---

ಇಂದು ವಿಶ್ವ ಅಸ್ತಮಾ ದಿನ

ಅಸ್ತಮಾ: ನಿಯಂತ್ರಣ ಹೇಗೆ?

ಪ್ರತಿ ವರ್ಷ ಮೇ ತಿಂಗಳ ಮೊದಲನೇ ಮಂಗಳವಾರದಂದು ವಿಶ್ವ ಅಸ್ತಮಾ ದಿನ ಎಂದು ಆಚರಿಸಲಾಗುತ್ತಿದೆ. ವಿಶ್ವದಾದ್ಯಂತ ಅಸ್ತಮಾ ರೋಗದ ಬಗೆಗಿನ ಅಪನಂಬಿಕೆಗಳನ್ನು ಹೋಗಲಾಡಿಸಿ, ರೋಗದ ಬಗ್ಗೆ ಜಾಗೃತಿ ಮೂಡಿಸಿ, ರೋಗಿಗಳಿಗೆ ಆತ್ಮಸ್ಥೈರ್ಯವನ್ನು ನೀಡುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ. ಅಸ್ತಮಾ ರೋಗವು ಶ್ವಾಸಕೋಶಗಳಿಗೆ ಸಂಬಂಧಿಸಿದ ದೀರ್ಘಕಾಲಿಕ ರೋಗವಾಗಿದ್ದು, ಮುಖ್ಯವಾಗಿ ರೋಗಿಯ ಉಸಿರಾಟದ ಪ್ರಕ್ರಿಯೆ ಮೇಲೆ ತೊಂದರೆಯನ್ನು ಉಂಟುಮಾಡುತ್ತದೆ. ರೋಗದ ತೀವ್ರತೆ ಮತ್ತು ಕೆರಳುವಿಕೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದ್ದು, ಅಸ್ತಮಾ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲಾಗದಿದ್ದರೂ, ನಿರಂತರವಾದ ಚಿಕಿತ್ಸೆ, ಸೂಕ್ತ ವೈದ್ಯಕೀಯ ಮಾರ್ಗದರ್ಶನ ಮತ್ತು ಜೀವನ ಶೈಲಿಯನ್ನು ಮಾರ್ಪಾಡು ಮಾಡಿ ರೋಗವನ್ನು ಖಂಡಿತವಾಗಿಯೂ ನಿಯಂತ್ರಣವಾಗಿಟ್ಟುಕೊಂಡು, ಜೀವನವನ್ನು ಇತರ ಎಲ್ಲರಂತೆ ಸಂಪೂರ್ಣವಾಗಿ ಆನಂದಿಸುವ ಎಲ್ಲಾ ಸಾಧ್ಯತೆಗಳೂ ಇದೆ. 1998ರಲ್ಲಿ ಆರಂಭವಾದ ಈ ವಿಶ್ವ ಅಸ್ತಮಾ ದಿನಾಚರಣೆಯನ್ನು ಪ್ರತಿ ವರ್ಷ ನಡೆಸಲಾಗುತ್ತದೆ. ಇಡೀ ಮೇ ತಿಂಗಳಲ್ಲಿ ಅಸ್ತಮಾ ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಿ, ಅಸ್ತಮಾ ರೋಗವನ್ನು ತಡೆಗಟ್ಟುವ ಮತ್ತು ಹತೋಟಿಯಲ್ಲಿಡುವ ವಿವಿಧ ಶಿಬಿರಗಳನ್ನು ಏರ್ಪಡಿಸಿ, ಜನರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಮೇ ತಿಂಗಳನ್ನು ಅಸ್ತಮಾ ತಿಳುವಳಿಕೆ ತಿಂಗಳು ಎಂದು ಆಚರಿಸಲಾಗುತ್ತಿದೆ.
ಏನಿದು ಅಸ್ತಮಾ ಕಾಯಿಲೆ?
  ಅಸ್ತಮಾ ಎನ್ನುವುದು ಶ್ವಾಸಕೋಶಗಳಿಗೆ ಸಂಬಂಧಿಸಿದ ದೀರ್ಘಕಾಲಿಕ ಕಾಯಿಲೆಯಾಗಿದೆ. ಶ್ವಾಸಕೋಶಗಳು ನಮ್ಮ ದೇಹದ ಅತ್ಯಂತ ಕ್ರಿಯಾತ್ಮಕವಾದ ಅಂಗವಾಗಿದ್ದು ದೇಹದ ಎಲ್ಲಾ ಜೀವಕೋಶಗಳಿಗೆ ಅತೀ ಅಗತ್ಯವಾದ ಅಕ್ಸಿಜನ್ (ಆಮ್ಲಜನಕ)ನ ಪೂರೈಕೆಯನ್ನು ಮಾಡುವ ಗುರುತರವಾದ ಜವಾಬ್ದಾರಿಯನ್ನು ಹೊಂದಿರುತ್ತದೆ. ನಾವು ಮೂಗಿನ ಮೂಲಕ ಒಳಗೆಳೆದುಕೊಂಡ ಗಾಳಿ ಶ್ವಾಸನಾಳಗಳು ಅಥವಾ ಶ್ವಾಸಮಾರ್ಗಗಳ ಮೂಲಕ ಶ್ವಾಸಕೋಶಕ್ಕೆ ತಲುಪುತ್ತದೆ. ಶ್ವಾಸಕೋಶಗಳಲ್ಲಿರುವ ಚಿಕ್ಕ ಚಿಕ್ಕ ಗಾಳಿಚೀಲಗಳ ಮುಖಾಂತರ ನಾವು ಸೇವಿಸಿದ ಗಾಳಿಯಲ್ಲಿನ ಆಮ್ಲಜನಕ ಶ್ವಾಸಕೋಶದ ಒಳಗಿರುವ ರಕ್ತನಾಳಗಳ ಒಳಗೆ ಸೇರಿಕೊಂಡು ದೇಹದ ಇತರ ಎಲ್ಲಾ ಅಂಗಾಂಗಗಳಿಗೆ, ಜೀವಕೋಶಗಳಿಗೆ ರಕ್ತದ ಮುಖಾಂತರ ಆಮ್ಲಜನಕದ ಪೂರೈಕೆಯಾಗುತ್ತಲಿರುತ್ತದೆ. ಈ ಆಮ್ಲಜನಕದ ಪೂರೈಕೆಯಲ್ಲಿ ಸ್ವಲ್ಪವಾದರೂ ವ್ಯತ್ಯಾಸವಾದಲ್ಲಿ ಉಸಿರಾಟದ ತೊಂದರೆ ಉಂಟಾಗಿ ಮನುಷ್ಯನಿಗೆ ಚಡಪಡಿಕೆ ಉಂಟಾಗುತ್ತದೆ. ಅಸ್ತಮಾ ಎನ್ನುವ ರೋಗ ಮುಖ್ಯವಾಗಿ ಈ ಶ್ವಾಸನಾಳಗಳಿಗೆ ಮತ್ತು ಶ್ವಾಸಕೋಶದ ಚಿಕ್ಕಚಿಕ್ಕ ಗಾಳಿಚೀಲಗಳಿಗೆ ಸಂಬಂಧಿಸಿದ ದೀರ್ಘಕಾಲಿಕ ರೋಗವಾಗಿದ್ದು ಸುದೀರ್ಘ ಕಾಲದ ಚಿಕಿತ್ಸೆ ಮತ್ತು ನಿರಂತರವಾದ ಆರೈಕೆ ಅತೀ ಆವಶ್ಯಕ.
ಜಾಗತಿಕವಾಗಿ ಸರಿ ಸುಮಾರು 200 ದಶ ಲಕ್ಷ ಜನರು ಅಸ್ತಮಾ ರೋಗದಿಂದ ಬಳಲುತ್ತಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ ಮತ್ತು ವರ್ಷ ಒಂದರಲ್ಲಿ ಸುಮಾರು 0.2 ದಶಲಕ್ಷ ಜನರು ಅಸ್ತಮಾದಿಂದ ಮರಣ ಹೊಂದುತ್ತಾರೆ. ಭಾರತ ದೇಶದಲ್ಲಿ ಸುಮಾರು 15ದಶಲಕ್ಷ ಮಂದಿ ಅಸ್ತಮಾ ರೋಗಿಗಳು ಇದ್ದಾರೆ ಎಂದು ತಿಳಿದು ಬಂದಿದೆ. ವಾತಾವರಣದ ಕಾರಣಗಳು ಮತ್ತು ವಂಶವಾಹಿನಿ ಕಾರಣಗಳು ಸಂಯುಕ್ತವಾಗಿ ಅಸ್ತಮಾ ರೋಗಕ್ಕೆ ಕಾರಣವಾಗಿದೆ. ಪರಿಸರ ಮತ್ತು ಜೈವಿಕ ಕಾರಣದಿಂದಾಗಿ ಅಸ್ತಮಾ ರೋಗಿಗಳ ಶ್ವಾಸ ಮಾರ್ಗವೂ ಉರಿಯೂತದಿಂದ ಕೂಡಿರುತ್ತದೆ. ರೋಗಿಯು ತನಗೆ ಬಹಳ ಸಂವೇಧನಾ ಕಾರಕವಾಗಿರುವ ಅಲರ್ಜಿಕಾರಕ ವಸ್ತುಗಳನ್ನು ಶ್ವಾಸೋಛ್ಛಾಸ ಮಾಡಿದಾಗ ಉರಿಯೂತವನ್ನು ಮತ್ತಷ್ಟು ಕೆರಳಿಸುತ್ತದೆ. ಹೀಗಾದಾಗ ಶ್ವಾಸಮಾರ್ಗಗಳ ಉರಿಯೂತವು ಶ್ವಾಸಮಾರ್ಗದ ವಾಯು ಸಂಚಲನಕ್ಕೆ ಸಂಚಕಾರ ಮಾಡಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಶೀತ ಗಾಳಿ, ವೈರಾಣುಗಳು ಅಲರ್ಜಿ ಕಾರಕ ವಸ್ತುಗಳಾದ ಧೂಳು, ಮರಳು, ನಾರು ಅಥವಾ ಇನ್ನಾವುದೇ ಕಾರಣಗಳು ಶ್ವಾಸಮಾರ್ಗದ ಉರಿಯೂತವನ್ನು ಹೆಚ್ಚಾಗಿಸಿ ಅಸ್ತಮಾ ೋಗ ಉಲ್ಬಣಿಸುವಂತೆ ಮಾಡುತ್ತವೆ.
ಅಸ್ತಮಾ ರೋಗದ ಲಕ್ಷಣಗಳು
♦ ಉಬ್ಬಸ ಅಥವಾ ಉಸಿರಾಡುವ ಸಮಯದಲ್ಲಿ ಗೊರ ಗೊರ ಸದ್ದುಕೇಳಿಸುವುದು ಅಥವಾ ಉಸಿರಾಡುವಾಗ ಸಿಳ್ಳೆ ಹಾಕಿದಂತೆ ದ್ದು ಬರುವುದು.
♦ ಎದೆ ಬಿಗಿಹಿಡಿತ, ಉಸಿರು ಕಿರಿದಾಗುವುದು, ಉಸಿರಾಡಲು ಕಷ್ಟವಾಗುವುದು
♦ ವಿಪರೀತವಾದ ದೀರ್ಘಕಾಲಿಕ ಕೆಮ್ಮು
♦ ವಿಪರೀತ ಮತ್ತು ನಿರಂತರ ಕೆಮ್ಮಿನಿಂದಾಗಿ ನಿದ್ರಾಹೀನತೆ, ಅಶಕ್ತಿ ಮತ್ತು ಅಸಹನೆ, ನಿರುತ್ಸಾಹ... ಆಟೋಟ ಮತ್ತು ಇತರ ಚಟುವಟಿಕೆಗಳಿಂದ ದೂರ ಇರುವುದು ಇತ್ಯಾದಿ.
ಅಸ್ತಮಾ ಆಘಾತ
ಅಸ್ತಮಾ ರೋಗದಿಂದ ಬಳಲುತ್ತಿರುವವರು ದೈನಂದಿನ ಚಟುವಟಿಕೆಗಳಲ್ಲಿ ಅತಿಯಾಗಿ ಕಾಳಜಿ ವಹಿಸಬೇಕಾಗುತ್ತವೆೆ. ಅಲರ್ಜಿ ಕಾರಕ ವಸ್ತುಗಳಿಗೆ ಒಡ್ಡಿಕೊಂಡಾಗ ಅಸ್ತಮಾ ಕೆರಳುತ್ತದೆ. ಧೂಳಿನ ಕಣಗಳು, ಪರಾಗದ ಕಣಗಳು, ಸಾಕುಪ್ರಾಣಿಗಳ ರೋಮಗಳು, ಹುರುಪೆಗಳು ಇತ್ಯಾದಿಗಳು ಹೆಚ್ಚಾಗಿ ಅಸ್ತಮಾ ಅಲರ್ಜಿಕಾರಕ ವಸ್ತಗಳಾಗಿರುತ್ತದೆ. ಕೆಲವೊಮ್ಮೆ ಅಲರ್ಜಿಕಾರಕ ವಸ್ತುಗಳಲ್ಲದೆ ಶೀತಗಾಳಿ/ತಂಪುಗಾಳಿ, ವಾಯುಮಾಲಿನ್ಯ, ಹೊಗೆ ವಿಪರೀತ ಒತ್ತಡ ಶೀತ ಪದಾರ್ಥ ಸೇವನೆ ಅಜೀರ್ಣವಾದಾಗ ಆಹಾರದಲ್ಲಿ ವಿಷಬೆರಕೆ, ಕಲಬೆರಕೆ ಆದಾಗ ಕೂಡಾ ಅಸ್ತಮಾ ರೋಗ ಕೆರಳುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ದೈಹಿಕ ವ್ಯಾಯಾಮದ ಬಳಿಕವೂ ಅಸ್ತಮಾ ಅಘಾತ ಉಂಟಾಗಬಹುದು. ಈ ರೀತಿ ಅಸ್ತಮಾ ಕೆರಳಿದಾಗ ಶ್ವಾಸ ಮಾರ್ಗದ ಸುತ್ತಲಿರುವ ಸ್ನಾಯುಗಳು ಬಿಗಿಯಾಗಿ ಸೆಟೆದು ನಿಲ್ಲುತ್ತವೆ. ಶ್ವಾಸ ಮಾರ್ಗದ ಸುತ್ತಳತೆ ಕಡಿಮೆಯಾಗಿ ಗಾಳಿಯ ಸಂಚಲನೆ ಕುಂಠಿತವಾಗ ಬಹುದು. ಅದೇ ರೀತಿ ಶ್ವಾಸ ಮಾರ್ಗದೊಳಗಿನ ಒಳಪದರ ಊದಿಕೊಂಡು ಉರಿಯೂತ ಉಲ್ಬಣಿಸುತ್ತದೆ ಮತ್ತು ಶ್ವಾಸ ಮಾರ್ಗದಲ್ಲಿ ಲೋಳೆಯ ಉತ್ಪನ್ನ ಜಾಸ್ತಿಯಾಗಿ ಗಾಳಿಯ ಸಂಚಾರಕ್ಕೆ ಮತ್ತಷ್ಟು ಸಂಚಕಾರ ತರುತ್ತದೆ. ಹೀಗೆ ಗಾಳಿಯ ಸಂಚಾರವಿಲ್ಲದಾಗ ಆಮ್ಲಜನಕದ ಕೊರತೆಯಾಗಿ ರಕ್ತಕ್ಕೆ ಮತ್ತು ದೇಹದ ಇನ್ನಿತರ ತುರ್ತು ಮತ್ತು ಅನಿವಾರ್ಯ ಅಂಗಾಂಗಗಳಾದ ಮೆದುಳು ಕಿಡ್ನಿಗಳಿಗೆ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿ ಮಾರಣಾಂತಿಕವಾಗಿ ಪರಿಣಮಿಸಲೂಬಹುದು.
ಅಸ್ತಮಾ ರೋಗಕ್ಕೆ ಪರಿಹಾರ ಅಥವಾ ಸಂಪೂರ್ಣ ಚಿಕಿತ್ಸೆ ಇಲ್ಲವಾದ ಕಾರಣದಿಂದ ಪರಿಣಾಮಕಾರಿ ಚಿಕಿತ್ಸೆ ಮತ್ತು ನಿಯಂತ್ರಣದ ಮುಖಾಂತರ ಅಸ್ತಮಾದ ರೋಗದ ಲಕ್ಷಣಗಳನ್ನು ನಿಯಂತ್ರಿಸಬೇಕು. ವೈದ್ಯರ ಸಲಹೆಯಂತೆ ಸೂಕ್ತ ಕಾಲದಲ್ಲಿ ಸರಿಯಾದ ಔಷಧಿ ಸೇವಿಸುತ್ತಾ ಅಸ್ತಮಾ ಕೆರಳಿಸುವ ವಸ್ತುಗಳಿಂದ ದೂರವಿರುವುದರಲ್ಲಿಯೇ ಜಾಣತನ ಅಡಗಿದೆ.
ಚಿಕಿತ್ಸೆ ಹೇಗೆ?
ಅಸ್ತಮಾ ಎನ್ನುವುದು ದೀರ್ಘಕಾಲಿಕ ಕಾಯಿಲೆಯಾಗಿದ್ದು ಸಂಪೂರ್ಣವಾಗಿ ರೋಗವನ್ನು ಗುಣಪಡಿಸುವುದು ಸಾಧ್ಯವಿಲ್ಲದ ಮಾತು. ಆದರೆ ಪರಿಣಾಮಕಾರಿಯಾದ ಚಿಕಿತ್ಸೆ ಮತ್ತು ಸೂಕ್ತ ಮಾರ್ಗದರ್ಶನದ ಮೂಲಕ ರೋಗದ ಲಕ್ಷಣಗಳನ್ನು ನಿಯಂತ್ರಿಸಬಹುದು. ವೈದ್ಯರು ಸೂಚಿಸಿದ ಔಷಧಿಗಳನ್ನು ಸೂಕ್ತ ಪ್ರಮಾಣದಲ್ಲಿ ಸಕಾಲದಲ್ಲಿ ಸೇವಿಸಬೇಕು. ಮತ್ತು ಅಸ್ತಮಾದ ಲಕ್ಷಣಗಳನ್ನು ಉದ್ರೇಕಿಸುವ ಅಂಶಗಳಿಂದ ದೂರವಿರುವುದು ಒಳಿತು. ಅಲರ್ಜಿಕಾರಕ ಅಂಶಗಳನ್ನು ಆದಷ್ಟು ತಪ್ಪಿಸಿಕೊಳ್ಳಬೇಕು. ಸಾಮಾನ್ಯವಾಗಿ ಅಸ್ತಮಾ ಚಿಕಿತ್ಸೆಯಲ್ಲಿ ಎರಡು ಬಗೆಯ ಮೂಲ ಔಷಧಗಳನ್ನು ಬಳಸಲಾಗುತ್ತದೆ.
1. ಅಸ್ತಮಾ ಆಘಾತವನ್ನು ತಡೆಯುವ ನಿಯಂತ್ರಣ ಔಷಧಿಗಳು: ಈ ರೀತಿಯ ಔಷಧಿಗಳು ಅಸ್ತಮಾ ರೋಗ ಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. ಮತ್ತು ಅಸ್ತಮಾ ರೋಗಕ್ಕೆ ಕಾರಣವಾಗಿರುವ ಉರಿಯೂತದಂತಹ ತೊಂದರೆಗಳು ಮರುಕಳಿಸದಂತೆ ಮತ್ತು ನಿರಂತರವಾಗಿರದಂತೆ ನಿಯಂತ್ರಿಸುತ್ತದೆ. ಆದರೆ ಅಸ್ತಮಾ ರೋಗದ ಸಂಪೂರ್ಣ ನಿಯಂತ್ರಣಕ್ಕಾಗಿ ರೋಗಿಗಳು ಈ ಔಷಧಿಗಳನ್ನು ಪ್ರತೀ ದಿನ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ರೋಗಿಗಳು ಸಹಜ ಸ್ಥಿತಿಯಲ್ಲಿರುವ ಸಮಯದಲ್ಲಿಯೂ ಈ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸೇದಬಹುದಾದ ಅಥವಾ ಶ್ವಾಸದ ಮುಖಾಂತರ ಒಳಗೆಳೆದುಕೊಳ್ಳಬಹುದಾದ ಸ್ಟಿರಾಯ್ಡಿ ಗಳು ಬಹಳ ಪರಿಣಾಮಕಾರಿಯಾದ ಮತ್ತು ದೀರ್ಘಕಾಲಿಕ ಅಸ್ತಮಾ ನಿಯಂತ್ರಣಕ್ಕಾಗಿ ಬಳಸುವ ಔಷಧಿಯಾಗಿರುತ್ತದೆ. ಈ ರೀತಿ ಔಷಧಿಯ ಬಳಕೆಯಿಂದ ಅಸ್ತಮಾ ರೋಗದ ಲಕ್ಷಣವು ಕಡಿಮೆಯಾಗಿ ಆರೋಗ್ಯ ವೃದ್ಧಿಯಾಗುತ್ತದೆ. ಅಸ್ತಮಾ ತೀವ್ರ ಆಘಾತದ ಪ್ರಮಾಣ ಕಡಿಮೆಯಾಗಿ ಕ್ಷಿಪ್ರ ಉಪಶಮನಕಾರಿ ಔಷಧಿಗಳ ಬಳಕೆ ಕೂಡಾ ಕಡಿಮೆಯಾಗುತ್ತದೆ. ಒಟ್ಟಿನಲ್ಲಿ ಈ ರೀತಿಯ ಔಷಧಿಗಳು ಹೆಚ್ಚು ಅಸ್ತಮಾ ರೋಗವನ್ನು ತಡೆಗಟ್ಟುವಲ್ಲಿ ಮತ್ತು ರೋಗ ಉಲ್ಬಣಗೊಳ್ಳದಂತೆ ತಡೆಯುವ ಕೆಲಸವನ್ನು ಪರಿಣಾಮಕಾರಿಯಾಗಿ ನಡೆಸುತ್ತದೆ.
2. ಕ್ಷಿಪ್ರ ಉಪಶಮನಕಾರಿ ಔಷಧಿಗಳು:
ಸಾಮಾನ್ಯವಾಗಿ ಅಸ್ತಮಾ ಆಘಾತದ ಸಂದರ್ಭದ ಈ ಕ್ಷಿಪ್ರ ಉಪಶಮನಕಾರಿ ಔಷಧಿಗಳನ್ನು ಬಳಸಲಾಗುತ್ತದೆ. ಈ ಔಷಧಿಗಳು ಜೀವ ಸಂರಕ್ಷಣಾ ಔಷಧಿಗಳಾಗಿದ್ದು ಅಸ್ತಮಾ ಕೆರಳಿದ ತಕ್ಷಣ ಉಪಶಮನ ದೊರಕಲು ತೆಗೆದುಕೊಳ್ಳಬೇಕಾಗುತ್ತದೆ. ಈ ಜೀವ ರಕ್ಷಕ ಔಷಧಿಗಳು ಶ್ವಾಸನಾಳಗಳನ್ನು ಹಿಗ್ಗಿಸಿ, ಗಾಳಿಯ ಚಲನೆಯನ್ನು ಹೆಚ್ಚಿಸಿ, ರೋಗದ ಲಕ್ಷಣಗಳನ್ನು ಕುಗ್ಗಿಸಿ ತ್ವರಿತ ಆರಾಮ ನೀಡುತ್ತವೆ. ಈ ರೀತಿಯ ಕ್ಷಿಪ್ರ ಉಪಶಮನಕಾರಿ ಔಷಧಿಗಳನ್ನು ನಿಯಂತ್ರಕ ಔಷಧಿಗಳ ಬದಲಾಗಿ ತೆಗೆದುಕೊಳ್ಳಬಾರದು. ನಿಮ್ಮ ಔಷಧಿಗಳ ಬಗ್ಗೆ ಯಾವುದೇ ಸಂದೇಹವಿದ್ದಲ್ಲಿ ತಜ್ಞ ವೈದ್ಯರ ಬಳಿ ಸೂಕ್ತ ಮಾರ್ಗದರ್ಶನ ತೆಗೆದುಕೊಂಡಲ್ಲಿ ಉತ್ತಮ. ನೆನಪಿರಲಿ ಪ್ರತಿಯೊಬ್ಬ ಅಸ್ತಮಾ ರೋಗಿಯು ತನ್ನ ಬಳಿ ಈ ಕ್ಷಿಪ್ರ ಉಪಶಮನ ಔಷಧಿಗಳನ್ನು ಇಟ್ಟುಕೊಳ್ಳುವುದು ಅತೀ ಆವಶ್ಯಕ. ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

ಅಸ್ತಮಾ ಪತ್ತೆ ಹಚ್ಚುವುದು ಹೇಗೆ ?
   ಶ್ವಾಸಕೋಶದ ಸಂಬಂಧಿ ರೋಗಿಗಳು ಇರುವವರಿಗೆ ಸ್ಪೈರೋ ಮೆಟ್ರಿ ಎಂಬ ವಿಶಿಷ್ಟ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ರೋಗಿಗಳು ದೀರ್ಘ ಉಸಿರುಗಳನ್ನು ಎಳೆದುಕೊಂಡು ಪರೀಕ್ಷೆ ಯಂತ್ರದ ಸೆನ್ಸಾರ್ ಪದರದ ಮೇಲೆ ಉಸಿರನ್ನು ಬಿಡಬೇಕು. ಈ ರೀತಿಯಿಂದ ರೋಗಿಗಳು ಉಸಿರನ್ನು ಒಳಗೆ ತೆಗೆದುಕೊಳ್ಳುವ ಮತ್ತು ಹೊರಗೆ ಬಿಡುವ ಪ್ರಮಾಣವನ್ನು ಮಾಪನ ಮಾಡಲಾಗುತ್ತದೆ. ಈ ಪರೀಕ್ಷೆೆಯಿಂದ ರೋಗಿಯೊಬ್ಬನ ಶ್ವಾಸಕೋಶದಿಂದ ಎಷ್ಟು ಪ್ರಮಾಣದ ಗಾಳಿಯನ್ನು ಸರಬರಾಜು ಮಾಡಲಾಗುತ್ತದೆ ಎಂಬುದನ್ನು ಮಾಪನ ಮಾಡಲಾಗುತ್ತದೆ. ಅಸ್ತಮಾ ಮತ್ತು ಇನ್ನಿತರ ಯಾವುದೇ ಶ್ವಾಸಕೋಶ ಸಂಬಂಧಿ ರೋಗಗಳಿರುವವರಿಗೆ ಸ್ಪೈರೋಮೆಟ್ರಿ ಪರೀಕ್ಷೆಯ ಮುಖಾಂತರ ರೋಗದ ತೀವ್ರತೆ ಮತ್ತು ಚಿಕಿತ್ಸೆಯ ಸ್ಪಂದನ ಹಾಗೂ ಪ್ರಗತಿಯನ್ನು ಅಂದಾಜಿಸಲಾಗುತ್ತದೆ. ಈ ಪರೀಕ್ಷೆಯು ಫಲಿತಾಂಶಕ್ಕೆ ಅನುಗುಣವಾಗಿ ಅಸ್ತಮಾದ ತೀವ್ರತೆಯನ್ನು ನಿರ್ಧರಿಸಿ ಚಿಕಿತ್ಸೆ ಮತ್ತು ಔಷಧಿಯ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಅದೇ ರೀತಿ ಅಲರ್ಜಿ ಪರೀಕ್ಷೆಯನ್ನು ನಡೆಸಿ ರೋಗಿಗಳು ಯಾವ ವಸ್ತುಗಳಿಗೆಲ್ಲಾ ಅಲರ್ಜಿಗೊಳಗಾಗುತ್ತಾರೆ ಎಂಬುದನ್ನು ತಿಳಿಯಲಾಗುತ್ತದೆ. ಅಸ್ತಮಾ ರೋಗಕ್ಕೆ ಕಾರಣವಾಗುವ ಅಲರ್ಜಿಕಾರಕ ವಸ್ತುಗಳನ್ನು ಗುರುತಿಸಿ ಅಂತಹ ವಸ್ತುಗಳನ್ನು ಸೇವಿಸದಂತೆ ಅಥವಾ ವಸ್ತುಗಳಿಗೆ ಎದುರಾಗದಂತೆ ಸೂಕ್ತ ಎಚ್ಚರವನ್ನು ವಹಿಸಲಾಗುತ್ತದೆ. ಅದೇ ರೀತಿ ಎದೆಗೂಡಿನ ಎಕ್ಸರೇ, ಮೂಗಿನ ಎಲುಬಿನ ಕ್ಷ ಕಿರಣ, ದೇಹದ ರಕ್ತದಲ್ಲಿನ ಅಲರ್ಜಿಯ ಪ್ರಮಾಣ ಮುಂತಾದ ಪರೀಕ್ಷೆಯ ಮುಖಾಂತರ ರೋಗಿಯನ್ನು ಕುಲಂಕಷವಾಗಿ ಅಭ್ಯಸಿಸಿದ ಬಳಿಕವೇ ಚಿಕಿತ್ಸೆಯನ್ನು ಆರಂಭಿಸಲಾಗುತ್ತದೆ. ಒಂದು ವೇಳೆ ರೋಗಿಯು ಯಾವುದಾದರೂ ವಸ್ತುಗಳಿಗೆ ಅಲರ್ಜಿ ಹೊಂದಿದ್ದಾನೆ ಎಂಬುದು ಪರೀಕ್ಷೆಗಳಿಂದ ಸಾಬೀತಾದಲ್ಲಿ ಅಂತಹ ವಸ್ತುಗಳು ಪುನಃ ಆ ವ್ಯಕ್ತಿಗೆ ಅಸ್ತಮಾ ರೋಗವನ್ನು ಕೆರಳಿಸುವ ಸಾಧ್ಯತೆ ಅಧಿಕವಾಗಿರುತ್ತದೆ. ಈ ನಿಟ್ಟಿನಲ್ಲಿ ಸೂಕ್ತವಾದ ಪರೀಕ್ಷೆ ಮತ್ತು ಎಚ್ಚರಿಕೆಗಳನ್ನು ವಹಿಸುವುದರಿಂದ ಅಸ್ತಮಾ ಕೆರಳುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top