ನಿತ್ಯ ಕುರುಕ್ಷೇತ್ರ

ಒಳ್ಳೆಯದಾಗಬೇಕೆಂದು ಮತ್ತು ಅಂತಹ ಕಾಲ ನಮ್ಮ ಬದುಕಿನಲ್ಲೇ ಬರಲೆಂದು ಕಾಯುವ ಜನರಿರುತ್ತಾರೆ. ಹಾಗೆಯೇ ನಿತ್ಯ ಕುರುಕ್ಷೇತ್ರವನ್ನು ಬಯಸುವ ಪಾಪಿಗಳು ಎಲ್ಲ ಕಾಲದಲ್ಲೂ ಜಗತ್ತಿನ ಎಲ್ಲೆಡೆಯೂ ಇರುತ್ತಾರೆ. ಸೈತಾನ ಮರುಹುಟ್ಟು ಪಡೆಯುತ್ತಾನೆ ಮತ್ತು ಆಗ ಮುಗ್ಧ ಜೀವಗಳ ರಕ್ತ ಹಿಂಡಬಹುದು, ಸವಿಯಬಹುದು ಎಂಬ ನಿರೀಕ್ಷೆಯಿಂದ ಕಾಯುವ ಭಕ್ತರೂ ಇದ್ದಾರೆ. ಇವರ ನಡುವಣ ಮಹಾಯುದ್ಧದ ದೃಶ್ಯ ಧಾರಾವಾಹಿ ಈಗ ನಡೆಯುತ್ತಿದೆ. ಅದನ್ನು ದೂರದಿಂದಲೇ ನೋಡಿ ಏನು ದಕ್ಕುತ್ತದೆಯೋ ಅದನ್ನು ಅನುಭವಿಸೋಣ.


ಈ ದೇಶದಲ್ಲಿ ನಡೆಯುತ್ತಿರುವ ಸಮೂಹ ಹಿಂಸೆಯನ್ನು ಧಿಕ್ಕರಿಸಿ ರಾಮಚಂದ್ರ ಗುಹ, ಅಪರ್ಣಾಸೇನ್, ಜಾವೇದ್ ಅಖ್ತರ್ ಸೇರಿದಂತೆ ವಿವಿಧ ಕ್ಷೇತ್ರಗಳ 49 ಚಿಂತಕರು ಪ್ರಧಾನಿಯವರಿಗೆ ಒಂದು ಪತ್ರವನ್ನು ಬರೆದರೆಂದು ವರದಿಯಾಗಿದೆ. ಅದು ಏನು ಹೇಳಿದೆ, ಅದರಲ್ಲಿ ಸತ್ಯಾಂಶವಿದೆಯೇ ಎಂಬುದನ್ನು ಪರಾಮರ್ಶೆಮಾಡುವ ಬದಲಾಗಿ ಅಧಿಕಾರಸ್ಥರು ಅದಕ್ಕೆ ಪ್ರತ್ಯಾಸ್ತ್ರದಂತೆ ಇನ್ನೊಂದು ಗುಂಪಿನ 63 ಮಂದಿಯಿಂದ ಈ 49 ಮಂದಿಯನ್ನು ಟೀಕಿಸುವ, ಖಂಡಿಸುವ ಪತ್ರವನ್ನು ಬರೆಸಿದರು. ಹೀಗೆ ಸಂಖ್ಯಾಬಲದಲ್ಲಿ ಯಾವುದು ಹೆಚ್ಚೋ ಅದು ಗೆಲ್ಲಬಲ್ಲುದೆಂದು ತೋರಿಸಿಕೊಟ್ಟರು.

ಕಾಂಗ್ರೆಸ್ ಪಕ್ಷ ತನ್ನ ಶತಮಾನಗಳ ಇತಿಹಾಸವನ್ನು ಮರೆತು ಅಧ್ಯಕ್ಷಸ್ಥಾನವನ್ನು ಶೂನ್ಯವಾಗಿಸಿ ಬರಲಿರುವ ನಾಯಕನಿಗಾಗಿ ಕಾಯುತ್ತ ನಿರ್ವಾತ ವಾತಾವರಣವನ್ನು ಸೃಷ್ಟಿಸಿದೆ. ಇದರ ದುರಂತ ಪರಿಣಾಮವನ್ನು ಅರಿಯದಾಗಿದೆ.
ಕರ್ನಾಟಕದ ರಾಜಕಾರಣದ ಬಗ್ಗೆ ಏನೂ ಮಾತನಾಡದಿರುವುದು ಒಳ್ಳೆಯದೇನೋ ಅನ್ನಿಸುವಂತಿದೆ. ಅನ್ನ, ಬಟ್ಟೆ, ವಸತಿ ಇವುಗಳಿಗಿಂತಲೂ ಮುಖ್ಯವಾದ ಸಮಸ್ಯೆಯೇನೋ ಎಂಬಂತೆ ಸರಕಾರವು ಟಿಪ್ಪುಜಯಂತಿಯನ್ನು ರದ್ದುಗೊಳಿಸಿದೆ.

 ಒಂದು ಕಾಲದಲ್ಲಿ ಉತ್ತರ ಪ್ರದೇಶವು ಭಾರತದ ಸಂಕೇತದಂತಿದ್ದು ಅಲ್ಲಿ ವಿಜಯಿಗಳಾದವರು ದೇಶದ ನಾಯಕರಾಗುತ್ತಾರೆ ಎಂಬ ಧನಾತ್ಮಕ ಆಶಯವಿತ್ತು. ಇಂದೂ ಅಲ್ಲಿನ ರಾಜಕೀಯವೇ ದೇಶವನ್ನು ಸಂಕೇತಿಸುತ್ತಿದೆೆ. ಯೋಗಿ ಆದಿತ್ಯನಾಥರು ನಿಜಕ್ಕೂ ಯೋಗಿಯೇ ಎಂಬಂತೆ ತನ್ನ ರಾಜ್ಯವನ್ನೇ ಕಾಡಾಗಿಸಹೊರಟಿದ್ದಾರೆ. ಅಲ್ಲೀಗ ಶಕ್ತಿಯಿದ್ದವನೇ ಮಹಾಶೂರನೆಂಬ ಕಾಡಿನ ನಿಯಮಗಳೇ ನಡೆಯುತ್ತಿವೆ. ರಾಜಕೀಯದ ಹೊರತು ಬದುಕೇ ಇಲ್ಲದಂತೆ ಉಳಿದೆಲ್ಲ ಕ್ಷೇತ್ರಗಳು ಅದರಲ್ಲೂ ಉದ್ಯಮ, ಶಿಕ್ಷಣ, ವೈದ್ಯಕೀಯ, ಕಾನೂನು, ಕೃಷಿ, ಮುಂತಾದ ಸಾಮಾಜಿಕ ಅತ್ಯಗತ್ಯಗಳು ಬಡವಾಗುತ್ತಿವೆ. ಆಡಳಿತದ ಲೋಪಗಳನ್ನು ಜನತೆ ಹೇಳಬೇಕೆಂದು ಈ ಹಿಂದೆ ಬಂದು ಹೋದ ನಾಯಕರು ಬಯಸುತ್ತಿದ್ದರು. ದೇಶನಿರ್ಮಾಣ ಮುಖ್ಯವಾಗಿತ್ತು. ಆದರೆ ಬರಬರುತ್ತ ರಾಯರ ಕುದುರೆ ಕತ್ತೆಯಾದದ್ದು ಮಾತ್ರವಲ್ಲ, ಆ ಕತ್ತೆಯೂ ಸತ್ತಿದೆ. ಅರ್ಥಕತಜ್ಞರು ಆರ್ಥಿಕತೆಯ ಮೇಲೆ, ವಿಜ್ಞಾನಿಗಳು ದೇಶದ ಮಹತ್ವದ ಸಂಶೋಧನೆಗಳ ಮೇಲೆ ನೀಡುವ ಅಭಿಪ್ರಾಯಗಳನ್ನು ಸೌಜನ್ಯದಿಂದ ಗುರುತಿಸುವ ಮತ್ತು ಗೌರವಿಸುವ ಪರಿಪಾಠವಿತ್ತು. ಆದರೆ ಈಗ ಯಾರೇ ಟೀಕಿಸಿದರೂ ಅವರನ್ನು ದೇಶದ್ರೋಹಿಗಳೆಂದು ಅಗ್ಗವಾಗಿ ಕಾಣುವ ಕೀಳು ಪ್ರವೃತ್ತಿ ಮೆರೆಯುತ್ತಿದೆ. ಒಂದು ಗೊತ್ತಾದ ಜಾತಿ-ಮತ-ಜನಾಂಗವನ್ನು ದ್ವೇಷಿಸಲು ಸಹಕಾರಿಯಾಗುವ ವಿಷಗಾಳಿಯನ್ನು ಹಬ್ಬಿಸಲಾಗುತ್ತಿದೆ.

ಕೇರಳದ ಒಂದೆಡೆ ದಲಿತ ನಾಯಕಿಯೊಬ್ಬಳು ಧರಣಿ ನಡೆಸಿದಳೆಂಬ ಜಾಗವನ್ನು ಕಾಂಗ್ರೆಸ್ ಕಾರ್ಯಕರ್ತರು ಶುದ್ಧೀಕರಿಸುತ್ತಾರೆ; ಸಮ್ಮಾನಗೊಳ್ಳಬೇಕಾದ ಶ್ರೇಷ್ಠ ಚಲನಚಿತ್ರ ನಿರ್ದೇಶಕ ಅಡೂರು ಗೋಪಾಲಕೃಷ್ಣನ್‌ರಂತಹವರನ್ನು ಭಾರತೀಯ ಜನತಾ ಪಕ್ಷದ ರಾಜ್ಯ ನಾಯಕನೊಬ್ಬ ಅವರು ಬೇಕಾದರೆ ಚಂದ್ರನಲ್ಲಿಗೆ ಹೋಗಲಿ ಎಂದು ಹಳಿಯುತ್ತಾನೆ; ಇನ್ನೊಂದೆಡೆ ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪೀಡಿತೆಯೊಬ್ಬಳನ್ನು ಸಿನಿಮೀಯವಾಗಿ ಕೊಲೆ ಮಾಡಲು ರಾಜಕಾರಣಿಯೊಬ್ಬ ಅಪಘಾತದ ಸೂತ್ರವನ್ನು ಹೆಣೆಯುತ್ತಾನೆೆ; ಜಾತಿ-ಜನಾಂಗವನ್ನು ಆಧರಿಸಿದ ಅಪರಾಧಗಳು ಎಗ್ಗಿಲ್ಲದೆ ಮುಂದುವರಿಯುತ್ತಿವೆ; ಎಲ್ಲ ರೀತಿಯ ಹಿಂಸೆ ಎಲ್ಲೆಡೆ ಈ ದೇಶದ ಲಕ್ಷಣವೋ ಹಣೆಬರಹವೋ ಎಂಬಂತೆ ನಡೆಯುತ್ತಿವೆ; ಮನುಷ್ಯನ ಬದುಕಿನ ಹೊರತಾಗಿ ಇತರೆಲ್ಲ ಕ್ಷೇತ್ರಗಳ ಮೌಲ್ಯ ಮತ್ತು ಬೆಲೆ ಹೆಚ್ಚುತ್ತಿದೆ; ದೇಶದ ಸೇನಾಪಡೆಗಳು ರಾಜಕೀಯ ಚದುರಂಗದ ಕಾಲಾಳುಪಡೆಗಳಂತೆ ಬಳಕೆಯಾಗುತ್ತಿದ್ದಾರೆ; ಈ ದೇಶದ ಪ್ರಜೆಗಳು ಯಾರೆಂಬುದನ್ನು ಒಂದಷ್ಟು ಜನರು ನಿರ್ಧರಿಸುತ್ತಾರೆ; ಯೋಚಿಸಿ ಮಾತನಾಡುವುದಕ್ಕಿಂತ ಮಾತನಾಡಿ ಆನಂತರ ಯೋಚಿಸುವುದೇ ಸರಿಯೆಂಬ ಧೋರಣೆ ಬಹುತೇಕ ಎಲ್ಲ ರಾಜಕಾರಣಿಗಳಲ್ಲಿದೆ; ಇವೆಲ್ಲ ಅನಿವಾರ್ಯ ಮತ್ತು ಈ ದೇಶ ಹೀಗೆ ನಡೆಯುವುದೇ ಸರಿಯೆಂಬಂತೆ ನಾಯಕರು ನಡೆದುಕೊಳ್ಳುತ್ತಾರೆ; ವಿದ್ಯಾವಂತರೂ ಬುದ್ಧಿವಂತರೂ ಯುಗಪಲ್ಲಟದ ಸಂದರ್ಭದಲ್ಲೆಂಬಂತೆ ಧ್ರುವೀಕರಣಗೊಂಡು ತಮ್ಮತಮ್ಮ ಗುಂಪುಸೇರುತ್ತಾರೆ; ಸಂವೇದನಾಶೀಲರೆಂದು ಸಾಮಾನ್ಯ ಜನರು ನಂಬಿಕೊಂಡ ಕಲಾವಂತರು ತಮ್ಮ ತಮ್ಮ ಬೇಳೆ ಬೇಯುವ ಮಡಕೆಗಳನ್ನು ಹುಡುಕುತ್ತಿದ್ದಾರೆ; ಎಲ್ಲವೂ ಸರಿಯಿದೆಯೆಂದು ದೇವರ ಸಹಿತ ಬಹುತೇಕ ಎಲ್ಲರೂ ಒಪ್ಪಿಕೊಂಡಂತಿದೆ; ಜಗನ್ನಾಥ ರಥಯಾತ್ರೆಯಲ್ಲಿ ನುಜ್ಜುಗುಜ್ಜಾದ ಬಲಿಪಶುಗಳನ್ನು ಲೆಕ್ಕಿಸದೆ ಕಾಲ ಮುಂದುವರಿಯುತ್ತಿದೆ; ಅನಾಥನಿಗೆ ಮನುಷ್ಯರ ರಕ್ಷಣೆ ಹೇಗೂ ಇಲ್ಲದೆ ದೇವರ ರಕ್ಷಣೆಯೂ ಇಲ್ಲದೆ ಅವನು ಹುಟ್ಟಿದ್ದೇ ತಪ್ಪೆಂಬ ನಿಯಮ ಅಲಿಖಿತವಾಗಿ ಜಾರಿಯಾಗುತ್ತಿದೆ; ಹಿಂದೆ ಹೋಗುವಂತಿಲ್ಲ; ಮುಂದೆ ಹೋಗಲು ದಾರಿಯಿಲ್ಲ ಎಂಬಂತಿದೆ; ದೇಶದ ಯುವಶಕ್ತಿ ಭವಿಷ್ಯವನ್ನು ನಿರ್ಮಾಣಗೊಳಿಸುತ್ತದೆ, ಬದುಕನ್ನು ಹಸನುಗೊಳಿಸುತ್ತದೆ ಎಂಬ ನಿರೀಕ್ಷೆಯನ್ನು ಸುಳ್ಳುಮಾಡುವಂತೆ ಬಹಳಷ್ಟು ಪಾತಕಗಳು ಯುವಜನಾಂಗದಿಂದಲೇ ನಡೆಯುತ್ತಿವೆ. ಮಹಿಳೆಯರಿಗೆ ಗೌರವ ಮತ್ತು ರಕ್ಷಣೆ ನೀಡಬೇಕೆಂಬ ಕೂಗಿನ ನಡುವೆಯೇ ಅತ್ಯಾಚಾರಗಳು ನಿತ್ಯಾಚಾರಗಳಾಗುತ್ತಿವೆ. ಮಹಿಳಾ ಮೀಸಲಾತಿ ಮಸೂದೆ ನಮ್ಮ ಸಂಸದರ ಬಾಯೊಳಗೆ ಕೊಳೆಯುತ್ತಿದೆ. ಒಂದೆಡೆ ಸಾರ್ವಭೌಮತ್ವ ನಮ್ಮ ಸಾಧನೆಯಾಗಬೇಕು, ಪರಕೀಯರಿಗೆೆ, ಪರದೇಶಗಳಿಗೆ ಶರಣಾಗಬಾರದೆಂಬ ಸ್ವದೇಶೀ ನೆಲೆಯಲ್ಲಿ ಮಾತನಾಡುತ್ತಲೇ ‘ಸೊವರಿನ್ ಬಾಂಡ್’ಗಳನ್ನು ಜಾರಿಗೊಳಿಸಲಾಗುತ್ತಿದೆ; ಐದು ಟ್ರಿಲಿಯನ್ ಗುರಿಯಾಗಿಸಿದ ಅರ್ಥನೀತಿಯನ್ನು ತಲುಪಬೇಕಾದರೆ ಈ ಎಲ್ಲ ಅನೀತಿಗಳು ಅನಿವಾರ್ಯವೆಂದು ನಂಬಲಾಗಿದೆ.

 ಯಾವ ದೇಶ ಹೇಗೇ ಇರಲಿ, ಭಾರತವು ಸರ್ವ ಜನಾಂಗದ ಶಾಂತಿಯ ತೋಟವೆಂಬ ಕನಸನ್ನು ಹಿರಿಯರು ಕಂಡಿದ್ದರು. ವಿಭಜನೆಯ ಎಲ್ಲ ಹಿಂಸೆಯ ನಡುವೆಯೂ ಭವಿಷ್ಯದಲ್ಲಿ ಹೀಗಾಗಲಾರದೆಂಬ ಆಶಯವನ್ನು ಆಳುವವರೂ ಆಳಿಸಿಕೊಳ್ಳುವವರೂ ಹೊಂದಿದ್ದರು. ಆದರೆ ಕಳೆದ ಏಳುದಶಕಗಳಲ್ಲಿ, ಅಂದರೆ ಕೇವಲ ಎರಡು-ಎರಡೂವರೆ ತಲೆಮಾರಿನ ಸಾರ್ಥದಲ್ಲಿ ಇವೆಲ್ಲವೂ ಬರೀ ಬುರುಡೆಗಳೆಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ‘‘ನೋಡಲಿಕ್ಕೊಳ್ಳೊಳ್ಳೆ ಹಗಲು ವೇಷಕ್ಕೇನು ಯಾವಾಗಲೂ ನಮಗೆ ಕೊರತೆಯಿಲ್ಲ; ಬುದ್ಧ ಬೇಕೇ ಬುದ್ಧ, ಗಾಂಧಿ ಬೇಕೇ ಗಾಂಧಿ, ಧರ್ಮರಾಯನೆ, ಕೃಷ್ಣ ಪರಮಾತ್ಮನೇ? ಬೇಗಡೆಯಲಂಕಾರ, ಗಡ್ಡ, ಮೀಸೆ, ಬಿಲ್ಲು ಬಾಣ, ರಾಕ್ಷಸ ಪಗಡೆ ದಿಳ್ಳಿಯೇ ಮಾರುವೇಷಗಳೊಂದು ಮಳಿಗೆ, ಸಾರಿಗೆ ನಿರಾತಂಕ ಹಳ್ಳಿಗಳವರೆಗೆ, ಪಕ್ಷ ಪಕ್ಷಾಂತರದ ಗೋಸುಂಬೆಗಳಿಗೆ.’’ ನಮ್ಮ ಕಾಲ ದಾಟಿದರೆ ನಾವು ಹೊಣೆಗಾರರಲ್ಲ ಎಂಬ ಅತೀವ ನಂಬಿಕೆಯೇ ಇಡೀ ಸಮಾಜವನ್ನು ಇಂತಹ ಅತಿರೇಕಕ್ಕೆ ನೂಕುತ್ತಿದೆಯೇ ಎಂಬುದನ್ನು ಯೋಚಿಸಬೇಕು. ಎಷ್ಟೋ ಮಿಲಿಯ ವರ್ಷಗಳಿಂದ ಬಂದು ಮುಂದುವರಿಯುವ ಜಗತ್ತಿನಲ್ಲಿ ಕೇವಲ ನೂರು ವರ್ಷ ಬದುಕಬಲ್ಲ ಮನುಷ್ಯ ತಾನು ಇಲ್ಲದಿರುವಾಗಲೂ ತನ್ನನ್ನು ನೆನಪಿಸಬಲ್ಲ ಒಳ್ಳೆಯ ಕೆಲಸಗಳಷ್ಟೇ ಅಲ್ಲ, ಕೆಡುಕುಗಳನ್ನೂ ಮಾಡಬಲ್ಲವನೆಂಬುದು ಸಾಬೀತಾಗಿದೆ. ತಲೆತಲಾಂತರಗಳಿಂದ ನಡೆದುಬಂದ ಹೋರಾಟಗಳೆಲ್ಲ ಕಲ್ಪಿತ ಪುರಾಣಗಳಾಗಿ ನಮ್ಮ ನೆನಪಿನ ಕೋಶದಲ್ಲಿ ನಡೆದದ್ದಷ್ಟೇ ಚರಿತ್ರೆಯೆಂದು ಭಾವಿಸಿ ಎರಡೇ ವಿಶ್ವಸಮರಗಳು ನಡೆದವೆಂದು ದಾಖಲಿಸಿದ ಸಮೀಪದೃಷ್ಟಿದೋಷಿಗಳು ನಾವು.

ಸರಿಯಾದ್ದನ್ನು ಮಾಡಬೇಕೆಂಬ ಉದ್ದೇಶದಿಂದ ಬದುಕಿದ ಮಹಾಮಹಿಮರನ್ನು ವರ್ಧಂತಿಗಳಂದು ಮಾತ್ರ ನೆನಪಿಸಿ ಉಳಿದಂತೆ ಮರೆತು ನಾವು ಹೇಳಿದ್ದೇ ಸರಿಯೆಂದು ತಿಳಿಯುವವರು ನಾವಾಗಿದ್ದೇವೆ. ಇದರಿಂದಾಗಿ ನಡೆದದ್ದೇ ದಾರಿಯಾಗಿ ನಮಗೆ ಹಿತವಾದ ಕೆಲಜನರ ಹಿತ ಎಲ್ಲರ ಹಿತವೆಂಬ ಸೂತ್ರಕ್ಕೆ ನೇತುಕೊಂಡಿದ್ದೇವೆ. ಇವೆಲ್ಲದರ ಪ್ರತಿಫಲಗಳನ್ನು, ಪರಿಣಾಮಗಳನ್ನು ನಾವು ವಿದೇಶಗಳಲ್ಲಿ ಕಾಣುತ್ತೇವೇನೋ? ಕೆನಡಾದಲ್ಲಿ ಗಾಯಕ ಗುರು ರಾಂಧ್ವಾ ಅವರ ಮೇಲೆ ಹಲ್ಲೆಯಾಯಿತು. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಜನಾಂಗೀಯ ದ್ವೇಷಕಾರಣವಾಗಿ ವಿದೇಶೀಯರ ವಿರುದ್ಧ ಅದರಲ್ಲೂ ಏಶ್ಯನ್ನರ ವಿರುದ್ಧ ಹಲ್ಲೆಯಾಗುತ್ತಿದೆ. ಒಂದು ದೇಶಕ್ಕೆ ಇನ್ನೊಂದು ದೇಶದ ಪ್ರಜೆಗಳು ವಲಸೆ ಮಾಡುವುದು ಸಹಜ. ಆದರೆ ಹೀಗೆ ಬರಬೇಡಿ ಎಂದು ಹೇಳುವುದು ಇಂದು ದೇಶಾಭಿಮಾನವಾಗುತ್ತಿದೆ. ಇದರ ಕೊನೆ ಏನೆಂದು ತಿಳಿದವರು ಇಂತಹ ದುರಭಿಮಾನಗಳಿಗೆ ಕೊನೆ ಹಾಡಬೇಕು. ಆದರೆ ಹಾಗೆ ಅರಿಯಬಲ್ಲ ವಿದ್ಯೆ ಮತ್ತು ಬುದ್ಧಿ ಇಂದಿನ ತಲೆಮಾರಿನಲ್ಲಿ ತೀರ ಅಪರೂಪವಾಗುತ್ತಿದೆ. ಪ್ರಾಯಃ ಹಿಟ್ಲರನ ಭೂತ ಆತ ಬದುಕಿದ್ದಾಗ ಏನು ಮಾಡಲಿಚ್ಛಿಸಿದ್ದನೋ ಅದನ್ನು ಈಡೇರಿಸಲು ಪಣತೊಟ್ಟಂತಿದೆ.

ಯಾವುದೇ ಒಂದು ರಾಜಕೀಯ ಪಕ್ಷವನ್ನಾಗಲೀ ಒಂದು ಭೌಗೋಳಿಕ ಪ್ರದೇಶವನ್ನಾಗಲೀ, ನಿರ್ದಿಷ್ಟ ಸಮಾಜವನ್ನಾಗಲೀ ಗುರಿಯಾಗಿಸಿ ಟೀಕಿಸಿದರೆ ಅದು ತಪ್ಪುಮಾತ್ರವಲ್ಲ ಹಾಸ್ಯಾಸ್ಪದವಾಗುತ್ತದೆಯೆನ್ನುವುದಕ್ಕೆ ಈ ದೇಶಕ್ಕಿಂತ ಹೆಚ್ಚಿನ ಉದಾಹರಣೆ ಸಿಗದು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕ್ಲೀಷೆಯಾಗಿ-(ಇದನ್ನು ಅಸೇತು ಹಿಮಾಚಲ ಪರ್ಯಂತ ಎಂದೂ ಅಷ್ಟೇ ಕ್ಲೀಶೆಯಾಗಿ ವರ್ಣಿಸುತ್ತಾರೆ-) ಹಬ್ಬಿರುವ ನಮ್ಮ ಮಾತೃಭೂಮಿಯಲ್ಲಿ ನಡೆದ ಮತ್ತು ನಡೆಯುತ್ತಿರುವ ಅವಾಂತರಗಳ ಸಂತೆಯ ಸದ್ದು ಗದ್ದಲಗಳಲ್ಲಿ ಪ್ರಾಮಾಣಿಕತೆಯ, ವಿವೇಕದ ಕೂಗು ಕೇಳದೇನೋ? ಸಂವೇದನಾಶೀಲರು ಇನ್ನಷ್ಟು ಎಚ್ಚೆತ್ತುಕೊಳ್ಳಬೇಕಾಗಿದೆ. ಅದು ಒಂದು ದೇಶಕ್ಕಾಗಿ ಅಷ್ಟೇ ಅಲ್ಲ, ಒಂದು ಕಾಲ-ಸಂದರ್ಭಕ್ಕಾಗಿ ಅಷ್ಟೇ ಅಲ್ಲ. ಅದು ನಿತ್ಯಸುಖಕ್ಕಾಗಿ. ಮನುಷ್ಯ ದ್ವೇಷದಿಂದ ಏನನ್ನೂ ಸಾಧಿಸಲಾರ. ಮಾನವಂತರನ್ನು ಶಿಲುಬೆಗೇರಿಸಿದವರು ಪೂಜೆಗೊಳ್ಳರು. ಅಂಗುಲಿಮಾಲನ ಸಾವಿರ ಬೆರಳುಗಳೂ ಬುದ್ಧನೆದುರು ವ್ಯರ್ಥವಾದವು. ‘‘ದ್ಯುಮಣಿ ಅಲ್ಲಮ ಸಿಕ್ಕದಾದದನು ತಮದ ಮಾಯೆಗೆ. ಮರುಳುಮಾಡಾಕ ಹೋಗಿ ಮರುಳ ಸಿದ್ಧನ ರಾಣಿ ಮರುಳಾಗ್ಯಾಳೋ ಜಂಗಮಯ್ಯಾಗಾ’’ ಎಂದು ಹಾಡಿದ್ದು ಇಂತಹ ಕ್ಷಣಿಕಗಳ ಸೋಲನ್ನು ಸಂಕೇತಿಸುವುದಕ್ಕೇ. ಮನುಷ್ಯಕುಲದ ಪರಂಪರೆ ದೊಡ್ಡದಿದೆ. ಅದು ಏಳುಬೀಳುಗಳನ್ನು ಕಂಡಿದೆ. ಈಗ ಬೀಳುಗಾಲ ಮತ್ತು ಮುಂದೆ ಏಳುಗಾಲ ಬಂದೀತು ಎಂಬುದೇ ನಮಗಿರುವ ಸಮಾಧಾನ. ರಘುವಂಶದ ಪ್ರಸಂಗವೊಂದರಲ್ಲಿ ಬರುವ ಅಜವಿಲಾಪ ಮತ್ತು ಕುಮಾರಸಂಭವದಲ್ಲಿ ಬರುವ ರತಿವಿಲಾಪದ ಕರುಣ ರಸ ಸಂಚಾರೀ ಭಾವವಾಗಿ ಮಾತ್ರ ಉಳಿದಿದೆಯೆಂಬುದು ಬಹುದೊಡ್ಡ ವ್ಯಂಗ್ಯ. ರಾಮಾಯಣ ಮಹಾಕಾವ್ಯವನ್ನು ಗಮನಿಸಿದವರು ಅದು ಶೋಕದಲ್ಲಿ ಹುಟ್ಟಿ ಶೋಕದಲ್ಲೇ ಪರ್ಯವಸಾನವಾಯಿತೆಂಬುದನ್ನು ಮರೆಯಲಾರರು. ಪಟ್ಟಾಭಿಷೇಕ ಸಂದರ್ಭದಿಂದ ಮೊದಲ್ಗೊಂಡು ಸೀತಾವಿಯೋಗದವರೆಗೆ ಕಥಾನಾಯಕ ಶ್ರೀರಾಮ ಬದುಕಿನಲ್ಲಿ ಅಷ್ಟೆಲ್ಲ ದಾರುಣ ದುಃಖ ವನ್ನನುಭವಿಸಿದ್ದನ್ನು ಮರೆತು (ಆತ ಸರಯೂ ನದಿಯಲ್ಲಿ ಮುಳುಗಿ ಅಂತ್ಯ ಕಂಡದ್ದನ್ನು ಆತ್ಮಹತ್ಯೆಯೆಂದು ಇಂದಿನ ಪರಿಭಾಷೆಯಲ್ಲಿ ಹೇಳಬಹುದಲ್ಲವೇ?) ವಿಜಯೀಭವ ಎಂದು ನಮಗನುಕೂಲವಾದಷ್ಟು ಹಾಡಿ ಹೊಗಳಿದರೇನು ಸಾರ್ಥಕ?

ಕುರುಕ್ಷೇತ್ರದ ಕುರಿತು ಧೃತರಾಷ್ಟ್ರ ಸಂಜಯನಿಗೆ ಕೇಳಿದ ಮಾತು ಮಾರ್ಮಿಕ: ‘‘ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಯುದ್ಧ ಮಾಡಲೆಂದು ಪಾಂಡು ಪುತ್ರರೂ ನನ್ನ ಮಕ್ಕಳೂ ಒಂದೆಡೆ ಸೇರಿ ಏನು ಮಾಡಿದರು? ಹೇಳು.’’ ‘ನನ್ನ ಮಕ್ಕಳೂ’ ಎಂಬ ಉದ್ಗಾರ ಇಂದಿನ ಎಲ್ಲ ರಾಜಕಾರಣಿಗಳಿಗೆ ಅನ್ವಯಿಸುವ ಮಮಕಾರದ ಮಾತು. ಮಹಾಭಾರತ ಯುದ್ಧ ನಡೆದ ಆನಂತರ ಗೆದ್ದವರಿಗೇನು ದಕ್ಕಿತು ಎಂಬುದನ್ನು ಯೋಚಿಸದೆ ಆ ವಿಜಯವನ್ನು ಧರ್ಮದ ವಿಜಯವೆಂದು ಹಿಗ್ಗುವವರು ಅಂತಿಮವಾಗಿ ತಮ್ಮ ಆನಂತರದ ಪೀಳಿಗೆಗೆ ದುಃಖವನ್ನೇ ಕೊಟ್ಟರು. ಯಾವ ಮಹಾನುಭಾವರೂ ಸದಾಸುಖಿಗಳಾಗಿರಲಿಲ್ಲ. ಎಷ್ಟೇ ದುಃಖಿಯಾದವನೂ ಹಾಸ್ಯಕ್ಕೆ ನಗುತ್ತಾನೆ; ಹೊಟ್ಟೆ ತುಂಬಿದಾಗ ಸಂತೃಪ್ತಿಗೊಳ್ಳುತ್ತಾನೆ. ಅಳುವ ಕಡಲಲೂ ತೇಲಿ ಬರುತಲಿದೆ ನಗೆಯ ಹಾಯಿದೋಣಿ ಎಂದು ಕವಿಹೇಳಿದ್ದನ್ನು ವಿವೇಚನೆಯಿಲ್ಲದೆ ಗ್ರಹಿಸಿದರೆ ನಗೆಯ ಹಾಯಿದೋಣಿಯಷ್ಟೇ ನೆನಪಾಗಿ ಅಳುವ ಕಡಲು ನೆನಪಾಗದು. ಏಕೆಂದರೆ ಹೀಗೆ ಹೇಳಿದವರೇ ಜಗತ್ತೆಂದರೇನು ಬಿಡಿ, ನಾವಿರುವ ಈ ಹಾಳು ಬಾವಿಯಲ್ಲವೇ? ಎಂದರು.

ಒಳ್ಳೆಯದಾಗಬೇಕೆಂದು ಮತ್ತು ಅಂತಹ ಕಾಲ ನಮ್ಮ ಬದುಕಿನಲ್ಲೇ ಬರಲೆಂದು ಕಾಯುವ ಜನರಿರುತ್ತಾರೆ. ಹಾಗೆಯೇ ನಿತ್ಯ ಕುರುಕ್ಷೇತ್ರವನ್ನು ಬಯಸುವ ಪಾಪಿಗಳು ಎಲ್ಲ ಕಾಲದಲ್ಲೂ ಜಗತ್ತಿನ ಎಲ್ಲೆಡೆಯೂ ಇರುತ್ತಾರೆ. ಸೈತಾನ ಮರುಹುಟ್ಟು ಪಡೆಯುತ್ತಾನೆ ಮತ್ತು ಆಗ ಮುಗ್ಧ ಜೀವಗಳ ರಕ್ತ ಹಿಂಡಬಹುದು, ಸವಿಯಬಹುದು ಎಂಬ ನಿರೀಕ್ಷೆಯಿಂದ ಕಾಯುವ ಭಕ್ತರೂ ಇದ್ದಾರೆ. ಇವರ ನಡುವಣ ಮಹಾಯುದ್ಧದ ದೃಶ್ಯ ಧಾರಾವಾಹಿ ಈಗ ನಡೆಯುತ್ತಿದೆ. ಅದನ್ನು ದೂರದಿಂದಲೇ ನೋಡಿ ಏನು ದಕ್ಕುತ್ತದೆಯೋ ಅದನ್ನು ಅನುಭವಿಸೋಣ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top