ಭಾರತ (ಪೆಟ್ರೋಲಿಯಂ) ಮಾರಾಟಕ್ಕಿದೆ! | Vartha Bharati- ವಾರ್ತಾ ಭಾರತಿ

ಭಾರತ (ಪೆಟ್ರೋಲಿಯಂ) ಮಾರಾಟಕ್ಕಿದೆ!

ಈಗ ಈ ಸಂಸ್ಥೆಯನ್ನು ಕೊಳ್ಳಲು ಅಂಬಾನಿ ಮಾಲಕತ್ವದ ರಿಲಯನ್ಸ್ ಸಂಸ್ಥೆ ತುದಿಗಾಲಿನಲ್ಲಿ ನಿಂತಿದೆ. ಇತರ ಕೆಲವು ಪರದೇಶಿ ಸಂಸ್ಥೆಗಳು ಸ್ಪರ್ಧಾತ್ಮಕವಾಗಿ ಕೊಳ್ಳಲು ಸಿದ್ಧವಿವೆಯೆಂದು ವರದಿಯಾಗಿದೆ. ಆದರೆ ಇತ್ತೀಚಿನ ವಿಮಾನ ನಿಲ್ದಾಣ ಉಸ್ತುವಾರಿ ಹರಾಜನ್ನು ಗಮನಿಸಿದವರಿಗೆ (ಅವುಗಳಲ್ಲಿ ಒಂದೆರಡು ಅಪವಾದಗಳನ್ನು ಬಿಟ್ಟರೆ ಉಳಿದೆಲ್ಲವೂ ಅದಾನಿ ಸಂಸ್ಥೆಯ ಪಾಲಾಗಿವೆ!) ಇವು ಅಂಬಾನಿಯಂತಹ ನೀಲಿಗಣ್ಣಿನ ವ್ಯಕ್ತಿಗಳ ಸ್ವಾಮ್ಯಕ್ಕೊಳಪಡುವುದು ಖಂಡಿತ.

ಎಲ್ಲಾ ರೀತಿಯ ಪ್ರೇಕ್ಷಕಗಡಣ ತುಂಬಿದ್ದ ಭಾರೀ ಸಭೆಯಲ್ಲಿ ವಿಜ್ಞಾನಿಯೊಬ್ಬ ‘‘ಇನ್ನು ಸುಮಾರು 10 ಮಿಲಿಯ ವರ್ಷಗಳಲ್ಲಿ ಈ ಭೂಮಿ ನಾಶವಾಗಬಹುದು’’ ಎಂದ. ಆಗ ಹಿಂದೆ ಕುಳಿತಿದ್ದ ಮುದುಕಿಯೊಬ್ಬಳು ‘‘ಎಷ್ಟು?’’ ಎಂದು ಕೇಳಿದಳು. ‘‘10 ಮಿಲಿಯ ವರ್ಷ’’, ವಿಜ್ಞಾನಿ ಪುನರುಚ್ಚರಿಸಿದ. ‘‘ಪರವಾಗಿಲ್ಲ, ನಾನೆಲ್ಲೋ 5 ಮಿಲಿಯ ವರ್ಷ ಎಂದು ಭಾವಿಸಿ ಗಾಬರಿಯಾದೆ’’ ಎಂದು ಹೇಳಿ ಮುದುಕಿ ಸುಮ್ಮನಾದಳು. ಹೀಗೆ ನಮಗೆ ಸಂಬಂಧವಿಲ್ಲದ ಆತಂಕಗಳನ್ನು ನಾವೇ ಭ್ರಮಿಸಿ ಸುಮ್ಮನಾಗುತ್ತೇವೆ. ವಾಸ್ತವ ಎದುರಾದಾಗ ಇಷ್ಟೂ ಪ್ರಶ್ನೆ ಹಾಕುವುದಿಲ್ಲ.

ಕೇಂದ್ರ ಸರಕಾರವು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ನಿಯಮಿತವೆಂಬ ಮಹಾರತ್ನ ಖಚಿತ ಸರಕಾರಿ ನಿಯಂತ್ರಣದ ಸಂಸ್ಥೆಯನ್ನು ಮಾರಾಟಕ್ಕಿಟ್ಟಿದೆ. ಇದೇನು ಮಹಾ ಅಂದುಕೊಳ್ಳುವ ಜನಸಾಮಾನ್ಯರಿಗೆ ಒಂದಿಷ್ಟು ಮಾಹಿತಿ: ಇದು ಭಾರತದ ಎರಡನೆಯ ಅತೀ ದೊಡ್ಡ ತೈಲ ಸಂಸ್ಥೆ. (ಮೊದಲ ಸ್ಥಾನ ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಿಯಮಿತದ್ದು.) ಸರಕಾರ 53.3 ಶೇಕಡಾ ಪಾಲು ಬಂಡವಾಳ ಹೊಂದಿದ, ಬಿಲಿಯಗಟ್ಟಲೆ ಬಂಡವಾಳದ ಮತ್ತು ಕೆಲವೇ ಲಾಭದಾಯಕ ಉದ್ದಿಮೆಗಳಲ್ಲೊಂದಾದ ಮತ್ತು ವರ್ತಮಾನದ ಸಂದರ್ಭದಲ್ಲಿ ಅಗತ್ಯ ಸೇವೆಯೆನ್ನಬಹುದಾದ, ಸುಮಾರು 15 ಸಾವಿರಕ್ಕೂ ಮಿಕ್ಕಿದ ತೈಲ ಮಾರಾಟ ಕೇಂದ್ರಗಳನ್ನು ಹೊಂದಿದ, 6 ಸಾವಿರಕ್ಕೂ ಮಿಕ್ಕಿ ಅಡುಗೆ ಅನಿಲ ಹಂಚಿಕೆ ಕೇಂದ್ರಗಳನ್ನು, ಸುಮಾರು 12 ಸಾವಿರ ನೇರ ಉದ್ಯೋಗಿಗಳನ್ನು ಹೊಂದಿದ, ಇಂತಹ ಸಂಸ್ಥೆಯನ್ನು ತಮ್ಮ ಪ್ರಿಯರಾದವರಿಗೆ ನೀಡಿ ಕೈತುಂಬಿಸಿಕೊಂಡು ಕೈತೊಳೆದುಕೊಳ್ಳುವ ಸರಕಾರದ ಪಾಪಕಾಯಕಕ್ಕೆ ಯಾರೂ ಸೆಡ್ಡುಹೊಡೆಯದಿರುವುದು ವರ್ತಮಾನದ ದುರಂತ ಮಾತ್ರವಲ್ಲ, ದೇಶದ ಭವಿಷ್ಯಕ್ಕೆ ಅಪಾಯಕಾರಿಯೂ ಹೌದು.

ಭಾರತದ ತೈಲೋದ್ಯಮವು ಬ್ರಿಟಿಷ್ ಕಾಲದಿಂದಲೂ ವಿದೇಶೀ ಕಂಪೆನಿಗಳ ಒಡೆತನದಲ್ಲಿತ್ತು. ಬ್ಯಾಂಕ್ ರಾಷ್ಟ್ರೀಕರಣದ ಆನಂತರ ಸಮಾಜವಾದಿ ಆರ್ಥಿಕ ನೀತಿಗೆ ಹೆಚ್ಚಿನ ಭದ್ರತೆಯನ್ನೊದಗಿಸಲು ಇಂದಿರಾ ಗಾಂಧಿ ಸರಕಾರವು 1976ರಲ್ಲಿ ನಾಲ್ಕು ಅತಿದೊಡ್ಡ ತೈಲ ಕಂಪೆನಿಗಳನ್ನು ಕಾನೂನಿನ ಮೂಲಕ ರಾಷ್ಟ್ರೀಕರಣಮಾಡಿತು. ಇವನ್ನು ಸಂಸದೀಯ ಅನುಮೋದನೆ ಪಡೆದು ಕಾನೂನಿನ ಮೂಲಕ ಮಾತ್ರ ಖಾಸಗೀಕರಣಮಾಡಬಹುದಾಗಿತ್ತು. 2003ರಲ್ಲಿ ಆಗಿನ ವಾಜಪೇಯಿ ಸರಕಾರ ಈ ಸಂಸ್ಥೆಯನ್ನು ಖಾಸಗೀಕರಣ ಮಾಡಲು ಪ್ರಯತ್ನಿಸಿತು. ಆದರೆ ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯೊಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿ ಸಂಸತ್ತಿನ ಅನುಮೋದನೆಯಿಲ್ಲದೆ ಖಾಸಗೀಕರಣ ಸಾಧ್ಯವಿಲ್ಲವೆಂಬ ತೀರ್ಪು ಹೊರಬಿದ್ದು ಸರಕಾರಕ್ಕೆ ಹಿನ್ನಡೆಯಾಯಿತು. 2004ರ ಆನಂತರ ಮತ್ತೆ ಯುಪಿಎ ಸರಕಾರ ಅಧಿಕಾರಕ್ಕೆ ಬಂದು ಈ ಸಂಸ್ಥೆ ಸರಕಾರದ ನಿಯಂತ್ರಣದಲ್ಲೇ ಉಳಿಯಿತು. ರಾಜೀವ್ ಗಾಂಧಿ, ಪಿ.ವಿ. ನರಸಿಂಹರಾವ್ ಕಾಲದಲ್ಲಿ ಆಧುನಿಕ ಜಗತ್ತಿನ ಆರ್ಥಿಕ ನೀತಿಗಳನ್ನು ಸ್ವೀಕರಿಸಿದ ಭಾರತವು ಮನಮೋಹನ್ ಸಿಂಗ್ ನಾಯಕತ್ವದಲ್ಲಿ ಎಷ್ಟೇ ಉದಾರವಾದಿ ಧೋರಣೆಯನ್ನು ತಾಳಿದರೂ ದೇಶದ ಆರ್ಥಿಕತೆಯ ಲಗಾಮನ್ನು ಖಾಸಗಿ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ಒಪ್ಪಿಸಲಿಲ್ಲ. 2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದಂದಿನಿಂದ ಖಾಸಗೀಕರಣಕ್ಕೆ ಮತ್ತೆ ಜೀವ ಮೂಡಿತು. 2016ರಲ್ಲಿ ಕೇಂದ್ರ ಸರಕಾರವು ಸುಮಾರು 187ರಷ್ಟು ಹಳೆಯ ಕಾಯ್ದೆಗಳನ್ನು ‘ಅನಗತ್ಯ’ವೆಂಬ ನಿಲುವಿನೊಂದಿಗೆ ರದ್ದುಗೊಳಿಸಿತು. ಇವುಗಳಲ್ಲಿ 1976ರ ತೈಲ ಕಂಪೆನಿಗಳ ರಾಷ್ಟ್ರೀಕರಣ ಕಾಯ್ದೆಯೂ ಒಂದು. ಕುರಿಗಳ ಗುಂಪಿನಲ್ಲಿ ತೋಳವಿದ್ದದ್ದು ಯಾರ ಗಣನೆಗೂ ಬರಲಿಲ್ಲ.

ಇದರಿಂದಾಗಿ 2017ರಲ್ಲಿ ಕೇಂದ್ರ ಸರಕಾರವು ಹೀಗೆ ರದ್ದಾದ ಕಾಯ್ದೆಯಡಿ ಇರುವ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಲು ಸಂಸತ್ತಿನ ಅನುಮತಿಯ ಅಗತ್ಯವಿಲ್ಲವೆಂಬ ಕಾಯ್ದೆಯನ್ನು ಜಾರಿಗೆ ತಂದಿತು. ಇದರಿಂದಾಗಿ ಸರ್ವೋಚ್ಚ ನ್ಯಾಯಾಲಯದ 2003ರ ತೀರ್ಪು ತಾನಾಗಿ ರದ್ದಾದಂತಾಯಿತು. (ರಾಜೀವ್ ಗಾಂಧಿ ಕಾಲದ ಶಾ ಬಾನು ತೀರ್ಪಿನ ವಿರುದ್ಧ ಸರಕಾರವು ಕಾನೂನು ತಂದಂತೆಯೇ ಈ ಹಿಂಬಾಗಿಲ ವರಸೆ. ಇಂತಹ ಕೃತ್ರಿಮಗಳ ಮೂಲಕ ಅಧಿಕಾರ ದುರುಪಯೋಗವನ್ನು ಎಲ್ಲ ಸರಕಾರಗಳೂ ಮಾಡುತ್ತವೆಂಬುದನ್ನು ಜನರು ನೆನಪಿಡಬೇಕು.) ವಿಶೇಷವೆಂದರೆ ಈ ಮಸೂದೆಗೆ ವಿರೋಧ ಪಕ್ಷಗಳು ಗಮನಕೊಡಲೇ ಇಲ್ಲ.

ಈಗ ಈ ಸಂಸ್ಥೆಯನ್ನು ಕೊಳ್ಳಲು ಅಂಬಾನಿ ಮಾಲಕತ್ವದ ರಿಲಯನ್ಸ್ ಸಂಸ್ಥೆ ತುದಿಗಾಲಿನಲ್ಲಿ ನಿಂತಿದೆ. ಇತರ ಕೆಲವು ಪರದೇಶಿ ಸಂಸ್ಥೆಗಳು ಸ್ಪರ್ಧಾತ್ಮಕವಾಗಿ ಕೊಳ್ಳಲು ಸಿದ್ಧವಿವೆಯೆಂದು ವರದಿಯಾಗಿದೆ. ಆದರೆ ಇತ್ತೀಚಿನ ವಿಮಾನ ನಿಲ್ದಾಣ ಉಸ್ತುವಾರಿ ಹರಾಜನ್ನು ಗಮನಿಸಿದವರಿಗೆ (ಅವುಗಳಲ್ಲಿ ಒಂದೆರಡು ಅಪವಾದಗಳನ್ನು ಬಿಟ್ಟರೆ ಉಳಿದೆಲ್ಲವೂ ಅದಾನಿ ಸಂಸ್ಥೆಯ ಪಾಲಾಗಿವೆ!) ಇವು ಅಂಬಾನಿಯಂತಹ ನೀಲಿಗಣ್ಣಿನ ವ್ಯಕ್ತಿಗಳ ಸ್ವಾಮ್ಯಕ್ಕೊಳಪಡುವುದು ಖಂಡಿತ. ಒಂದುವೇಳೆ ಸಂಸತ್ತಿನ ಅನುಮೋದನೆ ಪಡೆಯುವುದು ಅಗತ್ಯವಾದರೂ ಈಗಿನ ಸರಕಾರಕ್ಕೆ ಶಿಸ್ತಿನಿಂದ ಎದ್ದುನಿಂತು ಸೆಲ್ಯೂಟು ಹೊಡೆಯುವ ತಮ್ಮ ಸಂಸದರ ಬಹುಮತವಿರುವುದರಿಂದ ಅದೇನೂ ಕಷ್ಟವಾಗಲಾರದು. ಈಗ ಈ ಹರಾಜಿನ ಹಂತ ಬಂದಾಗ ಕಾಂಗ್ರೆಸ್ ಪಕ್ಷವು ಎಂದಿನಂತೆಯೇ ‘ಟ್ವೀಟ್’ ಮಾಡಿ ತನ್ನ ಕರ್ತವ್ಯವನ್ನು ಪೂರೈಸಿತು. ಸಂಸ್ಥೆಯ ಕಾರ್ಮಿಕರು ಮುಷ್ಕರದ ಬೆದರಿಕೆಯನ್ನು ಹಾಕಿದರೂ ಸರಕಾರ ಅದಕ್ಕೆ ಬಗ್ಗುವುದಿಲ್ಲ. ‘‘ವೈಪರೀತ್ಯಕ್ಕೆ ಬೆದರಲಾಗದು’’ ಎಂಬ ಅಚ್ಚ ಭಾರತೀಯ ಕುಮಾರವ್ಯಾಸ ಪ್ರಣೀತ ನ್ಯಾಯವು 125 ಕೋಟಿ ಭಾರತೀಯರ ಬದುಕನ್ನು ಸಹಜವಾಗಿ ಒಳಗೊಂಡಿದೆ. ಸರಕಾರವು ಈಚೆಗೆ ಭಾರತೀಯ ರಿಸರ್ವ್ ಬ್ಯಾಂಕಿನಿಂದ 1,76,000 ಕೋಟಿ ರೂಪಾಯಿಗಳನ್ನು ತನ್ನ ವಶಕ್ಕೆ ಪಡೆಯಿತು. ಅಷ್ಟೇ ಅಲ್ಲ, ಆನಂತರದಲ್ಲಿ ಕಳೆದ ಅರೆವಾರ್ಷಿಕ ಲಾಭಾಂಶ ಸುಮಾರು 30,000 ಕೋಟಿ ರೂಪಾಯಿಗಳನ್ನು ನೀಡುವಂತೆ ನಿರ್ಲಜ್ಜವಾಗಿ ಆರ್‌ಬಿಐಯನ್ನು ಕೇಳಿದೆ. ಸರಕಾರದ ಯಾವ ಸಂಸ್ಥೆಯೂ ಉಳಿವಿನ ಹಾದಿಯಲ್ಲಿ ಸಾಗುತ್ತಿಲ್ಲ. ಕಳೆದ ದಶಕದಲ್ಲೇ ಭಾರತದ ಈಗಿನ ಆರ್ಥಿಕತೆಯು ಅತ್ಯಂತ ಕೆಳಪ್ರಮಾಣದಲ್ಲಿದೆಯೆಂದು ಬಹುತೇಕ ಎಲ್ಲಾ ಸಮೀಕ್ಷೆಗಳು ವರದಿಮಾಡಿವೆ ಮತ್ತು ಈ ಅಂಶವನ್ನು ಪುಷ್ಟಿಮಾಡುವಂತೆ ಆರ್‌ಬಿಐ ಎಚ್ಚರಿಕೆಯನ್ನೂ ನೀಡಿದೆ.

ಆದರೆ ಇವನ್ನೆಲ್ಲ ಕೇಳುವ ವ್ಯವಧಾನ ಸರಕಾರಕ್ಕಿಲ್ಲ. ಅದಕ್ಕೆ ‘ತನ್ನ’ (‘ತಮ್ಮ’ ಅಲ್ಲ, ಏಕೆಂದರೆ ಪ್ರಧಾನಿಯವರೇ ದೇಶವೆನ್ನಿಸಿದೆ!) ಪ್ರತಿಷ್ಠೆ-ಗೌರವವೇ ದೇಶದ ಗೌರವ ಎಂಬಂತಿದೆ! ಜನಸಾಮಾನ್ಯರಾರೂ ಆರ್ಥಿಕ ತಜ್ಞರಲ್ಲ. ಆದರೆ ಆರ್ಥಿಕ ಹಿನ್ನಡೆಯ ಹೊಡೆತ ಬೀಳುವುದು ಈ ಜನಸಾಮಾನ್ಯರ ಮೇಲೆಯೇ! ಆದ್ದರಿಂದ ನೀರುಳ್ಳಿಯ ಬೆಲೆಯೂ ಪ್ರಜೆಗೆ ಮುಖ್ಯವಾಗುತ್ತದೆ. ಈಚೆಗೆ ನೀರುಳ್ಳಿ ಬೆಲೆ ಗಗನಕ್ಕೇರಿದಾಗ ಕೇಂದ್ರ ಸರಕಾರವು ನೀರುಳ್ಳಿಯ ರಫ್ತನ್ನು ನಿಷೇಧಿಸಿತು. ಇದು ಸ್ವಲ್ಪಮಟ್ಟಿಗೆ ಏರುತ್ತಿದ್ದ ಬೆಲೆಯನ್ನು ನಿಯಂತ್ರಿಸಿದರೂ ಭಾರತದಿಂದ ನೀರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿದ್ದ ನೆರೆಹೊರೆಯ ಏಶ್ಯಾದ ರಾಷ್ಟ್ರಗಳು ಆತಂಕಪಟ್ಟಿವೆ. ಬಾಂಗ್ಲಾ ದೇಶದ ಪ್ರಧಾನಿ ಶೇಕ್ ಹಸೀನಾ ತಮಾಷೆಯಾಗಿ ತಾನು ತನ್ನ ಅಡುಗೆಯವರಿಗೆ ನೀರುಳ್ಳಿ ಹಾಕದೆ ಅಡುಗೆ ಮಾಡಲು ಹೇಳಿದರು. ಅದರ ಹಿಂದಿನ ಆತಂಕ ಭಾರತಕ್ಕೆ ಕರೆಗಂಟೆಯಾಗಬೇಕು. ಅಂತರ್‌ರಾಷ್ಟ್ರೀಯ ಆರ್ಥಿಕ ನೀತಿಯ ಬದ್ಧತೆಯನ್ನು ರಾಷ್ಟ್ರೀಯ ಕಾರಣಗಳಿಗಾಗಿ ಉಲ್ಲಂಘಿಸಿದರೆ ಅದರ ದೂರಗಾಮೀ ಪರಿಣಾಮಗಳು ತೀವ್ರವಾಗಿ ಕಾಡಬಲ್ಲವು. ಯಾವುದೇ ಸರಕಾರಕ್ಕೂ ವಿವಿಧ ಪರಿಸ್ಥಿತಿಗಳನ್ನು ನಿಭಾಯಿಸಬಲ್ಲ ಸಾಮಾನ್ಯ ಯೋಜನೆಗಳು, ನೀತಿಗಳು ಅವಶ್ಯಕ. ಅದಿಲ್ಲದಿದ್ದರೆ ಸರಕಾರವು ‘ಖೋ ಖೋ’ ಆಟದಲ್ಲಿನಂತೆ ಅಪಾಯದಿಂದ ತಪ್ಪಿಸಿಕೊಳ್ಳಲು ಕ್ಷಣಕ್ಷಣವೂ ನಿಯಮಗಳನ್ನು ಬದಲಾಯಿಸುತ್ತ ಓಡುತ್ತಲೇ ಇರಬೇಕು. ಹೀಗೆ ಓಡುತ್ತ ಓಡುತ್ತ ಹೊರಾಂಗಣ ಮುಗಿದು ಚದುರಂಗದಾಟದ ಒಳಾಂಗಣವು ಸೃಷ್ಟಿಯಾಗಿ ಕೊನೆಗೆ ಇನ್ನೆಲ್ಲಿಗೂ ಚಲಿಸಲಾಗದ ಮೂಲೆಯನ್ನು ತಲುಪುವುದು ಅನಿವಾರ್ಯ. ಭಾರತ್ ಪೆಟ್ರೋಲಿಯಂ ಸಂಸ್ಥೆ ಸರದಿಯ ಈ ಸಾಲಿನ ಮೊದಲಲ್ಲಿದೆ. ಅದೇನಾದರೂ ಪೂರ್ಣ ಸರಕಾರಿ ಸಂಸ್ಥೆಯಾಗಿದ್ದಿದ್ದರೆ ಮತ್ತು ಸರ್ವಸ್ವಾಮ್ಯ ತೈಲಸಂಸ್ಥೆಯಾಗಿದ್ದಿದ್ದರೆ ಪ್ರಾಯಃ ಬಿಎಸ್‌ಎನ್‌ಎಲ್‌ನಂತೆ ವೃದ್ಧಾಶ್ರಮದಲ್ಲಿರುತ್ತಿತ್ತು. ಬಿಎಸ್‌ಎನ್‌ಎಲ್ ಸಂಸ್ಥೆಗೆ ತನ್ನ ಉದ್ಯೋಗಿಗಳಿಗೆ ಸಂಬಳ ಕೊಡುವುದಿರಲಿ, ಅಂತರ್ಜಾಲದ ಯಂತ್ರೋಪಕರಣಗಳನ್ನು ನಡೆಸಲು ಬೇಕಾದ ದೈನಂದಿನ ಡೀಸೆಲ್ ಕೊಳ್ಳಲೂ ಹಣವಿಲ್ಲ. ಇಂತಹದೇ ಸಂದರ್ಭವೊಂದರಲ್ಲಿ ಈ ಕೊರತೆಯನ್ನು, ಪಡಿಪಾಟಲನ್ನು ಅಧಿಕಾರಿಗಳು ಹೇಳಿಕೊಂಡಾಗ ಕೇಂದ್ರ ಸಚಿವರೊಬ್ಬರು ಸಂಬಂಧಿಸಿದ ಅಧಿಕಾರಿಗೆ ಬೈದು ‘‘ಎಲ್ಲವೂ ಸರಿಯಿದೆ, ತಕ್ಷಣ ಸರಿಪಡಿಸಿ’’ ಎಂಬ ಫರ್ಮಾನು ಹೊರಡಿಸಿ ಅಲ್ಲಿಂದ ಹೊರನಡೆದರು. ಮಾಧ್ಯಮದವರಿಗೆ ಸಚಿವರ ವೀರೋಚಿತ ನಡೆಯು ಸುದ್ದಿಯಾಯಿತು. ದುಸ್ಥಿತಿ ಯಥಾಪ್ರಕಾರ ಮುಂದುವರಿಯಿತು.

ಅಮೆರಿಕದಲ್ಲಿ ಈಚೆಗೆ ಭಾರತದ ಪ್ರಧಾನಿಯವರು ಭಾರತದಲ್ಲಿ ಎಲ್ಲವೂ ಸರಿಯಿದೆ ಎಂಬ ಮಾತನ್ನಾಡಿದರು. ನಾಟಕ ಕಂಪೆನಿಯಲ್ಲಿ ಯಜಮಾನ ದೂತನ ಪಾತ್ರದಲ್ಲೂ ಉದ್ಯೋಗಿ ನಟ ರಾಜ ಪಾತ್ರಧಾರಿಯಾಗಿಯೂ ವೇದಿಕೆಯಲ್ಲಿ ವಿಜೃಂಭಿಸಬಹುದು. ನೇಪಥ್ಯಕ್ಕೆ ಹೋದ ಮೇಲೆ ಯಜಮಾನ ಯಜಮಾನನೇ, ಉದ್ಯೋಗಿ ಉದ್ಯೋಗಿಯೇ! ಭಾರತದ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ಒಂದೊಂದು ವ್ಯಂಗ್ಯ ಚಿತ್ರಗಳೂ ದೇಶದ ದಾರುಣ ಸ್ಥಿತಿಯನ್ನು ಅನಾವರಣ ಮಾಡುತ್ತಿದ್ದರೂ (ನಮ್ಮ ಪ್ರಜಾಪ್ರಭುತ್ವದ, ಸ್ವಚ್ಛತಾ ಆಂದೋಲನದ, ಮಹಿಳೆಯರ, ಮಕ್ಕಳ, ಅಲ್ಪಸಂಖ್ಯಾತರ ರಕ್ಷಣೆಗೆ ಸರಕಾರ ಕೈಗೊಂಡ ಕ್ರಮಗಳ ಪರಿಣಾಮ, ಫಲಿತಾಂಶ ನಮ್ಮ ಕಣ್ಣಮುಂದಿದೆ!) ನಮ್ಮ ರಾಜಕಾರಣಿಗಳಿಗೆ ಕತ್ತಿನವರೆಗೆ ತಲೆಯನ್ನು ಹುದುಗಿಸಲು ಬೇಕಾದ ಮರಳಿನ ಗುಂಡಿಗಳು ಸಾಕಷ್ಟಿವೆ. ಹೀಗೆ ಭಾರತದ ನೈಜಸ್ಥಿತಿ ಹೊರಜಗತ್ತಿಗೆ ತಿಳಿಯಬಾರದೆಂದು ಈ ದೇಶ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ. ಇದಕ್ಕೂ ಮೀರಿ ಯಾರಾದರೂ ಸತ್ಯ ಹೇಳಹೊರಟರೆ ಅದು ದೇಶದ್ರೋಹವಾಗದೇ ಇನ್ನೇನಾಗುತ್ತದೆ?

ದೇಶದ ಈ ಆರ್ಥಿಕ ಬಿಸಿ ಎಲ್ಲರಿಗೂ ನಾಟಿದೆ. ಆದರೆ ಆಳುವ ಪಕ್ಷದ ಬಹುಪಾಲು ರಾಜಕಾರಣಿಗಳು ಬಾಯಿಗೆ ಬೀಗ ಹಾಕಿದ್ದು ಮಾತ್ರವಲ್ಲ, ಗುರುತು ಸಿಗದ ಮುಖವಾಡ ಧರಿಸಿ ಅದನ್ನೂ ತೆಗೆಯದಂತೆ ಬೀಗಹಾಕಿಸಿಕೊಂಡಿದ್ದಾರೆ. (14ನೇ ಲೂಯಿಯ ಕಾಲದ ಫ್ರಾನ್ಸಿನ ರಾಜಕಾರಣದ ಕುರಿತ ಒಂದು ಆಂಗ್ಲ ಸಿನೆಮಾದಲ್ಲಿ ಅಧಿಕಾರಕ್ಕೆ ಹಕ್ಕಿದ್ದರೂ ವರ್ಷಾನುಗಟ್ಟಲೆ ಮುಖಕಾಣದಂತೆ ಬೀಗ ಹಾಕಿಸಿಕೊಂಡು ಸೆರೆವಾಸ ಅನುಭವಿಸಿದ ನಿರಪರಾಧಿ ರಾಜಕುಮಾರನ ಕಥೆಯಿದೆ!) ಮೋಹನ್‌ಭಾಗವತ್‌ರಂತಹ ಅನೇಕ ದೇಶಪ್ರೇಮಿಗಳು ಆರ್ಥಿಕ ಹಿನ್ನಡೆಯೆಂದರೆ ಶೂನ್ಯಕ್ಕಿಂತಲೂ ಕೆಳಗಿನ ಬೆಳವಣಿಗೆಯೆಂಬ ಹೊಸತರ್ಕವನ್ನು ಹೂಡುತ್ತಾರೆ. ಆದರೆ ಅವರಿಗೆ ತಿಳಿಯದ ಅಂಶವೆಂದರೆ ಅನಾರೋಗ್ಯವೆಂದರೆ ಉಸಿರು ನಿಲ್ಲಬೇಕಾಗಿಲ್ಲ. ತಿಳಿವಳಿಕೆಯೇ ಇಲ್ಲದೆ ಉತ್ಸಾಹ, ನಂಬಿಕೆ, ಶ್ರದ್ಧೆ ಮತ್ತು ಮಾತು ಬಂಡವಾಳವಾದರೆ ಆಗುವುದು ಹೀಗೆಯೇ. ಅದು ಎಲ್ಲ ತರ್ಕಗಳನ್ನು, ಸಾಧ್ಯತೆಗಳನ್ನು, ಸಾಧುತ್ವಗಳನ್ನು ಅಲ್ಲಗಳೆಯುತ್ತದೆ. ಈಗ ಕೇಂದ್ರ ಸರಕಾರ ಮಾಡುತ್ತಿರುವುದು ಇದನ್ನೇ: ಹಸಿದವನ ಮುಂದೆ ಧರ್ಮದ, ರಾಷ್ಟ್ರೀಯತೆಯ, ದ್ವೇಷದ ವೇದಾಂತವನ್ನು ಉಪದೇಶಮಾಡುವುದು. ಉಳಿದವರು ಈಗಾಗಲೇ ನಿರಸನಗೊಂಡವರಂತೆ ಕಾಲಕ್ಕೆ ಶರಣುಹೋಗಿ ಸುಮ್ಮನಿದ್ದಾರೆ. 1997ರಲ್ಲಿ ಆಗಿನ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ಜಿನೇವಾ ಪ್ರತಿನಿಧಿಯಾಗಿದ್ದ ಚಿತ್ರಾ ಸುಬ್ರಮಣಿಯಂ ಎಂಬವರು ‘ಭಾರತ ಮಾರಾಟಕ್ಕಿದೆ’ (India is for Sale) ಎಂಬ ಪುಸ್ತಕವನ್ನು ಬರೆದಿದ್ದರು. ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷದ ರಾಜಕಾರಣಿಗಳನ್ನು ಆಕೆ ಟೀಕಿಸಿದ್ದರು. ಭಾರತದ ರಾಜಕಾರಣಿಗಳ ಕುರಿತ ಹಾಸ್ಯವೆಂದರೆ ಕೆಲವು ಅಪವಾದಗಳನ್ನು ಹೊರತುಪಡಿಸಿ ಇನ್ಯಾರೂ ಭಾರತದ ಆರ್ಥಿಕತೆ, ವ್ಯಾಪಾರೋದ್ಯಮ, ಸಮಾಜಸ್ಥಿತಿಯನ್ನು ಅಂಕಿ-ಅಂಶಗಳೊಂದಿಗೆ ಮತ್ತು ವಿಶ್ವಾಸದೊಂದಿಗೆ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಹಾಗೂ ಬಹುಪಾಲು ಮಂದಿ ನಮ್ಮ ಪ್ರಧಾನಿ ಹೇಳುವಂತೆ ನಾವು ಅಭಿವೃದ್ಧಿಯಾಗಿದ್ದೇವೆ ಎಂಬ ಗಿಳಿಪಾಠ ಒಪ್ಪಿಸುತ್ತಿದ್ದರು! ತಮ್ಮ ಮೂರ್ಖತನವನ್ನೇ ತಮ್ಮ ಗುಣ-ಲಕ್ಷಣವೆಂದು ಭಾರತೀಯ ರಾಜಕಾರಣಿಗಳು ಭಾವಿಸಿದ್ದಾರೆಂದು ಆಕೆ ಬರೆದಿದ್ದರು. ಕೃತಿ ಬಂದು 2 ದಶಕಗಳು ಕಳೆದರೂ ಪರಿಸ್ಥಿತಿ ಬದಲಾಗಿಲ್ಲ. ಅಧಿಕಾರದಲ್ಲಿರುವ ಹೆಚ್ಚಿನ ಭಾರತೀಯ ರಾಜಕಾರಣಿಗಳು ಇದೇ ಮಾದರಿಯವರು. ಬಿಪಿಸಿಎಲ್ ಮಾರಾಟ ಒಂದು ಟ್ರೈಲರ್ ಮಾತ್ರ. ಮುಂದೆ ಪೂರ್ತಿ ಸಿನೆಮಾ ಪ್ರದರ್ಶನಕ್ಕಿದೆ. ಕೊನೆಗೂ ಅಷ್ಟೇ: ನಿದ್ರೆ ಬರದಿದ್ದರೂ ‘ಸ್ವರ್ಗಕ್ಕೆ ಮೂರೇ ಗೇಣು’, ವಿಶ್ವಗುರುವಾಗುವುದಕ್ಕೆ ‘ಕಿಂಚಿದೂನಾ’ ಎಂದೆಲ್ಲ ಕನಸುಕಾಣುತ್ತ ಸುಮ್ಮನಿರಬೇಕು. ಭಾರತ ಮಾರಾಟಕ್ಕಿದೆ ಎಂಬ ಫಲಕ ರಾರಾಜಿಸುತ್ತಿರಬೇಕು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top