ಮನುಷ್ಯ ಜೀವಕ್ಕೆ ಬೆಲೆ ಇದೆಯೇ?

ಸುಮಾರು ಮೂವತ್ತು ವರ್ಷಗಳ ಹಿಂದೆ ಶಾಲಾ ಕಾಲೇಜುಗಳ ವಾರ್ಷಿಕೋತ್ಸವ ಸಮಾರಂಭವು ನಗರಗಳಲ್ಲಿ ಸಂಜೆ 5ರಿಂದ 8 ಅಥವಾ 10 ಗಂಟೆಯೊಳಗೆ ಮುಗಿಯುತ್ತಿತ್ತು. ಹಳ್ಳಿಗಳಲ್ಲಿ ಸಂಜೆ 7 ಅಥವಾ 8 ಗಂಟೆಗೆ ಪ್ರಾರಂಭಿಸಿ ತಡರಾತ್ರಿ ಒಂದು ಅಥವಾ ಎರಡು ಗಂಟೆಯವರೆಗೂ ನಡೆಯುತ್ತಿತ್ತು. ಮರುದಿನ ಹೇಗೂ ಶಾಲಾ ಕಾಲೇಜುಗಳಿಗೆ ರಜಾ ಇರುತ್ತಿತ್ತು. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸ್ವಾನುಭವ ನನ್ನದು. ಅಂತಹ ಕಾರ್ಯಕ್ರಮಗಳು ಇಂದು ಹಳ್ಳಿಯಲ್ಲೂ ನಗರಗಳಲ್ಲೂ ಹಗಲಿನಲ್ಲಿ ನಡೆದು ಹೆಚ್ಚೆಂದರೆ ಸಂಜೆ 7 ಗಂಟೆಯೊಳಗೆ ಮುಗಿಯುವುದಕ್ಕೆ ಯಾವುದೇ ಇಲಾಖೆಯಾಗಲಿ, ಸರಕಾರವಾಗಲಿ ಆದೇಶ ಹೊರಡಿಸಿದ್ದು ನನ್ನ ಗಮನದಲ್ಲಿ ಇಲ್ಲ. ಈ ಬದಲಾವಣೆ ನಡೆಯಲು ಒಬ್ಬ ನರಹಂತಕನೆಂದರೆ ಇಂದಿನ ಎಳೆಯ ಪೀಳಿಗೆಗೆ ಆಶ್ಚರ್ಯವಾಗಬಹುದು. ಅವನೇ ಚಂದ್ರನ್ ಎಂಬವನು. ಅವಿಭಜಿತ ದ.ಕ. ಜಿಲ್ಲೆಯನ್ನು ನಡುಗಿಸಿದ ಪ್ರಕರಣವದು. ಅವನು ಎಷ್ಟು ಮಂದಿಯ ಕೊಲೆ ಮಾಡಿದ್ದಾನೆ, ಅವನಿಗೆ ಯಾವ ಶಿಕ್ಷೆಯಾಯಿತು ಎನ್ನುವುದರ ದಾಖಲಾತಿ ನನ್ನಲ್ಲಿ ಇಲ್ಲದೆ ಇದ್ದರೂ ರಾತ್ರಿಯಿಡೀ ಎಚ್ಚರದಿಂದ ಇರುತ್ತಿದ್ದ ಭಯದ ದಿನಗಳು ನೆನಪಿನಲ್ಲಿವೆ. ಅದು ನಾವು ಕೃಷ್ಣಾಪುರದಲ್ಲಿರುವಾಗ ನಡೆದ ಘಟನೆಗಳು. ಅವನ ಹೆಸರಲ್ಲಿ ಕೆಲವು ಪೂರ್ವದ್ವೇಷದ ಇತರ ಪ್ರಕರಣಗಳೂ ನಡೆದಿವೆ ಎನ್ನುವುದೂ ವರದಿಯಾಗಿತ್ತು. ಏನಿದ್ದರೂ ಚಂದ್ರನ್ ಎಂಬ ಕಾಣದ ವ್ಯಕ್ತಿಯ ಬಗ್ಗೆ ಭಯ ಉಂಟಾಗಿದ್ದುದು ಸಹಜ. ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆಯವರು ಈ ಸಂದರ್ಭದಲ್ಲಿ ತಾವು ಇದ್ದ ಹಾಸ್ಟೆಲಿನ ವಾತಾವರಣವನ್ನು ಕುರಿತು ತನ್ನ ಎಂದಿನ ಧಾಟಿಯಲ್ಲಿ ಬರೆದ ಲೇಖನಕ್ಕೆ ಜಿಲ್ಲೆಯ ಜನ ವಿರೋಧವನ್ನೂ ವ್ಯಕ್ತಪಡಿಸಿದ್ದರು. ಅಂದರೆ ಅದು ತಮಾಶೆಯ ವಿಷಯವಾಗಿರದೆ ಪೊಲೀಸರನ್ನು ನಿದ್ದೆಗೆಡಿಸಿದ್ದು ಮಾತ್ರವಲ್ಲ, ಜನ ಸಾಮಾನ್ಯರನ್ನೂ ನಿದ್ದೆ ಮಾಡಲು ಬಿಟ್ಟಿರಲಿಲ್ಲ. ಚಂದ್ರನ್ ತನ್ನ ಬಳಿಯಿದ್ದ ಬಡಿಗೆ, ಕೊಡಲಿ, ಹಾರೆ, ಪಿಕ್ಕಾಸು, ಮಚ್ಚುಗಳಿಂದ ತಲೆ ಒಡೆಯುತ್ತಿದ್ದನೋ ಅಥವಾ ಆಯಾಯ ಮನೆಯಂಗಳದಲ್ಲಿ ಇದ್ದ ವಸ್ತುಗಳನ್ನೇ ತನ್ನ ಆಯುಧಗಳನ್ನಾಗಿ ಬಳಸಿಕೊಳ್ಳುತ್ತಿದ್ದನೋ ಗೊತ್ತಿಲ್ಲ. ಅಂತೂ ಅವನ ಆಯುಧಗಳು ಜನ ಸಾಮಾನ್ಯರಲ್ಲಿ ಇರುತ್ತಿದ್ದವುಗಳೇ. ಅವನು ಕೊಲ್ಲುತ್ತಿರುವ ಜನರು ಶ್ರೀಮಂತರೇ ಆಗಿರುತ್ತಿರಲಿಲ್ಲ, ಬಡವರ ತಲೆಯೂ ಒಡೆದಿತ್ತು. ಈ ಹಿನ್ನೆಲೆಯಲ್ಲಿ ಅವನು ನರಹಂತಕನೆಂದು ಕರೆಯಿಸಿಕೊಂಡುದು.

ನಾನು ಹಿಂದೆಯೇ ಹೇಳಿದಂತೆ ನನ್ನೂರಿನ ಜನ ಹಳ್ಳಿಯ ದುಡಿಮೆಗಾರರೇ ಹೆಚ್ಚು ಇದ್ದ ಊರು. ಹಾಗೆಯೇ ಅವರ ಮನೆಯಂಗಳದ ಮೂಲೆಯಲ್ಲಿ ಅವರ ದುಡಿಮೆಯ ಉಪಕರಣಗಳಾಗಿ ಹಾರೆ, ಪಿಕ್ಕಾಸು, ಕೊಡಲಿ, ಕತ್ತಿಗಳು ಇರುತ್ತಿದ್ದುವು. ಇದಕ್ಕಿಂತ ಹೆಚ್ಚಿನ ರಕ್ಷಣೆ ಎಂದರೆ ಬಚ್ಚಲು ಮನೆ ಅಥವಾ ಕೊಟ್ಟಿಗೆ, ಹಟ್ಟಿಯಲ್ಲಿರುತ್ತಿತ್ತು. ಇದು ನರಹಂತಕನಿಗೆ ದೊರೆಯಲು ಅವನು ಏನೂ ಹೆಚ್ಚಿನ ಕಷ್ಟಪಡಬೇಕಾಗಿರಲಿಲ್ಲ. ಈಗ ಇವೆಲ್ಲವನ್ನೂ ಮನೆಯೊಳಗೆ ಇಟ್ಟುಕೊಂಡರು. ಹಾಗೆಯೇ ತರಹೇವಾರಿಯಾಗಿ ಅಲ್ಲಿ ಬಂದ, ಇಲ್ಲಿ ಕೊಂದ, ಆತ ಪೊದೆಗಳಲ್ಲಿ ಬಚ್ಚಿಟ್ಟುಕೊಳ್ಳುತ್ತಾನೆ ಎಂಬ ಸುದ್ದಿಗಳಿಂದ ಯುವಕ ಮಂಡಲದ ಯುವಕರೂ ಸೇರಿದಂತೆ ಖಾಲಿ ಸೈಟುಗಳಲ್ಲಿದ್ದ ಪೊದೆಗಳನ್ನು ಸವರಿದರು. ಎಲ್ಲಾ ಬ್ಲಾಕ್‌ಗಳಲ್ಲಿಯೂ ಯುವಕರು ಜಾಗೃತರಾಗಿ ಮಾಡಿದ ಕೆಲಸದಿಂದ ಊರಿಗೇ ಊರೇ ಸ್ವಚ್ಛವಾದಂತಾಯಿತು. ಕತ್ತಲೆಯಾಗುತ್ತಲೇ ನನ್ನ ಬ್ಲಾಕಿನ ಯುವಕರು ಐದಾರು ಮಂದಿಯ ತಂಡಗಳನ್ನು ಮಾಡಿಕೊಂಡು ತಾವೇ ಗುಂಪು ಕಟ್ಟಿಕೊಂಡು ಬಡಿಗೆಗಳನ್ನು ಹಿಡಿದುಕೊಂಡು ಗುಲ್ಲೆಬ್ಬಿಸುತ್ತಾ ರಾತ್ರಿಯಿಡೀ ಗಸ್ತು ತಿರುಗುತ್ತಿದ್ದರು. ಕೊನೆಗೂ ಚಂದ್ರನ್‌ನನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾದರು ಎಂದು ತಿಳಿದಂತೆ ಊರಿಗೇ ಊರೇ ನಿಟ್ಟುಸಿರು ಬಿಡುವಂತಾಯ್ತು. ಆಗ ಆತ ಯಾವ ಜಾತಿಯವ, ಯಾವ ಜಾತಿಯವರನ್ನು ಕೊಂದ, ಯಾವ ಧರ್ಮದವರ ತಲೆ ಒಡೆದ ಎಂಬ ಮಾತುಗಳೇ ಕೇಳಿದ್ದಿಲ್ಲ. ಆತ ಒಬ್ಬ ಕೊಲೆಗಾರ, ನರಹಂತಕ ಎಂದೇ ಪತ್ರಿಕೆಗಳು ಬರೆದಿದ್ದುವು. ಜನರೂ ಹಾಗೆಯೇ ಸ್ವೀಕರಿಸಿದ್ದರು. ಕೊಲೆಗಾರರಿಗೆ, ಅತ್ಯಾಚಾರಿಗಳಿಗೆ, ಭ್ರಷ್ಟಾಚಾರಿಗಳಿಗೆ ಜಾತಿ, ಧರ್ಮಗಳು ಬೇರೆ ಕೇಡು. ಅವರಿಗೆ ಆ ವಿಶೇಷಣಗಳೇ ಸಾಕಲ್ಲವೇ? ಅವರನ್ನು ಜಾತಿ, ಮತ, ಧರ್ಮಗಳ ಮೂಲಕ ಗುರುತಿಸಿ ಜಾತಿ, ಮತ, ಧರ್ಮಗಳಿಗೆ ಅಗೌರವ ತೋರಿಸುವ ಅಗತ್ಯ ಖಂಡಿತ ಇಲ್ಲವೆಂದೇ ನನ್ನ ತಿಳುವಳಿಕೆ.

ಕಾಟಿಪಳ್ಳ, ಕೃಷ್ಣಾಪುರದ ಬಸ್ಸುಗಳ ಸಂಖ್ಯೆ ಹೆಚ್ಚುತ್ತಿತ್ತು. ಜನಸಂಖ್ಯೆ ಹೆಚ್ಚುತ್ತಿತ್ತು. ಆದರೆ ಹೆಚ್ಚಿನ ಕಡೆ ಬಸ್ಸು ನಿಲ್ದಾಣಗಳು ಇರಲಿಲ್ಲ. ಕಾನ ಬಾಳದ ರಸ್ತೆಯಲ್ಲಿ ಬಾಳ ಎಂಬಲ್ಲಿ ಒಂದು ಬಸ್ ನಿಲ್ದಾಣ ಇತ್ತು. ಆ ಬಸ್ಸು ನಿಲ್ದಾಣದ ನೆನಪು ಯಾಕೆ ಉಳಿದಿದೆ ಎಂದರೆ ಈ ಬಸ್ಸು ನಿಲ್ದಾಣದಲ್ಲಿ ಕುಳಿತುಕೊಂಡವರು ಸೋಮಾರಿಗಳು ಎಂದು ಅರ್ಥ ಬರುವಂತೆ ‘ಸೋಮಾರಿ ಕಟ್ಟೆ’ ಎಂದು ಬರೆದಿತ್ತು. ಯಾರೋ ಬುದ್ಧಿವಂತ ಜನ ಹೀಗೆ ಬರೆದು ಬಸ್ಸು ನಿಲ್ದಾಣ ಬಸ್ಸು ಕಾಯುವವರಿಗೇ ಮೀಸಲಾಗಿರುವಂತೆ ನೋಡಿಕೊಂಡಿದ್ದರು. ಯಾಕೆಂದರೆ ಬಸ್ಸು ನಿಲ್ದಾಣಗಳೆಲ್ಲ ನಿರುದ್ಯೋಗಿ ಯುವಕರಿಗೆ, ಶಾಲಾ ಕಾಲೇಜುಗಳಿಗೆ ಚಕ್ಕರ್ ಕೊಡುವವರಿಗೆಲ್ಲ ಉತ್ತಮ ಆಶ್ರಯವಾದುದನ್ನು ನಾನು ಅನೇಕ ಕಡೆ ನೋಡಿದ್ದೇನೆ. ಇನ್ನು ಮಂಗಳೂರು ನಗರದ ಬಸ್ ನಿಲ್ದಾಣಗಳಲ್ಲಿ ಮೇಲ್ಛಾವಣಿ ಮಾತ್ರ ಇದ್ದು ಕುಳಿತುಕೊಳ್ಳುವುದಕ್ಕೆ ವ್ಯವಸ್ಥೆ ಇಲ್ಲದಿದ್ದರೂ ಗಂಟೆಗಟ್ಟಳೆ ನಿಂತು ಹೆಣ್ಣು ಮಕ್ಕಳನ್ನು ಚುಡಾಯಿಸುವ ಯುವಕರು, ಗಂಡಸರೂ ಸಾಕಷ್ಟು ಇದ್ದುದನ್ನು ಕಂಡಿದ್ದೇನೆ. ನಾನೇ ಅವರನ್ನು ಮಾತಿನಿಂದ ಬೈದಿದ್ದೇನೆ, ಹತ್ತಿರ ಪೊಲೀಸರು ಇದ್ದಾಗ ದೂರು ಕೊಟ್ಟಿದ್ದೇನೆ. ಒಮ್ಮಿಮ್ಮೆ ಅಂತಹವರನ್ನು ಕಂಡಾಗ ಆ ನಿಲ್ದಾಣದಿಂದ ಮುಂದಿನ ಅಥವಾ ಹಿಂದಿನ ನಿಲ್ದಾಣಗಳಿಗೆ ಹೋದುದೂ ಇದೆ. ನಮ್ಮ ನಮ್ಮ ರಕ್ಷಣೆ ನಮ್ಮದೇ ತಾನೇ? ಕಾಟಿಪಳ್ಳದಲ್ಲಿ ಜನ ಸಂಖ್ಯೆ ಹೆಚ್ಚಿದಂತೆ ಬಸ್ಸುಗಳ ಸಂಖ್ಯೆಯೂ ಹೆಚ್ಚಿತು. ಬಸ್ಸು ಹೆಚ್ಚಾದಂತೆ 5, 10 ನಿಮಿಷಗಳ ಅಂತರದಲ್ಲಿ ಎದುರು ಬದುರು ದಿಕ್ಕುಗಳಿಂದ ಬರುತ್ತಿತ್ತು. ಹಿಂದಿನಂತೆ ನಾವು ಒಂದೇ ನಿಗದಿತ ಬಸ್ಸಿನ ಪ್ರಯಾಣಿಕರಾಗುವುದು ತಪ್ಪಿತು. ಯಾವುದೇ ಬಸ್ಸಾದರೂ ಒಂದಿಷ್ಟು ಸುತ್ತಿ ಬಳಸಿ ಹೋಗುವುದಾದರೂ ಬಸ್ಸಿನಲ್ಲಿ ಸೀಟು ದೊರೆಯುವುದು ಮುಖ್ಯವಾಯಿತು. ಇದೀಗ ಕೃಷ್ಣಾಪುರ, ಕಾಟಿಪಳ್ಳಕ್ಕೆ ಮಾತ್ರ ಇದ್ದ ಬಸ್ಸುಗಳು, ಮಂಗಳಪೇಟೆ, ಕಳವಾರಿನವರೆಗೂ, ಮದ್ಯ, ಸೂರಿಂಜೆವರೆಗೂ ಹೋಗುವ ಹೊಸ ಪರ್ಮಿಟ್‌ನ ಬಸ್ಸುಗಳು ಬಂದವು. ಕಾನ ಬಾಳದ ಮಂದಿಗೆ ಹೊನ್ನೆಕಟ್ಟೆಯಿಂದ ಹೋಗುವ ಬಸ್ಸುಗಳೂ ದೊರೆತವು. ಹಾಗೆಯೇ ಮಂಗಳೂರಿನ ಪೇಟೆಗೆ ಹೋಗದೆ ಕಂಕನಾಡಿಗೆ ರಾಷ್ಟ್ರೀಯ ಹೆದ್ದಾರಿಯಲ್ಲೇ ಹೋಗುವ ಬಸ್ಸು ಪ್ರಾರಂಭವಾಯಿತು. ಇಷ್ಟು ಬಸ್ಸುಗಳು ಹೆಚ್ಚಾದರೂ ಕಾಟಿಪಳ್ಳದ ಜನಸಂಖ್ಯೆಯೂ ಹೆಚ್ಚುತ್ತಿತ್ತು. ಇದರಿಂದಾಗಿ ಹಿಂದಿನಂತೆ ಆರಾಮಾಗಿ ಕುಳಿತುಕೊಂಡು ಹೋಗಿ ಬರುವ ಸುಖ ಮಾತ್ರ ತಪ್ಪಿ ಹೋದುದಂತೂ ನಿಜ. ಜೊತೆಗೆ ಕೃಷ್ಣಾಪುರ, ಕಾಟಿಪಳ್ಳದ ಬಸ್ಸುಗಳೆಂದರೆ ಎಲ್ಲರೂ ಭಯಪಡುವಂತೆ ಅವುಗಳ ವೇಗ. ಪೈಪೋಟಿಯಲ್ಲಿ ಓಡುವ ಬಸ್ಸುಗಳು ಪ್ರಯಾಣಿಕರ ಕಾಳಜಿಯನ್ನು ಮರೆತು ಹೋಗುವಂತಾಯಿತು. ಬಸ್ಸಿನಲ್ಲಿ ಡ್ರೈವರ್, ಕಂಡಕ್ಟರ್‌ಗಳಲ್ಲದೆ ಚಕ್ಕರ್, ಕ್ಲೀನರ್ ಎಂದು ಊರಿನ ನಿರುದ್ಯೋಗಿ ಯುವಕರು ಸಂಬಳವಿದ್ದೋ ಇಲ್ಲದೆಯೋ ಬಸ್ಸಿನಲ್ಲಿ ಓಡಾಡುತ್ತಾ ಪ್ರಯಾಣಿಕರಿಗೆ ಉಪಕಾರ ಮಾಡುವ ಬದಲು ಉಪದ್ರ ನೀಡುತ್ತಿದ್ದುದೇ ಹೆಚ್ಚು. ಪ್ರಯಾಣಿಕರು ಹತ್ತಿ ಇಳಿಯುವುದಕ್ಕೆ ಸಮಯಾವಕಾಶ ನೀಡದಂತೆ ಒಂದು ಕಾಲಿಟ್ಟ ಕೂಡಲೇ ‘ರೈಟ್ ಪೋಯಿ’ ಎಂದು ಸಿಳ್ಳೆ ಹೊಡೆದೇ ಬಿಡುವವರು. ಹಿಂದಿನ ಬಾಗಿಲಲ್ಲಿ ಸಿಳ್ಳೆ ಹೊಡೆದವನಿಗೆ ಮುಂದಿನ ಬಾಗಿಲಲ್ಲಿ ಮೆಟ್ಟಲಲ್ಲೇ ಇದ್ದವರ ಬಗ್ಗೆ ನೋಡುವ ತಾಳ್ಮೆ ಅಂತೂ ಇರಲಿಲ್ಲ. ಕಂಡಕ್ಟರ್‌ನಿಗೆ ಈಗ ಡ್ರೈವರ್‌ನೊಂದಿಗೆ ಬಸ್ಸು ನಿರ್ವಹಣೆಯ ಕೆಲಸವೇ ಇಲ್ಲದೆ ಟಿಕೆಟ್ ಟಿಕೆಟ್ ಎಂದು ಹಣ ಎಣಿಸುವ ಕೆಲಸವಷ್ಟೇ. ಪ್ರಯಾಣಿಕರು ಚಿಲ್ಲರೆ ಸರಿಯಾಗಿ ನೀಡಿದರೆ ಸರಿ. ಇಲ್ಲವಾದರೆ ಅವರಿಗೆ ವಾಪಸ್ ಚಿಲ್ಲರೆ ಸಿಗುವ ಸಂದರ್ಭಗಳು ಕಡಿಮೆಯಾಗ ಹತ್ತಿತ್ತು. ಚಿಲ್ಲರೆ ಕೇಳಿದರೆ ಅವಮಾನಕರ ಮಾತುಗಳನ್ನು ಕೇಳುವ ಅವಕಾಶ ಬೇಡವೆಂದು ಹತ್ತು, ಇಪ್ಪತ್ತು ಪೈಸೆಗಳು ದಿನಾ ಖೋತಾ ಆಗುವುದು ಸಾಮಾನ್ಯವಾಯ್ತು. ಒಳಗೆ ನಿಂತು ಪ್ರಯಾಣಿಸುವ ಪ್ರಯಾಣಿಕರು ಡ್ರೈವರ್ ಹಾಕುವ ಬ್ರೇಕ್‌ಗೆ ಕುತ್ತಿಗೆ, ಭುಜ, ಸೊಂಟ ಉಳುಕಿ ನೋವು ಪಡುವುದನ್ನು ಕೇಳುವವರೇ ಇರಲಿಲ್ಲ. ಈ ದಾರಿಯ ಪ್ರಯಾಣಿಕರಿಗೆ ದೊರೆತ ಈ ನೋವಿನ ಭಾಗ್ಯ ನನಗೂ ಶಾಶ್ವತವಾಗಿ ದೊರಕಿದೆ ಎನ್ನುವುದು ಸುಳ್ಳಲ್ಲ. ಎಷ್ಟೋ ಮಂದಿ ಕೈ ಕಾಲು ಮುರಿದುಕೊಂಡವರೂ, ಬಸ್ಸು ಬಸ್ಸುಗಳ ಢಿಕ್ಕಿ, ಬಸ್ಸು ರಿಕ್ಷಾಗಳ ಢಿಕ್ಕಿಯಲ್ಲಿ ಪ್ರಾಣ ಕಳಕೊಂಡವರೂ ಇದ್ದರು ಎನ್ನುವುದು ಆಧುನಿಕತೆಯ ಬದುಕಿನಲ್ಲಿ ಅನಿವಾರ್ಯ ಎಂದು ಒಪ್ಪಿಕೊಳ್ಳುವುದು ಮಾತ್ರ ಮೂರ್ಖತನ. ಯಾಕೆಂದರೆ ಪ್ರತಿಯೊಬ್ಬನೂ ತನ್ನ ವೃತ್ತಿಯನ್ನು ಪ್ರಾಮಾಣಿಕವಾದ ಸೇವೆ, ಕರ್ತವ್ಯ ಎಂದು ಭಾವಿಸಿದಾಗ ಇಂತಹ ಅಪಾಯಗಳು, ದುರಂತಗಳ ಸಂಖ್ಯೆ ಕಡಿಮೆಯಾಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಯಾಕೆಂದರೆ ಚಾಲಕ ವೃತ್ತಿಯಲ್ಲಿ 50, 60 ವರ್ಷಗಳ ಕಾಲ ದುಡಿದವರು ಕೂಡಾ ಒಂದೇ ಒಂದು ಆಕ್ಸಿಡೆಂಟ್ ಮಾಡದೆ ಇರುವ ಹಿರಿಯ ಚಾಲಕರು ಬಹಳಷ್ಟು ನನ್ನ ನೆನಪಿನಲ್ಲಿ ಸುಳಿಯುತ್ತಾರೆ. ಆಧುನಿಕ ಬದುಕಿನಲ್ಲಿ ತಾಂತ್ರಿಕತೆ, ಯಂತ್ರಗಳ ಅವಲಂಬನೆ ಹೆಚ್ಚಾದಂತೆ ಭಾವನೆಗಳಿಗೆ ಬೆಲೆ ಕಡಿಮೆಯಾಗುತ್ತಿರುವುದು ಇಂದು ಪೂರ್ಣ ಸತ್ಯವಾಗುತ್ತಿರುವ ಅನುಭವ ಅಂದೇ ಆರಂಭವಾಯಿತು ಎಂದು ಈಗ ಅನ್ನಿಸುತ್ತಿದೆ. ಆದ್ದರಿಂದ ಮನುಷ್ಯ ಜೀವಕ್ಕೆ ಬೆಲೆ ಇಲ್ಲವಾಗಿದೆ. ಮನುಷ್ಯ ಜೀವಕ್ಕೆ ಬೆಲೆ ಇಲ್ಲ ಎನ್ನುವಾಗ ಪ್ರಾಣಿಗಳ ಜೀವಕ್ಕೆ ಬೆಲೆ ಇರಲಾರದಲ್ಲವೇ? ಆದರೆ ನಿಜವಾದ ಸತ್ಯ ಏನೆಂದರೆ ಪ್ರಾಣಿಗಳು ಸತ್ತರೆ ಅವುಗಳ ಜೀವಕ್ಕೆ ಖಂಡಿತಾ ಬೆಲೆ ಇರುತ್ತದೆ. ಆದರೆ ಮನುಷ್ಯ ಸತ್ತ ಬಳಿಕ ಆತನ ದೇಹಕ್ಕೆ ಒಂದಡಕೆಯ ಬೆಲೆಯೂ ಇಲ್ಲ ಎಂದ ವಚನಕಾರರ ಮಾತು ಸತ್ಯವೇ!

ಯಾಕೆ ಈ ಕಿವಿಮಾತು ಎಂದರೆ ಈ ಪೈಪೋಟಿಯ ಬಸ್ಸುಗಳ ಓಡಾಟದಲ್ಲಿ ರಸ್ತೆಯಲ್ಲಿ ಓಡಾಡುವ ಆಡು, ಕೋಳಿಗಳು ಬಸ್ಸುಗಳಡಿ ಬೀಳುವುದೂ ಇತ್ತು. ಇದು ಹೆಚ್ಚಾಗಿ 7ನೆ ಬ್ಲಾಕ್‌ನಲ್ಲಿ ಮತ್ತು 2, 3ನೆ ಬ್ಲಾಕ್‌ನಲ್ಲಿ. ಇಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದು ಆಡುಗಳನ್ನು ಸಾಕುತ್ತಿದ್ದರು. ಹಾಗೆಯೇ ಮಳೆ ಬಂದು ನೆಲ ಹಸಿರಾದಾಗ ಅವುಗಳನ್ನು ಮೇಯಲು ಬಿಡುತ್ತಿದ್ದರು. 7ನೆ ಬ್ಲಾಕ್‌ನ ಹಿರಿಯ ಪ್ರಾಥಮಿಕ ಶಾಲೆ, 6ನೆ ಬ್ಲಾಕ್‌ನ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಆವರಣಗಳಿಲ್ಲದಿದ್ದುದರಿಂದ ಅಲ್ಲೆಲ್ಲಾ ಮೇಯುವ ಸ್ವಾತಂತ್ರವಿತ್ತು. ಹಾಗೆಯೇ ಅಲ್ಲಿಯೇ ಇದ್ದ ಹೈಸ್ಕೂಲ್, ಪದವಿ ಪೂರ್ವ ಕಾಲೇಜುಗಳ ಆವರಣ ಮಾತ್ರವಲ್ಲ, ರಾತ್ರಿಯಿಡೀ ಅಲ್ಲೇ ಮಲಗಿಕೊಳ್ಳುತ್ತಿದ್ದ ಸಂದರ್ಭಗಳೂ ಇತ್ತು. ಚುರುಕಾದ ಆಡುಗಳು ತಮ್ಮ ಮರಿಗಳೊಂದಿಗೆ ಅಡ್ಡಾದಿಡ್ಡಿ ಓಡಾಡುವಾಗ ಎಷ್ಟು ನಿಪುಣನಾದ ಡ್ರೈವರನೂ ಸೋತು ಹೋದುದುಂಟು. ಆಡು ಅಥವಾ ಆಡಿನ ಮರಿಗಳು ಹೀಗೆ ಬಸ್ಸಿನಡಿ ಬಿದ್ದಾಗ, ಗಾಯಗೊಂಡಾಗ ಅಥವಾ ಸತ್ತೇ ಹೋದಾಗ ಆ ದಿನಗಳಲ್ಲಿ ಹಿಂದೂ ಡ್ರೈವರ್‌ಗಳು ಕೂಡಾ ಅದನ್ನು ತಪ್ಪು ಎಂದು ತಿಳಿದು ‘ತಪ್ಪು ಕಾಣಿಕೆ’ಯನ್ನು ಆಡಿನ ಯಜಮಾನರಿಗೆ ಅಥವಾ ಮಸೀದಿಯ ಹುಂಡಿಗೆ ಹಾಕುತ್ತಿದ್ದರೆಂಬುದನ್ನು ಡ್ರೈವರ್‌ರಿಂದಲೇ ಕೇಳಿ ತಿಳಿದಿದ್ದೇನೆ. ಕೋಳಿಗಳು ಬಿದ್ದು ಸತ್ತರೆ ಹೇಗೂ ನಾಳೆ ಸಾಯುವಂತಹುದು ಇವತ್ತು ಸತ್ತು ಹೋಯಿತು. ಅಡುಗೆಗಾಯ್ತು ಎಂದು ಸಮಾಧಾನಪಟ್ಟುಕೊಂಡು ಅಡುಗೆ ಮಾಡಿದವರು ನೆರೆಯವರು ಯಾವ ಜಾತಿ, ಧರ್ಮದವರಾದರೂ ಹಂಚಿಕೊಳ್ಳುತ್ತಿದ್ದರು. ಮಾಂಸಾಹಾರಕ್ಕೆ ಹೀಗೆ ಜಾತಿ ಧರ್ಮಗಳನ್ನು ಬೆಸೆಯುವ ಶಕ್ತಿ ಅತ್ಯಂತ ಪ್ರಾಚೀನವಾದುದೇ ಇರಬೇಕು. ಆದರೆ ಸಸ್ಯಾಹಾರದಲ್ಲಿ ಮಡಿವಂತಿಕೆ ಇದ್ದು, ಅದು ಮನುಷ್ಯರನ್ನು ದೂರ ಮಾಡುವುದರಿಂದ ಅದು ಸಂಸ್ಕೃತಿಯ ಹೆಸರಲ್ಲಿ ಮತ್ತೆ ಸೇರಿಕೊಂಡಿರಬೇಕು. ಆಡು, ಗೋವು ಎನ್ನುವುದು ಮನುಷ್ಯನ ಬದುಕಿನ ಸೌಲಭ್ಯಕ್ಕೆ ತಲೆತಲಾಂತರದಿಂದ ಉಪಕಾರಿಗಳಾಗಿ ಮನುಷ್ಯರಿಗೆ ಗುಲಾಮವಾಗಿ ಬದುಕುತ್ತಿವೆ. ಜೊತೆಗೆ ಒಂದೊಂದು ಧರ್ಮದ ಲಾಂಛನದ ಪ್ರಾಣಿಗಳಾಗಿ ಆ ಮೂಲಕ ಮನುಷ್ಯರು ಇಂದು ತಮ್ಮಾಳಗೆ ತಾವೇ ಹೊಡೆದಾಡಿಕೊಂಡು ಸಾಯುತ್ತಿದ್ದಾರೆ. ಇದನ್ನು ನೋಡಿದಾಗ ಒಂದು ವೇಳೆ ಆ ಪ್ರಾಣಿಗಳಿಗೆ ಮನುಷ್ಯರಂತೆ ಅತೀ ಬುದ್ಧಿವಂತಿಕೆ ಇದ್ದರೆ ಅವುಗಳು ತಮ್ಮಿಳಗೆ ಹೀಗೆ ಮಾತಾಡಿಕೊಳ್ಳಬಹುದು ಅನ್ನಿಸುತ್ತದೆ. ‘‘ಶತಮಾನಗಳಿಂದ ನಮ್ಮನ್ನು ಕೊಂದು ತಿನ್ನುವುದಲ್ಲದೆ, ಗುಲಾಮರನ್ನಾಗಿಸಿಕೊಂಡ ಈ ಮನುಷ್ಯ ಪ್ರಾಣಿಗಳು ಈಗ ನಮ್ಮ ಕಾರಣಗಳಿಂದಲೇ ಪರಸ್ಪರ ಹೊಡೆದುಕೊಂಡು ಸತ್ತು ಹೋಗಲಿ’’ ಎಂದು ಹೇಳುತ್ತಿರಬಹುದೇ? ಯಾಕೆಂದರೆ ಹೀಗೆ ಸಾಯುತ್ತಿರುವವರು ಮೊದಲು ಮನುಷ್ಯರು, ಆ ಬಳಿಕವಷ್ಟೇ ಜಾತಿ, ಮತ, ಧರ್ಮಗಳಲ್ಲವೇ?'

 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top