ ಎಲ್ಲಾ ಲಕ್ಷಣಗಳು ಕಾಣಿಸಿಕೊಂಡು ಬಹಳ ಕಾಲವಾಗಿದೆ. ನೈಜ ಜನ ಪರ್ಯಾಯ ರೂಪುಗೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ಭಾರಿ ಭೀಕರತೆಗಳನ್ನು ಕಾಣಬೇಕಾದುದು ಅನಿವಾರ್ಯವಾಗಿದೆ.
ಮಿಂಚಂಚೆ: nandakumarnandana67@gmail.com