ಗತದ ಮೆಲುಕು; ಯಾವ ರೂಪದೊಳು ಬಂದರೂ ಸರಿಯೇ

ಏಕೆ ಇನ್ನೂ ಯಾರೂ ಈ ಕುರಿತು ಮೆಲುಕಿಲ್ಲ ಎಂದು ಕೊಳ್ಳುತ್ತಿರುವಾಗಲೇ ಅದೋ ಬಂದಿದೆ, ಟೈಪ್‌ರೈಟರ್ ಮೇಲೆ ಸಾವಿರ ನೆನಪು. ಚಿತ್ರವತ್ತಾದ ಒಂದು ಕಾಫಿ ಟೇಬಲ್ ಪುಸ್ತಕ ರೂಪದಲ್ಲಿ. 1955ರಲ್ಲಿ ದೇಶದಲ್ಲಿ ಪ್ರಥಮವಾಗಿ ಟೈಪ್‌ರೈಟರ್ ತಯಾರಿಕೆ ಆರಂಭಿಸಿ, ಐದಾರು ವರ್ಷಗಳ ಹಿಂದೆಯಷ್ಟೇ ಅದನ್ನು ಸ್ಥಗಿತಗೊಳಿಸಿದ ಗೋದ್ರೆಜ್ ಕಂಪೆನಿ ಇದರ ಹಿಂದಿದೆ. ಹಲವಾರು ಲೇಖನ, ಅವು ಹೇಳದೆ ಉಳಿದಿದ್ದನ್ನೂ ಸೆರೆಹಿಡಿದಿರುವ ಛಾಯಾಚಿತ್ರಗಳು, ಸ್ವತಃ ಕಂಪೆನಿಯ ಆರ್ಕೈವ್ ಸಂಗ್ರಹದಲ್ಲಿದ್ದ ಚಾರಿತ್ರಿಕ ಘಟ್ಟಗಳು...ಇವನ್ನೆಲ್ಲ ಒಳಗೊಂಡಿರುವ ಪುಸ್ತಕ(2016) ಹೆಚ್ಚೂಕಡಿಮೆ ಒಂದು ಟೈಪ್‌ರೈಟರ್‌ನಷ್ಟೇ ತೂಕವಾಗಿದೆಯಂತೆ! ಜೊತೆಗೆ, ಯಂತ್ರದ ಇತಿಹಾಸದೊಂದಿಗೆ ಮಾನವ ಇತಿಹಾಸವೂ ಹೆಣೆದುಕೊಂಡಿರುವ ಭಾವನಾತ್ಮಕತೆಯೂ ಸೇರಿ, ‘ವಿತ್ ಗ್ರೇಟ್ ಟ್ರುತ್ ಆ್ಯಂಡ್ ರಿಗಾರ್ಡ್: ಎ ಹಿಸ್ಟರಿ ಆಫ್ ದಿ ಟೈಪ್‌ರೈಟರ್ ಇನ್ ಇಂಡಿಯ’ ಒಂದು ಅಪರೂಪದ ಪುಸ್ತಕವಾಗಿ ಮೈದಳೆದಿದೆ.

ಟೈಪ್‌ರೈಟರ್ ಜೀವನದ ಅವಿಭಾಜ್ಯ ಅಂಗವಾಗಿರುವ ಪತ್ರಕರ್ತರು, ವಿದ್ವಾಂಸರು, ಲೇಖಕರು, ಯಂತ್ರಕುತೂಹಲಿಗಳು..ಹೀಗೆ ಅನೇಕರು ಬರೆದ ನೆನಪು-ನಿರೀಕ್ಷಣೆಗಳನ್ನು ಸಿದ್ಧಾರ್ಥ್ ಭಾಟಿಯಾ ಎಂಬ ನಿವೃತ್ತ ಪತ್ರಕರ್ತರು ಸಂಪಾದಿಸಿದ್ದಾರೆ. ಚಿರುದೀಪ್ ಚೌಧರಿ ಎಂಬಾತ ಕತೆ ಹೇಳುವ ಕಮನೀಯ ಛಾಯಾಚಿತ್ರಗಳನ್ನು ಪೂರೈಸಿದ್ದಾರೆ. ಸುಮಾರು ಎರಡು ದಶಕಗಳ ಹಿಂದೆ, ಗತಕ್ಕೆ ಸರಿದುಹೋಗುವ ಮುಂಚೆ, ಬೆರಳಚ್ಚು ಯಂತ್ರಗಳು ಸಾಕಷ್ಟು ವೈಭವದಿಂದ ಮೆರೆದಿದ್ದವು ಎನ್ನಲು ಸಾಕ್ಷಿ ಹೇರಳ. ನಾವು ಶಾಲೆ ಕಲಿಯುತ್ತಿದ್ದಾಗ ಬಡಾವಣೆಯಲ್ಲಿದ್ದ ಒಂದು ಟೈಪಿಂಗ್ ಕಲಿಸುವ ಇನ್‌ಸ್ಟಿಟ್ಯೂಟ್ ಸಾಕಷ್ಟು ಫೇಮಸ್ ಆಗಿತ್ತು. ಯಾವಾಗ ಹೈಸ್ಕೂಲು ದಾಟಿ, ಅಥವಾ ಅವರು ಸೇರಿಸಿಕೊಂಡರೆ, ಅದಕ್ಕೂ ಮುಂಚೆ ಅದರ ಹೊಸ್ತಿಲು ಮೆಟ್ಟುತ್ತೇವೆಯೋ ಎಂದು ಹುಡುಗ-ಹುಡುಗಿಯರು ಧೇನಿಸುತ್ತಿದ್ದರು.

ಯಂತ್ರವೊಂದು ಸಾರುವ ಆಧುನಿಕತೆಯಿಂದ ಬಹುಶಃ ಈ ಮರುಳು ಅವರಲ್ಲಿ ಉಂಟಾಗಿತ್ತು ಎಂದುಕೊಳ್ಳಬಹುದು. ಉದ್ಯೋಗಾವಕಾಶ, ಅದರಲ್ಲೂ ಸರಕಾರಿ ನೌಕರಿ, ಟೈಪಿಂಗ್ ಕಲಿತರೆ ಹೆಚ್ಚು ಎಂಬುದೂ ಪ್ರಚಲಿತವಾಗಿತ್ತು. ಮೇಲುಸ್ತುವಾರಿ ವಹಿಸಿದ್ದವರು ಒಬ್ಬ ಕೃಶಕಾಯದ ಮಹಿಳೆ. ಆದರೆ, ತಮ್ಮ ಬ್ಯಾಚ್‌ಗೆ ಮ್ಯಾಡಂ ಬಂದರೆ ಏನೋ ದುಪ್ಪಟ್ಟು ಕಲಿಕೆ ಸಾಧ್ಯವಾಗಿಬಿಡುತ್ತದೆ ಎಂದು ವಿದ್ಯಾರ್ಥಿಗಳು ಭ್ರಮಿಸುತ್ತಿದ್ದರು. ಅವರು ಗೈಡ್ ಮಾಡುವ ತಂಡಕ್ಕೇ ಹೇಗಾದರೂ ಮಾಡಿ ನುಸುಳಬೇಕೆಂದು ಕೆಲವರು ಮಸಲತ್ತು ಮಾಡುತ್ತಿದ್ದರು. ಟೈಪ್‌ರೈಟಿಂಗ್ ಮೇಲೆ ಆ ಶಿಕ್ಷಕಿಗಿದ್ದ ಪರಿಣತಿ, ಅವರ ಆತ್ಮವಿಶ್ವಾಸ, ಬಿಡುವಿಲ್ಲದಂತೆ ನೂರಾರು ಆಕಾಂಕ್ಷಿಗಳಿಗೆ ಟೈಪಿಂಗ್ ಜ್ಞಾನ ನೀಡಿ ಅವರು ವೃದ್ಧಿಸಿಕೊಂಡ ಆರ್ಥಿಕತೆ, ತಂದೆ ತೀರಿಹೋದ ನಂತರ ಸಂಸಾರದ ಜವಾಬ್ದಾರಿಗೆ ಮನೆ ಮಗನಾಗಿ ಅವರು ಹೆಗಲು ಕೊಟ್ಟಿರುವುದು ಈ ದುಡಿಮೆಯ ಹಿಂದಿರುವ ಪ್ರೇರಣೆ ಇತ್ಯಾದಿ ಇತ್ಯಾದಿಯೆಲ್ಲ ಬಾಯಿಂದ ಬಾಯಿಗೆ ತಲುಪಿ ಸಾರ್ವಜನಿಕ ತಿಳಿವಾಗಿ ಮಾರ್ಪಾಡಾಗಿತ್ತು. ಅಪರೂಪಕ್ಕೆ ಅವರು ಇನ್ಸ್‌ಟಿಟ್ಯೂಟ್ ಹೊರಗೆ ಬಸ್‌ನಲ್ಲಿ, ಮಾರ್ಕೆಟ್‌ನಲ್ಲಿ, ಗಣಪತಿ ಆರ್ಕೆಸ್ಟ್ರಾದಲ್ಲಿ ಕಂಡುಬಿಟ್ಟರೆ, ಕಿಶೋರ ಪಡೆ ಮುದಗೊಳ್ಳುತ್ತಿತ್ತು; ತಮ್ಮ ಶಾಲಾ ಶಿಕ್ಷಕ-ಶಿಕ್ಷಕಿಯರು ಹೀಗೆ ಸಿಕ್ಕಾಗ ಮಾಡುವಂತೆಯೇ, ನಮಸ್ತೆ, ಗುಡ್‌ಈವ್‌ನಿಂಗ್ ಹೇಳಲು ಮಾರು ದೂರದಿಂದ ಸಿದ್ಧತೆ ನಡೆಸುತ್ತಿತ್ತು.

ಪ್ರಸ್ತುತ ಈ ಪುಸ್ತಕದಲ್ಲೂ ಟೈಪಿಂಗ್‌ಗೂ, ಮಹಿಳೆಯರಿಗೂ ಇರುವ ಅವಿನಾಭಾವ ಸಂಬಂಧವೊಂದು ದಾಖಲಾಗಿದೆ: ‘ಮೇ ದಿ ಬೆಸ್ಟ್ ಮ್ಯಾನ್ ವಿನ್’ ಎಂಬ ರೂಢಿಗತ ವಾಕ್ಯ ಬಳಸುವ ಮುಂಚೆ ಯೋಚಿಸಿ, ‘‘ಈ ಸಾರಿ ಗೆದ್ದಿರುವುದು ಬೆಸ್ಟ್ ವುಮನ್’’ ಎಂಬ ಛೇಡಿಸುವ ಜಾಹೀರಾತನ್ನು ಒಮ್ಮೆ ಗೋದ್ರೆಜ್ ಕಂಪೆನಿ ನೀಡಿತಂತೆ. ಕಾರಣ, ಆ ವರ್ಷ, ಅಮೋಘ ನಿಮಿಷಕ್ಕೆ 118 ಪದ ಟೈಪಿಸಿ ಒಬ್ಬ ಮಹಿಳೆ ಸ್ಪೀಡ್ ಚಾಂಪಿಯನ್‌ಷಿಪ್ ತಮ್ಮದಾಗಿಸಿಕೊಂಡಿದ್ದುದು. ಬೆರಳಚ್ಚು ಯಂತ್ರದ ಒಡನಾಡಿಗಳಾದ ಸ್ಟೆನೋಗ್ರಾಫ್, ಟೆಲಿಫೋನ್, ಕ್ಯಾಲ್‌ಕ್ಯುಲೇಟರ್‌ಗಳೂ ಮಹಿಳೆಯರಿಗೆ ಒಲಿದವು. 70-80ರ ದಶಕದಲ್ಲಿ ಸರಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಆಯಕಟ್ಟಿನ ಜವಾಬ್ದಾರಿಯುತ ಸ್ಥಾನಗಳಲ್ಲಿ ಕುಳಿತು, ಟೈಪಿಸ್ಟ್-ಸ್ಟೆನೋ ಕಮ್ ಟೆಲಿಫೋನ್ ಆಪರೇಟರ್ ಕಮ್ ಸೆಕ್ರೆಟರಿ ಕೆಲಸ ನಿರ್ವಹಿಸುತ್ತಿದ್ದವರು ಬಹುತೇಕ ಚಾಕಚಕ್ಯತೆಯ ತರುಣಿಯರೇ ಆಗಿರುತ್ತಿದ್ದರು.

ಎಲ್ಲ ಅಂತರಂಗ ಸಮಾಲೋಚನೆಗಳಿಗೂ ಹಾಜರಿರಬೇಕಿದ್ದರಿಂದ ಆಫೀಸಿನ ಒಳ್ಳೆಯ ಅಥವಾ ವ್ಯತಿರಿಕ್ತ ಬೆಳವಣಿಗೆಗಳೆರಡೂ ಅವರಿಗೆ ಗೊತ್ತಾಗುತ್ತಿತ್ತು. ಆದರೆ ರಹಸ್ಯ ಕಾಪಾಡುವ ತಮ್ಮ ನಿಷ್ಠೆ ಹಾಗೂ ನಂಬಿಕಾರ್ಹ ಗುಣಗಳಿಂದ ಕ್ರಮೇಣ ಕಂಪೆನಿಗೆ ಅನಿವಾರ್ಯ ಅನಿಸುವಷ್ಟು ಅವರು ಬೆಳೆಯುತ್ತಿದ್ದರು. ದೊಡ್ಡ ಸ್ತರದ ಜನರೊಂದಿಗೆ ಒಡನಾಡುವ ಅವಕಾಶ ಇದ್ದುದರಿಂದ ಅವರ ನಡೆ-ನುಡಿ, ಉಡುಪು-ಓರಣ, ಆಹಾರ-ಪೇಯಗಳ ಆಯ್ಕೆ ಇತರ ಸಹೋದ್ಯೋಗಿಗಳಿಗಿಂತ ಸ್ವಲ್ಪ ಭಿನ್ನವಾಗಿರುತ್ತಿತ್ತು. (ಹೆಸರುಗಳೂ ಅದು ಹೇಗೋ ಶೀಲಾ, ಮಾಲಾ, ಗೀತಾ, ಲತಾ, ರೀಟಾ, ಜೆನ್ನಿಫರ್ ಮುಂತಾಗಿ ಎರಡಕ್ಷರದಲ್ಲಿಯೇ ಮುಗಿದು ಆಧುನಿಕವಾಗಿರುತ್ತಿದ್ದವು!) ಇವನ್ನೆಲ್ಲ ಅಂದಿನ ದಶಕದ ಸಿನೆಮಾಗಳು ಭಟ್ಟಿಯಿಳಿಸಿವೆ.

 ಬೆರಳಚ್ಚುಯಂತ್ರ ಇಲ್ಲದೆ ಪತ್ರಿಕಾ ಕಚೇರಿಗಳಲ್ಲೂ ಕೆಲಸ ಸಾಗುತ್ತಿರಲಿಲ್ಲ. ಇರುವ ಏಳೆಂಟು ಯಂತ್ರಗಳನ್ನೇ ಹತ್ತೆಂಟು ವರದಿಗಾರರು, ಉಪ ಸಂಪಾದಕರುಗಳು ಸರದಿಯ ಮೇಲೆ ಬಳಸಬೇಕಾಗುತ್ತಿತ್ತು. ಮೋಡಿಯ ಕೈಬರಹದಲ್ಲೇ ವರದಿ ಕೊಡುತ್ತಿದ್ದ ಘಟಾನುಘಟಿಗಳೂ ಕ್ರಮೇಣ ಒಂದೇ ಬೆರಳಲ್ಲಿ ಟೈಪಿಸಲು ಕಲಿತುಕೊಂಡರು. ವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿರುವ ಕ್ಯೂ ಡಬ್ಲ್ಯೂ ಈ ಆರ್ ಟಿ ಕೀಗಳನ್ನೇ ಮುಂದೆ ಕಂಪ್ಯೂಟರ್‌ಗೂ ಬಳಸಿಕೊಂಡಿದ್ದರಿಂದ ಕಚೇರಿಗಳಲ್ಲಿ ಟೈಪ್‌ರೈಟರ್ ಹೋಗಿ ಪೀಸಿ ಬಂದರೂ ಟೈಪಿಸುವ ವಿಧಾನ ಏನೂ ಬದಲಾಗಲಿಲ್ಲ. ಆದರೆ, ಬರೆದುದನ್ನು ತಿದ್ದುವ, ಬದಲಿಸುವ, ವಿಸ್ತರಿಸುವ ವಿಷಯಕ್ಕೆ ಬಂದರೆ, ಬೆರಳಚ್ಚು ಯಂತ್ರ ಹಾಗೂ ಕಂಪ್ಯೂಟರ್‌ಗೆ ಇರುವ ಸೌಕರ್ಯಗಳಲ್ಲಿ ಅಜಗಜಾಂತರ! ಹೀಗಾಗಿ ತಪ್ಪುಗಳಿಗೆ ಗುಂಡು ಸುತ್ತಿ ತಿದ್ದುಪಡಿ ಸೂಚಿಸುವ ಕರಡು ಓದುಗರಿಗೆ ಬಂತು ಸಂಚಕಾರ. ಸಾಕಷ್ಟು ಪ್ರೂಫ್ ರೀಡರ್‌ಗಳನ್ನು ಮನೆಗೆ ಕಳಿಸಿದ ಅಪಕೀರ್ತಿ ಕಂಪ್ಯೂಟರ್‌ಗೆ ಬಂದಿದ್ದನ್ನು ಈ ಪುಸ್ತಕ ದಾಖಲಿಸಿದೆ. ವೃತ್ತಿಪರ ಬರಹಗಾರರು, ಕಾದಂಬರಿಕಾರರು ಮನೆಗಳಲ್ಲಿ ಚಂದದ, ಮುಸುಗು ಹೊದಿಸಿದ ಯಂತ್ರ ಹೊಂದಿದ್ದು, ಸಮಯ ಬಂದಾಗ ಹೆಮ್ಮೆಯಿಂದ ಅದನ್ನು ಪ್ರದರ್ಶಿಸುತ್ತಿದ್ದರು. ಮೇಲ್ಮಧ್ಯಮ ವರ್ಗದ ಸಂಸಾರದಲ್ಲಿ ಮಗನೋ, ಮಗಳೋ ಬರವಣಿಗೆಯ ಪ್ರತಿಭೆ ತೋರಿದರೆ, ಅವರ ಹುಟ್ಟುಹಬ್ಬಕ್ಕೆ ಒಂದು ಟೈಪ್‌ರೈಟರ್ ಅನ್ನು ಗಿಫ್ಟ್ ಆಗಿ ನೀಡಬೇಕೆಂದು ಹಿರಿಯ ಸಂಬಂಧಿಗಳು ಸಂವೇದನಾಶೀಲವಾಗಿ ಹೊಂಚುತ್ತಿದ್ದರು.

ಎಲ್ಲಕ್ಕಿಂತ ವರ್ಣಮಯ, ನವರಸಪೂರ್ಣ ಎನಿಸುವುದು ಶ್ರೀಸಾಮಾನ್ಯ ಬೆರಳಚ್ಚು ಯಂತ್ರವನ್ನು ನೆಚ್ಚಿಕೊಂಡ ಪರಿ. ನಗರದ ಮುಖ್ಯಬೀದಿಗಳಲ್ಲಿ, ಕೋರ್ಟು ಕಚೇರಿಗಳ ಮುಂದೆ ಬೀಡುಬಿಟ್ಟಿರುತ್ತಿದ್ದ ಈ ‘ಕಾರ್ಯಪಡೆ’ ಕಾಗದ-ಪತ್ರ, ಅಹವಾಲು-ದಾಖಲೆ ಇತ್ಯಾದಿಯನ್ನು ನಿಗದಿತ ನಮೂನೆಯಲ್ಲಿ ಟೈಪಿಸಿಕೊಡುತ್ತಾ ಹಣ ಸಂಪಾದಿಸುವುದರೊಂದಿಗೆ ಸಾರ್ವಜನಿಕರಿಗೆ ಸಹಾಯಹಸ್ತ, ಉದಾರ ಸಲಹೆ-ಸೂಚನೆ ನೀಡುವಲ್ಲಿ ಕೃತಕೃತ್ಯವಾಗುತ್ತಿತ್ತು. ಟೈಲರ್‌ಗಳಂತೆ, ಯಂತ್ರಸಮೇತ ಅವರು ಕಚೇರಿ ಆವರಣಗಳಲ್ಲಿರುತ್ತಿದ್ದುದು, ಬೀದಿಯ ಕಟಾಂಜನಗಳಲ್ಲಿ ರಾತ್ರಿ ಮಲಗುತ್ತಿದ್ದುದು, ತಮಗೆ ಬರುವ ಪತ್ರಗಳನ್ನು ಅಲ್ಲಿಯೇ ಬಟವಾಡೆ ಮಾಡಿ ಎಂದು ಕೋರುತ್ತಿದ್ದುದು ಹೇಗೆ ಒಂದು ತಲೆನೋವಾಗಿತ್ತು ಎಂದು ಒಂದು ಲೇಖನ ಸ್ವಾರಸ್ಯವಾಗಿ ಬಿಡಿಸಿಡುತ್ತದೆ. ಪ್ರಕೃತಿಯಿಂದಲೋ ಮನುಷ್ಯರಿಂದಲೋ ಜನಜೀವನ ತಾತ್ಕಾಲಿಕವಾಗಿ ಅಸ್ತವ್ಯಸ್ತಗೊಂಡು, ಹದಗೆಟ್ಟಷ್ಟೇ ಶೀಘ್ರವಾಗಿ ಸಾಮಾನ್ಯ ಸ್ಥಿತಿಗೆ ಮರಳುವುದು ಬದುಕಿನ ನಿರಂತರತೆಗೆ ಖಂಡಿತ ಪುರಾವೆ ಅಲ್ಲವೇ? 1934ರಲ್ಲಿ ಬಿಹಾರ ರಾಜ್ಯವನ್ನು ಭೂಕಂಪ ತಲ್ಲಣಗೊಳಿಸಿದ್ದಾಗ, ಸರಕಾರಿ ಕಾರಕೂನನೊಬ್ಬ, ತನ್ನ ಬೆರಳಚ್ಚು ಯಂತ್ರವನ್ನು ಇದ್ದಲ್ಲೇ ಸಿದ್ಧಗೊಳಿಸಿ, ಟಪಾಟಪ ಶಬ್ದಮಾಡುತ್ತಾ ಕರ್ತವ್ಯ ನಿರತನಾಗಿದ್ದು ಒಬ್ಬ ತರುಣ ಬ್ರಿಟಿಷ್ ಇಂಜಿನಿಯರ್‌ಗೆ ಎಷ್ಟೊಂದು ಸಾಂಕೇತಿಕವಾಗಿ ಕಂಡಿತು, ಎಲ್ಲ ಸರಿಹೋಗುತ್ತಿದೆ ಎಂಬ ಸಂದೇಶ ಮುಟ್ಟಿಸಿತು ಎಂದು ಇನ್ನೊಂದು ಬರಹ ಹೇಳುತ್ತದೆ.

***

‘ನಗರದಲ್ಲಿ, ಒಂದು ಗ್ರಂಥಾಲಯ’ (ಇನ್ ದಿ ಸಿಟಿ, ಎ ಲೈಬ್ರರಿ) ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನ ಮುಂಬೈಯಲ್ಲಿ ಕಳೆದ ವಾರ ನಡೆಯಿತು. ಅದೂ ಕೂಡ ಗತದ ಉದಾತ್ತ ಮೆಲುಕೇ ಎಂಬ ಕಾರಣಕ್ಕಾಗಿ ಇಲ್ಲಿ ಪ್ರಸ್ತಾಪಕ್ಕೆ ಯೋಗ್ಯ. ಭಾರತೀಯ ಇಂಗ್ಲಿಷ್ ಲೇಖಕ, ಪತ್ರಕರ್ತ ಜೆರ್ರಿ ಪಿಂಟೊ, ತಮ್ಮ ಫೋಟೊಜರ್ನಲಿಸ್ಟ್ ಮಿತ್ರ ಚಿರುದೀಪ್ ಚೌಧರಿ (ಅವರೇ, ಟೈಪ್‌ರೈಟರ್ ಪುಸ್ತಕಕ್ಕೆ ಛಾಯಾಚಿತ್ರ ಸಿದ್ಧಗೊಳಿಸಿದವರು) ಜತೆಗೂಡಿ ನಗರದ ಅತ್ಯಂತ ಪುರಾತನ ಗ್ರಂಥಾಲಯ, ಪೀಪಲ್ಸ್ ಫ್ರೀ ರೀಡಿಂಗ್ ರೂಮ್ ಆ್ಯಂಡ್ ಲೈಬ್ರರಿಯ ಪುಸ್ತಕಗಳೊಂದಿಗೆ ಸಂವಾದಕ್ಕಿಳಿದರು. ಸ್ಥಿರವಾದ ಕಟ್ಟಡದ ಗೂಡುಗಳಲ್ಲಿ, ಬೀರುಗಳಲ್ಲಿ ಇದ್ದಲ್ಲೇ ಕಾಲರಾಯನ ಘಾತಕ್ಕೆ ತುತ್ತಾದ ನಾಜೂಕು ಹೊತ್ತಿಗೆಗಳು ನೀಡಿದ ಒಕ್ಕಣೆಯನ್ನು ಬಿಂಬಗಳಲ್ಲಿ ಫ್ರೀಝ್ ಮಾಡಿದರು. ‘ಫೋಕಸ್-2016’ ಹೆಸರಿನ ವಾರ್ಷಿಕ ಛಾಯಾಚಿತ್ರ ಪ್ರದರ್ಶನೋತ್ಸವದಲ್ಲಿ ಬೆಳಕು ಕಂಡ 26 ಫೋಟೋಗಳನ್ನು ಚಿರುದೀಪ್ ತಾವು ಸೆರೆಹಿಡಿದ ಸುಮಾರು 25,000 ಚಿತ್ರಗಳಿಂದ ಆರಿಸಿದ್ದರು, ಒಂದೂವರೆ ವರ್ಷ ಈ ಕೆಲಸದಲ್ಲಿ ತೊಡಗಿದ್ದರು ಎಂಬುದು ತನ್ನಷ್ಟಕ್ಕೆ ಧ್ವನಿಪೂರ್ಣ.

ಚೌಕ ಇಲ್ಲವೇ ಆಯತ ಆಕಾರಗಳಲ್ಲಿ ಇರುವ ಎರಡು ಆಯಾಮದ ಪುಸ್ತಕಗಳೆಂಬ ಘಟಕಗಳಿಗೆ ಮೂರನೆ, ನಾಲ್ಕನೆ ಆಯಾಮ ನೀಡುವುದು ಅವರಿಗೆ ಸವಾಲಾಗಿತ್ತು. ಅದನ್ನು ಬಗೆ ಹರಿಸಿಕೊಂಡ ರೀತಿ ಅವರ ಸೃಜನಶೀಲತೆಯನ್ನು ಸಾರುತ್ತದೆ: ಗ್ರಂಥಾಲಯದಿಂದ ಎರವಲು ಪಡೆದ ಪುಸ್ತಕದಲ್ಲಿ ಗುರುತಿಗಾಗಿ ಬಳಸಿದ್ದ (ಬುಕ್‌ಮಾರ್ಕ್) ಬಸ್ ಟಿಕೆಟ್ ಸಮೇತ ತೆಗೆದ ಚಿತ್ರ, ತೆರೆದ ಪುಸ್ತಕದಡಿ ಅರ್ಧ ವೃತ್ತಾಕಾರದಲ್ಲಿ ಬಾಯ್ದೆರೆದಿರುವ ಗೆದ್ದಲು ತಿಂದ ಭಾಗ, ಹಕ್ಕಿಗಳಿರುವ ಚಿತ್ರವತ್ತಾದ ಒಂದು ಚಾಪ್ಟರ್ ಹಾಳೆ ಬಿಡಿಸಿ ಪುಸ್ತಕವನ್ನು ಕ್ಲಿಕ್ಕಿಸಿರುವುದು ವರುಷಗಟ್ಟಲೆ ಅಜ್ಞಾತವಾಗಿದ್ದ ಅವುಗಳ ಮೌನವನ್ನು ಮಾತಾಗಿಸಿದೆ.

ಜ್ಞಾನಭಂಡಾರ ಎನಿಸಿಕೊಳ್ಳುವ ಪುರಾತನ ಪುಸ್ತಕಗಳು, ಕೈಯಿಕ್ಕಿದರೆ ಸಣ್ಣದೊಂದು ಚಿಲುಮೆ ಧೂಳೇಳುವ, ಹಳದಿಯಾದ, ಯಾರಿಂದಲೂ ತೆರೆಸಿಕೊಳ್ಳದೆ ಬೆನ್ನೆಲುಬು ಜಡ್ಡುಗಟ್ಟಿದ, ಲೈಬ್ರರಿ ಚೀಟಿಯನ್ನು ಪಿಸಿಯದೆ ಕಾಪಾಡಿಕೊಂಡ, ಒಡಲಲ್ಲಿ ಇಟ್ಟ ಹೂಗಳನ್ನು ಪಾರದರ್ಶಕವಾಗಿ ಜೀರ್ಣಗೊಳಿಸಿದ ಭೌತಿಕ ಅವಸ್ಥೆಯಲ್ಲಿ ನಮ್ಮ ಆಸಕ್ತಿ, ಗಮನ ಬೇಡುವ ಸಂಗತಿ ಒಂದು ಮಿಶ್ರಭಾವವನ್ನು ಉದ್ದೀಪಿಸುತ್ತದೆ. ಪುಸ್ತಕ ಪ್ರೇಮ, ಗ್ರಂಥಾಲಯ, ಓದುವ ಹವ್ಯಾಸ ಕ್ರಮೇಣ ನಶಿಸಿಹೋಗುತ್ತಿರುವ ಹಳಹಳಿಕೆ ಮತ್ತೆ ಮುನ್ನೆಲೆಗೆ ಬರುತ್ತದೆ. ಆದರೆ ಕೆಲವು ಗತ ಸಂಗತಿಗಳ ಪುನರಾಗಮನ ಬಲು ಕಷ್ಟವೇನೋ..ಏಕೆಂದರೆ, ಗೆಳೆಯರಿಬ್ಬರೂ ಹೀಗೆ, ಈ ಪ್ರಾಜೆಕ್ಟ್‌ನಲ್ಲಿ ವ್ಯಸ್ತರಿದ್ದಾಗ, ರೀಡಿಂಗ್ ರೂಮ್‌ನಲ್ಲಿ ಪತ್ರಿಕೆ ಓದುತ್ತಾ ಇರುತ್ತಿದ್ದ ಯಾರೊಬ್ಬರೂ ಏನಿದೆಲ್ಲ? ಯಾಕಾಗಿ ಇಷ್ಟೊಂದು ಫೋಟೋ ತೆಗೆಯುತ್ತಿದ್ದೀರಿ? ಎಂಬ ಕನಿಷ್ಠ ಕುತೂಹಲವನ್ನೂ ತೋರಲಿಲ್ಲವಂತೆ!

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top