ವಿಜ್ಞಾನ, ಕಲೆ ಮೇಳವಿಸೆ ಉಂಟಾಗುವ ಚೋದ್ಯಗಳು

ಅಪ್ಪಟ ಸೃಜನಶೀಲ ಯೋಚನೆ, ತಾಕತ್ತಿರುವ ಚಿತ್ರಕತೆ, ವಿಲಕ್ಷಣ ಪಾತ್ರ-ಸನ್ನಿವೇಶ ಸೃಷ್ಟಿ, ಜಬರ್ದಸ್ತಾದ ಸೆಟ್, ಹಾಲು-ಜೇನು ಸೇರಿದಂತೆ ಮಿಳಿತವಾಗಿರುವ ತಂತ್ರಜ್ಞಾನ, ಸ್ಪೆಷಲ್ ಎಫೆಕ್ಟ್ಸ್ ಮತ್ತು ಈ ಎಲ್ಲಕ್ಕೂ ಜೀವತುಂಬುವ ಹಾಗೂ ಅಡಿಗೆರೆಯಾಗಿ ಇರಲೇಬೇಕಾದ ಮನುಷ್ಯ ರಾಗ-ಭಾವಗಳ ರಕ್ತ-ಮಾಂಸ ಉಳ್ಳ ಉಜ್ವಲ ಸೈಫೈಗಳು ಕಳೆದ ಶತಮಾನ ದಿಂದ ಈ ವರ್ಗದಡಿ ಸೇರ್ಪಡೆಯಾಗುತ್ತಾ ಬಂದು ಅದರದೊಂದು ಲೆಗೆಸಿ ನಿರ್ಮಾಣವಾಗಿದೆ.


ಸೈ-ಫೈ (ಸೈನ್ಸ್ ಫಿಕ್ಷನ್) ಸಿನೆಮಾ ಅಂದರೆ ವೈಜ್ಞಾನಿಕ ವಸ್ತು-ವಿಷಯವನ್ನು ಮುಖ್ಯವಾಗಿ ಆಧರಿಸಿದ, ಆದರೆ ಕಲ್ಪನೆಯನ್ನು ಧಾರಾಳವಾಗಿ ಅದರೊಂದಿಗೆ ಬೆರೆಸಿ, ಕಥನ (ಕಾರಣ) ಸೃಷ್ಟಿಸಿರುವ ಕಲಾ ಪ್ರಕಾರ. ಇದಕ್ಕೆ ಹುಚ್ಚರು ಬಹಳ! ವಿದೇಶಿ ಸಿನೆಮಾ ನಿರ್ಮಾತೃಗಳು ಚಂದ, ಮತ್ತಷ್ಟು ಚಂದ, ಪರಿಪೂರ್ಣ ಇನ್ನಷ್ಟು ಪರಿಪೂರ್ಣ ಸೈಫೈ ತೆರೆಗೆ ತರಲು ಶ್ರಮಿಸುತ್ತಿರುತ್ತಾರೆ. ಅವರಿಗೆ ಹೊಯ್‌ಕೈಯಾಗಿ ಪ್ರತಿಭಾವಂತ ನಿರ್ದೇಶಕರು. ಬೇಕಿನ್ನೇನು?

ಅಪ್ಪಟ ಸೃಜನಶೀಲ ಯೋಚನೆ, ತಾಕತ್ತಿರುವ ಚಿತ್ರಕತೆ, ವಿಲಕ್ಷಣ ಪಾತ್ರ-ಸನ್ನಿವೇಶ ಸೃಷ್ಟಿ, ಜಬರ್ದಸ್ತಾದ ಸೆಟ್, ಹಾಲು-ಜೇನು ಸೇರಿ ದಂತೆ ಮಿಳಿತವಾಗಿರುವ ತಂತ್ರಜ್ಞಾನ, ಸ್ಪೆಷಲ್ ಎಫೆಕ್ಟ್ಸ್ ಮತ್ತು ಈ ಎಲ್ಲಕ್ಕೂ ಜೀವತುಂಬುವ ಹಾಗೂ ಅಡಿಗೆರೆಯಾಗಿ ಇರಲೇಬೇಕಾದ ಮನುಷ್ಯ ರಾಗ-ಭಾವಗಳ ರಕ್ತ-ಮಾಂಸ ಉಳ್ಳ ಉಜ್ವಲ ಸೈಫೈಗಳು ಕಳೆದ ಶತಮಾನ ದಿಂದ ಈ ವರ್ಗದಡಿ ಸೇರ್ಪಡೆಯಾಗುತ್ತಾ ಬಂದು ಅದರದೊಂದು ಲೆಗೆಸಿ ನಿರ್ಮಾಣವಾಗಿದೆ. ಈ ಹಿಂದೆಯೇ ಹೇಳಿದಂತೆ ಇದೊಂದು ಶಕ್ತಿಶಾಲಿ ಹಾಗೂ ಎತ್ತರದ ಬೆಂಚ್‌ಮಾರ್ಕ್ -ಆದರ್ಶ ಹೊಂದಿರುವ ಸಂಪ್ರದಾಯ. ಸೈಫೈ ಸಿನೆಮಾಗಳ ಪ್ರೇರಣೆಯನ್ನು ಸಾಹಿತ್ಯ-ವಿಜ್ಞಾನ ಪದಾರ್ಥ ಬಳಸಿ ಸಮೀಚೀನ ಭೋಜನ ತಯಾರಿಸುತ್ತಿದ್ದ ಅಷ್ಟೇ ಉಜ್ವಲ ವಿದೇಶಿ ಸೈಫೈ ಅಕ್ಷರ ಸಂಪುಟಗಳಲ್ಲಿ ಹುಡುಕಬಹುದು. ಅದೇ ಬಗೆಯಲ್ಲಿ ಕಾದಂಬರಿ ಆಧರಿತ ವೈಜ್ಞಾನಿಕ ಸಿನೆಮಾಗಳು ಇಂದಿಗೂ ತಯಾರಾಗುತ್ತವೆ. ಹತ್ತೊಂಬತ್ತನೆ ಶತಮಾನದಲ್ಲಿ ಒಂದಾದ ಮೇಲೊಂದರಂತೆ ವೈಜ್ಞಾನಿಕ ಕಾದಂಬರಿಗಳನ್ನು ಬರೆದು ಬಿಸಾಡಿದ (ಹೌದು, ಒಂದು ಹಂತದಲ್ಲಿ ಈ ವಿಕ್ಷಿಪ್ತ ಪ್ರತಿಭಾವಂತ ತನ್ನ ಎಲ್ಲ ಹಸ್ತಪ್ರತಿಗಳನ್ನು ನಾಶಗೊಳಿಸುತ್ತಾನೆ) ಜೂಲ್ಸ್‌ವರ್ನ್‌ನನ್ನು ‘ಪಶ್ಚಿಮದ ವೈಜ್ಞಾನಿಕ ಕಾದಂಬರಿ ಜನಕ’ ಎಂದು ಪರಿಗಣಿಸುತ್ತಾರೆ. (ಈತ, ಆಗಿಂದಾಗ್ಗೆ ಈ ಲೇಖನದಲ್ಲಿ ಪ್ರವೇಶ ಮಾಡುತ್ತಾನೆ). ವಿಕ್ಟೋರಿಯನ್ ಕಾಲದ ವಿಶ್ವಪ್ರಸಿದ್ಧ ಕಾದಂಬರಿಕಾರ ಚಾರ್ಲ್ಸ್ ಡಿಕನ್ಸ್, ವಿಕಾಸವಾದದಂತಹ ಮೈಲಿಗಲ್ಲು ಸಿದ್ಧಾಂತ ಸ್ಥಾಪಿಸಿದ ಜೀವವಿಜ್ಞಾನಿ ಚಾರ್ಲ್ಸ್ ಡಾರ್ವಿನ್‌ರ ಸಮಕಾಲೀನ. ಇವರಿಬ್ಬರ ಪ್ರತಿಭೆಯ ಮಿಶ್ರಣವೋ ಎಂದು ಬೆರಗಾಗುವಷ್ಟಿದೆ ಈತನ ಹೈಬ್ರಿಡ್ ಸಾಹಿತ್ಯದ ಒಟ್ಟು ರಾಶಿ: ‘ಎ ಟ್ರಿಪ್ ಟು ದಿ ಮೂನ್’, ‘ಜರ್ನಿ ಟು ದಿ ಸೆಂಟರ್ ಆಫ್ ದಿ ಅರ್ತ್’, ‘ದಿ ಕಾನ್‌ಕ್ವೆಸ್ಟ್ ಆಫ್ ದಿ ಪೋಲ್’, ‘20,000 ಲೀಗ್ಸ್ ಅಂಡರ್ ದಿ ಸೀ’, ‘ಮಿಸ್ಟೀರಿಯಸ್ ಐಲ್ಯಾಂಡ್’, ‘ಕ್ಯಾಪ್ಟನ್ ನೀಮೋಸ್ ಅಂಡರ್‌ವಾಟರ್ ಸಿಟಿ’- ವರ್ನ್ ಬರೆದ ಕೆಲ ಕಾದಂಬರಿಗಳ ಶಿರೋನಾಮೆಗಳು; ಆತನ ರೇಂಜ್ ಬಿಟ್ಟುಕೊಡುವವು.

ಸದ್ಯದ ತಾಜಾ ಭಾಷೆಯಲ್ಲಿ ಅದೇ ಆಗ ನಡೆಯುತ್ತಿದ್ದ ವೈಜ್ಞಾನಿಕ ಸಂಶೋಧನೆಗಳನ್ನು ತನ್ನ ಸಮೃದ್ಧ ಕಲ್ಪಕತೆಯಲ್ಲಿ ವಿಸ್ತರಿಸಿ ಬರೆದ ಅಮೋಘ ಕೃತಿಗಳು ಎಂದು ಈಗಿನ ಸೈಫೈ ಪರಿಣತರು ಪರಿಶೀಲಿಸಿ ಕೊಂಡಾಡುತ್ತಾರೆ. ಕರಾರುವಾಕ್ಕಾಗಿ ಲೆಕ್ಕ ಹಾಕಿ ಜೂಲ್ಸ್ ವರ್ಣಿಸಿದ ಭವಿಷ್ಯಕಾಲದ ಲೂನಾರ್ ಮಶೀನ್ ಒಂದು ಶತಮಾನದ ನಂತರ ಹೊಳೆಹೊಳೆಯುತ್ತ ವಿಜ್ಞಾನ ಪ್ರಪಂಚದ ನಿಜ ಆಗಿ ಅಪೋಲೋ-11 ರೂಪದಲ್ಲಿ (ಕೆಲ ಬದಲಾವಣೆಗಳೊಂದಿಗೆ) ಸಾಕಾರಗೊಂಡಿದ್ದನ್ನು ಗಮನಿಸಿದರೆ ಆಗುವ ರೋಮಾಂಚನ, ಅತಿ ಮುಚ್ಚಟೆಯ ಸುರಕ್ಷಿತ ವಿಕ್ಟೋರಿಯನ್ ಬಾಲ್ಯ ಅನುಭವಿಸಿದ್ದವ ತಾರುಣ್ಯದಲ್ಲಿ ಅದರ ರೊಚ್ಚು ತೀರಿಸಿಕೊಳ್ಳುವಂತೆ ತಿರುಗಾಲಿಯಾಗಿದ್ದು, ಪ್ಯಾರಿಸ್‌ನಲ್ಲಿ ನಡೆದ ಒಂದು ವಿಶ್ವಜಾತ್ರೆಯಲ್ಲಿ ಭಾಗವಹಿಸಿ ಸಮುದ್ರತಳದ ಜಗತ್ತು ಅರಿಯಲು ಆವಶ್ಯಕವಿದ್ದ ಎಂಜಿನಿಯರಿಂಗ್ ಸಾಧನ-ಸಾಮಗ್ರಿ ವೀಕ್ಷಿಸಿ, ತಂತ್ರಜ್ಞಾನ ಅರಗಿಸಿಕೊಂಡು ತತ್ಸಂಬಂಧಿತ ಕಾದಂಬರಿ ಬರೆದದ್ದು, ಹಾಗೆ ಆತನಿಂದ ಸೃಷ್ಟಿಯಾದ ಕ್ಯಾಪ್ಟನ್ ನೀಮೋ ಪಾತ್ರ, ಸಬ್‌ಮರೀನ್‌ನಲ್ಲಿ ಅನೇಕ ಅನ್ವೇಷಣಾ ಯಾತ್ರೆ ಮಾಡುವುದು, ಸಾಗರದಲ್ಲಿ ಜಲಜನಕ ಶಕ್ತಿ ಉತ್ಪಾದನೆಗೆ ಮುಂದಾಗುವುದು ಮುಂತಾದ ಮುಂಗಾಣ್ಕೆಯ ಪ್ರವಾದಿ ಬರವಣಿಗೆಯನ್ನು ವಿವರಿಸುತ್ತ ಉತ್ಕಂಠಿತರಾಗುತ್ತಾರೆ. ಜತೆಗೇ, ವಿದ್ಯುಚ್ಛಕ್ತಿಯ ಅತಿ ಸುಧಾರಿತ ತಂತ್ರಜ್ಞಾನದಿಂದ ರೂಪಿಸಬಹುದಾದ ಉಪಕರಣಗಳು ವರ್ನ್ ಪುಸ್ತಕದಿಂದ ನೇರವಾಗಿ (ಮುಂದಿನ ಯುಗದ) ಟಾರ್ಚರ್ ಛೇಂಬರ್‌ಗಳಿಗೆ ಜಿಗಿದದ್ದನ್ನು ನೋಡಿ ಗಾಬರಿಯಿಂದ ಸುಸ್ತಾಗುತ್ತಾರೆ! ಕೇವಲ ಒಂದು ಜೀವಿತ ಕಾಲದಲ್ಲಿ ಅದೆಷ್ಟೊಂದು ವಿಜ್ಞಾನ-ತಂತ್ರಜ್ಞಾನ ಅನ್ವೇಷಣೆಗಳನ್ನು ಮಾಡಿದ ಥಾಮಸ್ ಆಲ್ವ ಎಡಿಸನ್‌ರಿಗೆ ಸಮಾನವಾಗಿ ಎಂಬಂತೆ, ಬರವಣಿಗೆಯಲ್ಲಿ ವೈರ್‌ಲೆಸ್, ಎಕ್ಸ್ ರೇ, ಅನಿಲ ಚಾಲಿತ ಕಾರು, ಫ್ಯಾಕ್ಸ್ ಮಶೀನ್ ಮುಂತಾದವು ಒತ್ತಟ್ಟಿಗಿರಲಿ, ಮೋರ್ಸ್‌ಕೋಡ್ ಹಾಗೂ ಟೆಲಿಗ್ರಾಫ್ ವಯರ್ ಬಳಸಿ, ಪ್ರಚಲಿತ ಇಂಟರ್ನೆಟ್ ಹೋಲುವ ತಂತ್ರಜ್ಞಾನವನ್ನೂ ಈ ಅಪ್ರತಿಮ ಪ್ರತಿಭಾವಂತ ಚಿಂತಿಸಿದ್ದ ಎಂಬ ಅವರ ಉಘೇಗಳಿಗೆ ನಾವು ಸಾಮಾನ್ಯರು ಏನು ತಾನೆ ಹೇಳಬಹುದು? ಹೇಳಬಲ್ಲೆವು?!

ಕೆತ್ತಿದ ಶಿಲ್ಪಜೀವತಳೆದು ಕಲಾವಿದನೊಂದಿಗೆ ಒಡನಾಡುವ ಅನುಭವಕ್ಕೆ ಸಮಾನವಾದ ಪ್ರವಾದಿತನ, ಮುಂಗಾಣ್ಕೆ ವೈಜ್ಞಾನಿಕ ಕಾದಂಬರಿ-ಸಿನೆಮಾ ಗಳ ಅವಿಭಾಜ್ಯ ಅಂಗ ಎಂಬುದು ನಿರ್ವಿವಾದ. ಯಾವ ಯಾವ ವಿಷಯಗಳ ಮೇಲೆ ಈ ಬಗೆಯ ಮುಂಗಾಣ್ಕೆ ಹರಿಸಲಾಗಿದೆ ಎನ್ನುವು ದರಲ್ಲಿಯೂ ಒಂದು ವಿನ್ಯಾಸ ಗುರುತಿಸಬಹುದು: ಅನ್ಯಗ್ರಹ ಜೀವಿ, ಯಂತ್ರಮಾನವನ ಮೇಲಿನ ನಿಯಂತ್ರಣ ಕಳೆದುಹೋಗಿ ಭಯಾನಕ ಪರಿಸ್ಥಿತಿ ನಿರ್ಮಾಣವಾಗುವುದು, ಭೂಮಿಯ ಮೇಲಿನ ಸೃಷ್ಟಿ ವಿನಾಶಗೊಳಿಸುವ ಪ್ರಳಯ-ಉತ್ಪಾತ, ಅದು ತಮ್ಮಿಂದಲೇ ಘಟಿಸುವಂತೆ ಮಾಡಿಕೊಳ್ಳುವ ಅವಿವೇಕಿಗಳು, ವೈಜ್ಞಾನಿಕ ಸಂಶೋಧನೆ ಮಾಡಿ ಪ್ರಪಂಚದ ಮೇಲೆ ಹಿಡಿತ ಸಾಧಿಸಲು ಯತ್ನಿಸುವ ತಲೆತಿರುಕ ವಿಜ್ಞಾನಿಗಳು, ಅವರಿಗೆ ಆಮಿಷ ನೀಡುವ ಮಿಲಿಟರಿ-ಸಾಮ್ರಾಜ್ಯಶಾಹಿ ಮತ್ತಿತರ ದುಷ್ಟ ಶಕ್ತಿ, ಮನುಷ್ಯನನ್ನು ಮೂಲೆಗುಂಪು ಮಾಡಿ ಮೆರೆಯುವ ದೈತ್ಯ ಪ್ರಾಣಿಗಳು, ಆ ಲೋಕ ಪ್ರವೇಶಿಸಿ ಕೇವಲ ತನ್ನ ಬುದ್ಧಿ ಸಾಮರ್ಥ್ಯದಿಂದ ಪಾರಾಗುವುದಷ್ಟೇ ಅಲ್ಲ, ರಾಕ್ಷಸ ಶಕ್ತಿಯನ್ನು ತನ್ನ ಅಡಿಯಾಳಾಗಿಯೂ ಮಾಡಿಕೊಳ್ಳಬಲ್ಲ ಅವನ ಧೀರೋದ್ದಾತ್ತತೆ-ಹೆರೋಯಿಸಂ...ಇತ್ಯಾದಿ ಆರಂಭಿಕ ಸೈಫೈಗಳ ಥೀಮ್ ಆಗಿದ್ದುದು ಗೋಚರಿಸುತ್ತದೆ. (ಅನ್ವರ್ಥಕ ಟೈಟಲ್‌ಗಳ ಕೆಲ ಕ್ಲಾಸಿಕ್‌ಗಳೆಂದರೆ, ‘ಮೆಟ್ರಾಪೊಲಿಸ್’, ‘ಫ್ರಾಕೆನ್‌ಸ್ಟೀನ್’, ‘ದಿ ಡೇ ದಿ ಅರ್ತ್ ಸ್ಟುಡ್ ಸ್ಟಿಲ್’, ‘ಗೋಡ್‌ಝಿಲ’, ‘ಫಾರ್‌ಬಿಡನ್ ಪ್ಲಾನೆಟ್’ ಇತ್ಯಾದಿ). ಇವನ್ನು ಬೇರೆ ಬೇರೆ ಅಸಾಂಪ್ರದಾಯಿಕ, ಹೊಸ, ತಮಾಷೆಯ, ಹಿಂದಿನ ವರ್ಯಾರೂ ಯೋಚಿಸದ ತಿರುವು ಮುರುವುಗಳೊಂದಿಗೆ ನಿರ್ವಹಿಸಿರುವುದೂ ನಂತರ ತೆರೆಕಂಡವುಗಳಲ್ಲಿ ಕಾಣುತ್ತದೆ. ಉದಾಹರಣೆಗೆ, ಏಲಿಯನ್ ಒಂದಿಗೆ ಸೌಹಾರ್ದಯುತ ಸಂಬಂಧ ಏರ್ಪಡುವುದು, ಅವರ ವಿಕಸಿತ ಜೀವನಕ್ರಮದಿಂದ ಮನುಷ್ಯ ಸ್ಫೂರ್ತಿಗೊಳ್ಳುವುದು, ದುಷ್ಟ ವಿಜ್ಞಾನಿಗಳ ಜಾಗದಲ್ಲಿ ಮಾನವತೆಯ ಉಳಿವಿಗಾಗಿ ಜೀವದ ಹಂಗು ತೊರೆದು ಪ್ರಯೋಗ, ಸಂಶೋಧನೆಯಲ್ಲಿ ತೊಡಗಿಕೊಳ್ಳುವ ಸಂತರಂತಿರುವ ಸೈಂಟಿಸ್ಟ್ಸ್,ಯಂತ್ರಮಾನವ ಇಲ್ಲವೇ ಮಾನವಿ ಪ್ರಿಯಕರ-ಪ್ರೇಯಸಿಯಾಗಿ ಬದಲಾಗಿ ಅಲ್ಲೊಂದು ಸುಕುಮಾರ ಸಂಬಂಧ ಏರ್ಪಡುವುದು ಹಾಗೂ ಕೊನೆಗೊಳ್ಳಲೇಬೇಕಾದ ಅಂತಹ ಬಂಧದ ಹೃದಯವಿದ್ರಾವಕತೆ ಸುತ್ತ ಕತೆ ಹೆಣೆಯುವುದು...ಹೀಗೆ.
ಆಕಾಶಯಾನ, ಅಂತರಿಕ್ಷ ಶೋಧ, ಕಾಲದ ಹಿಮ್ಮುಖ-ಮುಮ್ಮುಖ ಪಯಣ ಮುಂತಾದವು ಆಲ್‌ಟೈಮ್ ಫೇವರಿಟ್.

 ಸಿನೆಮಾ ಮಾಧ್ಯಮದಲ್ಲಿ ಇವನ್ನೆಲ್ಲ ಅಳವಡಿಸಲು ನಿರ್ದೇಶಕರು- ತಂತ್ರಜ್ಞರು ವಹಿಸುತ್ತಿದ್ದ ರೀತಿ-ನೀತಿ, ಶ್ರಮದ್ದಂತೂ ಬೇರೊಂದೇ ರಾಮಾಯಣ. ವಿಸ್ತಾರವಾದ, ಸಕಲ ವಿವರಗಳನ್ನೊಳಗೊಂಡ ಸೆಟ್ ಹಾಕಿ, ಚಿತ್ರ ನಿರ್ಮಿಸುತ್ತಿದ್ದುದು ಹಳೇ ವಿಧಾನ-ಓಲ್ಡ್ ಸ್ಕೂಲ್ ಫಿಲ್ಮ್ ಮೇಕಿಂಗ್. ಕ್ಯಾಮೆರಾ ಕೋನ, ಚಳಕ, ಬೇಕಾದಂತೆ ವಿನ್ಯಾಸಗೊಳಿಸಿಕೊಂಡ ಉಪಕರಣ, ಸಾಮಾನು-ಸರಂಜಾಮು ಇವುಗಳಿಂದಲೇ ಉದ್ದೇಶಿತ ಗುರಿ ಸಾಧಿಸಬೇಕಾದ ಸವಾಲು ಅದಕ್ಕಿತ್ತು. ಅತ್ಯಾಧುನಿಕ ಕಂಪ್ಯೂಟರ್ ಗ್ರಾಫಿಕ್ಸ್, ಸ್ಪೆಷಲ್ ಎಫೆಕ್ಟ್ಸ್ ರಂಗಪ್ರವೇಶಿಸಿದ ನಂತರ ಪರಿಸ್ಥಿತಿ ಯದ್ವಾತದ್ವಾ ಬದಲಾಯಿತು ಎನ್ನಲಾಗುತ್ತದೆ. ವಿಲಕ್ಷಣ ಚಹರೆ ನಿರ್ಮಿಸುವ ಪ್ಲಾಸ್ಟಿಕ್ ಸರ್ಜರಿ, ಕೃತಕ ಅಂಗಾಂಗ ಜೋಡಣೆಯ ಪ್ರೊಸ್ಥೆಟಿಕ್ಸ್, ಅತ್ಯಾಧುನಿಕ ಪ್ರಸಾಧನ ತಂತ್ರಜ್ಞಾನ ತರುವಾಯ ಜತೆಗೂಡಿದವು. ಪ್ರೇಕ್ಷಕರನ್ನು ಸೆಳೆಯಲು ಇವೆಲ್ಲವುಗಳ ಜರೂರತ್ತಿತ್ತು. ಎಲ್ಲ ಸೇರಿ ಸೈಫೈ ಸಿನೆಮಾಗಳ ಬಜೆಟ್ ಬೃಹತ್ತಾಗುತ್ತ ಸಾಗಿತು. ವೈಜ್ಞಾನಿಕ ಥೀಮ್‌ಗಳನ್ನು ಬರಿದೇ ದೃಶ್ಯ ವೈಭವೀಕರಣದಿಂದಲ್ಲದೆ ಕಾವ್ಯಾತ್ಮಕವಾಗಿ, ಮೌನವಾಗಿ, ಧ್ಯಾನದಂತೆ ನಿರ್ವಹಿಸಬಹುದು-ಧಾಂಧೂಂ ವೆಚ್ಚವೊಂದೇ ಉತ್ತಮ ಸೈಫೈ ಲಕ್ಷಣ ಅಲ್ಲ-ಎಂದು ಸಹ ತೋರಿಸಿಕೊಟ್ಟ ಕೆಲ ಪ್ರತಿಭಾನ್ವಿತರು ಅಮೂರ್ತ ಚಿಂತನೆಯ ಆಧ್ಯಾತ್ಮಿಕತೆ ವಿಜ್ಞಾನ ವಸ್ತು-ವಿಷಯಗಳನ್ನು ಆವರಿಸಿ ತಬ್ಬುವ, ಹಬ್ಬುವ ಬೆಡಗ ಬಿಡಿಸಹೋದರು. 1972ರಲ್ಲಿ ತೆರೆಗೆ ಬಂದ ‘ಸೋಲಾರಿಸ್’, ಅಂಥದ್ದೊಂದು ಪ್ರಯತ್ನ: ಅಗಾಧ ವಿಸ್ತೀರ್ಣ (ಕ್ಷೀರಪಥ, ಗ್ಯಾಲಕ್ಸಿ, ಯಪ್ಪಾ, ಎಷ್ಟೆಷ್ಟು ದೊಡ್ಡವು ಇವೆಲ್ಲ?!), ಮನುಷ್ಯ ಕಲ್ಪನೆಗೆ ಅತೀತವಾದ ಪ್ರಕಾಶವರ್ಷದಂತಹ ಕಾಲಮಾಪನಗಳಲ್ಲಿ ಸೊಕ್ಕಿ ಉಕ್ಕಿದ್ದಷ್ಟೇ ಅಲ್ಲ ಬಳಲಿ ಬೆಂಡಾಗಿಯೂ ಇರಬಹುದಾದ ಅಖಂಡ ಕಾಸ್ಮಾಸ್‌ನ ಏಕಾಕಿತನ, ವಿಸಂಗತಿ ಕುರಿತಾಗಿತ್ತು ಎಂದು ದಾಖಲಾಗಿದೆ.

ಮಿಲನಿಯಂ ಉಗಮದಲ್ಲಿ ಬಂದ ‘ದಿ ಮ್ಯಾಟ್ರಿಕ್ಸ್-1999’, ವಾಸ್ತವ ಎಂಬುದರ ಸತ್ಯಾಸತ್ಯತೆ ಪ್ರಶ್ನಿಸಿತು. ಇದು, ಮಾಯಾ ಪ್ರಪಂಚದಲ್ಲಿ ಹಾವು ಹಗ್ಗವಾಗಿ, ಹಗ್ಗ ಹಾವಾಗಿ ಪರಿವರ್ತಿತವಾಗುವ ಸಂಭವನೀಯತೆ, ಭಾರತೀಯ ತತ್ತ್ವಜ್ಞಾನದಲ್ಲಿ ಆದಿಶಂಕರರಿಂದ ವಿವರಿಸಲ್ಪಟ್ಟಿರುವ ತರ್ಕ ನೆನಪಿಸುತ್ತದೆ. ಕನಕದಾಸರ ಬಯಲು-ಆಲಯ, ನಯನ-ಬುದ್ಧಿಗಳ ದ್ವಿತ್ವ ಹೋಲುತ್ತದೆ. ಮನಷ್ಯನ ಪ್ರಜ್ಞೆ-ಸುಪ್ತಪ್ರಜ್ಞೆ, ನಿದ್ರೆ-ಜಾಗೃತಾವಸ್ಥೆಗಳಲ್ಲಿರುವ ಫರಕು ಹೊರಹಾಕುತ್ತದೆ. ಅರೆರೆರೆ ಎಂದು ನರಳುತ್ತ ನಿಮ್ಮನ್ನು ನೀವು ಚಿವುಟಿಕೊಂಡಿರ? ಅಮೂರ್ತ ಚಿಂತನೆಯ ಕಚಗುಳಿಯೆ ಹಾಗೆ. ಅನುಭವಿಸುತ್ತ ಇರುವಷ್ಟು ಹೊತ್ತು ನಮ್ಮೆಲ್ಲ ಓದು, ಕರಿಯರ್, ಸಂಪಾದನೆ, ಸಂಸಾರ ಬಂಧನ, ಸಿಲ್ವರ್ ಜ್ಯುಬಿಲಿಗಳು ಸಾಬೂನು ಗುಳ್ಳೆ! ಸೈಫೈ ಮರುಳರು ಮತ್ತೆ ಮತ್ತೆ ನೋಡಿ ತಮತಮಗೆ ದಕ್ಕಿದಷ್ಟು ಅರ್ಥಮಾಡಿಕೊಂಡರು. ಅಷ್ಟೇಅಲ್ಲ, ‘ವ್ಯಾಪ್ತಿ ಪ್ರದೇಶದ ಹೊರಗಿದ್ದವ’ರನ್ನೂ ಎಳಕೊಂಡಿತು. ಹ್ಞಾಂ! ಆರಾಧನೆ ನಡೆಯುತ್ತಿರುವಾಗಲೇ ಇದನ್ನೂ ಹೇಳಿಬಿಡಬೇಕು, ವೈಜ್ಞಾನಿಕ ಕಥಾಹಂದರದ ಸಿನೆಮಾಗಳಿಗೆ ಮೋರೆ ತಿರುವ ಮಂದಿಯೂ ಇದ್ದಾರೆ: ಏನು ಮಹಾ? ಅವರದ್ದೇ ಥಿಯರಿ, ಅದರದ್ದೇ ಪ್ರಾಕ್ಟಿಕಲ್ಲು. ನಿರ್ದೇಶಕರು ಹೇಳಿದ್ದಕ್ಕೆಲ್ಲ ‘ಅಹುದಹುದು’ ಅನ್ನುವುದರಲ್ಲಿ ಏನಿದೆ ಮಜಾ ಎಂಬ (ಕು)ತರ್ಕ ಅವರ ಬೆನ್ನಿಗಿದೆ. ಇಂತಹ ಸಿನೆಮಾಗಳನ್ನು ವ್ಯಾಖ್ಯಾನಿಸಿಕೊಳ್ಳಬಹುದಾದದ್ದು ಸಹ ಅತ್ಯಂತ ವೈಯಕ್ತಿಕ ನೆಲೆಯಲ್ಲಿ. ಕಾರಣ, ಅದರ ಒಡೆಯರು ತಮ್ಮ ವಿಷನ್ ಪೃಥಕ್ಕರಿಸುವಾಗ ಪ್ರದರ್ಶಿಸುವ ಬಿಗಿ, ಸಂಯಮವನ್ನು ಆಯಾ ವಿಷಯಗಳು ಆಗ್ರಹಿಸುತ್ತವೆ. ಹಿನ್ನೆಲೆ ಧ್ವನಿಯ ‘ಹರಿಕತೆ’ ಹರ್ಗೀಸು ಲಭ್ಯವಿರುವುದಿಲ್ಲ. ಸೈಫೈ ಹೊರಳಿದ ಹಾದಿ, ಪಡೆದ ತಿರುವು ಇನ್ನೂ ಇದೆ...

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top