ಕಲಹ ಕೊನೆಗೊಳಿಸಲು ಬೇಕು, ಕಲ್ಲು ಕರಗುವ ಸಮಯ | Vartha Bharati- ವಾರ್ತಾ ಭಾರತಿ

---

ಕಲಹ ಕೊನೆಗೊಳಿಸಲು ಬೇಕು, ಕಲ್ಲು ಕರಗುವ ಸಮಯ

ಮಧ್ಯಪ್ರಾಚ್ಯ ದೇಶಗಳಲ್ಲಿ ತನ್ನ ಪಾರಂಪರಿಕ, ಪುರಾತತ್ವ ಗುಣಕ್ಕೆ ಹೆಸರಾದ ಸಿರಿಯಾ ಇಂದು ಅಕ್ಷರಶಃ ಧೂಳೀಪಟವಾಗಿರುವ ನಾಡು. ಗುಂಪುಗಾರಿಕೆಯ ‘ಯಾದವೀ ಕಲಹ’ದಿಂದ ಆರಂಭಗೊಂಡ ಅಂತರ್ಯುದ್ಧ, ತನ್ನ ಏಳನೆ ವರ್ಷ ತಲುಪುವ ವೇಳೆ ವಿಕಾರ-ವಿರಾಟ ರೂಪ ಪಡೆದುಕೊಂಡು ಕಂಗೆಡಿಸಿರುವ ಪರಿ ಹೇಳಲು ಮಾತು ಬಾರದು. ಆದರೆ, ಮಾತು-ಸಂಧಾನಗಳಿಂದಲೇ ಒಂದು ರಾಜಕೀಯ ನಿರ್ಣಯ ತಲುಪಬೇಕಾದ ಅನಿವಾರ್ಯ.

‘‘ಈ ಚಿತ್ರಗಳು ನಿಮ್ಮನ್ನು ತೀವ್ರವಾಗಿ ಘಾಸಿಗೊಳಿಸುವ ಸಂಭವ ಇದೆ’’ ಎಂಬ ಮೃದು ಎಚ್ಚರಿಕೆಯ ಪೀಠಿಕೆಯೊಂದಿಗೆ ನಮ್ಮೆಲ್ಲರ ಮುಂದೆ ಮೂಡಿದ ಇತ್ತೀಚಿನ ಬಿಂಬಗಳು, ಸಿರಿಯಾ ಅಧ್ಯಕ್ಷ ಬಶರಲ್ ಅಸಾದ್ ಸೇನೆ ನಡೆಸಿದ ರಾಸಾಯನಿಕ ಶಸ್ತ್ರಾಸ್ತ್ರ ಬಳಕೆ ಪರಿಣಾಮವನ್ನು ತೋರುತ್ತಿದ್ದವು. ಉಸಿರಿಗಾಗಿ ಚಡಪಡಿಸುವ ಮನುಷ್ಯ ಜೀವಗಳು ಮಾನವತೆ ಧಸಕ್ಕನೆ ಒಂದಡಿ ಕೆಳಗೆ ಕುಸಿಯಿತೆ ಎಂಬ ಗಾಬರಿ ಮೂಡಿಸಿದವು. ಯುದ್ಧವನ್ನೇ ಆಗಲಿ, ಹೀಗೆ, ಇಷ್ಟೇ, ಇದೇ ಪ್ರಕಾರ ಮಾಡಬೇಕು ಎಂದು ಕೊರೆದಿಡಲಾದ ಅಂತರ್ದೇಶಿ ಶಾಸನಗಳು ಲಜ್ಜೆಯಿಂದ ಮುಖ ಮುಚ್ಚಿಕೊಳ್ಳಬೇಕಾದ ಸಂದರ್ಭ ಎದುರಿಸಿದವು. ಪಶ್ಚಿಮದ ಸಾರ್ವಭೌಮತ್ವ ಸೊಲ್ಲೆತ್ತದೆ ಒಪ್ಪಿಕೊಂಡಿರುವ, ಪೂರ್ವದ ಶಕ್ತಿಶಾಲಿ ರಾಷ್ಟ್ರಗಳು (ಭಾರತವೂ ಸೇರಿದಂತೆ) ನಾವು ಏನು ಮಾಡಬಹುದು, ಹೇಗೆ ಮಾಡಬಹುದು ಎಂದು ತಪ್ಪಿತಸ್ಥ ಪ್ರಜ್ಞೆಗೆ ತುತ್ತಾಗಿ ಗಲಿಬಿಲಿಗೊಂಡವು.

ಪ್ರತಿ ಬಾರಿ ವಿಫಲವಾಗುತ್ತಿರುವ ಸಂಧಾನ ಸಭೆಗಳು, ಸಿರಿಯಾ ಶಾಪಗ್ರಸ್ತವೂ ಹೌದೇ ಎಂಬ ತೀವ್ರ ವಿಷಾದ ಹುಟ್ಟು ಹಾಕುತ್ತಿವೆ. ಯಜಮಾನಿಕೆ ವಹಿಸಲು ಬರುವ ಅಮೆರಿಕಕ್ಕೆ ಸಮಸ್ಯೆಯ ಕಣ್ಣು, ಮೂಗು ಗೊತ್ತಿಲ್ಲ, ಅದರದ್ದು ಏನಿದ್ದರೂ ಅವಸರದ ಉಪದ್ವ್ಯಾಪ. ಹೆದರಿರುವವರ ಮೇಲೆ ಹಲ್ಲಿ ಎಸೆದಂತೆ ಮೊದಲೇ ಯುದ್ಧ ಬೀಡುಬಿಟ್ಟಿರುವ ನಾಡಿನಲ್ಲಿ ತನ್ನ ಮಿಲಿಟರಿ ಶಕ್ತಿ ಮೆರೆವ ಅಟ್ಟಹಾಸ ಎಂದು ಕಟು ವಿಮರ್ಶಕರು ಟೀಕಿಸಿದರೆ, ಅತ್ಯಂತ ಸಂವೇದನಾಶೀಲ ಭಾಷಣಗಳನ್ನು ಅದರ ನಾಯಕತ್ವದ ವಿಶ್ವಸಂಸ್ಥೆ ಸಭೆಗಳು ಬಿತ್ತರಿಸಿ, ಬಿತ್ತರಿಸಿ ವೈರಿ ಪಡೆಯ ನಾಯಕ ರಷ್ಯಾವನ್ನು ಛೀಕರಿಸುತ್ತಿವೆ. ಇದ್ದುದ್ದರಲ್ಲಿ ಸಾಧ್ಯವಾದಷ್ಟು ಪ್ರಜಾತಾಂತ್ರಿಕವಾಗಿರಲು ಬಯಸಿದ್ದ ಸಿರಿಯಾ ಅಧ್ಯಕ್ಷ ಬಶರಲ್ ಅಸಾದ್‌ಗೆ ವಿಶ್ವದ ಮತ್ತೊಬ್ಬ ಬಲಿಷ್ಠ ನಾಯಕ ವ್ಲಾಡಿಮಿರ್ ಪುತಿನ್ ಇದಕ್ಕೆಲ್ಲ ಜಗ್ಗುವವರಲ್ಲ.

ಸೀಳುಸೀಳಾಗುತ್ತಿರುವ ನೆರೆ ರಾಷ್ಟ್ರ ಅವರಿಗೆ, ಒಡೆದು ಛಿದ್ರವಾದ ತಮ್ಮ ಸೋವಿಯತ್ ಒಕ್ಕೂಟದ ಕರಿ ನೆರಳಿನಂತೆ ಮುಂಗಾಣ್ಕೆಯಲ್ಲಿ ಗೋಚರಿಸುತ್ತಿರುವುದರಿಂದ ಹೀಗೆ ಪಟ್ಟು ಬಿಡುತ್ತಿಲ್ಲ, ಈ ಕ್ಷೋಭೆಯನ್ನು ‘ವಾರ್ ಇನ್ ಸಿರಿಯಾ’ ಎನ್ನುವುದಕ್ಕಿಂತ ‘ವಾರ್ ಆನ್ ಸಿರಿಯಾ’ ಎನ್ನಬೇಕು ಎಂದು ಹೇಳುತ್ತಿರುವ ವರ್ಷಗಟ್ಟಲೆ ರಾಜತಾಂತ್ರಿಕ ಸೇವೆ ನಿರ್ವಹಿಸಿರುವ ರಾಜತಾಂತ್ರಿಕ ಪರಿಣತರು, ಮಾರ್ಮಿಕವಾಗಿ ಅಮೆರಿಕವನ್ನು ಚುಚ್ಚುತ್ತ ರಷ್ಯಾ ದೇಶವೇ ಮೇಲುಗೈ ಸಾಧಿಸಲಿ ಎಂದು ಆಶಿಸುತ್ತಿದ್ದಾರೆ. ಪ್ರತಿಸ್ಪರ್ಧಿ ಗುಂಪುಗಳು ನಾನು ತಾನೆಂದು ಅಧಿಕಾರದ ಚುಕ್ಕಾಣಿ ಹಿಡಿಯಲು ಹೋರಾಡಿದ ಪರಿಣಾಮ, ಇಂದು ಅದಕ್ಕೆ ಒಂದು ‘ದೇಶ’ ಎಂಬ ಅಸ್ಮಿತೆ ಇನ್ನೂ ಉಳಿದಿದೆಯೇ ಎಂದು ವಿಶ್ವದ ನಾಗರಿಕ ಸಮಾಜ ತಲೆ ಕೆಡಿಸಿಕೊಳ್ಳುವ ಪ್ರಮೇಯ.

ನಾಲ್ಕು ತಿಂಗಳ ಹಿಂದೆ, ಜರ್ಜರಿತ ಅಲೆಪ್ಪೋ ನಗರವನ್ನು, ಸದ್ಯ ಅಧಿಕಾರದಲ್ಲಿರುವ ಅಧ್ಯಕ್ಷರಿಗೆ ನಿಷ್ಠವಾಗಿರುವ ಸೇನೆ, ಇರಾನ್, ರಷ್ಯಾ ಮತ್ತಿತರ ದೇಶಗಳ ನೆರವಿನೊಂದಿಗೆ ಹಾಗೂ ಸರಕಾರದ ಪರವಾಗಿರುವ ಸ್ಥಳೀಯ ಪಡೆಗಳ ಬೆಂಬಲದೊಂದಿಗೆ ವಶಕ್ಕೆ ತೆಗೆದುಕೊಂಡಿತೇನೋ ಹೌದು, ಆದರೆ ಈ ಪ್ರಕ್ರಿಯೆಯಲ್ಲಿ ಅಲ್ಲಿನ ನಾಗರಿಕರ ‘ನರಮೇಧ’ ನಡೆಯಿತು ಎಂಬ ಕೋಲಾಹಲ ದೃಶ್ಯ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಯಿತು. ಹೀಗೆಲ್ಲಾದರೂ ಉಂಟೆ? ದಂಗೆಕೋರ ಗುಂಪಿನ ಆಕ್ರಮಣದಲ್ಲಿ ಜೀವನಾವಶ್ಯಕ ಸೌಲಭ್ಯಗಳಿಲ್ಲದೆ ತತ್ತರಿಸಿದ ಜನರನ್ನು ಕಾಪಾಡಿ ಪೊರೆಯುವುದು ಸರಕಾರದ ರೀತಿ ನೀತಿಯಾಗಿರಬೇಕಲ್ಲವೆ? ಇದೇನು ವಿಪರೀತ ಘಟಿಸುತ್ತಿದೆ ಎಂದು ಗೊಂದಲಗೊಂಡರೆ ಹಿಂದೆ ಬಣ್ಣಿಸಿದ ವಸ್ತುಸ್ಥಿತಿ ನೆನಪಾಗುತ್ತದೆ: ಹಲವು ಗುಂಪುಗಳು ಒಂದೇ ಸಿಂಹಾಸನಕ್ಕಾಗಿ ಪರಸ್ಪರರ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿರುವ ಅರಾಜಕತೆ.

ಸದ್ಯ ಮೇಲುಗೈ ಸಾಧಿಸಿರುವ ‘ಸರಕಾರಿ’ ಸೇನೆ, ಈ ಹಿಂದೆ ಬದಲಾವಣೆಗಾಗಿ ದಂಗೆ ಎದ್ದವರನ್ನು, ತಮ್ಮ ವಿರೋಧಿ ಗುಂಪುಗಳೊಂದಿಗೆ ಗುರುತಿಸಿಕೊಂಡವರನ್ನು, ಅಧಿಕಾರ ಹಸ್ತಾಂತರ ಈ ಗುಂಪಿಗೆ ಆಗಬಾರದು ಎಂದು ಬಯಸಿದ್ದವರನ್ನು, ತಮ್ಮ ಪ್ರತ್ಯೇಕತೆ, ಸ್ವಾತಂತ್ರ್ಯ ಉಳಿಸಿಕೊಳ್ಳಬಯಸುವ ಬುಡಕಟ್ಟು ಗುಂಪುಗಳ ಜನರನ್ನು ಮನೆ ಮನೆಗೆ ನುಗ್ಗಿ, ಹುಡುಕಿ ಕೊಲ್ಲುತ್ತಿದೆ ಎಂಬ ಆಘಾತಕಾರಿ ವಿವರಗಳು, ರಾಜಕೀಯವಾಗಿ ಬಹಳ ಜಾಗೃತರಾಗಿರುವ ಅಲ್ಲಿನ ಸಾಮಾನ್ಯರಿಂದಲೇ ಬಯಲಾಗುತ್ತಿದೆ, ರಾಜ್ಯಾಡಳಿತ ವಶಪಡಿಸಿಕೊಂಡ ಜಿಲ್ಲೆಗಳತ್ತ ಸಾಗಿದರೆ, ಬಂಧನ ಇಲ್ಲವೇ ಬಲವಂತವಾಗಿ ಸೇನೆಗೆ ಭರ್ತಿ ಮಾಡಿಸಿಕೊಳ್ಳುವ ಸಾಧ್ಯತೆ ಜನರನ್ನು ಭೀತಿಗೊಳಿಸಿದೆ.

‘‘ಯುದ್ಧ ನಡೆಯುತ್ತಿರುವ ಪ್ರದೇಶದಲ್ಲಿ, ಮನೆಮಾರು ಬಿಟ್ಟು ಬರುವಾಗ, ಆಹಾರ-ಬಟ್ಟೆ ತರಲಾಗದಿದ್ದರೂ, ತಮ್ಮ ಪಾಡನ್ನು ಮತ್ತು ತಮಗಿಂತ ನತದೃಷ್ಟರಾಗಿರುವರ ಪಡಿಪಾಟಲನ್ನು ಇಡೀ ವಿಶ್ವಕ್ಕೆ ಸಾರಲು ಸಹಾಯ ಮಾಡುವ ವಿದ್ಯುನ್ಮಾನ ಸಲಕರಣೆಗಳನ್ನು ಅವರು ಜೋಪಾನವಾಗಿ ತಂದಿದ್ದಾರೆ. ಹೊರಬರಲು ಆಗದವರು ಕೊನೆ ವಿದಾಯದ ಸಂದೇಶಗಳನ್ನು ಈ ಸಾಧನಗಳ ಮೂಲಕವೇ ರವಾನಿಸುತ್ತಿರುವುದು ಇತರರನ್ನು ದಿಗ್ಮೂಢರಾಗಿಸಿದೆ. ಅಲೆಪ್ಪೋನ ಕೆಲ ಪ್ರಾಂತಗಳಲ್ಲಿ ನೆಂಟರು, ಆಪ್ತೇಷ್ಟರು, ಸ್ನೇಹಿತರನ್ನು ಹೊಂದಿರುವವರು, ನಗರದ ಆಚೆ, ನಾಗರಿಕವಾಗಿಯೇ ತಮ್ಮ ಪ್ರಬಲ ಪ್ರತಿರೋಧ ತೋರುತ್ತಿರುವುದೂ ಗಣನೀಯ’’ ಮುಂತಾಗಿ ವಿವರಗಳು ಬಯಲಾದವು.

ವ್ಯವಸ್ಥಿತವಾಗಿ ಹರಡಲಾಗುತ್ತಿರುವ ವಿವರಗಳೇ ಅವು (ಫೇಕ್ ನ್ಯೂಸ್) ಎಂಬ ಸಂಶಯವನ್ನು ಪರಿಣತರ ಮತ್ತೊಂದು ಮಾರ್ಮಿಕ ಚರ್ಚೆ ಕೇಳುಗರಲ್ಲಿ ಬಿತ್ತಿತು. ಒಟ್ಟಿನಲ್ಲಿ, ಸನ್ನಿವೇಶ ಅಯೋಮಯ. ಇನ್ನೊಂದು ಮಗ್ಗುಲಲ್ಲಿ, ದಂಗೆಕೋರರನ್ನು ಅಸಾದ್‌ಸೇನೆ ಮಣಿಸಿದ ನಂತರ, ಗಾಢ ಕತ್ತಲೆಯ ಸುರಂಗದಾಚೆ ಇರುವ ಬೆಳಕಿನತ್ತ ಧಾವಿಸುವಂತೆ, ಸಾಮಾನ್ಯ ಬದುಕಿಗೆ ಮರಳಲು ಜನ, ತಮ್ಮೆಲ್ಲ ಚೈತನ್ಯ ಮರುಪೂರಣ ಮಾಡಿಕೊಳ್ಳುತ್ತಿದ್ದಾರೆ. ಸಾಮಾನು ಸರಂಜಾಮುಗಳ ಬೃಹತ್‌ಮೂಟೆಗಳು, ಪುಟ್ಟ ಮಕ್ಕಳು, ಕ್ಷೀಣ ಆರೋಗ್ಯದ ಮುದುಕರು, ಅಪಾಂಗರ ಸಹಿತವಾಗಿ ಅವರು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂಬುದನ್ನು ಮಾಧ್ಯಮ ಚಿತ್ರಿಕೆಗಳು ವರದಿ ಮಾಡಿದವು.

ಯಾರ ರಾಜ್ಯವೋ, ಒಂದಷ್ಟು ರಾಗಿ ಬೀಸಿ ಬದುಕಿಕೊಂಡೆವು ಎಂಬ ಅಪ್ಪಟ, ಹೋರಾಡಿ ಉಳಿದುಕೊಳ್ಳುವ ನೈಸರ್ಗಿಕ ನಿಲುವು ಅವರಲ್ಲಿ ಹರಳುಗಟ್ಟುತ್ತಿರುವುದನ್ನು ಡಾಕ್ಯುಮೆಂಟರಿಗಳು ದಾಖಲಿಸಿದವು. ನಮ್ಮದು, ನಮ್ಮದೇ ದೇಶ, ಬಿಟ್ಟು ಹೋಗೋಣ ಎಲ್ಲಿಗೆ ಎಂದು ಆರ್ತರಾಗಿ ಆತುಕೊಂಡಿರುವವರಿಗೆ, ಚಹ ಗುಟುಕರಿಸುತ್ತಿರುವಾಗಲೇ ಕಣ್ಣ ಮುಂದೆ ಧೂಳಿನ ಮುಗಿಲೇಳುವುದು, ಅಡುಗೆ ಮಾಡಿಟ್ಟು ಬಂದ ಗೃಹಿಣಿ, ಅಡುಗೆ ಕೋಣೆಯ ಹೊಗೆಕೊಳವೆಯಿಂದ ಹೆಣವೊಂದು ಎಲ್ಲಿಂದಲೋ ಹಾರಿಬೀಳುವುದನ್ನು ಕಂಡು ಕಲ್ಲಾಗುವುದು ದಿನನಿತ್ಯದ ಪ್ರಸಂಗಗಳಾಗಿವೆ. ‘‘ನಿಜವಾಗಿ ಆದದ್ದೇನು’’ ಎಂದು ತಮ್ಮ ಮುಂದಿನ ತಲೆಮಾರಿಗೆ ಹೇಳಲು ಸಾವಿರ ಕತೆಗಳು ಅವರಲ್ಲಿರಬಹುದು. ಇವರೆಲ್ಲರಿಗೆ, ಕಾರ್ಮುಗಿಲಿನ ಕೋಲ್ಮಿಂಚಾಗಿ ಒದಗಿರುವವರು ಸಮಾಜ ಸೇವಾಕಾರ್ಯಕರ್ತರು, ನಾನಾ ಮಾನವ ಹಕ್ಕು ಸಂಘಟನೆಗಳ ಸದಸ್ಯರು, ‘ವೈಟ್ ಹೆಲ್ಮೆಟ್ಸ್’ ಹೆಸರಿನ ಯೋಧರು...ಸಿರಿಯಾ ಯುದ್ಧ ಮನದಲ್ಲಿ ಕೊರೆದಿರುವ ಕರುಣ ಚಿತ್ರ, ತೆರೆದ ಒಂದು ತೋಳಲ್ಲಿ ಬಂದೂಕು, ಇನ್ನೊಂದರಲ್ಲಿ ಎರಡು ಶಿಶುಗಳನ್ನು ಅವುಚಿ ಹಿಡಿದಿರುವ ಯೋಧ.

  * * *
 ನಮ್ಮ ಕಾಶ್ಮೀರ ಸಮಸ್ಯೆ ಸಹ ಹಲವು ನಿಜಗಳ ಸಂಕೀರ್ಣ. ಅಭಿಪ್ರಾಯ, ನಿಲುವು, ಪ್ರಚಾರ, ಪ್ರೇರಿತ ಪ್ರಚಾರ, ಪರಿವರ್ತಿತ ವಿಚಾರ...ಎಲ್ಲ ಕುದ್ದು ಗಟ್ಟಿಯಾಗಿರುವ ಲಾವಾ. ಎಂದು ಹೊರ ಚಿಮ್ಮುವುದೋ ಎಂದು ಪರಿಣತರು-ಅನೇಕ ಆಯಾಮಗಳಲ್ಲಿ ಬಹುತೇಕ ಬಲ್ಲವರು-ಕಳವಳಗೊಳ್ಳು ತ್ತಿದ್ದರೆ, ಅದು ರಾಜಕೀಯ ವಲಯಕ್ಕೆ ವಿಸ್ತರಿಸುತ್ತಿದೆಯೇ? ಸಮಯ ಮೀರುವ ಮುನ್ನ ಅಧಿಕಾರಶಾಹಿ ಕ್ರಿಯಾಶೀಲವಾಗುತ್ತದೆಯೇ? ಸಿಆರ್ ಪಿಎಫ್ ಯೋಧರಿಗೆ ಸಹಾಯ ಹಸ್ತ ನೀಡುವ ಹಾಗೂ ಸುದ್ದಿ ವಾಹಿನಿಗಳ ಕ್ಯಾಮರಾಗಳ ಮುಂದೆ ಪ್ರತ್ಯೇಕತೆಗಾಗಿ ಆಕ್ರೋಶಿಸುವ ಎರಡೂ ಬಗೆಯ ‘ಸಾಮಾನ್ಯ ತರುಣರು’ ಇರುವಲ್ಲಿ ಪರಸ್ಪರ ವಿಚಾರ ವಿನಿಮಯ, ಸಂವಾದಗಳು ಸಾಧ್ಯವಾಗದೆ? ಅದರಿಂದ ಅಸಾಮಾನ್ಯ ನಿರ್ಣಯ ಏಕೆ ಹೊರಬರಬಾರದು ಎಂಬ ಮೌನ ಮನವಿ ದೇಶಬಾಂಧವರೆಲ್ಲರಲ್ಲಿ ಹಬೆಯಾಡಿದೆ. ಅದು ತಣಿದು, ತಂಪಾಗಿ ಬಾಷ್ಪೀಕರಿಸುವ ಗಳಿಗೆ ಬಲು ಬೇಗ ಕೂಡಿಬರಲಿ!

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top