ಅಂಗಾಂಗ ದಾನ: ಸಾವಿನ ಬಳಿಕವೂ ಸಾರ್ಥಕತೆ! | Vartha Bharati- ವಾರ್ತಾ ಭಾರತಿ

ಅಂಗಾಂಗ ದಾನ: ಸಾವಿನ ಬಳಿಕವೂ ಸಾರ್ಥಕತೆ!

ಸುಮಾರು 130 ಕೋಟಿಗೂ ಹೆಚ್ಚಿನ ಜನ ಸಂಖ್ಯೆ ಇರುವ ಭಾರತ ದೇಶದಲ್ಲಿ ಲಕ್ಷಾಂತರ ಮಂದಿಗೆ ಮೂತ್ರಪಿಂಡ, ಯಕೃತ್, ಹೃದಯ, ಪಿತ್ತಜನಕಾಂಗ ಮತ್ತು ಶ್ವಾಸಕೋಶಗಳ ತುರ್ತು ಅಗತ್ಯ ಇದೆ. ನಮ್ಮ ಬೃಹತ್ ಭಾರತದಲ್ಲಿ ಬಹಳಷ್ಟು ಅಂಗಾಂಗಗಳು ಲಭ್ಯವಾಗುವ ಅವಕಾಶವಿದ್ದರೂ, ದಾನಿಗಳ ಕೊರತೆಯಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ಕೇವಲ ಸಾವಿರಗಳ ಸಂಖ್ಯೆಯಲ್ಲಿರುವ ಅಂಗಾಂಗ ದಾನಿಗಳಿಂದಾಗಿ ಲಕ್ಷಾಂತರ ಮಂದಿಯ ಜೀವ ನಷ್ಟವಾಗುತ್ತಿದೆ. ಸಾಕಷ್ಟು ಮಾಹಿತಿಯ ಕೊರತೆ, ಕಾನೂನಿನ ಅಡಚಣೆ ಮತ್ತು ಸೂಕ್ತ ಮಾರ್ಗದರ್ಶನ ಲಭ್ಯವಿಲ್ಲದ ಕಾರಣ ಬದುಕಿ ಬಾಳಬೇಕಾದ ಜೀವಗಳು ಕಮರಿ ಹೋಗುತ್ತಿವೆ. ಉದಾಹರಣೆಯೆಂದರೆ, ವಾರ್ಷಿಕ ಸರಾಸರಿ 2 ಲಕ್ಷ ಮಂದಿಗೆ ಭಾರತದಲ್ಲಿ ಕಿಡ್ನಿ ಕಸಿಯ ಅವಶ್ಯಕತೆ ಇದೆ. ಅದರೆ ಕೇವಲ 5ರಿಂದ 6ಸಾವಿರ ಮಂದಿಗೆ ಮಾತ್ರ ದಾನಿಗಳು ಸಿಗುತ್ತಾರೆ. ಈ ನಿಟ್ಟಿನಲ್ಲಿ ಅಂಗಾಂಗ ದಾನಗಳ ಬಗ್ಗೆ ಜಾಗೃತಿ ನೀಡುವ ಮಹತ್ಕಾರ್ಯ ಆಗಲೇಬೇಕು. ನಮ್ಮಲ್ಲಿ ಬಹಳಷ್ಟು ಮಂದಿಗೆ ಹಗಲು ಇರುಳಾಗುತ್ತದೆಯೇ ಹೊರತು, ಬದುಕಿಗೆ ಗೊತ್ತು ಗುರಿಯಿಲ್ಲ. ಯಾಕೆ ಬದುಕುತ್ತಿದ್ದೇವೆ ಎಂಬುದರ ಅರಿವೂ ಇರುವುದಿಲ್ಲ. ಬದುಕಿದ್ದೂ ಸತ್ತಂತೆ ಬದುಕುವ ಬದಲು, ಸತ್ತ ಮೇಲೂ ಬದುಕುವುದಲ್ಲಿಯೇ ನಿಜವಾದ ಸಾರ್ಥಕತೆ ಇದೆ.
ಏನಿದು ಅಂಗಾಂಗ ದಾನ?
ಅಂಗಾಂಗ ದಾನಗಳಲ್ಲಿ ಎರಡು ವಿಧಗಳಿವೆ.
1. ಜೀವಂತ ವ್ಯಕ್ತಿಗಳು ಮಾಡುವ ದಾನ:
ವ್ಯಕ್ತಿಯ ದೇಹದಲ್ಲಿ ಮರುಸೃಷ್ಟಿಯಾಗುವ ಅಂಗಾಂಗ ಗಳನ್ನು ಜೀವಕೋಶಗಳನ್ನು ಮತ್ತು ದ್ರವ್ಯಗಳನ್ನು ದಾನ ಮಾಡುವುದು.
ಉದಾಹರಣೆಗೆ: ರಕ್ತದಾನ, ವೀರ್ಯದಾನ, ಚರ್ಮದಾನ, ಅಸ್ಥಿಮಜ್ಜೆದಾನ ಇತ್ಯಾದಿ. ಇನ್ನೊಂದು ವಿಧವೆಂದರೆ ದೇಹದ ಯಾವುದಾದರೂ ಅಂಗಗಳನ್ನು ಅಥವಾ ಅದರ ಭಾಗಗಳನ್ನು ಇನ್ನೊಬ್ಬನಿಗೆ ದಾನ ಮಾಡುವುದು. ಉದಾಹರಣೆಗೆ ಎರಡು ಕಿಡ್ನಿಗಳಲ್ಲಿ ಒಂದನ್ನು ನೀಡುವುದು, ಯಕೃತಿನ ಒಂದು ಭಾಗ ಅಥವಾ ಸಣ್ಣ ಕರುಳಿನ ಒಂದು ಭಾಗ ಇತ್ಯಾದಿ.
2. ಎರಡನೇ ದಾನ ಮೃತ ಅಥವಾ ಮೆದುಳು ನಿಷ್ಕ್ರಿಯಗೊಂಡ (BRAIN DEATH) ವ್ಯಕ್ತಿಗಳ ಅಂಗಾಂಗವನ್ನು ಇನ್ನೊಂದು ರೋಗಿಗೆ ನೀಡುವುದು ಅಥವಾ ಜೋಡಿಸುವುದು.
ಉದಾ: ಹೃದಯ, ಶ್ವಾಸಕೋಶ, ಪಿತ್ತ ಜನಕಾಂಗ, ಸಣ್ಣ ಕರುಳು, ಮೇದೊಜೀರಕಾಂಗ, ಕಾರ್ನಿಯಾ (ಅಕ್ಷಿಪಟಲ) ಮೂಳೆಗಳು, ಹೃದಯದ ಕವಾಟಗಳು ಇತ್ಯಾದಿ ಒಬ್ಬ ಮೃತ ವ್ಯಕ್ತಿಯಿಂದ ಕನಿಷ್ಠ 8 ಜೀವಗಳನ್ನು ಉಳಿಸಬಹುದು. ಅಂಕಿ ಅಂಶಗಳ ಪ್ರಕಾರ, ನಿಮಿಷಕ್ಕೊಬ್ಬರು ಸಾಯುತ್ತಾರೆ. ಪ್ರತಿಯೊಬ್ಬರೂ ಅಂಗಾಂಗ ದಾನ ಮಾಡಿದಲ್ಲಿ ನಿಮಿಷಕ್ಕೆ 8 ಜೀವಗಳು ಪುನರ್ಜನ್ಮ ಪಡೆಯುವ ಅವಕಾಶವಿದೆ.
ಏನಿದು ಬ್ರೈನ್ ಡೆತ್?
 ಅಪಘಾತದಿಂದ ತಲೆಗೆ ಏಟು ಬಿದ್ದು ಅಥವಾ ಇನ್ನಾವುದೇ ಕಾರಣದಿಂದ ಮೆದುಳಿಗೆ ಘಾಸಿಯಾಗಿ ಸಂಪೂರ್ಣ ರಕ್ತಸಂಚಾರ ನಿಂತಿರುತ್ತದೆ. ಆಮ್ಲಜನಕದ ಪೂರೈಕೆಯೂ ಸ್ಥಗಿತವಾಗಿರುತ್ತದೆ. ಆದರೆ ಹೃದಯ, ಕಿಡ್ನಿ, ಶ್ವಾಸಕೋಶ ತನ್ನ ಪಾಡಿಗೆ ತಾನು ಕಾರ್ಯ ಮಾಡುತ್ತಿರುತ್ತದೆ. ವ್ಯಕ್ತಿಯನ್ನು ತೀವ್ರ ನಿಗಾ ವಿಭಾಗದಲ್ಲಿ ಕೃತಕ ಉಸಿರಾಟದ ವ್ಯವಸ್ಥೆಯ ಮುಖಾಂತರ, ಉಸಿರಾಟಕ್ಕೆ ಬೇಕಾದ ಆಮ್ಲಜನಕದ ಪೂರೈಕೆ ನಡೆಯುತ್ತಿರುತ್ತದೆ. ಹೃದಯ, ಶ್ವಾಸಕೋಶ, ಪಿತ್ತಜನಕಾಂಗ, ಮೂತ್ರಪಿಂಡಗಳಿಗೆ ಆಮ್ಲಜನಕ ಸರಬರಾಜು ಆಗುತ್ತಲೇ ಇರುತ್ತದೆ. ವ್ಯಕ್ತಿ ಮಾತ್ರ ಬದುಕಿದ್ದೂ, ಸತ್ತಿರುತ್ತಾನೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ‘ಬ್ರೈನ್ ಡೆತ್’ ಅಥವಾ ಮೆದುಳು ನಿಷ್ಕ್ರಿಯತೆ ಎಂದು ಹೇಳುತ್ತಾರೆ. ಇಂತಹ ವ್ಯಕ್ತಿಯ ದೇಹದಿಂದ ಅಗತ್ಯರೋಗಿಗಳಿಗೆ ಅಂಗಾಂಗಗಳನ್ನು ತೆಗೆದು, ವ್ಯಕ್ತಿಯ ಬಂಧುಗಳ ಸಮ್ಮತಿಯೊಂದಿಗೆ ಜೋಡಿಸಬಹುದು. ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಗಳು ಕೃತಕ ಉಸಿರಾಟದ ವ್ಯವಸ್ಥೆ ತೆಗೆದೊಡನೆಯೇ ಸಾವನ್ನುಪುತ್ತಾರೆ. ಅಂಗಾಂಗ ದಾನ ಮಾಡಿದಲ್ಲಿ ಸತ್ತು ಹುತಾತ್ಮರಾಗುವುದರ ಜೊತೆಗೆ ಮತ್ತೊಬ್ಬ ವ್ಯಕ್ತಿಯಲ್ಲಿ ಮರುಜನ್ಮ ಪಡೆಯುತ್ತಾರೆ ಮತ್ತು ಸಾವಲ್ಲೂ ಸಾರ್ಥಕತೆಯನ್ನು ಪಡೆಯುತ್ತಾರೆ. ವೈದ್ಯರು ಲಿಖಿತ ರೂಪದಲ್ಲಿ ‘ಬ್ರೈನ್ ಡೆತ್’ ಎಂದು ವರದಿ ನೀಡಿದ ಬಳಿಕವೇ, ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಅನುಸರಿಸಿ ಅಂಗಾಂಗ ದಾನಕ್ಕೆ ಸಮ್ಮತಿ ನೀಡಲಾಗುತ್ತದೆ. ಈ ರೀತಿ ದಾನಿಗಳಿಂದ ಪಡೆದ ಹೃದಯವನ್ನು ನಾಲ್ಕೈದು ಗಂಟೆಗಳ ಒಳಗೆ, ಹತ್ತು ಹನ್ನೆರಡು ಗಂಟೆಗಳ ಒಳಗೆ ಪಿತ್ತಜನಕಾಂಗ ಹಾಗೂ 24 ಗಂಟೆಗಳ ಒಳಗೆ ಮೂತ್ರಪಿಂಡವನ್ನು ಅಗತ್ಯ ರೋಗಿಗಳಿಗೆ ಜೋಡಿಸಲಾಗುತ್ತದೆ. ಇದೇ ರೀತಿ ಚರ್ಮ, ಹೃದಯದ ಕವಾಟಗಳು ಮೂಳೆಗಳನ್ನು ದಾನ ಮಾಡಲಾಗುತ್ತದೆ. ಸಹಜವಾಗಿ ಸತ್ತ ವ್ಯಕ್ತಿಗಳಿಂದ ನೇತ್ರದಾನವನ್ನು 4ರಿಂದ 5ಗಂಟೆಗಳ ಒಳಗೆ ಬೇರೆಯವರಿಗೆ ಜೋಡಿಸಲಾಗುತ್ತದೆ. ಒಟ್ಟಿನಲ್ಲಿ ಸತ್ತು ಮಣ್ಣಾಗುವ ಹಲವಾರು ಅಂಗಾಂಗಗಳು ಮತ್ತೆ ಬೇರೊಬ್ಬ ರೋಗಿಯಲ್ಲಿ ಬದುಕಿ ಬಾಳುತ್ತವೆ. ಒಟ್ಟಿನಲ್ಲಿ ರಕ್ತದಾನ, ದೇಹದಾನ, ನೇತ್ರದಾನದಂತೆಯೇ ಅಂಗಾಂಗದಾನವೂ ಬಹಳ ಪವಿತ್ರವಾದ ದಾನವಾಗಿರುತ್ತದೆ.
ಯಾರು ದಾನ ಮಾಡಬಹುದು? 
ಅಂಗಾಂಗ ದಾನಕ್ಕೆ ಯಾವುದೇ ರೀತಿಯ ಚೌಕಟ್ಟಿಲ್ಲ. ಸಣ್ಣ ಮಗುವಿನಿಂದ ಹಿಡಿದು ವೃದ್ಧರೂ ಕೂಡಾ ಅಂಗಾಂಗ ದಾನ ಮಾಡಬಹುದು. ಸ್ವಇಚ್ಛೆಯಿಂದ ಯಾರು ಬೇಕಾದರೂ ಅಂಗಾಂಗ ದಾನ ಮಾಡಬಹುದು. ಅದರೆ ನಮ್ಮ ಭಾರತ ದೇಶದಲ್ಲಿ ಮೂಢನಂಬಿಕೆ ಮತ್ತು ತಪ್ಪುಕಲ್ಪನೆಗಳಿಂದಾಗಿ, ನಮ್ಮಲ್ಲಿ ಅಂಗಾಂಗ ದಾನಿಗಳ ಸಂಖ್ಯೆ ಬಹಳ ಕಡಿಮೆ ಇದೆ. ಸಂಪೂರ್ಣವಾಗಿ ಅಂಗಾಂಗಗಳಿಲ್ಲದ ದೇಹಕ್ಕೆ ಅಂತ್ಯಕ್ರಿಯೆ ಮಾಡಿದಲ್ಲಿ ಪರಲೋಕ ಪ್ರಾಪ್ತಿಯಾಗುವುದಿಲ್ಲ, ಮೋಕ್ಷ ಸಿಗುವುದಿಲ್ಲ ಎಂಬ ಮೂಢನಂಬಿಕೆಯಿಂದಾಗಿ ಅಂಗಾಂಗ ದಾನಿಗಳ ಸಂಖ್ಯೆಯ ಕೊರತೆ ಬಾಧಿಸುತ್ತಿದೆ. ಅದೇ ರೀತಿ ಸರಿಯಾದ ನಿಯಂತ್ರಣ ಮತ್ತು ಸೂಕ್ತ ಕಾನೂನಿನ ಚೌಕಟ್ಟು ಇಲ್ಲದ ಕಾರಣ 80 ಮತ್ತು 90ರ ದಶಕದಲ್ಲಿ ಅಂಗಾಂಗ ಮಾರಾಟ ದಂದೆ ವ್ಯಾಪಕವಾಗಿ ಹುಟ್ಟಿಕೊಂಡಿತ್ತು. ಈ ನಿಟ್ಟಿನಲ್ಲಿ ಸಾರ್ವಜನಿಕ ಸಂಸ್ಥೆಗಳು, ಸರಕಾರಿ ಸಂಸ್ಥೆಗಳು ಮತ್ತು ಸ್ವಯಂ ಸೇವಕ ಸಂಘಗಳು, ಸಾರ್ವಜನಿಕರನ್ನು ಉತ್ತೇಜಿಸುವ ಕಾರ್ಯ ಮಾಡಬೇಕು ಮತ್ತು ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವ ತುರ್ತು ಅಗತ್ಯ ಇದೆ. ಅಂಗಾಂಗ ದಾನಿಗಳು ಮತ್ತು ದಾನ ಪಡೆಯುವ ವ್ಯಕ್ತಿಗಳ ನಡುವಿನ ಅಂತರ ಕಡಿಮೆ ಮಾಡುವ ದಾನಿಗಳ ಬ್ಯಾಂಕ್ ಸ್ಥಾಪಿಸುವ ತುರ್ತು ಅವಶ್ಯಕತೆ ಇದೆ. ಹೀಗೆ ಮಾಡಿದಲ್ಲಿ ಬದಲಿ ಅಂಗ ಸಿಗದೆ ಸಾಯುವ ರೋಗಿಗಳ ಸಂಖ್ಯೆ ಕಡಿಮೆಯಾಗಬಹುದು. ಬಡವ ಬಲ್ಲಿದ ಎನ್ನದೆ ಎಲ್ಲರಿಗೂ ಅಂಗಾಂಗ ಸಿಗುವ ನಿಟ್ಟಿನಲ್ಲಿ ಸರಕಾರ ತುರ್ತು ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆಯೂ ಇದೆ.
ಕಾನೂನು ಏನನ್ನುತ್ತದೆ?
   ಭಾರತದಲ್ಲಿ 1994ರಲ್ಲಿ ಅಂಗಾಂಗ ದಾನವನ್ನು ಸರಕಾರ ಕಾನೂನು ಬದ್ಧಗೊಳಿಸಿದೆ. 1967ರಲ್ಲಿ ಮೊದಲ ಬಾರಿ ಭಾರತದಲ್ಲಿ ಮೂತ್ರಪಿಂಡದ ಕಸಿ ಮಾಡಲಾಯಿತು. ಮತ್ತು 1994ರಲ್ಲಿ ಬದಲಿ ಹೃದಯವನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಜೋಡಿಸಲಾಯಿತು ಮತ್ತು 1995ರಲ್ಲಿ ಮದ್ರಾಸಿನ ಆಸ್ಪತ್ರೆಯಲ್ಲಿ ಅಂಗಾಂಗ ಬದಲಿ ಜೋಡಣೆಯನ್ನು ಯಶಸ್ವಿಯಾಗಿ ಮಾಡಲಾಯಿತು. ಭಾರತದಾದ್ಯಂತ ಅಂಗಾಂಗ ಜೋಡಿಸುವ ನೂರಾರು ಸುಸಜ್ಜಿತ ಆಸ್ಪತ್ರೆಗಳಿವೆ. ಆದರೆ ದುರದೃಷ್ಟವೆಂದರೆ ಅಂಗಾಂಗ ದಾನಿಗಳ ತೀವ್ರ ಕೊರತೆಯಿದೆ. ಜನರನ್ನು ಜಾಗೃತಿಗೊಳಿಸುವ ಕೆಲಸ ತುರ್ತಾಗಿ ನಡೆಯಬೇಕಾಗಿದೆ. ಅಂಕಿಅಂಶಗಳ ಪ್ರಕಾರ 2012ರಲ್ಲಿ ಸುಮಾರು ಒಂದೂವರೆ ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು ಮತ್ತು ಇದರಲ್ಲಿ ಕೇವಲ ಒಂದು ಶೇಕಡಾ ಮಂದಿ ಮಾತ್ರ ಅಂಗಾಂಗ ದಾನ ಮಾಡಿದ್ದಾರೆ ಎಂಬುದು ಬಹಳ ಖೇದಕರ ವಿಚಾರ. ಅಂದಾಜಿನ ಪ್ರಕಾರ ಭಾರತದಲ್ಲಿ ವರ್ಷಕ್ಕೆ 2 ಲಕ್ಷ ಮಂದಿಗೆ ಕಿಡ್ನಿಯ ಅಗತ್ಯವಿದೆ. ಆದರೆ ಕೇವಲ 5,000ದಿಂದ 6,000 ಮಂದಿಗೆ ಮಾತ್ರ ಕಿಡ್ನಿ ಸಿಗುತ್ತದೆ. 50ರಿಂದ 55 ಮಂದಿಗೆ ಹೃದಯದ ಅಗತ್ಯವಿದ್ದರೆ, ಕೇವಲ ಹತ್ತಿಪ್ಪತ್ತು ಮಂದಿಗೆ ಹೃದಯ ದೊರಕುತ್ತಿದೆ. 50,000 ಮಂದಿಗೆ ಯಕೃತ್ತಿನ ಅವಶ್ಯಕತೆ ಇದ್ದು ಕೇವಲ 800ರಿಂದ 1,000 ಮಂದಿಗೆ ಮಾತ್ರ ಈ ಭಾಗ್ಯ ದೊರಕುತ್ತಿದೆ. ಸಂತೋಷದ ವಿಚಾರವೆಂದರೆ ನೇತ್ರದಾನಿಗಳ ಮತ್ತು ರಕ್ತದಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
ಜೀವಂತ ವ್ಯಕ್ತಿಯು ದಾನ ನೀಡಬಹುದಾದ ದೇಹದ ಅಂಗಗಳು
1.ರಕ್ತ 2. ಅಸ್ಥಿಮಜ್ಜೆ 3. ಕಿಡ್ನಿ 4. ಯಕೃತ್ತು (ಲಿವರ್)ನ ಭಾಗ 5. ಶ್ವಾಸಕೋಶದ (Lungs ) ಭಾಗ
6.ಮೇದೊಜೀರಕ ಗ್ರಂಥಿಯ (Pancreas ) ಭಾಗ
ಸಹಜ ಮರಣಾನಂತರ ವ್ಯಕ್ತಿಯು ದಾನ ಮಾಡಬಹುದಾದ ದೇಹದ ಅಂಗಗಳು
1. ಕಣ್ಣುಗಳು 2. ಹೃದಯದ ಕವಾಟಗಳು 3. ಚರ್ಮ ಮತ್ತು ಒಳಪದರಗಳು
4. ಎಲುಬು ಮತ್ತು ಟೆಂಡಾನ್‌ಗಳು5. ಕಾರ್ಟಿಲೇಟ್ 6. ರಕ್ತನಾಳಗಳು
ಬ್ರೈನ್ ಡೆತ್‌ನ ಬಳಿಕ ದಾನ ಮಾಡ ಬಹುದಾದ ಅಂಗಗಳು
 
1.ಮೂತ್ರಪಿಂಡಗಳು (ಕಿಡ್ನಿ) 2. ಯಕೃತ್ತು (ಲಿವರ್) 3. ಶ್ವಾಸಕೋಶಗಳು 4. ಮೇದೊಜೀರಕ ಗ್ರಂಥಿ 5. ಸಣ್ಣ ಕರುಳು 6. ಧ್ವನಿ ಪೆಟ್ಟಿಗೆ 7. ರಕ್ತನಾಳಗಳು 8. ಗರ್ಭಕೋಶ 9. ಅಂಡಾಶಯ ಮತ್ತು ಅಂಡಾಣುಗಳು 10. ಕಣ್ಣುಗಳು 11. ಮಧ್ಯ ಕಿವಿಯ ಮೂಳೆಗಳು 12. ಚರ್ಮ ಮತ್ತು ಒಳಪದರಗಳು 13. ಎಲುಬು ಮತ್ತು ಮೂಳೆಗಳು 14. ಕಾರ್ಟಿಲೇಜ್ 15. ಟೆಂಡಾನ್‌ಗಳು 16. ನರಗಳು 17. ಕೈಗಳು, ಕೈಬೆರಳುಗಳು ಮತ್ತು ಕಾಲ್ಬೆರಳುಗಳು 18. ಮುಖಜವಾಬ್ದಾರಿ
 ನಮ್ಮ ಬಂಧುಗಳು, ಸ್ನೇಹಿತರು ಅಪಘಾತದಲ್ಲಿ ಮೃತ ಪಟ್ಟಲ್ಲಿ ಅವರನ್ನು ತಿಳಿಹೇಳಿ ಅಂಗಾಂಗದಾನಕ್ಕೆ ಒಪ್ಪಿಸಬೇಕು. ನಾವು ಕೂಡಾ ದೇಹದಾನ ಮತ್ತು ನೇತ್ರದಾನಕ್ಕೆ ಒಪ್ಪಿಗೆ ನೀಡಬೇಕು. ಆಕಸ್ಮಿಕವಾಗಿ ಸಾವು ಬಂದಲ್ಲಿ ಅಂಗಾಂಗ ದಾನಕ್ಕೂ ಮೊದಲೇ ಒಪ್ಪಿಗೆ ನೀಡಿದಲ್ಲಿ ಮತ್ತಷ್ಟು ಜೀವಗಳು ಉಳಿಯಬಹುದು. ಇನ್ನೇಕೆ ತಡಮಾಡುತ್ತೀರಿ ಗೆಳೆಯರೇ, ತಮ್ಮ ಹೆಸರನ್ನು ಸ್ಥಳೀಯ ನೇತ್ರದಾಮಗಳಲ್ಲಿ, ಮೆಡಿಕಲ್ ಕಾಲೇಜುಗಳಲ್ಲಿ ನೋಂದಾಯಿಸಿ ನೇತ್ರದಾನ, ದೇಹದಾನ ಮತ್ತು ಅಂಗಾಂಗ ದಾನಕ್ಕೆ ಸಿದ್ಧರಾಗಿ. ಬದುಕಿದ್ದೂ ಸತ್ತಂತೆ ಬದುಕುವುದಕ್ಕಿಂತ ಸತ್ತ ಬಳಿಕವೂ ಬದುಕುವುದರಲ್ಲಿಯೇ ಸಾರ್ಥಕತೆ ಅಡಗಿದೆ. ಕಣ್ಣಿದ್ದೂ ಕುರುಡಾಗಿ ಬದುಕುವುದಕ್ಕಿಂತ ನಾವು ಸತ್ತ ಬಳಿಕವೂ ನಮ್ಮ ಕಣ್ಣುಗಳಿಂದ ಇನ್ನೊಬ್ಬರು ನೋಡುವುದಕ್ಕಿಂತ ದೊಡ್ಡ ಭಾಗ್ಯ ಇನ್ಯಾವುದೂ ಇಲ್ಲ. ನಮ್ಮ ಸಾವಿನ ಬಳಿಕವೂ ನಮ್ಮ ಹೃದಯ ಇನ್ನೊಬ್ಬರ ದೇಹದಲ್ಲಿ ಲಬ್-ಡಬ್ ಎಂದು ಬಡಿದು ಕೊಳ್ಳುತ್ತಲೇ ಇರುವುದರಿಂದ ಸಿಗುವ ಆತ್ಮತೃಪ್ತಿ, ನೆಮ್ಮದಿ ಮತ್ತು ಶಾಂತಿ ಎಷ್ಟೇ ಹಣ ನೀಡಿದರೂ ನಮ್ಮ ಕುಟುಂಬ ವರ್ಗಕ್ಕೆ ದೊರಕಲಿಕ್ಕಿಲ್ಲ. ನಾವು ಸತ್ತ ಬಳಿಕ ನಮ್ಮ ದೇಹ ಮಣ್ಣಲ್ಲಿ ಮಣ್ಣಾಗಿ ಹೋಗುವುದಕ್ಕಿಂತ ಅಂಗಾಂಗಗಳನ್ನು ದಾನ ಮಾಡಿದ್ದಲ್ಲಿ ನಾಲ್ಕಾರು ಜೀವಗಳು ಬದುಕಿ ಬಾಳಬಹುದು. ಜಾತಿ, ಮತ, ಕೋಮು ದ್ವೇಷ ದಳ್ಳುರಿಗಳಿಂದ ಬಾಳುತ್ತಿರುವ ಈ ಕಾಲಘಟ್ಟದಲ್ಲಿ ಅಂಗಾಂಗ ದಾನದ ಶಪಥ ಮಾಡಿ ಸಾವನ್ನೇ ಗೆಲ್ಲೋಣ, ಸತ್ತ ಬಳಿಕವೂ ಮತ್ತೆ ಬದುಕೋಣ, ಮಾನವತೆಯನ್ನು ಎತ್ತಿ ಹಿಡಿಯೋಣ.

ನೆನಪಿರಲಿ
* ಅಂಗಾಂಗ ದಾನ ಮಾಡುವುದಕ್ಕೆ ಸಂಬಂಧಿಸಿದ ಎಲ್ಲಾ ಖರ್ಚು ವೆಚ್ಚಗಳನ್ನು ಆಸ್ವತ್ರೆಯೇ ಭರಿಸುತ್ತದೆ ಅಥವಾ ದಾನ ಪಡೆದುಕೊಳ್ಳುವ ವ್ಯಕ್ತಿ ಭರಿಸುತ್ತಾರೆ. ದಾನಿಗಳಿಗೆ ಅಂಗಾಂಗ ದಾನದಿಂದ ಸಿಗುವ ಸಾರ್ಥಕತೆಗೆ ಯಾವ ಮೌಲ್ಯವನ್ನೂ ಕಟ್ಟಲಾಗದು.
* ಅಂಗಾಂಗ ದಾನ ಮಾಡುವುದಕ್ಕೆ ಯಾವುದೇ ಕಾನೂನಿನ ತೊಡಕಿರುವುದಿಲ್ಲ. ಭಾರತ ಸರಕಾರ ಅಂಗಾಂಗ ದಾನವನ್ನು 1994ರಲ್ಲಿಯೇ ಕಾನೂನುಬದ್ಧಗೊಳಿಸಿದೆ. ಅಂಗಾಂಗ ದಾನ ಮಾಡಲು ನಿಮಗೆ ದೊಡ್ಡ ಮನಸ್ಸೊಂದಿದ್ದರೆ ಸಾಕು. ಆದರೆ ಅಂಗಾಂಗಗಳನ್ನು ಹಣಕ್ಕಾಗಿ ಮಾರುವಂತಿಲ್ಲ ಮತ್ತು ಹಣಕೊಟ್ಟು ಖರೀದಿಸುವಂತಿಲ್ಲ.
* ಪ್ರತಿಯೊಬ್ಬ ಮನುಷ್ಯನೂ ಅಂಗಾಂಗ ದಾನ ಮಾಡಬಹುದು. ತಂದೆ ತಾಯಂದಿರು ಒಪ್ಪಿದಲ್ಲಿ ಮಕ್ಕಳೂ ಅಂಗಾಂಗ ದಾನ ಮಾಡಬಹುದು. ನೂರು ವರ್ಷಗಳವರೆಗೆ ಕಾರ್ನಿಯಾ ಮತ್ತು ಚರ್ಮ; 70 ವರ್ಷದವರೆಗೆ ಕಿಡ್ನಿ ಮತ್ತು ಲಿವರ್ (ಯಕೃತ್ತು); 50 ವರ್ಷದವರೆಗೆ ಹೃದಯ ಮತ್ತು ಶ್ವಾಸಕೋಶ ಹಾಗೂ 40 ವರ್ಷದವರೆಗೆ ಹೃದಯದ ಕವಾಟಗಳನ್ನು ದಾನ ಮಾಡಬಹುದಾಗಿದೆ.
* ಹೃದಯ ಸ್ತಂಭನವಾಗಿ ಸಹಜವಾದ ಸಾವು ಸಂಭವಿಸಿದಲ್ಲಿ ಅಂಗಾಂಗಗಳನ್ನು ದಾನ ಮಾಡಲು ಸಾಧ್ಯವಿಲ್ಲ. ಆದರೆ ಅಂಗಾಂಶಗಳಾದ ಅಕ್ಷಿಪಟಲ (ಕಾರ್ನಿಯಾ), ಹೃದಯದ ಕವಾಟಗಳು, ಚರ್ಮ, ಮೂಳೆ, ಟೆಂಡಾನ್, ಲಿಂಗಮೆಂಟ್‌ಗಳು, ರಕ್ತನಾಳಗಳು ಮುಂತಾದ ನಿರಂತರವಾದ ರಕ್ತ ಪರಿಚಲನೆ ಇಲ್ಲದ ಅಂಗಾಂಶಗಳನ್ನು ಕುಟುಂಬದವರ ಸಮ್ಮತಿಯೊಂದಿಗೆ ದಾನ ಮಾಡಬಹುದು. ಬ್ರೈನ್ ಡೆತ್ ಅಥವಾ ಮೆದುಳು ನಿಷ್ಕ್ರಿಯಗೊಂಡ ಬಳಿಕವೂ ಹೃದಯ, ಶ್ವಾಸಕೋಶ, ಯಕೃತ್ತು, ಮೂತ್ರಪಿಂಡಗಳು, ಸಣ್ಣಕರುಳು ಮುಂತಾದ ಅಂಗಗಳಿಗೆ ಕೃತಕ ಉಸಿರಾಟದ (ವೆಂಟಿಲೇಟರ್) ಸಹಾಯದಿಂದ ನಿರಂತರ ರಕ್ತದ ಪೂರೈಕೆಯಾಗುವ ಕಾರಣದಿಂದ ಈ ಅಂಗಾಂಗಗಳನ್ನು ಕುಟುಂಬದವರ ಸಮ್ಮತಿಯೊಂದಿಗೆ ಇತರ ಅಗತ್ಯ ರೋಗಿಗಳಿಗೆ ದಾನ ಮಾಡಬಹುದು. ದೇಹದ ಅಂಗಗಳನ್ನು ವ್ಯಕ್ತಿಯು ಬ್ರೈನ್ ಡೆತ್ ಆದ ಬಳಿಕ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ತೆಗೆದಲ್ಲಿ ಒಳ್ಳೆಯದು. ಮೆದುಳು ನಿಷ್ಕ್ರಿಯಗೊಂಡ ಬಳಿಕ 12ರಿಂದ 24 ಗಂಟೆಗಳ ಒಳಗೆ ದಾನ ಮಾಡಿದಲ್ಲಿ ಉತ್ತಮ ಫಲಿತಾಂಶ ದೊರಕುವ ಸಾಧ್ಯತೆ ಇದೆ.
  * ಸಾಮಾನ್ಯವಾಗಿ ಶ್ವಾಸಕೋಶ ದಾನಕ್ಕೆ 6 ಗಂಟೆ, ಹೃದಯ ದಾನಕ್ಕೆ 6 ಗಂಟೆ, ಲಿವರ್ ದಾನಕ್ಕೆ 12ಗಂಟೆ, ಮೆದೋಜಿರಕ ಗ್ರಂಥ ದಾನಕ್ಕೆ 24 ಗಂಟೆ, ಕಿಡ್ನಿ 48 ಗಂಟೆಗಳು ತಗಲುತ್ತದೆ.
* ಕ್ಯಾನ್ಸರ್, ಏಡ್ಸ್ ಮತ್ತು ಮಾದಕ ದ್ರವ್ಯ ಸೇವನೆ ಮಾಡುವವರು ಅಂಗಾಂಗ ದಾನ ಮಾಡುವಂತಿಲ್ಲ. ಹೆಪಟೈಟಿಸ್ ಬಿ ಮತ್ತು ಸಿ ರೋಗ ಇರುವ ವ್ಯಕ್ತಿಗಳೂ ಅಂಗಾಂಗ ದಾನ ಮಾಡಬಹುದು. ಆದರೆ ದಾನ ಪಡೆಯುವವರೂ ಹೆಪಟೈಟಿಸ್ ಬಿ ಮತ್ತು ಸಿ ರೋಗಿಗಳಾಗಿರಬೇಕು. ಕ್ಯಾನ್ಸರ್ ರೋಗಿಗಳು ಅಕ್ಸಿಪಟಲ (ಕಾರ್ನಿಯಾ)ವನ್ನು ದಾನ ಮಾಡಬಹುದಾಗಿದೆ.
 * ರಕ್ತದಾನ, ನೇತ್ರದಾನ, ಅಂಗಾಂಗ ದಾನ, ಅಂಗಾಂಶ ದಾನ ಎಲ್ಲವೂ ಪವಿತ್ರವಾದ ದಾನಗಳೇ. ಯಾವುದು ಶ್ರೇಷ್ಠದಾನ ಎನ್ನುವ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ. ನಾವು ನೀಡುವ ದಾನದಿಂದ ಇನ್ನೊಬ್ಬ ವ್ಯಕ್ತಿಯ ಜೀವ ಉಳಿದಲ್ಲಿ ಆ ದಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಂಗಾಂಗ ದಾನದಿಂದ ಸಿಗುವ ಮಾನಸಿಕ ನೆಮ್ಮದಿ, ಶಾಂತಿ ಮತ್ತು ಸಾರ್ಥಕತೆ ಇನ್ನಾವುದೇ ದಾನಗಳಿಂದ ಸಿಗದು. ಇಂದೇ ಅಂಗಾಂಗ ದಾನ ಮಾಡಲು ಸಿದ್ಧರಾಗಿ ಪ್ರತಿಜ್ಞಾ ಬದ್ಧರಾಗಿ ನಿಮ್ಮ ಬದುಕಿಗೆ ಹೊಸ ಆಯಾಮವನ್ನು ನೀಡಿ.
8. ನೀವು ಅಂಗಾಂಗ ದಾನ ಮಾಡಲು ಮುಂದಾದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 
ಮತ್ತು ವೆಬ್ ಸೈಟ್ ವಿಳಾಸ: www.organdonationday.in

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top