ಆಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಬಗ್ಗೆ ಭಾರತದ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ ಅವರನ್ನು ಸಿಬಿಐ ಸೋಮವಾರ ವಿಚಾರಣೆಗೆ ಗುರಿಪಡಿಸಿತು. ತ್ಯಾಗಿ ಮುಂಜಾನೆ 10 ಗಂಟೆ ವೇಳೆಗೆ ಸಿಬಿಐ ಕೇಂದ್ರ ಕಚೇರಿಗೆ ಆಗಮಿಸಿದರು. ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್.ಪಿ. ತ್ಯಾಗಿ ಸೇರಿದಂತೆ 15 ಮಂದಿಯ ವಿರುದ್ಧ ಸಿಬಿಐ 2013ರಲ್ಲಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಸಂಬಂಧ ಅಧಿಕೃತವಾಗಿ ತನಿಖೆ ಆರಂಭಿಸಿತ್ತು. ತ್ಯಾಗಿಯವರ ಮೂವರು ಸೋದರ ಸಂಬಂಧಿಗಳನ್ನು ಕೂಡಾ ಪ್ರಕರಣದಲ್ಲಿ ಹೆಸರಿಸಲಾಗಿದೆ. ಉಳಿದಂತೆ ಮೂವರು ಮಧ್ಯವರ್ತಿಗಳು ಹಾಗೂ ನಾಲ್ಕು ಕಂಪೆನಿಗಳ ವಿರುದ್ಧವೂ ತನಿಖೆ ಆರಂಭಿಸಲಾಗಿದೆ. ಇಂಗ್ಲೆಂಡ್ ಮೂಲದ ಆಗಸ್ಟಾ ವೆಸ್ಟ್‌ಲ್ಯಾಂಡ್ ಸಂಸ್ಥೆಯಿಂದ ಐಶಾರಾಮಿ ಹೆಲಿಕಾಪ್ಟರ್‌ಗಳ ಖರೀದಿಯಲ್ಲಿ ರುಷುವತ್ತು ಪಡೆಯಲಾಗಿದೆ ಎಂಬ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಆಗಸ್ಟಾವೆಸ್ಟ್ ಲ್ಯಾಂಡ್ ಇಟಲಿ ಮೂಲದ ದೈತ್ಯ ರಕ್ಷಣಾ ಸಾಮಗ್ರಿಗಳ ಉತ್ಪಾದನಾ ಕಂಪೆನಿಯಾದ ಫಿನ್‌ಮೆಕಾನ್ಸಿಯಾದ ಸಹ ಸಂಸ್ಥೆಯಾಗಿದೆ. ಕೆಲ ದಲ್ಲಾಳಿಗಳು ಪ್ರಭಾವ ಬೀರಿ ಆಗಸ್ಟಾ ವೆಸ್ಟ್‌ಲ್ಯಾಂಡ್‌ಗೆ ಈ ವ್ಯವಹಾರ ಕುದುರುವಂತೆ ನೋಡಿ ಕೊಂಡಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಪ್ರತಿಯಾಗಿ ಆಗಸ್ಟಾವೆಸ್ಟ್‌ಲ್ಯಾಂಡ್ ಹಾಗೂ ಫಿನ್‌ಮೆಕಾನ್ಸಿಯಾ ಹಲವು ದಶಲಕ್ಷ ಯೂರೊದಷ್ಟು ಕಮಿಷನ್ ಹಣವನ್ನು ದಲ್ಲಾಳಿಗಳಿಗೆ ನೀಡಿದೆ ಎನ್ನುವುದು ಸಿಬಿಐ ಆರೋಪ. ಸಿಬಿಐ ವಿಚಾರಣೆ ಎದುರಿಸುತ್ತಿರುವ ಎರಡನೆ ಸೇನಾ ಮುಖಸ್ಥರಾಗಿ ತ್ಯಾಗಿ ದಾಖಲಾಗಿದ್ದಾರೆ. ಈ ಮುನ್ನ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಸುಶೀಲ್ ಕುಮಾರ್ ವಿರುದ್ಧ 2000ನೆ ಇಸವಿಯಲ್ಲಿ ಬರಾಕ್ ಕ್ಷಿಪಣಿಗಳನ್ನು ಖರೀದಿಸುವಲ್ಲಿ ರುಷುವತ್ತು ಪಡೆದ ಆರೋಪದ ಬಗ್ಗೆ ಸಿಬಿಐ ತನಿಖೆ ಮಾಡಿತ್ತು. ಈ ವಿಚಾರಣೆ ಇನ್ನೂ ಪ್ರಗತಿ ಹಂತದಲ್ಲಿದೆ. ದಲ್ಲಾಳಿಗಳು ಹಾಗೂ ಕೌಟುಂಬಿಕ ಸಂಪರ್ಕದಿಂದಾಗಿ ತ್ಯಾಗಿಯವರನ್ನು ಆಗಸ್ಟಾ ವೆಸ್ಟ್‌ಲ್ಯಾಂಡ್ ಪ್ರತಿನಿಧಿಗಳು ಸಂಪರ್ಕಿಸದಂತೆ ಮಾಡಲಾಗಿತ್ತು. ಅದಾಗ್ಯೂ ಕಂಪೆನಿ ಪರವಾಗಿ ಹೆಲಿಕಾಪ್ಟರ್ ವ್ಯವಹಾರ ಕುದುರಿಸಲಾಯಿತು ಎಂದು ಇಟಲಿಯ ವಿಚಾರಣಾಧಿಕಾರಿಗಳು 2013ರಲ್ಲಿ ಪ್ರಕರಣ ಸಂಬಂಧ ದಾಖಲಾತಿ ಸಲ್ಲಿಸಿದ್ದರು. ತನಿಖಾ ವರದಿಯಲ್ಲಿ ಉಲ್ಲೇಖಿಸಿರುವಂತೆ ಪ್ರಮುಖ ದಲ್ಲಾಳಿ, ಆರೇಳು ಬಾರಿ ತ್ಯಾಗಿಯವರನ್ನು ಭೇಟಿ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. ವಾಯುಪಡೆಯ ಮಾಜಿ ಮುಖ್ಯಸ್ಥರ ಸೋದರ ಸಂಬಂಧಿಯ ಕಚೇರಿಯಲ್ಲಿ ಒಮ್ಮೆ ಹಾಗೂ ಬೆಂಗಳೂರಿನಲ್ಲಿ ನಡೆದ ವಾಯು ಪ್ರದರ್ಶನದ ವೇಳೆಯೂ ತ್ಯಾಗಿಯನ್ನು ಭೇಟಿಯಾಗಿದ್ದಾಗಿ ಮಧ್ಯವರ್ತಿ ಹೇಳಿಕೊಂಡಿದ್ದಾನೆ. ತಾವು ಒಂದು ಬಾರಿ ಮಾತ್ರ ಮಧ್ಯವರ್ತಿಯನ್ನು ಭೇಟಿ ಮಾಡಿದ್ದು, ಅದು ಕೂಡಾ ನಿವೃತ್ತಿಯ ಬಳಿಕ ಎಂದು ತ್ಯಾಗಿ ಹೇಳಿಕೆ ನೀಡಿದ್ದರು. ಆದರೆ ದಲ್ಲಾಳಿ ಹೇಳಿಕೆ ತ್ಯಾಗಿಯವರ ಸಮರ್ಥನೆಗೆ ವ್ಯತಿರಿಕ್ತವಾಗಿದೆ. ತ್ಯಾಗಿ ಸೋದರ ಸಂಬಂಧಿಗಳಾದ ಜೂಲಿ, ದೊಸ್ಕಾ ಹಾಗೂ ಸಂದೀಪ್ ಅವರನ್ನು ಇಟಲಿಯ ವಿಚಾರಣಾಧಿಕಾರಿಗಳು ಗುರುತಿಸಿದ್ದಾರೆ. ಇವರು ಫಿನ್‌ಮೆಕಾನ್ಸಿಯಾ, ಭಾರತಕ್ಕೆ 12 ಐಶಾರಾಮಿ ಹೆಲಿಕಾಪ್ಟರ್ ಪೂರೈಸುವ ಗುತ್ತಿಗೆಯನ್ನು ಪಡೆಯಲು ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಿದ್ದಾರೆ ಎಂದು ಇಟಲಿಯ ವಿಚಾರಣಾಧಿಕಾರಿಗಳು ವಾದಿಸಿದ್ದಾರೆ. ಆಗಸ್ಟಾ ವೆಸ್ಟ್‌ಲ್ಯಾಂಡ್ ಕಂಪೆನಿಯು ಫಿನ್‌ಮೆಕಾನ್ಸಿಯಾ ಸಮೂಹದ ರಕ್ಷಣಾ ವ್ಯವಹಾರ ಘಟಕವಾಗಿದೆ. ಹಲವು ಬಾರಿ ಭಾರತ ಪ್ರವಾಸ ಕೈಗೊಂಡ ವೇಳೆ ಹಣವನ್ನು ನಗದು ರೂಪದಲ್ಲಿ ಜೂಲಿ ಅವರಿಗೆ ನೀಡಲಾಗಿತ್ತು ಎಂದು ತನಿಖಾಧಿಕಾರಿಗಳ ಮುಂದೆ ಒಬ್ಬ ಮಧ್ಯವರ್ತಿ ಬಾಯಿ ಬಿಟ್ಟಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ವರದಿಯಲ್ಲಿ ಈತನ ಹೆಸರನ್ನು ಎಡಿಆರ್ ಎಂದಷ್ಟೇ ಹೆಸರಿಸಲಾಗಿದೆ. ತ್ಯಾಗಿಗಳು ಹಾಗೂ ದಲ್ಲಾಳಿಗಳ ಸಂಪರ್ಕವನ್ನು ಆಗಸ್ಟಾ ವೆಸ್ಟ್ ಲ್ಯಾಂಡ್ 2001ರಲ್ಲಿ ಸಾಧಿಸಿತು. 2001ರಲ್ಲಿ ಕಾರ್ಲೊ ಗೆರೋಸಾ ಎಂಬ ಮಧ್ಯವರ್ತಿಯೊಬ್ಬ ಜೂಲಿಯನ್ನು ಇಟಲಿಯ ಲುಂಗಾನೊದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಭೇಟಿಯಾಗಿದ್ದ. 2000-2001ರಲ್ಲೇ ಭಾರತದ ವಾಯುಪಡೆ ವಿವಿಐಪಿ ಹೆಲಿಕಾಪ್ಟರ್‌ನ ಅಗತ್ಯತೆ ಬಗ್ಗೆಯೂ ಪ್ರತಿಪಾದಿಸಿತ್ತು. 2005ರಿಂದ 2007ರವರೆಗೆ ಮಧ್ಯವರ್ತಿ ಕನಿಷ್ಠ ಆರರಿಂದ ಏಳು ಬಾರಿ ತ್ಯಾಗಿಯವರನ್ನು ಭೇಟಿಯಾಗಿದ್ದಾನೆ. ಎರಡು ಬಾರಿ ಸೋದರ ಸಂಬಂಧಿಯ ಕಚೇರಿಯಲ್ಲಿ, ಎರಡು ವರ್ಷಗಳಿಗೊಮ್ಮೆ ಬೆಂಗಳೂರಿನಲ್ಲಿ ನಡೆಯುವ ವಾಯು ಪ್ರದರ್ಶನದಲ್ಲಿ ಕನಿಷ್ಠ ಒಂದು ಬಾರಿ ಭೇಟಿ ಮಾಡಿದ್ದ. ತ್ಯಾಗಿ ಇನ್ನೂ ಸಮವಸ್ತ್ರದಲ್ಲಿದ್ದರು. ಜತೆಗೆ ಫಿನ್‌ಮೆಕಾನ್ಸಿಯಾ ಬೂತ್‌ಗೆ ಭೇಟಿಯನ್ನೂ ನೀಡಿದ್ದರು ಎಂದು ಎಡಿಆರ್ ಹೇಳಿದ್ದಾಗಿ ವರದಿ ಸ್ಪಷ್ಟಪಡಿಸಿದೆ. ನಾನು ಕಾರ್ಲೊ ಅವರನ್ನು ಸೋದರ ಸಂಬಂಧಿಯ ಕಚೇರಿಯಲ್ಲಿ ಭೇಟಿ ಮಾಡಿದ್ದೆ. ಆದರೆ ಅವರ ಜತೆ ಸಂಪರ್ಕವಿದೆಯೇ ಎಂದು ಪ್ರಶ್ನಿಸಿದರೆ ನನ್ನ ಉತ್ತರ ಇಲ್ಲ ಎನ್ನುವುದಾಗಿದೆ. ಆತನ ಜತೆ ನನಗೆ ಯಾವ ಸಂಬಂಧ ಇರಲು ಸಾಧ್ಯ? ವಿವಿಐಪಿ ಹೆಲಿಕಾಪ್ಟರ್ ಖರೀದಿ ಪ್ರಕ್ರಿಯೆ ಆರಂಭವಾದದ್ದೇ ನಾನು ನಿವೃತ್ತನಾದ ಬಳಿಕ ಎನ್ನುವುದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಈ ಐಷಾರಾಮಿ ಹೆಲಿಕಾಪ್ಟರ್‌ಗಳ ವೌಲ್ಯಮಾಪನ, ಪರೀಕ್ಷಾರ್ಥ ಹಾರಾಟ, ಗುತ್ತಿಗೆ ಪ್ರಕ್ರಿಯೆ ನಡೆದದ್ದು 2010ರಲ್ಲಿ ಎಂದು ತಮ್ಮ ವಿರುದ್ಧದ ಆರೋಪಕ್ಕೆ ಉತ್ತರವಾಗಿ ತ್ಯಾಗಿ ಹೇಳಿಕೆ ನೀಡಿದ್ದಾರೆ. ಫಿನ್‌ಮೆಕಾನ್ಸಿಯಾ ಕಂಪೆನಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಐಷಾರಾಮಿ ಹೆಲಿಕಾಪ್ಟರ್‌ನ ಕೆಲ ನಿರ್ದಿಷ್ಟ ಅಗತ್ಯತೆಗಳನ್ನು ಬದಲಿಸಿದ್ದೀರಾ ಎಂದು ಕೇಳಿದಾಗ, ಗುಣಾತ್ಮಕ ಅಗತ್ಯತೆಗಳ ಬಗೆಗಿನ ಸಿಬ್ಬಂದಿ ವೌಲ್ಯಮಾಪನ 2003ರಲ್ಲೇ ಮುಗಿದಿತ್ತು. ಅಂದರೆ ನಾನು ವಾಯುಪಡೆ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೆ ಮುಂಚೆಯೇ ಈ ಪ್ರಕ್ರಿಯೆ ನಡೆದಿತ್ತು. ಆ ಬಳಿಕ ಭಾರತದ ವಾಯುಪಡೆ ಅದರಲ್ಲಿ ಯಾವ ಬದಲಾವಣೆಯನ್ನೂ ಮಾಡಿಲ್ಲ ಎಂದು ಹೇಳಿದ್ದಾರೆ.
ವಾಯುಪಡೆಯ ಮಾಜಿ ಅಧಿಕಾರಿ ಕ್ಯಾಪ್ಟನ್ ತ್ಯಾಗಿ ಸೇರಿದಂತೆ ಈ ವ್ಯವಹಾರದ ಮಧ್ಯವರ್ತಿಗಳು ಎನ್ನಲಾದ ಮೂವರ ಜತೆಗಿನ ಸಂಬಂಧದ ಬಗ್ಗೆ ಕೇಳಿದಾಗ, ಅವರು ನನ್ನ ಸೋದರ ಸಂಬಂಧಿ. ಈ ಸಂಬಂಧವನ್ನು ಬಿಟ್ಟರೆ ನಮ್ಮ ನಡುವೆ ಬೇರೆ ಯಾವ ಸಂಬಂಧವೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಮೂವರು ಸಂಬಂಧಿಕರು ಈ ಹಗರಣದಲ್ಲಿ ಶಾಮೀಲಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ವಾಸ್ತವ ಎಂದರೆ ಅವರು ನನ್ನ ಸಂಬಂಧಿಕರು. ಆದರೆ ಆರೋಪ ಮಾಡಿರು ವಂತೆ ನಮ್ಮ ನಡುವೆ ಯಾವ ವ್ಯವಹಾರ ಸಂಬಂಧವೂ ಇಲ್ಲ. ನಾನು ಸೇವೆಯಲ್ಲಿದ್ದಾಗ ನಾವು ವಾಸ್ತವವಾಗಿ ಸಂಪರ್ಕದಲ್ಲಿ ಇರಲೇ ಇಲ್ಲ ಎಂದು ಉತ್ತರಿಸಿದರು. ಹನ್ನೆರಡು ವಿವಿಐಪಿ ಹೆಲಿಕಾಪ್ಟರ್‌ಗಳ ಖರೀದಿ ಶರತ್ತುಗಳನ್ನು ತಾವು ಅಧಿಕಾರಕ್ಕೆ ಬರುವ ಮುನ್ನವೇ ಪರಿಷ್ಕರಿಸಲಾಗಿತ್ತು ಎಂದು ತ್ಯಾಗಿ ಹೇಳಿಕೆ ನೀಡಿದ ಮರುದಿನವೇ, ರಕ್ಷಣಾ ಸಚಿವಾಲಯ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ, ತ್ಯಾಗಿಯವರು ವಾಯುಪಡೆ ಮುಖ್ಯಸ್ಥರಾಗಿದ್ದಾಗಲೇ ಅಂದರೆ 2005-06ರಲ್ಲಿ 3,600 ಕೋಟಿ ರೂ. ಮೊತ್ತದ ಟೆಂಡರ್‌ನಲ್ಲಿ ಬದಲಾವಣೆ ಮಾಡಲಾಗಿತ್ತು ಎಂದು ಸ್ಪಷ್ಟಪಡಿಸಿದೆ. ತ್ಯಾಗಿ 2004ರ ಡಿಸೆಂಬರ್ 31ರಿಂದ 2007ರ ಮಾರ್ಚ್ 31ರವರೆಗೆ ವಾಯುಪಡೆ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಕೃಪೆ: hindustantimes.com