ಪ್ರತಿಷ್ಠಿತ ಆಸ್ಕರ್ ಗೆದ್ದ ‘ದಿ ಶೇಪ್ ಆಫ್ ವಾಟರ್’
ಕ್ಯಾಲಿಫೋರ್ನಿಯಾ, ಮಾ. 5: ಅತ್ಯುತ್ತಮ ಚಲನಚಿತ್ರಕ್ಕಾಗಿ ನೀಡಲಾಗುವ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗುಲ್ಲೆರ್ಮೊ ಡೆಲ್ ಟೊರೊ ಹಾಗೂ ಜೆ ಮೈಲ್ಸ್ ಡೇಲ್ ಅವರ ‘ದಿ ಶೇಪ್ ಆಫ್ ವಾಟರ್’ ಚಿತ್ರದ ಪಾಲಾಗಿದೆ. ಹಾಲಿವುಡ್ ನ ಡೋಲ್ಬಿ ಥಿಯೇಟರ್ ನಲ್ಲಿ ನಡೆಯುತ್ತಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಘೋಷಣೆ ಮಾಡಲಾಗಿದೆ.
ಅತ್ಯುತ್ತಮ ನಟಿಗಾಗಿ ನೀಡಲಾಗುವ ಆಸ್ಕರ್ ಪ್ರಶಸ್ತಿ ‘‘ತ್ರೀ ಬಿಲ್ ಬೋರ್ಡ್ಸ್ ಔಟ್ ಸೈಡ್ ಎಬ್ಬಿಂಗ್, ಮಿಸ್ಸೌರಿ’ ಇದರಲ್ಲಿನ ಅಭಿನಯಕ್ಕಾಗಿ ಫ್ರಾನ್ಸೆಸ್ ಮೆಕ್ ಡೊರ್ಮಾಂಡ್ ಅವರಿಗೆ ಹೋಗಿದೆ. ಅತ್ಯುತ್ತಮ ನಟ ಪ್ರಶಸ್ತಿ ಗೇರಿ ಓಲ್ಡ್ ಮ್ಯಾನ್ ಅವರಿಗೆ ‘ಡಾರ್ಕೆಸ್ಟ್ ಅವರ್’ ಚಿತ್ರದಲ್ಲಿನ ಅಭಿನಯಕ್ಕಾಗಿ ಸಂದಿದೆ.
ಅತ್ಯುತ್ತಮ ನಿರ್ದೇಶನದ ಆಸ್ಕರ್ ಪ್ರಶಸ್ತಿ ‘ದಿ ಶೇಪ್ ಆಫ್ ವಾಟರ್’ ನಿರ್ದೇಶಕ ಗುಲ್ಲೆರ್ಮೊ ಡೆಲ್ ಟೊರೊ ಅವರಿಗೆ ಹೋಗಿದೆ.
ಕೊಕೊ ಚಿತ್ರದ ರಿಮೆಂಬರ್ ಮಿ ಹಾಡಿಗಾಗಿ ಕ್ರಿಸ್ಟೆನ್ ಆಂಡರ್ಸನ್-ಲೋಪೆರ್ ಹಾಗೂ ರಾಬರ್ಟ್ ಲೋಪೆರ್ ಅವರು ಅತ್ಯುತ್ತಮ ಒರಿಜಿನಲ್ ಸಾಂಗ್ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ.
‘ದಿ ಶೇಪ್ ಆಫ್ ವಾಟರ್’ ಚಿತ್ರದ ಅಲೆಕ್ಸಾಂಡೆರ್ ಡೆಸ್ಪ್ಲಾಟ್ ಅವರಿಗೆ ಅತ್ಯುತ್ತಮ ಒರಿಜಿನಲ್ ಸಂಗೀತಕ್ಕಾಗಿ ಆಸ್ಕರ್ ಪ್ರಶಸ್ತಿ ದೊರಕಿದೆ.
ಅತ್ಯುತ್ತಮ ಛಾಯಾಗ್ರಾಹಣ ಪ್ರಶಸ್ತಿ ‘ಬ್ಲೇಡ್ ರನ್ನರ್ 2049’ ಚಿತ್ರಕ್ಕಾಗಿ ರೋಜರ್ ಎ ಡೀಕಿನ್ಸ್ ಅವರು ಪಡೆದಿದ್ದಾರೆ.